ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ: ಗ್ರಹಿಕೆಯ ಮೀಮಾಂಸೆ

Last Updated 7 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಹದಿನಾರನೇ ಲೋಕಸಭೆ ಚುನಾವಣೆಯ ಪ್ರಚಾರದ ಸದ್ದುಗದ್ದಲಗಳ  ನಡುವೆ, ಅತ್ಯಾಚಾರ  ಅಪರಾಧಕ್ಕೆ ಮುಂಬೈನ ಸೆಷನ್ಸ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದ ವಿಚಾರ ಚರ್ಚೆಗಳನ್ನು ಹುಟ್ಟು ಹಾಕಿದೆ.  ಮುಂಬೈನ ಶಕ್ತಿಮಿಲ್ ಆವರಣದಲ್ಲಿ  ನಡೆದ ಎರಡು ಸಾಮೂ­ಹಿಕ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಈ ಶಿಕ್ಷೆಯಾಗಿದೆ.  ಕಳೆದ ವರ್ಷವಷ್ಟೇ ಕಾನೂನು ತಿದ್ದುಪಡಿಯಾಗಿ ಸೇರ್ಪಡೆಯಾಗಿರುವ  ಭಾರತೀಯ ದಂಡ ಸಂಹಿತೆಯ  376(ಇ) ಸೆಕ್ಷನ್ ಅನ್ವಯ ಭಾರತದಲ್ಲಿ ಮೊದಲ ಬಾರಿಗೆ ವಿಧಿಸಲಾದ ಗಲ್ಲು ಶಿಕ್ಷೆ ಇದು. ಈ ಮೂವರು ಅಪರಾಧಿಗಳು ಒಂದಲ್ಲ ಎರಡು ಬಾರಿ   ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂಬುದಕ್ಕಾಗಿ ಈ ಶಿಕ್ಷೆ ವಿಧಿಸಲಾಗಿದೆ.

ಗಲ್ಲು ಶಿಕ್ಷೆ ಎಂಬುದು ಅತ್ಯಾಚಾರ ಅಪರಾಧದ ಬಗ್ಗೆ  ಭಯ ಹುಟ್ಟಿಸಬಲ್ಲುದೇ ಎಂಬುದೇ ಚರ್ಚಾಸ್ಪದ.  ಗಲ್ಲು ಶಿಕ್ಷೆ ಭಾರತ­ದಲ್ಲಿ ಹೆಚ್ಚೇನೂ ಜಾರಿಗೊಳ್ಳುತ್ತಿಲ್ಲ ಎಂಬುದೂ ವಾಸ್ತವವೇ. ಕಳೆದ 18 ವರ್ಷಗಳಲ್ಲಿ ಮೂವರ­ನ್ನಷ್ಟೇ  ಗಲ್ಲಿಗೇರಿಸಲಾಗಿದೆ. ಸುಮಾರು 400 ಮಂದಿ ಗಲ್ಲು ಶಿಕ್ಷೆಗೆ ಕಾದಿದ್ದು  ಈ ಶಿಕ್ಷೆಯ ವಿರುದ್ಧದ ಮೇಲ್ಮ­ನ­ವಿಗಳು  ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ  ವಿವಿಧ ಹಂತಗಳಲ್ಲಿವೆ. ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾಗಿರುವ ಮೇಲ್ಮನವಿ­ಗಳಿಂದ ಹಿಡಿದು ರಾಷ್ಟ್ರಪತಿಗಳ ಮುಂದೆಯೂ ಕ್ಷಮಾದಾನಕ್ಕಾಗಿ ಅನೇಕ  ಅರ್ಜಿಗಳು ಕಾಯುತ್ತಿವೆ.

ಗಲ್ಲು ಶಿಕ್ಷೆಯ ಭಯ ಅತ್ಯಾಚಾರ ಅಪರಾಧದ ತಡೆಗೆ ಪರಿಣಾಮಕಾರಿಯಾಗು­ವುದು ಸಾಧ್ಯವಿಲ್ಲ. ಬದಲಿಗೆ ಸಾಕ್ಷ್ಯವನ್ನು ಪೂರ್ಣ ನಾಶ ಮಾಡುವುದಕ್ಕಾಗಿ ಅತ್ಯಾಚಾರ ಎಸಗಿದ ನಂತರ ಮಹಿಳೆಯನ್ನು ಕೊಲೆ ಮಾಡುವ ಪ್ರಸಂಗಗಳು ಹೆಚ್ಚಾಗುವ ಅಪಾಯಗಳೇ ಜಾಸ್ತಿ. ದೌರ್ಜನ್ಯದ ವಿರುದ್ಧದ ಪ್ರತೀಕಾರದ ರಾಜಕಾರಣ ನಮ್ಮನ್ನು ಎಲ್ಲಿಗೆ  ತಾನೇ ಒಯ್ಯಬಹುದು? ಮುಂಬೈನ  ಶಕ್ತಿಮಿಲ್ ಸಾಮೂಹಿಕ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ  ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಂ ಅವರು ವಾದಿಸಿದ ಪರಿ ಹೀಗಿದೆ:   ‘ಅಪರಾಧಿಗಳಿಗೆ ಮರಣ ದಂಡನೆ ನೀಡಲೇಬೇಕು. ಏಕೆಂದರೆ  ‘ಶೀಲ’ ಹಾಗೂ ‘ಪಾವಿತ್ರ್ಯ’ ಕಳೆದುಕೊಂಡ  ಸಂತ್ರಸ್ತೆ ಮತ್ತೆ ಹಿಂದಿನಂತಾಗುವುದು ಅಸಾಧ್ಯ.’

ಅತ್ಯಾಚಾರಿಯ ಅಪರಾಧದ ಕ್ರೌರ್ಯವನ್ನು ಬಿಂಬಿಸುವುದಕ್ಕಿಂತ ಹೆಚ್ಚಾಗಿ,  ಶೀಲ, ಪಾವಿತ್ರ್ಯ ಎಂಬಂತಹ ನುಡಿಗಟ್ಟುಗಳಲ್ಲಿ ಸಂತ್ರಸ್ತೆಯ ‘ಕರುಣಾಜನಕ’ ಸ್ಥಿತಿಯನ್ನು ಬಿಂಬಿಸುತ್ತಾ ಸಂತ್ರಸ್ತೆಯನ್ನು ಮತ್ತಷ್ಟು ಸಂಕಟಕ್ಕೆ  ದೂಡುವ ಈ ಪ್ರಕ್ರಿಯೆಗೆ ಏನು ಹೇಳುವುದು? ಭಾಷಾ ನುಡಿಗಟ್ಟುಗಳಲ್ಲಿ ಧ್ವನಿಸುವ ಲಿಂಗ ತಾರತಮ್ಯ­ಗಳನ್ನು ಅಳಿಸಿಹಾಕಿ ಬದಲಾವಣೆ ತರುವುದಕ್ಕಾಗಿ  ಮಹಿಳಾ ಗುಂಪುಗಳು ಹೋರಾಟ ನಡೆಸಿ­ಕೊಂಡೇ ಬಂದಿವೆ. 

ಹೀಗಾಗಿಯೇ  ಇಂಗ್ಲಿಷ್ ಭಾಷೆಯಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆ­ಯನ್ನು   ‘ವಿಕ್ಟಿಮ್’ ಎಂದು ಕರೆಯುವ ಬದಲಿಗೆ    ‘ಸರ್ವೈವರ್’  ಎಂಬ ಪದವನ್ನು ಈಗ ಬಳಸ­ಲಾಗುತ್ತಿದೆ. ಹೀಗಿದ್ದೂ ‘ಅತ್ಯಾಚಾರ ಎಂಬುದು ಮಹಿಳೆಯ ದೇಹದ ಮೇಲಿನ ಆಕ್ರಮಣ ಮಾತ್ರವಲ್ಲ.  ಅದು ಆಕೆಯ ಮನಸ್ಸು,  ಶೀಲ, ಪ್ರತಿಷ್ಠೆ ಹಾಗೂ  ಆತ್ಮ  ಗೌರವದ ಮೇಲಿನ ಆಕ್ರಮಣವೂ ಹೌದು.  ಸಂತ್ರಸ್ತೆ ಸಾಯದೆ ಅದು ಮಾಯುವುದಿಲ್ಲ.  ಅತ್ಯಾಚಾರ ಎಂಬುದು ಕೊಲೆಯ ಮತ್ತೊಂದು ರೂಪ’ ಎಂದೆಲ್ಲಾ ನಿಕ್ಕಂ ಅವರು ಮಂಡಿಸಿದ ವಾದ  ಈಗ ಅಪಾರ ಟೀಕೆಗಳಿಗೆ ಗುರಿಯಾಗಿದೆ.

ಇಂತಹ ನುಡಿಗಟ್ಟುಗಳ ಬಳಕೆ ಹಾಗೂ ವ್ಯವಸ್ಥೆಯ ಕನಿಕರವೇನೂ ಮಹಿಳೆಗೆ ಬೇಕಿಲ್ಲ. ತನ್ನ ಹಕ್ಕು, ಅಸ್ಮಿತೆ ಹಾಗೂ ಘನತೆ ಎತ್ತಿ ಹಿಡಿಯಬೇಕೆಂಬುದು  ಆಕೆಯ ಆಗ್ರಹ.   ಶೀಲ­ಹರಣದ  ಪರಿಕಲ್ಪನೆಯನ್ನು  ಒತ್ತಿ ಹೇಳುತ್ತಾ ಹೆಣ್ಣನ್ನು   ಶಕ್ತಿ ಹೀನಳನ್ನಾಗಿಸುವ ಪ್ರಯತ್ನಗಳು ಬದಲಾಗದ ಮನಸ್ಥಿತಿಗಳನ್ನೇ ಧ್ವನಿಸುವಂತ­ಹದ್ದು.  ಹೆಣ್ಣಿನ ಶೀಲಹರಣ ಮಾಡಿದ್ದಕ್ಕಾಗಿ ಸಾವಿನ ಮೂಲಕ ಪ್ರತೀಕಾರ ಕೈಗೊಳ್ಳುವಂತಹ ಪ್ರವೃತ್ತಿಯ ಪ್ರದರ್ಶನ ಪಿತೃಪ್ರಧಾನ ವ್ಯವಸ್ಥೆಯ ದರ್ಪದ ಮೌಲ್ಯಗಳನ್ನೇ ಮತ್ತೆ ಪ್ರತಿಪಾದಿಸುತ್ತವೆ. ಮಹಿಳಾ ಹಕ್ಕುಗಳನ್ನು ಸಮರ್ಥನೆ ಮಾಡಿಕೊಳ್ಳುವ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಈ ಬಗೆಯ ಪಿತೃಪ್ರಧಾನ ಮೌಲ್ಯಗಳನ್ನು ಧ್ವನಿಸುವ ನುಡಿಗಟ್ಟುಗಳು ಬಳಕೆಯಾದದ್ದು  ವಿಪರ್ಯಾಸ.

ಅತ್ಯಾಚಾರ ಅಪರಾಧವನ್ನು ಸಮಾಜ, ನ್ಯಾಯಾಂಗ ಹಾಗೂ ನಮ್ಮ ರಾಜಕಾರಣಿಗಳು ಗ್ರಹಿಸುವ ನೆಲೆಗಳಲ್ಲೇ  ದೋಷವಿದೆ ಎಂಬುದು ಪದೇ ಪದೇ ವ್ಯಕ್ತವಾಗುತ್ತಲೇ ಇದೆ.

ಈ ಮಧ್ಯೆ,  ತೆಹೆಲ್ಕಾ ಸಂಪಾದಕ ತರುಣ್ ತೇಜಪಾಲ್ ವಿರುದ್ಧ ಅವರ ಕಿರಿಯ ಸಹೋದ್ಯೋಗಿ ಮಾಡಿರುವ ಲೈಂಗಿಕ ದೌರ್ಜನ್ಯದ ಪ್ರಕರಣವೂ ಮತ್ತೊಮ್ಮೆ ಚರ್ಚಾ ವಲಯಕ್ಕೆ ಬಂದಿದೆ. ಗೋವಾ ಹೋಟೆಲಿನ ಲಿಫ್ಟ್ ನಲ್ಲಿ ನಡೆಯಿತೆನ್ನಲಾದ ಲೈಂಗಿಕ ದೌರ್ಜನ್ಯದ   ಸಿ.ಸಿ. ಟಿ.ವಿ. ದೃಶ್ಯಾವಳಿಗಳನ್ನು ನೋಡಿರುವುದಾಗಿ ಪ್ರತಿಪಾದಿಸಿಕೊಂಡು ಬರೆದ ಲೇಖನಗಳ ಬಗ್ಗೆ  ಆಕ್ಷೇಪಗಳು ವ್ಯಕ್ತವಾಗಿವೆ.  ‘ಔಟ್‌ಲುಕ್‌’ ಪತ್ರಿಕೆಯಲ್ಲಿ ಮನು ಜೋಸೆಫ್ ಹಾಗೂ ‘ದಿ ಸಿಟಿಜನ್’ ಆನ್ ಲೈನ್ ಮ್ಯಾಗಜಿನ್ ನಲ್ಲಿ   ಸೀಮಾ ಮುಸ್ತಫಾ ಅವರು  ಈ ಕುರಿತ  ಲೇಖನಗಳನ್ನು ಬರೆದಿದ್ದಾರೆ.

ನ್ಯಾಯಾಲಯ­ದಲ್ಲಿ ಮಂಡಿಸಬೇಕಾಗಿರುವ ಸಾಕ್ಷ್ಯಗಳ ಪಟ್ಟಿ­ಯಲ್ಲಿರುವ ಸಿ.ಸಿ.ಟಿ.ವಿ. ದೃಶ್ಯಗಳನ್ನು  ವಿಶ್ಲೇಷಿ­ಸುವ ಲೇಖನಗಳು  ಆರೋಪಿ ಪರ ಪೂರ್ವಗ್ರಹ­ಗಳಿಂದ ಕೂಡಿವೆ  ಎಂದು ಆರೋಪಿಸಿ   ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ (ಪಿಸಿಐ) ರಾಷ್ಟ್ರದ ಪತ್ರಕರ್ತೆಯ­ರನ್ನೊಳಗೊಂಡ  ಎನ್ ಡಬ್ಲ್ಯು ಎಂ ಐ (ನೆಟ್ ವರ್ಕ್ ಆಫ್ ವಿಮೆನ್ ಇನ್ ಇಂಡಿಯಾ) ಪತ್ರ ಬರೆದಿದೆ.  ಅಸಮರ್ಪಕ ಸಾಕ್ಷ್ಯ­ಗಳ ಆಧಾರದಲ್ಲಿ ‘ಮಾಧ್ಯಮ ವಿಚಾರಣೆ­ಗಳು’ ನಡೆಯಬಾರ­ದೆಂಬ ಕಳಕಳಿ ಎನ್ ಡಬ್ಲ್ಯು ಎಂಐ ಪತ್ರದಲ್ಲಿ ವ್ಯಕ್ತವಾಗಿದೆ.

ಆರೋಪದ ವಿರುದ್ಧ ರಕ್ಷಣೆ ಪಡೆದುಕೊಳ್ಳುವ ಹಕ್ಕು ಖಂಡಿತಾ ತೇಜಪಾಲ್  ಅವರಿಗೂ ಇದೆ.  ಅವರ ವಿರುದ್ಧದ ಆರೋಪ­ಗಳು ನ್ಯಾಯಾಲಯದಲ್ಲಿ ಸಾಬೀತಾಗಬೇಕಿವೆ.  ಆದರೆ ಸಾರ್ವಜನಿಕ ಅಭಿಪ್ರಾಯವನ್ನು ನ್ಯಾಯಾಲಯದ ವಿಚಾರಣೆಗೆ ಮುಂಚೆಯೇ ರೂಪಿಸುವ ಪ್ರಯತ್ನಗಳು  ಮಾಧ್ಯಮ ನೀತಿ ಸಂಹಿತೆಗಳಿಗೆ ತಕ್ಕುದಾದಲ್ಲ ಎಂಬಂತಹ ಅಭಿಪ್ರಾಯವನ್ನು   ಎನ್ ಡಬ್ಲ್ಯು ಎಂ ಐ  ಪ್ರಕಟಿಸಿದೆ.

ತೇಜಪಾಲ್ ಪರ ವಾದ ಮಂಡನೆಗೆ, ಲೇಖನಗಳಲ್ಲಿ ಬಳಕೆಯಾಗಿರುವ ಭಾಷೆಯೂ  ಮತ್ತದೇ ಹಿಂದಿನ ಅದೇ ಹಳೆಯ ಕಂತೆ ಪುರಾಣ.  ಈ ಲೇಖನಗಳಲ್ಲೂ ಹೆಣ್ಣಿನ ವಿರುದ್ಧದ ಪೂರ್ವಗ್ರಹಗಳನ್ನು ಪೋಷಿಸುವ ಅದೇ ಬಗೆಯ ಭಾಷೆ  ಬಳಕೆ ಆಗಿರುವುದು ವಿಪರ್ಯಾಸ.  ಆಕೆ ಏನು ಬಟ್ಟೆ ತೊಟ್ಟಿದ್ದಳು? ಘಟನೆಗಳು ನಡೆದ ನಂತರ  ಲಿಫ್ಟ್ ನಿಂದ ಹೊರ ಬರುವಾಗ ಆಕೆ ಯಾಕೆ  ಅಳುತ್ತಿರಲಿಲ್ಲ? ಕೂದಲು ಕಿತ್ತುಕೊಳ್ಳುತ್ತಿ­ರಲಿಲ್ಲ ಎಂಬಂತಹ ವಾದಗಳು ಅತ್ಯಾಚಾರ ದೂರು ನೀಡಿದವರನ್ನೇ ಶಂಕಿಸುವ ರೀತಿಯಲ್ಲಿ ಮಂಡನೆಯಾಗಿರುವುದು ಅತ್ಯಾಚಾರದ ದೂರು­ಗಳನ್ನು  ಮುಂದಕ್ಕೊಯ್ಯುವ ಪ್ರಕ್ರಿಯೆ­ಯಲ್ಲಿರುವ  ಕಷ್ಟಗಳಿಗೆ ದ್ಯೋತಕ.

ದೆಹಲಿಯಲ್ಲಿ 2012ರ ಡಿಸೆಂಬರ್ 16ರ ಸಾಮೂಹಿಕ ಅತ್ಯಾಚಾರ ಘಟನೆಯಿಂದಾಗಿ   ಮಹಿಳೆ ಮೇಲಿನ ಹಿಂಸೆ ವಿರುದ್ಧ ಪ್ರತಿಭಟನೆಯ ಅಲೆ ರಾಷ್ಟ್ರದಲ್ಲಿ ಎದ್ದಿದ್ದನ್ನು ಕಂಡಿದ್ದೇವೆ. ಹೀಗಾಗಿ  ಹಿಂದೆಂದಿಗಿಂತಲೂ ಮಹಿಳೆ ವಿರು­ದ್ಧದ ಹಿಂಸಾಚಾರದ ವಿಚಾರ, ರಾಷ್ಟ್ರೀಯ ವಾಗ್ವಾ­ದದ ಭಾಗವಾಯಿತು. ಲೈಂಗಿಕ ದೌರ್ಜನ್ಯಕ್ಕೆ ಗುರಿಯಾದ ಸಂತ್ರಸ್ತರ ಕುರಿತಾದ ಸಂವೇದನಾ­ಶೀಲತೆಯನ್ನು ಇದ್ದಕ್ಕಿದ್ದಂತೆ ಮುಖ್ಯವಾಗಿ ಪರಿಗಣಿಸಲು ಆರಂಭವಾಯಿತು.

ಮಹಿಳೆಯ ವರ್ತನೆ ಅಥವಾ ಆಕೆಯ ವೇಷಭೂಷಣಗಳು ಆಕೆಯ ಮೇಲಿನ ಆಕ್ರಮಣಕ್ಕೆ ಕಾರಣ ಎಂಬಂತೆ ವ್ಯಕ್ತಪಡಿಸಲಾಗುತ್ತಿದ್ದ ವಿಚಾರ ಧಾರೆಗಳನ್ನು ಬಗ್ಗು ಬಡಿಯುವ ಪ್ರಯತ್ನಗಳೂ ನಡೆದವು. ಆದರೆ ನಂತರದ ದಿನಗಳಲ್ಲೂ  ಇವು ಸಾರ್ವಜನಿಕ ಭಿತ್ತಿಯಲ್ಲಿ ಉಳಿದುಕೊಂಡಿವೆಯೆ?  ಈ ಬಾರಿಯ ಚುನಾವಣೆ ವೇಳೆ ಈ ಬಗೆಗಿನ ಕಾಳಜಿಗಳು ವ್ಯಕ್ತವಾಗುತ್ತಿವೆಯೆ? ಸಮಾಜ­ವಾಗಿ ನಾವು ಪಡೆದುಕೊಂಡ ಹೆಚ್ಚಿನ ಸೂಕ್ಷ್ಮತೆ­ಗಳನ್ನು ಈಗ ರಾಷ್ಟ್ರದಲ್ಲಿ ಚಾಲ್ತಿಯಲ್ಲಿರುವ ಚುನಾವಣಾ ವಾಗ್ವಾದಗಳು ಪ್ರತಿಬಿಂಬಿಸುತ್ತಿ­ವೆಯೆ? ಎಂಬಂತಹ ಪ್ರಶ್ನೆಗಳನ್ನು ನಾವು ಕೇಳಿ­ಕೊಳ್ಳಬೇಕಿದೆ.

ಈ ಕೆಲವು ಉದಾಹರಣೆಗಳನ್ನು ಗಮನಿಸಿ: ‘ಚುನಾವಣಾ ಪ್ರಚಾರ ಹಾಗೂ ಮಾಧ್ಯಮ­ದಿಂದ ಸಿಗುತ್ತಿರುವ ಗಮನದಿಂದ ಖುಷಿಪಡುತ್ತಿ­ದ್ದೀರಾ’ ಎಂಬಂತಹ ಪ್ರಶ್ನೆಗೆ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನ ತಾರಾ ಪ್ರಚಾರಕ ದೇವ್ ಹೇಳಿದ ಮಾತುಗಳಿವು:  ‘ಒಂದು ರೀತಿ ರೇಪ್ ಗೊಳಗಾದಂತೆ. ಅಸಹಾಯಕತೆಯಿಂದ ಕೂಗಿಕೊಳ್ಳಲೂಬಹುದು ಅಥವಾ ಎಂಜಾಯ್ ಮಾಡಲೂಬಹುದು’. ನಂತರ ದೇವ್ ಅವರು ತಾವು ರಾಜಕಾರಣಕ್ಕೆ ಹೊಸಬರೆಂದು ಟ್ವೀಟ್ ಮಾಡಿ ಈ ಮಾತುಗಳಿಗೆ ಕ್ಷಮೆ ಯಾಚಿಸಿದ್ದರು.

ಪಶ್ಚಿಮ ಬಂಗಾಳದ ಬರಾಸಾತ್  ಬಿಜೆಪಿ  ಅಭ್ಯರ್ಥಿಯಾಗಿರುವ ಪಿ.ಸಿ. ಸರ್ಕಾರ್ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ  ಮಾಡಿದ ಟೀಕೆಗಳಲ್ಲೂ ‘ಅತ್ಯಾಚಾರ’ ವಸ್ತುವಾಗಿತ್ತು.  ‘ಅತ್ಯಾಚಾರ ಎಸಗಿದವರೆಲ್ಲಾ ತುಂಟ ಹುಡುಗರೆಂದು ಅವರು ಹೇಳುತ್ತಾರೆ. ನಾನು ಕೇಳುತ್ತೇನೆ, ಅವರೇ  ಅತ್ಯಾಚಾರ­ಕ್ಕೊಳ­ಗಾದರೆ  ಆಗ ಅವರು ಏನು ಮಾಡಿರುತ್ತಿದ್ದರು’ ಎಂದು ಮಮತಾ ಬ್ಯಾನರ್ಜಿ ಹೆಸರು ಹೇಳದೆಯೇ ನುಡಿದ ಮಾತುಗಳಾಗಿದ್ದವು ಇವು.
ಹಾಗಿದ್ದಲ್ಲಿ ಬದಲಾವಣೆ ಎಲ್ಲಿ? ರಾಷ್ಟ್ರದ ಪ್ರಜ್ಞಾ ವಲಯದಲ್ಲಿ ಮಹಿಳಾ ವಿಚಾರಗಳ ಬಗ್ಗೆ ಎಲ್ಲಿ ಮೂಡಿದೆ ಸೂಕ್ಷ್ಮತೆ?  ಭ್ರಷ್ಟಾಚಾರ ಹಾಗೂ ಮಹಿಳಾ ಸುರಕ್ಷತೆ  ವಿಚಾರಗಳು ಕಳೆದ ವರ್ಷ ಕೇಂದ್ರ ಸ್ಥಾನ ಪಡೆದುಕೊಂಡಿದ್ದವು.  ಅಥವಾ ನಾವು ಹಾಗೆ ಭಾವಿಸಿದ್ದೆವು. 

ಭ್ರಷ್ಟಾ­ಚಾರದ ವಿರುದ್ಧ ರಾಜಕೀಯ ಪಕ್ಷಗಳು ಪುಂಖಾನುಪುಂಖವಾಗಿ ಭಾಷಣ ಮಾಡುತ್ತಾ  ಆ ವಿಚಾರವನ್ನು  ಈಗಲೂ ಕೇಂದ್ರ ಸ್ಥಾನಕ್ಕೆ ತಳ್ಳು­ತ್ತಿವೆ. ಆದರೆ ಮಹಿಳಾ ಸಬಲೀಕರಣ, ಲಿಂಗನ್ಯಾಯದಂತಹ ವಿಚಾರಗಳು  ಕೆಲವು ರಾಜಕೀಯ ಪಕ್ಷಗಳ ಪ್ರಣಾಳಿಕೆಗಳಲ್ಲಿ  ಸ್ಥಾನ ಪಡೆದಿರಬಹುದು ಅಷ್ಟೆ.  ಹಾಗೆಯೇ ದಿನ ನಿತ್ಯದ ಚುನಾ­ವಣಾ ಪ್ರಚಾರದ ವಾಗ್ವಾದಗಳಲ್ಲಿ  ಕಣ್ಣೊರೆ­ಸುವ ತಂತ್ರಗಳಾಗಿ  ಆಗೊಮ್ಮೆ ಈಗೊಮ್ಮೆ  ಮಹಿಳಾ ಸಬಲೀಕರಣದ ವಿಚಾರ ಪ್ರಸ್ತಾಪ­ವಾಗಿರುವುದನ್ನು ಬಿಟ್ಟರೆ ಮತ್ತೆಲ್ಲೂ ಕಾಣಸಿಗದು.

ಸಮಾಜವಾದಿ ಪಕ್ಷವಂತೂ ತನ್ನ ಪ್ರಣಾಳಿಕೆ­ಯಲ್ಲಿ ನೀಡಿರುವ ಭರವಸೆಯೇ ಬೇರೆ ಬಗೆ­ಯದು. ಅತ್ಯಾಚಾರದ ವ್ಯಾಖ್ಯಾನವನ್ನು  ವಿಸ್ತಾರ­ಗೊಳಿಸಿ ಕಠಿಣ ಶಿಕ್ಷೆಗೆ ಅವಕಾಶ ಕಲ್ಪಿಸಿರುವ ಹೊಸ ಅತ್ಯಾಚಾರಿ ವಿರೋಧಿ ಕಾನೂನಿನ ದುರ್ಬಳಕೆಯನ್ನು ನಿಯಂತ್ರಿಸುವು­ದಾಗಿ ತನ್ನ ಪ್ರಣಾಳಿಕೆಯಲ್ಲಿ ಸಮಾಜವಾದಿ ಪಕ್ಷ ಭರವಸೆ ನೀಡಿದೆ. ಸಂಸತ್ತಿನಲ್ಲೂ ಈ ಕಾನೂ­ನಿನ ವಿರುದ್ಧ ಸಮಾಜವಾದಿ ಪಕ್ಷ ದನಿ ಎತ್ತಿತ್ತು. 

ಭಾರತದ  ಮತದಾರರ ಪೈಕಿ ಮಹಿಳೆಯರ ಪ್ರಮಾಣ ಶೇ 49ರಷ್ಟಿದೆ ಎಂಬುದು ಪರಿಣಾಮ ಬೀರಬಹುದಾದ ಪ್ರಮುಖ ಸಂಗತಿಯೇ ಆಗಿಲ್ಲ ಎಂಬುದು ಹೀಗೆ ವ್ಯಕ್ತವಾಗುತ್ತಲೇ ಹೋಗುತ್ತದೆ.     

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT