ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

84ರ ಅಜ್ಜನ ಮಾಸದ ನೆನಪು

Last Updated 28 ಜನವರಿ 2015, 19:30 IST
ಅಕ್ಷರ ಗಾತ್ರ

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರವೂ ಒಕ್ಕೂಟವನ್ನು ಸೇರದೇ ಸ್ವತಂತ್ರವಾಗಿ ಇರಲು ಬಯಸಿದ್ದ ಮೈಸೂರು ಸಂಸ್ಥಾನವನ್ನು ಒಕ್ಕೂಟ ಸೇರುವಂತೆ ಮಾಡಿದ್ದು ‘ಮೈಸೂರು ಚಲೋ ಚಳವಳಿ’. ಈ ಚಳವಳಿಯಲ್ಲಿ ಜೈಲುವಾಸವನ್ನೂ ಅನುಭವಿಸಿದ್ದ ಸಿ.ಎಚ್. ಜಾಕೋಬ್‌ ಲೋಬೊ ಅವರೀಗ ಈಗ 84ರ ಅಜ್ಜ. ಆದರೆ, ಚಳವಳಿಯ ಬಗ್ಗೆ ಹೇಳುವಾಗ ಮಾತ್ರ ಅವರದು ಹೈಸ್ಕೂಲು ಹರೆಯ.

ಅದು 1947, ಆಗಸ್ಟ್‌ 15. ಸ್ವಾತಂತ್ರ್ಯ ದಿನಾಚರಣೆಯ ಸಿಹಿತಿಂದು ಸಂತಸದಲ್ಲಿರುವಾಗಲೇ ಮತ್ತೊಂದು ಚಳವಳಿಗೆ ಅಣಿಯಾಗಬೇಕಾದ ಸಂದರ್ಭ ಮೈಸೂರು ಸಂಸ್ಥಾನದ ಜನರ ಪಾಲಿಗೆ ಅನಿವಾರ್ಯವಾಗಿ ಒದಗಿಬಂದಿತ್ತು. ಮೈಸೂರು ಒಡೆಯರು ಒಕ್ಕೂಟ ಸೇರಲು ಮನಸ್ಸು ಮಾಡಿರಲಿಲ್ಲ. ಆಗ ಕಾಂಗ್ರೆಸ್‌ ನಾಯಕ ಕೆ.ಸಿ. ರೆಡ್ಡಿ ಅವರ ನೇತೃತ್ವದಲ್ಲಿ  ‘ಮೈಸೂರು ಚಲೋ ಚಳವಳಿ’ ಆರಂಭವಾಯಿತು. ಮೈಸೂರು ಸಂಸ್ಥಾನಕ್ಕೆ ಒಳಪಟ್ಟ ಎಲ್ಲ ಪ್ರದೇಶಗಳಲ್ಲೂ ಜನ ಚಳವಳಿ ನಡೆಸಲು ಆರಂಭಿಸಿದ್ದರು. ಅದರಲ್ಲೂ ವಿದ್ಯಾರ್ಥಿಗಳು ಮುಂಚೂಣಿಯಲ್ಲಿದ್ದರು.

ಆ ಸಂದರ್ಭದಲ್ಲಿ ಚಿಕ್ಕಮಗಳೂರಿನ ಸರ್ಕಾರಿ ಪ್ರೌಢಶಾಲೆಯ 16ರಿಂದ 19 ವಯಸ್ಸಿನ ವಿದ್ಯಾರ್ಥಿಗಳು ನಡೆಸಿದ ಚಳವಳಿ ಗಮನಾರ್ಹವಾಗಿತ್ತು. ಒಂದು ದಿನ ಬೆಳಿಗ್ಗೆ ಮೈದಾನದಲ್ಲಿ ಸೇರಿದ ಐನೂರು ವಿದ್ಯಾರ್ಥಿಗಳು ಕಾನೂನು ಉಲ್ಲಂಘಿಸುವ ಸಲುವಾಗಿ ಶಾಲಾ ಆವರಣದಲ್ಲಿದ್ದ ಎಳೆಯ ಶ್ರೀಗಂಧದ ಮರವನ್ನು ಕಿತ್ತು ಹಾಕಿದರು. ಚಳವಳಿಯ ಕಾವು ಹೇಗಿದೆ ಎಂಬ  ಸಂದೇಶವನ್ನು ಈ ಘಟನೆಯೇ ನಾಡಿಗೆಲ್ಲ ನೀಡಿತು.

ಆ ದಿನಗಳನ್ನು ಈಗ ನೆನಪು ಮಾಡಿಕೊಂಡು ಗದ್ಗದಿತರಾಗುತ್ತಾರೆ ಮೈಸೂರು ಚಲೋ ವಿದ್ಯಾರ್ಥಿ ಚಳವಳಿಯಲ್ಲಿ ಧುಮುಕಿದ್ದ ಬೆಂಗಳೂರಿನ ಹೊಸಕೆರೆ ಹಳ್ಳಿಯ ನಿವಾಸಿ ಸಿ.ಎಚ್‌. ಜಾಕೋಬ್‌ ಲೋಬೋ. ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ನಿವೃತ್ತರಾಗಿರುವ ಇವರು ವೃತ್ತಿಯಲ್ಲಿದ್ದಾಗ ಇಲಾಖೆಯನ್ನು ಸಂಪೂರ್ಣವಾಗಿ ಕನ್ನಡೀಕರಣಗೊಳಿಸಿದ ಹೆಮ್ಮೆಯ ಅಧಿಕಾರಿ. ಅವರಿಗೀಗ 84ರ ಇಳಿವಯಸು.

‘ಚಳವಳಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ದಸ್ತಗಿರಿ ಮಾಡಿದ್ದ ಪೊಲೀಸರು ರಾತ್ರಿ 8ರ ಸುಮಾರಿಗೆ ಚಿಕ್ಕಮಗಳೂರು ಸಬ್‌ ಜೈಲಿಗೆ ಹಾಕುತ್ತಾರೆ. ಆದರೆ ಜೈಲಿನಲ್ಲಿ ಅಚ್ಚರಿ ಕಾದಿತ್ತು. ಆಗಿನ ಘಟಾನುಘಟಿ ಸತ್ಯಾಗ್ರಹಿಗಳೆಲ್ಲ ಆ ಜೈಲಿನಲ್ಲಿದ್ದರು. ಕೆ.ಸಿ.ರೆಡ್ಡಿ, ಕೆ.ಟಿ. ಭಾಷ್ಯಂ, ಟಿ.ಸಿದ್ಧಲಿಂಗಯ್ಯ, ಎಂ.ಎನ್‌. ಜೋಯಿಸ್‌, ಎಚ್‌.ಸಿದ್ದಯ್ಯ, ಸಿದ್ದವೀರಯ್ಯ, ಮರಿಯಪ್ಪ ಇವರೆಲ್ಲರನ್ನೂ ಕಂಡಾಗ ಜೈಲು ಅನ್ನಿಸಲೇ ಇಲ್ಲ.  ಕೆ.ಟಿ.ಭಾಷ್ಯಂ ಅವರು ನಮ್ಮನ್ನು ಹತ್ತಿರ ಕರೆದು ಹಣ್ಣು, ಮೈಸೂರು ಪಾಕ್‌ ನೀಡಿದ ಆದರದಿಂದ ಕಂಡಾಗ ಬಂಧುಗಳ ಮನೆಗೆ ಬಂದಿದ್ದೇವೆ ಎಂಬ ಭಾವ ನಮ್ಮದಾಗಿತ್ತು’ ಎಂದು ನೆನಪು ಮಾಡಿಕೊಳ್ಳುತ್ತಾರೆ. ಲೋಬೊ ಅವರ ಸ್ವಾತಂತ್ರ್ಯ ಹೋರಾಟದ ಸೇವೆಯನ್ನು ಗುರುತಿಸಿ 68 ವರ್ಷಗಳ ನಂತರ ಕಳೆದ ಅಕ್ಟೋಬರ್‌ನಲ್ಲಿ ಮೈಸೂರು ಜಿಲ್ಲಾಡಳಿತ ತಾಮ್ರ ಫಲಕ ನೀಡಿ ಗೌರವಿಸಿದೆ.

ಸ್ವಾತಂತ್ರ್ಯ ಹೋರಾಟ, ಸರ್ಕಾರಿ ಸೇವೆ, ಪುಸ್ತಕ ಪ್ರಕಟಣೆಯೆಂದು ತನ್ನ ಪಾಡಿಗಿದ್ದ ಲೋಬೊ ಅವರನ್ನು ಸರ್ಕಾರ ಗುರುತಿಸಿಲ್ಲ ಎಂಬ ಸಣ್ಣದೊಂದು ಕೊರಗಿದೆ. ಅದು ಸಹಜವೇ. ಅದಕ್ಕೊಂದು ಕಾರಣವೂ ಇದೆ. ಅವರನ್ನು ಘಾಸಿಗೊಳಿಸಿದ್ದ ವಿಷಯವೆಂದರೆ, ಮಾಜಿ ಮುಖ್ಯಮಂತ್ರಿಯೊಬ್ಬರು ಅಧಿಕಾರದಲ್ಲಿದ್ದಾಗ ನೀಡಿದ್ದ ‘ಕ್ರಿಶ್ಚಿಯನ್ನರು ಈ ದೇಶದ ಸ್ವಾಂತಂತ್ರ್ಯ ಸಂಗ್ರಾಮಕ್ಕೆ ಏನೂ ಮಾಡಿಲ್ಲ’ ಎಂಬ ಹೇಳಿಕೆ.

ಆ ಮಾತು ಹೇಳುವಾಗ ಗದ್ಗದಿತರಾಗುವ ಲೋಬೋ, ‘ಆ ಮಾತು ಸುಳ್ಳು ಎಂದು ಮನವರಿಕೆ ಮಾಡುವ ಕಾರಣಕ್ಕಾದರೂ ನನ್ನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಸರ್ಕಾರ ಗುರುತಿಸಬೇಕು ಎಂದು ಬಯಸುತ್ತೇನೆ’ ಎನ್ನುತ್ತಾ ಕಣ್ಣಂಚು ಒರೆಸಿಕೊಳ್ಳುತ್ತಾರೆ.   
ಲೋಬೊ ಕೆಲ ಮೌಲ್ಯಯುತ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಡಾ.ಜಿ.ಎಸ್‌. ಲೋಖಂಡೆ ಅವರು ಬರೆದಿರುವ ‘ಭೀಮ್‌ರಾವ್‌ ರಾಮ್‌ಜೀ ಅಂಬೇಡ್ಕರ್‌’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದರು. ಆ ಕೃತಿ ಈಗ ಮತ್ತೆ ‘ಸಪ್ನ’ದಿಂದ ಮರು ಮುದ್ರಣಗೊಂಡಿದೆ. 

ಅಂಬೇಡ್ಕರ್‌ ಸಂವಿಧಾನ ರಚಿಸಿ 66 ವರ್ಷ ಕಳೆದರೂ ದಲಿತರ ಪರಿಸ್ಥಿತಿ ಬದಲಾಗಿಲ್ಲ ಎನ್ನುವ ಲೋಬೋ, ‘‘ತನ್ನ ಜೊತೆ ಕೆಲಸ ಮಾಡುತ್ತಿದ್ದ ದಲಿತ ಅಧಿಕಾರಿಯೊಬ್ಬರು ಮೇಲ್ವರ್ಗದವರನ್ನು ಇನ್ನಿಲ್ಲದಂತೆ ದ್ವೇಷ ಮಾಡುತ್ತಿದ್ದರು. ಯಾಕೆ ಹೀಗೆ ಮಾಡುತ್ತಿದ್ದೀರಿ ಎಂದು ಕೇಳಿದ್ದಕ್ಕೆ, ‘ಅವರೆಲ್ಲ ನನ್ನ ಅಪ್ಪ, ಅಜ್ಜಂದಿರ ರಕ್ತ ಹೀರಿದ್ದಾರೆ. ಆ ರೋಷ ನನ್ನಿಂದ ಹೀಗೆ ಮಾಡಿಸುತ್ತಿದೆ’ ಎನ್ನುತ್ತಿದ್ದ. ಆ ಮಾತು ನಿಜ ಎಂದು ನನ್ನ ವೃತ್ತಿಯ ಉದ್ದಕ್ಕೂ ಅನ್ನಿಸುತ್ತಿತ್ತು. ಅದಕ್ಕಾಗಿಯೇ ನಾನು ಅಂಬೇಡ್ಕರ್‌ ಕುರಿತ ಪುಸ್ತಕ ಅನುವಾದ ಮಾಡಿದ್ದೆ’’ ಎನ್ನುತ್ತಾರೆ.

ಪರೀಕ್ಷೆಯೇ ಇಲ್ಲದೆ ಪಾಸು
‘ಹದಿನೈದು ದಿನ ಬಂಧನದಲ್ಲಿದ್ದ ವಿದ್ಯಾರ್ಥಿಗಳನ್ನು ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸದೇ, ಯಾವುದೇ ಷರತ್ತೂ ವಿಧಿಸದೆ ಬಿಡುಗಡೆ ಮಾಡಲಾಗಿತ್ತು. ಜೈಲಿನಿಂದ ಹೊರಬರುತ್ತಿದ್ದಂತೆ ಇಡೀ ಚಿಕ್ಕಮಗಳೂರಿನ ಜನತೆ ಹೂ ಹಾರ ಹಿಡಿದು ಸ್ವಾಗತಿಸಿದ್ದರು. 1947ಅಕ್ಟೋಬರ್‌ 12ರಂದು ಒಕ್ಕೂಟ ಸೇರಲು ಮೈಸೂರು ಅರಸರು ಒಪ್ಪಿಗೆ ನೀಡಿದ್ದರು. ಅ.24ರಂದು ಕೆ.ಸಿ.ರೆಡ್ಡಿ ನೇತೃತ್ವದ ಪ್ರಜಾಪ್ರತಿನಿಧಿ ಮಂತ್ರಿಮಂಡಲ ರಚನೆಯಾಗಿ ಸರ್ಕಾರ ಅಸ್ಥಿತ್ವಕ್ಕೆ ಬಂದಿತ್ತು. ವಿದ್ಯಾರ್ಥಿಗಳ ಈ ಹೋರಾಟಕ್ಕೆ ಪ್ರತಿಯಾಗಿ ಹೊಸ ಸರ್ಕಾರ ಎಲ್ಲ ವಿದ್ಯಾರ್ಥಿಗಳನ್ನೂ ಪರೀಕ್ಷೆಗಳೇ ಇಲ್ಲದೆ ತೇರ್ಗಡೆ ಮಾಡುವಂತೆ ಆದೇಶ ಹೊರಡಿಸಿತ್ತು’.
–ಜಾಕೋಬ್‌ ಲೋಬೋ

ಮಿಲ್ಖಾ ಜೊತೆ ಓಡಿದ್ದೆ

ಜಾಕೋಬ್‌ ಲೋಬೊ ಅವರ ನೆನಪಿನ ಶಕ್ತಿ ಕುಂದಿಲ್ಲ.  ‘ಯುವಕನಾಗಿದ್ದಾಗ ನಾನು ಓಟಗಾರನಾಗಿದ್ದೆ. ಮಿಲ್ಖಾ ಸಿಂಗ್‌ ಜೊತೆ  ಓಡಿದ್ದೆ’ ಎಂದು ನೆನಪು ಮಾಡಿಕೊಳ್ಳುವಾಗ ಹರೆಯದ ಹುಡುಗನಂತಾಗುತ್ತಾರೆ. ‘ಇದನ್ನೆಲ್ಲ ಟಿಪ್ಪಣಿ ಮಾಡಿಟ್ಟುಕೊಂಡಿದ್ದೇನೆ. ಚೆನ್ನಾಗಿ ಕನ್ನಡ ಬಲ್ಲ ಸ್ಟೆನೋಗಾಗಿ ಹುಡುಕಾಡುತ್ತಿದ್ದೇನೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT