ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಪ್ರಭೇದದ ಪೊದೆ ಕಪ್ಪೆ ಪತ್ತೆ

Last Updated 3 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಳಿಗಿರಿರಂಗನ ಬೆಟ್ಟದ (ಬಿ.ಆರ್‌. ಹಿಲ್ಸ್‌) ಹುಲಿ ಅಭಯಾರಣ್ಯದಲ್ಲಿ ಹೊಸ ಪ್ರಭೇದದ ಪೊದೆ ಕಪ್ಪೆಯೊಂದು ಪತ್ತೆಯಾಗಿದೆ. ಗುಬ್ಬಿ ಲ್ಯಾಬ್ಸ್‌ ಮತ್ತು ಅಶೋಕ ಪರಿಸರ ಸಂಶೋಧನಾ ಟ್ರಸ್ಟ್‌ನ ವಿಜ್ಞಾನಿಗಳ ತಂಡ ಈ ಕಪ್ಪೆಯನ್ನು ಪತ್ತೆ ಮಾಡಿದೆ.

ಕಪ್ಪೆಯ ವಂಶವಾಹಿನಿ ಹಾಗೂ ಅದರ ಕೂಗಿನ ಮಾದರಿಯನ್ನು ವಿಶ್ಲೇಷಿಸಿ ಅದೊಂದು ಹೊಸ ಪ್ರಭೇದಕ್ಕೆ ಸೇರಿದೆ ಎಂದು ವಿಜ್ಞಾನಿಗಳು ಖಚಿತಪಡಿಸಿದ್ದಾರೆ. ಅದು ಬಿಳಿಗಿರಿರಂಗನ ಬೆಟ್ಟದ ಹೊನ್ನಮೆಟ್ಟಿ ಎಂಬಲ್ಲಿ ಪತ್ತೆಯಾಗಿದ್ದರಿಂದ ಅದಕ್ಕೆ ‘ಹೊನ್ನಮೆಟ್ಟಿ ಪೊದೆ ಕಪ್ಪೆ’ ಎಂದೇ ಹೆಸರಿಸಲಾಗಿದೆ.

ಉಭಯಚರಗಳಾದ ಕಪ್ಪೆಗಳು 36 ಕೋಟಿ ವರ್ಷಗಳಷ್ಟು ಹಿಂದೆ ಸೃಷ್ಟಿಯಾಗಿವೆ. ಅದೇ ಪೊದೆ ಕಪ್ಪೆಗಳಿಗೆ 2.5 ಕೋಟಿ ವರ್ಷಗಳ ಚರಿತ್ರೆ ಮಾತ್ರ ಇದೆ.  ಪಶ್ಚಿಮ ಘಟ್ಟದಲ್ಲಿ ಕಾಣಸಿಗುವ ಪೊದೆ ವರ್ಗಕ್ಕೆ ಸೇರಿದ ಕಪ್ಪೆಗಳಲ್ಲಿ ಸುಮಾರು 50 ಪ್ರಭೇದಗಳಿವೆ.

‘ಇದೊಂದು ಹೊಸ ಪ್ರಭೇದದ ಕಪ್ಪೆ. 1937ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ ಪತ್ತೆಯಾದ ಶೇಷಾಚಾರ್‌ ಪೊದೆ ಕಪ್ಪೆಯನ್ನು ಹೋಲುತ್ತದೆ. ವಿಜ್ಞಾನಿ ನಾರಾಯಣ ರಾವ್‌ ಅವರು ಮೇಲ್ನೋಟದಲ್ಲೇ ಆ ಕಪ್ಪೆಯನ್ನು ಗುರುತಿಸಿದ್ದರು’ ಎಂದು ವಿವರಿಸುತ್ತಾರೆ ಗುಬ್ಬಿ ಲ್ಯಾಬ್ಸ್‌ನ ಪ್ರಧಾನ ಸಂಶೋಧಕ ಡಾ. ಕೆ.ವಿ.ಗುರುರಾಜ್‌.

‘ಕೊಟ್ಟಿಗೆಹಾರ ಮತ್ತು ಹೊನ್ನಮೆಟ್ಟಿ ಕಪ್ಪೆಗಳ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸುವುದು ಅಸಾಧ್ಯ. ಎರಡೂ ಜಾತಿಗಳ ಕಪ್ಪೆಗಳ ಮಧ್ಯೆ ಅಷ್ಟೊಂದು ಸಾಮ್ಯತೆಗಳಿವೆ. ಹೀಗಾಗಿ ಹೊನ್ನಮೆಟ್ಟಿಯಲ್ಲಿ ಪತ್ತೆಯಾದ ಕಪ್ಪೆಯನ್ನು ಕುರಿತಂತೆ ವಿವರವಾದ ವಿಶ್ಲೇಷಣೆ ನಡೆಸಿ ನಿರ್ಧಾರಕ್ಕೆ ಬಂದೆವು’ ಎಂದು ಅವರು ಹೇಳುತ್ತಾರೆ.

ಬಿಳಿರಂಗನಬೆಟ್ಟದ ಹುಲಿ ಅಭಯಾರಣ್ಯದಲ್ಲಿ ಕಾಣಿಸಿಕೊಂಡ ಕಿರು ಗಂಟಲಿನ ಸೋಲಿಗ ಕಪ್ಪೆಯನ್ನು ತೋರಿಸಲು ಹುಲಿ ಅಭಯಾರಣ್ಯದ ಆಗಿನ ನಿರ್ದೇಶಕ ವಿಜಯ್‌ ಮೋಹನ್‌ ರಾಜ್‌ ಅವರು ಡಾ. ಗುರುರಾಜ್‌ ಅವರನ್ನು ಆಹ್ವಾನಿಸಿದ್ದರು. ಸೋಲಿಗ ಕಪ್ಪೆಯನ್ನು ಹುಡುಕುತ್ತ ಹೊರಟಾಗ ಹೊಸ ಪ್ರಭೇದದ ಈ ಕಪ್ಪೆ ಪತ್ತೆಯಾಯಿತು. ಈ ಉಭಯಚರದ ಕುರಿತು ಅಂತರರಾಷ್ಟ್ರೀಯ ವಿಜ್ಞಾನ ಪತ್ರಿಕೆ ‘ಪ್ಲಾಸ್‌ ಒನ್‌’ನಲ್ಲಿ ಡಾ. ಗುರುರಾಜ್‌ ಅವರ ತಂಡದ ಪ್ರಬಂಧ ಪ್ರಕಟವಾಗಿದೆ.

‘ಹೊಸ ಪ್ರಭೇದದ ಕಪ್ಪೆಯನ್ನು ‘ಮೈಟೊಕಾಂಡ್ರಿಯ’ ಜೀನ್‌ಗಳ ಮೂಲಕ ಪತ್ತೆ ಮಾಡಲಾಗುತ್ತದೆ’ ಎಂದು ಅಶೋಕ ಪರಿಸರ ಸಂಶೋಧನಾ ಟ್ರಸ್ಟ್‌ನ ಹಿರಿಯ ಸಂಶೋಧಕಿ ಎಚ್‌.ಪ್ರೀತಿ ಹೇಳುತ್ತಾರೆ. ‘ಪಶ್ಚಿಮ ಘಟ್ಟದ ಅಗೋಚರ ಕಪ್ಪೆಗಳ ಪ್ರಭೇದದಲ್ಲಿ ಇದೂ ಒಂದಾಗಿದೆ. ವಿಕಾಸದ ಹಾದಿಯಲ್ಲಿ ಅವು ಗುಪ್ತವಾಗಿ ಅಡಗಿರಲು ಏನು ಕಾರಣ ಎಂಬುದನ್ನು ಅಧ್ಯಯನ ಮಾಡಲಾಗುತ್ತಿದೆ’ ಎಂದು ವಿವರಿಸುತ್ತಾರೆ.

‘ಹೊನ್ನಮೆಟ್ಟಿ ಕಪ್ಪೆಯ ಕೂಗನ್ನು ಇತರ ಕಪ್ಪೆಗಳ ಕೂಗಿನ ಜತೆ ಹೋಲಿಕೆ ಮಾಡಿ ನೋಡಿದೆವು. ಉಳಿದವುಗಳಿಗಿಂತ ಅದರ ಕೂಗು ಭಿನ್ನವಾಗಿತ್ತು’ ಎಂದು ಗುಬ್ಬಿ ಲ್ಯಾಬ್ಸ್‌ನ ಸಂಶೋಧಕಿ ಬಿ. ರಮ್ಯಾ ಮಾಹಿತಿ ನೀಡುತ್ತಾರೆ.

‘ಬಿಳಿಗಿರಿರಂಗನಬೆಟ್ಟ 2 ಕೋಟಿ ವರ್ಷಗಳಷ್ಟು ಹಿಂದೆ ಭೂಮಿಯ ರಾಚನಿಕ ವ್ಯತ್ಯಾಸದಿಂದ ನಿರ್ಮಾಣವಾಗಿದೆ. ಆ ಅವಧಿಯಲ್ಲೇ ಕಪ್ಪೆಗಳ ಮೂಲ ಪ್ರಭೇದದಲ್ಲೂ ಸ್ಥಿತ್ಯಂತರವಾಗಿ ಈ ಹೊಸ ಪ್ರಭೇದ ಸೃಷ್ಟಿಯಾಗಿರಬಹುದು’ ಎಂದು ಪ್ರಬಂಧದ ಸಹ ಲೇಖಕ ಡಾ.ಎನ್‌.ಎ. ಅರವಿಂದ್‌ ವಿವರಿಸುತ್ತಾರೆ.
ಎಚ್‌.ಪ್ರೀತಿ, ರೋಹಿಣಿ ಆರ್‌. ಶರ್ಮಾ, ರಮ್ಯಾ ಬಿ, ಡಾ.ಎಚ್‌.ಎಸ್‌. ಸುಧೀರ್‌, ಡಾ.ಜಿ. ರವಿಕಾಂತ್‌, ಡಾ.ಎನ್‌.ಎ. ಅರವಿಂದ್‌, ಡಾ.ಕೆ.ವಿ. ಗುರುರಾಜ್‌ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT