ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಟರ್‌ನೆಟ್ ಮದುವೆ ಎಂಬ ಹುಡುಗಾಟ

Last Updated 1 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

`ಮಗು ಮೂತ್ರ ಮಾಡಿದೆ, ಬಟ್ಟೆ ಬದಲಾಯಿಸು...' ಅಮ್ಮ ಮಗಳಿಗೆ ಹೇಳುತ್ತಾಳೆ. `ಮಗೂನ ಹುಟ್ಟಿಸಿ ದೂರ ದೇಶದಲ್ಲಿ ಮಜಾ ಮಾಡ್‌ತಿರೋ ನಿನ್ನ ಅಳಿಯನನ್ನು ಕರಿ' ಮಗಳು ಅಮ್ಮನಿಗೆ ಉತ್ತರಿಸುತ್ತಾಳೆ. ಮುಂದೆ ಅಮ್ಮನಿಗೆ ಮಾತು ಬಾರದು.

ಇದು ಇಂಟರ್‌ನೆಟ್‌ನಲ್ಲಿ ಪ್ರೀತಿಸಿ ಮದುವೆಯಾದ ಸುಶಿಕ್ಷಿತ ಯುವತಿಯೊಬ್ಬಳ ಕಥೆ. ಹಿರಿಯರು ಜಾತಕ ನೋಡಿ ಅಳೆದು ತೂಗಿ ಮಾಡಿದ ಮದುವೆಗಳೇ ಹಳ್ಳ ಹಿಡಿಯುತ್ತಿರುವಾಗ, ಕೇವಲ ಇಂಟರ್‌ನೆಟ್‌ನಲ್ಲಿ ಪರಿಚಯವಾಗಿ ನೂರಾರು ಮದುವೆಗಳು ನಡೆಯುತ್ತಿವೆ. ಹಾಗೆಂದು ಎಲ್ಲ ಮದುವೆಗಳೂ ಮುರಿದು ಬೀಳುತ್ತವೆ ಎಂದು ಅರ್ಥವಲ್ಲ. ಆದರೆ, ವ್ಯಕ್ತಿಯ ನಿಜ ಮುಖದ ಪರಿಚಯವಾಗುವ ಮೊದಲೇ ಪ್ರೇಮಪಾಶಕ್ಕೆ ಬಿದ್ದಿರುತ್ತಾರಲ್ಲ, ಬರೇ ಚಾಟಿಂಗ್‌ನಿಂದಲೇ ದೂರ ಸರಿಯದಷ್ಟು ಹತ್ತಿರವಾಗಿರುತ್ತಾರಲ್ಲ ಅದು ತಂದೊಡ್ಡುವ ಅಪಾಯ ಇದು.

ಸಾಮಾನ್ಯವಾಗಿ ಚಾಟಿಂಗ್‌ನಲ್ಲಿ ಗಂಭೀರ ವಿಷಯವೇನಾದರೂ ಇರುತ್ತಾ? ಅವರವರ ಮಟ್ಟಿಗೆ ಆತ ಅಥವಾ ಆಕೆ ಸದ್ಗುಣ ಸಂಪನ್ನರೇ. ನಿಜ ಗುಣ ಅರಿವಾಗುವುದು ಮದುವೆಯ ಬಳಿಕವೇ. ಹಾಗಾಗಿ ಬಹಳಷ್ಟು ಇಂಟರ್‌ನೆಟ್ ಮದುವೆಗಳು ಹುಡುಗಾಟದಂತಾಗಿವೆ.

ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾ, ಪಿಎಚ್.ಡಿ.ಗೆ ಗೈಡ್ ಮಾಡುತ್ತಾ, ಇಬ್ಬರು ಹೆಣ್ಣು ಮಕ್ಕಳನ್ನು ಮುದ್ದಾಗಿ ಬೆಳೆಸಿದ ಮೈಸೂರಿನ ಪ್ರೊಫೆಸರ್ ಒಬ್ಬರು, ಇದೀಗ ಮಗಳ ಇಂಟರ್‌ನೆಟ್ ಮದುವೆಯಿಂದ ಸೋತು ಹೋಗಿದ್ದಾರೆ. ಅವಳ ಜೊತೆಗೆ ಇಬ್ಬರು ಮೊಮ್ಮಕ್ಕಳ ಹೊರೆಯನ್ನೂ ಅವರು ಹೊರಬೇಕಾಗಿದೆ. ಎಂ.ಎಸ್ಸಿ, ಎಂ.ಎಡ್ ಓದಿರುವ ಮಗಳನ್ನು, ಆಕೆ ಇಂಟರ್‌ನೆಟ್‌ನಲ್ಲಿ ಇಷ್ಟಪಟ್ಟ ಕೇರಳದ  ಬಯೋಕೆಮಿಸ್ಟ್ರಿ ಸ್ನಾತಕೋತ್ತರ ಪದವೀಧರನ ಜೊತೆ ಮೂರು ವರ್ಷದ ಹಿಂದೆ ಮದುವೆ ಮಾಡಿದ್ದರು. ಹುಡುಗನ ಮನೆಯಲ್ಲಿ ಆಸ್ತಿಪಾಸ್ತಿ ಇಲ್ಲ. ಅವನು ಮಾತ್ರ ಸಿಕ್ಕಾಪಟ್ಟೆ ಬುದ್ಧಿವಂತ. ಜರ್ಮನಿಯ ವಿ.ವಿ.ಯೊಂದರಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶ ಪಡೆದು ಹೊರಟುನಿಂತಿದ್ದ. ಇಷ್ಟೇ ಸಾಕಾಗಿತ್ತು ಹೆತ್ತವರು ಓ.ಕೆ ಎನ್ನಲು. ಆದರೇನು ಜೀವನದ ಪರೀಕ್ಷೆಯಲ್ಲಿ ಆತ ಝೀರೊ. ಇದು ಅರಿವಾಗಲು ಹೆಚ್ಚು ದಿನ ಬೇಕಾಗಲಿಲ್ಲ.

ಹೆಣ್ಣಿನ ಮನೆಯಲ್ಲಿ ಗಂಡು ಸಂತಾನವಿಲ್ಲ. ಮೂರ‌್ನಾಲ್ಕು ಸೈಟ್‌ಗಳಿವೆ, ಕೊಡಗಿನಲ್ಲಿ ಕಾಫಿ ತೋಟವಿದೆ. ಮೈಸೂರಲ್ಲಿ ಎರಡು ಮನೆಗಳಿವೆ. ಇರಲೊಂದು ಮನೆ ಮಾತ್ರವಿರುವ ಹುಡುಗನ ಮನೆಯವರು ಫುಲ್ ಖುಷ್. ಮದುವೆ ಸಂದರ್ಭದಲ್ಲಿ ಖರ್ಚಿಗೆ ಎಂದು ಮೂರು ಲಕ್ಷ ಹುಡುಗನ ಕೈಗಿತ್ತಿದ್ದರು. ಇನ್ನೂ ಎರಡು ಲಕ್ಷವನ್ನು ಮುಂದೆ ಕೊಡುವ ಯೋಚನೆಯೂ ಇತ್ತು. ಮದುವೆ ಆಗಿ ವಾರದಲ್ಲಿ ಅಳಿಯ ಜರ್ಮನಿ ಹಾದಿ ಹಿಡಿದ. ದೂರದಲ್ಲಿದ್ದರೂ ಹೆಂಡತಿ ಜೊತೆ ಅವನು ಫೋನಿನಲ್ಲೇ ಕಿರಿಕ್ಕು ಶುರು ಮಾಡಿದ. `ನಿನ್ನ ಅಪ್ಪನ ತೋಟವನ್ನು ನಿನ್ನ ಹೆಸರಿಗೆ ಬರೆದುಕೊಡಲು ಹೇಳು' ಎಂದು ತಮಾಷೆಯಾಗಿ ಹೇಳುತ್ತಲೇ ಹೃದಯದ ಮಾತನ್ನು ಹೊರಗೆಡವಿದ.

ಮದುವೆಯಾದ ತಿಂಗಳಿಗೆ ಮಗಳು ಬಸಿರಾಗಿದ್ದಳು. ಅಳಿಯ ಆರು ತಿಂಗಳ ಬಸುರಿ ಪತ್ನಿಯನ್ನು ನೋಡಲು ಮೈಸೂರಿಗೆ ಬಂದ. ಜರ್ಮನಿಯಿಂದ ಬರುವಾಗ ಕ್ಯಾಡ್‌ಬರಿಯಂತಹ ಒಂದು ಚಾಕೊಲೇಟನ್ನು ತಂದು ಚೂರು ಮಾಡಿ ಹೆಂಡತಿ, ಅತ್ತೆ, ಮಾವನಿಗೆ ಹಂಚಿದ. ಜಿಪುಣಾಗ್ರೇಸರ! ಇವರಿಗೋ ಆಕಾಶವೇ ಕುಸಿದ ಅನುಭವ. ಮದುವೆಯ ಹೊಸತು, ಹೆಂಡತಿ ಬಸುರಿ. ವಿದೇಶದಿಂದ ಬರಿಗೈಲಿ ಬಂದ ಅಳಿಯ. ಮುಂದೆ ಮಗಳನ್ನು ಹೇಗೆ ನೋಡಿಕೊಂಡಾನು, ಇಡೀ ಮಡಿಕೆಯ ಅನ್ನ ಬೆಂದಿದೆಯೇ ಎಂದು ನೋಡಲು ಒಂದು ಅಗುಳು ಸಾಕಲ್ಲವೇ? ಇವರಿಗೆ ಎಲ್ಲವೂ ಅರ್ಥವಾಗಿತ್ತು.

ಮಗು ಹುಟ್ಟಿದ ಎರಡು ತಿಂಗಳ ನಂತರ ಜರ್ಮನಿಯಿಂದ ಬಂದವ ಹೆಂಡತಿ ಮಗುವನ್ನೂ ಜೊತೆಗೆ ಕರೆದೊಯ್ಯುತ್ತೇನೆ ಎಂದು ಹೇಳಿ ಕೇರಳದ ತನ್ನ ಮನೆಗೆ ಕರೆದೊಯ್ದ. ಹೋದ ಕೂಡಲೇ ಆಕೆಯ ಮೊಬೈಲ್ ತೆಗೆದಿರಿಸಿದ. ಅದರಲ್ಲಿದ್ದ ಆಕೆಯ ಸಹಪಾಠಿ ಹುಡುಗರ ಹೆಸರು ನೋಡಿ ಕೆರಳಿದವ, ಒಂದೊಂದು ಹೆಸರಿಗೂ ಅವಳ ಮುಖಕ್ಕೆ ಒಂದೊಂದು ಪಂಚ್ ನೀಡಿದ. ಅದರ ಪರಿಣಾಮವಾಗಿ ಆಕೆಯ ಮೂಗಿನಿಂದ ಸುರಿದ ರಕ್ತ ಗೋಡೆಗೆ ಚಿಮ್ಮಿ ಸಾಕ್ಷಿ ಉಳಿಸಿತು. ಮರುದಿನವೇ ಜರ್ಮನಿಯ ವಿಮಾನ ಏರಿದ. ಆದರೆ ಹಸಿ ಬಾಣಂತಿ ಮೂರೇ ತಿಂಗಳಿಗೆ ಮತ್ತೆ ಬಸಿರಾಗುವಂತೆ ಮಾಡಿದ್ದ. ಮೊದಲ ಮಗುವಿನ ಎರಡು ಹುಟ್ಟುಹಬ್ಬ, ಎರಡನೇ ಮಗುವಿನ ಮೊದಲ ಹುಟ್ಟುಹಬ್ಬ ತಂದೆ ಇಲ್ಲದೇ ಕಳೆದವು.

ಈಗ ಜರ್ಮನಿಯಲ್ಲಿ ಎರಡು ವರ್ಷದ ವ್ಯಾಸಂಗ ಮುಗಿಸಿ ಮತ್ತೆ ಷಿಕಾಗೋದ ವಿ.ವಿ.ಯಲ್ಲಿ ಕೆಲಸಕ್ಕೆ ಸೇರಿದ್ದಾನೆ. ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಿದ್ದಾನೆ. ಒಂದು ಪೈಸೆಯೂ ಸಂಸಾರಕ್ಕೆ ಕೊಡುತ್ತಿಲ್ಲ. ನನ್ನ ಮನೆಯಲ್ಲಿದ್ದರೆ ಸಾಕುತ್ತೇನೆ ಎಂಬುದು ಅವನ ಉತ್ತರ. ಅವನಿಲ್ಲದ ಮನೆಗೆ ಮಗಳನ್ನು ಕಳುಹಿಸಲು ಪೋಷಕರು ಸಿದ್ಧರಿಲ್ಲ.

ಮಕ್ಕಳು ಬಿದ್ದರೂ, ಅತ್ತರೂ ಆಕೆ ಮಾತ್ರ ತನ್ನ ಪಾಡಿಗೆ ತಾನು ಪದೇ ಪದೇ ಮದುವೆಯ ಫೋಟೋ ನೋಡುತ್ತಾ, ಗಂಡನನ್ನು ಶಪಿಸುತ್ತಾ ಕುಳಿತಿರುತ್ತಾಳೆ. ಮದುವೆಯ ವಿಡಿಯೊ ತೋರಿಸಿ `ನೋಡು ನಿನ್ನ ಅಪ್ಪ' ಎಂದು ಮಕ್ಕಳಿಗೆ ಗಿಣಿಪಾಠ ಒಪ್ಪಿಸುತ್ತಾಳೆ. ಗಂಡನಿಂದ ಜೀವನಾಂಶ ಕೇಳಿ ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ. ಆದರೂ ವಿಚ್ಛೇದನ ಬೇಡವಂತೆ. ಮಕ್ಕಳು ಬೆಳೆದ ಮೇಲೆ ಅಪ್ಪ ಯಾರು ಎಂದರೆ ಯಾರನ್ನು ತೋರಿಸಲಿ ಎಂಬುದು ಅವಳ ಪ್ರಶ್ನೆ.

ಮಗಳು ಬಯಸಿದ ಹುಡುಗನನ್ನು ಮದುವೆಯಾಗಿ ಸುಖವಾಗಿರಲಿ ಎಂದು ಹೆತ್ತವರು ಬಯಸಿದ್ದೇ ತಪ್ಪಾಯಿತೇ? ಖಂಡಿತಾ ಇಲ್ಲ. ಹಾಗಿದ್ದರೆ ತಮ್ಮ ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಯುವಜನರು ಎಡವುತ್ತಿದ್ದಾರೆಯೇ? ಅವರು ಯಾವ ಮಾನದಂಡದಿಂದ ತಮ್ಮ ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ? ಪದವಿ, ಹಣ, ಸೌಂದರ್ಯ, ಆಸ್ತಿ ಇಷ್ಟರಿಂದಲೇ ಸುಖ ಸಂಸಾರ ಸಾಧ್ಯವೇ? ಇದನ್ನೆಲ್ಲ ಯೋಚಿಸಿದರೆ ನಿಜಕ್ಕೂ ಸಂಗಾತಿಯ ಆಯ್ಕೆ ಪ್ರಕ್ರಿಯೆ ಎಲ್ಲೋ ಹಾದಿ ತಪ್ಪುತ್ತಿದೆ ಎನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT