ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಲೋಕ: ಕಣ್ಮನ ಸೆಳೆದ ಲೋಕೋತ್ಸವ

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ರಾಮನಗರ : ಜಾನಪದ ಕಲೆಯ ಪ್ರಕಾರಗಳಾದ ಮೆರೆಸಾಟ, ಬೀಸು ಕಂಸಾಳೆ, ಗೀಗೀಪದ, ಸವಾಲ್-ಜವಾಬ್, ಪಾಣಾರ ಆಟ, ಚಿಟ್ಟಿಮೇಳ, ಅಸಾದಿ ಹಲಗೆ ಕುಣಿತ... ಹೀಗೆ ಒಂದಲ್ಲ, ಎರಡಲ್ಲ, ಹತ್ತಾರು ಬಗೆಯ ಜಾನಪದ ನೃತ್ಯಗಳ ಪ್ರದರ್ಶನ ಇಲ್ಲಿ ನಡೆದಿತ್ತು.

ಕಲಾವಿದರು ಸಾಂಪ್ರದಾಯಿಕ ಹಾಗೂ ಆಕರ್ಷಕ ವೇಷ ಭೂಷಣಗಳನ್ನು ತೊಟ್ಟು ಹೆಜ್ಜೆ ಹಾಕುತ್ತಿದ್ದರೆ ಪ್ರೇಕ್ಷಕರು ಹುಚ್ಚೆದ್ದು ಕುಣಿದು ಕುಪ್ಪಳಿಸಿ, ಜಾನಪದ ಕಲೆಯನ್ನು ಆಸ್ವಾದಿಸಿದರು.

- ರಾಮನಗರದಲ್ಲಿರುವ ಜಾನಪದ ಲೋಕದಲ್ಲಿ ಕಂಡು ಬಂದ ದೃಶ್ಯಗಳಿವು. ಜಾನಪದ ಲೋಕದ ನಿರ್ಮಾತೃ ಎಚ್.ಎಲ್.ನಾಗೇಗೌಡ ಅವರ ಹುಟ್ಟು ಹಬ್ಬದ ಪ್ರಯುಕ್ತ ಲೋಕದಲ್ಲಿ ಕಳೆದ ಶನಿವಾರ ಮತ್ತು ಭಾನುವಾರ ಏರ್ಪಡಿಸಿದ್ದ `ಲೋಕೋತ್ಸವ~ ಕಾರ್ಯಕ್ರಮದಲ್ಲಿ ಎರಡು ದಿನ ಜಾನಪದ ಹಬ್ಬ ನಡೆದಿತ್ತು.

ಜಾನಪದ ಕಲೆಯನ್ನು ಉಳಿಸಿ, ಬೆಳೆಸಿ, ಸಂರಕ್ಷಿಸುವ ಉದ್ದೇಶದಿಂದ ಪ್ರತಿ ವರ್ಷ ಜಾನಪದ ಲೋಕವು `ಲೋಕೋತ್ಸವ~ದ ಹೆಸರಿನಲ್ಲಿ ಸತತ 18 ವರ್ಷಗಳಿಂದ ಈ ಎರಡು ದಿನ ಜಾನಪದ ಹಬ್ಬವನ್ನು ಏರ್ಪಡಿಸಿಕೊಂಡು ಬಂದಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿನ ಜಾನಪದ ಸಂಸ್ಕೃತಿಯನ್ನು ಪೋಷಿಸುವುದೇ ಇದರ ಉದ್ದೇಶ.

ಈ ಬಾರಿಯ ಉತ್ಸವದಲ್ಲಿ ನಾಗಪುರ, ತಂಜಾವೂರಿನ ಕಲಾತಂಡಗಳು ಸೇರಿದಂತೆ ಒಟ್ಟು 25 ಜಿಲ್ಲಾ ತಂಡಗಳು ಹಾಗೂ 10ಕ್ಕೂ ಹೆಚ್ಚು ಸ್ಥಳೀಯ ತಂಡಗಳ ಕಲಾವಿದರು ತಮ್ಮ ಕಲೆ ಪ್ರದರ್ಶಿಸಿದರು.

ರಾಮನಗರ ತಾಲ್ಲೂಕಿನ ಶ್ಯಾನುಭೋಗನಹಳ್ಳಿ, ಢಣಾಯಕಪುರದ ಕಲಾವಿದರು `ದೇವರುಗಳ ಮೆರೆಸಾಟ~, ಮೈಸೂರಿನ ಕುಮಾರಸ್ವಾಮಿ ಮತ್ತು ಸಂಗಡಿಗರು `ಬೀಸು ಕಂಸಾಳೆ~, ಗದಗ ಜಿಲ್ಲೆಯ `ಹರಿದೇಶಿ~ ಬಸವರಾಜಪ್ಪ ನೀಲಪ್ಪ ಹಡಗಲಿ ಅವರು `ಗೀಗೀಪದ~, ಬೆಳಗಾವಿಯ ನಾಗೇಶಿ- ಮಹಾದೇವಿ ಕಲಾವಿದರು `ಸವಾಲ್-ಜವಾಬ್~, ಉಡುಪಿ ಜಿಲ್ಲೆಯ ನಾಗರಾಜ ಪಾಣಾರ ಅವರು `ಪಾಣಾರ ಆಟ~ವನ್ನು ಪ್ರದರ್ಶಿಸಿ ಜನರ ಮೆಚ್ಚುಗೆಗೆ ಪಾತ್ರರಾದರು.

ಹಾಸನದ ವೆಂಕಟರಾಮಯ್ಯ ಮತ್ತು ಸಂಗಡಿಗರು `ಚಿಟ್ಟಿ ಮೇಳ~, ಚಿತ್ರದುರ್ಗದ ಅಸಾದಿ ಕರಿಯಪ್ಪನವರು `ಅಸಾದಿ ಹಲಗೆ ಕುಣಿತ~, ಬೆಂಗಳೂರಿನ ಪ್ರೋಹ ಕಲಾ ತಂಡದವರು `ಭಾರತೀಯ ಜನಪದ ನೃತ್ಯಗಳು~,   ಪಾಪಣ್ಣ ಮತ್ತು ಸಂಗಡಿಗರು `ಪಾಳೇಗಾರರ ವೇಷ~, ಬಳ್ಳಾರಿಯ ಎಸ್.ಎಂ.ರುದ್ರಾಣಿ ಮತ್ತು ಧಾರವಾಡದ ಬಸವಲಿಂಗಯ್ಯ ಹಿರೇಮಠ ಅವರು `ಹಾಡು ಮೇಳ~ವನ್ನು, ಬಾಗಲಕೋಟೆಯ ಪೊಲೀಸ್ ಪಾಟೀಲ `ಲಾವಣಿ~, ಬೆಳಗಾವಿಯ ಸೋಮಪ್ಪ ಮಡಿವಾಳ `ತತ್ಪಪದ~ಗಳನ್ನು ಹಾಡಿದರು. ಕಾಸರಗೋಡಿನ ಗೋಪಾಲಕೃಷ್ಣ ಯಕ್ಷಗಾನ ಮಂಡಳಿಯವರು `ನರಕಾಸುರನ ವಧೆ~ ಸೂತ್ರದ ಗೊಂಬೆಯಾಟ ಪ್ರದರ್ಶಿಸಿದರು.

ಉಡುಪಿ ಜಿಲ್ಲೆಯ ಕಲಾವಿದರು `ಕಂಗೀಲು ಕುಣಿತ~, ಚಿತ್ರದುರ್ಗದ ಕಲಾವಿದರು `ಮರಗಾಲು ಕುಣಿತ~, ಬಳ್ಳಾರಿ ಕಲಾವಿದರು ಅಲಾಯಿ `ಹೆಜ್ಜೆಮೇಳ~, ಕೋಲಾರ ಕಲಾವಿದರು `ವೇಣು ಕುಣಿತ~, ರಾಮನಗರದ ಕಲಾವಿದರು `ಉರುಮೆ ಮೇಳ~, ಚಿಕ್ಕಬಳ್ಳಾಪುರದ ಕಲಾವಿದರು `ಕಾರಂಜಿ ಮುಖವೀಣೆ~, ಬೆಂಗಳೂರು ಮತ್ತು ಉಡುಪಿ ಕಲಾವಿದರಿಂದ `ಹಾಡು ಮೇಳ~, ಬಿಳಿಗಿರಿರಂಗನಬೆಟ್ಟದ ಕಲಾವಿದರಿಂದ ಸೋಲಿಗರ ಹಾಡು ಗಾಯನ ನಡೆಯಿತು.

ಜಾನಪದ ಲೋಕದ ಕ್ಯುರೇಟರ್ ಡಾ. ಕುರುವ ಬಸವರಾಜ್ ರಚಿಸಿರುವ, ಬೈರ್ನಳ್ಳಿ ಶಿವರಾಮ ಅವರು ನಿರ್ದೇಶಿಸಿದ `ತಾಯಿ ಮಕ್ಕಳ ದನಿಯೂ ತಾಳ ಬಾರಿಸಿದಾಂಗ~ ನಾಟಕವನ್ನು ಲೋಕದ ಜಾನಪದ  ವಿದ್ಯಾಲಯದ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಇವುಗಳ ಜತೆಗೆ ರಾಮನಗರ ಮತ್ತು ಚನ್ನಪಟ್ಟಣ ತಾಲ್ಲೂಕುಗಳ ಕಲಾವಿದರಿಂದ ಪಟದ ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ನಂದಿಧ್ವಜ, ಕೋಲಾಟ, ಹಾಡು ಮೇಳಗಳು, ಜನಪದ ಕಲೆಗಳ ಪ್ರದರ್ಶನಗಳು ನಡೆದು ಜನತೆಯನ್ನು ರಂಜಿಸಿದವು.

ಲೋಕೋತ್ಸವದಲ್ಲಿ ಜಾನಪದ ಕಲೆಗಳ ಪ್ರದರ್ಶನದ ಜತೆಗೆ, ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ, ಸಂರಕ್ಷಿಸಿಕೊಂಡು ಹೋಗುವ ಬಗ್ಗೆ `ಜಾನಪದ ಮುನ್ನೋಟ~ ಎಂಬ ವಿಷಯದಡಿ ಸಂವಾದ ಕೂಡ ನಡೆಯಿತು. ಜತೆಗೆ ಜಾನಪದ ಆಟೋಟಗಳು, ಕರಕುಶಲ ವಸ್ತುಗಳ ಮತ್ತು ಆಹಾರ ಮೇಳ, ಕಲಾವಿದರ ಕಲಾಕೃತಿಗಳ ಅನಾವರಣ, ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆದವು. ಕರ್ನಾಟಕ ಜಾನಪದ ಪರಿಷತ್ತು ಪ್ರಸಕ್ತ ವರ್ಷದಿಂದ ಆರಂಭಿಸಿರುವ `ಲೋಕಶ್ರೀ~ ಪ್ರಶಸ್ತಿಯನ್ನು ಈ ವರ್ಷ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಅವರಿಗೆ ನೀಡಿ ಗೌರವಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT