ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ಗದ ಪರಿಹಾರ

Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಅದೊಂದು ಬಹುರಾಷ್ಟ್ರೀಯ ಕಂಪ­ನಿಯ ಆಡಳಿತ ವಿಭಾಗದ ಕಟ್ಟಡ. ಅದು ಎತ್ತರದ ಬಹುಸುಂದರವಾಗಿ ನಿರ್ಮಿಸಿದ ಕಟ್ಟಡ. ಇಡೀ ನಗರದ ಹೆಮ್ಮೆಯ ವಾಸ್ತು ವಿನ್ಯಾಸ ಅದರದು. ಕಂಪನಿ­ಯಲ್ಲಿ ಕೆಲಸ ಮಾಡುವವರಿಗೆ ಮಾತ್ರ­ವಲ್ಲ, ನಗರವಾಸಿಗಳಿಗೆ ಅದೊಂದು ದರ್ಶನೀಯ ಪ್ರವಾಸಿ ಸ್ಥಾನವಾಗಿತ್ತು. ಹೆಮ್ಮೆಯಿಂದ ತಲೆ ಎತ್ತಿ ನಿಂತ ಈ ಬೃಹತ್ ಕಟ್ಟಡ ಸಂಜೆ ಮತ್ತು ರಾತ್ರಿ ಹೆಚ್ಚು ಚೆನ್ನಾಗಿ ಕಾಣಲೆಂದು ದೀಪಾ­ಲಂಕಾರ ಮಾಡಿದ್ದರು. ಬಗೆಬಗೆಯ ಬಣ್ಣದ ಪ್ರಖರ ದೀಪಗಳು ಕಟ್ಟಡದ ಸೌಂದರ್ಯವನ್ನು ಇನ್ನಷ್ಟು ಹೆಚ್ಚು ಮಾಡಿದ್ದವು. ಒಂದು ದಿನ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರನ್ನು ಕರೆದು ತಮ್ಮ ಚಿಂತೆಯನ್ನು ಪ್ರಕಟಮಾಡಿದರು. ಇಷ್ಟು ದೊಡ್ಡ ಕಟ್ಟಡಕ್ಕೆ ಎರಡು ವರ್ಷಕ್ಕೊಮ್ಮೆ ಬಣ್ಣ ಬಳಿಯಲಾಗುತ್ತಿದೆ. ಯಾಕೆ ಹೀಗೆ ಮೇಲಿಂದ ಮೇಲೆ ಬಣ್ಣ ಹಚ್ಚಬೇಕು? ಅದಕ್ಕೆ ಕೋಟ್ಯಂತರ ರೂಪಾಯಿ ಹಣ ಖರ್ಚಾಗುತ್ತದೆಯಲ್ಲ ಎಂದು ಕೇಳಿದರು.

ಅದಕ್ಕೆ ವ್ಯವಸ್ಥಾಪಕ ನಿರ್ದೇಶಕರು ಹೇಳಿದರು, ‘ಏನು ಮಾಡುವುದು ಸರ್? ನಮ್ಮ ಕಟ್ಟಡದ ಕಿಟಕಿಗಳಲ್ಲಿ ಸಾವಿರಾರು ಪಕ್ಷಿಗಳು ಸಾಯಂಕಾಲ ಬಂದು ಮನೆಮಾ­ಡುತ್ತವೆ. ಅವುಗಳು ಗೋಡೆಯನ್ನೆಲ್ಲ ಹೊಲಸು ಮಾಡುತ್ತವೆ. ಅಷ್ಟು ಚೆಂದದ ಕಟ್ಟಡದ ಗೋಡೆಗಳು ಈ ಪಕ್ಷಿಗಳಿಂದ ಹೊಲಸಿನ ಚಿತ್ತಾರವಾಗುತ್ತವೆ.ಆ ಕಲೆಗಳನ್ನು ತೆಗೆಯಲು ಮೇಲಿಂದ ಮೇಲೆ ಬಣ್ಣ ಹಚ್ಚಬೇಕಾಗುತ್ತದೆ’. ಮತ್ತೆ ಮ್ಯಾನೇಜಿಂಗ್ ಡೈರೆಕ್ಟರ್ ಕೇಳಿದರು, ‘ನಗರದಲ್ಲಿ ಇಷ್ಟೊಂದು ದೊಡ್ಡ ದೊಡ್ಡ ಕಟ್ಟಡಗಳಿರುವಾಗ ಕೇವಲ ನಮ್ಮ ಕಟ್ಟಡದ ಮೇಲೆಯೇ ಯಾಕೆ ಪಕ್ಷಿಗಳು ಗಲೀಜು ಮಾಡುತ್ತವೆ?’ ಅದಕ್ಕೂ ಉತ್ತರ ಸಿದ್ಧವಾಗಿತ್ತು, ‘ಸರ್, ನಮ್ಮ ಕಟ್ಟಡದ ಸುತ್ತಲೂ ಮರಗಳಿರುವು­ದರಿಂದ ಪಕ್ಷಿಗಳು ಹೆಚ್ಚು. ಆದ್ದರಿಂದ ಮರಗಳ ಕೊಂಬೆಗಳನ್ನು ಕತ್ತರಿಸಿದರೆ ಈ ಹಾವಳಿ ಕಡಿಮೆಯಾಗಬಹುದು’ ಎಂದರು ನಿರ್ದೇಶಕರು.

ಮರುದಿನವೇ ಮರಗಳ ಕೊಂಬೆ­ಗಳನ್ನು ಕತ್ತರಿಸಿ ಹಕ್ಕಿಗಳು ಕಟ್ಟಡದ ಹತ್ತಿರಕ್ಕೆ ಬರದಂತೆ ಜಾಳಿಗೆ ಹಾಕುವ ಕೆಲಸಕ್ಕೆ ವೆಚ್ಚದ ವರದಿ ತಯಾರಿಸ­ಲಾಯಿತು. ಆ ಖರ್ಚನ್ನು ನೋಡಿ ಹಿರಿಯ ಅಧಿಕಾರಿಗಳ ಕಣ್ಣು ಬೆಳ್ಳಗಾದವು! ಮ್ಯಾನೇಜಿಂಗ್ ಡೈರೆಕ್ಟರ್ ಕೇಳಿದರು, ‘ಸುತ್ತಲೂ ಮರಗಳಿರುವ ಕಟ್ಟಡಗಳು ನಗರದಲ್ಲಿ ಅನೇಕ ಇವೆಯಲ್ಲ, ಅವರಿಗೇಕೆ ತೊಂದರೆ­ಯಾಗಿಲ್ಲ?’ ಕಟ್ಟಡದ ಮೇಲ್ವಿಚಾರಕರು ಹೇಳಿದರು, ‘ಸ್ವಾಮಿ, ನಮ್ಮ ಕಟ್ಟಡದ ಸ್ವಲ್ಪ ದೂರದಲ್ಲೇ ಕೊಳಚೆ ಪ್ರದೇಶವಿದೆ. ಅಲ್ಲಿಂದ ಸೊಳ್ಳೆಗಳು, ದೀಪದ ಹುಳಗಳು ಹಾರಿ ಬರುತ್ತವೆ. ಅವುಗಳನ್ನು ತಿನ್ನಲು ದೊಡ್ಡ ಪ್ರಮಾಣದಲ್ಲಿ ಪಕ್ಷಿಗಳು ಬಂದು ಕಟ್ಟಡವನ್ನು ಕೊಳಕು­ಮಾಡು­ತ್ತಿವೆ’. ಈ ಮಾತು ಮ್ಯಾನೇಜಿಂಗ್ ಡೈರೆಕ್ಟರ್‌ಗೆ ಒಪ್ಪಿತವಾಗಲಿಲ್ಲ. ಯಾಕೆಂದರೆ ಅನೇಕ ಕಟ್ಟಡಗಳ ಬದಿಯ ಲ್ಲಿ ಕೊಳೆಗೇರಿಗಳಿವೆ. ಆದರೆ, ನಮ್ಮ ಕಟ್ಟಡದ ಹತ್ತಿರವೇ ಇರುವ ಹುಳಗಳನ್ನು ತಿನ್ನಲು ಪಕ್ಷ್ಕಿಗಳು ಯಾಕೆ ಬರುತ್ತವೆ? ನಮ್ಮ ಹುಳಗಳದ್ದೇನು ವಿಶೇಷ?

ಯಾವ ಅಧಿಕಾರಿಯ ಬಳಿಯೂ ಇದಕ್ಕೆ ಉತ್ತರ ದೊರೆಯಲಿಲ್ಲ, ಕೊನೆಗೆ ಬೇಸತ್ತು ಮ್ಯಾನೇಜಿಂಗ್ ಡೈರೆಕ್ಟರ್‌ ಒಂದು ದಿನ ಕಟ್ಟಡದ ಕಾವಲು­ಗಾರರನ್ನು ಕೇಳಿದರು. ಆತ ತಲೆ ತುರಿಸಿಕೊಂಡು ಹೇಳಿದ, ‘ಸ್ವಾಮಿ, ಇದಾವುದೂ ಕಷ್ಟವಲ್ಲ. ನಮ್ಮ ಹಿರಿಯ ಅಧಿಕಾರಿಗಳಿಗೆ ತಲೆ ಇಲ್ಲ. ಸಾವಿರ ಬಾರಿ ಪರಿಹಾರ ಹೇಳಿದ್ದೇನೆ. ಅವರು ಕೇಳಿದರೆ ತಾನೇ?’ ಎಂದ. ‘ಏನದು ಪರಿಹಾರ?’ ಎಂದು ಕುತೂಹಲದಿಂದ ಕೇಳಿದರು ಮ್ಯಾನೇಜಿಂಗ್ ಡೈರೆಕ್ಟರ್‌. ಆತ ಹೇಳಿದ, ‘ನಮ್ಮವರು ಸಂಜೆ ನಗರದ ಎಲ್ಲ ದೀಪಗಳು ಹತ್ತುವುದಕ್ಕಿಂತ ಒಂದು ತಾಸು ಮೊದಲೇ ಎಲ್ಲ ಅಲಂಕಾರದ ದೀಪಗಳನ್ನು ಹಚ್ಚುತ್ತಾರೆ. ಎಲ್ಲಿ ದೀಪ ಮೊದಲು ಕಾಣುತ್ತದೋ ಅಲ್ಲಿಗೇ ಹುಳಗಳು ಹಾರಿ ಬರುತ್ತವೆ.

ಸುತ್ತಲೂ ಎಲ್ಲಿಯೂ ದೀಪಗಳು ಇರುವುದಿಲ್ಲವಲ್ಲ. ಎಲ್ಲವೂ ಇಲ್ಲಿಗೇ ಬಂದು ಕಟ್ಟಡವನ್ನು ಮುತ್ತಿಕೊಳ್ಳುತ್ತವೆ. ಅವುಗಳನ್ನು ತಿನ್ನಲು ಎಲ್ಲ ಕಡೆಯಿಂದ ಹಕ್ಕಿಗಳು ಬಂದು ಕೋಲಾಹಲ ಮಾಡಿ ಕೊಳಕು­ಮಾಡು­ತ್ತವೆ. ಅದಕ್ಕೆ ತುಂಬ ಸರಳ ಪರಿಹಾರ­ವೆಂದರೆ ನಗರದ ಎಲ್ಲ ಕಡೆಗೆ ದೀಪಗಳು ಹೊತ್ತಿಕೊಂಡ ಒಂದು ತಾಸಿನ ಮೇಲೆ ನಮ್ಮ ದೀಪಗಳನ್ನು ಹಚ್ಚಬೇಕು. ಆ ವೇಳೆಗಾಗಲೇ ಹುಳಗಳು ಬೇರೆಡೆಗೆ ಹೋಗಿಬಿಟ್ಟಿರುತ್ತವೆ. ಅವುಗಳನ್ನು ಬೆನ್ನತ್ತಿ ಹಕ್ಕಿಗಳೂ ದೂರಹೋಗುತ್ತವೆ. ಮರುದಿನ ಹಾಗೆಯೇ ಆಗುವಂತೆ ಆಜ್ಞೆ ಮಾಡಿದರು ಮ್ಯಾನೇಜಿಂಗ್ ಡೈರೆಕ್ಟರ್. ಇದರಿಂದಾಗಿ ಬಣ್ಣ ಹಚ್ಚುವ ಖರ್ಚು ಮಾತ್ರವಲ್ಲ ವಿದ್ಯುತ್ ಶಕ್ತಿಯ ಬಳಕೆಯ ಲಕ್ಷಾಂತರ ರೂಪಾಯಿಗಳು ಉಳಿತಾ­ಯ­­ವಾದವು. ಕಣ್ಣಿಗೆ ದೊಡ್ಡದಾಗಿ ಕಾಣುವ ಸಮಸ್ಯೆಗಳಿಗೆ ಪರಿಹಾರಗಳು ತುಂಬ ಸರಳವಾಗಿರುತ್ತವೆ. ನಾವು ದೊಡ್ಡ ಸಮಸ್ಯೆಗೆ ದೊಡ್ಡದೇ ಪರಿಹಾರ­ವಿರಬೇಕೆಂದು ಭ್ರಮಿಸಿ, ಶ್ರಮಿಸುತ್ತೇವೆ. ಸೃಜನಶೀಲ ಉಪಾಯಗಳು ಯಾವಾ­ಗಲೂ ಸುಲಭ ಹಾಗೂ ಅಗ್ಗವಾಗಿ­ರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT