ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರಿತ್ರಿಕ ಸ್ಮೃತಿಗಳ `ಆನಂದ ಭವನ'

Last Updated 27 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಅಲಹಾಬಾದ್‌ನಲ್ಲಿ ಎರಡು ತಿಂಗಳ ಹಿಂದೆ ನಡೆದ ಕುಂಭಮೇಳಕ್ಕೆ ಹೋಗಿದ್ದಾಗ ಗೆಳೆಯರೆಲ್ಲ ಕೂಡಿ ಜವಾಹರಲಾಲ ನೆಹರು ಕುಟುಂಬದವರು ವಾಸ್ತವ್ಯವಿದ್ದ ಮನೆ ಹುಡುಕಿಕೊಂಡು ಸೈಕಲ್ ರಿಕ್ಷಾ ಏರಿ ಹೊರೆಟವು.

ಪಟ್ಟಣದ ಚರ್ಚ್ ರಸ್ತೆಯ ತುದಿಯಲ್ಲೊಂದು ದೊಡ್ಡ ಕಾಂಪೌಂಡ್‌ನ ಮನೆ ಕಂಡಿತು. ರಿಕ್ಷಾವಾಲ, `ಯೆ ಇ ಹೈ ಆನಂದಭವನ್, ಉತರೋ.. ಉತರೊ...' ಎಂದ. ಆತ ಇಳಿಸಿದ ಜಾಗದಿಂದ ಆಚೆ ಬದಿಯಲ್ಲಿ ದೊಡ್ಡದಾದ ಕಾಂಪೌಂಡ್. ಮೂಲೆಯಲ್ಲಿ ಮಹಾದ್ವಾರ. ಒಳ ಹೊಕ್ಕರೆ ವಿಶಾಲವಾದ ಹುಲ್ಲುಹಾಸು. ಅದರ ಹಿಂಬದಿಯಲ್ಲೇ ಗುಮ್ಮಟ ಶೈಲಿಯಲ್ಲಿ ನಿಂತ ಎರಡು ಅಂತಸ್ತಿನ ಭವ್ಯಭವನ. ಎದುರಿನಲ್ಲೇ ಕಪ್ಪು ಕಲ್ಲಿನ ಮೇಲೆ ಚಿನ್ನದ ಅಕ್ಷರಗಳಲ್ಲಿ `ಆನಂದ ಭವನ'ದ ವಿವರಣೆ.

ನೆಹರು ಕುಟುಂಬದ ಐದು ತಲೆಮಾರುಗಳು ವಾಸವಿದ್ದ ಕಟ್ಟಡವೇ `ಆನಂದ ಭವನ'. ಇದು ಎರಡು ಅಂತಸ್ತಿನ ಕಟ್ಟಡ. ನೆಲ ಅಂತಸ್ತಿನಲ್ಲಿ ಮೋತಿಲಾಲ ನೆಹರು ಮತ್ತು ಜವಾಹರಲಾಲ ನೆಹರು ವಾಸವಿದ್ದ ಕೋಣೆಗಳಿವೆ. ಮೊದಲ ಅಂತಸ್ತಿನಲ್ಲಿ ಇಂದಿರಾಗಾಂಧಿಯವರು ವಾಸವಿದ್ದ ಕೊಠಡಿ ಇದೆ. ಮೇಲಂತಸ್ತಿನ ಒಂದು ಕೋಣೆ ರಾಷ್ಟ್ರಪಿತ ಮಹಾತ್ಮಗಾಂಧಿ ಮೀಸಲಾಗಿ ಇದ್ದುದು. ಅಲಹಬಾದ್‌ಗೆ ಭೇಟಿ ನೀಡಿದಾಗಲೆಲ್ಲ ಗಾಂಧೀಜಿ ಈ ಕೊಠಡಿಯಲ್ಲೇ ಉಳಿಯುತ್ತಿದ್ದರಂತೆ. ಹಾಗಾಗಿ ಅವರ ಕೋಣೆಯಲ್ಲಿ ಗಾಂಧೀಜಿಯವರ ನೂಲು ತೆಗೆಯುವ ಚರಕ, ಅವರು ಧರಿಸುತ್ತಿದ್ದ ಮೇಲು ವಸ್ತ್ರ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಛಾಯಾಚಿತ್ರಗಳ ಪ್ರದರ್ಶನವಿದೆ. 

ಪ್ರತಿ ಕೋಣೆಯಲ್ಲೂ ರಾಷ್ಟ್ರದ ಪ್ರಮುಖ ರಾಜಕೀಯ ವಿದ್ಯಮಾನಗಳನ್ನು ನೆನಪಿಸುವ ಕಪ್ಪು ಬಿಳುಪಿನ ಛಾಯಾಚಿತ್ರಗಳಿವೆ. ಅತ್ಯಂತ ಆಸಕ್ತಿ ಹುಟ್ಟಿಸುವ ಕೋಣೆ, ಜವಾಹರಲಾಲ್ ನೆಹರು ಅವರ ಮಲಗುತ್ತಿದ್ದ ಹಾಗೂ ಅಧ್ಯಯನ ನಡೆಸುತ್ತಿದ್ದ ಕೊಠಡಿ.

ಅಧ್ಯಯನ ಕೊಠಡಿಯಲ್ಲಿ ಹಳೆಯ ಕಾಲದ ಪುಸ್ತಕ ಕಪಾಟುಗಳಿವೆ. ಅದರ ತುಂಬಾ ಮಾರ್ಕ್ಸ್ ಮತ್ತು ಲೆನಿನ್ ಅವರ ಕೃತಿಗಳಿವೆ. ಜೊತೆಗೆ ಭಾರತದ ಸಂವಿಧಾನದ ಪುಸ್ತಕಗಳು, ಕಾನೂನು ಪುಸ್ತಕಗಳನ್ನು ಒಪ್ಪವಾಗಿ ಜೋಡಿಸಲಾಗಿದೆ.

ಇಂದಿರಾಗಾಂಧಿಯವರು ವಾಸವಿದ್ದ ಕೋಣೆಯಲ್ಲಿ, ಅವರು ಬಳಸುತ್ತಿದ್ದ ಮೇಜು-ಕುರ್ಚಿ ಹಾಗೂ ಧರಿಸುತ್ತಿದ್ದ ಉಡುಪುಗಳಿವೆ. ನೆಹರು-ಇಂದಿರಾ ಜೊತೆಯಾಗಿರುವ ಆಪ್ತವೆನಿಸುವ ಛಾಯಾಚಿತ್ರಗಳಿವೆ. ಪ್ರತಿ ಚಿತ್ರಕ್ಕೂ ಘಟನೆಯ ಇಸವಿ ಹಾಗೂ ಚಿತ್ರದ ವಿವರಣೆ ಇದೆ.

1940ರಲ್ಲಿ ಸ್ವರಾಜ್ ಭವನದಲ್ಲಿ ಮಹಾತ್ಮಗಾಂಧಿ ಅವರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ಅಪರೂಪದ ಚಿತ್ರವೊಂದು ಗಮನ ಸೆಳೆಯುತ್ತದೆ. ಉಕ್ಕಿನ ಮನುಷ್ಯ ವಲ್ಲಭಭಾಯಿ ಪಟೇಲ್, ವಿಜಯಲಕ್ಷ್ಮಿ ಪಂಡಿತ್ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಆ ಚಿತ್ರದಲ್ಲಿದ್ದಾರೆ. ಸ್ವಾತಂತ್ರ್ಯೋತ್ತರದಲ್ಲಿ ದೇಶ ವಿಭಜನೆಗೊಳ್ಳುವ ಸಂದರ್ಭದಲ್ಲಿ ನಡೆದ ರಾಷ್ಟ್ರನಾಯಕರ ಸಭೆಯ ಛಾಯಾಚಿತ್ರಗಳೂ ಇವೆ. 

ಇಂದಿರಾಗಾಂಧಿಯವರು ಈ ಕಟ್ಟಡವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಮೇಲೆ ಇಡೀ `ಆನಂದ ಭವನ'ವನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. `ಆನಂದ ಭವನ'ದ ಹಿಂಭಾಗದಲ್ಲಿರುವ ಕೊಠಡಿಯಲ್ಲಿ ಭಾರತೀಯ ಸ್ವಾತಂತ್ರ್ಯ ಸಂಗ್ರಾಮ ಕುರಿತ ನೆಹರು ತಾರಾಲಯ, ಸ್ವಾತಂತ್ರ್ಯ ಸಂಗ್ರಾಮದ ಛಾಯಾಚಿತ್ರಗಳ ಪ್ರದರ್ಶನ ಕೊಠಡಿ, ಶ್ರವ್ಯ-ದೃಶ್ಯ ಮಾಧ್ಯಮ ಪ್ರದರ್ಶನದ ಪಡಸಾಲೆಯನ್ನು ವಿಶೇಷವಾಗಿ ನಿರ್ಮಿಸಲಾಗಿದ್ದು, ಉತ್ತಮವಾಗಿ ನಿರ್ವಹಣೆ ಮಾಡಲಾಗಿದೆ.

ಈ ಪ್ರದರ್ಶನ ಕೊಠಡಿಯಲ್ಲಿ `ದಿ ಸ್ಟೋರಿ ಆಫ್ ಇಂಡಿಪೆಂಡೆನ್ಸ್ (ಭಾರತಕ್ಕೆ ಸ್ವಾತಂತ್ರ್ಯ ದೊರೆತ ಕಥೆ)' ಎಂಬ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ. ಇದರ ಜೊತೆಗೆ ಕಾಲ ಕಾಲಕ್ಕೆ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ವಿಜ್ಞಾನಕ್ಕೆ ಸಂಬಂಧಿಸಿದ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ.

`ಆನಂದ ಭವನ'ದ ಹಿನ್ನೆಲೆ
`ಆನಂದ ಭವನ'ದ ಮೊದಲ ಹೆಸರು `ಸ್ವರಾಜ್ ಭವನ'. 19ನೇ ಶತಮಾನದಲ್ಲಿ ನಿರ್ಮಾಣವಾದ ಈ ಭವನ ಶಿಕ್ಷಣ ತಜ್ಞ ಸರ್ ಸೈಯದ್ ಅಹ್ಮದ್ ಖಾನ್ ಅವರಿಗೆ ಸೇರಿತ್ತು. ಖ್ಯಾತ ವಕೀಲರಾಗಿದ್ದ ಪಂಡಿತ್ ಮೋತಿಲಾಲ ನೆಹರು ಅವರು 1900ರಲ್ಲಿ ಈ ಕಟ್ಟಡವನ್ನು ಖರೀದಿಸಿದರು.

ವಿದೇಶಗಳಲ್ಲಿ ನಿರಂತರವಾಗಿ ಪ್ರವಾಸ ಮಾಡುತ್ತಿದ್ದ ಮೋತಿಲಾಲರು, ಅಲ್ಲಿನ ಅಪರೂಪದ ಪೀಠೋಪಕರಣಗಳನ್ನು ಖರೀದಿಸಿ ತಂದು `ಸ್ವರಾಜ್ ಭವನ'ಕ್ಕೆ ಹೊಸ ರೂಪ ನೀಡಿದರು. ಮುಂದಿನ ದಿನಗಳಲ್ಲಿ ಈ ಭವನಕ್ಕೆ `ಆನಂದ ಭವನ' ಎಂದು ಹೆಸರಿಟ್ಟರು.

ಭಾರತದ ಸ್ವಾತಂತ್ರ್ಯ ಸಂಗ್ರಾಮದ ದಿನಗಳಲ್ಲಿ ಈ ಭವನಕ್ಕೆ ದೇಶದ ಪ್ರಮುಖ ನೇತಾರರು ಭೇಟಿ ನೀಡಿದ್ದರು. ದೇಶದ ಪ್ರಮುಖ ರಾಜಕೀಯ ವಿದ್ಯಮಾನಗಳಿಗೆ ಈ ಭವನ ಸಾಕ್ಷಿಯಾಗಿದೆ.

ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಮುಖ ನಾಯಕರೂ ಆಗಿದ್ದ ಪಂಡಿತ್ ಮೋತಿಲಾಲ ನೆಹರು ವಕೀಲ ವೃತ್ತಿ ಆರಂಭಿಸಿದ್ದು, ಅವರ ಪುತ್ರ ಪಂಡಿತ್ ಜವಾಹರಲಾಲ ನೆಹರು ಇದೇ ಭವನದಲ್ಲಿ ಆಡಿ ಬೆಳೆದಿದ್ದು, ಶಿಕ್ಷಣ, ವಕೀಲ ವೃತ್ತಿ ಎಲ್ಲವೂ ಇಲ್ಲೇ ನಡೆದಿದೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ ಜವಾಹರಲಾಲ್ ನೆಹರು ಅವರನ್ನು  ಪ್ರಧಾನಿಯನ್ನಾಗಿ ಘೋಷಣೆ ಮಾಡಿದ್ದೂ ಕೂಡ ಇದೇ ಭವನದಲ್ಲೇ. ಅಷ್ಟೇ ಏಕೆ, ಇಂದಿರಾಗಾಂಧಿಯವರು ಜನಿಸಿದ್ದು `ಆನಂದ ಭವನ'ದಲ್ಲೇ !

ಕಾಂಗ್ರೆಸ್ ಕೇಂದ್ರ ಕಚೇರಿ:
ಸ್ವಾತಂತ್ರ್ಯೋತ್ತರದಲ್ಲೂ `ಆನಂದ ಭವನ' ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಕೇಂದ್ರ ಕಚೇರಿಯಾಗಿತ್ತು. ಮೋತಿಲಾಲರು 1930ರಲ್ಲಿ ಈ ಕಟ್ಟಡವನ್ನು ರಾಷ್ಟ್ರೀಯ ಕಾಂಗ್ರೆಸ್ ಸಮಿತಿಗೆ ಉಡುಗೊರೆಯಾಗಿ ನೀಡಿದರು.

ಸ್ವರಾಜ್ ಭವನದ ಪಕ್ಕದಲ್ಲೇ ಜವಾಹರಲಾಲ್ ನೆಹರು ಹೊಸ ಭವನ ನಿರ್ಮಿಸಿದರು. ಅದಕ್ಕೆ `ಆನಂದ ಭವನ' ಎಂದು ಹೆಸರಿಸಿದರು. ಹಾಗಾಗಿ ಹಳೆಯ ಕಟ್ಟಡ `ಸ್ವರಾಜ್ ಭವನ'ವಾಗಿಯೇ ಮುಂದುವರಿದಿದೆ.

1970ರಲ್ಲಿ ಇಂದಿರಾಗಾಂಧಿಯವರು ಅಜ್ಜ ಹಾಗೂ ಅಪ್ಪನ ನೆನಪಿಗಾಗಿ `ಆನಂದ ಭವನ'ವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಕ್ರಮೇಣ `ಆನಂದ ಭವನ'ವನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT