ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ರೈಲು ಕೇರಳ ಪಾಲು- `ಕರಾವಳಿ'ಗೆ ಮತ್ತೆ ಅನ್ಯಾಯ

Last Updated 2 ಜುಲೈ 2013, 5:54 IST
ಅಕ್ಷರ ಗಾತ್ರ

ಮಂಗಳೂರು: ರೈಲ್ವೆ ಸಚಿವರು 2013ರ ಬಜೆಟ್‌ನಲ್ಲಿ ಘೋಷಿಸಿದ ಬೆಂಗಳೂರು- ಮಂಗಳೂರು ಹೊಸ ರೈಲು ಮಂಗಳೂರಿನ ಜನತೆಯ ಪಾಲಿಗೆ ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಾಗಿದೆ.

ದಕ್ಷಿಣ ರೈಲ್ವೆಯ ಪಾಲ್ಘಾಟ್ ವಿಭಾಗವು ಹೊಸ ರೈಲುಗಳ ವೇಳಾಪಟ್ಟಿಯನ್ನು  ಪ್ರಕಟಿಸಿದೆ. ಈ ವೇಳಾಪಟ್ಟಿಯ ಪ್ರಕಾರ ವಾರಕ್ಕೊಮ್ಮೆ ಸಂಚರಿಸುವ ಬೆಂಗಳೂರು- ಮಂಗಳೂರು ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನಿಂದ ನೇರವಾಗಿ ಮಂಗಳೂರು ತಲುಪುವ ಬದಲು ಪಾಲ್ಘಾಟ್, ಶೋರನೂರು, ತಿರೂರ್, ಕೋಯಿಕ್ಕೋಡ್, ವಡಗರ, ತಲಶ್ಶೇರಿ, ಕಣ್ಣೂರು, ಕಾಸರಗೋಡು ಮಾರ್ಗವಾಗಿ ಮಂಗಳೂರು ತಲುಪಲಿದೆ.

ಪ್ರತಿ ಭಾನುವಾರ ರಾತ್ರಿ 11.45ಕ್ಕೆ ಯಶವಂತಪುರದಿಂದ ಹೊರಡುವ ಈ ರೈಲು (ನಂ.16565/16566) ಮರುದಿನ ಸಂಜೆ 5.40ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ. ಅಂದರೆ ಬೆಂಗಳೂರು- ಮಂಗಳೂರು ನಡುವಿನ ಪ್ರಯಾಣಕ್ಕೆ ಬರೋಬ್ಬರಿ 18 ತಾಸು. ಸೋಮವಾರ ರಾತ್ರಿ 8 ಗಂಟೆಗೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡುವ ಈ ರೈಲು ಮರುದಿನ 12.30ಕ್ಕೆ ಬೆಂಗಳೂರು ತಲುಪಲಿದೆ. ಅಂದರೆ 16.30 ತಾಸು ಪ್ರಯಾಣವಾಗಲಿದೆ. ಹಾಗಾಗಿ ಈ ರೈಲಿನಿಂದ ಮಂಗಳೂರಿನ ಜನತೆಗೆ ಸ್ವಲ್ಪವೂ ಪ್ರಯೋಜನವಾಗುವುದಿಲ್ಲ ಎನ್ನುತ್ತಾರೆ ರೈಲು ಪ್ರಯಾಣಿಕರು. 

ಕೇರಳದವರ ಲಾಬಿಯಿಂದಾಗಿ ರಾಜ್ಯದ ಕರಾವಳಿಯ ಜನತೆಗೆ ಪದೇ ಪದೇ ಅನ್ಯಾಯವಾಗುತ್ತಲೇ ಇದೆ. ಕರ್ನಾಟಕದವರೇ ಆಗಿರುವ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಈ ಅನ್ಯಾಯವನ್ನು ಸರಿಪಡಿಸಬೇಕು ಎಂದು ಕರಾವಳಿ ಪ್ರದೇಶದ ರೈಲ್ವೆ ಪ್ರಯಾಣಿಕರು ಆಗ್ರಹಿಸಿದ್ದಾರೆ.

ಹೊಸ ರೈಲು- ವೇಳಾಪಟ್ಟಿ
ನಿತ್ಯ ಸಂಚರಿಸುವ ಮಡಗಾಂವ್- ಮಂಗಳೂರು ಸೂಪರ್‌ಫಾಸ್ಟ್ ಇಂಟರ್‌ಸಿಟಿ ರೈಲು (22635/22636) ಸಂಜೆ 4.15ಕ್ಕೆ ಮಡಗಾಂವ್‌ನಿಂದ ಹೊರಟು ರಾತ್ರಿ 10 ಗಂಟೆಗೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ. ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಬೆಳಿಗ್ಗೆ 8.15ಕ್ಕೆ ಹೊರಡುವ ರೈಲು ಮಧ್ಯಾಹ್ನ 2 ಗಂಟೆಗೆ ಮಡಗಾಂವ್ ತಲುಪಲಿದೆ. 

ವಾರಕ್ಕೆರಡು ಬಾರಿ ಸಂಚರಿಸುವ ಮುಂಬೈನ ಲೋಕಮಾನ್ಯ ತಿಲಕ್- ಕೂಚುವೇಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (22113/22114) ಮಂಗಳವಾರ ಮತ್ತು ಶನಿವಾರ ಲೋಕಮಾನ್ಯ ತಿಲಕ್ ನಿಲ್ದಾಣದಿಂದ ಸಂಜೆ 4.55ಕ್ಕೆ ಹೊರಡಲಿದ್ದು, ಮರುದಿನ (ಬುಧವಾರ ಮತ್ತು ಭಾನುವಾರ) ಸಂಜೆ 8.30ಕ್ಕೆ ಕೂಚುವೇಲಿ ತಲುಪಲಿದೆ. ಕೂಚುವೇಲಿಯಿಂದ ಸೋಮವಾರ ಹಾಗೂ ಗುರುವಾರ ಬೆಳಿಗ್ಗೆ 12.35ಕ್ಕೆ ಹೊರಡುವ ರೈಲು ಮರುದಿನ (ಮಂಗಳವಾರ, ಶುಕ್ರವಾರ) ಬೆಳಿಗ್ಗೆ 4.10ಕ್ಕೆ ಲೋಕಮಾನ್ಯ ತಿಲಕ್ ನಿಲ್ದಾಣ ತಲುಪಲಿದೆ.

ವಾರಕ್ಕೆರಡು ಬಾರಿ ಸಂಚರಿಸುವ ಹೈದರಾಬಾದ್‌ನ ಕಾಚಿಗುಡ- ಮಂಗಳೂರು ಎಕ್ಸ್‌ಪ್ರೆಸ್ ರೈಲು (17605/17606) ಮಂಗಳವಾರ ಹಾಗೂ ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಕಾಚಿಗುಡದಿಂದ ಹೊರಟು ಮರುದಿನ 11.20ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ. ಮಂಗಳೂರು ಸೆಂಟ್ರಲ್‌ನಿಂದ ಬುಧವಾರ ಮತ್ತು ಶನಿವಾರ ರಾತ್ರಿ 8 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 3.30ಕ್ಕೆ ಕಾಚಿಗುಡ ತಲುಪಲಿದೆ.

ವಾರಕ್ಕೊಮ್ಮೆ ತಿರುವನಂತಪುರ- ಎಚ್.ನಿಜಾಮುದ್ದೀನ್ ನಡುವೆ ಸಂಚರಿಸುವ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು (22633/22634) ತಿರುವನಂತಪುರದಿಂದ ಬುಧವಾರ ಮಧ್ಯಾಹ್ನ 2.40ಕ್ಕೆ ಹೊರಟು ಶುಕ್ರವಾರ ಮಧ್ಯಾಹ್ನ 2.20 ಗಂಟೆಗೆ ನಿಜಾಮುದ್ದೀನ್ ತಲುಪಲಿದೆ. ನಿಜಾಮುದ್ದೀನ್‌ನಿಂದ ಶುಕ್ರವಾರ ರಾತ್ರಿ 11.40ಕ್ಕೆ ಹೊರಟು ಸೋಮವಾರ ಬೆಳಿಗ್ಗೆ 3.10ಕ್ಕೆ ತಿರುವನಂತಪುರ ತಲುಪಲಿದೆ.
ಹೊಸ ರೈಲುಗಳ ವೇಳಾಪಟ್ಟಿ ಪ್ರಕಟಿಸಿರುವ ಪಾಲ್ಘಾಟ್ ವಿಭಾಗವು ಅವುಗಳು ಸಂಚಾರ ಪ್ರಾರಂಭಿಸುವ ದಿನಾಂಕವನ್ನು ಇನ್ನೂ ಘೋಷಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT