ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮಾತು ಆಲಿಸಿ

Last Updated 25 ಜುಲೈ 2014, 19:30 IST
ಅಕ್ಷರ ಗಾತ್ರ

ಊರ ತುಂಬೆಲ್ಲ, ಇಂತಹ ಅತ್ಯಾಚಾರಿಯನ್ನು ಬಹಿಷ್ಕರಿಸಿ ಎನ್ನುವ ಪೋಸ್ಟರ್‌ಗಳು, ಕುತೂಹಲದಿಂದ ನೋಡುತ್ತಿರುವ ಜನ, ತನ್ನ ಹತ್ತಿರದ ಸಂಬಂಧಿಕ ಹೆಣ್ಣು ಮಗುವಿನ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದ್ದ ವ್ಯಕ್ತಿಯೊಬ್ಬರ ವಿರುದ್ಧ ಮಕ್ಕಳ ಸಂಘಟನೆ ಹಮ್ಮಿಕೊಂಡ ವಿನೂತನ ಕಾರ್ಯಕ್ರಮ. ಊರಿನವರಿಂದ ಆ ವ್ಯಕ್ತಿಗೆ ಗ್ರಾಮದಿಂದ ಬಹಿಷ್ಕಾರ ಹಾಕಿಸಲು ಆ ಮಕ್ಕಳ ಸಂಘಟನೆ ಯಶಸ್ವಿಯಾಯಿತು. ತೊಂದರೆಗೆ ಒಳಗಾದ ಮಗು ತನ್ನ ಸಂಘದಲ್ಲಿ ತನ್ನ ಬಂಧುವಿನ ನೀಚ ಕೃತ್ಯವನ್ನು ಹೇಳಿಕೊಳ್ಳಲು ಅವಕಾಶ ಸಿಕ್ಕಿತು.

ಇನ್ನೊಂದೆರಡು ಪ್ರಕರಣಗಳಲ್ಲಿ ತಮ್ಮ ಸಂಘಗಳ ಸಭೆಗಳಿಗೆ, ಹಳ್ಳಿಯ ಹತ್ತಿರದ ಮಾರುಕಟ್ಟೆಗೆ ಹೋಗಿ ಬರುವಾಗ ಚುಡಾಯಿಸುತ್ತಿದ್ದವರನ್ನು ಪೊಲೀಸರು ಬೆನ್ನುಹತ್ತಿ ಹಿಡಿದು, ‘ಇನ್ನು ಮುಂದೆ ಹಾಗೆ ಮಾಡದಂತೆ’ ತಾಕೀತು ಮಾಡಲು ಸಾಧ್ಯವಾಗಿದ್ದು ಪುನಃ ಅಲ್ಲಿದ್ದ ಮಕ್ಕಳ ಸಂಘಟನೆ ಮತ್ತು ಅವರಿಂದ ಆಯ್ಕೆಯಾದ ಮಕ್ಕಳ ಮಿತ್ರ ಎನ್ನುವ ಹಿರಿಯರು. 

ಅದೇ ತರಹ, ಶಾಲೆಗಳಲ್ಲಿ ಮಕ್ಕಳ ಮೇಲೆ ವಿವಿಧ ರೀತಿಯ ದೌರ್ಜನ್ಯಗಳನ್ನು  ವಿಚಾರಿಸಿ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆಗಳ ನೆರವಿನಿಂದ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲು ಸಾಧ್ಯವಾಗಿದ್ದು ಅಲ್ಲೆಲ್ಲಾ ಮಕ್ಕಳ ಸಂಘಟನೆಗಳು ತಮ್ಮ ನೆರವಿಗೆ ಮಕ್ಕಳ ಮಿತ್ರರನ್ನು ಆಯ್ಕೆ ಮಾಡಿಕೊಂಡಿದ್ದು, ತಮ್ಮ ಗ್ರಾಮ ಪಂಚಾಯ್ತಿಗಳ ಜೊತೆ ನಿಕಟವಾಗಿ ತಮ್ಮ ಸಂಕಷ್ಟಗಳ ಬಗ್ಗೆ ಚರ್ಚಿಸಲು ಅವಕಾಶ ಪಡೆದುಕೊಂಡಿದ್ದು.

ಇವೆಲ್ಲಾ ಉಡುಪಿ ಜಿಲ್ಲೆ, ಕುಂದಾಪುರ ತಾಲ್ಲೂಕಿನ ೫೫ ಗ್ರಾಮ ಪಂಚಾಯ್ತಿಗಳಲ್ಲಿ ಸಮುದಾಯದ ಅತ್ಯಂತ ಬದಿಗೆ ಸರಿದ, ಅವಕಾಶ ವಂಚಿತ ಕುಟುಂಬಗಳ ಮಕ್ಕಳು ತಮ್ಮ ಮೇಲಿನ ಅನ್ಯಾಯಗಳ ವಿರುದ್ಧ ಕ್ರಮ ಜರುಗುವಂತೆ ಅತ್ಯಂತ ನಾಜೂಕಾಗಿ ನಿಭಾಯಿಸಿಕೊಂಡ ಪರಿ. ಆ ಮೂಲಕ ತಮ್ಮ ರಕ್ಷಣೆಯ ಹಕ್ಕನ್ನೂ ತಮ್ಮ ಭಾಗವಹಿಸುವಿಕೆಯ ಮೂಲಕ ಪಡೆದುಕೊಳ್ಳುತ್ತಿರುವುದು ಒಂದು ಒಳ್ಳೆಯ ಮಾದರಿ. 

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪರಿಸ್ಥಿತಿ ರಾಜ್ಯದ ಬಯಲು ಸೀಮೆ, ಮಲೆನಾಡು ಅಥವಾ ಕರಾವಳಿಯ ಗ್ರಾಮಂತರ ಪ್ರದೇಶಗಳ ಪರಿಸ್ಥಿತಿ ಯಾವುದೇ ನಗರ ಪರಿಸ್ಥಿತಿಗಿಂತ ಭಿನ್ನವಾಗಿಲ್ಲ. ಏಕೆಂದರೆ ಒಟ್ಟಾರೆ ವಿಷಯಗಳ ಬಗ್ಗೆ ತಿಳಿವಳಿಕೆ ಇರುವ, ಇಲ್ಲದಿರುವ ಎಲ್ಲಾ ವಯಸ್ಕರು ಲೈಂಗಿಕತೆ, ಲಿಂಗತ್ವ ವಿಷಯಕ್ಕೆ ಬಂದಾಗ ತೀರಾ ಸಂಪ್ರದಾಯವಾದಿಗಳಾಗು ವುದು, ಲೈಂಗಿಕತೆ ತುಚ್ಛ ವಿಷಯ, ಅಸಹ್ಯ ಎಂಬ ಹಣೆಪಟ್ಟಿ ಕಟ್ಟಿ ಅದನ್ನು ಮಾತನಾಡದವರು ಸಭ್ಯರು ಎಂಬ ಪೊಳ್ಳು ಮುಖವಾಡದಲ್ಲಿ ಬದುಕುವುದು ಮಾಮೂಲು.

ಹಾಗಾಗಿ ನಗರಗಳಲ್ಲಿ  ನಡೆಯುವಂತೆ ಮನೆಯಿಂದ ಹಿಡಿದು ಶಾಲೆ, ಸಾರ್ವಜನಿಕ ಸ್ಥಳಗಳಲ್ಲಿ, ಬಸ್‌ಗಳಲ್ಲಿ ಹೆಣ್ಣು ಮಕ್ಕಳ  ಮೇಲೆ ಲೈಂಗಿಕ ಹಲ್ಲೆ, ದೌರ್ಜನ್ಯ ಸಾಗಿದೆ. ಅದನ್ನು ಮಾತನಾಡುವುದೇ, ಆ ಬಗ್ಗೆ ಕೇಳುವುದೇ ಅಪರಾಧ ಎನ್ನುವ ಪೋಸು ಕೊಡುವುದೊಂದೇ ಗೊತ್ತಿರುವ ಹಿರಿಯರು ಮಕ್ಕಳಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳಲೇ ಬಿಡುವುದಿಲ್ಲ. ಆಗುವ ಅನಾಹುತಕ್ಕೆ ಹೆಣ್ಣು ಮಕ್ಕಳೇ ಕಾರಣ ಎನ್ನುವ ಗೂಬೆಯನ್ನು ಹೆಣ್ಣು ಮಕ್ಕಳ ಮೇಲೆ ಕೂರಿಸುವುದು ಸಾಮಾನ್ಯ. ದ್ವಿಲಿಂಗಿಗಳು, ಲಿಂಗ ಪರಿವರ್ತಿತರು, ಮಂಗಳಮುಖಿಯರು ಬೆರಳೆಣಿಕೆಯಷ್ಟು ಇದ್ದರೂ ಅವರು ಪಡುವ ಹಿಂಸೆ, ಯಾವುದೇ ಲೈಂಗಿಕ ಅತ್ಯಾಚಾರಕ್ಕಿಂತ ಕಡಿಮೆಯದಲ್ಲ. 

ಮಕ್ಕಳು ಒಟ್ಟಾದಾಗ ಅವರು ಎತ್ತುವ ಸಹಜ ನ್ಯಾಯಾನ್ಯಾಯಗಳ ಪ್ರಶ್ನೆಗಳಿಗೆ ಕೆಲವೆಡೆಯಾದರೂ ಗ್ರಾಮ ಪಂಚಾಯ್ತಿ, ಮಕ್ಕಳ ಬಗ್ಗೆ ಕಾಳಜಿ ಇರುವ ಹಿರಿಯರು ಕಿವಿಗೊಟ್ಟು, ಆ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಂಡ ಉದಾಹರಣೆಗಳು ಕಂಡು ಬರುತ್ತವೆ. ಇಲ್ಲಿ ಪೊಲೀಸರೂ ಸೇರಿದಂತೆ, ಗ್ರಾಮ ಪಂಚಾಯ್ತಿಯ ಹಿರಿಯರಿಗೆ ಮಕ್ಕಳ ಹಕ್ಕುಗಳು, ರಕ್ಷಣೆಯ ಬಗ್ಗೆ ತಿಳಿವಳಿಕೆ ಮೂಡಿಸುವ ಕೆಲಸ ನಿರಂತರವಾಗಿ ಆಗುತ್ತಿದೆ.

ಕುಂದಾಪುರ ತಾಲ್ಲೂಕು ಸೇರಿದಂತೆ ರಾಜ್ಯದ ವಿವಿಧೆಡೆ, ಮಕ್ಕಳ ಭಾಗವಹಿಸುವ ಹಕ್ಕಿನ  ಬಗ್ಗೆ ಕಳೆದ ಮೂರೂವರೆ ದಶಕಗಳಿಂದ ಕೆಲಸ ಮಾಡಿ, ಕಳೆದ ಎರಡು ವರ್ಷಗಳಿಂದ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮ ನಿರ್ದೇಶನವಾಗಿರುವ ‘ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್’ ಸಂಸ್ಥೆ, ಮಕ್ಕಳು ಮತ್ತು ಹಿರಿಯರಿಗೆ ನಿರಂತರ ಮಾಹಿತಿ ನೀಡುತ್ತಾ, ಅನುಭವಗಳನ್ನು ಹಂಚಿಕೊಳ್ಳುತ್ತಾ ಬರುತ್ತಿದೆ.

ಶಾಲಾ ಹೆಣ್ಣು  ಮಕ್ಕಳಿಗೆ ಲೈಂಗಿಕ ತಿಳಿವಳಿಕೆ, ಎಚ್.ಐ.ವಿ/ ಏಯ್ಡ್ಸ್, ವೈಯಕ್ತಿಕ ಸ್ವಚ್ಛತೆ ಬಗ್ಗೆ ಸರ್ವ ಶಿಕ್ಷಣ ಅಭಿಯಾನ ಕೆಲ ವರ್ಷಗಳ ಹಿಂದೆ ಸನಿವಾಸ ತರಬೇತಿ ನಡೆಸಿತು. ಸಾವಿರಾರು ಹೆಣ್ಣು ಮಕ್ಕಳು ಅದರ ಪ್ರಯೋಜನ ಪಡೆದುಕೊಂಡಿದ್ದರ ಫಲ ಹಲವು ಕಡೆ ಹೆಣ್ಣು ಮಕ್ಕಳು ತಮ್ಮ ಮೇಲೆ ಆಗುವ ಲೈಂಗಿಕ ದೌರ್ಜನ್ಯವೂ ಸೇರಿ ಎಲ್ಲಾ ದೌರ್ಜನ್ಯಗಳ ಬಗ್ಗೆ ದೂರುಗಳನ್ನು ನೀಡಿದ ಉದಾಹರಣೆಗಳನ್ನು ಸರ್ವ ಶಿಕ್ಷಣ ಅಭಿಯಾನದ ದಾಖಲಾತಿ ಚಿತ್ರ ತೋರಿಸುತ್ತದೆ.  

ಆದರೆ ಅದನ್ನು ಸಮಗ್ರವಾಗಿ ರಾಜ್ಯದಲ್ಲಿ ಜಾರಿ ಮಾಡುವ ಕುರಿತು ನಾವು ರಾಜ್ಯದ  ಶಿಕ್ಷಣ ಮಂತ್ರಿಗಳನ್ನು ಭೇಟಿಯಾದಾಗ, ‘ಶಾಲಾ ಮಕ್ಕಳಿಗೆ ಲೈಂಗಿಕ ಶಿಕ್ಷಣ ಅಗತ್ಯವಿಲ್ಲ. ಯೋಗ ಶಿಕ್ಷಣ ತುರ್ತು ಅಗತ್ಯ’ ಎಂದು ಇಡೀ ಯೋಜನೆಯನ್ನು ಬೇರೆ ತರಹ ಕಾಟಾಚಾರಕ್ಕೆ ಮಾಡುತ್ತಿರುವುದು ದುರಂತ.

ದೌರ್ಜನ್ಯಕ್ಕೆ ಒಳಗಾದವರನ್ನೇ ಬಲಿಪಶು ಮಾಡುವ ಹಿರಿಯರ ಪ್ರವೃತ್ತಿ, ಹೆಣ್ಣು ಮಕ್ಕಳನ್ನೇ ಅನುಮಾನದಿಂದ ನೋಡುವ ಹಿರಿಯರ ಮನೋಭಾವದ ಬದಲಾವಣೆ ನಮ್ಮ ಮುಂದಿರುವ ದೊಡ್ಡ ಸವಾಲು. ಆರೋಗ್ಯಕರ  ಲೈಂಗಿಕತೆಯ ಬಗ್ಗೆ ಮುಕ್ತ ಮಾತುಕತೆ, ಮಕ್ಕಳ ಮಾತನ್ನು ಗೌರವದಿಂದ ಕೇಳಿಸಿಕೊಂಡು, ತಮ್ಮ ಸಂಕಷ್ಟಗಳೂ ಸೇರಿದಂತೆ ಎಲ್ಲಾ ಅಭಿಪ್ರಾಯ  ಅವರಿಗೆ ಹೇಳಿಕೊಳ್ಳಲು ಅವರ ಸಂಘಟನೆ, ಮಕ್ಕಳ ಮಿತ್ರದಂತಹ ವ್ಯವಸ್ಥೆಗಳು ರೂಪುಗೊಳ್ಳಬೇಕು. ಆಗ, ಮಕ್ಕಳು ತಮ್ಮ ಮೇಲಿನ ದೌರ್ಜನ್ಯವನ್ನು ಹೇಳಿಕೊಳ್ಳಲು, ತಡೆಗೆ ಪ್ರಯತ್ನಿಸಲು ಹಿರಿಯರ ಸಮಾಜವನ್ನು ನಂಬಿ ಬದುಕಲು ಸಾಧ್ಯವಾಗುತ್ತದೆ. 

ಈ ಲೇಖನ ಬರೆಯುವ ಮೊದಲು ನಾನು ಕೆಲವು ತಾಯಂದಿರು, ಸಂಘಗಳಲ್ಲಿರುವ ಹೆಣ್ಣು ಗಂಡು ಮಕ್ಕಳ ಜೊತೆಗೆ ಮಾತನಾಡಿದಾಗ,  ಶಾಲೆ, ಬಸ್, ಸಾರ್ವಜನಿಕ  ಸ್ಥಳಗಳಲ್ಲಿ  ದೌರ್ಜನ್ಯ ಆದಾಗ ಮಕ್ಕಳು ಕೂಡಲೇ ಸಂಪರ್ಕಿಸಬೇಕಾದ ವ್ಯಕ್ತಿಗಳು, ಸಂಸ್ಥೆಗಳ ವಿವರ ಒದಗಿಸಬೇಕು. ಪೋಷಕರು, ಜನ ಪ್ರತಿನಿಧಿಗಳು, ಅಧಿಕಾರಿಗಳಿಗೆ ಮಕ್ಕಳ ಅಭಿಪ್ರಾಯಗಳನ್ನು ಗೌರವದಿಂದ ಕೇಳಿಸಿಕೊಳ್ಳುವ ಬಗ್ಗೆ ನಿರಂತರ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಗಳು ಹಮ್ಮಿಕೊಳ್ಳಬೇಕು.

ಶಾಲೆಗಳಲ್ಲಿ ಇಂತಹ  ನೀಚ ಕೃತ್ಯಗಳ ವಿರುದ್ಧ ತೆಗೆದುಕೊಳ್ಳುವ ಕ್ರಮಗಳಲ್ಲಿ ಪೋಷಕರು, ಮಕ್ಕಳು ಸಕ್ರಿಯವಾಗಿ ಭಾಗವಹಿಸಲು ಅವಕಾಶ ಕಲ್ಪಿಸಬೇಕು. ಅಲ್ಲದೇ ಮಕ್ಕಳೇ ಸ್ವಪ್ರೇರಣೆಯಿಂದ ಒಟ್ಟಿಗೆ ಬಂದು ತಮ್ಮ ಬಗ್ಗೆ ಮಾತನಾಡಲು ಅವಕಾಶ ಮಾಡಿಕೊಡುವುದು ತುರ್ತಾಗಿ ಆಗಬೇಕಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವೂ ಸೇರಿದಂತೆ ಉಳಿದೆಲ್ಲಾ ಅನ್ಯಾಯಗಳ ವಿರುದ್ಧ, ಮಕ್ಕಳ ರಕ್ಷಣೆ ಕಾಯಿದೆಯ ವ್ಯಾಪಕ ಬಳಕೆಯೂ ಸೇರಿದಂತೆ, ತೆಗೆದುಕೊಳ್ಳಬೇಕಾದ  ಹಲವು ಕಾರ್ಯಕ್ರಮಗಳ ಜೊತೆ ಮಕ್ಕಳು ಮತ್ತು ಹಿರಿಯರ ಅಭಿಪ್ರಾಯಗಳನ್ನೂ ಕಾರ್ಯಗತ ಮಾಡಬೇಕಿದೆ.
(ಲೇಖಕರು ಮಕ್ಕಳ ಹಕ್ಕುಗಳ ಹೋರಾಟದಲ್ಲಿ ತೊಡಗಿಕೊಂಡಿರುವವರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT