ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣುಗಾತ್ರದ ಬ್ರಹ್ಮಾಂಡದಲ್ಲಿ ಅನಿರೀಕ್ಷಿತ ಕ್ಯಾನ್ಸರ್

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ಈಚಿನ ದಿನಗಳಲ್ಲಿ ಕ್ಯಾನ್ಸರ್ ಕುರಿತು ಎರಡು ಮಹತ್ವದ ವಿಚಾರಗಳು ವೈದ್ಯ­ಕೀಯ ಲೋಕದಲ್ಲಿ ವಿವಾದ ಎಬ್ಬಿಸಿವೆ. ಒಂದು, ಕ್ಯಾನ್ಸರ್ ಎಂಬುದು ‘ಬಹುಮಟ್ಟಿಗೆ ಅದೃಷ್ಟ ಕೆಟ್ಟಾಗ ಬರುವಂಥ ರೋಗ’ ಎಂದು ಅಮೆರಿಕದ ಸಂಶೋಧಕರು ಹೇಳಿದ್ದರೆಂಬ ಮಾತು. ಇನ್ನೊಂದು ‘ಬೇರೆಲ್ಲ ವಿಧದ ಸಾವಿಗಿಂತ ಕ್ಯಾನ್ಸರ್‌­ನಿಂದ ಬರುವ ಸಾವೇ ಮೇಲು’ ಎಂದು ಹಿರಿಯ ಬ್ರಿಟಿಷ್ ವೈದ್ಯವಿಜ್ಞಾನಿ ಹೇಳಿದ ಮಾತು. ಇವೆರಡೂ ಬೇರೆ ಬೇರೆ ದೇಶಗಳಲ್ಲಿ ಹೊಮ್ಮಿದ ಹೇಳಿಕೆಗಳಾದರೂ ಎರಡೂ ಪ್ರತಿಷ್ಠಿತ ಮೂಲಗಳಲ್ಲೇ ಪ್ರಕಟವಾಗಿದ್ದು, ನಮ್ಮೆಲ್ಲರ ಬದುಕಿಗೂ ಸಂಬಂಧಪಟ್ಟ ವಿಚಾರಗಳೇ ಆಗಿ­ದ್ದ­ರಿಂದ ತುಸು ವಿವರವಾಗಿ ಅವನ್ನು ನೋಡೋಣ:

ಹಿರಿಯರಿಂದ ಬಳುವಳಿಯಾಗಿ ಬಂದ ಆನು­ವಂಶಿಕ ಗುಣ ಮತ್ತು/ ಅಥವಾ ನಮ್ಮದೇ ದುರಭ್ಯಾಸಗಳೇ ಕ್ಯಾನ್ಸರ್ ರೋಗಕ್ಕೆ ಮುಖ್ಯ ಕಾರಣ ಎಂಬುದು ಸಾಮಾನ್ಯವಾಗಿ ನಮಗೆಲ್ಲ ಗೊತ್ತಿದೆ. ಅವೆರಡೂ ಇಲ್ಲದಿದ್ದರೂ ‘ನನಗೇಕೆ ಈ ಕಾಯಿಲೆ ಬಂತು ಡಾಕ್ಟರ್ರೆ?’ ಎಂದು ಕೆಲವು ರೋಗಿ­ಗಳು ಕೇಳಿದಾಗ ನಿಖರವಾದ ಉತ್ತರ ವೈದ್ಯ­ರಿಗೂ ಗೊತ್ತಿರುವುದಿಲ್ಲ. ಅಂಥ ರೋಗಿ­ಗಳಿಗೆ ಯಾವ ಕಾರಣಕ್ಕೆ ಕ್ಯಾನ್ಸರ್ ಬರುತ್ತದೆ ಎಂಬು­ದನ್ನು ನೋಡೇ ಬಿಡೋಣವೆಂದು ಅಮೆ­ರಿಕದ ಖ್ಯಾತ ಜಾನ್ ಹಾಪ್ಕಿನ್ಸ್ ವೈದ್ಯಕೀಯ ವಿಶ್ವವಿದ್ಯಾಲಯದ ವಿಜ್ಞಾನಿಗಳಿಬ್ಬರು ಟೊಂಕ ಕಟ್ಟಿದರು. ಹಾಗೆಂದು ಅವರು ಇಲಿಗಳ ಮೇಲೆ ಪ್ರಯೋಗವನ್ನೇನೂ ಮಾಡಲಿಲ್ಲ ಅಥವಾ ಕ್ಯಾನ್ಸರ್ ರೋಗಿಗಳಿಗೆ ಪ್ರಶ್ನೆ ಹಾಕಿ ತಲೆ ತಿನ್ನಲೂ ಇಲ್ಲ. ಆಸ್ಪತ್ರೆಗಳಲ್ಲಿ ಲಭ್ಯವಿರುವ ೩೧ ಬಗೆಯ ಕ್ಯಾನ್ಸರ್ ದಾಖಲೆಗಳನ್ನೆಲ್ಲ ಕ್ರೋಡೀಕರಿಸಿ ಸಂಖ್ಯಾ ವಿಶ್ಲೇಷಣೆ ಮಾಡಿದರು. ಅವರ ಅಧ್ಯಯ­ನದ ಪ್ರಕಾರ, ಶೇಕಡ ೩೩ರಷ್ಟು ಕ್ಯಾನ್ಸರ್‌­ಗಳು ಆನುವಂಶಿಕ ಬಳುವಳಿ ಮತ್ತು ಜೀವನಶೈಲಿಯಿಂದಾಗಿ ಬಂದಿವೆ. ಇನ್ನುಳಿದ ಶೇ ೬೬ರಷ್ಟು ಸಂದರ್ಭಗಳಲ್ಲಿ ಕ್ಯಾನ್ಸರ್ ಯಾವುದೇ ನಿರ್ದಿಷ್ಟ ಕಾರಣಗಳಿಲ್ಲದೆ ‘ಬೈ ಚಾನ್ಸ್’ ಬಂದಿದೆ. ಛೆ, ವೈದ್ಯವಿಜ್ಞಾನಿಗಳು ಹೀಗೆಲ್ಲ ಅದೃಷ್ಟದ ಮೇಲೆ ಭಾರ ಹಾಕುವುದೆ? ಉತ್ತಮ ಅದೃಷ್ಟ­ಕ್ಕಾಗಿ ನಾವೇನು ಪೂಜೆ, ಪ್ರಾರ್ಥನೆಗೆ ಶರಣು ಹೋಗಬೇಕೆ-ಇದು ವಿವಾದದ ವಿಷಯ.

ನಮ್ಮ ಶರೀರದಲ್ಲಿ ದಿನವೂ ಅಸಂಖ್ಯ ಜೀವ­ಕೋಶಗಳು ಹೋಳಾಗುತ್ತ, ದ್ವಿಗುಣಿತವಾಗು­ತ್ತಲೇ ಇರುತ್ತವೆ. ಬಾಲ್ಯದಲ್ಲಿ ತೀರಾ ಕ್ಷಿಪ್ರವಾಗಿ ದ್ವಿಗುಣಿತವಾಗಿ ಶರೀರವನ್ನು ಬೆಳೆಸುತ್ತಿರುತ್ತವೆ. ಬೆಳೆದು ನಿಂತವರಲ್ಲಿ ಪ್ರತಿ ಕೋಶವೂ ದಿನ­ಕ್ಕೊಮ್ಮೆ ಡಬಲ್ ಆಗುತ್ತದೆ. ದೇಹದ ಎಲ್ಲ ಜೀವ­ಕೋಶಗಳೂ ಒಂದೇ ಸ್ಪೀಡ್‌ನಲ್ಲಿ ದ್ವಿಗುಣ­ವಾಗು­ವು­ದಿಲ್ಲ. ತ್ವಚೆ ಮತ್ತು ಮೂಳೆಮಜ್ಜೆಯಲ್ಲಿ ಸವ­ಕಳಿ ಜಾಸ್ತಿ ಇರುವುದರಿಂದ ಜಾಸ್ತಿ ವೇಗವಾಗಿ ಹೊಸ ಕೋಶಗಳು ರೂಪುಗೊಳ್ಳುತ್ತಿರುತ್ತವೆ. ಮಿದುಳು ಮತ್ತು ಯಕೃತ್ತಿನ ಕೋಶಗಳು ತೀರಾ ಅಪರೂಪಕ್ಕೆ ಎಲ್ಲೋ ವರ್ಷಕ್ಕೊಮ್ಮೆ, ಅದೂ ಕೆಟ್ಟುಹೋದ ಭಾಗದ ರಿಪೇರಿಗಷ್ಟೇ ಹೊಸ ಕೋಶಗಳು ಸಿದ್ಧವಾಗುತ್ತವೆ. ಎಲ್ಲೆಲ್ಲಿ ಜಾಸ್ತಿ ಸವೆತ ಇದೆಯೊ ಅಲ್ಲೆಲ್ಲ ಜೀವಕೋಶಗಳ ವಿಭ­ಜನೆ ವೇಗ ಹೆಚ್ಚಿರುತ್ತದೆ. ಕೋಶ ವಿಭಜನೆ ಎಷ್ಟೇ ವೇಗದಲ್ಲಿರಲಿ ಅಥವಾ ನಿಧಾನ ಇರಲಿ, ಒಮ್ಮೆ ಆರಂಭವಾದರೆ ಅದೊಂದು ವಿರಾಟ್ ಕೆಲಸ. ಪ್ರತಿಯೊಂದು ಜೀವಕೋಶದಲ್ಲಿರುವ ವರ್ಣ­ತಂತು­ವಿನ ಡಿಎನ್‌ಎ ಸುರುಳಿಯಲ್ಲಿನ ನೂರಾರು ಕೋಟಿ ಪ್ರೊಟೀನ್ ಕಣಗಳು ಕರಾರುವಾಕ್ಕಾಗಿ ಹೋಳಾಗಿ ತದ್ರೂಪ ಕಣಗಳನ್ನು ಸೃಷ್ಟಿಸಬೇಕು. ಸ್ವಲ್ಪ ಎಡವಟ್ಟಾದರೆ ಎಣಿಕೆ ತಪ್ಪಿ, ಒಂದೇ ಬಗೆಯ ಜೀವ ಕೋಶಗಳು ಪುಂಖಾನುಪುಂಖ ಇಮ್ಮಡಿ, ಮುಮ್ಮಡಿ... ಲಕ್ಷಮಡಿ ಆಗುತ್ತ ಹೋಗುತ್ತವೆ. ಇಷ್ಟಕ್ಕೂ ಕ್ಯಾನ್ಸರ್ ಎಂದರೆ ಅದೇನೂ ರೋಗಾಣುಗಳ ದಾಳಿ ಅಲ್ಲ. ಹಿಡಿತ ತಪ್ಪಿ ಒಂದೇ ಬಗೆಯ ಜೀವಕಣಗಳು ಅತಿ­ಶಯ ಸಂಖ್ಯೆಯಲ್ಲಿ ಹೆಚ್ಚುತ್ತ ಹೋಗುವುದು.

ಶೀಘ್ರ ಕೆಲಸ ಮಾಡಬೇಕಾದರೆ ತಪ್ಪುಗಳು ಜಾಸ್ತಿ ಸಂಭವಿಸುತ್ತವೆ. ಗಾಡಿ ಜೋರಾಗಿ ಓಡಿ­ದಷ್ಟೂ ಅಪಘಾತದ ಸಂಭವ ಹೆಚ್ಚಿಗೆ ಇರುತ್ತದೆ ತಾನೆ? ಎಲ್ಲೆಲ್ಲಿ ಅಂಗಾಂಗ ಸವೆತ ಅತಿ ಶೀಘ್ರವೋ ಅಲ್ಲೆಲ್ಲ ಜೀವಕೋಶದ ರಿಪೇರಿ ವೇಗವೂ ಶೀಘ್ರ ಇರಬೇಕಾಗುತ್ತದೆ.
ಆನುವಂಶಿಕವಾಗಿ ಕೆಲವರ ದೇಹದಲ್ಲಿ ಅಪರೂಪಕ್ಕೆ ತಪ್ಪು ಹೆಜ್ಜೆ ಇಡಬಲ್ಲ ಜೀನ್‌ಗಳ ಸಂಖ್ಯೆ ತುಸು ಜಾಸ್ತಿಯೇ ಇರ­ಬಹುದು. ಅದಕ್ಕೇನೂ ಮಾಡುವಂತಿಲ್ಲ. ಇನ್ನು ಕೆಲವರಲ್ಲಿ ಜಠರ, ಶ್ವಾಸಕೋಶ, ದೊಡ್ಡ ಕರುಳು ಮುಂತಾದ ಭಾಗಗಳು ಅವರವರ ಜೀವನ ಶೈಲಿ­ಯಿಂದಾಗಿ ಅಲ್ಲಲ್ಲಿ ಭಗ್ನವಾಗುತ್ತವೆ. ವಿಕಿರಣ ವಸ್ತುಗಳಿದ್ದಲ್ಲಿ ಅಥವಾ ಗಣಿದೂಳಿನಲ್ಲಿ ದುಡಿಮೆ; ತಂಬಾಕು ಅಥವಾ ಹೊಗೆಬತ್ತಿ ಸೇವನೆ, ಎರ್ರಾಬಿರ್ರಿ ಮದ್ಯಸೇವನೆ ಅಥವಾ ಅಸುರಕ್ಷಿತ ಆಹಾರ ಇವೆಲ್ಲವೂ ಕ್ಯಾನ್ಸರ್‌ಗೆ ಕಾರಣ­ವಾಗುತ್ತವೆ. ಇವುಗಳ ಹೊರತಾಗಿ ಎಂದಿನ ಸಹಜ ಚಟುವಟಿಕೆಗಳಿಂದಲೂ ದೇಹದ ಅನೇಕ ಅಂಗಾಂಗಗಳಲ್ಲಿ ಶೀಘ್ರ ಸವೆತ ಹಾಗೂ ಜೀವಕಣಗಳ ತ್ವರಿತ ಮರುಭರ್ತಿ ನಡೆಯುತ್ತದೆ. ಅಲ್ಲಿನ ಜೀವಕೋಶಗಳು ವೇಗವಾಗಿ ದ್ವಿಗುಣಿತ­ವಾಗುವಾಗ ‘ಬೈ ಚಾನ್ಸ್’ (ಅನಿರೀಕ್ಷಿತವಾಗಿ) ಅಪಘಾತ ನಡೆಯುವ ಸಂಭವ ಜಾಸ್ತಿ ಇರುತ್ತದೆ ಎಂದು ಈ ತಜ್ಞರು ಹೇಳಿದರು.

‘ಚಾನ್ಸ್’ ಎಂದರೆ ಅದೃಷ್ಟ ಎಂಬ ಅರ್ಥವೂ ಇದೆಯಾದ್ದರಿಂದ ಕ್ಯಾನ್ಸರ್ ರೋಗದಲ್ಲಿ ‘ಕಾಣದ ಕೈ ಪಾತ್ರ’ ದೊಡ್ಡದಿದೆ ಎಂದು ಕೆಲ­ವರು ತಪ್ಪಾಗಿ ಭಾವಿಸಿ ಆಕ್ಷೇಪ ಎತ್ತಿದ್ದಾರೆ. ಅದಕ್ಕೆ ವಿಜ್ಞಾನಿಗಳು ಈಗ ಸಮಜಾಯಿಷಿ ನೀಡಿ­ದ್ದಾರೆ. ಜೀವಕೋಶಗಳ ಸೂಕ್ಷ್ಮ ಲೋಕದಲ್ಲಿ ಎಲ್ಲಿ ಯಾವಾಗ ಅನಿರೀಕ್ಷಿತ ಅವಘಡ ಆದೀ­ತೆಂದು ನೋಡುತ್ತಿರಲು ವಿಜ್ಞಾನಕ್ಕೆ ಸಾಧ್ಯವಿಲ್ಲ. ಆದರೆ ಅಂಥ ಅಪಘಾತ ಸಂಭವಿಸಿದ ನಂತರ ಅದನ್ನು ಆದಷ್ಟು ಜಾಗ್ರತೆಯಾಗಿ ಗುರುತಿಸುವತ್ತ ವೈದ್ಯವಿಜ್ಞಾನ ಮುಂದುವರೆದರೆ ಕ್ಯಾನ್ಸರನ್ನು ಆರಂಭದಲ್ಲೇ ನಿರ್ಬಂಧಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಈಗ ಎರಡನೆಯ ವಿವಾದಕ್ಕೆ ಬರೋಣ: ಕ್ಯಾನ್ಸರ್ ರೋಗದಿಂದ ಸಾಯುವುದೇ ಎಲ್ಲಕ್ಕಿಂತ ಹಿತವಾದ ಸಾವೆಂದು ಬ್ರಿಟಿಷ್ ವೈದ್ಯ ರಿಚರ್ಡ್ ಸ್ಮಿಥ್ ಬರೆದ ಲೇಖನವೊಂದು  ಇತ್ತೀಚೆಗೆ ಪ್ರಕಟ­ವಾಯಿತು. ಸ್ಮಿಥ್ ಸಾಮಾನ್ಯ ಡಾಕ್ಟರ್ ಅಲ್ಲ. ವೈದ್ಯಲೋಕದ ಅತಿ ಪ್ರತಿಷ್ಠಿತ ಪತ್ರಿಕೆ ಎಂದೇ ಹೆಸರಾದ ‘ಬ್ರಿಟಿಷ್ ಮೆಡಿಕಲ್ ಜರ್ನಲ್‌’ನ (ಬಿಎಮ್‌ಜೆ) ಸಂಪಾದಕರಾಗಿದ್ದವರು ಅವರು. ಅಂಥವರೇ ಕ್ಯಾನ್ಸರ್ ರೋಗಕ್ಕೆ ಜಯಕಾರ ಹಾಕುವುದೆಂದರೆ? ಅದಕ್ಕೆ ಸ್ಮಿಥ್ ನೀಡುವ ತರ್ಕ ಸರಳವಾಗಿದೆ: ಯಾರದ್ದಾದರೂ ಸರಿ, ಸಾವಿಗೆ ನಾಲ್ಕು ಮುಖ್ಯ ಕಾರಣಗಳಿರುತ್ತವೆ: ಒಂದು–- ಹಠಾತ್ತಾಗಿ ಬರುವ ಸಾವು; ಎರಡು–- ವಯ­ಸ್ಸಾಗಿ, ಅರಳುಮರುಳಾಗಿ, ನಿಧಾನ ಬರುವ ಸಾವು; ಮೂರು–- ಹಂತಹಂತವಾಗಿ ಹೃದಯ, ಕಿಡ್ನಿ, ಯಕೃತ್ತು ವಿಫಲವಾಗುತ್ತ, ಪದೇ ಪದೇ ಆಸ್ಪತ್ರೆಗಳಿಗೆ ಎಡತಾಕುತ್ತ, ಡಾಕ್ಟರ್‌ಗಳು ಕೈಚೆ­ಲ್ಲಿದ ನಂತರ ಬರುವ ಸಾವು; ನಾಲ್ಕನೆಯದು ಕ್ಯಾನ್ಸರ್ ಮೂಲಕ ಬರುವ ಸಾವು. ಐದನೆಯ­ದಾದ ಆತ್ಮಹತ್ಯೆಯನ್ನು ಡಾ. ಸ್ಮಿಥ್ ಚರ್ಚಿಸುವು­ದಿಲ್ಲ. ಮುಂದಿನ ಮೂರು ಪರಿಚ್ಛೇದಗಳು ಅವರದೇ ಮಾತುಗಳು:

ಸ್ವಸ್ಥ ಮನಸ್ಸಿನ ಬಹುತೇಕ ಎಲ್ಲರೂ ಹಠಾತ್ ಸಾವನ್ನೇ ಬಯಸುತ್ತಾರೆ. ಅದೇ ಸಾವಿನ ಸರ್ವ­ಶ್ರೇಷ್ಠ ರಂಗಪ್ರವೇಶ ಹೌದು. ಆದರೆ ಅದು ಬಂಧು­ಗಳಿಗೆ ಭಾರೀ ಆಘಾತ ನೀಡುತ್ತದೆ. ಅಂಥ ಸಾವು ಬರಲೇಬೇಕೆಂದು ನೀವು ಬಯಸುವಿರಾ­ದರೆ ನಿಮ್ಮ ಪ್ರತಿದಿನವೂ ಕೊನೆಯ ದಿನವೆಂಬಂತೆ ನೀವು ಬದುಕಿರಬೇಕು. ಬಂಧು ಬಳಗಕ್ಕೆ ಇನಿತೂ ತೊಂದರೆ ಆಗದಂತೆ ಸಿದ್ಧತೆ ಮಾಡಿಕೊಂಡಿರ­ಬೇಕು. ಮರಣ ಪತ್ರ ಬರೆದಿಡಬೇಕು. ಆಸ್ತಿ/ಸಾಲ ವಿಲೆವಾರಿ, ಅಂಗಾಂಗ ದಾನ, ಅಂತಿಮ ಸಂಸ್ಕಾರ ವಿಧಾನಗಳ ಬಗ್ಗೆ ಬರೆದು ಮೇಲ್ಗಡೆಯ ಡ್ರಾದಲ್ಲೇ ಇಟ್ಟಿರಬೇಕು; ಅಥವಾ ಇನ್ನೂ ಉತ್ತಮವೆಂದರೆ ಫೇಸ್‌ಬುಕ್‌ನಲ್ಲಿ ಬರೆದಿರಬೇಕು.

ಅತಿ ವೃದ್ಧಾಪ್ಯದ, ಅರಳುಮರುಳಿನ ಸಾವು ನಿಮಗೆ ಒಳ್ಳೆಯದೇ ಇರಬಹುದು. ಕೊನೆಗೆ ಅದು ಬಂದುದು ಗೊತ್ತೂ ಆಗುವುದಿಲ್ಲ. ಆದರೆ ನಿಮ್ಮನ್ನು ನೋಡಿಕೊಳ್ಳಬೇಕಾದ ಬಂಧುಗಳಿಗೆ ಅದು ಬಹುವಾರ್ಷಿಕ ಯಾತನೆಯನ್ನೇ ಕೊಡ­ಬಹುದು. ಇನ್ನು, ನೀವು ಮಾನಸಿಕವಾಗಿ ಸದೃಢ­ರಾ­ಗಿದ್ದು, ಆಲೋಚನಾಶಕ್ತಿ ಚೆನ್ನಾಗಿದ್ದರೂ ಮಗ–-ಸೊಸೆ ಅಥವಾ ಮಗಳು–-ಅಳಿಯನ ನೆಪದಿಂದಾಗಿ ಇಳಿವಯಸ್ಸಿನಲ್ಲಿ ವೃದ್ಧಾಶ್ರಮ, ಒಂಟಿತನದ ಹಿಂಸೆ ಯಾರಿಗೆ ಬೇಕು? ಅದಕ್ಕಿಂತ ಹೀನಾಯ ಮರಣವೂ ಇದೆ: ಆಸ್ಪತ್ರೆಯಲ್ಲಿ ಒಂದರ ನಂತರ ಒಂದರಂತೆ ಅಂಗಾಂಗ ವೈಫಲ್ಯ­ಗಳಿಗೆ ತುತ್ತಾಗಿ ಡಾಕ್ಟರ್‌ಗಳ ನಿರಂತರ ಪ್ರಯೋಗ­ಗಳಿಗೆ ಬಲಿಪಶುವಾದ ನಂತರ ಐಸಿಯುದಲ್ಲಿ ಕೃತಕ ಉಸಿರಾಟ ನಡೆಸಿದ ನಂತರ ಬರುವ ಸಾವು. ಅವೆಲ್ಲವುಗಳಿಗೆ ಹೋಲಿಸಿದರೆ ಕ್ಯಾನ್ಸರ್‌­ನಿಂದ ಬರುವ ಸಾವೇ ಉತ್ತಮ.

ಏಕೆ ಗೊತ್ತೆ? ಕ್ಯಾನ್ಸರ್ ಬಂದರೆ ಎರಡು ತಿಂಗಳೋ ಆರು ತಿಂಗಳೋ ಎಂಬುದನ್ನು ಡಾಕ್ಟರ್‌­ಗಳು ಅಂದಾಜು ಮಾಡಿ ಹೇಳುತ್ತಾರೆ. ನೋವು ಶಮನದ ಮಾರ್ಫೀನ್ ಔಷಧಗಳನ್ನೋ ವ್ಹಿಸ್ಕಿಯನ್ನೋ ಸೇವಿಸುತ್ತ, ನಿಮಗಿಷ್ಟವಾದ ಸಂಗೀತ ಕೇಳುತ್ತ, ಸಂದುಹೋದ ಕ್ಷಣಗಳನ್ನು ಮೆಲುಕು ಹಾಕುತ್ತ, ಪ್ರೀತಿಪಾತ್ರರಿಗೆಲ್ಲ ಹಂತ­ಹಂತ­ವಾಗಿ ವಿದಾಯ ಹೇಳುತ್ತ, ಯಾತ್ರಾಸ್ಥಳ­ಗಳಿಗೆ ಭೇಟಿಕೊಡುತ್ತ, ಉಯಿಲು ಮತ್ತು ಅಂತ್ಯ ಸಂಸ್ಕಾರದ ವಿಧಿಗಳನ್ನು ಅಚ್ಚುಕಟ್ಟಾಗಿ ಬರೆಸಿಟ್ಟು ದೀರ್ಘ ನಿದ್ದೆಗೆ ಜಾರಬಹುದು. ನೀವು ವಹಿಸ­ಬೇಕಾದ ಒಂದು ಎಚ್ಚರಿಕೆ ಏನೆಂದರೆ ಅತಿ ಉತ್ಸಾಹಿ ಅಥವಾ ಧನದಾಹಿ ಕ್ಯಾನ್ಸರ್ ವೈದ್ಯರ ಕೈಗೆ ಸಿಕ್ಕಿಬೀಳಬೇಡಿ. ಕ್ಯಾನ್ಸರ್‌ನಿಂದ ಬಚಾವು ಮಾಡಲೆಂದು ಶತಕೋಟಿ ಹಣ ಪೋಲು ಮಾಡಿ ರೋಗಿಗಳನ್ನು ನಾನಾ ಹಿಂಸೆಗೆ ಗುರಿಪಡಿಸು­ವುದ­ರಲ್ಲಿ ಅರ್ಥವಿಲ್ಲ.

-–ರಿಚರ್ಡ್ ಸ್ಮಿಥ್ ಹೇಳಿದ ಈ ಮಾತುಗಳು ಮೇಲ್ನೋಟಕ್ಕೆ ಸರಿ ಎನ್ನಿಸಬಹುದು. ಆದರೆ ಇವರ ಈ ಮಾತುಗಳಿಗೆ ಕ್ಯಾನ್ಸರ್ ರೋಗಿಗಳ ಸಂಬಂಧಿಗಳಿಂದ ಲೆಕ್ಕವಿಲ್ಲದಷ್ಟು ವಿರೋಧಗಳು ಬಂದಿವೆ. ಮುಖ್ಯವಾಗಿ ಎಳೆಯರಿಗೆ, ಯುವ­ಜನರಿಗೆ, ಅಥವಾ ಎಳೆ ಮಕ್ಕಳ ತಂದೆತಾಯಿಗೆ ಈ ರೋಗ ಬಂದರೆ ಅಂಥವರ ಬಂಧುಗಳಿಗೆ, ಸ್ವತಃ ರೋಗಿಗಳಿಗೆ ಆಗುವ ಮಾನಸಿಕ ಹಿಂಸೆ ಅಷ್ಟಿಷ್ಟಲ್ಲ. ಮತ್ತೆ, ಪ್ಯಾಂಕ್ರಿಯಾಟಿಕ್ ಅಥವಾ ಶ್ವಾಸಕೋಶದ ಕ್ಯಾನ್ಸರ್ ಬಂದರೆ ಅದು ಗೊತ್ತಾ­ಗುವ ಮೊದಲೇ ವಾಸಿ ಮಾಡುವ ಸಾಧ್ಯತೆಗಳೆಲ್ಲ ಮೀರಿ ಹೋಗಿರುತ್ತವೆ. ಕೆಲವು ಕ್ಯಾನ್ಸರ್‌ಗಳು ವಿಪರೀತ ನೋವು ಕೊಡುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ‘ಶತಕೋಟಿ ಹಣ ಪೋಲು ಮಾಡಿ...’  ಎಂಬ ಹೇಳಿಕೆ ಬೇಕಿತ್ತೆ?   ಅಷ್ಟೆಲ್ಲ ಹಣ ವಿನಿಯೋಗಿಸಿ ಸಂಶೋಧನೆ ಮಾಡಿದ್ದ­ರಿಂದಲೇ ಲಕ್ಷಾಂತರ ಜನರು ಕ್ಯಾನ್ಸರ್ ದಾಳಿಗೆ ಸಿಕ್ಕರೂ ಪಾರಾಗಿ ಈಗ ಸ್ವಸ್ಥ ಜೀವನ ನಡೆಸುತ್ತಿ­ದ್ದಾರೆ. ಈಗಿನ ಚಿಕಿತ್ಸೆಗಳಲ್ಲಿ ರೋಗಿಗೆ ನಾನಾ ಬಗೆಯ ಹಿಂಸೆಗಳಾಗುತ್ತವೆ ಹೌದು. ಆದರೆ ಸಂಶೋಧನೆಗಳಿಗೆ ಇನ್ನಷ್ಟು ಹಣ ಹರಿದು ಬಂದರೆ ಕ್ಯಾನ್ಸರನ್ನು ಆರಂಭದಲ್ಲೇ ಪತ್ತೆ ಹಚ್ಚಿ ಹಿಂಸೆಯಿಲ್ಲದ ಚಿಕಿತ್ಸಾ ವಿಧಾನಗಳನ್ನು ಕಂಡು­ಕೊಳ್ಳಬಹುದು.

ಈ ಎರಡೂ ಬಗೆಯ ವಿವಾದಗಳಿಂದ ಹೊಮ್ಮಿದ ಸಂಗತಿ ಏನೆಂದರೆ ಕ್ಯಾನ್ಸರನ್ನು ಆರಂಭ­ದಲ್ಲೇ ಪತ್ತೆ ಮಾಡಬಲ್ಲ ವಿಧಾನಗಳು ನಮಗಿಂದು ತುರ್ತಾಗಿ ಬೇಕಾಗಿದೆ. ಆದರೆ ಸಂಶೋಧನೆಗೆ ಯಾರು ಹಣ ಹೂಡಬೇಕು? ವಿದೇಶೀ ಖಾಸಗಿ ಕಂಪನಿಗಳು ಔಷಧಗಳಿಗೆ ಪೇಟೆಂಟ್ ಮಾಡಿಕೊಂಡು ರೋಗಿಗಳಿಂದ ಅಪಾರ ಹಣ ಕೀಳುತ್ತವೆ. ಪೇಟೆಂಟ್ ಅವಧಿ ತೀರಿದರೂ ಬೆಲೆ ತಗ್ಗಿಸುವುದಿಲ್ಲ. ಭಾರತದ ನಿಯಮಗಳ ಪ್ರಕಾರ, ಹಾಗೆ ಪೇಟೆಂಟ್ ಅವಧಿ ತೀರಿದ ಔಷಧಗಳನ್ನು ಕಡಿಮೆ ಬೆಲೆಯಲ್ಲಿ ಉತ್ಪಾದಿಸಿದರೆ ಮಾತ್ರ ನಮ್ಮ ದೇಶದಲ್ಲಿ ಅವುಗಳನ್ನು ಮಾರಬಹುದು. ‘ಈ ನಿಯಮ­ಗ­ಳನ್ನೇ ತಿದ್ದುಪಡಿ ಮಾಡಿ’ (ಕಂಪನಿಗಳ ಲಾಭಾಂಶ ಜಾಸ್ತಿ ಮಾಡಿಕೊಡಿ) ಎಂದು ಬರಾಕ್‌ ಒಬಾಮ ಮೊನ್ನೆ ಬಂದಾಗ ಪ್ರಧಾನಿಯನ್ನು ಒತ್ತಾಯಿ­ಸಿದ್ದು ವರದಿಯಾಗಿದೆ.

ಸಣ್ಣಕ್ಷರಗಳಲ್ಲಿ ಅಂತಿಮವಾಗಿ ಅದೆಂಥ ಒಪ್ಪಂದವಾಗುತ್ತದೊ ಗೊತ್ತಿಲ್ಲ. ಆದರೆ ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಪರಮಾಣು ವಹಿವಾಟು ಕುರಿತ ಒಪ್ಪಂದ ಮಾತ್ರ ದಪ್ಪಕ್ಷರ­ಗ­ಳಲ್ಲೇ ಕಾಣುತ್ತಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT