ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ಕೇಂದ್ರಿತವಲ್ಲದ ರಾಜಕಾರಣ ಸಾಧ್ಯವೇ ಇಲ್ಲವೇ?...

Last Updated 25 ಜೂನ್ 2016, 19:30 IST
ಅಕ್ಷರ ಗಾತ್ರ

ರಾಜಕೀಯವೇ ಹಾಗೆ. ಅದು ಅಧಿಕಾರ ಕೇಂದ್ರಿತವಾಗಿರುತ್ತದೆ. ಅಲ್ಲಿ ಮನುಷ್ಯ ಸಂಬಂಧಗಳಿಗೆ ಬೆಲೆ ಇರುತ್ತದೆಯೋ ಇಲ್ಲವೋ ಹೇಳುವುದು ಬಹಳ ಕಷ್ಟ. ಅಧಿಕಾರಕ್ಕಾಗಿ ಜೊತೆಗೆ  ಇದ್ದವರು, ಉಧೋ, ಉಧೋ ಎಂದು ಹೊಗಳಿದವರು ಅದು ಹೋದ ಕೂಡಲೇ ತಿರುಗಿ ಬೀಳುತ್ತಾರೆ.

ಅಲ್ಲಿ ಕೃತಜ್ಞತೆ ಎಂಬುದಕ್ಕೆ ಕೊಂಚವೂ ಜಾಗ ಇರುವಂತೆ ಕಾಣುವುದಿಲ್ಲ.  ದೇವೇಗೌಡರಿಂದಲೇ ನಾಯಕರಾದವರು, ಶಾಸಕರಾಗಿ ಆರಿಸಿ ಬಂದವರು ಈಚಿನ ರಾಜ್ಯಸಭೆ ಚುನಾವಣೆಯಲ್ಲಿ ಯಾವ ಕಾರಣಕ್ಕಾಗಿ ತಿರುಗಿ ಬಿದ್ದರು ಎಂಬುದನ್ನು ಇನ್ನೂ ಜನರು ನೋಡುತ್ತಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೆಲವರು ಮಾಜಿಗಳು ತಿರುಗಿ ಬಿದ್ದಿದ್ದಾರೆ.

ಬಿಜೆಪಿಯಲ್ಲಿ ಕೂಡ ಈಗಷ್ಟೇ ರಾಜ್ಯ ಅಧ್ಯಕ್ಷರಾಗಿ ನೇಮಕಗೊಂಡಿರುವ ಯಡಿಯೂರಪ್ಪ ಅವರಿಗೂ ಎಲ್ಲವೂ ಸರಿ ಇರುವಂತೆ ಕಾಣುವುದಿಲ್ಲ. ಜೆ.ಡಿ ಎಸ್‌ ಮತ್ತು ಬಿಜೆಪಿಗಳೆರಡೂ ವಿರೋಧ ಪಕ್ಷಗಳು. ಅಲ್ಲಿನ ಭಿನ್ನಮತ ಜನರಿಗೆ ನೇರವಾಗಿ ಸಂಬಂಧಿಸಿದ್ದಲ್ಲ. ಆದರೆ, ಸರ್ಕಾರ ನಡೆಸುವ ಪಕ್ಷದಲ್ಲಿನ ಭಿನ್ನಮತಕ್ಕೂ ಆಡಳಿತಕ್ಕೂ ನೇರ ಸಂಬಂಧ ಇರುತ್ತದೆ. ಅದು ಜನರ ಬದುಕಿನ ಮೇಲೆ ನೇರ ಪರಿಣಾಮ ಬಿರುತ್ತದೆ. ಬಹುತೇಕ ವ್ಯತಿರಿಕ್ತ ಪರಿಣಾಮವನ್ನೇ ಮಾಡುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸಂಪುಟವನ್ನು ಪುನರ್‌ರಚಿಸಲೇಬೇಕಿತ್ತು. ಕಳೆದ ಮೂರು ವರ್ಷಗಳ ಆಡಳಿತದ ಬಗೆಗೆ ಅನೇಕ ಆಕ್ಷೇಪಗಳು ಇದ್ದುವು. ಅದು ಇನ್ನೂ ‘ಟೇಕ್ ಆಫ್‌’ ಆಗಿಯೇ ಇಲ್ಲ ಎನ್ನುವವರೇ ಹೆಚ್ಚು ಜನರು ಇದ್ದರು. ಅದನ್ನು ಒಪ್ಪಬಹುದು, ಬಿಡಬಹುದು ಆದರೆ, ಸಿದ್ದರಾಮಯ್ಯನವರ ಸಂಪುಟ ಒಟ್ಟಾಗಿ ಕೆಲಸ ಮಾಡುತ್ತಿದೆ, ಅಲ್ಲಿ ಸಾಮೂಹಿಕ ವಿವೇಕ ಕೆಲಸ ಮಾಡುತ್ತಿದೆ ಎಂದು ಯಾರಿಗೂ ಅನಿಸುತ್ತಿರಲಿಲ್ಲ.

ಅಲ್ಲಲ್ಲಿ ಕೆಲವರು ಸಚಿವರು ವೈಯಕ್ತಿಕವಾಗಿ ಉತ್ತಮ ಕೆಲಸ ಮಾಡುತ್ತಿದ್ದರೋ ಏನೋ? ಆದರೆ, ಅದು ಒಟ್ಟಾರೆಯಾಗಿ ಸರ್ಕಾರದ ವರ್ಚಸ್ಸಿಗೆ ಪೂರಕವಾಗಿ ಮತ್ತು ಅದನ್ನು ಉದ್ದೀಪಿಸುವ ಹಾಗೆ ಕಾಣುತ್ತಿರಲಿಲ್ಲ. ಮುಖ್ಯಮಂತ್ರಿ ಮತ್ತು ಅವರ ಸಂಪುಟದ ಸದಸ್ಯರ ನಡುವೆ ಬೆಚ್ಚನೆಯ ಒಂದು ಸಂಬಂಧವೂ ಇದ್ದಂತೆ ಕಾಣುತ್ತಿರಲಿಲ್ಲ. ಮುಖ್ಯಮಂತ್ರಿ ವಿರುದ್ಧ ವಿರೋಧ ಪಕ್ಷಗಳು ದಾಳಿ ಮಾಡಿದಾಗ ಅವರ ನೆರವಿಗೆ ಯಾರೂ ಬಾರದೇ ಇದ್ದುದು ಕಳೆದ ಮೂರು ವರ್ಷಗಳಲ್ಲಿ ಉದ್ದಕ್ಕೂ ಎದ್ದು ಕಾಣುತ್ತಿತ್ತು.

ಅದಕ್ಕೆ ಸಿದ್ದರಾಮಯ್ಯನವರ ಸ್ವಭಾವ ಕಾರಣವೋ ಅಥವಾ ಅವರ ಸಂಪುಟದ ಸದಸ್ಯರ ನಿರಾಸಕ್ತಿ ಕಾರಣವೋ ಎಂದು ಹೇಳುವುದು ಕಷ್ಟ. ಒಟ್ಟಿನ ಪರಿಣಾಮವೇನು ಎಂದರೆ ಸಂಪುಟದಲ್ಲಿ ಒಂದು ಸಹಮತ ಇದೆಯೆಂದಾಗಲೀ, ವಿವೇಕ ಇದೆ ಎಂದಾಗಲೀ ಅನಿಸುತ್ತಿರಲಿಲ್ಲ. ಸರ್ಕಾರ ತನ್ನ ನಿರ್ಧಾರಗಳಲ್ಲಿ ಮತ್ತೆ ಮತ್ತೆ ಎಡವುತ್ತಿದ್ದಾಗಲೂ ಹಿರಿಯ ಮತ್ತು ಅನುಭವಿ ಸಚಿವರು ಅದರ ಕಿವಿ ಹಿಂಡಿದ ನಿದರ್ಶನ ಜನರಿಗೆ ಕಾಣಲಿಲ್ಲ.

ಈಚಿನ ಎರಡು ಉದಾಹರಣೆಗಳನ್ನು ಕೊಡಬಹುದು ಎನ್ನುವುದಾದರೆ ಲೋಕಾಯುಕ್ತ ಮತ್ತು ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷರ ನೇಮಕದ ಶಿಫಾರಸುಗಳು. ಇದೆಲ್ಲ ಕೇವಲ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಮಾತ್ರ  ಧಕ್ಕೆ ತರಲಿಲ್ಲ, ಒಟ್ಟಾರೆ ಸರ್ಕಾರದ ಬಿಂಬಕ್ಕೇ ಮುಕ್ಕು ತಂದುವು. ಆದರೂ ಯಾವ ಸಚಿವರೂ ಎಲ್ಲಿಯೂ ತುಟಿ ಪಿಟಕ್‌ ಎಂದುದು ಜನರ ಗಮನಕ್ಕೆ ಬರಲಿಲ್ಲ.

ಶಾಸಕರು ಕೂಡ ಶಾಸಕಾಂಗ ಪಕ್ಷದ ಸಭೆಯಲ್ಲಿ ತಮ್ಮ ಕ್ಷೇತ್ರದ ಕುಂದುಕೊರತೆಗಳ ಬಗೆಗೆ, ವರ್ಗಾವರ್ಗಿ ಬಗೆಗೆ ಮಾತನಾಡಿದರೇ ಹೊರತು ಮುಂದಿನ ಚುನಾವಣೆಯನ್ನು ಸಮರ್ಥವಾಗಿ ಎದುರಿಸಬೇಕಾದರೆ ಸರ್ಕಾರದ ಕಾರ್ಯವೈಖರಿಯಲ್ಲಿ ಏನೆಲ್ಲ ಬದಲಾವಣೆ ಆಗಬೇಕು ಎಂದು ಹೇಳಿದ ನೆನಪೂ ನಮಗೆ ಇಲ್ಲ. ಏಕೆ ಹೀಗೆ ಆಗುತ್ತದೆ? ಒಂದು ರಾಜಕೀಯ ಪಕ್ಷ ಆಡಳಿತಕ್ಕೆ ಬರುವ ವರೆಗೆ ಅದರ ಧ್ಯೇಯ ಉದ್ದೇಶಗಳು ಬೇರೆ  ಇರುತ್ತವೆ.

ಅಧಿಕಾರಕ್ಕೆ ಬಂದ ಕೂಡಲೇ ಆ ಧ್ಯೇಯ ಮತ್ತು ಉದ್ದೇಶಗಳೆಲ್ಲ ಬದಲಾಗಿ ಬಿಡುತ್ತವೆಯೇ? ಆಡಳಿತ ಪಕ್ಷವಾಗುವುದು ಎಂದರೆ ಅಧಿಕಾರ ಅನುಭವಿಸುವುದು ಮತ್ತು ಹಣ ಮಾಡುವುದು ಎಂದು ಮಾತ್ರ ಅರ್ಥವೇ? ಮುಖ್ಯಮಂತ್ರಿಗಳು ಕಳೆದ ಭಾನುವಾರ ಮಾಡಿದ ಸಂಪುಟ ವಿಸ್ತರಣೆಯ ನಂತರ ನಡೆದಿರುವ ಭಿನ್ನಮತೀಯ ಚಟುವಟಿಕೆಗಳ ಹಿಂದೆ ಇದೇ ಮನೋಭಾವ ಇರುವಂತೆ ಕಾಣುತ್ತದೆ. ತಾವು ಮೂರು ವರ್ಷ ಯಾವ ಅಡಚಣೆಯೂ ಇಲ್ಲದೆ ಅಧಿಕಾರ ಮಾಡಿದೆವು ಎಂಬುದು ಅವರಿಗೆ ನೆನಪು ಇಲ್ಲ.

ತಮ್ಮ ಅಧಿಕಾರ  ಹೋಯಿತು ಎಂಬ ನೋವೇ ದೊಡ್ಡದಾಗಿದೆ. ಈಗ ಹೊಸದಾಗಿ ಸಚಿವರಾಗಿರುವವರಿಗೆ ಎರಡು ವರ್ಷ ಮಾತ್ರ ಇದೆ. ಹೋಲಿಸಿಕೊಂಡು ನೋಡಿದ್ದರೆ ತಾವು ಎಷ್ಟು ಅದೃಷ್ಟವಂತರು ಎಂದು ಅವರಿಗೆ ಅನಿಸಬೇಕಿತ್ತು. ಆದರೆ, ಮೂರು ವರ್ಷ ಜೊತೆಗೇ ಇದ್ದಾಗ ಕಾಣದ ಸಿದ್ದರಾಮಯ್ಯನವರ ‘ಕುರೂಪ’ವೆಲ್ಲ ಈಗ ಭಿನ್ನಮತೀಯರ ಕಣ್ಣಿಗೆ ಕಾಣುತ್ತಿದೆ! ನಾಲಿಗೆ ಸಡಿಲವಾಗಿದೆ. ನಾಲಿಗೆ ಸಡಿಲ ಬಿಟ್ಟು ಮಾತನಾಡು ತ್ತಿರುವವರೆಲ್ಲ ಚಿಕ್ಕವರಲ್ಲ, ಅನನುಭವಿಗಳಲ್ಲ.

ಎಲ್ಲ ತಿಳಿದವರು, ಪ್ರಜಾಪ್ರಭುತ್ವದ ನಡವಳಿಕೆಗಳನ್ನು, ಸೂಕ್ಷ್ಮಗಳನ್ನು ಬಲ್ಲವರು. ಸಂಪುಟ ರಚನೆ, ವಿಸ್ತರಣೆ ಅಥವಾ ಪುನರ್‌ ರಚನೆಯೆಲ್ಲ ಮುಖ್ಯಮಂತ್ರಿಗಳ ಪರಮಾಧಿಕಾರ ಎಂಬುದು ಪ್ರಜಾಪ್ರಭುತ್ವದಲ್ಲಿ ಒಪ್ಪಿತವಾದ ಸಂಗತಿ. ಅದನ್ನು ಹೇಗೆ ಮಾಡಬೇಕು ಎಂಬ ಬಗೆಗೆ ಭಿನ್ನಾಭಿಪ್ರಾಯಗಳು ಇರಬಹುದು. ಮುಖ್ಯಮಂತ್ರಿಗಳು ಈಗ ಕೈ ಬಿಟ್ಟಿರುವ ಸಚಿವರನ್ನು ಮನೆಗೆ ಕರೆದು ಅಥವಾ ಹೊರಗೆ ಎಲ್ಲಿಯಾದರೂ ಕರೆದುಕೊಂಡು ಹೋಗಿ ಊಟ ಕೊಟ್ಟು, ‘ನೀವೆಲ್ಲ ರಾಜೀನಾಮೆ ಕೊಡಬೇಕು’ ಎಂದು ಕೋರಿಕೊಳ್ಳಬಹುದಿತ್ತು.

ಶ್ರೀನಿವಾಸ ಪ್ರಸಾದ್‌ ಅವರಂಥ ಹಿರಿಯರಿಗೆ, ಅಂಬರೀಷ್‌ ಅವರಂಥ ನಾಯಕರಿಗೆ ಅದು ಗೌರವಯುತ ವಿದಾಯ ವಾಗಿರುತ್ತಿತ್ತು. ದಿನೇಶ್‌ ಗುಂಡೂರಾವ್‌, ಕಿಮ್ಮನೆ, ಸೊರಕೆ, ಅಭಯಚಂದ್ರ ಮುಂತಾದವರನ್ನೂ ಕರೆದು ಅವರಿಗೆಲ್ಲ ಕೃತಜ್ಞತೆ ಹೇಳಿ ಬೀಳ್ಕೊಡಬೇಕಿತ್ತು. ಜೀವನದಲ್ಲಿ ಇಂಥ ಸಣ್ಣಪುಟ್ಟ ಸೌಜನ್ಯವೇ ಬಹಳ ದೊಡ್ಡದಾಗಿ ಕಾಣಿಸುತ್ತದೆ.

ಅಧಿಕಾರ ಬಿಟ್ಟು ಕೊಡುವುದು ಯಾರಿಗೇ ಆಗಲಿ ಕಷ್ಟದ ಕೆಲಸ. ಅದು ಗೌರವಯುತವಾಗಿ ಇರುವಂತೆ ಮಾಡಿದ್ದರೆ ಸಿದ್ದರಾಮಯ್ಯ ಅವರಿಗೆ ಈಗಿನ ಇರಿಸು ಮುರಿಸು ಆಗುತ್ತಿರಲಿಲ್ಲ. ರಾಮಕೃಷ್ಣ ಹೆಗಡೆ, ಎಸ್‌.ಎಂ.ಕೃಷ್ಣ ಅವರು ಇಂಥ ಸಜ್ಜನಿಕೆಯಿಂದಲೇ ಬಹಳ ಜನಪ್ರಿಯ ನಾಯಕರು ಎಂದು ಅನಿಸಿದವರು. ಸಿದ್ದರಾಮಯ್ಯನವರು ಈ ಇಬ್ಬರು ನಾಯಕರ ನಂತರದ ತಲೆಮಾರಿನವರು. ಅವರ ನಯ ನಾಜೂಕು ಇವರಿಗೆ ಇಲ್ಲದಿರಬಹುದು. ಆದರೆ, ನಾಯಕನಾಗಿರುವ ಅವರು ಕಷ್ಟದಿಂದಲಾದರೂ ಇಂಥ ಕೆಲವು ರಿವಾಜುಗಳನ್ನು ಬೆಳೆಸಿಕೊಳ್ಳಬೇಕು.

ಅವರಿಗೆ ಸಂಪುಟ ಪುನರ್ ರಚಿಸಲು ಹೈಕಮಾಂಡ್‌  ಒಪ್ಪಿಗೆ ಕೊಟ್ಟಿತ್ತು. 14 ಮಂದಿ ಸಚಿವರನ್ನು ಕೈ ಬಿಟ್ಟು 13 ಮಂದಿಯನ್ನು ತೆಗೆದುಕೊಳ್ಳುವುದು ದೊಡ್ಡ ಪ್ರಮಾಣದ ಪುನರ್‌ ರಚನೆಯೇ. ಸಾಕಷ್ಟು ಜಾಣ್ಮೆಯಿಂದ ಮತ್ತು ಶಾಸಕಾಂಗದಲ್ಲಿ ಲಭ್ಯ ಇರುವ ‘ಪ್ರತಿಭೆ’ಯನ್ನೇ  ಬಳಸಿಕೊಳ್ಳಲು ಅವರು ಸಾಕಷ್ಟು ಹೆಣಗಾಡಿದ್ದಾರೆ. ಇರುವುದು 34 ಸೀಟುಗಳು. ಅದಕ್ಕಿಂತ  ಹೆಚ್ಚು ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಆಗುವುದಿಲ್ಲ. ಸಂಪುಟಕ್ಕೆ ಸೇರಬೇಕು ಎನ್ನುವವರೂ ಅದನ್ನು ಅರ್ಥ ಮಾಡಿಕೊಳ್ಳಬೇಕಿತ್ತು.

ಸಹಜವಾಗಿಯೇ ಕಾಂಗ್ರೆಸ್‌ ಪಕ್ಷದಲ್ಲಿ ಹೆಚ್ಚು ಜನ ಹಿರಿಯರು ಇದ್ದಾರೆ. ಮೂರಕ್ಕಿಂತ ಹೆಚ್ಚು ಬಾರಿ ಆಯ್ಕೆಯಾದವರೇ ಅನೇಕ ಮಂದಿ ಇದ್ದಾರೆ. ಅವರನ್ನೆಲ್ಲ ಸೇರಿಸಿಕೊಂಡರೆ ಹೊಸ ರಕ್ತಕ್ಕೆ ಅವಕಾಶ ಕೊಡಲು ಸಾಧ್ಯವೇ ಆಗುತ್ತಿರಲಿಲ್ಲ. 60–70 ವಯಸ್ಸು ದಾಟಿದವರನ್ನೇ, ಅವರು ಎಷ್ಟು ಸಾರಿ ಗೆದ್ದಿದ್ದಾರೆ ಎಂದು ಪರಿಗಣಿಸಿ, ಸಂಪುಟಕ್ಕೆ ಸೇರಿಸಿಕೊಂಡಿದ್ದರೆ ಆಡಳಿತಕ್ಕೆ ಚುರುಕು ತರುವುದೂ ಸಾಧ್ಯವಿರಲಿಲ್ಲ.

ಆದರೂ ಕಾಗೋಡು ತಿಮ್ಮಪ್ಪ ಮತ್ತು ರಮೇಶ್‌ ಕುಮಾರ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಅವರ  ಬಾಯಿ ಮುಚ್ಚಿಸಲು ಮುಖ್ಯಮಂತ್ರಿ ಪ್ರಯತ್ನಿಸಿದ್ದಾರೆ. ಕಾಗೋಡು ಮತ್ತು ರಮೇಶ್‌ ಕುಮಾರ್‌ ಅವರು ಅತ್ಯಂತ ಸಮರ್ಥವಾಗಿ ವಿರೋಧ ಪಕ್ಷದ ನಾಯಕರ ಕೆಲಸ ಮಾಡುತ್ತಿದ್ದರು! ಅವರ  ಟೀಕೆಗಳನ್ನು ಅರಗಿಸಿಕೊಳ್ಳುವುದು ಬರೀ ಮುಖ್ಯಮಂತ್ರಿಗಳಿಗಲ್ಲ ಒಟ್ಟು ಸರ್ಕಾರಕ್ಕೇ ನುಂಗಲಾಗದ ತುಪ್ಪವಾಗಿತ್ತು.

ಅಧಿವೇಶನ ಸೇರಿದಾಗಲೆಲ್ಲ ಇಬ್ಬರೂ ಸರದಿಯಂತೆ ಸರ್ಕಾರಕ್ಕೆ  ಬೆವರು ಬರಿಸುತ್ತಿದ್ದರು. ಈಗ, ಕಾಗೋಡು ತಿಮ್ಮಪ್ಪನವರಿಗೆ ಅವರಿಗೆ ಪ್ರಿಯವಾದ ಕಂದಾಯ ಖಾತೆಯೇ ಸಿಕ್ಕಿದೆ. ಅವರು ತಮ್ಮ ಕ್ಷೇತ್ರದ ಮತದಾರರಿಗೆ ಕೊಟ್ಟ ಯಾವೆಲ್ಲ ಭರವಸೆಗಳನ್ನು ಎಷ್ಟು ಈಡೇರಿಸುತ್ತಾರೆ ಎಂದು ನೋಡಬೇಕು. ಹೊರಗೆ ನಿಂತು ಮಾಡುವ ಟೀಕೆಗೆ ಜವಾಬ್ದಾರಿ ಇರಬೇಕು ಎಂದೇನೂ ಇಲ್ಲ, ಒಳಗೆ ನಿಂತು ಮಾಡುವ ಕೆಲಸಕ್ಕೆ ಅದು ಬೇಕಾಗುತ್ತದೆ. ಕಾಗೋಡು ಮತ್ತು ರಮೇಶ್ ಕುಮಾರ್‌ ಈಗ ಕೆಲಸ ಮಾಡಿ ತೋರಿಸಬೇಕು.

ಈ ಸಾರಿಯ ಸಂಪುಟ ವಿಸ್ತರಣೆಯ ಅತ್ಯಂತ ಚಾಣಾಕ್ಷ ನಡೆ ಎಂದರೆ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಪ್ರಿಯಾಂಕ್‌ ಖರ್ಗೆಯವರನ್ನು ಸಂಪುಟಕ್ಕೆ ಸೇರಿಸಿಕೊಂಡುದು.ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಥ ರಾಜಕೀಯ ಆಟ ಆಡಿದರು ಎಂದರೆ ಅವರು ಖರ್ಗೆಯವರನ್ನು ನಿಶ್ಶಸ್ತ್ರಗೊಳಿಸಿಬಿಟ್ಟರು. ಖರ್ಗೆಯವರು ತಮ್ಮ ಮಗನಿಗೆ ಸಂಪುಟ ಸೇರಲು ಒಪ್ಪದೇ ಇದ್ದಿದ್ದರೆ ಅವರಿಗೆ ಖಮರುಲ್‌ ಮತ್ತು ಚಿಂಚನಸೂರರನ್ನು ಎದುರಿಸುವ ನೈತಿಕತೆ  ಇರುತ್ತಿತ್ತು.

ಖಮರುಲ್‌ ಮತ್ತು ಚಿಂಚನಸೂರರನ್ನು ಬಿಡಲೇ ಬೇಕಿದ್ದ ಮುಖ್ಯಮಂತ್ರಿಗಳಿಗೆ ಖರ್ಗೆಯವರನ್ನೂ ಸುಮ್ಮನಾಗಿಸಲು ಇರುವ ದಾರಿ ಒಂದೇ ಇತ್ತು. ಅದು, ಖರ್ಗೆಯವರೂ ಎಲ್ಲರ ಹಾಗೆ ಹುಲುಮಾನವರು ಎಂದು ತೋರಿಸಬೇಕಿತ್ತು! ತೀರಾ ಈಚಿನವರೆಗೆ ಒಂದು ಕಡೆ ಎಸ್‌.ಎಂ.ಕೃಷ್ಣ ಅವರು, ಇನ್ನೊಂದು ಕಡೆ ಖರ್ಗೆಯವರು ಸರ್ಕಾರಕ್ಕೆ ಆಗೀಗ ಇರಿಸು ಮುರಿಸು ಮಾಡುತ್ತಲೇ ಇದ್ದರು.

ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅದು ಎದ್ದು ಕಂಡಿತ್ತು. ಈಗ ಸಂಪುಟದ ಆಗುಹೋಗುಗಳಲ್ಲಿ ಖರ್ಗೆಯವರೂ ಪರೋಕ್ಷವಾಗಿ ಪಾಲುದಾರರು.ಸಂಪುಟದಿಂದ ವಜಾ ಆದವರು ಕೇವಲ ಸಿದ್ದರಾಮಯ್ಯ ಅವರ ವಿರುದ್ಧ ಮಾತ್ರ ದಾಳಿ ಮಾಡುತ್ತಿಲ್ಲ. ಖರ್ಗೆಯವರ ವಿರುದ್ಧವೂ ಟೀಕೆಗಳ ಸುರಿಮಳೆ ಆಗುತ್ತಿದೆ.

‘ಒಳ್ಳೆಯದಲ್ಲವೇ’ ಎಂದು ಸಿದ್ದರಾಮಯ್ಯನವರ ಆಪ್ತರು ಕಣ್ಣು ಮಿಟುಕಿಸುತ್ತಿದ್ದಾರೆ! ಇದು ಸರ್ಕಾರದ ಮಟ್ಟದಲ್ಲಿ ಆಯಿತು. ಪಕ್ಷದ ವಿಚಾರದಲ್ಲಿಯೂ ಅವರು ಅತ್ಯಂತ ಸೂಕ್ಷ್ಮವಾದ ಒಂದು ಹೆಜ್ಜೆಯನ್ನು ಇಟ್ಟಿದ್ದಾರೆ. ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಸಾರಥ್ಯವನ್ನು ಇನ್ನೇನು ವಹಿಸಿಕೊಳ್ಳಲಿದ್ದಾರೆ. ಅವರಿಗೆ ಚೆಕ್ ಮೇಟ್‌ ಎನ್ನುವಂತೆ ದಿನೇಶ್‌ ಗುಂಡೂರಾವ್‌ ಅವರನ್ನು ಕಾರ್ಯಾಧ್ಯಕ್ಷರಾಗಿ ನೇಮಿಸಿ ಆಗಲೇ ಅಧಿಕಾರ ವಹಿಸಿಕೊಳ್ಳುವಂತೆಯೂ ಸಿದ್ದರಾಮಯ್ಯ ನೋಡಿಕೊಂಡಿದ್ದಾರೆ.

ಇದರಿಂದ ಎರಡು ಲಾಭಗಳು ಆದುವು: ಸಂಪುಟದಿಂದ ಕೈ ಬಿಟ್ಟಿದ್ದ ದಿನೇಶ್‌ ಗುಂಡೂರಾವ್‌ ಅವರನ್ನು ಸಮಾಧಾನ ಮಾಡಿದಂತೆ ಆಯಿತು; ಶಿವಕುಮಾರ್‌ ಅವರ ಅಧಿಕಾರಕ್ಕೆ ಒಂದು ಲಗಾಮನ್ನು ಹಾಕಿದಂತೆಯೂ ಆಯಿತು. ರಾಜಕೀಯವನ್ನು ಅರ್ಥ ಮಾಡಿಕೊಳ್ಳುವುದು ಯಾವಾಗಲೂ ಆಸಕ್ತಿದಾಯಕವಾಗಿರುತ್ತದೆ! ಈಗಾಗಲೇ ಮುಖ್ಯಮಂತ್ರಿಗಳು ಹಿರಿಯ ಶಾಸಕರಿಗೆ ನಿಗಮ, ಮಂಡಳಿಗಳ ಅಧ್ಯಕ್ಷ ಹುದ್ದೆಯ ಆಮಿಷ ಒಡ್ಡಿದ್ದಾರೆ. ಹೇಗೂ ಅವರ ವಿರುದ್ಧದ ಭಿನ್ನಮತ ಹೆಚ್ಚು ಕಾಲ ನಡೆಯುವಂತೆ ಕಾಣುವುದಿಲ್ಲ. ನಾಯಕರಾದವರು ಪ್ರಾಮಾಣಿಕರಾಗಿರಬೇಕು. ಅವರ ಹೋರಾಟಗಳಲ್ಲಿ ಅವರಿಗೆ ವೈಯಕ್ತಿಕ ಹಿತಾಸಕ್ತಿ ಏನೂ ಇಲ್ಲ ಎಂದು ಹಿಂದೆ ಬರುವವರಿಗೆ ಅನಿಸಬೇಕು.

ಶ್ರೀನಿವಾಸ ಪ್ರಸಾದ್ ಮತ್ತು ಅಂಬರೀಷ್ ಅವರು ತಾವು ಮಂತ್ರಿಯಾಗಿರಬೇಕು ಎಂಬ ಉದ್ದೇಶದಿಂದ ಭಿನ್ನಮತ ಚಟುವಟಿಕೆ ನಡೆಸಿದರೆ ಅದು ಹೆಚ್ಚು ಕಾಲ ಬಾಳುವುದಿಲ್ಲ.ಅವರ ಜೊತೆಗೆ ಬರುವವರಿಗೆ ಏನು ಲಾಭ? ಮುಖ್ಯಮಂತ್ರಿಗಳು, ಭಿನ್ನಮತೀಯರ ಜೊತೆಗೆ ಹೋಗುವವರ ಮುಂದೆ ಈಗ ಮೂಳೆ ಹಿಡಿದಂತೆ ಕಾಣುತ್ತದೆ.

ಅಧಿಕಾರ ಎಂಬುದು ಒಂದು ಅಯಸ್ಕಾಂತ. ಅದರ ಸೆಳೆತದಿಂದ ತಪ್ಪಿಸಿಕೊಳ್ಳುವುದು ಬಲು ಕಷ್ಟ. ಅಂಬರೀಷ್‌ ಅವರ ನಡೆಯನ್ನೇ ನೋಡಿ: ತಮ್ಮ ಆಪ್ತ ಸಹಾಯಕನ ಕೈಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕಳಿಸಿದ್ದ ಅವರು ಅದು ತಿರಸ್ಕೃತವಾದ ನಂತರ ಮತ್ತೆ ಸಭಾಧ್ಯಕ್ಷರ ಕೊಠಡಿಗೆ ಸ್ವತಃ ರಾಜೀನಾಮೆ ಪತ್ರ ಹಿಡಿದುಕೊಂಡು ಹೋಗಲೇ ಇಲ್ಲ! ಸ್ವೀಕೃತವಾಗಿ ಬಿಟ್ಟರೇ ಏನು ಮಾಡುವುದು ಎಂಬ ಭಯ ಇರಬೇಕು! ಕೇಂದ್ರದಲ್ಲಿ ವಾರ್ತಾ ಸಚಿವರಾಗಿದ್ದಾಗಲೂ ಅವರು ಕಾವೇರಿ ಹೋರಾಟದ ಬೆಂಬಲಾರ್ಥ ಹೀಗೆಯೇ ಮಾಡಿದ್ದರು. ಅತ್ತ ರಾಜೀನಾಮೆ ಕೊಟ್ಟಂತೆಯೂ ಆಗಿತ್ತು, ಇತ್ತ ಸಚಿವರಾಗಿ ಇದ್ದಂತೆಯೂ ಆಗಿತ್ತು!

ಎಲ್ಲದರಲ್ಲೂ ಎಲ್ಲವೂ ಕೆಟ್ಟುದು ಇರುವುದಿಲ್ಲ. ಒಂದಿಷ್ಟು ಒಳ್ಳೆಯದು ಇದ್ದೇ ಇರುತ್ತದೆ. ಪ್ರಸವದಲ್ಲಿ ಬರೀ ರಕ್ತ ಮಾತ್ರ ಬರುವುದಿಲ್ಲ. ಮುದ್ದಾದ ಒಂದು ಮಗುವೂ ಬರುತ್ತದೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಬಸವರಾಜ ರಾಯರೆಡ್ಡಿ ನಡೆದುಕೊಂಡಿದ್ದಾರೆ. ಸಚಿವಗಿರಿಗೆ ಸಿಗುವ ಎಲ್ಲ ಸೌಕರ್ಯಗಳನ್ನು ಅವರು ನಿರಾಕರಿಸಿದ್ದಾರೆ. ಸಚಿವಗಿರಿ ಎಂದರೆ ಅದು ಒಂದು ಸಾರ್ವಜನಿಕ ಕೆಲಸ ಎಂದು ಅವರು ಹೇಳಿದ್ದಾರೆ. ಈಗ ರಾಯರೆಡ್ಡಿಯವರು ತಮ್ಮ ಆಸ್ತಿಯನ್ನೂ ಬಹಿರಂಗವಾಗಿ ಘೋಷಿಸಬೇಕು. ಸಚಿವ ಹುದ್ದೆಯನ್ನು ಬಿಟ್ಟು ಕೊಡುವಾಗ ಮತ್ತೆ ಬಹಿರಂಗಪಡಿಸಬೇಕು.

ರಾಜಕೀಯ ಎಂಬುದು ಅಧಿಕಾರಕ್ಕೆ, ಸವಲತ್ತಿಗೆ, ಹಣಕ್ಕೆ ಎನ್ನುವಂಥ ಈಗಿನ ಕಾಲದಲ್ಲಿ ಅದಕ್ಕೆ ಅಪವಾದಗಳೂ ಇವೆ ಎಂದು ಕೆಲವರಾದರೂ ತೋರಿಸಿಕೊಡಬೇಕು.ಸಂಬಳ, ಸವಲತ್ತು ಬಿಟ್ಟುಕೊಟ್ಟವರು ಸಚಿವರಾಗಿಯೂ ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕು. ರಾಜಕೀಯ ಎಂಬುದು ಜನರ ಜೀವನದಲ್ಲಿ ವ್ಯತ್ಯಾಸ ತರುವುದು ಹಾಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT