ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನಿ ಡ್ರಮ್‌ ಅಲೆ

Last Updated 24 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಅಂದು ಮೌಂಟ್‌ ಕಾರ್ಮೆಲ್‌ ಕಾಲೇಜಿನ ಆವರಣದಲ್ಲಿ ಒಂದಷ್ಟು ಮಂದಿ ಜಪಾನಿಗರು ಸೇರಿದ್ದರು. ತುಟಿಯಲ್ಲಿ ನಗು ತುಂಬಿಕೊಂಡು ಬಂದವರಿಗೆಲ್ಲಾ ತಲೆಬಾಗಿ ವಂದಿಸುತ್ತಿದ್ದರು. ‘ವೆಲ್‌ ಕಂ ಟು ಜಪಾನ್‌ ಹಬ್ಬ’ ಎಂದು ಬಂದವರನ್ನು ಸ್ವಾಗತಿಸುತ್ತಿದ್ದರು. ಭಾಷೆ ಬಾರದಿದ್ದರೂ ಅವರ ನಡೆ ನುಡಿಯಲ್ಲಿ ಪ್ರೀತಿ ತುಂಬಿತ್ತು. ನಗು, ಶೇಕ್‌ಹ್ಯಾಂಡ್‌ಗಳ ವಿನಿಮಯವಾಗುತ್ತಲೇ ಆರು ಜನರ ತಂಡವೊಂದು ವೇದಿಕೆ ಏರಿತು.

ಅಲ್ಲಿ ಎರಡು ದೊಡ್ಡ ಗಾತ್ರದ, ಮತ್ತೆರಡು ಮಧ್ಯಮ ಗಾತ್ರದ, ಮತ್ತೊಂದು ಚಿಕ್ಕ ಗಾತ್ರದ ಡೋಲಿನಂಥ ಸಂಗೀತೋಪಕರಣ, ಜತೆಗೆ ಚಿಕ್ಕ ಜಾಗಟೆಯಂಥ ಉಪಕರಣ ಇರಿಸಿದ್ದರು. ಮೂವರು ಹುಡುಗಿಯರು, ಮೂವರು ಹುಡುಗರು ಅಲ್ಲಿದ್ದ ಡೋಲನ್ನು ಬಾರಿಸಲು ಶುರುಮಾಡಿದರು. ಆ ವಾದನದ ನಾದಕ್ಕೆ ಅಲ್ಲಿ ಸೇರಿದ್ದ ವಿದ್ಯಾರ್ಥಿಗಳೆಲ್ಲಾ ವೇದಿಕೆ ಸುತ್ತ ಬಂದು ನಿಂತರು. ಕ್ಯಾಮೆರಾ ಕಣ್ಣುಗಳು ಸದ್ದಿಲ್ಲದೇ ತಮ್ಮ ಕೆಲಸ ಶುರುವಿಟ್ಟುಕೊಂಡವು.

ಒಂದೊಂದು ಬಡಿತಕ್ಕೂ ಸೊರಾನ್ ಸೊರಾನ್ ಎಂದು ಜೋರಾಗಿ ಕೂಗುತ್ತಿದ್ದರು. ಲಯವಾಗಿ ಬಾರಿಸುತ್ತಿದ್ದ ಆ ವಾದನದ ಶಬ್ದ ಕೇಳುಗರ/ ನೋಡುಗರ ಎದೆಯಲ್ಲಿ ಕಂಪನವನ್ನೆಬ್ಬಿಸಿತು.

ಅಂದಹಾಗೆ, ಆ ತಂಡದ ಹೆಸರು ‘ದೆಹಲಿ ವಡೈಕೋ’. ಡೋಲಿನಂತಹ ಆ ಸಂಗೀತೋಪಕರಣದ ಹೆಸರು ಟೈಕೋ. ಟೈಕೋ ಜಪಾನಿಗರ ಪುರಾತನ ವಾದನ. ದೊಡ್ಡ ಡ್ರಮ್‌ಗಳನ್ನು ಬಳಸಿ ತಾಳವಾದ್ಯವನ್ನು ಮೂಡಿಸಲಾಗುತ್ತದೆ. ಟೈಕೋ ಎಂದರೆ ವಿಶಾಲ ಡ್ರಮ್‌ ಎಂಬ ಅರ್ಥವಿದೆ.

1900ರ ಅವಧಿಯಲ್ಲಿ ಟೈಕೋ ಡ್ರಮ್ಮಿಂಗ್‌ ಸಂಗೀತದ ಒಂದು ಕಲಾ ಪ್ರಕಾರವಾಗಿತ್ತು. ಏಕಪ್ರಕಾರದಲ್ಲಿ ಕೇಳಲು ಅನುವಾಗುವಂತೆ ಹಲವು ಡ್ರಮ್‌ ಬಾರಿಸುವುದು ಒಂದು ಕಲೆ. ಜಪಾನಿನ ಪಾರಂಪರಿಕ ಸಂಗೀತ ಕಲೆಗಳ ಪೈಕಿ ವಿಶ್ವದಾದ್ಯಂತ ಮೊದಲು ಪರಿಚಯಗೊಂಡ ಕಲಾ ಪ್ರಕಾರವೆಂದು ಟೈಕೋವನ್ನು ಕರೆಯುತ್ತಾರೆ. 

ಟೈಕೋ ವಾದನದ ಬಗ್ಗೆ ಆ ತಂಡದವರು ಒಂದಿಷ್ಟು ಹೊತ್ತು ಮೆಟ್ರೊದೊಂದಿಗೆ ಹರಟಿದರು...

ಟೈಕೋ ಡ್ರಮ್ಸ್‌ ವಾದನದ ಇತಿಹಾಸವೇನು?
ಇದು ಜಪಾನಿನ ಸಾಂಪ್ರದಾಯಿಕ ಸಂಗೀತ ಸಾಧನ. ಹಬ್ಬದ ಸಮಯ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಈ ವಾದನದ ಬಳಕೆ ಮಾಡುತ್ತಾರೆ. ಊರಿನಲ್ಲಿ ಏನಾದರೂ ಕಾರ್ಯಕ್ರಮವಿದ್ದಾಗ ಡಂಗುರದಂತೆ ಈ ಉಪಕರಣವನ್ನು ಬಾರಿಸುತ್ತಿದ್ದರು. ಇದರಿಂದ ಜನರಿಗೆ ಏನೋ ಕಾರ್ಯಕ್ರಮ ಇದೆ ಎಂಬುದು ತಿಳಿಯುತ್ತಿತ್ತು.

ನೀವು ತಂಡ ಕಟ್ಟಿಕೊಂಡಿದ್ದು ಹೇಗೆ, ಯಾವಾಗ?
2006ಕ್ಕೆ ನಾವು ತಂಡ ಕಟ್ಟಿದೆವು. ನಮ್ಮ ಸಂಪ್ರದಾಯದ ಬಗ್ಗೆ ನಮ್ಮ ಜನರಿಗೆ ಸರಿಯಾಗಿ ತಿಳಿದಿಲ್ಲ. ನಮ್ಮ ಆಚಾರ ವಿಚಾರವನ್ನು ಜನರಿಗೆ ತಿಳಿಸಬೇಕು ಎಂಬ ಉದ್ದೇಶದಿಂದ ತಂಡ ಕಟ್ಟಿಕೊಂಡಿದ್ದೇವೆ. ನಾವೆಲ್ಲರೂ ಬೇರೆ ಬೇರೆ ವೃತ್ತಿಯವರು. ಸಮಯ ಸಿಕ್ಕಾಗಲೆಲ್ಲಾ ಒಟ್ಟಿಗೆ ಸೇರಿ ಅಭ್ಯಾಸ ಮಾಡುತ್ತೇವೆ. ಮದುವೆಯಾದವರು, ಎರಡು ಮಕ್ಕಳು ಇರುವವರೂ ನಮ್ಮ ತಂಡದಲ್ಲಿದ್ದಾರೆ. ಮೂರು ವರ್ಷಕ್ಕೊಮ್ಮೆ ತಂಡದ ಸದಸ್ಯರು ಬದಲಾಗುತ್ತಾರೆ. ಹೆಸರಿಗಿಂತ ಹೆಚ್ಚಾಗಿ ನಮ್ಮ ಸಂಪ್ರದಾಯವನ್ನು ಎಲ್ಲರಿಗೂ ಮನದಟ್ಟು ಮಾಡುವುದು ನಮಗೆ ಮುಖ್ಯ.

ನಿಮ್ಮ ಇಷ್ಟು ವರ್ಷದ ಟೈಕೋ ಪಯಣದಲ್ಲಿ ಮರೆಯಲಾಗದ ಶೋ ಯಾವುದು?
ಪ್ರತಿಯೊಂದು ಶೋ ನೀಡಿದ ನಂತರ ನಮಗೆ ಏನೋ ಒಂದು ರೀತಿ ಖುಷಿ. ಟೈಕೋ ಬಾರಿಸುವುದು ಅಷ್ಟು ಸುಲಭವಲ್ಲ. ದೈಹಿಕವಾಗಿ ಸಾಕಷ್ಟು ಸದೃಢರಾಗಿರಬೇಕಾಗುತ್ತದೆ. ಜತೆಗೆ ಈ ವಾದನ ಹೆಚ್ಚು ಏಕಾಗ್ರತೆ ಬಯಸುತ್ತದೆ. ದೇಹಕ್ಕೆ ಒಳ್ಳೆಯ ವ್ಯಾಯಾಮವಿದು. ಸಾಕಷ್ಟು ಕಡೆ ಕಾರ್ಯಕ್ರಮ ನೀಡಿದ್ದೇವೆ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಶೋ ನೀಡುತ್ತಿರುವುದು. ಜನರಿಂದ ಒಳ್ಳೆಯ ಪ್ರತಿಕ್ರಿಯೆ ಬರುವ ವಿಶ್ವಾಸವಿದೆ.

ಈ ವಾದನಕ್ಕೆ ಎಷ್ಟು ಪ್ರಾಮುಖ್ಯವಿದೆ?
ಈ ವಾದನದಿಂದ ಹೊಮ್ಮುವ ನಾದ ಮನಸ್ಸಿಗೆ ಹಿತವೆನಿಸುತ್ತದೆ. ಇದನ್ನು ಬಾರಿಸುವಾಗ ನಾವೇ ಸಾಂಪ್ರದಾಯಿಕ ಶೈಲಿಯ ಹಾಡನ್ನು ಹಾಡುತ್ತೇವೆ. ಹಿಂದಿನ ಸಂಪ್ರದಾಯವನ್ನು ಅದರ ರೀತಿಯಲ್ಲಿಯೇ ಉಳಿಸಿಕೊಂಡು ಹೋದರೆ ನಮ್ಮ ಮುಂದಿನ ಪೀಳಿಗೆಯವರಿಗೆ ತಲುಪಿಸಲು ಸಾಧ್ಯ.

ಈ ವಾದನವನ್ನು ಕಲಿಯಬಯಸುವ ಆಸಕ್ತರಿಗೆ ನಿಮ್ಮ ಕಿವಿ ಮಾತೇನು?
ಜಪಾನಿನಲ್ಲಿ ಈ ಕಲೆ ಕಲಿಕೆಗೆ ಸಾಕಷ್ಟು ಅವಕಾಶವಿದೆ. ದೆಹಲಿಯಲ್ಲೂ ಒಂದು ಶಾಲೆಯಿದೆ. ಅಲ್ಲಿ ಜಪಾನಿ ಭಾಷೆ ಮತ್ತು ಸಾಂಪ್ರದಾಯಿಕ
ಟೈಕೋ ವಾದನವನ್ನು ಕಲಿಯಬಹುದು.

ಬೆಂಗಳೂರಿನ ಬಗ್ಗೆ ನಿಮ್ಮ ಅನಿಸಿಕೆ?
ಇದು ಕನಸಿನ ನಗರಿ. ಸಂಗೀತಕ್ಕೆ ಸಾಕಷ್ಟು ಅವಕಾಶ ಇಲ್ಲಿದೆ ಎಂದು ಕೇಳಿದ್ದೇವೆ. ಇಲ್ಲಿಗೆ ಬಂದಾಗ ಅದು ಗೊತ್ತಾಯಿತು. ಟ್ರಾಫಿಕ್‌ ಜಂಜಡವಿದ್ದರೂ ನೋಡುವುದಕ್ಕೆ ಸುಂದರವಾಗಿದೆ ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT