ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದು ಅಲುಗಾಡಿದ್ದು ಜನರ ನಂಬಿಕೆಗಳು...

Last Updated 15 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಕೆಡವಿದ ಘಟನೆಯ ಹಿಂದಿರುವ ಪಿತೂರಿಯನ್ನು ಬಯಲುಗೊಳಿಸಿದ ಈಚೆಗಿನ ಘಟನೆ ನನ್ನನ್ನು ಈ ಬಗ್ಗೆ ಇನ್ನೊಂದಷ್ಟು ಯೋಚಿಸುವಂತೆ ಮಾಡಿತು. ಇದು ಸಾರ್ವತ್ರಿಕ ಚುನಾವಣೆಯ ಕಾಲ. ಅಭಿವೃದ್ಧಿ ಮಂತ್ರ ಪಠಿಸುತ್ತಿರುವ ಬಿಜೆಪಿಗೆ ಇದು ಎಷ್ಟು ಅನುಕೂಲವಾಗುತ್ತೋ, ಪ್ರತಿಕೂಲವಾಗುತ್ತೋ ಗೊತ್ತಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅದು ಸಂವಿಧಾನದ ಚೌಕಟ್ಟಿನೊಳಗೇ ಯತ್ನಗಳನ್ನು ನಡೆಸಲಿದೆ ಎನ್ನುವುದೂ ನಿಜ. ಆದರೆ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ  ಸಂವಿಧಾನದ 370ನೇ ಪರಿಚ್ಛೇದದ ಬಗ್ಗೆ ಬಿಜೆಪಿ ಬಹಳ ನಿಷ್ಠುರ ಧೋರಣೆ ತಳೆದಿದೆ.

ಇನ್ನೊಂದು ಪ್ರಮುಖ ಪಕ್ಷ ಕಾಂಗ್ರೆಸ್‌ ಕೂಡಾ ಪರಿಸ್ಥಿತಿಗಳನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ನಿಟ್ಟಿನಲ್ಲಿ ‘ಕೋಮುವಾದಿ’ ಹುನ್ನಾರಕ್ಕೆ ಇಳಿದಿಲ್ಲ ಎನ್ನುವಂತಿಲ್ಲ. ಈ ಪಕ್ಷ ಈಗಾಗಲೇ ಷಾಹಿ ಇಮಾಮ್‌ ಬುಖಾರಿ ಸೇರಿದಂತೆ ಮುಸಲ್ಮಾನರ ಅನೇಕ ಧರ್ಮ ಗುರುಗಳ ಬೆನ್ನು ಬಿದ್ದಿದೆ. ಮುಸ್ಲಿಮರ ತುಷ್ಟೀಕರಣ ಮಾಡುವ ಭರದಲ್ಲಿ ಎಲ್ಲಾ ನೀತಿ ನಿಯಮಗಳನ್ನೂ ಗಾಳಿಗೆ ತೂರಿ ಭಂಡತನದಿಂದ ಕಾಂಗ್ರೆಸ್‌ ದಾಪುಗಾಲಿಡುತ್ತಿದೆ ಎಂಬ ಆರೋಪಗಳ ಬಗ್ಗೆ ಆ ಪಕ್ಷ ಒಂದಿಷ್ಟೂ ತಲೆ ಕೆಡಿಸಿಕೊಂಡಿಲ್ಲ.

ಇಂತಹ ರಾಜಕೀಯ ಏಳುಬೀಳುಗಳ ನಡುವೆ ಅಂತರ್ಜಾಲದ ಸುದ್ದಿಸಂಸ್ಥೆಯೊಂದು ಸತತವಾಗಿ ಕೆಲವು ವರ್ಷ ಪ್ರಯತ್ನಗಳನ್ನು ನಡೆಸಿ ಬಾಬರಿ ಮಸೀದಿಯನ್ನು ಕೆಡವಿದ ಘಟನೆಗೆ ಸಂಬಂಧಿಸಿದ ಪಿತೂರಿಯನ್ನು ಬಯಲಿಗೆಳೆದಿದೆ. ಮಸೀದಿ ಬೀಳಿಸುವುದಕ್ಕೆ ಮೊದಲು ವ್ಯವಸ್ಥಿತವಾದ ಯೋಜನೆ ಮಾಡಲಾಗಿತ್ತು ಎಂಬುದನ್ನು ಸಾಬೀತು ಪಡಿಸಿದೆ.

ಬಾಬರಿ ಮಸೀದಿ ಬೀಳಿಸಿದ್ದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಂ.ಎಸ್‌.ಲಿಬರ್‍ಹಾನ್‌ ಅವರು ಹಿಂದೆ ಸರ್ಕಾರಕ್ಕೆ ಸಲ್ಲಿಸಿದ್ದ ತನಿಖಾ ವರದಿಯಲ್ಲಿ ಇದನ್ನೇ ಹೇಳಲಾಗಿದೆ. ಹಿಂದೆ ಲಿಬರ್‍ಹಾನ್‌ ಅವರು ಸಂದರ್ಶನ ವೊಂದರಲ್ಲಿ ಮಾತನಾಡುತ್ತಾ ‘ಅಂದು ಅಯೋಧ್ಯೆಯಲ್ಲಿ ನಡೆದ ಘಟನೆ ಸ್ವಯಂ ಪ್ರೇರಿತವೂ ಅಲ್ಲ,  ಮಿತಿ ಮೀರಿದ ಜನಜಂಗುಳಿಯ ಭಾವಾತಿರೇಕದ ವರ್ತನೆಯೂ ಅಲ್ಲ’ ಎಂದಿದ್ದರು. ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಲ್‌.ಕೆ. ಅಡ್ವಾಣಿ ಅವರು ನಡೆಸಿದ್ದ ರಥಯಾತ್ರೆಯಲ್ಲಿ ಅಂದು ನರೇಂದ್ರ ಮೋದಿ ಅವರೂ ಪಾಲ್ಗೊಂಡಿದ್ದರು ಎಂದೂ ಲಿಬರ್‍ಹಾನ್‌ ಹೇಳಿದ್ದರು.

ಬಾಬರಿ ಮಸೀದಿ ಕೆಡಹುವುದಕ್ಕೆ ಸಂಬಂಧಿದ ‘ಯೋಜನೆ’ಯ ಬಗ್ಗೆ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಅಡ್ವಾಣಿಯವರಿಗೆ ಮೊದಲೇ ಗೊತ್ತಿತ್ತು ಎಂಬ ಸಂಗತಿ ನನ್ನ ಮನಸ್ಸಿಗೆ ಅತೀವ ನೋವು ಉಂಟು ಮಾಡಿತ್ತು. ಆ ಘಟನೆ ನಡೆದ ಸಂದರ್ಭದಲ್ಲಿ ವಾಜಪೇಯಿ ಅವರು ಆವೇಶದಿಂದ ಭಾಷಣ ಮಾಡುತ್ತಾ ‘ಈ ಘಟನೆಯ ಹಿಂದೆ ಯಾವುದೇ ಪಿತೂರಿ ಇಲ್ಲ. ಅಲ್ಲಿ ಸೇರಿದ್ದ ಲಕ್ಷಾಂತರ ಜನರು ಭಾವೋದ್ವೇಗ­ದಿಂದ ಆ ರೀತಿ ನಡೆದು­ಕೊಂಡಿದ್ದರು’ ಎಂದಿದ್ದರು. ನಾನು ಅಂದು ಅದನ್ನು ನಂಬಿದ್ದೆ.

ಏಕೆಂದರೆ ವಾಜಪೇಯಿ ಅವರ ಬಗ್ಗೆ ನನಗೆ ಅಷ್ಟೊಂದು ನಂಬಿಕೆ ಇತ್ತು. ಅಡ್ವಾಣಿ ಅವರಂತೂ ಘಟನೆ ಬಗ್ಗೆ ನೈತಿಕ ಜವಾಬ್ದಾರಿ ಹೊತ್ತು ಸಂಸತ್‌ ಸದಸ್ಯತ್ವಕ್ಕೇ ರಾಜೀನಾಮೆ ನೀಡಿದ್ದಾಗ ಅಡ್ವಾಣಿ ಸತ್ಯವನ್ನೇ ಹೇಳುತ್ತಿದ್ದಾರೆ ಎಂದೂ ನಾನು ನಂಬಿದ್ದೆ.  ಆದರೆ ಅಂದು ನಾನು ಮೋಸ ಹೋದೆ. ಅದೆಲ್ಲಾ ಅವರ ಬಣ್ಣದ ಮಾತು­ಗಳಾ­ಗಿದ್ದವು. ಕೇವಲ 24 ಗಂಟೆಗಳಲ್ಲಿ ಅಡ್ವಾಣಿ ತಮ್ಮ ರಾಜೀನಾಮೆ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದರು. ಇಬ್ಬರದೂ ಕಪಟ ನಾಟಕವಾಗಿತ್ತು.

ಆದರೆ ಈ ಬಗ್ಗೆ ಸಿಬಿಐ ತನ್ನ ತನಿಖಾ ವರದಿ ಸಲ್ಲಿಸಲು ಸುಮಾರು 22 ವರ್ಷಗಳನ್ನು ತೆಗೆದುಕೊಂಡಿದ್ದೊಂದು ವಿಪರ್ಯಾಸ. ಬಾಬರಿ ಮಸೀದಿ ಉರುಳಿಸಿದ್ದಕ್ಕೆ ಸಂಬಂಧಿಸಿದ ಪೂರ್ವಯೋಜನೆ ಬಗ್ಗೆ ಪ್ರಸಾರಗೊಂಡ ಕುಟುಕು ಕಾರ್ಯಾಚರಣೆ ಬಗ್ಗೆ ಬಿಜೆಪಿಯ ಕೆಲವು ಮುಖಂಡರಿಗೆ ಏನೂ ಅನ್ನಿಸುತ್ತಿಲ್ಲ­ವೇನೋ. ಅವರು ಕಾಂಗ್ರೆಸ್‌ನ ಭ್ರಷ್ಟಾಚಾರದ ಕುರಿತು ಧ್ವನಿ ಎತ್ತರಿಸಿ ಮಾತನಾಡುತ್ತಾ ಬಾಬರಿ ಮಸೀದಿ ಉರುಳಿಸುವುದಕ್ಕೆ ನಡೆದಿತ್ತು ಎನ್ನಲಾದ ಪೂರ್ವ ಯೋಜನೆಗಳನ್ನು ಸಮರ್ಥಿಸುವ ಕುಟುಕು ಕಾರ್ಯಾಚರಣೆ ಏನೇನೂ ಅಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.

ಬಾಬರಿ ಮಸೀದಿ ಕೆಡವಿದ ಘಟನೆಯ ಸಂದರ್ಭದಲ್ಲಿ ಭಾರತದ ಪ್ರಧಾನಿಯಾಗಿದ್ದ ನರಸಿಂಹ ರಾವ್‌ ಅವರ ಬಗ್ಗೆ ನನಗೆ ಸಾಕಷ್ಟು ಗೊತ್ತಿದೆ. ಮಸೀದಿ ಕೆಡಹುವುದಕ್ಕೆ ನರಸಿಂಹ ರಾವ್‌ ಅವರ ಅಭಯ ಇತ್ತು ಎಂಬ ಹಲವರ ವಾದವನ್ನು ಈಗ ನಾನು ಅಲ್ಲಗಳೆಯುತ್ತಿಲ್ಲ. ಆ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂಬುದಾಗಿ ಸುಪ್ರೀಂ ಕೋರ್ಟ್‌ ಆದೇಶ ಇತ್ತು. ಬಾಬರಿ ಮಸೀದಿ­ಯನ್ನು ರಕ್ಷಿಸಬೇಕೆಂಬುದೇ ಆ ಆದೇಶವಾಗಿತ್ತು. ಅದಕ್ಕೆ ಪೂರಕವಾಗಿಯೇ ಅಲ್ಲಿ ಸೇನಾ ತುಕಡಿ­ಯನ್ನಿರಿ­ಸಲಾಗಿತ್ತು.

ಆದರೆ ಅಂದು ಮಸೀದಿ­ಯನ್ನು ಉಳಿಸಿಕೊಳ್ಳಲು ಒಬ್ಬ ಯೋಧನೂ ಒಂದು ಹೆಜ್ಜೆಯನ್ನೂ ಮುಂದಿಟ್ಟಿರಲಿಲ್ಲ.  ಯಾವುದೇ ದಾಳಿ ನಡೆಯುವುದನ್ನು ತಡೆ­ಗಟ್ಟಲು ಮಸೀದಿಯ ಸುತ್ತಲೂ ಅತ್ಯಾಧುನಿಕ ಶಸ್ತ್ರಾಸ್ತ್ರ­ಗಳೊಂದಿಗೆ ಸೇನೆ ತಡೆಗೋಡೆಯಂತೆ ನಿಂತಿರಲಿಲ್ಲ. ಆ ಘಟನೆ ಬಗ್ಗೆ ಹಿರಿಯ ಸಮಾಜವಾದಿ ಮಧು ಲಿಮಯೆ ಅವರು ಹೇಳಿದ ಕೆಲವು ಸಂಗತಿಗಳು ಬಾಬರಿ ಮಸೀದಿ ಉರುಳಿದ್ದರ ಹಿಂದೆ ನರಸಿಂಹ ರಾವ್‌ ಪಾತ್ರವನ್ನೂ ಖಚಿತಪಡಿಸಿತ್ತು.

ಅತ್ತ ಮಸೀದಿಯನ್ನು ಕೆಡಹುವ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆಯೇ ಇತ್ತ ದೆಹಲಿಯಲ್ಲಿ ತಮ್ಮ ನಿವಾಸದಲ್ಲಿದ್ದ ನರಸಿಂಹ ರಾವ್‌ ಪೂಜಾ ಕೋಣೆಯೊಳಗೆ ಹೊಕ್ಕು ಪೂಜೆಯಲ್ಲಿ ತಲ್ಲೀನರಾಗಿ ಬಿಟ್ಟಿದ್ದರಂತೆ. ಆಗ ಸಚಿವ ಸಂಪುಟದ ಬಹುತೇಕ ಸಚಿವರು ಪ್ರಧಾನಿ­ಯವರ ಮನೆಗೆ ಸತತವಾಗಿ ದೂರವಾಣಿ ಕರೆ­ಗಳನ್ನು ಮಾಡಿದ್ದರು. ಅಯೋಧ್ಯೆ­ಯಲ್ಲಿ ಮಸೀದಿ­ಯನ್ನು ಕೆಡಹುವ ಪ್ರಕ್ರಿಯೆಗೆ ತಡೆ ಒಡ್ಡಬೇಕೆಂಬುದು ಅವರೆಲ್ಲರ ಉದ್ದೇಶವಾಗಿತ್ತು.

ಆದರೆ ತಮ್ಮ ಪೂಜೆಗೆ ಯಾವುದೇ ಕಾರಣಕ್ಕೂ ಭಂಗ ಉಂಟು ಮಾಡಬಾರದೆಂದು ತಮ್ಮ ಸಹಾಯಕರಿಗೆ ಹೇಳಿ ನರಸಿಂಹ ರಾವ್‌ ಪೂಜೆಗೆ ಕುಳಿತುಬಿಟ್ಟಿದ್ದರಂತೆ. ಮಸೀದಿ ಕೆಡಹುವ ಕೆಲಸ ಸಂಪೂರ್ಣ ಮುಗಿದ ಮೇಲೆ ಸಹಾಯಕ­ರೊಬ್ಬರು ನರಸಿಂಹ ರಾವ್‌ ಅವರ ಬಳಿ ಹೋಗಿ ಕೆಡಹುವ ಕೆಲಸ ಪೂರ್ಣಗೊಂಡಿದೆ ಎಂದು ಕಿವಿ­ಯಲ್ಲಿ ಹೇಳಿದರಂತೆ. ಆಗ ನರಸಿಂಹ ರಾವ್‌ ಪೂಜೆ ಮುಗಿಸಿ ಎದ್ದು ಬಂದರಂತೆ. ಇದಿಷ್ಟೂ ಪ್ರಸಂಗವನ್ನು ಮಧು ಲಿಮಯೆ ಹೇಳಿದಾಗ ನಿಜಕ್ಕೂ ನಾನು ಗರಬಡಿದಂತಾಗಿದ್ದೆ.

ಬಾಬರಿ ಮಸೀದಿ ಉರುಳಿದ ಮೇಲೆ ಮುಂಬೈ ಸೇರಿದಂತೆ  ದೇಶದ ಹಲವು ಕಡೆ ಕೋಮು ಗಲಭೆ ನಡೆದವು.  ಆಗ ನರಸಿಂಹ ರಾವ್‌ ಅವರು ಹಿರಿಯ ಪತ್ರಕರ್ತರನ್ನು ಕರೆದು ಮಾತನಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ನೆರವು ನೀಡಬೇಕೆಂದು ಕೋರಿದ್ದರು. ಅಂದು ಅವರ ಆಹ್ವಾನದ ಮೇರೆಗೆ ನಾನೂ ಅವರನ್ನು ಭೇಟಿಯಾಗಿದ್ದೆ. ಅಯೋಧ್ಯೆಯ ಆ ವಿವಾದಗ್ರಸ್ತ ಜಾಗದಲ್ಲಿ ಇರುಳು ಕಳೆಯುವುದರೊಳಗೆ ಅದು ಹೇಗೆ ಸಣ್ಣ ದೇಗುಲವೊಂದು ತಲೆ ಎತ್ತಿ ಬಿಟ್ಟಿದೆ ಎಂದು ನಾನು ಪ್ರಶ್ನಿಸಿದ್ದೆ. ಅದಕ್ಕೆ ಅವರು ಉತ್ತರಿಸುತ್ತಾ ‘ಅದು ಅಲ್ಲಿ ಬಹಳ ಕಾಲ ಇರುವುದಿಲ್ಲ ಬಿಡಿ’ ಎಂದಿದ್ದರು.

ಬಾಬರಿ ಮಸೀದಿ ಉರುಳಿ ಇದೀಗ 22 ವರ್ಷಗಳು ಕಳೆದಿವೆ. ಮಸೀದಿ ಇದ್ದ ಜಾಗದಲ್ಲಿ ತಲೆ ಎತ್ತಿದ್ದ ಪುಟ್ಟ ಗುಡಿಯ ಬಗ್ಗೆ ನರಸಿಂಹ ರಾವ್‌ ಅವರು ಅಧಿಕಾರಲ್ಲಿದ್ದಷ್ಟೂ ಕಾಲ ನಾನು ಪತ್ರ ಬರೆದು ನೆನಪಿಸುತ್ತಲೇ ಇದ್ದೆ. ಆದರೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇವತ್ತಿಗೂ ಆ ಗುಡಿ ಅದೇ ರೀತಿ ಇದೆ.

ವಿವಾದಿತ ಸ್ಥಳವು ಬಹಳ ಹಿಂದೆ ರಾಮ ಜನ್ಮಭೂಮಿಯಾಗಿತ್ತು, ಅದು ಬಾಬರಿ ಮಸೀದಿಯಲ್ಲ ಎಂಬುದಾಗಿ ವಾದಿಸುತ್ತಿದ್ದವರ ವಿಚಾರ­ಗಳನ್ನೂ ನಾನು ಬಲ್ಲೆ. ಎಲ್ಲಾ ವಾದ­ಗಳನ್ನೂ ತಾಳ್ಮೆಯಿಂದಲೇ ಕೇಳಿಸಿಕೊಂಡಿದ್ದೇನೆ. ಆದರೆ ಹಿಂಸಾಚಾರವನ್ನು ವಿರೋಧಿಸಿದ ಕೆಲವು ಗಾಂಧಿವಾದಿಗಳ ಮೇಲೆ  ರಾಮ ಸೇವಕರೆಂಬ ಹಲವರು ಹಲ್ಲೆ ನಡೆಸಿದ್ದ ಸಂಗತಿ ಗೊತ್ತಾದಾಗ ನಾನು ತೀವ್ರವಾಗಿ ನೊಂದಿದ್ದೆ.

ವೈವಿಧ್ಯಮಯ ಸಂಸ್ಕೃತಿ, ಭಾಷೆ, ಧರ್ಮ­ಗಳಿಂದ ಕೂಡಿರುವ ಈ ದೇಶದ ವಿಭಿನ್ನ ಜನ ಸಮುದಾಯದ ಅಭಿಪ್ರಾಯ ಮತ್ತು ನಂಬಿಕೆಗಳ ಮೇಲೆ ಬಾಬರಿ ಮಸೀದಿ ಕೆಡವಿದ ಘಟನೆ ಪರಿಣಾಮ ಬೀರಿತು. ಮುಸ್ಲಿಂ ಸಮುದಾಯ ಈ ದೇಶದ ಜಾತ್ಯತೀತ ವ್ಯವಸ್ಥೆಯ ಮೇಲಿಟ್ಟಿದ್ದ ನಂಬಿಕೆಯ ಅಡಿಗಲ್ಲುಗಳು ಅಲುಗಾಡಿದವು. ಮುಸಲ್ಮಾನರಲ್ಲಿ ಕೆಲವರು ಭಯೋತ್ಪಾದಕರ ವಿರುದ್ಧ ಧ್ವನಿ ಎತ್ತುವುದಕ್ಕೂ ಮೀನ ಮೇಷ ಎಣಿಸುತ್ತಿರುವುದೂ ಕಂಡು ಬರತೊಡಗಿತು.

ಮುಸ್ಲಿಂ ಸಮುದಾಯದ ಕೆಲವರು ಭಯೋತ್ಪಾದಕರ ಬಗ್ಗೆ ಒಲವು ತೋರಿದ್ದು ಕಂಡು ಬಂದರೆ, ನನಗೆ ಅವರ ಆ ನಂಬಿಕೆಗಳ ಬುಡದಲ್ಲಿ ಬಾಬರಿ ಮಸೀದಿ ಧ್ವಂಸದ ಸದ್ದು ಕೇಳಿ ಬರುತ್ತಿದೆ. ಈ ತೆರನಾದ ಅಭದ್ರತೆಯ ಆತಂಕದಲ್ಲಿರುವ ಮುಸಲ್ಮಾನ ಸಮುದಾಯ, ಈಗ ಪ್ರಧಾನಿ ಪಟ್ಟಕ್ಕೆ ನರೇಂದ್ರ ಮೋದಿ ಹೆಸರು ಕೇಳಿ ಬರುತ್ತಿರುವಾಗ ಇನ್ನಷ್ಟು ತತ್ತರಿಸಿ ಹೋಗಿದೆ.

ಭಾರತದಲ್ಲಿ ಶತ ಶತಮಾನಗಳಿಂದ ಹತ್ತು ಹಲವು ಧರ್ಮಗಳ ಮಂದಿ ಕೂಡಿ ಬಾಳಿದ್ದಾರೆ. ಈ ನೆಲದ ಮಂದಿಗೆ ಮುಂದಿನ ದಿನಗಳಲ್ಲಿಯೂ ಅದೇ ರೀತಿ ಬದುಕುವುದು ಗೊತ್ತಿದೆ ಎಂಬುದು ನನ್ನ ಅನಿಸಿಕೆ. ಸರ್ವ ಧರ್ಮಗಳ ತೂಗು­ತೊಟ್ಟಿಲಂತಿರುವ ಈ ನಾಡಿನ ವ್ಯವಸ್ಥೆಯನ್ನು ಮೋದಿ ಅಲ್ಲಾಡಿಸಲು ಹೊರಟರೆ, ಅವರು ದೇಶದಾದ್ಯಂತ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ ಎನ್ನುವುದಂತೂ ನಿಜ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT