ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧ ಶ್ರದ್ಧೆ

Last Updated 18 ಮೇ 2014, 19:30 IST
ಅಕ್ಷರ ಗಾತ್ರ

ಹುಡುಗ ಬೆಳೆದದ್ದೇ ಬಡತನದಲ್ಲಿ. ಆದರೆ, ಅವನ ತಂದೆ ಸಾಧ್ಯವಿದ್ದಷ್ಟು ಮಟ್ಟಿಗೆ ಬಡತನದ ಬೆಂಕಿಯನ್ನು ಹೊಟ್ಟೆಯಲ್ಲಿ ಬಚ್ಚಿಟ್ಟುಕೊಂಡೇ ಮಗ­ನನ್ನು ಪೋಷಿಸಿದರು. ಅವನಿಗೆ ಅದರ ಬೇಗೆ ತಾಗದಂತೆ ನೋಡಿಕೊಂಡರು. ಹುಡುಗ ಚಿಕ್ಕವನಾಗಿದ್ದಾಗಲೇ ತಾಯಿ­ಯನ್ನು ಕಳೆದುಕೊಂಡಿದ್ದರಿಂದ ತಾಯಿ-ತಂದೆ ಎರಡೂ ತಾವೇ ಆಗಿ ಮಗನನ್ನು ಸಾಕಿದರು.

ಹುಡುಗ ಶಾಲೆ, ಕಾಲೇಜು­ಗಳಲ್ಲಿ ಚೆನ್ನಾಗಿಯೇ ಓದಿದ. ಅವನ ಓದಿಗೆ ತಕ್ಕ ಹಾಗೆಯೇ ಒಳ್ಳೆಯ ಕೆಲಸ ದೊರೆಯಿತು.  ಕೆಲಸಮಾಡಲು ತನ್ನೂ­ರನ್ನು ಬಿಟ್ಟು ಪಟ್ಟಣಕ್ಕೆ ಹೋಗುವುದು ಅನಿವಾರ್ಯ­ವಾಯಿತು. ತಂದೆಗೆ ಊರಿ­ನಲ್ಲಿ ಜಮೀನಿನ ಕೆಲಸವಾದ್ದರಿಂದ ಬಿಟ್ಟು ಹೋಗುವಂತಿಲ್ಲ, ಈತನಿಗೆ ಅವರನ್ನು ಬಿಟ್ಟು ಹೋಗಲು ಮನಸ್ಸಿಲ್ಲ. ಅವನಿಗೆ ತಂದೆಯ ಮೇಲೆ ಅಪಾರ ಪ್ರೀತಿ, ಗೌರವ.  ಅವರೊಬ್ಬರೇ ಊರಿನಲ್ಲಿ ಹೇಗಿ­ದ್ದಾರು ಎಂಬ ಚಿಂತೆ. ಆದರೂ ತಂದೆ ಸಮಾಧಾನ ಹೇಳಿ ಅವನನ್ನು ಒಪ್ಪಿಸಿ ಪಟ್ಟಣಕ್ಕೆ ಕಳುಹಿಸಿದರು.

ಪಟ್ಟಣಕ್ಕೆ ಬಂದ ಮೇಲೂ ಹುಡುಗನಿಗೆ ಸಮಾಧಾನವಿಲ್ಲ, ಸದಾಕಾಲ ತಂದೆ­ಯದೇ ಧ್ಯಾನ. ಇತ್ತ ಊರಿನಲ್ಲಿ ತಂದೆಯ ಹಣಕಾಸಿನ ಪರಿಸ್ಥಿತಿ ಬಿಗಡಾಯಿಸಿತು.  ಹೇಗೂ ಮಗ ಈಗ ಕೈ ತುಂಬ ಗಳಿಸುತ್ತಾನಲ್ಲ ಮತ್ತು ಇನ್ನೂ ಅವನಿಗೆ ಮದುವೆ, ಸಂಸಾರದ ಗೋಜಲು ಇರದಿರುವುದರಿಂದ ಹಣ ಮಿಗುತ್ತದೆ ಎಂದು ತಿಳಿದು ತಂದೆ ಮಗನಿಗೆ ಪತ್ರ ಬರೆದು ಸ್ವಲ್ಪ ಹಣ ಕಳಿಸಲು ಕೇಳಿದರು. ಪತ್ರ ಮುಟ್ಟಿದ ತಕ್ಷಣ ಹಣ ಕಳಿಸುವುದಿಲ್ಲ, ಸ್ವತಃ ಮಗನೇ ಊರಿಗೆ ಬಂದು ಹಣ ಕೊಟ್ಟು ಹೋಗುತ್ತಾನೆ ಎಂಬ ನಂಬಿಕೆ ಅವರದು.

ಯಾಕೆಂದರೆ ಅವರಿಗೆ ತಮ್ಮಲ್ಲಿ ಮಗ ಇಟ್ಟ ಶ್ರದ್ಧೆಯ ಅರಿವು ಇತ್ತು. ಆದರೆ, ಮಗನೂ ಬರಲಿಲ್ಲ, ಅವನಿಂದ ಹಣವೂ ಬರಲಿಲ್ಲ. ಮತ್ತೊಂದು ಪತ್ರ ಬರೆದರು. ಅದಕ್ಕೂ ಉತ್ತರವಿಲ್ಲ. ವಿಳಾಸ ಸರಿಯಾಗಿದೆಯೇ ಎಂದು ಪರೀಕ್ಷಿಸಿ, ಅವರಿವರನ್ನು ಕೇಳಿ ಮತ್ತೆರಡು ಪತ್ರ ಬರೆದರು.  ಅವಕ್ಕೂ ಉತ್ತರವಿಲ್ಲ. ಹಣ ಬರಲಿಲ್ಲವೆಂಬ  ನಿರಾಸೆಯೊಂದಿಗೆ ಮಗನ ನಿರ್ಲಕ್ಷ್ಯವನ್ನು ಕಂಡು ದುಃಖವಾಯಿತು. ಅಷ್ಟು  ಪ್ರೀತಿಯಿಂದ, ವಿಶ್ವಾಸದಿಂದ ಇದ್ದ ಮಗ ಇಷ್ಟು ಬೇಗ ತಮ್ಮನ್ನು ಮರೆತುಬಿಟ್ಟನೇ ಎಂಬ ಆತಂಕವಾಯಿತು. ಅದನ್ನು ಒಬ್ಬಿಬ್ಬರು ತುಂಬ ಆತ್ಮೀಯರೊಡನೆ ಹಂಚಿ­ಕೊಂಡರು.

ಅವರು ಹಿರಿಯರಿಗೆ ಸಮಾಧಾನ­ಮಾಡಿ ಅವರನ್ನು ಕರೆದುಕೊಂಡು ಮಗನಿದ್ದ ಪಟ್ಟಣಕ್ಕೆ ಬಂದರು.  ಮನೆಯ ವಿಳಾಸವನ್ನು ಹುಡುಕಿಕೊಂಡು ಹೋದರು.  ಮನೆಗೆ ಅನಿರೀಕ್ಷಿತವಾಗಿ ಬಂದ ತಂದೆಯನ್ನು ಕಂಡು ಮಗನಿಗೆ ಅಪಾರ ಆನಂದವಾಯಿತು, ಕಣ್ಣಲ್ಲಿ ನೀರು ಉಕ್ಕಿದವು. ಗಟ್ಟಿಯಾಗಿ ಅವರ ಪಾದಗಳನ್ನು ಹಿಡಿದುಕೊಂಡು ನಮ­ಸ್ಕಾರ ಮಾಡಿದ. ತನ್ನ ಮಗ ಬದಲಾಗಿಲ್ಲ, ತನ್ನ ಬಗೆಗಿನ ಗೌರವ ಕಡಿಮೆಯಾಗಿಲ್ಲ ಎಂಬ ಸಮಾಧಾನ ತಂದೆಯಲ್ಲಿ ಮೂಡಿತು.  ತಂದೆ ಸಂಜೆ ಕೇಳಿದರು, ‘ಮಗೂ, ನಾನು ನಿನಗೆ ಇಷ್ಟು ಪತ್ರ ಬರೆದೆ, ಒಂದಕ್ಕೂ ನೀನು ಉತ್ತರ ಬರೆಯಲಿಲ್ಲ. ಏಕೆ?’ ಮಗ ಹೇಳಿದ, ‘ನಿಮ್ಮ ಪತ್ರವೆಂದರೆ ಅದು ನನಗೆ ಭಗವಂತನ ಸಂದೇಶವಿದ್ದ ಹಾಗೆ.
ನೋಡಿ, ಅವೆಲ್ಲವುಗಳನ್ನು ಹೇಗೆ ಜೋಡಿಸಿ ದೇವರ ಪಟದ ಮುಂದೆ ಇಟ್ಟಿದ್ದೇನೆ’.

ತಂದೆ ಹತ್ತಿರ ಹೋಗಿ ನೋಡಿದರೆ ಅವರು ಬರೆದ ಪ್ರತಿ­ಯೊಂದು ಪತ್ರವೂ ಅಲ್ಲಿದೆ. ಆತ ಒಂದನ್ನೂ ಒಡೆದು ನೋಡಿಲ್ಲ! ಅಂತೆಯೇ ಅವರಿಗೆ ಮಾರುತ್ತರವೂ ಬಂದಿರಲಿಲ್ಲ, ಹಣವಂತೂ ಬರಲೇ ಇಲ್ಲ. ಇದನ್ನೇ ಅಂಧಶ್ರದ್ದೆ ಎಂದು ಕರೆ­ಯುವುದು. ಶ್ರದ್ಧೆ ಬಾಳಿಗೆ ಬಹಳ ಮುಖ್ಯವಾದದ್ದು.  ಅದು ಜೀವನ ನೌಕೆಯ ಲಂಗರು ಇದ್ದ ಹಾಗೆ. ಆದರೆ, ಆ ಶ್ರದ್ಧೆ ಪರೀಕ್ಷಿಸಿ ನೋಡುವ, ಚಿಂತನೆಗೆ ಒಡ್ಡುವ ನಮ್ಮ ಒಳಕಣ್ಣನ್ನು ಮುಚ್ಚಬಾರದು. 

ನಮಗೆ ತಲೆ ತಲಾಂತರ­ದಿಂದ ಪರಂಪರೆಯಾಗಿ ಬಂದ ವೇದ, ಶಾಸ್ತ್ರ, ಪುರಾಣಗಳಲ್ಲಿ ಏನಿದೆ ಎಂದು ಪರೀಕ್ಷಿಸಿ ಅದರಲ್ಲಿಯ ಒಳ್ಳೆಯ ಅಂಶಗಳನ್ನು,  ನಮಗೆ ಇಂದಿಗೂ ಪ್ರಯೋ­ಜನ­ಕಾರಿಯಾದ ಅಂಶಗಳನ್ನು ಕಂಡುಕೊಂಡು ಬಳಸಿ ಕೃತಜ್ಞತೆ ಸಲ್ಲಿಸುವುದು ಶ್ರದ್ಧೆ. ಆ ಗ್ರಂಥಗಳನ್ನು ಓದದೆ ಜೋಡಿಸಿಟ್ಟು ಪೂಜೆ, ಮಂಗಳಾ­ರತಿ ಮಾಡಿ ಪ್ರಸಾದ ಪಡೆಯುವುದು ಅಂಧಶ್ರದ್ಧೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT