ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಅಮೆರಿಕದ ಬೃಹತ್ ಹಿಂದೂ ದೇಗುಲ

ಪರಿಸರಸ್ನೇಹಿ ವಿನ್ಯಾಸ, 550 ಕೋಟಿ ವೆಚ್ಚ
Last Updated 3 ಜನವರಿ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಪರಿಸರ ಸ್ನೇಹಿ ವಿನ್ಯಾಸ, ಸಾಂಪ್ರದಾಯಿಕ ಕಲೆ- ವಾಸ್ತುಶಿಲ್ಪ-ಆಧುನಿಕ ತಂತ್ರಜ್ಞಾನಗಳ ಸಂಗಮದೊಂದಿಗೆ ಲಾಸ್‌ಏಂಜಲೀಸ್‌ನ ಹಾಲಿವುಡ್ ನಗರದ ಸಮೀಪ 550 ಕೋಟಿ ರೂಪಾಯಿ ವೆಚ್ಚದಲ್ಲಿ ಹಿಂದೂ ದೇವಾಲಯವೊಂದು ನಿರ್ಮಾಣಗೊಂಡಿದ್ದು ಕಳೆದ ವರ್ಷ ಡಿಸೆಂಬರ್ 23ರಂದು ಲೋಕಾರ್ಪಣೆಗೊಂಡಿದೆ.

ಹೀಗೆ ಹಲವು ವೈಶಿಷ್ಟ್ಯಗಳೊಂದಿಗೆ ಉದ್ಘಾಟನೆಗೊಂಡ ಈ ದೇಗುಲದ ಹೆಸರು ಸ್ವಾಮಿ ನಾರಾಯಣ ದೇವಸ್ಥಾನ. ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್) ನಿರ್ಮಿಸಿದ ಈ ದೇವಾಲಯ ಅಮೆರಿಕದ ಹಿಂದೂ ದೇವಾಲಯಗಳಲ್ಲೇ ಅತ್ಯಂತ ಬೃಹದಾಕಾರದ್ದು.

ಅತೀ ಸೂಕ್ಷ್ಮವಾಗಿ ಕಡೆದಿರುವ 35,000 ಇಟಲಿಯ ಅಮೃತಶಿಲೆಗಳು ಹಾಗೂ ಭಾರತದ ಗುಲಾಬಿ ಬಣ್ಣದ  ಶಿಲೆಗಳನ್ನು ಈ ದೇಗುಲ ನಿರ್ಮಾಣಕ್ಕೆ ಬಳಸಲಾಗಿದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಸಾವಿರ ವರ್ಷಗಳ ಕಾಲ ನಿಲ್ಲುವ ಸ್ವಾಮಿನಾರಾಯಣ ದೇಗುಲ ವಿಶ್ವದ ಮೊದಲ ಭೂಕಂಪ ನಿರೋಧಕ ದೇವಾಲಯವಾಗಿದೆ ಎಂದು ಬಿಎಪಿಎಸ್ ಸಂಸ್ಥೆ ತಿಳಿಸಿದೆ.ದೇಗುಲವನ್ನು ಭೂಕಂಪ ನಿರೋಧಕವಾಗಿ ನಿರ್ಮಿಸಲು ವಿಶೇಷ ತಂತ್ರಜ್ಞಾನ ಬಳಸಲಾಗಿದೆ. ಇದರಲ್ಲಿ ಐದು ಗೋಪುರಗಳು, ಎರಡು ಬೃಹತ್ ಗುಮ್ಮಟಗಳು, ನಾಲ್ಕು ಬಾಲ್ಕನಿಗಳು, 122 ಕಂಬಗಳು ಹಾಗೂ 129 ಕಮಾನುಗಳಿವೆ.

ದೇಗುಲ 912 ಅಡಿ ಎತ್ತರವಿದ್ದು, ಕಮಲಾಕಾರದ ಕೊಳ, ಸಾಂಸ್ಕೃತಿಕ ಕೇಂದ್ರ, ವ್ಯಾಯಾಮ ಶಾಲೆ ಮತ್ತು ತರಗತಿ ಕೊಠಡಿಗಳನ್ನು ಹೊಂದಿದೆ. ಸೌರಶಕ್ತಿ ವ್ಯವಸ್ಥೆಯಿಂದ ವಿದ್ಯುತ್ ಉತ್ಪಾದಿಸುವ ಮೂಲಕ ಪರಿಸರದ ಮೇಲೆ ಆಗುವ ಹಾನಿ ತಡೆಗಟ್ಟಲು ಸಂಸ್ಥೆ ಮುಂದಾಗಿದೆ.

ಭಾರತೀಯ ಮೂಲದ ಕುಶಲಕರ್ಮಿಗಳು ತಮ್ಮ ಕೌಶಲ್ಯ, ಭಕ್ತಿ ಹಾಗೂ ಪ್ರೀತಿಯಿಂದ ಕಲ್ಲಿನಲ್ಲಿ ವಿವಿಧ ದೇವರ ಮೂರ್ತಿಗಳನ್ನು ಕೆತ್ತಿ, ಚಿನೊ ಹಿಲ್ಸ್‌ಗೆ ರವಾನಿಸಿದ್ದಾರೆ ಎಂದು ಬಿಎಪಿಎಸ್ ಸಂಸ್ಥೆ ಶ್ಲಾಘಿಸಿದೆ. 
`ಕುಶಲಕರ್ಮಿಗಳ, ಕಾರ್ಮಿಕರ ಹತ್ತಾರು ವರ್ಷಗಳ ಶ್ರಮದ ಫಲವಾಗಿ ಈ ವಿಶಿಷ್ಟ ದೇವಾಲಯ ಸಿದ್ಧಗೊಂಡಿದೆ' ಎಂದು ಪೀಟರ್ ರೋಗರ್ಸ್‌ ಹೇಳಿದ್ದಾರೆ.

ದೇಗುಲ ಮತ್ತು ಸಾಂಸ್ಕೃತಿಕ ಕೇಂದ್ರವಾಗಿರುವ ಸ್ವಾಮಿನಾರಾಯಣ ದೇಗುಲ ಚಿನೊ ಹಿಲ್ಸ್ ಪ್ರದೇಶದಲ್ಲಿ ನಿರ್ಮಾಣವಾಗಿರುವುದರಿಂದ ಆ ಪ್ರದೇಶದ ಗೌರವ ಹೆಚ್ಚಾಗಿದೆ ಎಂದು ಮೇಯರ್ ದೇಗುಲ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಹೆಮ್ಮೆಯಿಂದ ನುಡಿದಿದ್ದಾರೆ.

ಮುಖ್ಯಾಂಶಗಳು
* ವಿಶ್ವದ ಮೊದಲ ಭೂಕಂಪ ನಿರೋಧಕ ದೇವಾಲಯ
* ದೇಗುಲದ ಎತ್ತರ 912 ಅಡಿ. 2 ಬೃಹತ್ ಗುಮ್ಮಟಗಳು, 4 ಬಾಲ್ಕನಿಗಳು, 122 ಕಂಬಗಳು ಹಾಗೂ 129 ಕಮಾನುಗಳುಗಳಿವೆ
* ಕಮಲಾಕಾರದ ಕೊಳ, ಸಾಂಸ್ಕೃತಿಕ ಕೇಂದ್ರ, ವ್ಯಾಯಾಮ ಶಾಲೆ ಮತ್ತು ತರಗತಿ ಕೊಠಡಿ
* ಸೌರಶಕ್ತಿ ಮೂಲಕ  ವಿದ್ಯುತ್ ಉತ್ಪಾದನೆ ಸೌಲಭ್ಯ ಅಳವಡಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT