ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣ್ಣಿನತ್ತ ಕಣ್ಣಿರಲಿ

ಅಕ್ಷರ ಗಾತ್ರ

ಮಧುಮೇಹಿಗಳಿಗೆ ಆಗುವ ಯಾವುದೇ ಗಾಯ ಮುಂದೆ ಸಂಕೀರ್ಣ ತೊಂದರೆಗಳನ್ನು ತಂದೊಡ್ಡುವ  ಅಪಾಯ ಇರುತ್ತದೆ. ಏಕೆಂದರೆ, ಮಧುಮೇಹ ಇರದ ವ್ಯಕ್ತಿಗಳಿಗೆ ಹೋಲಿಸಿದರೆ ಇವರಲ್ಲಿ ರಕ್ತದ ಪರಿಚಲನೆ ಕಡಿಮೆ ಇರುತ್ತದೆ. ಹೀಗಾಗಿ ಇವರಲ್ಲಿ ಗಾಯಗಳು ವಾಸಿಯಾಗುವುದು ನಿಧಾನವಾಗುತ್ತದೆ.

ಡಯಾಬಿಟಿಕ್ ಫುಟ್ ಅಲ್ಸರ್ (ಮಧುಮೇಹಿಗಳ ಪಾದದ ಹುಣ್ಣು) ಮಧುಮೇಹಿಗಳಲ್ಲಿ ಕಂಡುಬರುವ ಪ್ರಮುಖ ಸಂಕೀರ್ಣ ತೊಂದರೆ. ಶೇ 15ರಷ್ಟು ಮಧುಮೇಹಿಗಳಲ್ಲಿ ಈ ತೊಂದರೆ ಕಂಡುಬರುತ್ತದೆ. ಜೊತೆಗೆ, ಕೆಳಕಾಲಿನ ಅಂಗಚ್ಛೇದನ ಮಾಡಿದ ಶೇ 8* ಪ್ರಕರಣಗಳಲ್ಲೂ ಈ ಸಮಸ್ಯೆ ತಲೆದೋರುತ್ತದೆ. ಮಧುಮೇಹ ಇರುವ ಅನೇಕರ ಕೈ ಮತ್ತು ಕಾಲುಗಳಲ್ಲಿ ಸ್ಪರ್ಶ ಜ್ಞಾನ ಕಡಿಮೆ (-ನ್ಯೂರೊಪಥಿ) ಇರುತ್ತದೆ. ಅಂದರೆ, ಅವರಿಗೆ ಆದ ಗಾಯ ಸಾಮಾನ್ಯವಾಗಿ  ತಕ್ಷಣ ಗಮನಕ್ಕೆ ಬರುವುದಿಲ್ಲ. ವ್ರಣಗಳು ಮತ್ತು ಅಲ್ಸರ್‌ ಆಗಿದ್ದರೂ ನೋವು ಕಂಡುಬರುವುದಿಲ್ಲ.

ಮಧುಮೇಹ ರೋಗಿಗಳಲ್ಲಿ ಕಳೆದ 20 ವರ್ಷಗಳಿಂದ ಈಚೆಗೆ ರಕ್ತನಾಳಗಳು ಮತ್ತು ಸೂಕ್ಷ್ಮ ರಕ್ತನಾಳಗಳ ಸಂಕೀರ್ಣ ತೊಂದರೆಗಳು ಮಾರಣಾಂತಿಕ ಆದ ಪ್ರಕರಣಗಳು ಹೆಚ್ಚಾಗಿವೆ. ಗಾಯ ವಾಸಿಯಾಗದೇ ಉಳಿದುಬಿಡುವ ಉದಾಹರಣೆಗಳೂ ಸಾಕಷ್ಟಿವೆ.

ರಕ್ತಪರಿಚಲನೆ ಕಡಿಮೆ ಆಗುವುದರಿಂದ ರಕ್ತನಾಳಗಳು ಅತಿ ಬೇಗನೇ ಹಾನಿಗೊಳಗಾಗುತ್ತವೆ ಹಾಗೂ ಸಾಮಾನ್ಯರಿಗಿಂತಲೂ ಬೇಗನೇ ಗಟ್ಟಿಯಾಗುತ್ತವೆ. ಇದರಿಂದ ಅವರಲ್ಲಿ ಸ್ಪರ್ಶ ಜ್ಞಾನದ ಪ್ರಮಾಣ ಕಡಿಮೆಯಾಗುತ್ತದೆ. ಹೀಗಾಗಿ ಮಧುಮೇಹಿಗಳಿಗೆ ಆಗುವ ಹುಣ್ಣು, ವ್ರಣ ಹಾಗೂ ಪಾದದ ನಿರ್ವಹಣೆ, ಅಂಗಚ್ಛೇದನಕ್ಕೆ ಕಾರಣ ಆಗಬಹುದಾದ ಪ್ರಮುಖ ಅಪಾಯಕಾರಿ ಅಂಶಗಳ ಬಗ್ಗೆ ಕೂಲಂಕಷವಾಗಿ ತಿಳಿದುಕೊಳ್ಳಬೇಕಾದ ಅಗತ್ಯ ಇರುತ್ತದೆ. ಜೊತೆಗೆ, ನಿಗದಿತ ಅವಧಿಗೊಮ್ಮೆ ಪರಿಶೀಲನೆ ನಡೆಸುತ್ತಾ, ಹೆಚ್ಚಿನ  ತೊಂದರೆಯನ್ನು ತಡೆಯಲು ಸೂಕ್ಷ್ಮವಾಗಿ ನಿರ್ವಹಣೆ ಮಾಡಬೇಕಾದ ಅಗತ್ಯ ಇರುತ್ತದೆ. ಉತ್ತಮ ರೀತಿಯಲ್ಲಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಿಕೊಳ್ಳುವುದರಿಂದ  ರಕ್ತ ಪರಿಚಲನೆ ಆಗಲು ದಾರಿಯಾಗುತ್ತದೆ ಹಾಗೂ ಒತ್ತಡ ಸಹ ನಿವಾರಣೆಯಾಗುತ್ತದೆ.  ನಿರ್ಜೀವವಾಗಿರುವ ಅಂಗಾಂಶಗಳನ್ನು ಆಗಾಗ್ಗೆ ತೆಗೆದುಹಾಕಲು ರಕ್ತನಾಳದೊಳಗಿನ ತೇವಾಂಶದ ಸಮತೋಲನವನ್ನು ಉಳಿಸಿಕೊಳ್ಳಬೇಕಾಗುತ್ತದೆ.

ಹುಣ್ಣುಗಳ ಚಿಕಿತ್ಸೆ-
ಪಾದದ ಹುಣ್ಣುಗಳ ನಿರ್ವಹಣೆಗೆ ಡ್ರೆಸಿಂಗ್‌ಗಳು, ಆ್ಯಂಟಿಬಯೊಟಿಕ್‌ಗಳು, ಡಿಬ್ರೈಡ್ಮೆಂಟ್, ಆರ್ಟೀರಿಯಲ್‌ ರಿ– ವ್ಯಾಸ್ಕುಲರೈಸೇಷನ್ ಮತ್ತು ಪ್ಲೇಟ್ಲೆಟ್‌ನಿಂದ ಸಮೃದ್ಧವಾದ ಫೈಬ್ರಿನ್ ಎಂಬ ಚಿಕಿತ್ಸೆಗಳ ಅಗತ್ಯ ಇರುತ್ತದೆ. ದೀರ್ಘಕಾಲದ ಗಾಯಗಳಲ್ಲಿ ಡ್ರೆಸ್ಸಿಂಗ್‌ ಮಾಡಿದ ಜಾಗದ ಜೊತೆ ಸಂಪರ್ಕಕ್ಕೆ ಬರುವ ಆರೋಗ್ಯಕರವಾದ ತ್ವಚೆಗೂ ವ್ರಣ ಹರಡುವ ಅಪಾಯ ಇರುತ್ತದೆ. ಇದರಿಂದ ಗಾಯದ ಒಳಭಾಗ ಆಳ ಮತ್ತು ಅಗಲವಾಗುತ್ತಾ ಹೋಗುತ್ತದೆ. ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವ ಗುಣ ಹೊಂದಿದ ಔಷಧಗಳ ಬಳಕೆಯಿಂದ ಇಂತಹ ತೊಂದರೆಯನ್ನು ತಡೆಯಬಹುದಾದರೂ, ಆರೋಗ್ಯಕರ ಅಂಗಾಂಶಗಳ ಬೆಳವಣಿಗೆ ನಿಧಾನವಾಗುತ್ತದೆ.

ಹೀಗಾಗಿ ಗಾಯಗಳನ್ನು ಸೂಕ್ತ ರೀತಿಯಲ್ಲಿ ಡ್ರೆಸ್ಸಿಂಗ್ ಮಾಡುವುದರಿಂದ ಅದು ಬೇಗನೇ ವಾಸಿಯಾಗುವಂತೆ ನೋಡಿಕೊಳ್ಳಬಹುದು. ಪಾದದ ಹುಣ್ಣುಗಳ ಚಿಕಿತ್ಸೆಗಾಗಿ ಅನೇಕ ರೀತಿಯ ಡ್ರೆಸ್ಸಿಂಗ್‌ಗಳ  ಬಳಕೆ ಚಾಲ್ತಿಯಲ್ಲಿದೆ. ಅವುಗಳಲ್ಲಿ ಅಬ್ಸಾರ್ಪ್ಟಿವ್ ಫಿಲ್ಲರ್ಸ್, ಹೈಡ್ರೋಜೆಲ್ ಡ್ರೆಸ್ಸಿಂಗ್‌, ಹೈಡ್ರೋಕೊಲಾಯ್‌್ಡ ಮುಂತಾದವು ಸೇರಿವೆ.

ಗಾಯಗಳ ಡ್ರೆಸ್ಸಿಂಗ್‌ನಲ್ಲಿ ಅತ್ಯಂತ ಹೆಚ್ಚು ಬಳಸುವ ಕ್ರಮ ‘ಮಾಯಿಸ್ಟ್ ವೂಂಡ್ ಥೆರಪಿ’. ಈ ಪ್ರಕ್ರಿಯೆಯಲ್ಲಿ, ತೇವವುಳ್ಳ ಡ್ರೆಸ್ಸಿಂಗ್ ಅನ್ನು ಗಾಯದ ಸುತ್ತ ಬಳಸಲಾಗುತ್ತದೆ. ಇದು ಬ್ಯಾಕ್ಟೀರಿಯಾ ಮತ್ತು ಸೋಂಕುಕಾರಕಗಳನ್ನು ಹೀರಿಕೊಂಡು ಮೃದುವಾದ ಜೆಲ್‌ನಂತೆ ಅಂಟಿಕೊಳ್ಳುತ್ತದೆ.  ಇದರಿಂದ ಬ್ಯಾಕ್ಟೀರಿಯಾಗಳು ಹೆಚ್ಚಾಗಲು ಅವಕಾಶ ಇರುವುದಿಲ್ಲ. ಈ ಬಗೆಯ ಡ್ರೆಸ್ಸಿಂಗ್‌ಗಳು ಕ್ಷಿಪ್ರಗತಿಯಲ್ಲಿ ಗಾಯದ ಚೇತರಿಕೆಗೆ ನೆರವಾಗುತ್ತವೆ. ಸಾಂಪ್ರದಾಯಿಕ ಡ್ರೆಸ್ಸಿಂಗ್‌ಗಳಂತೆ ಅಲ್ಲದ ಇವನ್ನು ಹೆಚ್ಚು ನೋವಾಗದಂತೆ ತೆಗೆಯಬಹುದು.

ಹೀಗಿರಲಿ ಗಾಯದ ಆರೈಕೆ
*ಗಾಯ ಕ್ಷಿಪ್ರಗತಿಯಲ್ಲಿ ವಾಸಿಯಾಗುವಂತೆ ನೋಡಿಕೊಳ್ಳಲು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಬೇಕು.
*ಅತ್ಯುತ್ತಮ ಮಾಯಿಸ್ಟ್ ಡ್ರೆಸ್ಸಿಂಗ್‌ಗಳನ್ನು ಮಾಡಿಸಿಕೊಂಡು ಗಾಯವನ್ನು ಶುದ್ಧವಾಗಿ ಇಡಬೇಕು.
*ಪರಿಸ್ಥಿತಿಯ ತೀವ್ರತೆಯನ್ನು ಆಧರಿಸಿ, ಮೂರರಿಂದ ನಾಲ್ಕು ದಿನಗಳಿಗೊಮ್ಮೆ ಡ್ರೆಸ್ಸಿಂಗ್‌ನ್ನು ಬದಲಾಯಿಸಬೇಕು.
*ಬರಿಗಾಲಲ್ಲಿ ನಡೆಯುವುದು/ ಗಾಯವನ್ನು ದೂಳಿಗೆ ತೆರೆದಿಡುವುದು ಸರಿಯಲ್ಲ.
*ಡ್ರೆಸ್ಸಿಂಗ್ ಮತ್ತು ಅದರ ಸುತ್ತಲಿನ ತ್ವಚೆಯನ್ನು ಒಣಗಿದ ಸ್ಥಿತಿಯಲ್ಲಿ ಉಳಿಸಿಕೊಳ್ಳಬೇಕು. ಡ್ರೆಸ್ಸಿಂಗ್‌ನಿಂದ  ಗಾಯದ ಸುತ್ತಲಿನ ಆರೋಗ್ಯಕರ ತ್ವಚೆ ತೇವವಾಗುವುದನ್ನು ತಪ್ಪಿಸಬೇಕು. ಇದರಿಂದ ಆರೋಗ್ಯಕರ ಅಂಗಾಂಶ ಮೃದುವಾಗಿ, ಪಾದಕ್ಕೆ ಹೆಚ್ಚಿನ ತೊಂದರೆ ಉಂಟಾಗಬಹುದು.

ಪಾದದ ಹುಣ್ಣು ತಪ್ಪಿಸಿ
*ಮೃದುವಾದ ಸಾಬೂನಿನಿಂದ ಪ್ರತಿ ದಿನವೂ ಕಾಲುಗಳನ್ನು ತೊಳೆಯಿರಿ.
*ಪಾದದ ಬೆರಳುಗಳ ನಡುವಿನ ತೇವವನ್ನು ಚೆನ್ನಾಗಿ ಒರೆಸಿ. ಈ ತೇವ ತ್ವಚೆ ಹಾಳಾಗಲು ಕಾರಣ ಆಗಬಹುದು.
*ಉಗುರು ಕತ್ತರಿಸುವಾಗ ಎಚ್ಚರಿಕೆ ವಹಿಸಿ. ಇದರಿಂದ ಗಾಯ ಉಂಟಾಗಿ ತೊಂದರೆ ಆಗಬಹುದು.
*ಕಾಲಿನ ತೇವಾಂಶ ಸಂಪೂರ್ಣ ಒಣಗಿ ಹೋಗಿ ಚರ್ಮ ಬಿರುಕು ಬಿಡಲು ಅವಕಾಶ ಮಾಡಿಕೊಡಬೇಡಿ.
*ಬಿಗಿಯಾದ ಸಾಕ್‌್ಸಗಳು ಮತ್ತು ಬಿಗಿಯಾದ ಪಾದರಕ್ಷೆ ಬಳಕೆಯನ್ನು ತಪ್ಪಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT