ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದರ್ಶಿಕೆಯಲ್ಲಿ ಸಚಿನ್‌

Last Updated 5 ಜನವರಿ 2014, 19:30 IST
ಅಕ್ಷರ ಗಾತ್ರ

ಹೊಸ ವರುಷ ಬಂತೆದರೆ ಸಾಕು ಮನೆಗೆ ಚೆಂದದ ಕ್ಯಾಲೆಂಡರ್ ತರಬೇಕೆನಿಸುತ್ತದೆ. ವರ್ಷದ ಕೊನೆ ತಿಂಗಳು ಮಾರುಕಟ್ಟೆಯಲ್ಲಿ ವಿವಿಧ ನಮೂನೆಯ ಕ್ಯಾಲೆಂಡರ್‌ಗಳ ಮಾರಾಟ ಭರಾಟೆ. ಆದರೆ ಪ್ರತಿ ವರ್ಷ ಒಂದಿಲ್ಲೊಂದು ಥೀಮ್‌ ಇಟ್ಟುಕೊಂಡು ಕ್ಯಾಲೆಂಡರ್‌ ರೂಪಿಸುವ ಕಲಾವಿದರೊಬ್ಬರು ಸಚಿನ್‌ ಅವರನ್ನು ಕೇಂದ್ರವಾಗಿಟ್ಟುಕೊಂಡು ವಿಶೇಷ ಕ್ಯಾಲೆಂಡರನ್ನು ಸಿದ್ಧಪಡಿಸಿದ್ದಾರೆ.

ಕ್ವೀನ್ಸ್‌ರಸ್ತೆಯಲ್ಲಿರುವ ಕೇಂದ್ರೀಯ ಅಬಕಾರಿ ಇಲಾಖೆ ಸೂಪರಿಡೆಂಟ್‌ ಡಿ. ಕುಮರೇಶ್‌ ಅವರೇ ಈ ಕ್ಯಾಲೆಂಡರ್‌ ಸಿದ್ಧಪಡಿಸಿದವರು. ಇವರು ಪ್ರತಿ ಹೊಸ ವರ್ಷಕ್ಕಾಗಿ ವಿವಿಧ ಆಕರ್ಷಣೀಯ ಕ್ಯಾಲೆಂಡರ್, ಗ್ರೀಟಿಂಗ್‌ ಕಾರ್ಡ್ಸ್ ರೂಪಿಸುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಅದಕ್ಕಾಗಿ ವಾರಾಂತ್ಯದ ಸಮಯವನ್ನು ಮೀಸಲಿಡುತ್ತಾರೆ. 1973ರಿಂದಲೂ ಪ್ರತಿವರ್ಷ ವಿಭಿನ್ನ ಬಗೆಯ ಕ್ಯಾಲೆಂಡರ್‌ ರಚಿಸುತ್ತಾ ಬಂದಿರುವ ಇವರು ಹಣಗಳಿಕೆ ಉದ್ದೇಶಕ್ಕಾಗಿ ರಚಿಸದವರಲ್ಲ.
2013ರಲ್ಲಿ ಹೆಚ್ಚು ಸುದ್ದಿ ಮಾಡಿದ ಸಚಿನ್‌ ನಿವೃತ್ತಿ, ಭಾರತರತ್ನ ಪ್ರಶಸ್ತಿ ಪುರಸ್ಕಾರ ವಿಷಯವನ್ನೇ ಈ ಬಾರಿ 2014ರ ಕ್ಯಾಲೆಂಡರ್‌ನ ವಸ್ತುವಿಷಯವನ್ನಾಗಿಸಿದ್ದಾರೆ.

ಕ್ರಿಕೆಟ್‌ ದಂತ ಕಥೆ ಸಚಿನ್ ರಮೇಶ್‌ ತೆಂಡೂಲ್ಕರ್‌ ಅವರ ಕ್ರಿಕೆಟ್ ವೃತ್ತಿ ಜೀವನದ ಸಾಧನೆಯ ಅಂಕಿಅಂಶಗಳನ್ನು ಒಳಗೊಂಡ ದಿನದರ್ಶಿಕೆ ನಾಲ್ಕು ಪುಟಗಳನ್ನು ಒಳಗೊಂಡಿದೆ. ಈ ಚಿಕ್ಕ ದಿನದರ್ಶಿಕೆಯಲ್ಲಿ ಸಚಿನ್ ಹುಟ್ಟಿದ ವರ್ಷದಿಂದ 2014ರ ವರೆಗಿನ ವರ್ಷಗಳ ಮಾಹಿತಿ ಇದೆ.
ಇಯರ್ ಪಿಚ್, ಮಂತ್ ಪಿಚ್, ಡೇ ಅಂಡ್‌ ಡೇಟ್‌ ಪಿಚ್‌ ಎಂಬುದಾಗಿ ಬರೆದಿರುವ ಒಂದು ಬದಿಯಲ್ಲಿ ದಿನಗಳನ್ನು ನೋಡಬಹುದು. ಬ್ಯಾಟ್‌, ಬಾಲ್‌, ವಿಕೆಟ್‌ಗಳ ಚಿತ್ರಗಳನ್ನು ಬಳಸಿಕೊಂಡು ಮಾಡಿದ್ದಾರೆ. ಸಚಿನ್ ಅವರ ಹೆಸರಿನ ಮೂರು ಮೂರು ಅಕ್ಷರಗಳನ್ನು ಒಳಗೊಂಡ ಒಂದೊಂದು ಬಾಲ್‌ನ (ಇಯರ್‌ ಪಿಚ್‌) ಮೂಲಕ ವರ್ಷವನ್ನು ಗುರುತಿಸಬಹುದು.

‘ವರ್ಷ, ತಿಂಗಳು ಹಾಗೂ ದಿನಾಂಕ ಕಂಡುಹಿಡಿಯಲು ಅನುಕೂಲವಾಗಲೆಂದು ಕ್ಯಾಲೆಂಡರ್‌ನ ಒಂದು ಭಾಗದಲ್ಲಿ ಉದಾಹರಣೆಯನ್ನು ಕೊಟ್ಟಿದ್ದೇನೆ. ಮೊದಲ ಬಾರಿ ಚೆಕ್‌ ಲೀಫ್‌ನಲ್ಲಿ ಹೊಸ ವರ್ಷದ ಶುಭಾಶಯಗಳು ಎಂದು ಬರೆದ ಕ್ಯಾಲೆಂಡರ್‌ ಸಿದ್ಧಪಡಿಸಿದ್ದೆ, ನಂತರ ನೂರು ವರ್ಷಗಳ ಕ್ಯಾಲೆಂಡರ್‌, ಕೌನ್ ಬನೇಗಾ ಕರೋಡ್‌ಪತಿ, ಮೆಟ್ರೊ ರೈಲು ಥೀಮ್ ಒಳಗೊಂಡ ಕ್ಯಾಲೆಂಡರ್‌ಗಳು ಇಲ್ಲಿಯವರೆಗೆ ರೂಪುಗೊಂಡಿದ್ದವು. ಈ ಬಾರಿ ಸಚಿನ್‌ಗೆ ಮೀಸಲಿಟ್ಟಿದ್ದೇನೆ. ಒಂದು ವಾರದ ಸಮಯದಲ್ಲಿ ಈ ಸುಂದರ ದಿನದರ್ಶಿಕೆ ಸಿದ್ಧವಾಯಿತು’ ಎನ್ನುತ್ತಾರೆ ಡಿ.ಕುಮರೇಶ್‌.
ಮಾಹಿತಿಗೆ: 9448688344 z

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT