ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಂಗಡಿ ಅಡಿಗೆ

Last Updated 6 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

ಕಲ್ಲಂಗಡಿ ಹಣ್ಣಿನ ದೋಸೆ
ಬೇಕಾಗುವ ಸಾಮಾಗ್ರಿ:
ಅಕ್ಕಿ 4 ಕಪ್, ಕಲ್ಲಂಗಡಿ ಸಿಪ್ಪೆಯ ಚೂರು 6 ಕಪ್, ಕಾಯಿ ತುರಿ 1 ಕಪ್, ತುಪ್ಪ ಕಪ್, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಅಕ್ಕಿಯನ್ನು 1 ಗಂಟೆ ನೆನೆಸಿ ನೀರು ಬಸಿದು ತೊಳೆದಿಡಿ. ಕಲ್ಲಂಗಡಿ ಹಣ್ಣಿನ ಕೆಂಪು ಭಾಗ ತಿನ್ನಲು ಬಳಸಿ ತಳದಲ್ಲಿ ಉಳಿಯುವ ಬಿಳಿ ಭಾಗವನ್ನು ಹೆಚ್ಚಿ ಇಡಿ. (ತಳದ ಹಸಿರು ಭಾಗ ಬೇಡ) ಅಕ್ಕಿ, ಕಲ್ಲಂಗಡಿ ಚೂರು, ಕಾಯಿತುರಿ, ಉಪ್ಪು ಹಾಕಿ ನುಣ್ಣಗೆ ರುಬಿ,್ಬ ಕಾದ ಕಾವಲಿಯಲ್ಲಿ ದೋಸೆ ಮಾಡಿ ತುಪ್ಪ ಹಾಕಿ ಎರಡೂ ಬದಿ ಬೇಯಿಸಿ. ತೆಂಗಿನ ಕಾಯಿ ಚಟ್ನಿಯೊಂದಿಗೆ ಸವಿಯಿರಿ.

ಸಿಪ್ಪೆ ಪಲ್ಯ
ಬೇಕಾಗುವ ಸಾಮಗ್ರಿ :
ಕಲ್ಲಂಗಡಿ ಹಣ್ಣಿನ ಸಿಪ್ಪೆ 5 ಕಪ್, ಹಸಿಮೆಣಸು 2, ಮೆಣಸಿನ ಹುಡಿ 1/2  ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಕಾಯಿತುರಿ 1/4 ಕಪ್, ಒಗ್ಗರಣೆಗೆ ಸಾಸಿವೆ 1 ಚಮಚ, ಉದ್ದಿನ ಬೇಳೆ 2 ಚಮಚ, ಒಣ ಮೆಣಸು 1, ಎಣ್ಣೆ 2 ಚಮಚ, ಕರಿಬೇವು 1 ಎಸಳು.

ಮಾಡುವ ವಿಧಾನ: ಕಲ್ಲಂಗಡಿ ಹಣ್ಣಿನ ಸಿಪ್ಪೆ ಸ್ವಲ್ಪ ದಪ್ಪವಾಗಿ ತೆಗೆದು ಕೆಂಪು ಭಾಗ ತಿನ್ನಲು ಬಳಸಿ, ತಳದ ಹಸಿರು ಭಾಗವನ್ನು ಕೆತ್ತಿ ತೆಗೆಯಿರಿ. ಮಧ್ಯದಲ್ಲಿರುವ ಬಿಳಿ ಭಾಗವನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಬಾಣಲೆಯಲ್ಲಿ ಒಗ್ಗರಣೆ ಸಿಡಿಸಿ ಕರಿಬೇವು ಹಾಕಿ. ಹೆಚ್ಚಿದ ಹೋಳುಗಳು, ಹಸಿಮೆಣಸು, ಮೆಣಸಿನ ಹುಡಿ, ಉಪ್ಪು ಮತ್ತು 1 ಕಪ್ ನೀರು ಹಾಕಿ ಮುಚ್ಚಿ ಬೇಯಿಸಿ. ಆಗಾಗ ಸೌಟಿನಿಂದ ಮಗುಚಿ. ಹೋಳುಗಳು ಬೆಂದು ನೀರು ಇಂಗಿದಾಗ ಕಾಯಿತುರಿ ಹಾಕಿ ಚೆನ್ನಾಗಿ ಮಗುಚಿ, ಇಳಿಸಿ. ಊಟಕ್ಕೆ ರುಚಿಯಾದ ಪಲ್ಯ ಸಿದ್ಧ.
 

ಕಲ್ಲಂಗಡಿ ಸಿಪ್ಪೆಯ ಕೂಟು
ಬೇಕಾಗುವ ಸಾಮಗ್ರಿ:
ಕಲ್ಲಂಗಡಿ ಹಣ್ಣಿನ ಸಿಪ್ಪೆ 4 ಕಪ್, ತೊಗರಿ ಬೇಳೆ 1 ಕಪ್, ಒಣ ಮೆಣಸು 6-7, ಕಾಳು ಮೆಣಸು 1/2  ಚಮಚ, ಕಡಲೆ  ಬೇಳೆ 2 ಚಮಚ, ಉದ್ದಿನ ಬೇಳೆ 1 ಚಮಚ, ಎಣ್ಣೆ 2 ಚಮಚ, ಹುಳಿ ಸುಲಿದ ಅಡಿಕೆ ಗಾತ್ರ, ಉಪ್ಪು 11/2 ಚಮಚ, ಬೆಲ್ಲ ನೆಲ್ಲಿಕಾಯಿ ಗಾತ್ರ, ಅರಸಿನ ಪುಡಿ 1/4  ಚಮಚ, ತೆಂಗಿನ ತುರಿ 1 ಕಪ್, ಇಂಗು ಕಡಲೆ ಗಾತ್ರ, ಸಾಸಿವೆ 1 ಚಮಚ, ಕರಿಬೇವು

ಮಾಡುವ ವಿಧಾನ : ಬಾಣಲೆಗೆ 1 ಚಮಚ ಎಣ್ಣೆ ಹಾಕಿ ಒಣ ಮೆಣಸು, ಕಡಲೆ ಬೇಳೆ, ಉದ್ದಿನ ಬೇಳೆ, ಕಾಳು ಮೆಣಸು, ಇಂಗು ಮತ್ತು 1/4  ಚಮಚ ಸಾಸಿವೆ ಹುರಿದು ಕೊಳ್ಳಿ. ಇವನ್ನು ಕಾಯಿ ತುರಿಯ ಜತೆಗೆ ನುಣ್ಣಗೆ ರುಬ್ಬಿ. ತೊಗರಿ ಬೇಳೆಯನ್ನು 2 ಕಪ್ ನೀರು ಹಾಕಿ ಬೇಯಿಸಿಕೊಳ್ಳಿ.

ಕಲ್ಲಂಗಡಿ ಹಣ್ಣಿನ ಸಿಪ್ಪೆ ಸ್ವಲ್ಪ ದಪ್ಪವಾಗಿ ತೆಗೆದು ತಳದ ಹಸಿರು ಭಾಗವನ್ನು ಕೆತ್ತಿ ತೆಗೆಯಿರಿ.  ಮಧ್ಯದಲ್ಲಿರುವ ಬಿಳಿ ಭಾಗವನ್ನು ಹೆಚ್ಚಿ ಅದು ಮುಳುಗುವಷ್ಟು ನೀರು, ಉಪ್ಪು, ಹುಳಿ ಮತ್ತು ಬೆಲ್ಲ ಹಾಕಿ ಹದವಾಗಿ ಬೇಯಿಸಿ. ರುಬ್ಬಿದ ಮಸಾಲೆ ಮತ್ತು ಬೆಂದ ಬೇಳೆ ಹಾಕಿ ಅಗತ್ಯವಿದ್ದರೆ ನೀರು ಬೆರಸಿ ಚೆನ್ನಾಗಿ ಕುದಿಸಿ. ಸಾಸಿವೆ, ಇಂಗು, ಕರಿಬೇವಿನ ಒಗ್ಗರಣೆ ಹಾಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT