ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿ ಜ್ವರ ಇರಲಿ ಮುನ್ನೆಚ್ಚರ

Last Updated 9 ನವೆಂಬರ್ 2012, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಮಾಧ್ಯಮಗಳಲ್ಲಿ ಹಕ್ಕಿ ಜ್ವರದ ಸುದ್ದಿಗಳು ಹೆಚ್ಚಾಗಿ ಪ್ರಕಟವಾಗುತ್ತಿವೆ. ವೈಜ್ಞಾನಿಕವಾಗಿ ಹಕ್ಕಿ ಜ್ವರವನ್ನು ಹಕ್ಕಿ ಇನ್‌ಫ್ಲೂಯೆನ್‌ಜ ಅಥವಾ ಬರ್ಡ್ ಫ್ಲೂ ಎನ್ನುತ್ತಾರೆ. ಈ ಸೋಂಕಿಗೆ ಮುಖ್ಯ ಕಾರಣ ಎಚ್5ಎನ್ ಎಂಬ ಹೆಸರಿನ ವೈರಸ್. ಇದೊಂದು ತೀವ್ರ ಸಾಂಕ್ರಾಮಿಕ ಪಿಡುಗು.

ಕೋಳಿಗಳ ಗುಂಪಿನಲ್ಲಿ ಒಂದು ಕೋಳಿಗೆ ಸೋಂಕು ಅಂಟಿದ್ದರೂ ಸಾಕು 48 ಗಂಟೆಗಳ ಒಳಗೆ ಗುಂಪಿನ ಎಲ್ಲ ಕೋಳಿಗಳೂ ಸೋಂಕಿನಿಂದ ಸತ್ತೇ ಹೋಗುತ್ತವೆ. ಇತ್ತೀಚೆಗೆ ಬೆಂಗಳೂರಿನ ಹೆಸರಘಟ್ಟ ಫಾರಂಗಳಲ್ಲಿ ಈ ಕಾಯಿಲೆ ಕಂಡುಬಂದಿದೆ.

ಹಕ್ಕಿ ಜ್ವರ ಹೊಸದಾಗಿ ಹುಟ್ಟಿಕೊಂಡ ಕಾಯಿಲೆಯಲ್ಲ. ನೂರಾರು ವರ್ಷಗಳ ಹಿಂದೆಯೇ ಇಟಲಿಯಲ್ಲಿ ಹಕ್ಕಿ ಜ್ವರ ಕಂಡಿರುವುದಕ್ಕೆ ದಾಖಲೆ ಇದೆ. 1997ಕ್ಕೆ ಮುಂಚೆಯೇ ಕಾಯಿಲೆ ಅಲ್ಲಲ್ಲಿ ಮತ್ತು ಆಗಾಗ್ಗೆ ಪಿಡುಗಾಗಿ ಹರಡಿದೆ. 2003ರಲ್ಲಿ ದಕ್ಷಿಣ ಪೂರ್ವ ಏಷ್ಯಾದಲ್ಲಿ ಹರಡಿದ್ದ ಮಹಾಪಿಡುಗಿನಲ್ಲಿ ಕಾಯಿಲೆ ನಿಯಂತ್ರಿಸಲು ಒಂದೂವರೆ ಕೋಟಿ ಕೋಳಿಗಳನ್ನು ಕೊಲ್ಲಲಾಗಿದೆ. 2004ರಲ್ಲೂ ಮತ್ತೊಂದು ಸಣ್ಣ ಪಿಡುಗು ಉಂಟಾಗಿತ್ತು.

ಹಕ್ಕಿ ಜ್ವರ ಹೆಚ್ಚಾಗಿ ಹಕ್ಕಿಗಳಿಗೆ ಬರುತ್ತದೆ. ಕೆಲವೊಮ್ಮೆ ಹಂದಿಗಳಿಗೂ ಅಂಟುತ್ತದೆ. ಹೀಗಾಗಿ ಈ ಕಾಯಿಲೆ ಹಂದಿ ಜ್ವರ- ಹಕ್ಕಿ ಜ್ವರ ಎಂದೇ ಹೆಸರಾಗಿದೆ. ಕೋಳಿ, ಬಾತು, ಎಮು, ವಲಸೆ ಹಕ್ಕಿಗಳು ಹಾಗೂ ಹಂದಿಯನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಾಣಿಗಳಲ್ಲಿ ಈ ಕಾಯಿಲೆ ಕಂಡುಬಂದಿರುವ  ನಿದರ್ಶನಗಳಿಲ್ಲ.

ಮಾನವನಿಗೆ ಈ ಕಾಯಿಲೆ ಹತ್ತಿದ ಪ್ರಪ್ರಥಮ ಪ್ರಕರಣ 1997ರಲ್ಲಿ ಹಾಂಕಾಂಗ್‌ನಲ್ಲಿ ವರದಿಯಾಗಿದೆ. ಆಗ ಅಲ್ಲಿ 18 ಜನರಿಗೆ ಕಾಯಿಲೆ ತಗುಲಿದ್ದು, ಅದರಲ್ಲಿ ಆರು ಜನ ಬಲಿಯಾಗಿದ್ದರು. 2008ರ ಮಾರ್ಚ್‌ವರೆಗೆ 48 ದೇಶಗಳಲ್ಲಿ 372 ಜನರಿಗೆ ಹಕ್ಕಿ ಜ್ವರ ತಗುಲಿದೆ. ಅವರಲ್ಲಿ 235 ಮಂದಿ ಸಾವಿಗೀಡಾಗಿದ್ದಾರೆ.

ಸೋಂಕಿಗೆ ಒಳಗಾದ ಹಕ್ಕಿಯ ಮಲ, ಮೂತ್ರ, ಸಿಂಬಳ ಮತ್ತು ಉಸಿರು ರೋಗಾಣುಗಳಿಂದ (ವೈರಸ್) ತುಂಬಿರುತ್ತದೆ. ಹಕ್ಕಿ ವಾಸಿಸುವ ಸ್ಥಳ, ಅಲ್ಲಿನ ಗಾಳಿ, ಸಾಕಣೆಗೆ ಬಳಸುವ ಉಪಕರಣ ಎಲ್ಲವೂ ವೈರಸ್‌ಮಯವಾಗಿರುತ್ತವೆ. ಇವುಗಳ ಸಂಪರ್ಕಕ್ಕೆ ಬರುವ ಎಲ್ಲ ಪಕ್ಷಿಗಳಿಗೂ ಸೋಂಕು ತಗುಲುತ್ತದೆ. ಕೋಳಿ ಫಾರಂನಲ್ಲಿ ಒಂದು ಕೋಳಿಗೆ ಸೋಂಕು ಉಂಟಾದರೆ ಕೆಲವೇ ಗಂಟೆಗಳಲ್ಲಿ ಎಲ್ಲ ಕೋಳಿಗಳಿಗೂ ಕಾಯಿಲೆ ಅಂಟಿಕೊಳ್ಳುತ್ತದೆ. ಪಕ್ಷಿಗಳಿಗೆ ಹಂದಿಯಿಂದ, ಹಂದಿಗಳಿಗೆ ಪಕ್ಷಿಗಳಿಂದ ಸೋಂಕು ಅಂಟುವುದೂ ಉಂಟು. ಅತಿ ಅಪರೂಪವಾಗಿ ಪಕ್ಷಿಗಳ ಕಾಯಿಲೆ ಮಾನವನಿಗೆ ಅಂಟುವುದೂ ಇದೆ. ಹೀಗಾಗಿ ಕೋಳಿ ಫಾರಂನಲ್ಲಿ ಕೆಲಸ ಮಾಡುವವರು, ಕೋಳಿ ಸಾಕಿರುವ ಮನೆಯವರು ಹಕ್ಕಿ ಜ್ವರಕ್ಕೆ ಸೆರೆಯಾಗುತ್ತಾರೆ. ಪಕ್ಷಿಗಳನ್ನು, ಮೊಟ್ಟೆಯನ್ನು ಮಾರುವವರಿಗೂ, ಕತ್ತರಿಸುವವರಿಗೂ, ಕೋಳಿ ಮಾಂಸದ ಅಡುಗೆ ಮಾಡುವವರಿಗೂ ಹಕ್ಕಿ ಜ್ವರ ಅಂಟುವ ಸಂಭವ ಇರುತ್ತದೆ. ರೋಗಾಣುಗಳು ಮುಖ್ಯವಾಗಿ ಉಸಿರಾಡುವ ಗಾಳಿಯೊಂದಿಗೆ ಮಾನವನ ದೇಹ ಸೇರುತ್ತವೆ. ಮನುಷ್ಯನಿಗೆ ಅಂಟಿದ ಸೋಂಕು ಮತ್ತೊಬ್ಬರಿಗೆ ಅಂಟುವುದಿಲ್ಲ. ಹಾಗೇನಾದರೂ ಆಗಿದ್ದರೆ ಸೋಂಕು ಅತ್ಯಂತ ತೀವ್ರಗತಿಯಲ್ಲಿ ಹರಡಿ ಮನುಷ್ಯರ ಮಾರಣಹೋಮವೇ ನಡೆದುಹೋಗುತ್ತಿತ್ತು.

ವಲಸೆ ಹೋಗುವ ಹಕ್ಕಿ, ಸಮುದ್ರ ಪಕ್ಷಿ, ಅಂತರ ರಾಷ್ಟ್ರೀಯ ಆಮದು- ರಫ್ತಿಗೆ ಒಳಗಾಗುವ ಹಕ್ಕಿ, ಹಕ್ಕಿಯ ಉತ್ಪನ್ನಗಳು ವಿಶ್ವವ್ಯಾಪಿ ಹಕ್ಕಿ ಜ್ವರ ಹರಡಲು ಸಾಧನವಾಗುತ್ತವೆ. ಹಕ್ಕಿಯ ಮಲ, ಮೂತ್ರ, ಮೂಗಿನ ದ್ರವವನ್ನು ಪರೀಕ್ಷೆ ಮಾಡಿ ಕಾಯಿಲೆಯ ಇರುವಿಕೆಯನ್ನು ತಿಳಿಯಬಹುದು.

ಮುಂಜಾಗ್ರತೆ ಉಪಾಯ
ಹಕ್ಕಿ ಜ್ವರವನ್ನು ತಡೆಗಟ್ಟುವುದೆಂದರೆ ಎಚ್5ಎನ್ ವೈರಸ್‌ಗಳನ್ನು ನಾಶಪಡಿಸುವುದು ಎಂದರ್ಥ. ಹೀಗಾಗಿ ಯಾವುದೇ ಹಕ್ಕಿಗೆ ಜ್ವರ ಕಂಡರೆ ತಕ್ಷಣ ಸುತ್ತಮುತ್ತಲಿನ ಹಕ್ಕಿಗಳನ್ನೆಲ್ಲ (ಕೋಳಿ) ಹತ್ಯೆ ಮಾಡಬೇಕಾಗುತ್ತದೆ. ಹಕ್ಕಿ ಜ್ವರದ     ವೈರಸ್‌ಗಳನ್ನು ಅವುಗಳ ಸಿಂಬಳ, ಮಲ, ಮೂತ್ರ ಇತ್ಯಾದಿಗಳನ್ನು ಭೋಪಾಲದಲ್ಲಿರುವ ಪ್ರಯೋಗಾಲಯದಲ್ಲಿ ಪತ್ತೆ ಮಾಡಲಾಗುತ್ತದೆ.

ಹಕ್ಕಿ ಜ್ವರ ಕಂಡುಬಂದ ಸ್ಥಳಕ್ಕೆ ಭೇಟಿ ನೀಡುವವರು ತಮಗೆ ಕಾಯಿಲೆ ಬರದಂತೆ ತಡೆಯಲು ದಿನಕ್ಕೊಂದರಂತೆ ಏಳು ದಿನ `ಟ್ಯಾಮಿಫ್ಲೂ~ ಮಾತ್ರೆ ಸೇವಿಸ ಬೇಕಾಗುತ್ತದೆ. ಹಕ್ಕಿ ಜ್ವರ ನಿರೋಧಕ ಲಸಿಕೆ ಇದೆ. ಆದರೆ ಇದನ್ನು ಕಾಯಿಲೆ ಹರಡುವ ಮೊದಲೇ ತೆಗೆದುಕೊಳ್ಳಬೇಕಾಗುತ್ತದೆ. ಇದು ಅಷ್ಟು ಸುಲಭವಾಗಿ ಸಿಗುವಂತಹದ್ದಲ್ಲ.

ಕೋಳಿ ಸಾಕುವವರಿಗೆ ಹಕ್ಕಿ ಜ್ವರದ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಹಕ್ಕಿ ಸಾಕುವ ಸ್ಥಳದಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಹಕ್ಕಿ ಜ್ವರದಿಂದ ಸತ್ತ ಕೋಳಿಯನ್ನು ಐದಾರು ಪದರ ಸುಣ್ಣ ಹಾಗೂ ಮಣ್ಣು ಹಾಕಿ ಹೂಳಬೇಕು ಅಥವಾ ಸುಟ್ಟುಹಾಕಬೇಕು.

ಹಕ್ಕಿ ಜ್ವರ ಕಂಡುಬಂದ ಸಮಯದಲ್ಲಿ ಯಾರಿಗಾದರೂ ಅತಿಯಾದ ಜ್ವರ, ಉಸಿರಾಟದ ತೊಂದರೆ ಕಂಡರೆ ಅಲಕ್ಷಿಸದೆ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕು.

ಯಾವುದೇ ದೇಶವಾಗಲಿ ಹಕ್ಕಿ ಜ್ವರದ ಬಗ್ಗೆ ಕಣ್ಗಾವಲಿಡಬೇಕು ಮತ್ತು ಕಾಯಿಲೆ ಹತ್ತಿಕ್ಕಲು ಸಿದ್ಧತೆಗಳನ್ನು ಮಾಡಿಕೊಂಡಿರಬೇಕು.
 

ಲಕ್ಷಣಗಳು ಹೀಗಿರುತ್ತವೆ
ಹಕ್ಕಿ ಜ್ವರದ ಸೋಂಕಿಗೆ ಒಳಗಾಗುವ ವ್ಯಕ್ತಿಗಳಲ್ಲಿ 2-3 ದಿನದಲ್ಲಿ ರೋಗ ಲಕ್ಷಣಗಳು ಪ್ರಕಟವಾಗುತ್ತವೆ. ಅತಿಯಾದ ಜ್ವರ, ಕೆಮ್ಮು, ತಲೆನೋವು, ಉಸಿರಾಡಲು ತೊಂದರೆಯಾಗುವುದು ಕಾಯಿಲೆಯ ಲಕ್ಷಣಗಳು. ಎಕ್ಸ್‌ರೇ ಪರೀಕ್ಷೆಯಿಂದ ಎದೆಯಲ್ಲಿ ಉಂಟಾಗಿರುವ ಬದಲಾವಣೆಗಳು ಎದ್ದು ಕಾಣುತ್ತವೆ. ಹಕ್ಕಿ ಜ್ವರದಿಂದ ಸಾವುಂಟಾಗುವುದು ಉಸಿರಾಟ ನಿಲ್ಲುವುದರಿಂದ. ರೋಗಿಯ ಮೂಗು ಮತ್ತು ಗಂಟಲಿನ ದ್ರವವನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿ ರೋಗ ಅಂಟಿರುವುದನ್ನು ದೃಢಪಡಿಸಿಕೊಳ್ಳಬಹುದು.

ಟ್ಯಾಮಿಫ್ಲೂ ಮತ್ತು ರಿಲಿಂಜ್ ಎಂಬ ಔಷಧಿಗಳು ಉತ್ತಮ ಫಲಿತಾಂಶವನ್ನು ನೀಡುತ್ತವೆ. ಆದಾಗ್ಯೂ ಕಾಯಿಲೆ ಆರಂಭಗೊಂಡ 48 ಗಂಟೆಗಳೊಳಗೆ ಔಷಧಿ ಸೇವನೆ ಪ್ರಾರಂಭಿಸಿದರೆ ರೋಗದ ತೀವ್ರತೆ ಬಹಳಷ್ಟು ಕಡಿಮೆಯಾಗುತ್ತದೆ. ಸಾವು ಉಂಟಾಗುವ ಸಾಧ್ಯತೆ ಕ್ಷೀಣಿಸುತ್ತದೆ. ಈ ಔಷಧಿಯ ಜೊತೆ ಆ್ಯಂಟಿ ಬಯೊಟಿಕ್‌ಗಳು ಮತ್ತು ವೈದ್ಯರು- ದಾದಿಯರ ಶುಶ್ರೂಷೆ ಅತ್ಯಗತ್ಯ.

ಟ್ಯಾಮಿಫ್ಲೂ ಹಾಗೂ ರಿಲಿಂಜ್ ಮಾತ್ರೆಗಳು ಸುಲಭವಾಗಿ, ಸುಲಭದ ದರದಲ್ಲಿ ದೊರೆಯುವುದಿಲ್ಲ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆ ಸದಾ 3 ದಶಲಕ್ಷ  ಜನರಿಗೆ ಆಗುವಷ್ಟು ಔಷಧಿಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುತ್ತದೆ ಮತ್ತು ಅವಶ್ಯ ಬೀಳುವ ದೇಶಗಳಿಗೆ ತುರ್ತಾಗಿ ರವಾನಿಸುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT