ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳು ಋತುಮತಿಯಾದಳು...

Last Updated 4 ಮೇ 2012, 19:30 IST
ಅಕ್ಷರ ಗಾತ್ರ

ಅಂದು ಬೆಳಿಗ್ಗೆಯೇ ಕಲ್ಪನಾ ಫೋನು ಮಾಡಿದ್ದಳು. ಅವಳ ಸ್ವರದಲ್ಲಿ ಆತಂಕ ಗಾಬರಿ ಕಳವಳ ಸ್ಪಷ್ಟವಾಗಿತ್ತು.

`ಅಕ್ಕಾ... ಚಿನ್ನು ದೊಡ್ಡವಳಾಗಿ ಬಿಟ್ಟಳು. ಇನ್ನೂ ಹನ್ನೆರಡು ವರ್ಷಗಳೂ ತುಂಬಿಲ್ಲ. ನಾನು ಹೇಗೆ ಏನೂಂತ ಅವಳಿಗೆ ತಿಳಿಸಲಿ? ಇಷ್ಟು ಚಿಕ್ಕವಳು ಹೇಗೆ ನಿಭಾಯಿಸ್ತಾಳೆ? ನಂಗಂತೂ ದಿಕ್ಕೇ ತೋಚದ ಹಾಗಾಗಿದೆ...~ ಇನ್ನೂ ಸ್ವಲ್ಪ ಹೊತ್ತು ಮಾತನಾಡಿದರೆ ಅಳುವುದಕ್ಕೂ ತಯಾರಾಗಿದ್ದ ಸೂಚನೆ ಕಂಡು ಬಂತು.

`ಈಗ ಫೋನಿಡು... ನಾನು ವಿವರ ಬರೆದು ಕಳುಹಿಸ್ತೀನಿ... ಧೈರ್ಯ ತಂದ್ಕೋ... ಮಾನಸಿಕ ಒತ್ತಡಕ್ಕೀಗ ಸಮಯವಲ್ಲ..~ ಎಂದು ಹೇಳಿ ಫೋನನ್ನು ಕೆಳಗಿಟ್ಟೆ. ಹಿಂದೆಯೇ ಚಿನ್ಮಯ ಅಂದರೆ ಪುಟ್ಟ ಯುವತಿ ಚಿನ್ನು ಫೋನು ಮಾಡಿ,

`ಅವ್ವಾ ಇದೆಲ್ಲಾ ಏನವ್ವಾ? ತುಂಬಾ ಹಿಂಸೆಯಾಗ್ತಿದೆ. ಊಟಕ್ಕೂ ಕಟ್ಟುನಿಟ್ಟು. ಕರೀ ಮೆಣಸಿನ ಸಾರು, ಸಪ್ಪೆ ಅನ್ನ ಕೊಡ್ತಾರೆ. ರಾತ್ರಿ ಚಾಪೆ ಮೇಲೆ ಮಲಗಿಸ್ತಾರೆ. ಛಳಿ ಬೇರೆ, ನಂಗೆ ನಿದ್ದೇನೇ ಬರೋಲ್ಲ. ರಾತ್ರಿ ತಲೆಗೆ ಹರಳೆಣ್ಣೆ ಹನಿಯಿಕ್ಕುವವರೆಗೂ ಹಚ್ಚುತ್ತಾರೆ ಒಂಥರಾ ವಾಸನೆಗೆ ವಾಕರಿಕೆ ಬಂದಂತಾಗುತ್ತದೆ. ಬೆಳಿಗ್ಗೆ ನಾಲ್ಕು ಗಂಟೆಗೇ ಏಳಿಸಿ, ಸುಸ್ತಾಗುವವರೆಗೂ ಬಿಸಿನೀರಿನ ಸ್ನಾನ ಮಾಡಿಸ್ತಾರೆ. ನಂಗೆ ಒಳ್ಳೇ ಊಟ ಇಲ್ಲ... ನಿದ್ದೆಯಿಲ್ಲ... ನೀನೊಂದ್ಸಾರಿ ಬಾ.....~ ಅಳು ತುಂಬಿದ ಸ್ವರದಲ್ಲಿ ಹೇಳಿದಳು. ನನಗೆ ಅಸಹನೆ, ನೋವು, ದುಃಖ ಒಟ್ಟಿಗೇ ಬಂದವು. ಪುಟ್ಟ ಮಗಳಿಗೆ ಇಷ್ಟೆಲ್ಲಾ ಹಿಂಸೆ ಯಾಕೆ ಕೊಡ್ತಾರೋ ಏನೋ? ಎಂದನ್ನಿಸಿ ಆ ಕೂಡಲೇ ಅವಳಿಗೆ ಪತ್ರ ಬರೆಯತೊಡಗಿದೆ.

ಕಲ್ಪನಾ,
ಮಗಳು ಋತುಮತಿಯಾದಳೆಂದು ಅಷ್ಟೇಕೆ ಗಾಬರಿ, ಆತಂಕ, ಒತ್ತಡಕ್ಕೊಳಗಾಗುತ್ತೀಯಾ? ಆ ಎಲ್ಲಾ ಒತ್ತಡಗಳನ್ನು ಮಗಳ ಮೇಲೆ ಹೇರಿ ಅವಳು ಕಂಗೆಡುವಂತೆ ಮಾಡ್ತಾ ಇದ್ದೀಯಾ. ನೀನೂ ಈ ಹಂತವನ್ನು ಅನುಭವಿಸಿರಲಿಲ್ವಾ? ಹಾಗೆಯೇ ನಿನ್ನ ಮಗಳಿಗೂ ಹನ್ನೊಂದು, ಹನ್ನೆರಡರ ವಯಸ್ಸಿನಂಚಿನಲ್ಲಿಯೇ ಕಾಣಿಸಿ ಕೊಂಡಿದೆ.ಇದು ಸಹಜ ತಾನೆ?

ಈ ಮಾಸಿಕ ಋತುಸ್ರಾವ ಅಥವಾ ಋತುಕ್ರಿಯೆಯ ಆರಂಭ ಬೆಳವಣಿಗೆಯ ಹಂತದಲ್ಲಿರುವ ಹದಿಹರೆಯದ ಒಂದು ಘಟ್ಟವಷ್ಟೇ. ಅವಳೀಗ ಹೆಣ್ಣಾಗುತ್ತಿದ್ದಾಳೆ. ಮಕ್ಕಳನ್ನು ಪಡೆಯುವ ಶಕ್ತಿಗೆ ತಯಾರಾಗುತ್ತಿದ್ದಾಳೆ. ನಿನಗವಳು ಕುತೂಹಲದಿಂದ, ಮೊದಲು ರಕ್ತಸ್ರಾವವು ಕಾಣಿಸಿಕೊಂಡಾಗ, ಗಾಬರಿ, ಭಯದಿಂದ, `ಅಮ್ಮಾ .... ಈ ರಕ್ತ .... ಇಲ್ಲಿಂದ ಹೇಗೆ ಬರ‌್ತಾಯಿದೆ? ಗಾಯ ಆಗಿದೆಯಾ? ಹೇಗಾಯ್ತು~ ಎಂದೆಲ್ಲಾ ಕೆಣಕಿ ಪ್ರಶ್ನೆಗಳನ್ನು ಕೇಳುತ್ತಿರಬಹುದು. ಆ ಪುಟ್ಟ ಮೆದುಳಿನಲ್ಲಿ ಹೋರಾಟ ನಡೆದಿರುತ್ತದೆ. ಅದು ಕುತೂಹಲ, ಗಾಬರಿಯದ್ದು ಕಲ್ಪನಾ. ಹತ್ತು ವರ್ಷಗಳಿಂದ ಹದಿನಾಲ್ಕು ವರ್ಷದ ಅವಧಿಯಲ್ಲಿ ಸಾಮಾನ್ಯವಾಗಿ ಕಾಣುವ ಮೊದಲ ಮಾಸಿಕ ರಕ್ತಸ್ರಾವ, ನೀನು ಋತುಮತಿಯಾದ ವಯಸ್ಸಿನಲ್ಲಿಯೇ ಅವಳು ಆಗಬಹುದೆಂದು ಕೆಲವರು ಹೇಳುತ್ತಾರೆ.

ಋತುಸ್ರಾವ ಹೇಗಾಗುತ್ತೆ ಗೊತ್ತಾ ಕಲ್ಪೀ?
ಚಿನ್ನು ನಿನ್ನ ಗರ್ಭದೊಳಗೆ ಬೆಳೆಯುತ್ತಿರುವಾಗಲೇ ಪುಟ್ಟ ಪುಟ್ಟ ಸಂತಾನೋತ್ತಿಯ ಅಂಗಗಳು ಬೆಳೆದು, ಅವಳು ಹೆಣ್ಣು ಮಗುವೆಂದು ಪುಷ್ಟೀಕರಿಸಿದರೂ, ಅವುಗಳ ಬೆಳವಣಿಗೆ, ದೈಹಿಕ ಬದಲಾವಣೆ ಹಂತಹಂತವಾಗಿ ಆಗ ತೊಡಗುವುದು ನಮ್ಮ ದೇಹದಲ್ಲಿ ಸ್ರವಿಸುವ ಹಾರ್ಮೋನುಗಳಿಂದ ಎಂಬುದನ್ನು ನೆನಪಿಟ್ಟುಕೋ. ಪ್ರತಿ ತಿಂಗಳು ಮುಂದಿನ ದಿನಗಳಲ್ಲಿ 28 ರಿಂದ 30 ದಿನಗಳಲ್ಲಿ ತಿಂಗಳ ಋತುಸ್ರಾವ ಕ್ರಮಬದ್ಧವಾಗಿ ಕಾಣಿಸಿಕೊಳ್ಳುವುದು ಈ ಹಾರ್ಮೋನುಗಳಿಂದ.

ಪ್ರತಿ ತಿಂಗಳೂ ಅಂಡಾಶಯದಲ್ಲಿ ಅಂಡಾಣುವೊಂದು ಬಿಡುಗಡೆಯಾಗುತ್ತದೆ. ಗರ್ಭಕೋಶದಲ್ಲಿರುವ ಒಳ ಪದರವು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಈ ಒಳಪದರದಲ್ಲಿರುವ  ರಕ್ತನಾಳಗಳು ಸೂಕ್ಷ್ಮವಾಗಿದ್ದು, ಗ್ರಂಥಿಗಳನ್ನು ಹೆಚ್ಚಿಸಿಕೊಂಡು ಬೆಳೆಯುವ ಗುಣವನ್ನು ಹೊಂದಿರುತ್ತದೆ. ಅಂಡಾಣುವು ಬಿಡುಗಡೆಯಾಗುವ ಸಮಯಕ್ಕೆ ಸರಿಯಾಗಿ ತನ್ನ ಗಾತ್ರವನ್ನು ಹೆಚ್ಚಿಸಿಕೊಂಡಿರುತ್ತದೆ. ಗರ್ಭಕಟ್ಟಿದ ಅಂಡಾಣುವು ಬೇರೂರಲು ಸುಪ್ಪತ್ತಿಗೆಯಂತಾಗಿರುತ್ತದೆ.

ಒಂದು ವೇಳೆ ಗರ್ಭವು ಕಟ್ಟದಿದ್ದರೆ, ಅದು ತನ್ನ ಗಾತ್ರವನ್ನು ಕುಗ್ಗಿಸಿಕೊಳ್ಳತೊಡಗಿ ಗರ್ಭಕೋಶದಿಂದ ಬೇರ್ಪಡತೊಡಗುತ್ತದೆ. ಆಗ ರಕ್ತನಾಳಗಳಿಂದ ರಕ್ತವು ಸ್ರವಿಸ ತೊಡಗುತ್ತದೆ.
 
ಬೇರೆಯಾದ ಒಳಪದರವು ಫಲಿತಾಗದೆ ಸತ್ತು ಹೋದ ಅಂಡಾಣುವಿನ ಜೊತೆ, ರಕ್ತಸ್ರಾವದೊಂದಿಗೆ ಯೋನಿಯ ಮೂಲಕ ಹೊರಗೆ ಬಂದು ಬಿಡುತ್ತದೆ. ಇದಕ್ಕೆ ನಾವು ಋತುಸ್ರಾವವೆನ್ನುತ್ತೇವೆ ಅಥವಾ ಮಾಸಿಕ ಋತುಸ್ರಾವವೆನ್ನುತ್ತಾರೆ. ಕಾವ್ಯಮಯವಾಗಿ ಹೇಳಬೇಕೆಂದರೆ, `ಗರ್ಭವು ಫಲಿಸದೆ ಇದ್ದುದಕ್ಕೆ ನೊಂದುಕೊಂಡ ಗರ್ಭಕೋಶವು ಕಣ್ಣೀರು ಸುರಿಸುತ್ತದೆ. ಇದು ರಕ್ತ ಸ್ರಾವವಾಗಿ ಹರಿಯುತ್ತದೆ~ ಎನ್ನುತ್ತಾರೆ. ಎಷ್ಟು ಸೋಜಿಗ ಅಲ್ವಾ ಕಲ್ಪೀ? ಅದೆಲ್ಲಾ ಹಾರ್ಮೋನುಗಳ ಪ್ರಭಾವದಿಂದ ನಡೆಯುತ್ತದೆ. ಪ್ರಕೃತಿಯ ಸೃಷ್ಟಿ ಎಂಥಾ ನಿಗೂಢ, ಅದ್ಭುತ ಅನ್ನಿಸುತ್ತೆ ನೋಡು!

ಮೊದಲ ದಿನದ ಋತುಕ್ರಿಯೆಯು ಆರಂಭವಾದಾಗ, ಫಲಿತವಾಗದ ಅಂಡಾಣುವಿನ ಜೊತೆ ರಕ್ತಸ್ರಾವವು ಕಾಣಿಸಿಕೊಳ್ಳುತ್ತದೆ. ಐದು ದಿನಗಳ ಕಾಲದವರೆಗೂ ಈ ಕಾರ್ಯ ನಡೆದು ನಂತರ ರಕ್ತಸ್ರಾವ ನಿಲ್ಲುತ್ತದೆ. ಅದೇ ಸಮಯದಲ್ಲಿ ಮತ್ತೊಂದು ಅಂಡಾಶಯದಲ್ಲಿ ಅಂಡಾಣುವು ಉತ್ಪತ್ತಿಯಾಗುವಂತೆ ಪಿಟ್ಯುಟರಿ ಗ್ರಂಥಿಯ ನೋಡಿಕೊಳ್ಳುತ್ತದೆ.
 
ಐದನೆಯ ದಿನ, ಗರ್ಭಾಶಯದ ಒಳಪದರವು ಪೂರ್ತಿಯಾಗಿ ಕಳಚಿಹೋಗಿರುವುದರಿಂದ ರಕ್ತ ಸ್ರಾವವು ನಿಂತಿರುತ್ತದೆ. ಒಂದು ಜೊತೆ ಅಂಡಾಶಯವು ಪ್ರತಿಯೊಬ್ಬ ಮಹಿಳೆಯಲ್ಲಿರುವುದರಿಂದ, ಈಗಾಗಲೇ ತಿಳಿಸಿದಂತೆ, ಮತ್ತೊಂದು ಅಂಡಾಶಯವು ಅಂಡಾಣುವಿನ ಉತ್ಪತ್ತಿಯ ಕಾರ್ಯದಲ್ಲಿ ಪಿಟ್ಯುಟರಿಯ ಹಾರ್ಮೋನು ನಿರತವಾಗಿರುತ್ತದೆ. ಇದರಿಂದ ಅಂಡಾಶಯದಿಂದ `ಈಸ್ಟ್ರೋಜನ್~ ಎಂಬ ಹಾರ್ಮೋನಿನ ಪರಿಣಾಮದಿಂದ ಪುನಃ ಗರ್ಭಕೋಶದ ಒಳಪದರವು ಮೊದಲಿನಂತೆ ಬೆಳೆಯ ತೊಡಗುತ್ತದೆ.

ಮುಂದಿನ ದಿನಗಳಲ್ಲಿ ಹಿಂದಿನಂತೆ, ಗರ್ಭವು ಫಲಿಸದಿದ್ದರೆ ಮತ್ತೆ ಋತುಸ್ರಾವ ಆರಂಭವಾಗುತ್ತೆ. ಮತ್ತೆ ನಿರಾಶೆಗೊಂಡ ಒಳಪದರವು ಬೆಳವಣಿಗೆಯನ್ನು ನಿಲ್ಲಿಸಿ ಕುಗ್ಗಿ ರಕ್ತಸ್ರಾವದ ಮೂಲಕ ಹೊರಗೆ ಬರುತ್ತದೆ. ಈಗ ಅರ್ಥವಾಯ್ತಾ?

ಇಂತಹ ದಿನಗಳು ಈಗ ಚಿನ್ನುವಿನಲ್ಲಿ ಆರಂಭವಾಗಿದೆ. ಆ ದಿನಗಳು ಅವಳಿಗೆ ಭಯಾನಕವಾಗ ಕೂಡದು ಕಲ್ಪನಾ. ಅನೇಕ ಸಂಪ್ರದಾಯಗಳು ಅನೇಕ ಊರುಗಳಲ್ಲಿವೆ. ಅವೆಲ್ಲವನ್ನೂ ಅವಳ ಮೇಲೆ ಪ್ರಯೋಗಿಸಬೇಡಾ. ಅವಳಿಗೆ ಹೆದರಿಕೆ, ಗಾಬರಿ ಆಗುತ್ತೆ. ಈಗ ಅವಳು ಹದಿಹರೆಯದ ಏಣಿಯ ಮೊದಲನೆಯ ಮೆಟ್ಟಿಲಲ್ಲಿ ನಿಂತಿದ್ದಾಳೆ. ಗೊಂದಲದಲ್ಲಿ, ಭ್ರಮೆಗಳಲ್ಲಿರುತ್ತಾಳೆ. ಅದರ ಮೇಲೆ ಈ ನಿನ್ನ ಸಂಪ್ರದಾಯಗಳು!! ಉಫ್!!

ಅದರ ಬದಲು ಅವಳು ಕೇಳುವ ಕುತೂಹಲದ ಪ್ರಶ್ನೆಗಳಿಗೆ ಸಾವಧಾನದಿಂದ ಉತ್ತರಿಸು. ಯಾವುದನ್ನೂ ಮುಚ್ಚಿಡಬೇಡ. ಒಳ್ಳೆಯ ಸ್ನೇಹಿತೆಯಾಗುವ ಅವಕಾಶವನ್ನು ಕಳೆದುಕೊಳ್ಳಬೇಡಾ. ಅವಳಿಗೀಗ ನಿನ್ನ ಸಾಮೀಪ್ಯ, ಭದ್ರತೆಯ ಅಪ್ಪುಗೆ, ಹಿತವಾದ ಮಾತುಗಳು ಮುಖ್ಯವಾಗುತ್ತವೆ.

ಹೀಗೆ ಮಾಡು ಕಲ್ಪೀ.
* ಒಳ್ಳೆಯ ಪೌಷ್ಟಿಕಾಂಶವುಳ್ಳ ಆಹಾರ ಮೊದಲು ಕೊಡು.

* ಒಳ್ಳೆಯ ವಿಶ್ರಾಂತಿ, ನಿದ್ದೆಯ ಅಗತ್ಯವಿದೆ.

* ಎಣ್ಣೆ ಸ್ನಾನ ಮಾಡಿಸು. ಆದರೆ ಕಿರಿಕಿರಿಯಾಗುವಂತೆ, ತಲೆಯ ತುಂಬಾ ಎಣ್ಣೆ ಮೆತ್ತಿ, ಬೆಳಿಗ್ಗೆ ನಾಲ್ಕು ಗಂಟೆಯ ಚಳಿಯಲ್ಲಿ ಸ್ನಾನದ ಅಗತ್ಯವಿದೆಯಾ?

* ರಕ್ತಹೀನತೆ ಅಗದಂತೆ ಮೊದಲು ನೋಡಿಕೋ. ಅಗತ್ಯಬಿದ್ದರೆ ವೈದ್ಯರ ಸಲಹೆ ಪಡೆದುಕೋ.

* ಎಲ್ಲದಕ್ಕೂ ಮೊದಲು ಅವಳಿಗೆ ವೈಯಕ್ತಿಕ ನೈರ್ಮಲ್ಯ, ಒಳಉಡುಪುಗಳನ್ನು ಹೇಗೆ ಧರಿಸಬೇಕೆಂದು ತಿಳಿಸಿಕೊಡು.

* ಅಂಗಡಿಯಿಂದ ತಂದ `ಸ್ಯಾನಿಟರಿ ಪ್ಯಾಡ್ಸ್~ಗಳನ್ನು ಪರೀಕ್ಷಿಸಿ ನೋಡು. ಹಳೆಯ ಸ್ಟಾಕ್,  ಉಪಯೋಗಿಸಲೇಬೇಡಾ. ಹೊಸ ಪ್ಯಾಡ್ಸ್ ಆದರೂ ಒಮ್ಮೆ ಇಸ್ತ್ರಿ ಮಾಡಿ ಧರಿಸಲು ಕೊಡು.

* ಒಂದು ವೇಳೆ ಮನೆಯಲ್ಲಿನ ಹಳೆಯ ಬಟ್ಟೆಗಳೇ ಸಾಕು ಎಂದು ಕೊಂಡರೆ ಆ ಬಟ್ಟೆಗಳು ಹಳೆಯವಾದರೂ ಪರವಾಗಿಲ್ಲ, ಆದರೆ ಶುಭ್ರವಾಗಿದ್ದರೆ ಸಾಕು ಹಾಗೂ ಮೃದುವಾಗಿದ್ದರೆ, ಅವಳ ತೊಡೆಗಳಿಗೆ ತರಚಿ ಗಾಯವಾಗದು. ಅದೂ ಅಲ್ಲದೆ, ಋತುಕಾಲದಲ್ಲಿನ ದಿನಗಳಲ್ಲಿ ಉಪಯೋಗಿಸುವ ಬಟ್ಟೆಗಳನ್ನು ಒಳಗೇ ತೊಳೆದು, ಬಚ್ಚಲು ಅಂದರೆ ಮನೆಯೊಳಗೇ ಒಣಗಲು ಹಾಕುವುದು ಕೆಲವರ ವಾಡಿಕೆ. ಹಾಗೆ ಒಣಗಿದ ಬಟ್ಟೆಗಳನ್ನು ಮಡಿಚಿಟ್ಟು ಬಿಡುತ್ತಾರೆ. ಮತ್ತೆ ಹೊರತೆಗೆಯುವುದು ಮಾಸಿಕ ಋತುಸ್ರಾವದ ದಿನಗಳಲ್ಲಿಯೇ. ಹಾಗೆಯೇ ಇಟ್ಟ ಆ ಬಟ್ಟೆಗಳಲ್ಲಿ `ಬೂಸ್ಟ್~ ಎಂಬ `ಫಂಗಸ್~ ಬೆಳೆದಿರುತ್ತದೆ. ಆದುದರಿಂದ ಆ ಬಟ್ಟೆಗಳನ್ನು ಇಸ್ತ್ರಿ ಮಾಡಿಯೇ ಕೊಡಬೇಕು. ಇಲ್ಲದಿದ್ದರೆ ಬಹಳ ಸುಲಭವಾಗಿ ಸೋಂಕು ತಗುಲಿ ಬಿಡುತ್ತದೆ ಎಚ್ಚರಿಕೆ ಅಗತ್ಯ.

* ನಂತರ ಅಂದರೆ ಉಪಯೋಗಿಸಿದ `ಸ್ಯಾನಿಟರಿ ಪ್ಯಾಡ್~ಗಳನ್ನು ಪೇಪರಿನಲ್ಲಿ ಸುತ್ತಿ `ಡಸ್ಟ್‌ಬಿನ್~ ಗಳಲ್ಲಿ ಹಾಕಿ ಕೈ ತೊಳೆದು ಕೊಳ್ಳಲು ಹೇಳು.

* ಪ್ರತಿ ದಿನಾ ಶುಭ್ರವಾದ ಬಟ್ಟೆ, ಒಳ ಉಡುಪುಗಳನ್ನು ಸ್ನಾನದ ನಂತರ ಧರಿಸಲು ತಿಳಿಸು ಕಲ್ಪನಾ.

* ಈ `ಋತುಮತಿಯಾದ~ ದಿನಗಳಲ್ಲಿ ಅದೆಷ್ಟು ಮೂಢ ನಂಬಿಕೆಗಳಿಂದ ಪುಟ್ಟ ದೇಹಕ್ಕೆ ಹಿಂಸೆ ಕೊಡ್ತಾರೇಂತ ಮತ್ತೆ ಹೇಳು ತ್ತೇನೆ. ಆತಂಕ, ಗಾಬರಿಯ ಬದಲು ಸದ್ಯಕ್ಕಿಷ್ಟು ಮಾಡ್ತೀಯಾ?
ಇಂತಿ ನಿನ್ನ
- ಡಾ. ಎಚ್. ಗಿರಿಜಮ್ಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT