ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದು ನಿರಾಧಾರ ಇಂದು ಆಧಾರ

Last Updated 7 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

‘ಎನ್‌ಡಿಎ ಅಧಿಕಾರಕ್ಕೆ ಬಂದರೆ ಆಧಾರ್ ಯೋಜನೆಯನ್ನು ಕಸದಬುಟ್ಟಿಗೆ ಎಸೆಯುತ್ತೇವೆ’ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಈ ಮಾತು ಬೆಂಗಳೂರಿನಲ್ಲಿ ಕೇಳಿಸಿದಷ್ಟು ಬೇರೆಲ್ಲೂ ಕೇಳಿರಲಿಲ್ಲ. ಎನ್‌ಡಿಎ ಗೆದ್ದು ಅಧಿಕಾರಕ್ಕೇರಿ 207 ದಿನಗಳಾಗುವ ಹೊತ್ತಿಗೆ ದೇಶದ ಎಲ್ಲಾ ಎಲ್‌ಪಿಜಿ ಗ್ರಾಹಕರ ಮೊಬೈಲ್ ಫೋನುಗಳಿಗೆ ನಿಮ್ಮ ಆಧಾರ್ ಸಂಖ್ಯೆ­ಯನ್ನು ಗ್ಯಾಸ್ ಸಂಪರ್ಕದ ಜೊತೆ ಜೋಡಿಸಿಕೊಳ್ಳಿ ಎಂಬ ಸಂದೇಶಗಳು ಕನಿಷ್ಠ ಮೂರು ಬಾರಿ ತಲುಪಿವೆ.

ಎಲ್ಲಾ ಪ್ರಮುಖ ಮಾಧ್ಯಮಗಳಲ್ಲಿ ಇದಕ್ಕೆ ಸಂಬಂಧಿಸಿದ ಜಾಹೀರಾತುಗಳು ಪ್ರಕಟವಾಗುತ್ತಿವೆ. ಈ ಯೋಜನೆಯನ್ನು ಜಾರಿಗೊಳಿಸಿದ ಕಾಂಗ್ರೆಸ್ ‘ನರೇಂದ್ರಮೋದಿಯವರ ಯು ಟರ್ನ್’ ರಾಜಕಾರಣದ ಬಗ್ಗೆ ಹೇಳುತ್ತಾ ತಾನು ರೂಪಿಸಿದ್ದ ಯೋಜನೆ ಎಷ್ಟು ಮಹತ್ವದ್ದು ಎಂಬುದು ಈಗ ಅರ್ಥವಾಯಿತಲ್ಲವೇ ಎಂದು ಪ್ರಶ್ನಿಸುತ್ತಿದೆ. 2014ರ ಮೇ 25ರ ತನಕ ‘ರಾಷ್ಟ್ರದ ಭದ್ರತೆಗೆ ಮಾರಕವಾಗಿರುವ ಯೋಜನೆ’ ಎನ್ನುತ್ತಿದ್ದ ಬಿಜೆಪಿ ಅಧಿಕಾರಕ್ಕೇರಿದ ಕೂಡಲೇ ತನ್ನ ನಿಲುವು ಬದಲಾಯಿಸಿಕೊಂಡದ್ದೇಕೆ? ಹಾಗಿದ್ದರೆ ಇದು ಕಾಂಗ್ರೆಸ್ ಹೇಳುವಂತೆ ನಿಜಕ್ಕೂ ಜನಪರವಾದ ಯೋಜನೆಯೇ? ಯುಪಿಎ ಈ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಿದ ದಿನದಿಂದ ಆರಂಭಿಸಿ ಲೋಕಸಭಾ ಚುನಾವಣೆ ಉದ್ದಕ್ಕೂ ಬಿಜೆಪಿ ಮಾತನಾಡಿದ್ದೆಲ್ಲವೂ ಸುಳ್ಳೇ?

ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರ­ದಲ್ಲಿದ್ದಾಗ ಅದಕ್ಕೆ ಯಾವ ಕಾರಣಕ್ಕೆ ‘ಆಧಾರ್’ ಅಗತ್ಯ ಎನಿಸಿತ್ತೋ ಅದೇ ಕಾರಣಕ್ಕೆ ಈಗಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೂ ಅಗತ್ಯ ಎನಿಸುತ್ತಿದೆ. ಹಿಂದೆ ಕಾಂಗ್ರೆಸ್ ಕೂಡಾ ಕಲ್ಯಾಣ ಯೋಜನೆಗಳನ್ನು ಸರಿಯಾಗಿ ಫಲಾನುಭವಿಗಳಿಗೆ ತಲುಪಿಸುವುದಕ್ಕೆ ಈ ಯೋಜನೆ ಅಗತ್ಯ ಎನ್ನುತ್ತಿತ್ತು. ಈಗ ಬಿಜೆಪಿ ಅದನ್ನೇ ಹೇಳುತ್ತಿದೆ. ಅಂದರೆ ಸರ್ಕಾರಿ ಸೇವೆ ಪಡೆಯುವ­ವರನ್ನು ಗುರುತಿಸುವುದಕ್ಕೆ ಸರ್ಕಾರಕ್ಕೆ ಸಹಾಯಕ­ವಾಗುವ ಒಂದು ವ್ಯವಸ್ಥೆ ಬೇಕು ಅದಕ್ಕಾಗಿ ಆಧಾರ್ ಎಂಬುದು ಈ ವಾದದ ತಿರುಳು.

ಆದರೆ ಇದೊಂದೇ ಸಮಸ್ಯೆಯಾಗಿದ್ದರೆ ಅದನ್ನು ಪರಿಹರಿಸಿಕೊಳ್ಳುವುದಕ್ಕೆ ದೇಶದ ಪ್ರತಿಯೊಬ್ಬ ಪ್ರಜೆಯ ಬೆರಳಚ್ಚು ಮತ್ತು ಕಣ್ಣಿನ ಪಾಪೆಯ ಎಲೆಕ್ಟ್ರಾನಿಕ್ ದಾಖಲೆ ಬೇಕಿರಲಿಲ್ಲ. ಕರ್ನಾಟಕದಲ್ಲಿ ಒಂದಕ್ಕಿಂತ ಹೆಚ್ಚು ಎಲ್‌ಪಿಜಿ ಸಂಪರ್ಕಗಳನ್ನು ಹೊಂದಿರುವವರನ್ನು ಪತ್ತೆ ಹಚ್ಚುವುದಕ್ಕೆ ಬಳಕೆಯಾದದ್ದು ವಿದ್ಯುತ್ ಬಿಲ್ಲುಗಳು. ಮಹತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನಿಜವಾದ ಫಲಾನುಭವಿಗಳಿಗೆ ತಲುಪಿಸುವುದಕ್ಕೆ ಗ್ರಾಮಸಭೆ, ವಾರ್ಡ್ ಸಭೆಗಳನ್ನು ಸರಿಯಾಗಿ ನಡೆಸಿದ್ದರೆ ಸಾಕಾಗುತ್ತಿತ್ತು. ಕೃಷಿ ಸಬ್ಸಿಡಿಗಳ ಸರಿಯಾದ ವಿತರಣೆಗೆ ಸಹಕಾರ ಸಂಘಗಳನ್ನು ಅವಲಂಬಿಸಬಹುದಿತ್ತು.

ಈ ಪ್ರಕ್ರಿಯೆ ಆಡಳಿತದಲ್ಲಿ ಜನರ ಪಾಲುದಾರಿಕೆಯನ್ನು ಹೆಚ್ಚಿಸುತ್ತಿತ್ತು. ಆದರೆ ‘ಅರ್ಥಶಾಸ್ತ್ರಜ್ಞ ಪ್ರಧಾನಿ’ಯಿಂದ ತೊಡಗಿ ‘ಪ್ರಬಲ ಪ್ರಧಾನಿ’ಯ ತನಕದ ಎಲ್ಲರಿಗೂ ತಮ್ಮನ್ನು ಆರಿಸಿದ ಜನರಿಗಿಂತ ಹೆಚ್ಚು ನಂಬಿಕೆ ಹನ್ನೆರಡು ಅಂಕಿಗಳ ‘ಆಧಾರ್’ನಲ್ಲಿ.
ಈ ನಂಬಿಕೆಯ ಹಿಂದೆ ಇರುವುದು ಅಧಿಕಾರಲ್ಲಿ ಇರುವವರ ಅಭದ್ರತೆ. ಇದು ನಿರ್ದಿಷ್ಟ ಪಕ್ಷಕ್ಕೆ, ಸಿದ್ಧಾಂತಕ್ಕೆ ಅಥವಾ ಅಧಿಕಾರದ ಸ್ವರೂಪಕ್ಕೆ ಸೀಮಿತವಾಗಿರುವ ಸಂಗತಿಯಲ್ಲ. ಚಕ್ರವರ್ತಿ­ಗಳು, ಸರ್ವಾಧಿಕಾರಿಗಳಿಂದ ತೊಡಗಿ ಜನರಿಂದಲೇ ಆಯ್ಕೆಯಾಗಿರುವ ಜನಪ್ರತಿನಿಧಿಗಳ ಪ್ರಭುತ್ವದ ತನಕ ಎಲ್ಲಾ ಅಧಿಕಾರ ಪೀಠಗಳನ್ನೂ ಬಾಧಿ­ಸುವ ಸಂಗತಿ.

ಅಧಿಕಾರವಿಲ್ಲದೇ ಇದ್ದಾಗ ‘ಮಾರಕ’ ಎಂಬಂತೆ ಕಾಣಿಸುವ ಸಂಗತಿಗಳು ಅಧಿಕಾರ­ಕ್ಕೇರಿದ ತಕ್ಷಣ ‘ಅಗತ್ಯ’ ಎನಿಸುವುದು ಇದೇ ಕಾರಣಕ್ಕೆ. ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಗಳ ಗುರುತಿಸುವಿಕೆ, ರಾಷ್ಟ್ರೀಯ ಭದ್ರತೆ ಇತ್ಯಾದಿಗಳೆಲ್ಲವೂ ಗಾಳಕ್ಕೆ ಹಾಕಿದ ಎರೆಗಳು. ಈ ಎರೆಗಳನ್ನು ಎಷ್ಟು ಜಾಣತನದಿಂದ ರೂಪಿಸಲಾಗಿರುತ್ತದೆ ಎಂದರೆ ಅದನ್ನು ಪ್ರಜೆಗಳು ನುಂಗಲೇ ಬೇಕಾಗುತ್ತದೆ. ಈ ಎರೆ­ಗಳನ್ನೆಲ್ಲಾ ಈ ಹಿಂದೆ ಕಾಂಗ್ರೆಸ್ ರೂಪಿಸಿಟ್ಟಿತ್ತು. ಬಿಜೆಪಿ ಅದನ್ನೀಗ ಗಾಳಕ್ಕೆ ಸಿಕ್ಕಿಸುವ ಕೆಲಸವನ್ನಷ್ಟೇ ಮಾಡುತ್ತಿದೆ.
ಎಲ್ಲಾ ಕಾಲದಲ್ಲಿಯೂ ಮಾಹಿತಿ ಎಂಬುದು ಒಂದು ದೊಡ್ಡ ಶಕ್ತಿ.

ಇದರ ವ್ಯವಸ್ಥಿತ ಸಂಗ್ರಹ ಮತ್ತು ನಿರ್ವಹಣೆ ತಂತ್ರಜ್ಞಾನವೆಂಬ ಮತ್ತೊಂದು ದೊಡ್ಡ ಶಕ್ತಿಯ ಮೂಲಕ ಸಾಧ್ಯವಾಗುತ್ತಿರುವ ಕಾಲಘಟ್ಟ­ವಿದು. ಇದನ್ನು ಪ್ರಭುತ್ವವೆಂಬ ಶಕ್ತಿ ಬಳಸಿಕೊಳ್ಳ­ಲಾರದು ಎಂದು ಭಾವಿಸುವುದೇ ಮೂರ್ಖತನ. ಪಂಚಿಂಗ್ ಕಾರ್ಡ್‌ಗಳ ಕಂಪ್ಯೂಟರ್ ಇದ್ದ ಕಾಲಘಟ್ಟ­ದಲ್ಲಿಯೇ ಇಂಥದ್ದೊಂದು ದತ್ತಸಂಚಯವನ್ನು ಹಿಟ್ಲರ್ ರೂಪಿಸಿದ್ದ. ಯಹೂದ್ಯರ ವ್ಯವಸ್ಥಿತ ಹತ್ಯೆಗೆ ಬಳಕೆಯಾದದ್ದು ಇದೇ ಐಬಿಎಂ ಒದಗಿಸಿದ ಈ ಆದಿಮ ಕಂಪ್ಯೂಟರುಗಳೇ. ನಮ್ಮ ಸರ್ಕಾರಗಳಿಗೆ ಹಿಟ್ಲರ್‌ಗೆ ಇದ್ದ ಉದ್ದೇಶವಿರಬೇಕಾಗಿಲ್ಲ. ಆದರೆ ಅವುಗಳಿಗಿರುವ ಮಾಹಿತಿಯ ದಾಹ ಮಾತ್ರ ಹಿಟ್ಲರ್ ಆದಿಯಾಗಿ ಎಲ್ಲಾ ಪ್ರಭುತ್ವಗಳಿಗೆ ಇರುವಂಥದ್ದೇ.

ಭಾರತದಲ್ಲಿ ವ್ಯಕ್ತಿಯ ಖಾಸಗೀತನಕ್ಕೆ ಸಂಬಂಧಿಸಿದ ಯಾವುದೇ ಕಾನೂನು ರೂಪಿಸುವ ಮೊದಲೇ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಇದರ ಪರಿಣಾಮ ಏನೆಂಬುದನ್ನು ಸರ್ಕಾರವೇ ಈ ಹಿಂದೆ ಹೇಳಿತ್ತು. ಭಾರತ ಸರ್ಕಾರ ಖಾಸಗಿ ಮಾಹಿತಿಗಳಿಗೆ ಸಂಬಂಧಿಸಿದಂತೆ ಒಂದು ಕಾನೂನು ಮಾಡುವುದರ ಅಗತ್ಯವನ್ನು ಆಧಾರ್‌ನ ಹಿನ್ನೆಲೆಯಲ್ಲಿಯೇ ಹೇಳಿತ್ತು. ಅಂದರಂತೆ ಸದ್ಯ ವಿಕೇಂದ್ರೀಕೃತವಾಗಿರುವ ವೈಯಕ್ತಿಕ ಮಾಹಿತಿಗಳ ದತ್ತ ಸಂಚಯ ಆಧಾರ್ ಸಂಖ್ಯೆಯ ಮೂಲಕ ಏಕತ್ರಗೊಳ್ಳುವ ಸಾಧ್ಯತೆ ಇದೆ.

ಅಂದರೆ ಬ್ಯಾಂಕ್ ಖಾತೆ ತೆರೆಯುವಾಗ, ಫೋನ್ ಸಂಪರ್ಕ ಪಡೆಯುವಾಗ, ಆಸ್ತಿ ಖರೀದಿಸುವಾಗ ಹೀಗೆಲ್ಲಾ ನೀಡುವ ವೈಯಕ್ತಿಕ ಮಾಹಿತಿಗಳು ಅವುಗಳಷ್ಟಕ್ಕೆ ಭಿನ್ನ ದತ್ತ ಸಂಚಯಗಳಲ್ಲಿ ಇರುತ್ತವೆ. ಯಾವುದೋ ಒಂದನ್ನು ಬಳಸಿ ಮತ್ತೊಂದನ್ನು ಕಂಡುಕೊಳ್ಳುವುದು ತುಂಬಾ ಕಷ್ಟ. ಕೆಲವೊಮ್ಮೆ ಅಸಾಧ್ಯ. ಆದರೆ ಎಲ್ಲೆಡೆಯೂ ಆಧಾರ್‌ನಂಥ ಸಂಖ್ಯೆಯೊಂದನ್ನು ಬಳಸಿದಾಗ ಎಲ್ಲಾ ವಿವರಗಳನ್ನೂ ಸುಲಭದಲ್ಲಿ ಸಂಗ್ರಹಿಸಲು ಸಾಧ್ಯ.

ಆಧಾರ್ ಸಂಖ್ಯೆಯೊಂದಿದ್ದರೆ ನಿಮ್ಮ ಎಲ್ಲಾ ಮಾಹಿತಿಗಳನ್ನು ಯಾರಿಗಾದರೂ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದರ್ಥ. ವೈಯಕ್ತಿಕ ಮಾಹಿತಿ ಕಳವು ಮಾಡುವವರಿಗೆ ಇದು ಹೊಸ ಮತ್ತು ಸುಲಭದ ಅವಕಾಶವನ್ನು ತೆರೆಯುತ್ತದೆ. ಹಾಗೆಯೇ ವಿವಿಧ ದತ್ತಸಂಚಯಗಳು ಏಕತ್ರ­ಗೊಂಡಾಗ ಅದರ ದುರ್ಬಳಕೆಯ ಸಾಧ್ಯತೆಗಳೂ ಹೆಚ್ಚುತ್ತವೆ. ಇದಕ್ಕಾಗಿ ಖಾಸಗಿ ಮಾಹಿತಿಯ ರಕ್ಷಣೆಗೆ ಒಂದು ಕಾನೂನು ಬೇಕು. ಈ ಎಲ್ಲಾ ಮಾತುಗಳನ್ನು ಅಧಿಕಾರಕ್ಕೇರುವ ಮೊದಲು ಬಿಜೆಪಿಯೂ ಹೇಳುತ್ತಿತ್ತು. ಆದರೆ ಅಧಿಕಾರದಲ್ಲಿ­ರುವಾಗ ಇದು ಮರೆತು ಹೋಗಿದೆಯಷ್ಟೆ.

ರಾಜಪ್ರಭುತ್ವದ ಕಾಲದಲ್ಲಿ ಅಭದ್ರತೆಗಳನ್ನು ಮೀರಿ ಪ್ರಜೆಗಳನ್ನು ಪಾಲಿಸಿದವರನ್ನು ರಾಜರ್ಷಿ­ಗಳೆನ್ನುತ್ತಿದ್ದರು. ಪ್ರಜಾಪ್ರಭುತ್ವದ ಪರಿಕಲ್ಪನೆಯಲ್ಲಿ ಪ್ರಜೆಗಳ ಬಗ್ಗೆ ಪ್ರಭುತ್ವಕ್ಕೆ ಅಭದ್ರತೆ ಇರಬಾರದು. ಏಕೆಂದರೆ ಇಲ್ಲಿ ಪ್ರಜೆಗಳೇ ಪ್ರಭುಗಳು. ಅದೀಗ ಕೇವಲ ಶಾಲಾ ಮಕ್ಕಳ ಪಠ್ಯಪುಸ್ತಕದಲ್ಲಿ ಮಾತ್ರ ಉಳಿದುಬಿಟ್ಟಿದೆ.

ಅಂದ ಹಾಗೆ ಭಾರತ ಈ ಯೋಜನೆಯನ್ನು ಜಾರಿಗೊಳಿಸಲು ಹೊರಟ ಅದೇ ವರ್ಷ ಬ್ರಿಟನ್‌ನಲ್ಲಿ ಇಂಥದ್ದೇ ಯೋಜನೆಯಾದ ಎನ್‌ಐಡಿಯನ್ನು ಅಲ್ಲಿನ ಸರ್ಕಾರ ರದ್ದು ಪಡಿಸಿತು. ಅದಕ್ಕೆ ಅವರು ನೀಡಿದ ಕಾರಣ ‘ಸರ್ಕಾರ ಪ್ರಜೆಗಳ ಸೇವಕನಾಗಿರಬೇಕೇ ಹೊರತು ಅವರ ಒಡೆಯನಾಗಿರಬಾರದು’. ನಮ್ಮ ‘ಪ್ರಧಾನ ಸೇವಕ’ರಿಗೆ ಈ ಮಾತು ಆದರ್ಶವಾದೀತೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT