ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿಮುಖ

Last Updated 20 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಆ ಸೊಳ್ಳೆಯ ಹೆಸರೇ ಮಂದವಿಸ­ರ್ಪಿಣಿ. ಹೆಸರು ಕೇಳಲು ಚೆಂದವೆನ್ನಿ­ಸಿದರೂ ಅದು ಮಾಡುವ ಕೆಲಸ ಒಂದೇ  ರಕ್ತ ಹೀರುವುದು. ಅದಕ್ಕೊಂದು ಸುಂದರವಾದ ಆಸರೆ ದೊರಕಿತ್ತು. ಅದರ ವಾಸ ಒಂದು ಬಹುದೊಡ್ಡ ಕಂಪನಿಯ ಚೇರ್ಮನ್ನರ ಮಲಗುವ ಕೋಣೆ. ಅದೆಂಥ ಕೋಣೆ! ಅತ್ಯಂತ ಸುಂದರ­ವಾಗಿ ಅಲಂಕೃತವಾದ ಮೆತ್ತ­­ನೆಯ ಹಾಸಿಗೆ, ಅದರ ಮೇಲೆ ಬಿಳೀ ರೇಷ್ಮೆಯ ಹಾಸು. ಯಾವಾಗಲೂ ತಂಪಾಗಿ­ರುವಂತೆ ನೋಡಿಕೊಳ್ಳುವ ವಾತಾನುಕೂಲಿ ಯಂತ್ರಗಳು. ಸದಾ ಸುಗಂಧ­ವನ್ನೇ ಬೀರುವ ಹೂದಾನಿಗಳು. ಈ ಆಕರ್ಷಕವಾದ ವಾತಾವರಣದಲ್ಲಿ ಮಂದವಿಸರ್ಪಿಣಿ ಸಂತೋಷವಾಗಿದ್ದಳು. ಆಕೆಯ ದಿನನಿತ್ಯದ ಬದುಕಿಗೆ ಯಾವ ಕೊರಗೂ ಇರಲಿಲ್ಲ. ಮಂಚದ ಕೆಳಗೆ ಒಂದು ಪುಟ್ಟ ಮನೆಯನ್ನು ಕಟ್ಟಿ­ಕೊಂಡಿ­ದ್ದಳು.

ರಾತ್ರಿ ಚೇರ್ಮನ್‌ ಮಲಗಿದ ಮೇಲೆ, ಆತ ಗಾಢವಾದ ನಿದ್ರೆಗೆ ಸರಿದ ಮೇಲೆ, ಒಮ್ಮೆ ಆಳವಾಗಿ ಕಚ್ಚಿ, ದೀರ್ಘವಾಗಿ ರಕ್ತ ಎಳೆದರೆ ಸಾಕು, ಮರುದಿನದ­ವರೆಗೆ ಯಾವ ಚಿಂತೆಗೂ ಅವಕಾಶವಿರಲಿಲ್ಲ, ಕೋಣೆಯಲ್ಲಿ ಮತ್ತಾವ ಸೊಳ್ಳೆಯೂ ಇರದಿ­ದ್ದುದರಿಂದ ಯಾರಿಗೂ ಮಂದವಿಸರ್ಪಿ­ಣಿಯಿಂದ ಹಾನಿ ಆದಂತೆ ಕಾಣಲಿಲ್ಲ.  ಹೀಗಿರುವಾಗ ಒಂದು ದಿನ ಸಂಜೆ ಕೋಣೆಯಲ್ಲಿ ಅದೆ­ಲ್ಲಿಂದ­ಲೋ ಒಂದು ತಿಗಣೆ ಬಂದಿತು. ಅದನ್ನು ನೋಡಿ­ದೊಡನೆ ಮಂದವಿಸರ್ಪಿಣಿಯ ಎದೆ ಬಿರಿಯಿತು. ಯಾಕೆಂದರೆ ಆಕೆಗೆ ಈ ತಿಗಣಿಗಳ ಸ್ವಭಾವ ಕೇಳಿ ಗೊತ್ತು. ಅವು ಆಸೆಬರುಕ ಪ್ರಾಣಿಗಳು. ಸ್ವಲ್ಪಕ್ಕೇ ಸಂತೋಷಪಡುವಂಥವಲ್ಲ. ಮೈ ಬಿರಿ­ಯು­ವವ­ರೆಗೂ ರಕ್ತ ಹೀರುತ್ತವೆ. ಅದಲ್ಲದೇ ಸ್ವಲ್ಪ ಕಾಲದಲ್ಲೇ ಬಹು­ದೊಡ್ಡ ಪರಿವಾರ­ವನ್ನು ಕಟ್ಟಿಕೊಳ್ಳುತ್ತವೆ.

ಆ ಮಂದವಿಸರ್ಪಿಣಿ ತುಂಬ ದಾಕ್ಷಿಣ್ಯದ ಹೆಣ್ಣು. ಬಿರು­ಸಾಗಿ ಮಾತನಾಡುವುದು, ಮತ್ತೊಬ್ಬರ ಮನಸ್ಸನ್ನು ನೋಯಿ­ಸುವುದು ಆಕೆಗೆ ಇಷ್ಟವಿಲ್ಲ. ಆಕೆ ಮೃದುವಾಗಿಯೇ ಕೇಳಿದಳು. ‘ಯಾರು ತಾವು? ಎಲ್ಲಿಂದ ಬಂದಿರಿ?’ ಛೇ, ಅದೇನು ಒರಟು ಆ ತಿಗಣೆಯ ಧ್ವನಿ? ‘ನಾನೇ? ನನ್ನ ಹೆಸರು ಅಗ್ನಿ­ಮುಖ. ಈ ಕೋಣೆಯ ವಿಷಯವನ್ನು ಬಹಳ ಕೇಳಿ ನೋಡಿ ಹೋಗಲು ಬಂದಿ­ದ್ದೇನೆ’ ಎಂದಿತು ತಿಗಣೆ.  ‘ಅಯ್ಯೋ ಇಲ್ಲಿಗೇಕಪ್ಪ ಬಂದೆ ನೀನು? ಇದು ಚೇರ್ಮ­ನ್ನರು ಮಲಗುವ ಕೋಣೆ. ಆತ ತುಂಬ ಸೂಕ್ಷ್ಮ ಸ್ವಭಾವದವನು.

ನೀನೋ ಬಲೆ ಆಸೆ­ಬುರುಕ. ಅವನಿಗೆ ನಿದ್ರೆ ಹತ್ತುವುದನ್ನು ಕಾಯಲಾರೆ. ಆಗ ಕಚ್ಚಿಬಿಟ್ಟರೆ ಆತ ನಿನ್ನನ್ನು ಹೊಸಕಿ ಸಾಯಿಸಿಬಿಡುತ್ತಾನೆ’ ಎಂದಿತು ಸೊಳ್ಳೆ ಕಳವಳದಿಂದ. ‘ಮಂದ­ವಿಸರ್ಪಿಣಿ, ನೀನು ಯಾವ ಚಿಂತೆಯನ್ನೂ ಮಾಡಬೇಡ. ನಾನು  ಇದು­ವರೆಗೂ ಒಂದು ಧ್ಯಾನ ಮಂದಿರ­ದಲ್ಲಿದ್ದೆ. ಹೀಗಾಗಿ ಮನೋನಿಗ್ರಹ ಸಾಧ್ಯವಾಗಿದೆ. ಚೇರ್ಮನ್‌ ನಿದ್ರೆಯ ಆಳಕ್ಕೆ ಜಾರುವವರೆಗೂ ಸುಮ್ಮನಿರು­ತ್ತೇನೆ. ಅನಂತರ ಒಮ್ಮೆ ಕಚ್ಚಿ ಹೊರಟು ಹೋಗುತ್ತೇನೆ, ಅದೂ ನೀನು ನಿನ್ನ ಊಟ ಮುಗಿಸಿದ ಮೇಲೆ. ನನಗೂ ಈ ಚೇರ್ಮನ್‌ಗಳ ಸತ್ವಪೂರ್ಣ ರಕ್ತದ ರುಚಿ ನೋಡ­ಬೇಕೆನ್ನಿಸಿದೆ’ ಎಂದಿತು ತಿಗಣೆ.

ಸೊಳ್ಳೆ ದಾಕ್ಷಿಣ್ಯದಿಂದ ಸುಮ್ಮನಾ­ಯಿತು. ಇನ್ನೇನು ಮಾಡೀತು ಪಾಪ! ಚೇರ್ಮನ್‌ ಬಂದು ಹಾಸಿಗೆಯ ಮೇಲೆ ಕುಳಿತು ಮಗ್ಗುಲಾದ. ತಿಗಣೆಯ ಬಾಯಲ್ಲಿ ನೀರೂರಿತು, ಮನೋನಿಗ್ರಹ ಮರೆತು ಹೋಯಿತು. ತಕ್ಷಣ ಅವನ ತೋಳಿ­ನಲ್ಲಿ ತನ್ನ ಚೂಪಾದ ಕೊಂಡಿ­ಯನ್ನೂರಿ ಸರ್ರೆಂದು ರಕ್ತ ಎಳೆಯಿತು. ಅದರ ಕಚ್ಚುವಿಕೆ ದೀರ್ಘ. ಚೇರ್ಮನ್‌ ಥಟ್ಟನೇ ಎದ್ದು ಕುಳಿತ, ತೋಳು ಕೆರೆದುಕೊಂಡ. ನಂತರ ದೀಪ ಹಚ್ಚಿ ನೋಡಿದ ಅಷ್ಟರಲ್ಲಿ ಅಗ್ನಿಮುಖ ತಲೆದಿಂಬಿನ ಕೆಳಗೆ ಸೇರಿಕೊಂಡಿದ್ದ. ಚೇರ್ಮನ್‌ ಸೊಳ್ಳೆ ಕೊಲ್ಲುವ ವಿಷವನ್ನು ಹಾಸಿಗೆಯ ಕೆಳಗೆಲ್ಲ ಸಿಂಪಡಿಸಿದ. ಮಂದವಿಸರ್ಪಿಣಿ ಸತ್ತು ಬಿತ್ತು. ಆದರೆ ಅಗ್ನಿಮುಖ ಆರಾಮವಾಗಿ ಕುಳಿತಿದ್ದ. ನಮ್ಮ ಬದುಕಿನಲ್ಲೂ ಅಗ್ನಿಮುಖರು ಬರುತ್ತಾರೆ. ಅವರ ಉದ್ದೇಶ, ಸ್ವಭಾವ­ಗಳನ್ನು ತಿಳಿಯದೇ ನಾವು ಅವರಿಗೆ ಅವಕಾಶ ಮಾಡಿಕೊಡುತ್ತೇವೆ, ದಾಕ್ಷಿಣ್ಯ­ದಿಂದ ಸಾಕುತ್ತೇವೆ. ಆದರೆ, ಅವ­ರೊಂದು ದಿನ ನಮ್ಮನ್ನು ಮುಗಿಸಿ ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತಾರೆ. ಜೊತೆಗೆ ಬಂದವರು ಅಗ್ನಿಮುಖರಂಥವರು ಎಂದು ಗೊತ್ತಾದೊಡನೆ ದಾಕ್ಷಿಣ್ಯಬೇಡ, ಅವರ ಸಹವಾಸವೂ ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT