ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗರ ಶಾಲೆ- ಈಗ ತಂತ್ರಜ್ಞಾನದ ಆಗರ!

‘ಬಾಷ್‌’ ಕಾಳಜಿ– ತಂತ್ರಜ್ಞರು ಇಲ್ಲಿ ತರಬೇತುದಾರರು
Last Updated 17 ಅಕ್ಟೋಬರ್ 2013, 20:00 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರು ಅಗರದ ಈ ಶಾಲೆಗೆ ಒಮ್ಮೆ ಬರಬೇಕು. ಬಂದವರು ಮೂಗು ಮುರಿಯುವ ಬದಲು ಮೂಗಿನ ಮೇಲೆ ಬೆರಳು ಇಡುತ್ತಾರೆ!  

ಶಿಕ್ಷಕರಿದ್ದರೆ ಕೊಠಡಿಗಳ ಕೊರತೆ. ಕೊಠಡಿಗಳಿದ್ದರೆ ಶಿಕ್ಷಕರೇ ಕೊರತೆ. ಇವೆರಡೂ ಇದ್ದರೆ ಪ್ರಯೋಗಾಲಯ ಹೊಂದಿರುವ ಶಾಲೆಗಳ ಸಂಖ್ಯೆ ವಿರಳ. ಇದಕ್ಕೆಲ್ಲ ನಗರದ ಅಗರ ಸರ್ಕಾರಿ ಪ್ರೌಢಶಾಲೆ ಅಪವಾದ.

ಶಾಲೆಯಲ್ಲಿ ರಸಾಯನವಿಜ್ಞಾನ, ಭೌತವಿಜ್ಞಾನ ಹಾಗೂ ಜೀವವಿಜ್ಞಾನ ವಿಭಾಗಗಳಿಗೆ ಪ್ರತ್ಯೇಕ ಪ್ರಯೋಗಾಲಯ­ಗಳನ್ನು ತೆರೆಯಲಾಗಿದೆ. ಇದು ಕಾಟಾಚಾರಕ್ಕೆ ಇರುವ, ಆಟಕ್ಕುಂಟು ಲೆಕ್ಕಕ್ಕೆ ಇಲ್ಲದ ಪ್ರಯೋಗಾಲಯ ಅಲ್ಲ. ಜೊತೆಗೆ ಅತ್ಯಾಧುನಿಕ ಕಂಪ್ಯೂಟರ್‌ ಪ್ರಯೋಗಾಲಯ ಕಿರೀಟಪ್ರಾಯ ಎನಿಸಿದೆ. 

ರಾಬರ್ಟ್‌ ಬಾಷ್‌ ಎಂಜಿನಿಯ­ರಿಂಗ್‌ ಹಾಗೂ ಬ್ಯುಸಿನೆಸ್‌ ಸೊಲ್ಯೂಷನ್ಸ್‌ ಸಂಸ್ಥೆಯು ಸಮು­ದಾಯ ಅಭಿವೃದ್ಧಿ ಯೋಜನೆಯಡಿ (ಸಿಎಸ್ಆರ್‌) ನೀಡಿರುವ ನೆರವಿನ ಹಸ್ತದಿಂದ ಶಾಲೆಯ ಚಿತ್ರಣವೇ ಬದಲಾಗಿದೆ. ಪ್ರತಿ ವರ್ಷ ರೂ15 ಲಕ್ಷದಂತೆ ಸಂಸ್ಥೆ ಮೂರು ವರ್ಷಗಳ ಕಾಲ ಶಾಲೆಗೆ ನೆರವು ನೀಡಲಿದೆ.

ಕಂಪ್ಯೂಟರ್‌ ಹಾಗೂ ನೂತನ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡಲು ಕಂಪೆನಿಯ 30 ಮಂದಿ ‘ತಜ್ಞ’ರನ್ನು ನಿಯೋಜಿಸಲಾಗಿದೆ. ಪಾಳಿ ಪ್ರಕಾರ ಇಬ್ಬರು ನೌಕರರು ಪ್ರತಿದಿನ ಶಾಲೆಯಲ್ಲಿ ಮಕ್ಕಳಿಗೆ ಕಂಪ್ಯೂಟರ್‌ ಹಾಗೂ ಗಣಿತದ ಪಾಠ ಮಾಡುತ್ತಿದ್ದಾರೆ. ಎಂಜಿನಿಯರ್‌­ಗಳು ಇಲ್ಲಿ ಶಿಕ್ಷಕರಾದರೆ, ಕೆಲವು ಬಾರಿ ಶಿಕ್ಷಕರು ವಿದ್ಯಾರ್ಥಿಗಳಾಗುತ್ತಾರೆ! ಈ ವ್ಯವಸ್ಥೆ ಮೂಲಕ ಶಿಕ್ಷಕರಿಗೆ ಹೊಸ ತಂತ್ರಜ್ಞಾನಗಳ ‘ಟಿಪ್ಸ್’ ಸಿಗುತ್ತಿದೆ.

ಪ್ರಯೋಗಾಲಯದ ನೆರವಿನಿಂದ ವಿಜ್ಞಾನ ಬೋಧನೆ ಮಾಡುವ ಪ್ರಕ್ರಿಯೆ ಖಾಸಗಿ ಶಾಲೆಗಳಿಗೆ ಮೀಸಲು. ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ವಿಜ್ಞಾನ ಹಾಗೂ ಗಣಿತದ ಪಾಠವೆಂದರೆ ಕಬ್ಬಿಣದ ಕಡಲೆ.  ಕೆಲವು ವಿದ್ಯಾರ್ಥಿಗಳಿಗಂತೂ ಪಾಠ ತಲೆ ಮೇಲೆ ಹಾರಿ ಹೋಗುವುದು ಉಂಟು. ಇಂತಹ ವಿದ್ಯಾರ್ಥಿಗಳು ಒಂದೋ ಗಣಿತ ಅಥವಾ ವಿಜ್ಞಾನ ವಿಷಯದಲ್ಲಿ ಅನುತ್ತೀರ್ಣರಾಗಿರುತ್ತಾರೆ. ಪ್ರೌಢಶಾಲಾ ಹಂತದಲ್ಲೇ ವಿದ್ಯಾರ್ಥಿ­ಗಳಲ್ಲಿ ವಿಜ್ಞಾನ ಆಸಕ್ತಿ ಮೂಡಿಸಿ ವಿಜ್ಞಾನದ ಕೌತುಕ ಹೆಚ್ಚಿಸಲು ಈ ವ್ಯವಸ್ಥೆ ಪೂರಕ ಆಗಲಿದೆ ಎಂಬುದು ಶಾಲೆಯ ಅಧ್ಯಾಪಕರ ವಿಶ್ವಾಸ.

ಹಿನ್ನೆಲೆ: ಶಾಲೆ ಆರಂಭವಾದುದು 1998ರಲ್ಲಿ. ಆರಂಭದಿಂದಲೂ ಶಾಲೆಗೆ ಶಿಕ್ಷಕರ ಕೊರತೆ ಗಂಭೀರವಾಗಿ ಕಾಡಿಲ್ಲ. ಕೊಠಡಿಗಳ ಕೊರತೆಯೂ ಇರಲಿಲ್ಲ. ಆದರೆ, ಸುವ್ಯಸ್ಥಿತವಾಗಿರಲಿಲ್ಲ. ಇಲ್ಲಿ ಕಲಿಯುತ್ತಿರುವುದು ಆಸುಪಾಸಿನ ಕಾರ್ಮಿಕರ ಹಾಗೂ ಗಾರ್ಮೆಂಟ್‌ ನೌಕರರ ಮಕ್ಕಳು. ಎಸ್ಸೆಸ್ಸೆಲ್ಸಿಯಲ್ಲಿ 16 ವಿಭಾಗಗಳಿವೆ. ಪ್ರತಿ ತರಗತಿಯಲ್ಲಿ ಎರಡು ವಿಭಾಗದಲ್ಲಿ ಆಂಗ್ಲ ಮಾಧ್ಯಮ ಹಾಗೂ ನಾಲ್ಕು ವಿಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ಪಾಠ ಮಾಡಲಾಗುತ್ತಿದೆ.

ಸರ್ವ ಶಿಕ್ಷಣ ಅಭಿಯಾನದಡಿ ಶಾಲೆಗೆ ವಿಜ್ಞಾನ ಉಪಕರಣ ಖರೀದಿಗೆ ಪ್ರತಿವರ್ಷ ರೂ25,000 ಬಿಡುಗಡೆ­ಯಾಗುತ್ತಿದೆ. ಈ ಅನುದಾನ ‘ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತೆ ಆಗಿತ್ತು. ಪ್ರಯೋಗಾ­ಲಯ ಮೇಲ್ದರ್ಜೆಗೆ ಏರಿಸಬೇಕು ಎಂಬ ಉದ್ದೇಶದಿಂದ ಸಂಘ ಸಂಸ್ಥೆಗಳ ಸಹಾಯ ಪಡೆಯಲು ಯೋಜಿಸಲಾಯಿತು.

ರೋಟರಿ ಸಂಸ್ಥೆಯ ನಾಗಭೂಷಣ ಅವರಲ್ಲಿ ಈ ವಿಷಯವನ್ನು ಶಾಲೆಯ ಮುಖ್ಯ ಶಿಕ್ಷಕ ಎಸ್‌.ಎನ್‌. ಹನುಮಂತ ರಾವ್‌ ತಿಳಿಸಿದರು. ಅವರು ಬಾಷ್‌ ಸಂಸ್ಥೆಯ ಅಧಿಕಾರಿಗಳ ಪರಿಚಯ ಮಾಡಿಕೊಟ್ಟರು. ಮೂರು ವರ್ಷಗಳ ಅಗತ್ಯ ನೆರವು ನೀಡಲು ಸಂಸ್ಥೆ ಒಪ್ಪಿಕೊಂಡಿತು. ಸಂಸ್ಥೆ ನೀಡಿರುವ ರೂ15 ಲಕ್ಷದ ನೆರವಿನಿಂದ ಪ್ರಯೋಗಾಲಯಕ್ಕೆ ಬೇಕಿರುವ ಉಪಕರಣಗಳನ್ನು ಖರೀದಿಸ­ಲಾಗಿದೆ. ಎರಡು ತಿಂಗಳಿನಿಂದ ವಿದ್ಯಾರ್ಥಿಗಳಿಗೆ ಪ್ರಯೋಗಾಲಯದಲ್ಲಿ ಬೋಧಿಸಲಾಗುತ್ತಿದೆ.

ವೇಳಾಪಟ್ಟಿ ಉಂಟು: ಪ್ರಯೋಗಾ­ಲಯ­ದಲ್ಲಿ ಇಷ್ಟ ಬಂದಂತೆ, ಪುರುಸೊತ್ತು ಆದಾಗ ಪಾಠ ಮಾಡು­ವಂತೆ ಇಲ್ಲ. ವ್ಯವಸ್ಥಿತ ವೇಳಾಪಟ್ಟಿಯನ್ನು ತಯಾರಿಸಿ ಆ ಪ್ರಕಾರವೇ ಚಟುವಟಿಕೆ ನಡೆಯುತ್ತಿದೆ. ಕಂಪೆನಿಯ ಅಧಿಕಾರಿ­ಗಳು ಆಗಾಗ ಭೇಟಿ ನೀಡಿ ಇದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ. ಪದವಿಪೂರ್ವ ವಿಭಾಗದ ಪ್ರಯೋಗಾ­ಲಯಕ್ಕೆ ಸಡ್ಡು ಹೊಡೆಯುವ ರೀತಿ ಇಲ್ಲಿನ ಪ್ರಯೋಗಾಲಯವನ್ನು ರೂಪಿಸಲಾಗಿದೆ.

ಕಂಪ್ಯೂಟರ್‌ ಪ್ರಯೋಗಾಲಯ: ಈ ಪ್ರಯೋಗಾಲಯದಲ್ಲಿ 22 ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದೆ. ವಿದ್ಯುತ್‌ ವ್ಯತ್ಯಯ ಉಂಟಾದಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಒಂದು ಗಂಟೆ ಬ್ಯಾಕ್‌ ಅಪ್‌ ಹೊಂದಿರುವ ಬ್ಯಾಟರಿಗಳನ್ನು ಒದಗಿಸಲಾಗಿದೆ. ಕೆಲವು ಕಂಪ್ಯೂಟರ್‌ಗಳಿಗೆ ಇಂಟರ್‌ನೆಟ್‌ ಸೌಕರ್ಯವೂ ಇದೆ.

ಕಂಪ್ಯೂಟರ್‌ ಬೋಧನೆ ಬೆಳಿಗ್ಗೆ 8.30ರಿಂದ 10ರ ವರೆಗೆ ಹಾಗೂ ಮಧ್ಯಾಹ್ನ 2.50ರಿಂದ 4.30ರ ವರೆಗೆ ನಡೆಯುತ್ತಿದೆ. ಆರಂಭಿಕ ಹಂತದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ಶಿಕ್ಷಣ ನೀಡಲಾಗುತ್ತಿದೆ.

ವಾರಕ್ಕೆ ನಾಲ್ಕು ತರಗತಿಯಂತೆ ಪ್ರತಿ ವಿದ್ಯಾರ್ಥಿಗೆ ಎರಡು ತಿಂಗಳ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳೂ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ ಎಂಬುದು ಸಂಸ್ಥೆಯ ‘ಸ್ವಯಂಸೇವಕ’ರ ಸಂತಸದ ನುಡಿಯಾಗಿದೆ.

ಪ್ರೌಢಶಾಲೆಯ ಚಿತ್ರಣ
ಶಾಲೆ ಆರಂಭ: 1998
ವಿದ್ಯಾರ್ಥಿಗಳ ಸಂಖ್ಯೆ: 1,000
ವಿಭಾಗ: 16
ಶಿಕ್ಷಕರು: 23

ಮಾದರಿ ಶಾಲೆಯ ಆಶಯ
ಶಾಲೆಯಲ್ಲಿ ಕಲಿಯುತ್ತಿರುವುದು ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳು. ಇದನ್ನು ಮಾದರಿ ಶಾಲೆ ಮಾಡಬೇಕು ಎಂಬುದು ನಮ್ಮ ಆಶಯ. ಬಾಷ್‌ ಸಂಸ್ಥೆಯ ನೆರವು ಸಿಕ್ಕಿರುವುದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ನವೋಲ್ಲಾಸ ಮೂಡಿದೆ. ಪ್ರಯೋಗಾಲಯಗಳನ್ನು ಸರಿಯಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ನಿರ್ವಹಣೆ ಪುಸ್ತಕ ಇಡಲಾಗಿದೆ. ಇದರಿಂದ ಪ್ರಗತಿಯ ಪರಾಮರ್ಶೆ ನಡೆಸಲು ಸಾಧ್ಯವಾಗುತ್ತದೆ. 
–ಎಸ್‌.ಎನ್‌. ಹನುಮಂತ ರಾವ್‌, ಮುಖ್ಯ ಶಿಕ್ಷಕ

‘ಸುಸ್ಥಿರವಾಗಿರಬೇಕು’
ಸಂಸ್ಥೆ ಮೂರು ವರ್ಷಗಳ ಕಾಲ ಶಾಲೆಗೆ ಅಗತ್ಯ ನೆರವು ನೀಡಲಿದೆ. ಈ ಪ್ರಕ್ರಿಯೆ ಅಲ್ಲಿಗೆ ನಿಲ್ಲಬಾರದು ಎಂಬುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಸಂಸ್ಥೆಯ ಸಿಬ್ಬಂದಿ ಶಿಕ್ಷಕರಿಗೂ ತರಬೇತಿ ನೀಡುತ್ತಿದ್ದೇವೆ. ಭವಿಷ್ಯದಲ್ಲಿ ಕಂಪ್ಯೂಟರ್‌ ಪ್ರಯೋಗಾಲಯವನ್ನು ಶಿಕ್ಷಕರೇ ಮೇಲ್ವಿಚಾರಣೆ ನೋಡಿಕೊಳ್ಳುವಂತೆ ಆಗಬೇಕು. ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್‌ ಭಯ ಹೋಗಲಾಡಿಸಲು ಸ್ಪೋಕನ್‌ ಇಂಗ್ಲಿಷ್‌ ತರಗತಿಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಇದನ್ನು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಆರಂಭಿಕ ಹಂತದಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಗೆ ಬರುವ ವೇಳೆಗೆ ನಿರರ್ಗಳವಾಗಿ ಮಾತನಾಡಲು ಸಾಧ್ಯವಾಗುತ್ತದೆ.
–ಕಿರಣ್‌ ಸೂರ್ಯವಂಶಿ, ಸಂಸ್ಥೆಯ ಮೆಕಾನಿಕಲ್‌ ಎಂಜಿನಿಯರ್‌ ವಿಭಾಗದ  ಸಮೂಹ ವ್ಯವಸ್ಥಾಪಕ

‘ಕುತೂಹಲ ಮೂಡಿಸುತ್ತಿದೆ’
ಮೊದಲು ವಿಜ್ಞಾನ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಪಡಬೇಕಿತ್ತು. ಕಷ್ಟಪಟ್ಟು ಬಾಯಿಪಾಠ ಮಾಡಬೇಕಿತ್ತು. ಈಗ ಪ್ರಾಯೋಗಿಕ ತರಗತಿಗಳು ಇರುವುದರಿಂದ ವಿಷಯ ನೆನಪಿನಲ್ಲಿ ಉಳಿಯುತ್ತಿದೆ. ವಿಜ್ಞಾನದ ಬಗ್ಗೆ ಕೌತುಕ ಮೂಡುತ್ತಿದೆ.  –ವಿಘ್ನೇಶ್, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ

‘ಆಸಕ್ತಿ ಉತ್ತೇಜಿಸುವುದು ಮುಖ್ಯ’
ಇತ್ತೀಚೆಗೆ ವಿದ್ಯಾರ್ಥಿಗಳು ಕಲೆ ಹಾಗೂ ವಾಣಿಜ್ಯ ಪದವಿಗಳ ಕಡೆಗೆ ಒಲವು ತೋರುವ ಪ್ರವೃತ್ತಿ ಹೆಚ್ಚಿದೆ. ಪದವಿಪೂರ್ವ ವಿಭಾಗದಲ್ಲಿ ವಿಜ್ಞಾನ ವ್ಯಾಸಂಗ ಮಾಡಿದವರು ಪದವಿಯಲ್ಲಿ ಕಲೆ ಅಥವಾ ವಾಣಿಜ್ಯಕ್ಕೆ ಸೇರುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ ಅಲ್ಲ. ಪ್ರೌಢಶಾಲಾ ಹಂತದಲ್ಲೇ ಪ್ರಯೋಗಾಲಯ ಒದಗಿಸಿ ವಿಜ್ಞಾನದ ಬಗ್ಗೆ ಆಸಕ್ತಿ ಕೆರಳಿಸಿದರೆ ಸನ್ನಿವೇಶ ಬದಲಾವಣೆ ಆಗಲಿದೆ. ಭವಿಷ್ಯದಲ್ಲಿ ಕಲಿಕೆಯು ಸುಲಲಿತ ಆಗುತ್ತದೆ.
–ವೈ.ಎಮ್‌. ಆನಂದ ಕುಮಾರ್‌, ವಿಜ್ಞಾನ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT