ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿ ಎಂದರೆ ಇದೇನಾ?

Last Updated 8 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಪ್ರೀತಿ- ಪ್ರೇಮಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ಅದು ಯಾರ ಮೇಲೆ ಯಾವಾಗಲಾದರೂ ಹೇಗಾದರೂ ಹುಟ್ಟಿಬಿಡಬಹುದು. ಹಾಗೆ ಹುಟ್ಟಿದ ಪ್ರೀತಿಗೆ `ಎಕ್ಸ್‌ಪೈರಿ  ಡೇಟ್' ಸಹ ಇಲ್ಲ. ಅದು ಕೇವಲ ಆಕರ್ಷಣೆಯಾಗದೆ ನಿಜವಾದ ಪ್ರೀತಿ ಆಗಿದ್ದರೆ ಮಾತ್ರ ಕೊನೆವರೆಗೂ ಉಳಿಯುತ್ತದೆ, ಇಲ್ಲದಿದ್ದರೆ ಹುಟ್ಟಿದಷ್ಟೇ ಶರವೇಗದಲ್ಲಿ ಗುಡ್‌ಬೈ ಹೇಳುತ್ತದೆ.

ಕಾಲೇಜು ಮೆಟ್ಟಿಲೇರುತ್ತಿದ್ದಂತೆಯೇ ಇಂದಿನ ಯುವಜನಾಂಗ ಪ್ರೀತಿ ಪ್ರೇಮದ ಬಲೆಗೆ ಬೀಳುವುದು ಜಗಜ್ಜಾಹೀರು. ಹದಿಹರೆಯ ಎಂಬ ಹಂತವಿದೆಯಲ್ಲಾ, ಅದು ಹಾಗೆಯೇ. ಎಲ್ಲವೂ ಚಂದ ಎಲ್ಲವೂ ಸುಂದರ, ಸುಮಧುರ. ಇಡೀ ಪ್ರಪಂಚವೇ ಭವ್ಯವಾದ ಸಂಗತಿಗಳಿಂದ ಸುತ್ತುವರಿದಿದೆಯೇನೋ ಎಂಬಂತೆ ಭಾಸವಾಗುವ ಕಾಲ.

ಅಂತಹದ್ದೊಂದು ಕಾಲದಲ್ಲಿ ಪ್ರೀತಿ ಹುಟ್ಟುವುದು ಅಚ್ಚರಿಯ ಸಂಗತಿಯೇನಲ್ಲ. ಆದರೆ, ಜೀವನದ ಕೊನೇ ಕ್ಷಣಗಳನ್ನು ಎಣಿಸುತ್ತಾ ದಿನ ದೂಡುತ್ತಿರುವ ವೃದ್ಧ ಜೀವಗಳಲ್ಲೂ ಪ್ರೀತಿ ಹುಟ್ಟುವುದಿದೆಯಲ್ಲ ಅದು ನಿಜಕ್ಕೂ ಅದ್ಭುತ.

ಕೆಲವರು ಪ್ರೀತಿಸಿದವರನ್ನು ಪಡೆಯಲು ಹತ್ತಾರು ವರ್ಷ ಕಾಯುವುದನ್ನು ನಾವು ಕೇಳಿದ್ದೇವೆ, ಕಂಡಿದ್ದೇವೆ. ಆದರೆ ಶತಾಯುಷಿಗಳಾಗುತ್ತಿದ್ದರೂ ಬಿಡದೆ ಅಂತಹದ್ದೊಂದು ಪ್ರೀತಿಯ ಫಲವನ್ನು ಪಡೆದುಕೊಂಡವರು ನಮ್ಮಂದಿಗಿದ್ದಾರೆ ಎಂದರೆ ನಿಮಗೆ ಅಚ್ಚರಿ ಆಗಬಹುದು. ಇತ್ತೀಚಿನ ವರ್ಷಗಳಲ್ಲಿ ದಾಂಪತ್ಯಕ್ಕೆ ಅಡಿ ಇಟ್ಟ ಈ ಹಿರಿಯ ಜೀವಗಳ ಪ್ರೇಮ ಗಾಥೆ ಕೇಳಿ ಮನಸ್ಸು ಅರಳಬಹುದು.

ಇದೋ ಬನ್ನಿ, ಎಲ್ಲರಲ್ಲೂ ಪ್ರೀತಿಯ ಸೆಲೆ ಉಕ್ಕಿಸುವ ಅಂತಹ ಜೋಡಿಗಳ ಯಶೋಗಾಥೆಯನ್ನು ಕೇಳಿ:

ವಿದೇಶಗಳಲ್ಲಿ ಮಾತ್ರ ಕೇಳಿಬರುತ್ತಿದ್ದ `ಲೇಟ್ ಮ್ಯಾರೇಜ್' ಪರಿಕಲ್ಪನೆ ಭಾರತಕ್ಕೂ ಕಾಲಿಟ್ಟಿರುವುದು ಹೊಸ ವಿಷಯವೇನಲ್ಲ. ಆದರೆ ಹರ‌್ಯಾಣಾದ ಖರ‌್ಕೋಡಾ ಎಂಬ ಗ್ರಾಮದ ರೈತನೊಬ್ಬ ಮದುವೆಯಾಗಿದ್ದು ಎಷ್ಟನೇ ವಯಸ್ಸಿಗೆ ಗೊತ್ತೇ? ಬರೋಬ್ಬರಿ 84ಕ್ಕೆ. ಮದುವೆಯಾದ 12 ವರ್ಷಗಳ ಬಳಿಕ ಇತ್ತೀಚೆಗಷ್ಟೇ 96ನೇ ವಯಸ್ಸಿನಲ್ಲಿ ಅವನು ಎರಡನೇ ಮಗುವಿನ ತಂದೆಯಾಗಿರುವುದು ಈಗಿನ ಹೊಸ ಸುದ್ದಿ.

`ಅರೆ ಇದೇನಪ್ಪಾ ಈ ಅಜ್ಜಂಗೆ ಯಾಕೆ ಬೇಕಿತ್ತು ಮಾರಾಯಾ ಈ ವಯಸ್ನಲ್ಲಿ ಮದುವೆ, ಮಕ್ಳು ಎಲ್ಲ' ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡವರೇ ಹೆಚ್ಚು ಮಂದಿ. ಆದರೆ ರಾಮ್‌ಜಿತ್ ರಾಘವ್ ಮಾತ್ರ ತಮ್ಮ ಮದುವೆಯ ಬಗ್ಗೆ ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಾರೆ.

84ನೇ ವಯಸ್ಸಿನವರೆಗೂ ಅವರು ಕಟ್ಟುನಿಟ್ಟಾಗಿ ಬ್ರಹ್ಮಚರ್ಯವನ್ನು ಪಾಲಿಸುತ್ತಾ ಬಂದಿದ್ದರಂತೆ. ಆದರೆ ಹತ್ತು ವರ್ಷಗಳ ಹಿಂದೆ 42 ವರ್ಷದ ಶಕುಂತಲಾ ದೇವಿ ಅವರನ್ನು ಕಂಡಾಗ ಮಾತ್ರ  ಅವರಿಗೆ `ಲವ್ ಅಟ್ ಫಸ್ಟ್ ಸೈಟ್' ಆಗಿಹೋಯ್ತಂತೆ! ಆ ನಂತರ ಈ ಜೋಡಿ ಒಟ್ಟಿಗೇ ಇರಲು ನಿರ್ಧರಿಸಿತಂತೆ. ಅದೂ ಹರ‌್ಯಾಣಾದಂತಹ ಕಟ್ಟಾ ಸಂಪ್ರದಾಯವಾದಿ ರಾಜ್ಯದಲ್ಲಿ.

`ನಮ್ಮ ಸಂಸಾರವನ್ನು ವಿಸ್ತರಿಸುವ ಸಲುವಾಗಿ ದೇವರು ಕೃಪೆ ತೋರಿ ಇಬ್ಬರು ಮಕ್ಕಳನ್ನು ಕೊಟ್ಟಿದ್ದಾನೆ' ಎಂದು ಮೊಮ್ಮಗುವಿನ ಮಗುವನ್ನು ಎತ್ತಿಕೊಂಡಂತೆ ಕಾಣುವ ರಾಮ್‌ಜಿತ್, ಒಂದು ಕೈಯಲ್ಲಿ ತಮ್ಮ ಮಗುವನ್ನು ತಬ್ಬಿ ಹಿಡಿದು, ಮತ್ತೊಂದು ಕೈಯಲ್ಲಿ ಬಾಚದ ದಾಡಿ ಕೆರೆದುಕೊಳ್ಳುತ್ತಾ ಹೆಮ್ಮೆಯಿಂದ ಹೇಳುತ್ತಾರೆ.

ರಾತ್ರಿ 8 ಗಂಟೆಗೆ ಮೊದಲೇ ನಿದ್ರೆಗೆ ಜಾರಿ, ಬೆಳಿಗ್ಗೆ 5 ಗಂಟೆಗೆ ಏಳುವುದು, ಹಗಲು ಗದ್ದೆಯಲ್ಲಿ ದುಡಿಮೆ, ಮಧ್ಯಾಹ್ನ ಒಂದೆರಡು ಗಂಟೆ ಗಡದ್ದು ನಿದ್ದೆ ತೆಗೆಯುವುದು ರಾಮ್‌ಜಿತ್ ದಿನಚರಿ. ದಿನಕ್ಕೆ ಎರಡು ಲೀಟರ್ ಹಾಲು, ತಾಜಾ ಹಸಿರು ತರಕಾರಿ ಮತ್ತು ಚಪಾತಿ ಅವರಿಗೆ ಬೇಕು. ಯೌವನದ ದಿನಗಳಲ್ಲಿ ಕುಸ್ತಿಪಟುವಾಗಿದ್ದ ಅವರು, ಆಗ ದಿನಕ್ಕೆ 500 ಗ್ರಾಂಗಳಷ್ಟು ಗೋಡಂಬಿಯನ್ನು ಬಾಯಾಡಿಸುತ್ತಿದ್ದರಂತೆ.

ಜೊತೆಗೆ ಅಷ್ಟೇ ಗಾತ್ರದ ತುಪ್ಪ ಹಾಗೂ ಮೂರು ಲೀಟರ್ ಹಾಲನ್ನು ಚಪಾತಿ, ತರಕಾರಿಗಳೊಂದಿಗೆ ತಿನ್ನುತ್ತಿದ್ದರಂತೆ. ಮದ್ಯ, ಮಾದಕದ್ರವ್ಯದಿಂದ ದೂರ ಇರುವ ರಾಮ್‌ಜಿತ್ ಸಂಪೂರ್ಣ ಸಸ್ಯಾಹಾರಿ. ಇಂತಹ  ಕಾರಣಗಳೇ ಇರಬಹುದು 96ನೇ ಇಳಿ ವಯಸ್ಸಿನಲ್ಲೂ ಅವರು ಎರಡನೇ ಮಗುವಿನ ಸ್ವೀಟ್ ಫಾದರ್ ಆಗಲು!

ನಮ್ಮ ದೇಶಕ್ಕೇನೋ ಇಂತಹ ಮದುವೆಗಳು ಹೊಸತು. ಆದರೆ ವಿದೇಶಗಳಲ್ಲಿ ಈ ಬಗೆಯ ಮದುವೆಗಳಿಗೆ ಲೆಕ್ಕವೇ ಇಲ್ಲ ಬಿಡಿ. ಆದರೂ ದಾಖಲೆ ಬರೆದಿರುವ ಕೆಲವು ಜೋಡಿಗಳ ಉದಾಹರಣೆ ಇಲ್ಲಿದೆ.

ಡೇಟಿಂಗ್ ಮಾಡಿದ್ದೇ ಹೆಚ್ಚು
1994ರಲ್ಲಿ ವಿಧವೆ ಮತ್ತು ವಿಧುರನೊಬ್ಬ ಮೊದಲ ಬಾರಿ ಕ್ಯಾಲಿಫೋರ್ನಿಯಾದಲ್ಲಿ ಭೇಟಿಯಾಗುತ್ತಾರೆ. ಆತ ಆಗಷ್ಟೇ ಪರಿಚಯವಾದ ಆಕೆಯ ಉಡುಗೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾನೆ. ಹೀಗೆ ಶುರುವಾದ ಪರಿಚಯ ಪ್ರಣಯಕ್ಕೆ ತಿರುಗಿ, 18 ವರ್ಷಗಳ ಕಾಲ ಇಬ್ಬರ ನಡುವಿನ ಡೇಟಿಂಗ್‌ಗೆ ಸಾಕ್ಷಿಯಾಗುತ್ತದೆ. ಇದು ಇತ್ತೀಚೆಗೆ ಮದುವೆಯ ಬಂಧನಕ್ಕೆ ಒಳಗಾದ 95 ವರ್ಷದ ಲಿಲ್ಲಿಯನ್ ಹಾರ್ಟ್ಲಿ ಹಾಗೂ 98ರ ಹರೆಯದ ಅಲ್ಲನ್ ಮಾರ್ಕ್ಸ್ ಅವರ ಜೀವನ ಗಾಥೆ.

ಬಾಸ್ಟನ್ ನಗರದ ನಿವೃತ್ತ ಕಾನೂನು ತಜ್ಞೆಯಾದ ಹಾರ್ಟ್ಲಿ, `ನಾನು ಧರ್ಮದಲ್ಲಿ ಆಳವಾದ ಶ್ರದ್ಧೆ ಉಳ್ಳವಳೇನಲ್ಲ, ನನಗೆ ಯಾವ ಸಂಬಂಧವೂ ಬೇಕಿರಲಿಲ್ಲ. ಹಿಂದಿನಿಂದಲೂ ನಾನು ಸ್ವಾತಂತ್ರ್ಯವನ್ನು ಅನುಭವಿಸುತ್ತಾ ಬೆಳೆದವಳು. ಆದರೆ ಆತ ನನ್ನನ್ನು ಪಡೆದುಬಿಟ್ಟ' ಎಂದು ತಮ್ಮ ನವ ಜೀವನದ ಹಿಂದಿನ ಸತ್ಯವನ್ನು ಬಿಚ್ಚಿಡುತ್ತಾರೆ.

`ಭೇಟಿಯಾದ ಮೊದಲ ದಿನದಿಂದಲೇ ನಾವು ಸಹಜೀವನ (ಲಿವಿಂಗ್ ಟುಗೆದರ್) ನಡೆಸುತ್ತಿದ್ದೆವು, ಲಾಸ್ ಏಂಜಲೀಸ್‌ನ ಲೇಕರ್ಸ್‌ ಆಟಗಳನ್ನು ನೋಡುತ್ತಾ ಖುಷಿ ಪಡುತ್ತಿದ್ದೆವು. ಮೆಕ್ಸಿಕೊದ ಕ್ಯಾನ್ ಕನ್‌ಗೆ ಪ್ರವಾಸ ಹೋಗುತ್ತಿದ್ದೆವು' ಎಂದೆಲ್ಲ ಅವರು ವಿವರಿಸುತ್ತಾರೆ.

ತಮ್ಮ ಸಮಯವನ್ನು ಪ್ರವಾಸದಲ್ಲಿ ಕಳೆಯಬೇಕು ಎಂದುಕೊಳ್ಳುವುದಕ್ಕಿಂತ ಮೊದಲು, ಈ ಪ್ರೇಮಿಗಳಿಗೆ ಮದುವೆಯಾಗಲು ಸಮಯವೇ ಇರಲಿಲ್ಲವಂತೆ. ಕೊನೆಗೂ ಕಳೆದ ವರ್ಷ ಗಟ್ಟಿ ನಿರ್ಧಾರ ಮಾಡಿ, ದಿನ ನಿಗದಿಪಡಿಸಿಕೊಂಡು ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.

ಅಷ್ಟೇ ಅಲ್ಲ, ಈ ಜೋಡಿ ಗಿನ್ನಿಸ್ ದಾಖಲೆ ಬರೆಯುವ ಸಾಧ್ಯತೆಯೂ ಇದೆ. ಗಿನ್ನಿಸ್ ಸಂಸ್ಥೆ ಇವರಿಬ್ಬರ ವಯಸ್ಸನ್ನು ಅಧಿಕೃತಗೊಳಿಸಿಬಿಟ್ಟರೆ, ಜಗತ್ತಿನಲ್ಲೇ ಅತ್ಯಂತ ಇಳಿವಯಸ್ಸಿನಲ್ಲಿ ಮದುವೆಯಾದ ಜೋಡಿ ಎಂಬ ಹೆಮ್ಮೆಗೆ ಇವರು ಪಾತ್ರರಾಗಲಿದ್ದಾರೆ. ಹಾಗೇನಾದರೂ ಆದರೆ ಈವರೆಗೂ ಅಂತಹದ್ದೊಂದು ದಾಖಲೆಗೆ ಪಾತ್ರವಾಗಿದ್ದ ಇನ್ನೊಂದು ಜೋಡಿ (ರೋಸ್ ಪೋಲಾರ್ಡ್ ಹಾಗೂ ಫಾರೆಸ್ಟ್ ಲನ್ಸ್‌ವೇ) ಎರಡನೇ ಸ್ಥಾನಕ್ಕೆ ಇಳಿಯಲಿದೆ.

ಸುದೀರ್ಘ ಪ್ರಣಯ
ಕ್ಯಾಲಿಫೋರ್ನಿಯಾದ ರೋಸ್ ಪೋಲಾರ್ಡ್ (90) ಹಾಗೂ ಫಾರೆಸ್ಟ್ ಲನ್ಸ್‌ವೇ (100) ಅವರದು 30 ವರ್ಷಗಳ ಸುದೀರ್ಘ ಪ್ರಣಯ. ಆ ನಂತರವೇ ಅವರು ದಾಂಪತ್ಯ ಜೀವನಕ್ಕೆ ನಾಂದಿ ಹಾಡಿದ್ದು. ಇವರಿಬ್ಬರ ಮದುವೆ ಕುತೂಹಲ ಭರಿತವಾಗಲು ಅವರು ಮದುವೆಯಾದ ದಿನದ ವಿಶೇಷವೇ ಕಾರಣ. `ನನಗೆ ಗೊತ್ತು, ನಮ್ಮಿಬ್ಬರ ಮದುವೆ ಅದೆಷ್ಟು ಉದ್ರೇಕಕಾರಿ ಆಗಿತ್ತು, ಅದೆಷ್ಟು ಸುದ್ದಿಯನ್ನು ಹುಟ್ಟುಹಾಕಿತ್ತು ಎಂದು. ಏಕೆಂದರೆ ಯಾರು ಕೂಡ 100ನೇ ವಯಸ್ಸಿನಲ್ಲಿ ಮದುವೆಯಾಗಲು ಸಿದ್ಧರಿರುವುದಿಲ್ಲ' ಎಂದು ರೋಸ್ ಆ ದಿನಗಳನ್ನು ನಗುತ್ತಲೇ ಸ್ಮರಿಸುತ್ತಾರೆ.

ಇಬ್ಬರೂ ಆ ಮೊದಲೇ ಮದುವೆಯಾಗಿದ್ದು, ತಮ್ಮ  ತಮ್ಮ ಸಂಗಾತಿಗಳನ್ನು ಕಳೆದುಕೊಂಡಿದ್ದರು. ಇವರಿಬ್ಬರ ಭೇಟಿ ಕೂಡ ಆಕಸ್ಮಿಕ. ಒಂದು ನೃತ್ಯ ಕಾರ್ಯಕ್ರಮದಲ್ಲಿ ಇಬ್ಬರೂ ಭೇಟಿಯಾಗುತ್ತಾರೆ. ಇಡೀ ರಾತ್ರಿ ನೃತ್ಯ ಮಾಡುತ್ತಲೇ ಉತ್ತಮ ಜೋಡಿ ಎನಿಸಿಕೊಳ್ಳುತ್ತಾರೆ. ರೋಸ್ ಹೇಳುವಂತೆ, ಆಕೆಗೆ ಮರು ಮದುವೆಯಾಗುವ ಆಲೋಚನೆಯೇ ಇರಲಿಲ್ಲವಂತೆ. ಫಾರೆಸ್ಟ್ ಅಂತಹ ಭಾವನೆಗಳನ್ನು ವ್ಯಕ್ತಪಡಿಸಿದಾಗಲೂ ಆಕೆಯ ನಿಲುವಿನಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲವಂತೆ.

ತಮ್ಮ ಮದುವೆಯ ದಿನಾಂಕ ನಿಗದಿ ಮಾಡುವಂತೆ ಫಾರೆಸ್ಟ್ ಕೋರಿಕೊಂಡಾಗ ರೋಸ್ `ನಿನ್ನ 100ನೇ ಹುಟ್ಟುಹಬ್ಬದಂದು ನಿನ್ನನ್ನು ಮದುವೆಯಾಗುತ್ತೇನೆ' ಎಂದು ಹೇಳಿ ನೆರೆದವರಲ್ಲಿ ನಗೆ ಉಕ್ಕಿಸಿದ್ದರಂತೆ. ಅದು ತಮಾಷೆಗೋ ಅಥವಾ ಆ ಕ್ಷಣಕ್ಕೆ ಆಕೆ ಫಾರೆಸ್ಟ್‌ನ ಒತ್ತಾಯದಿಂದ ಪಾರಾಗಲು ಹೇಳಿದ ಮಾತೋ ಯಾರಿಗೂ ತಿಳಿಯಲಿಲ್ಲ. ಆದರೆ, ಸರಿಯಾಗಿ ಫಾರೆಸ್ಟ್ ಅವರ ನೂರನೇ ಹುಟ್ಟುಹಬ್ಬದಂದು ಅವರ ಕೈಹಿಡಿದ ರೋಸ್, 30 ವರ್ಷಗಳ ಹಿಂದೆ ಕೊಟ್ಟಿದ್ದ ತಮ್ಮ ಆ ಮಾತನ್ನು ಉಳಿಸಿಕೊಂಡುಬಿಟ್ಟರು.

ಇವರಿಗಿಂತ ಮೊದಲು ಈ ದಾಖಲೆ ಬರೆದಿದ್ದವರು ಇಂಗ್ಲೆಂಡ್‌ನ ಹ್ಯಾರಿ ಕಾರ‌್ಟನ್ (88) ಹಾಗೂ ಎಡ್ನಾ ಹಾಲ್‌ಫೋರ್ಡ್ (95). ತಮ್ಮ ಐದು ವರ್ಷಗಳ ಪ್ರೇಮಕ್ಕೆ ಅವರು ಕ್ಯಾಂಬೋರ್ನ್‌ನ ನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹದ ಮುದ್ರೆ ಒತ್ತುವ ಮೂಲಕ, ಮೊದಲ ಇಳಿವಯಸ್ಸಿನ ನವವಿವಾಹಿತ ಜೋಡಿ ಪಟ್ಟಿಗೆ ದಾಖಲಾಗಿದ್ದರು. ಈ ಪ್ರೇಮಿಗಳು ಮದುವೆಗೆ ಮುನ್ನ ಒಬ್ಬರನ್ನೊಬ್ಬರು ಭೇಟಿಯಾಗಲು ವರ್ಷಕ್ಕೆ ಮೂರರಿಂದ ನಾಲ್ಕು ಬಾರಿ ಉತ್ಸಾಹದಿಂದ ಸುಮಾರು 610 ಕಿ.ಮೀ ದೂರ ಪಯಣಿಸುತ್ತಿದ್ದರಂತೆ.

ಇವರಂತೆಯೇ `ನಮಗೇನು ಅಂಥಾ ಮಹಾ ವಯಸ್ಸೇನೂ ಆಗಿಲ್ಲ ಬಿಡಿ' ಎನ್ನುತ್ತಲೇ ದಾಂಪತ್ಯಕ್ಕೆ ಕಾಲಿಟ್ಟ ಮತ್ತೊಂದು ಜೋಡಿ ಫ್ರಾನ್ಸ್‌ನ ಫ್ರಾಂಕಾಯ್ಸ ಫರ್ನಾಂಡಿಸ್ (96), ಮೆಡಿಲಿನ್ ಫ್ರಾನ್ಸಿನಿ (95). ಇವರಿಬ್ಬರ ನಡುವೆ ಪ್ರೇಮಾಂಕುರ ಆಗಿದ್ದು ಹೇಗೆ ಗೊತ್ತೇ? ಮೆಡಿಲಿನ್‌ಗೆ ಫ್ರಾಂಕಾಯ್ಸ ಬೆಳ್ಳುಳ್ಳಿ ಕತ್ತರಿಸಲು ಬಳಸುವ `ಗಾರ್ಲಿಕ್ ಪ್ರೆಸ್ ಮಷೀನ್' ಬಳಸುವುದನ್ನು ಹೇಳಿಕೊಡುವ ಮೂಲಕ ಅಂತೆ! 

ನೋಡಿ ಹೇಗೇಗೆಲ್ಲಾ ಪ್ರೀತಿ ಶುರುವಾಗುತ್ತೆ ಅಂತ. ಅಬ್ಬಾ! ಇನ್ನೂ ಈ ಥರ ಪ್ರೇಮಾಂಕುರ ಆದ ಅದೆಷ್ಟು ಇಳಿವಯಸ್ಸಿನ ಜೋಡಿಗಳು ಮದುವೆಯಾಗಲು ಹಾತೊರೆಯುತ್ತಿವೆಯೋ ಯಾರಿಗೆ ಗೊತ್ತು.  ಮದುವೆಯಾದ ಒಂದೆರಡು ವರ್ಷಕ್ಕೇ ವಿಚ್ಛೇದನಕ್ಕೆ ಅರ್ಜಿ ಹಾಕುತ್ತಿರುವ ಇಂದಿನ ಯುವ ದಂಪತಿಗಳಿಗೆ, ಇಳಿವಯಸ್ಸಿನಲ್ಲೂ ಪ್ರೀತಿಯ ಒರತೆ ಬತ್ತದಂತೆ ಕಾಯ್ದುಕೊಂಡಿರುವ ಈ ಜೋಡಿಗಳ ಜೀವನಪ್ರೀತಿ ಆದರ್ಶಪ್ರಾಯ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT