ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾನಗರಕ್ಕೆ ದಿವಾನರ ಕೊಡುಗೆ

Last Updated 6 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಬ್ರಿಟಿಷರು ಇನ್ನೂ ನೆಲೆಯೂರಿದ್ದ ಕಾಲಘಟ್ಟದಲ್ಲಿಯೇ ಅನೇಕ ದಿವಾನರು ಇಲ್ಲಿನ ಆಡಳಿತಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತ ಬಂದಿದ್ದಾರೆ. 1881ರಿಂದ 1947ರ ಅವಧಿಯಲ್ಲಿ (66 ವರ್ಷ) ಸುಮಾರು 13 ಜನ ದಿವಾನರು ಈ ಮಹಾನಗರಕ್ಕೆ ಅನೇಕ ಕೊಡುಗೆಗಳನ್ನು ನೀಡಿ ಹೋಗಿದ್ದಾರೆ.

1881–82ರ ಸಮಯವದು. ಬೆಂಗಳೂರಿಗೆ ತೀವ್ರ ಕ್ಷಾಮ ತಟ್ಟಿದ ವರ್ಷ. ನಗರದ ಆಡಳಿತ ಖಜಾನೆ ಖಾಲಿಯಾಗಿ ಅಧಿಕಾರಿ ವರ್ಗ ಕಂಗಾಲಾಗಿತ್ತು. ಇಂತಹ ಸಮಯದಲ್ಲಿಯೇ ಧೈರ್ಯ ಮಾಡಿ ಬೆಂಗಳೂರು–ತಿಪಟೂರು ರೈಲು ಕಾಮಗಾರಿಯನ್ನು ಆರಂಭಿಸಿದವರು ದಿವಾನ್ ರಂಗಾಚಾರ್ಲು. ಇದೇ ಅವಧಿಯಲ್ಲಿ ಅವರು ಬೆಂಗಳೂರು–ಮೈಸೂರು ರೈಲು ಕಾಮಗಾರಿಯನ್ನು ಪೂರ್ಣಗೊಳಿಸಿದರು. ಅಲ್ಲದೇ ಬೆಂಗಳೂರು ರಸ್ತೆ, ಅಂಚೆ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ನೀರಿನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರು. 1881ರಲ್ಲಿ ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿದರು.

ಶೇಷಾದ್ರಿ ಅಯ್ಯರ್
ನಂತರ ಬಂದು ಅತ್ಯಂತ ಮಹತ್ವದ ಕೆಲಸ–ಕಾರ್ಯಗಳನ್ನು ಕೈಗೆತ್ತಿಕೊಂಡಿರುವ ದಿವಾನರಲ್ಲಿ ಶೇಷಾದ್ರಿ ಅಯ್ಯರ್ ಅವರ ಹೆಸರು ಬರುತ್ತದೆ. 1889ರಲ್ಲಿ ಬೆಂಗಳೂರು–ಹರಿಹರ ರೈಲು ಆರಂಭಿಸಿದರು. 1890ರಲ್ಲಿ ನೇತ್ರ ಚಿಕಿತ್ಸಾಲಯವನ್ನು ಸ್ಥಾಪಿಸಿದರು. ಬಸವನಗುಡಿ ಹಾಗೂ ಮಲ್ಲೇಶ್ವರ ಬಡಾವಣೆಗಳ ಕಾರ್ಯಾರಂಭ ಮಾಡಿದ್ದೂ ಇವರ ಅವಧಿಯಲ್ಲಿಯೇ (1892).
ನಂತರ 1894ರಲ್ಲಿ ಶೇಷಾದ್ರಿ ಅಯ್ಯರ್ ಅವರು ಲಾಲ್‌ಬಾಗ್ ಹಾಗೂ ಕಬ್ಬನ್ ಪಾರ್ಕ್‌ನಲ್ಲಿ ಚಾಮರಾಜ ಒಡೆಯರ ಮತ್ತು ಕಬ್ಬನ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಇದೆಲ್ಲಕ್ಕಿಂತ ಮುಖ್ಯವಾಗಿ, 1900ರಲ್ಲಿ ಪ್ರಥಮ ವಿದ್ಯುತ್ ಉತ್ಪಾದನೆಯಂತಹ ಮಹತ್ಕಾರ್ಯಕ್ಕೆ ಮುಂದಾದವರು ದಿವಾನ್ ಶೇಷಾದ್ರಿ. ಬೆಂಗಳೂರಿಗೆ ಪ್ಲೇಗ್ ಬಂದ ನಂತರ, 1898ರಲ್ಲಿ ಅವರು ನಡೆಸಿದ ಬೆಂಗಳೂರು ಶುದ್ಧೀಕರಣ ಕಾರ್ಯಗಳು ಅಪಾರ ಜನ ಮೆಚ್ಚುಗೆ ಗಳಿಸಿದವು. ಬೆಂಗಳೂರಿನ ಶೇಷಾದ್ರಿಪುರ, ಶೇಷಾದ್ರಿ ರಸ್ತೆ, ಶೇಷಾದ್ರಿ ಸ್ಮಾರಕ ಭವನ ಇವೆಲ್ಲ ಶೇಷಾದ್ರಿ ಕಾರ್ಯವೈಖರಿಗೆ ಸಾಕ್ಷಿ.

ವಿ.ಪಿ.ಮಾಧವರಾಯ
1906-09ರವರೆಗೆ, ಅಂದರೆ ಮೂರು ವರ್ಷಗಳ ಕಾಲ ವಿ.ಪಿ.ಮಾಧವರಾಯರು ದಿವಾನರಾಗಿದ್ದರು. 1906ರಲ್ಲಿ ಬೆಂಗಳೂರು–ಚಿಕ್ಕಬಳ್ಳಾಪುರ ರೈಲು ಓಡಾಡುವಂತೆ ಮಾಡಿದರು. 1907ರಲ್ಲಿ ಶಂಕರಮಠವನ್ನು ಸ್ಥಾಪಿಸಿದರು.  ನಂತರ ಕೃಷ್ಣರಾಜೇಂದ್ರ ರಸ್ತೆ ನಿರ್ಮಾಣ ಮಾಡಿದರು. ಹೆಸರುಘಟ್ಟದಿಂದ ತಂದ ನೀರನ್ನು ಶೇಖರಿಸಲು ಸ್ಯಾಂಕಿ ರಿಸರ್ವಾಯವನ್ನು ನಿರ್ಮಾಣ ಮಾಡಿದ್ದೂ ಮಾಧವರಾಯರೇ. 

ಟಿ.ಆನಂದರಾಯ
1909–12ರವರೆಗೆ ದಿವಾನರಾಗಿದ್ದವರು ಟಿ.ಆನಂದರಾಯರು. ಮೊದಲ ವರ್ಷದಲ್ಲಿಯೇ ಅವರು ಮಲ್ಲೇಶ್ವರದಲ್ಲಿ ಕೆಂಪು ಚೆಲುವಾಜಮ್ಮಣ್ಣಿ ಆಸ್ಪತ್ರೆಯನ್ನು ಆರಂಭಿಸಿದರು. ಯಶವಂತಪುರಕ್ಕೆ ಜ್ಯೂಯೆಲ್ ಫಿಲ್ಟರುಗಳು ಬಂದವು. ಮೈಸೂರು–ಅರಸೀಕೆರೆ ರೈಲು ಆರಂಭವಾಯಿತು.

ಸರ್.ಎಂ.ವಿಶ್ವೇಶ್ವರಯ್ಯ
ನಂತರ ಬಂದವರೇ ಸರ್.ಎಂ.ವಿಶ್ವೇಶ್ವರಯ್ಯ (1912ರಿಂದ 1919). ಮೈಸೂರು ಮಾದರಿ ರಾಜ್ಯವಾಗಿದ್ದು ಇವರ ಕಾಲದಲ್ಲಿಯೇ. ದಿನಾನರು ಎನ್ನುವ ಹೆಸರಿಗೇ ಒಂದು ಘನತೆಯನ್ನು ತಂದು ಕೊಟ್ಟವರು ವಿಶ್ವೇಶ್ವರಯ್ಯ.

ಅದಾಗಲೇ ಮೊದಲಿನ ದಿವಾನರು ಅನೇಕ ಪ್ರಮುಖ ಪ್ರಗತಿಪರ ಕೆಲಸಗಳನ್ನು ಕೈಗೆತ್ತಿಕೊಂಡಿದ್ದರೂ, ವಿಶ್ವೇಶ್ವರಯ್ಯ ಇಡೀ ದೇಶಕ್ಕೆ ಮಾದರಿ ಎನಿಸುವ ಕಾರ್ಯಗಳಿಗೆ ಚಾಲನೆ ನೀಡಿದರು. ಅಭಿವೃದ್ಧಿ ಕೆಲಸಗಳು ಮಾತ್ರವಲ್ಲ, ಬೆಂಗಳೂರನ್ನು ಒಂದು ಸುಂದರ ನಗರವನ್ನಾಗಿ ಮಾಡಲೂ ಇವರು ಅನೇಕ ಯೋಜನೆಗಳನ್ನು ಹಾಕಿಕೊಂಡರು. 1913ರಲ್ಲಿ ಮೈಸೂರು ಬ್ಯಾಂಕಿಗೆ ಚಾಲನೆ ನೀಡಿದರು. ಅದೇ ವರ್ಷ ಮೆಕ್ಯಾನಿಕಲ್ ಎಂಜಿನಿಯರಿಂಗ್ ಶಾಲೆ ಸ್ಥಾಪಿಸಿದರು. 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆರಂಭಿಸಿದರು. 1916ರಲ್ಲಿ ಮೈಸೂರು ವಿಶ್ವವಿದ್ಯಾಲಯ  ಹಾಗೂ ಮೈಸೂರು ಚೇಂಬರ್ ಆಫ್ ಕಾಮರ್ಸ್ ಸಾಬೂನು ಮತ್ತು ಗಂಧದ ಎಣ್ಣೆಯ ಕಾರ್ಖಾನೆಗಳನ್ನು ಆರಂಭಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

1881ರಿಂದ 1947ರ ನಡುವಿನ 66 ವರ್ಷಗಳ ಅವಧಿಯಲ್ಲಿ ದಿವಾನರಾಗಿ ಕಾರ್ಯಭಾರ ನಡೆಸಿದ  13 ದಿವಾನರ ಹೆಸರು ಮತ್ತು ಕಾಲಮಾನ.
ದಿವಾನ್ ರಂಗಾಚಾರ್ಲು 1881–1882
ಕೆ.ಶೇಷಾದ್ರಿ ಐಯ್ಯರ್ 1883–1901
ಟಿ.ಆರ್.ವಿ. ತಂಬೂಚೆಟ್ಟಿ 1901
ಪಿ.ಎನ್.ಕೃಷ್ಣಮೂರ್ತಿ 1901–1906
ವಿ.ಪಿ.ಮಾಧವರಾವ್ 1906–1909
ಟಿ.ಆನಂದ್‌ರಾವ್ 1909–1912
ಸರ್ ಎಂ.ವಿಶ್ವೇಶ್ವರಯ್ಯ 1912–1919
ಸರದಾರ್ ಎಂ.ಕಾಂತರಾಜ್ ಅರಸ್ 1919–1922
ಸರ್ ಅಲ್‌ ಬಿಯಾನ್ ಬ್ಯಾನರ್ಜಿ  1922–1926
ಸರ್ ಮಿರ್ಜಾ ಇಸ್ಮಾಯಿಲ್ 1926–1941
ಹಂಗಾಮಿ ದಿವಾನ ಸರ್   
   ಎಂ.ಎನ್.ಕೃಷ್ಣರಾವ್,
   ಎನ್.ಮಾಧವರಾವ್ 1941–1946
ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್ 1946–47

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT