ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ವಿಚಿತ್ರ ವಿಚ್ಛೇದನದ ಕಥೆ

ವಿಮರ್ಶೆ
Last Updated 15 ಜೂನ್ 2013, 20:00 IST
ಅಕ್ಷರ ಗಾತ್ರ

ಶಾಂತಾರಾಮ ಸೋಮಯಾಜಿ ಅವರು ತಮ್ಮ ಕಥೆಗಳ ಮೂಲಕ ಕನ್ನಡ ಓದುಗರಿಗೆ ಪರಿಚಿತರು. ಅಮೆರಿಕದ ವಿಶ್ವವಿದ್ಯಾಲಯ ಒಂದರಲ್ಲಿ ದಶಕಗಳ ಕಾಲ ಪಾಠ ಮಾಡಿದವರು. ಇವು ಅವರ ಸಾರ್ವಜನಿಕ ಜೀವನದ ಹೊರ ವಿವರಗಳನ್ನು ಹೇಳುತ್ತವೆ.

ಅವರದೇ ಬದುಕಿನ ಒಳಬಾಳಿನ ವಿವರಗಳನ್ನು, ಎರಡನೇ ಮದುವೆಯಿಂದ ಅನುಭವಿಸಿದ ಯಾತನೆಯನ್ನು ತಮ್ಮ `ಮುಳ್ಳು ಬೇಲಿ ದಾಟಿ ಬದುಕಿ ಬಂದೆ' ಎಂಬ ಅನುಭವಕಥನದಲ್ಲಿ ಬರೆದುಕೊಂಡಿದ್ದಾರೆ.

ಗಂಡಿನಿಂದ ಹೆಣ್ಣಿನ ಶೋಷಣೆ, ತುಳಿಯುವಿಕೆ ಇವೆಲ್ಲ ಕನ್ನಡ ಸಾಹಿತ್ಯದಲ್ಲಿ ಮಾತ್ರವಲ್ಲ ಎಲ್ಲ ಭಾಷೆಗಳ ಸಾಹಿತ್ಯದಲ್ಲಿ ಪ್ರಕಟವಾಗಿವೆ. ಆದರೆ, ಮದುವೆಯಾದ ಹೆಂಡತಿಯಿಂದ ಮಾನಸಿಕವಾಗಿ ಅನುಭವಿಸಿದ ತೊಂದರೆಯನ್ನು ಹಾಗೂ ಆರ್ಥಿಕ ಶೋಷಣೆಯ ತಮ್ಮ ಅನುಭವಗಳನ್ನು ಸೋಮಯಾಜಿಯವರು ತೋಲತಪ್ಪದಂತೆ ಇದರಲ್ಲಿ ಹೇಳಿದ್ದಾರೆ.

ಇದು ಕೇವಲ ಅವರ ಎರಡನೇ ಹೆಂಡತಿಯ ಕಥೆ ಮಾತ್ರವಲ್ಲ. ಅವರ ಬದುಕಿನಲ್ಲಿ ಅನುಭವಿಸಿದ ಪ್ರೀತಿ, ಪ್ರೇಮ, ಕಾಮ ಇವೆಲ್ಲವೂ ಸೇರಿದಂತೆ ಕುಟುಂಬವಂತನೊಬ್ಬನ ಬದುಕಿನ ದಾಖಲೆಯೂ ಹೌದು.

ಮಂಗಳೂರಿನ ಸುರತ್ಕಲ್‌ನವರಾದ ಸೋಮಯಾಜಿ ಅಲ್ಲಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿ, ಮಂಗಳೂರಿನಲ್ಲಿ ಪಾರ್ಟ್‌ಟೈಂ ಕೆಲಸ ಮಾಡುತ್ತ, ಮೇರಿ ಎಂಬ ಕ್ರಿಶ್ಚಿಯನ್ ಹುಡುಗಿಯನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಈ ಪ್ರೀತಿ ಮತ್ತು ಮದುವೆ, ಅವರ ಅಮೆರಿಕದ ವೃತ್ತಿ, ಅಲ್ಲಿನ ವಾಸ- ಇವೆಲ್ಲ ಲೇಖಕರ ಜೀವನದ ಒಂದು ಘಟ್ಟ.

ಅವರ ಬದುಕಿನ ಇನ್ನೊಂದು ಘಟ್ಟ ಪತ್ನಿ ಮೇರಿ ಮೃತಪಟ್ಟ ಬಳಿಕ ಮೈಸೂರಿನ ಹುಡುಗಿಯೊಬ್ಬಳನ್ನು ಮದುವೆಯಾಗುವುದರಿಂದ ಶುರುವಾಗುತ್ತದೆ. ಇದೇ ಅವರ ಬದುಕಿನ ಪ್ರಮುಖ ಭಾಗ. ಈ ಮದುವೆಯೇ ಅವರಿಗೆ  ಮುಳ್ಳಿನ ಸಂಕೋಲೆಯೂ ಬೇಲಿಯೂ ಆಗುವುದು. ಅಪಾರವಾದ ಬೆಲೆ ತೆತ್ತು ಅವರು ಆ ಬಂಧನದಿಂದ ಹೊರಬರುವುದು ಇನ್ನೊಂದು ಕಥೆಯಾಗಿದೆ. ಇವನ್ನೇ ಅವರು ಈ ಪುಸ್ತಕದಲ್ಲಿ ಹೇಳಲು ಹೊರಟಿರುವುದು.

ಈ ಆತ್ಮಕಥನ ಮದುವೆ, ಅದರ ಬಂಧನ, ಹೆಣ್ಣೊಬ್ಬಳ ಸ್ವಾರ್ಥ ಹಾಗೂ ಬದುಕಿನ ಬಗ್ಗೆಯೇ ತಾತ್ವಿಕವಾದ ಹಾಗೂ ಸರಿ ತಪ್ಪುಗಳ ಕುರಿತ ಪ್ರಶ್ನೆಗಳನ್ನು ಎತ್ತುತ್ತದೆ. ಮದುವೆಯ ಸಂದರ್ಭದಲ್ಲಿ ಆಡಿದ ಎಲ್ಲ ಮಾತುಗಳು ಹಾಗೂ ಒಪ್ಪಿದ ಷರತ್ತುಗಳನ್ನು ಮೀರಿ, ತನ್ನೊಂದಿಗೆ ಸಹಬಾಳ್ವೆ ಮಾಡುವ ಗಂಡನಿಗೆ ಬಲೆಹೆಣೆದು, ಅದರಿಂದ ಆತ ಹೊರಬರಲಾಗದಂತೆ ಮಾಡಿದ ಹೆಣ್ಣೊಬ್ಬಳ ಕಥನವನ್ನು (ಕ್ರೌರ್ಯವನ್ನು?) ಪುಸ್ತಕದ ಕೊನೆಯ ಪುಟಗಳು ತೋರುತ್ತವೆ.

ಇದಕ್ಕೆ ಮೂಲವಾಗಿರುವ ಹಣ, ಆಸ್ತಿ ಎಂಬ ಸಂಗತಿಗಳು ಬದುಕಿನ ವೈರುಧ್ಯ ಮತ್ತು ಮನುಷ್ಯನ ಮೂಲಭೂತ ಸ್ವಭಾವವಾದ ಅಮಾನವೀಯತೆಯ ಕುರಿತೇ ಹೇಳುತ್ತವೆ.

ಇದಿಷ್ಟೇ ಆಗಿದ್ದರೆ ಇದೊಂದು ಎಲ್ಲೆಡೆ, ಅನೇಕ ಸಂಸಾರಗಳಲ್ಲಿ ನಡೆಯುವ ಕೋಲಾಹಲ ಎಂದುಕೊಳ್ಳಬಹುದಿತ್ತು. ಆದರೆ ಲೇಖಕರ ಎರಡನೇ ಪತ್ನಿಯಾಗಿ ಬಂದವರು ವಿಚ್ಛೇದನವಾಗುತ್ತದೆ ಎಂದು ಗೊತ್ತಾದಾಗ ಕೈಗೊಂಡ ಕಾನೂನು ಕ್ರಮಗಳು ಮನುಷ್ಯತ್ವದ ಮೇಲಿನ ನಂಬಿಕೆಯನ್ನೇ ತೊಡೆದು ಹಾಕುವಂತಿವೆ; ಇಲ್ಲ ಕಡಿಮೆ ಮಾಡುವಂತಿವೆ.

ಈ ಅನುಭವ ಕಥನದಲ್ಲಿ ಬರುವ ವಿವರಗಳು ವ್ಯಕ್ತಿಯೊಬ್ಬ ತನ್ನ ಅಮೂಲ್ಯ ಸ್ವಾತಂತ್ರ್ಯಕ್ಕಾಗಿ ಮಾಡಿದ ಹೋರಾಟವನ್ನು ಚಿತ್ರಿಸುತ್ತವೆ. ಇಲ್ಲಿನ ಅನುಭವ ರಾತ್ರಿ ಕಂಡ ದುಃಸ್ವಪ್ನವನ್ನು ಮರುದಿನ ಮರೆಯುವಂಥ ಅನುಭವ ಅಲ್ಲ. ರಕ್ತ ಒಸರುವಂತೆ ಮಾಡಿದ ಗಾಯಗಳು ಬೇಗ ಮರೆಯುವಂಥವೂ ಅಲ್ಲ.

ಇದು ಮನುಷ್ಯ ಅನುಭವವನ್ನು ಮತ್ತೊಂದು ರೀತಿಯಲ್ಲಿ ಬೇರೊಂದು ಸ್ತರದಲ್ಲಿ ನೋಡುವ, ಅದರ ಒಳಿತು ಕೆಡುಕನ್ನು ಪರಿಶೀಲನೆ ಮಾಡುವ ಮತ್ತು ತನ್ನೊಳಗೆ ಮತ್ತೆ ಮತ್ತೆ ಇಣುಕಿ ಆತ್ಮಾವಲೋಕನ ಮಾಡಿಕೊಳ್ಳುವ ರೀತಿಯದು. ಸೋಮಯಾಜಿಗಳ ಬರವಣಿಗೆಯ ರೀತಿ ಇದೇ ಬಗೆಯಲ್ಲಿದೆ. ಯಾವುದೇ ಉತ್ಪ್ರೇಕ್ಷೆ ಮಾಡದೆ, ಅತಿ ಎನ್ನಿಸದಂತೆ ಅವರು ತಮ್ಮ ಸ್ವಾನುಭವವನ್ನು ನಿರೂಪಿಸುತ್ತ ಹೋಗುತ್ತಾರೆ.

ಕಥೆಗಾರ, ಕಾದಂಬರಿಕಾರರೂ ಆಗಿರುವ ಶಾಂತಾರಾಮ ಸೋಮಯಾಜಿ ಅವರು ಈ ಎಲ್ಲ ಅನುಭವಗಳನ್ನು ಒಂದು ಕಾದಂಬರಿಯಾಗಿಸಿ ಬರೆದಿದ್ದರೆ ಹೇಗಿರುತ್ತಿತ್ತು? ಊಹೆ ಸುಲಭ. ನಮ್ಮ ಸ್ತ್ರೀವಾದಿ ವಿಮರ್ಶಕರು `ಹೆಣ್ಣನ್ನು ಕೆಟ್ಟದಾಗಿ ನೋಡಿದ, ತಪ್ಪಾಗಿ ಚಿತ್ರಿಸಿದ ಬರವಣಿಗೆ' ಇತ್ಯಾದಿಯಾಗಿ ಬರೆಯುವ ಸಾಧ್ಯತೆ ಇತ್ತು. ಎಲ್ಲ ಹೆಣ್ಣುಮಕ್ಕಳೂ ಹೀಗೇ ಇರಬೇಕೆಂದಿಲ್ಲ. ಹೀಗೂ ಇರುತ್ತಾರಲ್ಲ ಎನ್ನುವುದನ್ನು ಬೆಟ್ಟು ಮಾಡಿ ತೋರಿಸುವ ಈ ಕಥನ, ವಾಸ್ತವದ ಮತ್ತೊಂದು ಮಗ್ಗುಲಿನ ದರ್ಶನ ಮಾಡಿಸುತ್ತದೆ.

ನಮ್ಮ ಕನ್ನಡದ ಪ್ರಸಿದ್ಧರು ತಾವು ಒಂದು ದಡ ಮುಟ್ಟಿದ ಮೇಲೆ ನಮ್ಮ ಬದುಕಿನಲ್ಲಿ ಹೀಗಾಯಿತು. ಅನೇಕ ಸೋಲುಗಳನ್ನು ಕಂಡ ಬಳಿಕ ಯಶಸ್ಸು ಸಿಕ್ಕಿತ್ತು ಎಂದು ಬರೆದುಕೊಳ್ಳುತ್ತಾರೆ. ಅದು ದಡ ಮುಟ್ಟಿದವರ ಗೆಲುವಿನ ಕಥನ; ಸೋತವರದ್ದಲ್ಲ. ಆದರೆ, ಇದು ಸೋಲಬೇಕಿಲ್ಲದ ಬದುಕಿನ ಆಟದಲ್ಲಿ ಅಮಾಯಕನೊಬ್ಬ ಅನಿರೀಕ್ಷಿತವಾಗಿ ಸೋತ ಕಥನ. ಈ ಸೋತ ಕಥನ ಅನೇಕ ಪಾಠಗಳನ್ನು ಕಲಿಸುತ್ತದೆ ಎಂಬುದಕ್ಕಾಗಿ ಅದಕ್ಕೆ ಹೆಚ್ಚಿನ ಮಹತ್ವವಿದೆ.              

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT