ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

89 ಅಂಗವಿಕಲ ವಿದ್ಯಾರ್ಥಿಗಳ ಚೆಕ್‌ ಬೌನ್ಸ್

ಶಿಕ್ಷಣಕ್ಕೆ ಉತ್ತೇಜನ ನೀಡಲು ವಿದ್ಯಾರ್ಥಿ ವೇತನ: ಅಂಗವಿಕಲ ಕಲ್ಯಾಣ ಇಲಾಖೆಯ ಎಡವಟ್ಟು
Last Updated 20 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಂಗವಿಕಲರ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಅಂಗವಿಕಲ ಕಲ್ಯಾಣ ಇಲಾಖೆ 89 ವಿದ್ಯಾರ್ಥಿಗಳಿಗೆ ನೀಡಿರುವ ವಿದ್ಯಾರ್ಥಿ ವೇತನದ ಚೆಕ್‌ಗಳು ಬೌನ್ಸ್ ಆಗಿವೆ.

ಅಂಗವಿಕಲ ಮಕ್ಕಳನ್ನು ಶಾಲೆಗೆ ಸೇರಿಸಲು ಹಿಂಜರಿಯುವ ಪೋಷಕರ ಸಂಖ್ಯೆ ದೊಡ್ಡದಿದೆ. ಅಂತಹವರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರತಿ ವಿದ್ಯಾರ್ಥಿಗೆ ಇಲಾಖೆ ಪ್ರತಿವರ್ಷ ₹1 ಸಾವಿರ ವಿದ್ಯಾರ್ಥಿ ವೇತನ ನೀಡುತ್ತಿದೆ. ಇದರ ಪ್ರಯೋಜನವನ್ನು ಸಾವಿರಾರು ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ.
ಈ ವರ್ಷ ಇಲಾಖೆ ನೀಡಿರುವ ಚೆಕ್‌ಗಳು ಬೌನ್ಸ್ ಆಗಿವೆ. ಒಟ್ಟು 89 ವಿದ್ಯಾರ್ಥಿಗಳಿಗೆ ಈ ರೀತಿ ಆಗಿದೆ ಎಂಬುದನ್ನು ಇಲಾಖೆಯ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಈ ಸಂಖ್ಯೆ ಜಾಸ್ತಿ ಇದೆ ಎಂದು ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಜನವರಿಯ ಚೆಕ್ ಏಪ್ರಿಲ್‌ನಲ್ಲಿ ಬಡಾವಣೆ:  ನಗರದ ರಿಕ್ಷಾ ಚಾಲಕರಾಗಿರುವ ಪ್ರಕಾಶ್‌ ಅವರ ಪುತ್ರ ಸೋಮೇಶ್‌ ಬಸವೇಶ್ವರನಗರದ ಕದಂಬಿ ವಿದ್ಯಾ ಕೇಂದ್ರದಲ್ಲಿ ಮೂರನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಮೊದಲ ವರ್ಷ ಆತನಿಗೆ ಸಕಾಲಕ್ಕೆ ವಿದ್ಯಾರ್ಥಿ ವೇತನ ಬಂದಿತ್ತು. ಎರಡನೇ ವರ್ಷವೂ ಪೋಷಕರು ಅರ್ಜಿ ಸಲ್ಲಿಸಿದ್ದರು.
ಅವರಿಗೆ ಚೆಕ್‌ ಬಂದಿದ್ದು ಮೇ 29ರಂದು. ಅಂಚೆ ಇಲಾಖೆಯಿಂದ ಬಟವಾಡೆಯಾಗಿದ್ದು ಏಪ್ರಿಲ್‌ 23ರಂದು. ಚೆಕ್‌ನಲ್ಲಿ ನಗದು ದಿನಾಂಕ 2016ರ ಜನವರಿ 29 ಎಂದು ನಮೂದಿಸಲಾಗಿತ್ತು. ಚೆಕ್ ಸಿಕ್ಕ ಮರುದಿನವೇ ಪೋಷಕರು ಬ್ಯಾಂಕ್‌ನಲ್ಲಿ ಡ್ರಾ ಮಾಡಿಕೊಳ್ಳಲು ಮುಂದಾದರು. ಚೆಕ್‌ ಬೌನ್ಸ್ ಆಗಿರುವ ಸಂಗತಿ ಬೆಳಕಿಗೆ ಬಂದಿತ್ತು. ಇದರಿಂದ ಕಂಗಾಲಾದ ಪೋಷಕರು ಕೂಡಲೇ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಚೆಕ್‌ ಮರಳಿಸಿದರು. ಲೋಪವನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು.
‘ಎರಡು ತಿಂಗಳಲ್ಲಿ ಕನಿಷ್ಠ 10 ಸಲ ಉಪನಿರ್ದೇಶಕರ ಕಚೇರಿಗೆ ಭೇಟಿ ನೀಡಿದ್ದೇನೆ. ಒಂದು ವಾರದಲ್ಲಿ ಹಣ ಪಾವತಿಸುತ್ತೇವೆ ಎಂದು ಅಧಿಕಾರಿಗಳು ಸಾಗ ಹಾಕುತ್ತಿದ್ದಾರೆ. ಈ ರೀತಿ ಸತಾಯಿಸಿದರೆ ಏನು ಮಾಡುವುದು’ ಎಂದು ಪ್ರಕಾಶ್‌ ಅಳಲು ತೋಡಿಕೊಂಡರು.

ಆಯೋಗಕ್ಕೆ ದೂರು: ಈ ಸಂಬಂಧ ಪೋಷಕರು ಆರ್‌ಟಿಇ ಕಾರ್ಯಪಡೆಯ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಬುಧವಾರ ದೂರು ಸಲ್ಲಿಸಿದ್ದಾರೆ.

‘ಅಂಗವಿಕಲ ಮಕ್ಕಳ ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಿಸಬೇಕು ಎಂಬ ಅಂಶ ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿ ಇದೆ. ಅದನ್ನು ಇಲಾಖೆ ಅಧಿಕಾರಿಗಳು ಉಲ್ಲಂಘಿಸಿದ್ದಾರೆ. ಚೆಕ್‌ ವಿತರಣೆಯಲ್ಲಿ ಭ್ರಷ್ಟಾಚಾರ ನಡೆದಿರುವ  ಶಂಕೆ ಇದೆ’ ಎಂದು ಆರ್‌ಟಿಇ ಕಾರ್ಯಪಡೆಯ ಸಂಚಾಲಕ ನಾಗಸಿಂಹ ಜಿ.ರಾವ್‌ ಅನುಮಾನ ವ್ಯಕ್ತಪಡಿಸಿದರು.

‘ವಿದ್ಯಾರ್ಥಿ ವೇತನ ವಿತರಣೆಯಲ್ಲಿ ಸಮಸ್ಯೆ ಆಗಿರುವುದು ನಿಜ. 89 ಪ್ರಕರಣಗಳಲ್ಲಿ ಹೀಗಾಗಿದೆ. ಶೀಘ್ರದಲ್ಲಿ ಸಮಸ್ಯೆ ಇತ್ಯರ್ಥಪಡಿಸಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT