ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಗಾಡಿ, ಇನ್ನು ಚಿಂತೆ ಬಿಡಿ

Last Updated 4 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಸೆಕ್ಯುರಿಟಿ ಗಾರ್ಡ್ ಕೆಲಸ. ಬೆಳಿಗಿನಿಂದ ನಿಲ್ಲಬೇಕು... ದಿನವಿಡೀ ಕೆಲಸ. ತುಂಬಿದ ಬಸ್‌ನಲ್ಲಿ ನುಗ್ಗಿಕೊಂಡು ಹೋಗಿ ಟಿಕೆಟ್ ಕೊಡಬೇಕು...

ಹಗಲು ರಾತ್ರಿ ಎನ್ನದೆ ದುಡಿಯಬೇಕಾದದ್ದು ಪೊಲೀಸ್ ಕೆಲಸ. ಟ್ರಾಫಿಕ್ ಪೊಲೀಸ್ ವೃತ್ತಿಯೂ ಸುಲಭದ್ದೇನಲ್ಲ ಬಿಡಿ.

ಇನ್ನು ಮೈಮುರಿದು ಪರಿಶ್ರಮ ಪಟ್ಟು ಮಾಡುವ ಕೆಲಸ ಬೇಕಾದಷ್ಟಿದೆ. ಎಲ್ಲದರಲ್ಲೂ ಮಹಿಳೆಯರಿದ್ದಾರೆ. ಕಷ್ಟ, ದುಃಖ, ನೋವುಗಳನ್ನು ಸಹಿಸಿಕೊಂಡು ಒಪ್ಪಿಕೊಂಡ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಆಕೆ ವಾಹನಗಳನ್ನು ಚಲಿಸುವುದರಲ್ಲೂ ಹಿಂದೆ ಬಿದ್ದಿಲ್ಲ. ನಗರದಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಎಲ್ಲದಕ್ಕೂ ಪುರುಷರನ್ನು ಆಶ್ರಯಿಸಬೇಕಾದ ಸಂದರ್ಭಗಳು ಬೇಕಾದಷ್ಟಿವೆ. ಹೀಗಾಗಿ ಮಹಿಳಾ ಪ್ರಯಾಣಿಕರಿಗೆ ಚಾಲಕಿಯರನ್ನೇ ನೇಮಿಸಿಕೊಟ್ಟರೆ ಹೇಗಿರಬಹುದು ಎಂಬ ಚಿಂತನೆಯಿಂದ ನಗರಕ್ಕೀಗ ಕಾಲಿಡುತ್ತಿದೆ `ಏಂಜೆಲ್ ಸಿಟಿ ಕ್ಯಾಬ್ಸ್.'

ಆಗಸ್ಟ್ ಎರಡನೇ ವಾರದಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಗಿರುವ ಈ ಕ್ಯಾಬ್ ಸೇವೆಯ ರೂವಾರಿಗಳು ವಕೀಲರಾದ ಸೂರ್ಯ ಮುಕುಂದ್‌ರಾಜ್, ಬರಹಗಾರ ಮಂಜುನಾಥ್ ಅದ್ದೆ ಹಾಗೂ ರಿಯಲ್ ಎಸ್ಟೇಟ್ ವೃತ್ತಿಯಲ್ಲಿರುವ ವಿನಯ್.

ಮಹಿಳೆಯರಿಗಾಗಿ ವಿಶೇಷ ಹಾಗೂ ಹೊಸತನದ ಅವಕಾಶ ನೀಡಬೇಕು ಎಂದು ಯೋಚಿಸಿದ ಈ ಮೂವರಿಗೆ ಹೊಳೆದದ್ದು ಚಾಲಕಿಯರಿರುವ ಕ್ಯಾಬ್ ಸೇವೆ. ದೇಶದಲ್ಲೇ ಇದು ಮೊದಲ ಪ್ರಯತ್ನ ಎಂದು ಭಾವಿಸಿ ಖುಷಿಗೊಂಡಿದ್ದ ಇವರಿಗೆ ಸಂಶೋಧನೆ ಮೂಲಕ ತಿಳಿದದ್ದು ಪುಣೆ, ಮುಂಬೈ ಹಾಗೂ ದೆಹಲಿಯಲ್ಲೂ ಇಂಥ ಸೇವೆಗಳು ಈ ಮೊದಲೇ ಇದೆ ಎಂದು. ಆದರೆ ಅಲ್ಲಿರುವುದು ಮಹಿಳಾ ಮಾಲೀಕರು.

ಈ ವರ್ಷ ಮಾರ್ಚ್ ವೇಳೆಗೆ ಪ್ರಾರಂಭವಾದ ಯೋಜನೆಗೆ ಮೊದಲು ದಿಕ್ಕು ಸಿಕ್ಕಿದ್ದು ಬ್ಯಾನರ್ ಮೂಲಕ. ವಿಜಯನಗರದ ಸುತ್ತಮುತ್ತಲಲ್ಲಿ ಉಚಿತ ಚಾಲನಾ ತರಬೇತಿ ಹಾಗೂ ಉದ್ಯೋಗ ಎಂದು ಬ್ಯಾನರ್ ಅಂಟಿಸಲಾಗಿತ್ತು. `ಪ್ರಾರಂಭದಲ್ಲಿ ತುಂಬಾ ಪ್ರತಿಕ್ರಿಯೆಗಳು ಬಂದವು. ಸುಮಾರು 50 ಮಹಿಳೆಯರು ಬಂದರು. ಅವರಲ್ಲಿ 10 ಜನರನ್ನು ನಾವು ಆಯ್ಕೆ ಮಾಡಿದೆವು. ಈಗ ಆರು ಜನ ತರಬೇತಿ ಮುಗಿಸಿದ್ದಾರೆ. ಇನ್ನೊಬ್ಬರು ಭಾರತಿ. ಅವರಿಗೆ ಐದು ವರ್ಷದ ಅನುಭವವಿದೆ. ಇವರಿಗೆ ನಾವೇ ಕಲ್ಯಾಣಿ ಮೋಟಾರ್ಸ್‌ನಲ್ಲಿ ರೂ5500 ಶುಲ್ಕ ನೀಡಿ ಚಾಲನಾ ತರಬೇತಿ ಕೊಡಿಸಿದ್ದೇವೆ. ಮುಂಬೈನಲ್ಲಿ ಐಐಎಂನಲ್ಲಿ ಅಧ್ಯಾಪಕರಾಗಿದ್ದ ಮಂಜುನಾಥ್ ಎನ್ನುವವರಿಂದ ಸಂವಹನ ಕೌಶಲ, ಸ್ಪೋಕನ್ ಇಂಗ್ಲಿಷ್, ವ್ಯಕ್ತಿತ್ವ ವಿಕಸನ ತರಬೇತಿಗಳನ್ನು ಕೊಡಿಸಿದ್ದೇವೆ' ಎಂದು ಮಾಹಿತಿ ನೀಡುತ್ತಾರೆ ಸೂರ್ಯ.

ಪ್ರಾರಂಭದ ಹಂತದಲ್ಲಿ ರಾತ್ರಿ 10.30 ಗಂಟೆಯವರೆಗೆ ಸೇವೆ ನೀಡಲಾಗುತ್ತದೆ. ಮಹಿಳೆಯರಿಗೆ ಮಾತ್ರ ಸೇವೆ. ಹೀಗಾಗಿ ಕೆಲವರು ರಾತ್ರಿ ಪಾಳಿಯಲ್ಲಿ ಗಾಡಿ ಓಡಿಸಲೂ ಒಪ್ಪಿಕೊಂಡಿದ್ದಾರೆ. ಜನರ ಪ್ರತಿಕ್ರಿಯೆಯನ್ನು ಮೊದಲು ವೀಕ್ಷಿಸುತ್ತೇವೆ ಎನ್ನುವ ಅವರು ಸುರಕ್ಷತೆಯ ದೃಷ್ಟಿಯಿಂದ ತಕ್ಷಣವೇ ರಾತ್ರಿ ಕ್ಯಾಬ್ ಸೇವೆ ನೀಡುವುದಿಲ್ಲವಂತೆ.

ಬೆಂಗಳೂರಿನಲ್ಲಿ ಮಾತ್ರ ನೀಡಲು ಉದ್ದೇಶಿಸಲಾಗಿರುವ ಈ ಸೇವೆ ವಿಮಾನ ನಿಲ್ದಾಣದಿಂದ ಪಿಕಪ್ ಹಾಗೂ ಡ್ರಾಪ್ ಮತ್ತು ಪ್ರದೇಶಾವಾರು ಸೇವೆಯನ್ನು ನೀಡಲಿದೆ. ನಗರದ ಕೆಲ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸುವವರು ಪಿಕಪ್ ಹಾಗೂ ಡ್ರಾಪ್ ಸೇವೆಯನ್ನು ನೀಡುವಂತೆ ಕೇಳಿಕೊಂಡಿದ್ದಾರಂತೆ. ಈಗಾಗಲೇ ವೆಬ್‌ಸೈಟ್ ಅನ್ನು ಪ್ರಾರಂಭಿಸಿದ್ದು ಅಲ್ಲಿ ಕೂಡ ಕ್ಯಾಬ್‌ಸೇವೆಯನ್ನು ಕಾಯ್ದಿರಿಸಬಹುದಾಗಿದೆ.

ಕೇವಲ ಮಹಿಳೆಯರೇ ಚಲಿಸುವ ಈ ಕ್ಯಾಬ್‌ನಲ್ಲಿ ರಕ್ಷಣೆ ಎಷ್ಟರಮಟ್ಟಿಗೆ ಸಾಧ್ಯ ಎಂಬ ಅನುಮಾನ ಕಾಡುವುದೂ ಸಹಜವೇ. ಈ ಬಗ್ಗೆ ಉತ್ತರಿಸಿದ ಸೂರ್ಯ, `ಕಾರಿನಲ್ಲಿ ಜಿಪಿಎಸ್ ಅಳವಡಿಸಲಾಗಿದೆ. ಕಾರಿನ ಚಲನೆ, ಎಲ್ಲಿ ಹೋಗುತ್ತಿದೆ ಎಂಬ ಸಂಪೂರ್ಣ ಮಾಹಿತಿ ಕಚೇರಿಗೆ ತಲುಪುತ್ತಿರುತ್ತದೆ. ರಕ್ಷಣೆಗಾಗಿ ಪೆಪ್ಪರ್ ಸ್ಪ್ರೇ ನೀಡಲಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಕೂಡಲೇ ಕಚೇರಿಗೆ ಮಾಹಿತಿ ರವಾನೆ ಮಾಡುವ ಪ್ಯಾನಿಕ್ ಬಟನ್ ಅಳವಡಿಸುವ ಯೋಜನೆ ಇದೆ. ಆ ಕುರಿತು ಅಪ್ಲಿಕೇಶನ್‌ಅಭಿವೃದ್ಧಿಪಡಿಸಲಾಗುತ್ತಿದೆ. ಸೇವೆ ಪಡೆಯುತ್ತಿರುವವರ ಸಂಬಂಧಿಕರಿಗೆ ಪ್ರಯಾಣಿಸುತ್ತಿರುವವರು ಯಾವ ಜಾಗದಲ್ಲಿದ್ದಾರೆ, ಇನ್ನಿತರ  ಸಂದೇಶಗಳು ಆಗಿಂದಾಗ ರವಾನೆಯಾಗುತ್ತವೆ. ಸುರಕ್ಷತಾ ದೃಷ್ಟಿಯಿಂದ ಉತ್ತಮ ಎಂದು ಭಾವಿಸುತ್ತೇನೆ' ಎನ್ನುತ್ತಾರೆ.

ಮಹಿಳೆಯರ ಸುರಕ್ಷತೆಗಾಗಿ ಪ್ರಾರಂಭಿಸುವ ಸೇವೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತದೆ ಎಂಬ ನಂಬಿಕೆ ಮಾಲೀಕರಿಗಿದೆ. ಅದೂ ಅಲ್ಲದೆ ಉಳಿದ ಕ್ಯಾಬ್ ಸೇವೆಗಳಲ್ಲಿ ಮಾಲೀಕರಿಗೆ ಲಾಭವಿಲ್ಲ. ಪುರುಷರು ಪೆಟ್ರೋಲ್ ಕದಿಯುತ್ತಾರೆ, ಸುಳ್ಳು ಮಾಹಿತಿ ನೀಡುತ್ತಾರೆ ಎಂಬ ಆಪಾದನೆಗಳೂ ಇವೆ. ಆದರೆ ಮಹಿಳೆಯರಿಗೆ ಸಭ್ಯತೆ ಜಾಸ್ತಿ. ಆರ್ಥಿಕವಾಗಿ ಹಿಂದುಳಿದವರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ವೃತ್ತಿಬದ್ಧತೆ ಇರುವವರನ್ನು ಚಾಲಕಿಯರನ್ನಾಗಿ ಆಯ್ಕೆ ಮಾಡಲಾಗಿದೆ.

`ಪುರುಷ ಪ್ರಾಧಾನ್ಯ ಇರುವ ಕ್ಷೇತ್ರವೇ ಆದರೂ ಮಹಿಳೆಯರು ಇಲ್ಲಿ ಯಶಸ್ವಿಯಾಗುತ್ತಾರೆ. ಕಂಡಕ್ಟರ್, ಪೊಲೀಸ್, ಸೆಕ್ಯುರಿಟಿ ಗಾರ್ಡ್ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಮೊದಲು ಪುರಷರೇ ಹೆಚ್ಚಿದ್ದರು. ಆದರೆ ಈಗ ಮಹಿಳೆಯರು ಆ ಎಲ್ಲಾ ವೃತ್ತಿಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿಲ್ಲವೇ? ಹೀಗಾಗಿ ಅವಕಾಶ ಕಲ್ಪಿಸುವ ಕೆಲಸ ನಮ್ಮಿಂದಾಗಬೇಕು' ಎನ್ನುತ್ತಾರೆ ಸೂರ್ಯ.

ಅಂದಹಾಗೆ, ಉಳಿದೆಲ್ಲಾ ಕ್ಯಾಬ್ ಸೇವೆಗಳಲ್ಲಿ ಯಾವ ರೀತಿಯ ಶುಲ್ಕವಿದೆಯೋ ಅದೇ ರೀತಿಯ ಶುಲ್ಕ ಇಲ್ಲಿ ಪಡೆಯಲಾಗುತ್ತದೆ.

ಮಕ್ಕಳು ಸಾಧಿಸಬೇಕು
ಎಸ್ಸೆಸ್ಸೆಲ್ಸಿ ಓದಿರುವ ಹರಿಣಿ ಚಾಲಕಿಯರಲೊಬ್ಬರು. ಇಬ್ಬರು ಪುಟಾಣಿ ಮಕ್ಕಳಿದ್ದಾರೆ. ಹೊಸತನ್ನು ಸಾಧಿಸಬೇಕು ಎಂಬ ಆಸೆಯಿಂದ ಹೊಸ ವೃತ್ತಿಗೆ ತೆರೆದುಕೊಂಡಿದ್ದಾರೆ.

`ಮೊದಲಿನಿಂದ ದ್ವಿಚಕ್ರ ವಾಹನ ಓಡಿಸುತ್ತಿದ್ದೆ. ಈಗ ಕಾರು ಕಲಿತಿದ್ದೇನೆ. ಹೆದರಿಕೆ ಏನೂ ಇಲ್ಲ. ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳ ಮೇಲೆ ಅಪರಾಧಗಳು ಹೆಚ್ಚಾಗುತ್ತಿವೆ. ಹೀಗಾಗಿ ಹೆಣ್ಣುಮಕ್ಕಳಿಗೆ ಹೆಣ್ಣುಮಕ್ಕಳೇ ಸಹಾಯ ಮಾಡಿದರೆ ಒಳ್ಳೆಯದು ಎನಿಸಿತು. ಹೆಚ್ಚಿನ ರಕ್ಷಣೆ ಇರುವುದರಿಂದ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ಬರುತ್ತದೆ ಎಂಬ ನಂಬಿಕೆಯಿದೆ. ಸವಾಲಿನ ಕೆಲಸ ಧೈರ್ಯದಿಂದ ಮಾಡಿದರೆ ಯಶಸ್ವಿಯಾಗುತ್ತೇವೆ' ಎನ್ನುತ್ತಾರೆ ಹರಿಣಿ.

`ಅಡುಗೆ ಮಾಡು, ಊಟ ಬಡಿಸು, ಪಾತ್ರೆ ತೊಳೆ ಇದಿಷ್ಟೇ ನಮ್ಮ ಬದುಕಾಯ್ತು. ನಮ್ಮ ಮಕ್ಕಳಾದರೂ ಹೊಸತನ್ನು ಸಾಧಿಸಲಿ. ಗಾಡಿ ಓಡಿಸ್ತಿದ್ಲು. ಕಾರ್ ಓಡಿಸೊ ಕೆಲಸ ಅಂದ್ಲು. ಮಾಡು ಎಂದೆ. ಇವಳಿಗೂ ಇಬ್ಬರು ಪುಟಾಣಿ ಮಕ್ಕಳಿದ್ದಾರೆ. ಹೀಗಾಗಿ ರಾತ್ರಿ ಪಾಳಿ ಬೇಡ ಎಂದಿದ್ದೇನೆ. ನನ್ನ ಥರವೇ ಮನೆಯೇ ಬದುಕಾಗುವುದು ಬೇಡ. ನಾಲ್ಕು ಜನರ ಪರಿಚಯ ಆಗಲಿ. ಓಡಾಡಲಿ. ಹೆಣ್ಣುಮಕ್ಕಳಿಗೂ ಇದರಿಂದ ರಕ್ಷಣೆ ಸಿಗುತ್ತದೆ' ಎನ್ನುತ್ತಾರೆ ಹರಿಣಿ ಅವರ ಅಮ್ಮ ಅನಂತಲಕ್ಷ್ಮಿ.

ನಾವು ಹೆದರಬಾರದು
ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಇದ್ದಾರೆ. ಆದರೆ ಚಾಲನೆಯ ವಿಷಯದಲ್ಲಿ ಬಂದರೆ ಹೆದರಿಸುವುದು, ಬೇಕೆಂದೇ ಗಾಡಿಗೆ ಬಂದು ಡಿಕ್ಕಿ ಹೊಡೆದಂತೆ ಮಾಡುವುದು ಎಲ್ಲಾ ಮಾಡುವುದು ಸಾಮಾನ್ಯ. ಇಂಥ ಸಂದರ್ಭಗಳಲ್ಲಿ ನಾವು ಹೆದರಿಕೊಳ್ಳದೆ ಮುಂದುವರೆಯಬೇಕು. ಸುಮಾರು ಐದು ವರ್ಷಗಳ ಅನುಭವವಿದೆ ನನಗೆ. ನಾನು ಕಚೇರಿಯೊಂದರಲ್ಲಿ ಚಾಲಕಿಯಾಗಿ ಕೆಲಸ ಮಾಡಿದ್ದೇನೆ. ಆಗಿನ ಅನುಭವಗಳು ನನ್ನನ್ನು ಇನ್ನಷ್ಟು ಗಟ್ಟಿಯಾಗಿಸಿವೆ.

ಮೊದಲಿಗೆ ನಮ್ಮಲ್ಲಿ ನಮಗೆ ವಿಶ್ವಾಸ ಇರಬೇಕು. ಇದು ಪುರುಷ ಪ್ರಧಾನ ಜಗತ್ತು. ಮಹಿಳೆಯರಿಗೆ ಇಂಥದ್ದೇ ಕ್ಷೇತ್ರ ಎಂದು ಮೊದಲೇ ನಿಗದಿ ಮಾಡಿಟ್ಟುಬಿಟ್ಟಿದ್ದಾರೆ. ಆದರೆ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸಾಧಿಸಬಲ್ಲರು ಎಂಬುದನ್ನು ತೋರಬೇಕು ಎಂಬ ಛಲದಿಂದ ಈ ವೃತ್ತಿಗೆ ಬಂದೆ.
- ಭಾರತಿ

ಕಚೇರಿ ವಿಳಾಸ: ವಿಳಾಸ: ಏಂಜಲ್ ಸಿಟಿ ಕ್ಯಾಬ್ಸ್, 53, ಸಿ.ವಿ.ಎಸ್. ನೆಸ್ಟ್, ಎನ್.ಜಿ.ಎಫ್. ಲೇಔಟ್, ಮಲ್ಲತ್ತಹಳ್ಳಿ ಕೆರೆ ರಸ್ತೆ, ಮಲ್ಲತ್ತಹಳ್ಳಿ, ಬೆಂ
-56,  www.angelcity cabs.com,  angelcitycabs@gmail.com. . ಆಸಕ್ತರು 98447 61197, 91648 67774 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT