ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗಮ ಸಂಗೀತದ ಸಂಕ್ಷಿಪ್ತ ಆಕರ

Last Updated 22 ಜೂನ್ 2013, 19:59 IST
ಅಕ್ಷರ ಗಾತ್ರ

ಐದಾರು ದಶಕಗಳ ಹಿಂದೆ ಬೆಂಗಳೂರು ಆಕಾಶವಾಣಿಯ ಭಾವಗೀತೆಗಳ ಕಾರ್ಯಕ್ರಮದಲ್ಲಿ ಮತ್ತೆ ಮತ್ತೆ ಕೇಳಿಬರುತ್ತಿದ್ದ ಹೆಸರು ಶ್ರಿಮತಿ ಎಚ್.ಆರ್. ಲೀಲಾವತಿ. ಸುಮಧುರ ಶಾರೀರ, ಧ್ವನಿಯ ಸಂದರ್ಭೋಚಿತ ಏರಿಳಿತ, ನಾದದ ಹಿನ್ನೆಲೆಯಲ್ಲಿ ಭಾವವನ್ನು ಅಭಿನಯಿಸಿ ತೋರಿಸಬಲ್ಲ ಶಬ್ದೋಚ್ಛಾರಣೆ, ಭಾವಗೀತೆಯ ಒಟ್ಟು ಆಶಯವನ್ನು ಪರಿಣಾಮಕಾರಿಯಾಗಿ ಸ್ಫುಟಗೊಳಿಸಬಲ್ಲ ರಾಗ, ಮೊದಲಾದವುಗಳಿಂದಾಗಿ ಅವರು ಹಾಡುತ್ತಿದ್ದ ಭಾವಗೀತೆಗಳು ಶ್ರೋತೃಗಳ ಮನಸ್ಸನ್ನು ತಕ್ಷಣ ಸೆರೆಹಿಡಿದು ಬಿಡುತ್ತಿದ್ದವು. ಬಹುಶಃ ಇದೇ ಕಾರಣದಿಂದಲೇ ಅವರು ಪಿ. ಕಾಳಿಂಗರಾಯರ ಜೊತೆ ಜೊತೆಗೇ ಪ್ರಸಿದ್ಧಿ ಪಡೆದ ಬಹುದೊಡ್ಡ ಸುಗಮ ಸಂಗೀತಗಾರರಾದರು.
 
`ಸುಗಮ ಸಂಗೀತದ ಹೆಜ್ಜೆ ಗುರುತುಗಳು' ಲೀಲಾವತಿಯವರು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಹತ್ತು ಲೇಖನಗಳ ಸಂಕಲನ. ಇದರಲ್ಲಿ ಒಂದು ಪ್ರಶ್ನೋತ್ತರವೂ ಸೇರಿದೆ. ಸಂಗೀತದ ಬಗೆಗೆ ಹೇಗೋ ಹಾಗೆ ಕಾವ್ಯದ ಬಗೆಗೂ ಕೆಲವು ಒಳನೋಟಗಳಿರುವ ಇಲ್ಲಿನ ಲೇಖನಗಳನ್ನು ಒಟ್ಟಿಗೆ ಓದಿದಾಗ ಸುಗಮ ಸಂಗೀತವನ್ನು ಕುರಿತ ಒಂದು ಅನೌಪಚಾರಿಕ ಇತಿಹಾಸ ಅನಾವರಣಗೊಳ್ಳುತ್ತದೆ. ಜೊತೆಗೆ ಸಂಗೀತದ ಈ ಪ್ರಕಾರದಲ್ಲಿ ಒಬ್ಬ ಉತ್ತಮ ಗಾಯಕಿಯ ಸ್ವಾನುಭವವೂ ಸೇರಿರುವುದರಿಂದ ಇಲ್ಲಿನ ಲೇಖನಗಳಿಗೊಂದು ಅಧಿಕೃತತೆ ಪ್ರಾಪ್ತವಾಗಿದೆಯೆನ್ನಬಹುದು.

`ಕಾವ್ಯ ಮತ್ತು ಸುಗಮ ಸಂಗೀತ' ಈ ಸಂಕಲನದ ಮೊದಲ ಲೇಖನ; ಕಾವ್ಯವೈವಿಧ್ಯವನ್ನು ಮನಗಾಣಿಸುವ, ಗಾಯನಕ್ಕೆ ಒಗ್ಗಬಲ್ಲ ಕೆಲವು ಕವನಗಳನ್ನು ವಿಶ್ಲೇಷಿಸುವ ಸುದೀರ್ಘ ಲೇಖನ. “ಲಲಿತ ಪದಬಂಧವುಳ್ಳ ಕವಿತೆಗಳು ಹಾಡಿಕೆಗೆ ಬಲು ಸೊಗಸು. ಲೀಲಾಜಾಲವಾಗಿ ತನಗೆ ತಾನೇ ಹಾಡಿಸಿಕೊಂಡು ಹೋಗುತ್ತವೆ. ಪದಲಾಲಿತ್ಯದಿಂದ ಹಾಡಿಕೆಗೆ ಮೆರುಗು. ಬರೀ ಕ್ಲಿಷ್ಟ ಪದಗಳು, ಒತ್ತಕ್ಷರಗಳು, ಉಚ್ಛಾರಣೆಗೆ ಕಷ್ಟವಾದ ಪದಪುಂಜಗಳಿದ್ದರೆ, ಸ್ವರ ಸಂಯೋಜನೆ ಮಾಡಿದರೂ ಆ ಹಾಡು ಕಿವಿಗಳಿಗೆ ಇಂಪಾಗಿ ಕೇಳಿಸುವುದಿಲ್ಲ. ಹಾಡಿದರೂ ಹಿತವೆನಿಸುವುದಿಲ್ಲ... ಹಾಗಾಗಿ ಹಾಡಿಕೆಗೆ ಸುಲಲಿತವಾದ ಪದಬಂಧ ಕೂಡ ಮುಖ್ಯವಾಗುತ್ತದೆ”.

ಈ ಮಾತನ್ನು ಸ್ಪಷ್ಟಪಡಿಸುವುದಕ್ಕಾಗಿ ಲೇಖಕಿ, ಗೋಪಾಲಕೃಷ್ಣ ಅಡಿಗರ `ಯಾವ ಮೋಹನ ಮುರಲಿ ಕರೆಯಿತು' ಕವನದ ಕೆಲವು ಚರಣಗಳನ್ನೂ ವಿ.ಕೃ. ಗೋಕಾಕರ `ಸೀಮಾಪ್ರಾಂತದಿ', `ಸ್ನಿಗ್ಧಸೌಮ್ಯ ಲಹರಿ ಕೊನ್ನಾರದಲ್ಲುಗಮಿಸಿ' ಕವನದ ಕೆಲವು ಚರಣಗಳನ್ನೂ ಉದಾಹರಿಸುತ್ತಾರೆ. ಇಂಥ ಉದಾಹರಣೆಗಳಿಂದ ಯಾವ ಕವನ ಹಾಡಬಹುದು, ಯಾವುದನ್ನು ಹಾಡಲಾಗದು, ಹಾಡಲಾಗದ್ದನ್ನು ಒಂದು ವೇಳೆ ಹಾಡಿದರೂ ಯಾಕೆ ಹಿತವಾಗದು ಎಂಬುದನ್ನು ವಿವರವಾಗಿ ಪರಿಶೀಲಿಸುತ್ತಾರೆ.  

ಗಾಯಕನೊಬ್ಬ ಹಾಡುವುದಕ್ಕೆಂದು ಆಯ್ಕೆ ಮಾಡಿಕೊಳ್ಳುವ ಕವನದಲ್ಲಿ ಗೇಯಗುಣವಂತೂ ಇರಲೇಬೇಕಷ್ಟೆ. ಈ ಗೇಯಗುಣ ಕವನದಲ್ಲೇ ಸ್ವಯಂಸಿದ್ಧವಾಗಿರಬೇಕು. ಯಾಕೆಂದರೆ “ರಾಗದ ಸ್ವರಗಳನ್ನು ಬರಿಯ `ಅ' ಕಾರ, `ಉ' ಕಾರಾದಿಗಳಲ್ಲಿ ಹಾಡುವುದರಿಂದ, ಬರಿಯ ರಾಗ ಸ್ವರೂಪದ ಅರಿವಾಗುತ್ತದೆ. ಆದರೆ ಕೇಳುವವರ ಮನಸ್ಸಿನಲ್ಲಿ ರಸವನ್ನು ಹುಟ್ಟಿಸಬೇಕಾದರೆ, ಈ ಸ್ವರ ಸಮುದಾಯಕ್ಕೆ ಸಾಹಿತ್ಯದ, ಅಂದರೆ ಕಾವ್ಯದ ನೆರವಿದ್ದರೆ ಸ್ವರ ಸಂಯೋಜನೆ ಹೆಚ್ಚು ಆನಂದಾನುಭೂತಿಯನ್ನು ಬಹಳ ಪ್ರಭಾವಕಾರಿಯಾಗಿ ನೀಡುತ್ತದೆ. ಪರಿಣಾಮಕಾರಿಯೂ ಆಗಿರುತ್ತದೆ. ಮಾತು ಧಾತು ಪರಸ್ಪರ ಪೂರಕ”.

ಲೀಲಾವತಿಯವರು ಕಾವ್ಯಕ್ಕೂ ಸುಗಮ ಸಂಗೀತಕ್ಕೂ ಇರುವ ನಿಕಟ ಬಾಂಧವ್ಯವನ್ನು ವಿವರಿಸುವುದು ಹೀಗೆ: “ಸುಗಮ ಸಂಗೀತಗಾರರಿಗೆ ಮೂಲ ದ್ರವ್ಯ ಕಾವ್ಯ. ಹಾಗಾಗಿ ಕಾವ್ಯವಿಲ್ಲದೆ ಸುಗಮ ಸಂಗೀತಗಾರರಿಗೆ ಅಸ್ತಿತ್ವವೇ ಇಲ್ಲ. ಶಾಸ್ತ್ರೀಯ ಸಂಗೀತದಲ್ಲಾದರೆ ಆಲಾಪನೆ, ಸ್ವರಪ್ರಸ್ತಾರ, ನೆರವಲು ಇತ್ಯಾದಿಗಳಿಂದ ರಂಜಿಸಬಹುದು. ಇದು ಕರ್ನಾಟಕ ಸಂಗೀತದ ರೀತಿ. ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತದಲ್ಲಂತೂ ಸಾಹಿತ್ಯ ಗೌಣಾತಿಗೌಣ. ಆದರೆ ಸುಗಮ ಸಂಗೀತಗಾರರಿಗೆ... ಕವಿತೆಯೇ ಪ್ರಧಾನ. ಇಲ್ಲಿ ಸಾಹಿತ್ಯದ ಭಾವಾರ್ಥಗಳಿಗೇ ಅಗ್ರಸ್ಥಾನ... ಅಂತಲೇ ಹೇಳುವುದು ಶಾಸ್ತ್ರೀಯ ಸಂಗೀತ ಪ್ರಧಾನವಾದರೆ, ಸುಗಮ ಸಂಗೀತ ಸಾಹಿತ್ಯ ಪ್ರಧಾನವಾದುದು ಎಂದು”. 

`ಸಾರಣೆ ಮತ್ತು ಅನುಸಾರಣೆ' ಎಂಬ ಲೇಖನಗಳಲ್ಲಿ ಸುಗಮ ಸಂಗೀತ ಬೆಳೆದು ಬಂದ ದಾರಿಯನ್ನೂ ಈ ಪ್ರಕಾರದಲ್ಲಿ ಯಶಸ್ವಿಯಾಗಿ ಹಾಡಿದ ಗಾಯಕ/ಗಾಯಕಿಯರನ್ನೂ ಸ್ಮರಿಸಲಾಗಿದೆ. ಸುಗಮ ಸಂಗೀತವೆನ್ನುವುದು ಕಳೆದ ಶತಮಾನದ ಮೂರನೆಯ ದಶಕದಲ್ಲಿ ಮರಾಠಿಯಲ್ಲಿ ಉಗಮವಾಯಿತು ಎನ್ನುವ ಲೇಖಕಿ, ಆರ್.ಎನ್. ಪರಾಡಕರ್, ಕುಮುದಿನಿ ಪೆಡ್ನೇಕರ್, ಮಾಲತಿ ಪಾಂಡೆ, ವಿನೋದಿನಿ ದೀಕ್ಷಿತ್ ಮೊದಲಾದ ಮರಾಠಿ ಗಾಯಕ/ಗಾಯಕಿಯರ ಸಾಧನೆಗಳನ್ನು ಉಲ್ಲೇಖಿಸುತ್ತಾರೆ.

ಮುಂದೆ ಕನ್ನಡ ಭಾವಗೀತೆಗಳನ್ನು ಹಾಡತೊಡಗಿದ ಕೆಲವರು ಮರಾಠಿ ಮಟ್ಟುಗಳನ್ನೇ ಅನುಸರಿಸಿದರು. ನಿದರ್ಶನಕ್ಕೆ ಸೀತಾ ಮುಲ್ಕಿಯವರು ಹಾಡಿದ `ಗಿಡಗಿಡದಲಿ ಹಾರಾಡುವ ಗಿಳಿಯೆ ನುಡಿನುಡಿ ಕನ್ನಡವ' ಎಂಬ ಹಾಡನ್ನು ನೋಡಬಹುದು. ಇದು ಒಂದು ಮರಾಠಿ ಹಾಡಿನ ಪಡಿಯಚ್ಚು. ಆಮೇಲೆ ಭೀಮಸೇನ ಜೋಶಿ, ಅಮೀರಬಾಯಿ ಕರ್ನಾಟಕಿ, ಜಯವಂತಿದೇವಿ ಹಿರೇಬೆಟ್, ತಾರಾ ಗದಗಕರ, ಸುಶೀಲಾ ಟೇಂಬೆ, ವಿಜಯ ದೇಸಾಯಿ, ಕಮಲಾ ಪಾಗೆ, ಮೋಹನ ಚಿತ್ತಾಲ, ಪಿ.ಆರ್. ಭಾಗವತ್, ಉಷಾಖಾಡಿಲ್‌ಕರ್, ದೇವಂಗಿ ಚಂದ್ರಶೇಖರ್ ಮೊದಲಾದವರು ಭಾವಗೀತೆಗಳನ್ನು ಹಾಡಿ ಸುಗಮ ಸಂಗೀತ ಒಂದು ಪರಂಪರೆಯಾಗಲು ಶ್ರಮಿಸಿದರು. 

ಕ್ರಮೇಣ ಸುಗಮ ಸಂಗೀತ ಹೆಚ್ಚು ಜನಪ್ರಿಯವಾಯಿತಷ್ಟೆ. ಇದಕ್ಕೆ ಆಕಾಶವಾಣಿ ನೀಡಿದ ಪ್ರೋತ್ಸಾಹ ಅಷ್ಟಿಷ್ಟಲ್ಲ. ಲೀಲಾವತಿಯವರು ಈ ಬಗ್ಗೆ ಐತಿಹಾಸಿಕ ನೋಟವೊಂದನ್ನು ಒದಗಿಸಿರುವುದಲ್ಲದೆ ಈ ಪ್ರಕಾರದಲ್ಲಿ ಮಹಿಳೆಯರು ಇಟ್ಟ ಮೊದಲ ಹೆಜ್ಜೆಗಳನ್ನೂ ಗುರುತಿಸಿದ್ದಾರೆ.
ಮೊದಲೇ ಹೇಳಿದಂತೆ ಇಲ್ಲಿರುವುದು ವಿವಿಧ ಸಂದರ್ಭಗಳಲ್ಲಿ ಬರೆದ ಲೇಖನಗಳು. ಹಾಗಾಗಿ ಕೆಲವು ವಿಷಯಗಳು, ಅಭಿಪ್ರಾಯಗಳು ಮತ್ತೆ ಮತ್ತೆ ಕಾಣಿಸಿಕೊಂಡಿವೆ. ಪುಸ್ತಕರೂಪದಲ್ಲಿ ಪ್ರಕಟಿಸುವಾಗ ಇವನ್ನು ಸ್ವಲ್ಪಮಟ್ಟಿಗೆ ನಿವಾರಿಸಬಹುದಿತ್ತು.

ಮತ್ತೆ ಭೀಮಸೇನ ಜೋಶಿ, ಪಿ. ಕಾಳಿಂಗರಾವ್, ಬಾಳಪ್ಪ ಹುಕ್ಕೇರಿ, ರತ್ನಮಾಲಾ, ಸಿ. ಅಶ್ವಥ್, ಹೀಗೆ ಕೆಲವರಾದರೂ ವಿಖ್ಯಾತರ ಗಾಯನ ಶೈಲಿ ಹೇಗೆ ವಿಶಿಷ್ಟ, ಅನನ್ಯ ಎಂಬುದನ್ನು ಸೋದಾಹರಣವಾಗಿ ವಿಶ್ಲೇಷಿಸಿದ್ದಿದ್ದರೆ ಈ ಕೃತಿ ಇನ್ನಷ್ಟು ಉಪಯುಕ್ತವಾಗುತ್ತಿತ್ತು. 
ಇವತ್ತು ಶ್ರೋತೃಗಳಿಂದ, ಸರ್ಕಾರಿ ಕೃಪಾಪೋಷಿತ ಅಕಾಡೆಮಿಗಳಿಂದ, ವಿವಿಧ ಸಂಘ ಸಂಸ್ಥೆಗಳಿಂದ, ಮಾಧ್ಯಮಗಳಿಂದ ಅಪರಿಮಿತ ಪ್ರಚಾರ, ಪ್ರೋತ್ಸಾಹಗಳನ್ನು ಪಡೆಯುತ್ತಿರುವ ಸುಗಮ ಸಂಗೀತದ ಸ್ಥಿತಿಗತಿ ಏನು?

“ಹಾಡುವವರ ಸಂಖ್ಯೆ ಹಿಂದಿಗಿಂತ ಈಗ ತುಂಬಾ ಹೆಚ್ಚಾಗಿದೆ. ಹಿಂದಿನಷ್ಟು ಸಾಧನೆ ಇಲ್ಲ... ನಾಲ್ಕು ಗೀತೆ ಹಾಡಲು ಬಂದವರೆಲ್ಲ ವೇದಿಕೆಯೇರುತ್ತಿದ್ದಾರೆ. ಇಲ್ಲಿ ವ್ಯಾಪಾರೀಕರಣ ಅತಿಯಾಗುತ್ತಿದೆ. ಧ್ವನಿ ಸುರುಳಿಗಳೇ ಗುರುಗಳಾಗುತ್ತಿವೆ. ಸಾಹಿತ್ಯ ಶುದ್ಧತೆಯ ಕಡೆಗೆ ಬಹಳ ಮಂದಿಗೆ ಗಮನವಿಲ್ಲ. ವೇದಿಕೆಗಳಲ್ಲಿ ಸುಗಮ ಸಂಗೀತಗಾರರ ಹಾಡಿಕೆಗಿಂತ ಪಕ್ಕವಾದ್ಯದವರ ಮೊಳಗೇ ಜೋರಾಗಿ ಸಾಹಿತ್ಯ ತಿಳಿಯುವುದೇ ಇಲ್ಲ...” ಎಂದಿದ್ದಾರೆ ಲೇಖಕಿ.

ಒಟ್ಟಿನಲ್ಲಿ ಸುಗಮ ಸಂಗೀತದ ಇತಿಹಾಸವನ್ನು ಸ್ಥೂಲವಾಗಿ ನಿರೂಪಿಸುವ ಜೊತೆಜೊತೆಗೇ ಈ ಪ್ರಕಾರದ ಸ್ವರೂಪವನ್ನೂ ಗುಣಲಕ್ಷಣಗಳನ್ನೂ ವಿಶದಪಡಿಸುವ ಈ ಕೃತಿ ತನ್ನ ಮಿತಿಯಲ್ಲೇ ಒಂದು ಸಂಕ್ಷಿಪ್ತ ಆಕರ ಗ್ರಂಥವಾಗಿದೆ ಎನ್ನಬಹುದು.
.....
ಸುಗಮ ಸಂಗೀತದ ಹೆಜ್ಜೆ ಗುರುತುಗಳು
ಲೇ: ಎಚ್.ಆರ್. ಲೀಲಾವತಿ
ಬೆಲೆ: ರೂ. 90
ಪ್ರ: ತಾರಿಣಿ ಪ್ರಕಾಶನ, ಕುವೆಂಪುನಗರ-ಸರಸ್ವತಿಪುರಂ, ಮೈಸೂರು- 09
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT