ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು: ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆ

Last Updated 15 ಜುಲೈ 2013, 6:42 IST
ಅಕ್ಷರ ಗಾತ್ರ

ಹುಣಸೂರು : ಪಟ್ಟಣದ ಬೆಳವಣಿಗೆಗೆ ತಕ್ಕಂತೆ ಸೂಕ್ತ ತ್ಯಾಜ್ಯ ನಿರ್ವಹಣೆ ಮಾಡಲು ಹುಣಸೂರು ಪುರಸಭೆ ಸೂಕ್ತ ತಯಾರಿ ಮಾಡಿಕೊಂಡಿದೆ. ಪಟ್ಟಣದ ಹೊರವಲಯದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಿರುವುದು ಒಂದು ಸಾಧನೆ ಎಂದರೆ ತಪ್ಪಾಗಲಾರದು.

ನಗರದಿಂದ 4 ಕಿ.ಮಿ ದೂರದ ಹೊರ ವಲಯದಲ್ಲಿ 4 ಎಕರೆ ವಿಸ್ತೀರ್ಣದಲ್ಲಿ ರೂ 74 ಲಕ್ಷ ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ತಲೆ ಎತ್ತಿದ್ದು, ಕೆಲವೇ ದಿನಗಳಲ್ಲಿ  ಕಾರ್ಯ ಆರಂಭಿಸಲಿದೆ. ಪಟ್ಟಣದಲ್ಲಿ ಪ್ರತಿ ದಿನ 1 ಟನ್ ಘನತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಅದನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಸಮರ್ಪಕವಾಗಿ ವಿಲೇವಾರಿ ಮಾಡುವತ್ತ ಪುರಸಭೆ ಕ್ರಮ ಕೈಗೊಂಡಿರುವುದು ಪ್ರಶಂಸಾರ್ಹವಾಗಿದೆ.

ಈಗಾಗಲೇ ತ್ಯಾಜ್ಯ ಸಂಗ್ರಹ ನಡೆದಿದ್ದು, 3 ಶೆಡ್‌ಗಳನ್ನು ನಿರ್ಮಿಸಲಾಗಿದೆ. ಘಟಕವನ್ನು ಸಂಪರ್ಕಿಸುವ ರಸ್ತೆ ಡಾಂಬರಿಕರಣಗೊಳಿಸಿ, ಘಟಕದ ಸುತ್ತ ಸುವ್ಯವಸ್ಥಿತ    ತಂತಿಬೇಲಿ ನಿರ್ಮಿಸಿಲಾಗಿದೆ.

ಘನತ್ಯಾಜ್ಯ ವಿಂಗಡಿಸಲು ರೂ 10 ಲಕ್ಷ ವೆಚ್ಚದಲ್ಲಿ ಪ್ರತ್ಯೇಕ ಯಂತ್ರ ಸ್ಥಾಪಿಸಲಾಗಿದೆ. ಮತ್ತೊಂದು ಯಂತ್ರದ ನಿರೀಕ್ಷೆಯಲ್ಲಿರುವ ಅಧಿಕಾರಿಗಳು ಯಂತ್ರ ಬರುತ್ತಿದ್ದಂತೆ ಕಾರ್ಯ ಆರಂಭಿಸುವುದಾಗಿ ಮುಖ್ಯಾಧಿಕಾರಿ ಹರೀಶ್   ಹೇಳಿದ್ದಾರೆ.

ಘನತ್ಯಾಜ್ಯ ಸಂಸ್ಕರಣೆ ಹೇಗೆ?: ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಪ್ಲಾಸ್ಟಿಕ್ ತ್ಯಾಜ್ಯ ಪ್ರತ್ಯೇಕಗೊಳಿಸಿ ಸಂಸ್ಕರಿಸಲಾಗುವುದು. ಈ ಪ್ಲಾಸ್ಟಿಕ್   ಖರೀದಿಸುವ ಕೆಲ ಕಂಪನಿಗಳಿವೆ. ಇವುಗಳನ್ನು ರಬ್ಬರ್ ಮತ್ತು ರಸ್ತೆ ನಿರ್ಮಾಣದಲ್ಲಿ ಬಳಸಲಾಗುತ್ತದೆ. ತ್ಯಾಜ್ಯ ಘಟಕದಿಂದ ಪ್ಲಾಸ್ಟಿಕ್ ಖರೀದಿಸಲು ಈಗಾಗಲೇ ಕೆಲ      ಕಂಪನಿಗಳು ಮುಂದೆ ಬಂದಿವೆ.

ಕರಗಬಲ್ಲ ತ್ಯಾಜ್ಯಗಳಿಗೆ ಎರೆಹುಳು ಬಿಟ್ಟು ಗೊಬ್ಬರ ತಯಾರಿಸಲಾಗುತ್ತದೆ. ಈ ಗೊಬ್ಬರ ಖರೀದಿಸಲು ಹುಬ್ಬಳ್ಳಿ ಮೂಲದ ಕಂಪನಿ ಮುಂದಾಗಿದೆ.

ರಾಜ್ಯ ಸರ್ಕಾರದ 12 ಮತ್ತು 13ನೇ ಹಣಕಾಸು ಯೋಜನಯಲ್ಲಿ ಈಗಾಲೇ 2 ಟ್ರಾಕ್ಟರ್ ಖರೀದಿಸಲಾಗಿದೆ. ಹೆಚ್ಚುವರಿಯಾಗಿ ಇನ್ನೊಂದು ಟ್ರಾಕ್ಟರ್ ಖರೀದಿಸುವ ಅಗತ್ಯವಿದೆ. ಇದಲ್ಲದೆ ಪಟ್ಟಣದಲ್ಲಿ ತ್ಯಾಜ್ಯ ಸಂಗ್ರಹಿಸಲು 18 ದೊಡ್ಡ ಕಂಟೇನರ್‌ಗಳನ್ನು ಖರೀದಿಸಿ ಪ್ರತಿ ವಾರ್ಡ್‌ಗಳಲ್ಲಿ ಇಡಲಾಗಿದೆ. ಕಸ ಸಂಗ್ರಹಿಸಲು ಸ್ತ್ರಿಶಕ್ತಿ ಸ್ವಸಹಾಯ ಸಂಘದ ಸದಸ್ಯರನ್ನು ನೇಮಿಸಲಾಗಿದೆ. ದಿನಂಪ್ರತಿ ಹೋಟೆಲ್ ಹಾಗು ಮಾಂಸದಂಗಡಿಗಳ ತ್ಯಾಜ್ಯ ಸಂಗ್ರಹಿಸಲು ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ ಈ ಯೋಜನೆಯಿಂದ 50-60 ಜನರಿಗೆ ಪರೋಕ್ಷವಾಗಿ ಉದ್ಯೋಗ ಕಲ್ಪಿಸಲಾಗಿದೆ.

ವಿದ್ಯುತ್ ಸಂಪರ್ಕ: ಈ ಘಟಕ ಕಾರ್ಯ ಆರಂಭಿಸಲು 12 ಕೆ.ವಿ ವಿದ್ಯುತ್ ಪ್ರತಿದಿನ ಅಗತ್ಯವಿದೆ. ಈ ಸಂಪರ್ಕ ಪಡೆಯಲು ಸೆಸ್ಕ್‌ಗೆ ಹಣ ಸಂದಾಯ ಮಾಡಲಾಗಿದೆ. ಕ್ಷೇತ್ರದ ಶಾಸಕ ಎಚ್.ಪಿ. ಮಂಜುನಾಥ್ ಈ ಘಟಕ ಕಾರ್ಯಾರಂಭಿಸಲು ಸಕಲ ಸಿದ್ದತೆಗಳನ್ನು ಸ್ವ ಆಸಕ್ತಿಯಿಂದ ನಡೆಸಿದ್ದಾರೆ ಎನ್ನುತ್ತಾರೆ ಪುರಸಭೆ ಅಧಿಕಾರಿಗಳು.

ನಗರದ ತ್ಯಾಜ್ಯ ಸಂಗ್ರಹದಿಂದ ಪಟ್ಟಣ ಸ್ವಚ್ಛಗೊಳ್ಳುವುದರೊಂದಿಗೆ ಕೆಲ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿರುವುದು ಸ್ವಾಗತಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT