ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ಬಂದಾಗ ಅರಿಯದವರು...

Last Updated 6 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಅದು 1978ರ ಆಸುಪಾಸಿನ ಕಾಲ. ಕೇಂದ್ರದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದ ಜನತಾ ಸರ್ಕಾರ ಬಿದ್ದು ಹೋಗಿತ್ತು. ಪ್ರಸಿದ್ಧ ವ್ಯಂಗ್ಯ ಚಿತ್ರಕಾರ ಆರ್‌.ಕೆ.ಲಕ್ಷ್ಮಣ್‌ ಅವರು ಆಗ ತಾವು ಕೆಲಸ ಮಾಡುತ್ತಿದ್ದ ಪತ್ರಿಕೆಯಲ್ಲಿ ಒಂದು ವ್ಯಂಗ್ಯ ಚಿತ್ರ ಪ್ರಕಟಿಸಿದ್ದರು. 1977ರ ಚುನಾವಣೆಯಲ್ಲಿ ರಾಯ್‌ಬರೇಲಿ ಕ್ಷೇತ್ರದಲ್ಲಿ ಇಂದಿರಾ ಗಾಂಧಿಯವರನ್ನು ಸೋಲಿಸಿ ಲೋಕಸಭೆಗೆ ಆಯ್ಕೆಯಾಗಿದ್ದ ರಾಜ್‌ನಾರಾಯಣ್‌, ಟೂತ್‌ಪೇಸ್ಟಿನ   ಟ್ಯೂಬಿನಿಂದ ಹೊರಗೆ ಬಿದ್ದಿದ್ದ ಪೇಸ್ಟ್‌ ಅನ್ನು ಮತ್ತೆ ಅದರ ಒಳಗೆ ತುಂಬುವ ದುಸ್ಸಾಹಸದಲ್ಲಿ ತೊಡಗಿದ್ದ ಚಿತ್ರ ಅದು. ರಾಜ್‌ನಾರಾಯಣ್‌ ಒಬ್ಬ ಸಮಾಜವಾದಿ ಆಗಿದ್ದರು ಮತ್ತು ಅವರು ರಾಮಮನೋಹರ ಲೋಹಿಯಾ ಅವರ ಕಟ್ಟಾ ಅನುಯಾಯಿ ಆಗಿದ್ದರು.

  1975ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ಮೇಲೆ ಆಂತರಿಕ ತುರ್ತುಸ್ಥಿತಿ ಹೇರಿದ್ದರು.   ಜಯಪ್ರಕಾಶ್ ನಾರಾಯಣ್, ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ.ಅಡ್ವಾಣಿ, ಎಚ್‌.ಡಿ.ದೇವೇಗೌಡ, ರಾಮಕೃಷ್ಣ ಹೆಗಡೆ ಹೀಗೆ ದೇಶದ ಎಲ್ಲ ಪ್ರಮುಖ ರಾಜಕೀಯ ನಾಯಕರನ್ನು  ಆಂತರಿಕ ಭದ್ರತಾ ಕಾಯ್ದೆ (ಮೀಸಾ)ಯಡಿ ಜೈಲಿಗೆ ಅಟ್ಟಿದ್ದರು. ಪತ್ರಿಕೆಗಳಲ್ಲಿ ಸರ್ಕಾರದ ವಿರುದ್ಧ ಏನನ್ನೂ ಬರೆಯುವಂತೆ ಇರಲಿಲ್ಲ. ಪ್ರಜಾಸತ್ತಾತ್ಮಕ ಬುನಾದಿಯ ಭಾರತ ದೇಶದ ಇತಿಹಾಸದಲ್ಲಿ ಅದು ಒಂದು ಕರಾಳ ಅಧ್ಯಾಯ.

ಜಯಪ್ರಕಾಶ್‌ ನಾರಾಯಣ್‌ ಅವರು ಇಂದಿರಾ ಸರ್ಕಾರದ ಭ್ರಷ್ಟಾಚಾರದ  ವಿರುದ್ಧ ಜನಾಂದೋಲನ ಹಮ್ಮಿಕೊಂಡಿದ್ದರು. ಕಿಂದರಜೋಗಿಯಂತೆ ಮುಂದೆ ಮುಂದೆ ಹೊರಟಿದ್ದ ಜೆ.ಪಿ ಹಿಂದೆ ಇಡೀ ಭಾರತ ಹೊರಟಂತೆ ಕಾಣುತ್ತಿತ್ತು. ಸ್ವಭಾವತಃ ಸರ್ವಾಧಿಕಾರಿಯಾಗಿದ್ದ ಇಂದಿರಾ ತಮ್ಮ ಅಧಿಕಾರಕ್ಕೆ ಅಪಾಯ ಎಂದುಕೊಂಡು ತುರ್ತುಸ್ಥಿತಿ ಘೋಷಿಸಿದ್ದರು. 18 ತಿಂಗಳ ನಂತರ ಆಂತರಿಕ ಮತ್ತು ಬಾಹ್ಯ ಒತ್ತಡಗಳನ್ನು ತಡೆದುಕೊಳ್ಳಲು ಆಗದೇ 1977ರಲ್ಲಿ ಅವರು ಲೋಕಸಭೆಗೆ ಚುನಾವಣೆ ಘೋಷಿಸಿದರು.

ಆ  ವರ್ಷದ ಮೇ ತಿಂಗಳಲ್ಲಿ ಸಂಸ್ಥಾ ಕಾಂಗ್ರೆಸ್, ಜನಸಂಘ, ಭಾರತೀಯ ಲೋಕದಳ ಮತ್ತು ಸಮಾಜವಾದಿ ಪಕ್ಷಗಳು ವಿಲೀನಗೊಂಡು ಜನತಾ ಪಕ್ಷ ಅಸ್ತಿತ್ವಕ್ಕೆ ಬಂತು. ನೇಗಿಲು  ಹೊತ್ತ ರೈತ ಅದರ  ಚಿಹ್ನೆಯಾಗಿತ್ತು. ಚುನಾವಣೆಗೆ ಮುನ್ನ ಜನತಾ ಪಕ್ಷ ಪ್ರಕಟಿಸಿದ ಪ್ರಣಾಳಿಕೆಯಲ್ಲಿ ಪ್ರಜಾಸತ್ತೆಯ ಮುಖ್ಯ ಆಶಯವಾದ ವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ಮೊದಲ ಆದ್ಯತೆ ಕೊಡಲಾಗಿತ್ತು: ‘ಸ್ವಾತಂತ್ರ್ಯವನ್ನು ಯಾವುದೇ ಲೌಕಿಕ ಸೌಲಭ್ಯಗಳೊಂದಿಗೆ ಹೋಲಿಕೆ ಮಾಡುವಂತಿಲ್ಲ’ ಎಂದು ಅದರಲ್ಲಿ ಪ್ರಸ್ತಾಪಿಸಲಾಗಿತ್ತು. ಎಲ್ಲ ಜನಪ್ರಿಯ ಘೋಷಣೆಗಳಿಗಿಂತ, ಸುಖ ಸವಲತ್ತುಗಳಿಗಿಂತ ತುರ್ತುಸ್ಥಿತಿಯಲ್ಲಿ ಹರಣಗೊಂಡಿದ್ದ ಅಭಿವ್ಯಕ್ತಿ ಮತ್ತು ವ್ಯಕ್ತಿ ಸ್ವಾತಂತ್ರ್ಯವನ್ನು ಮತ್ತೆ ಜನರಿಗೆ ಕೊಡುವುದು ಜನತಾ ಪಕ್ಷದ ಪ್ರಣಾಳಿಕೆಯ ಪ್ರಥಮಆದ್ಯತೆಯಾಗಿತ್ತು. ತುರ್ತುಸ್ಥಿತಿಯಲ್ಲಿ ಏನೆಲ್ಲ ದೌರ್ಜನ್ಯವಾಗಿತ್ತು ಎಂದರೆ ಜನರು ಮುಕ್ತವಾಗಲು ಬಯಸಿದ್ದರು.

ಕಟ್ಟಿಹೋಗಿದ್ದ ಉಸಿರನ್ನು ನಿಡಿದಾಗಿ ಬಿಟ್ಟವರಂತೆ ಅವರು ಜನತಾ ಪಕ್ಷವನ್ನು ಅಧಿಕಾರಕ್ಕೆ ತಂದರು. ಕಾಂಗ್ರೆಸ್ಸಿನ ಅತಿರಥ ಮಹಾರಥರೆಲ್ಲ ಸೋತು ಹೋದರು. ಅಧಿಕಾರದ ಪ್ರಮಾಣವಚನ ಸ್ವೀಕಾರಕ್ಕಿಂತ ಮುಂಚೆ ಜನತಾ ಪಕ್ಷದ ಮುಂಚೂಣಿ ನಾಯಕರೆಲ್ಲ ದೆಹಲಿಯ ರಾಜಘಾಟ್‌ ನ ಮಹಾತ್ಮ ಗಾಂಧಿ ಸಮಾಧಿ ಎದುರು ನಿಂತು ಪ್ರಮಾಣ ಮಾಡಿದರು.

ಆದರೆ, ಕೆಲವೇ ದಿನಗಳಲ್ಲಿ ಜನರ ನಿರೀಕ್ಷೆಗಳೆಲ್ಲ ಸಾಬೂನು ಗುಳ್ಳೆಗಳ ಹಾಗೆ ಒಡೆದು ಹೋದುವು. ಅಧಿಕಾರಕ್ಕೆ ಬಂದ ಕೂಡಲೇ ಜನತಾ ಸರ್ಕಾರದ ಅಧ್ವರ್ಯುಗಳಿಗೆ ನೆತ್ತಿಯ ಮೇಲೆ ಕಣ್ಣು ಬಂದುವು. ರಾಜ್ಯಗಳಲ್ಲಿ ಅಧಿಕಾರದಲ್ಲಿ ಇದ್ದ ಎಲ್ಲ ಕಾಂಗ್ರೆಸ್‌ ಸರ್ಕಾರಗಳನ್ನು ವಜಾ ಮಾಡಿದರು. ಇಂದಿರಾ ಅವರನ್ನು ಜೈಲಿಗೆ ಹಾಕಿದರು. ತಮ್ಮೊಳಗೆ ತಾವು ಕಿತ್ತಾಡ­ತೊಡಗಿದರು. ಪ್ರಧಾನಿ ಮೊರಾರ್ಜಿ ದೇಸಾಯಿ­ಯವರು ಜಯಪ್ರಕಾಶ್‌ ನಾರಾಯಣ್‌ ಅವರನ್ನೇ ಮರೆತುಬಿಟ್ಟರು. ಜನತಾ ಸರ್ಕಾರದ ಆಡಳಿತದಿಂದ ಬೇಸತ್ತಿರುವ ಜೆ.ಪಿಯವರನ್ನು ಕಂಡು ಸಮಾಧಾನ ಮಾಡಿ ಎಂದು ಹೇಳಿದ ಯಾರಿಗೋ ಮೊರಾರ್ಜಿಯವರು, ‘ಅವರೇನು ಮಹಾತ್ಮ ಗಾಂಧಿಯೇ?’ ಎಂದು ಮರುಪ್ರಶ್ನೆ ಹಾಕಿದರು. ಜನತಾ ಸರ್ಕಾರದಲ್ಲಿನ ದುರಂಧರರಿಗೆ ಯಾವುದಕ್ಕೆ ಅಲ್ಲದಿದ್ದರೂ ದುರಹಂಕಾರಕ್ಕೇನೂ ಕೊರತೆಯಿರಲಿಲ್ಲ!

ಜನರು ತಮ್ಮನ್ನು  ಏಕೆ ಚುನಾಯಿಸಿದ್ದಾರೆ ಎಂಬುದೇ ಅವರಿಗೆ ಮರೆತು ಹೋಯಿತು. ಮೊರಾರ್ಜಿಯವರನ್ನು ಕೆಳಕ್ಕೆ ಇಳಿಸಿ ತಾನು ಯಾವಾಗ ಪ್ರಧಾನಿಯಾದೇನು ಎಂದು ಚರಣ್‌ ಸಿಂಗ್‌ ಕನಸು ಕಾಣುತ್ತಿದ್ದರು. ಒಂದು ದಿನ ಅದೂ ಆಯಿತು. ಅಧಿಕಾರವಂಚಿತವಾಗಿದ್ದ ಕಾಂಗ್ರೆಸ್‌ ಹೊಂಚು ಹಾಕಿ ಕಾಯುತ್ತ ಇತ್ತು. ಚರಣ್‌ಸಿಂಗ್‌ ಅವರನ್ನು ಪ್ರಧಾನಿ ಮಾಡುವುದರಲ್ಲಿ ದೇವಿಲಾಲ್‌ ಜತೆಗೆ ರಾಜ್‌ನಾರಾಯಣ್‌ ಅವರ ಕೈವಾಡವೂ ಇತ್ತು. ಮೇಲಾಗಿ ಅವರಿಗೆ ಇಂದಿರಾ ಆಶೀರ್ವಾದ ಇತ್ತು! ಚರಣ್‌ಸಿಂಗ್‌ ಲೋಕಸಭೆಯನ್ನು ಪ್ರವೇಶ ಮಾಡದೇ ಪ್ರಧಾನಿ ಹುದ್ದೆ ಕಳೆದುಕೊಂಡರು. ಮುಂದೆ 1980ರ ದಶಕದಲ್ಲಿ ಮತ್ತೆ ಇತಿಹಾಸ ಮರುಕಳಿಸಿತು. ವಿ.ಪಿ.ಸಿಂಗ್‌ ಅವರ ಕಾಲು ಎಳೆದು ಯಂಗ್‌ ಟರ್ಕ್‌ ಖ್ಯಾತಿಯಚಂದ್ರಶೇಖರ್‌ ಪ್ರಧಾನಿಯಾದರು.

ಅವರ  ಸರ್ಕಾರ 40 ದಿನವೂ ಬಾಳಲಿಲ್ಲ. ಆಗಲೂ  ಅವರಿಗೆ ಕಾಂಗ್ರೆಸ್‌ ಬೆಂಬಲ ನೀಡಿತ್ತು!  ಇತಿಹಾಸದಲ್ಲಿ ತಾವು ಮಾಜಿ ಪ್ರಧಾನಿ ಎಂದು ಅನಿಸಿಕೊಳ್ಳುವುದು ಮಾತ್ರ ಚರಣ್‌ಸಿಂಗ್‌  ಅವರಿಗೆ ಬೇಕಿತ್ತು. ಚಂದ್ರಶೇಖರ್‌  ಅವರಿಗೂ ಅದೇ ಬೇಕಿತ್ತು. ಇವರೆಲ್ಲ ಸಣ್ಣಪುಟ್ಟ  ನಾಯಕರೇನೂ ಅಲ್ಲ. ಹೋರಾಟಗಾರರೂ, ತತ್ವನಿಷ್ಠರೂ ಆದವರು. ಅವರೇ ಹೀಗೆ ಕುಬ್ಜರ ಹಾಗೆ  ಆಸೆಬುರುಕರ ಹಾಗೆ ನಡೆದುಕೊಂಡು ಜನತಾ ಪಕ್ಷ ಎಂಬ ಒಂದು ಪ್ರಯೋಗ ನಾಶವಾಗಲು ಕಾರಣರಾದರು. ಜನರಿಗೆ ದ್ರೋಹವಾಯಿತು. ದೇಶವನ್ನು ಕಾಂಗ್ರೆಸ್ಸಿನ ಏಕಪಕ್ಷದ ಆಡಳಿತದಿಂದ ಮುಕ್ತಗೊಳಿಸಲು ಬಯಸಿದವರಿಗೆಲ್ಲ ನಿರಾಶೆಯಾಯಿತು.

‘ಜನತಾ ಪಕ್ಷದಲ್ಲಿ ಘಟಾನುಘಟಿ ನಾಯಕರು, ಅದ್ಭುತ ಸಂಸದೀಯ ಪಟುಗಳು, ದಕ್ಷ ಆಡಳಿತಗಾರರು ಇದ್ದರೂ ಅವರಿಗೆ ದೀರ್ಘ ಕಾಲ ಆಡಳಿತ ಮಾಡುವ ಕಲೆ ಗೊತ್ತಿಲ್ಲ. ಮೂಲತಃ ಅವರದು ಕಚ್ಚಾಡುವ ಸ್ವಭಾವ. ಹಾಗೂ ಅಧಿಕಾರ ಕಳೆದು ಹೋಗುವವರೆಗೆ ಅವರು ಕಚ್ಚಾಡುತ್ತಲೇ ಇರುತ್ತಾರೆ’ ಎಂದು ಜನರಿಗೆ ಖಚಿತವಾಯಿತು. ಅಧಿಕಾರ ಕಳೆದುಕೊಂಡರೂ ಅವರಿಗೆ ಪಶ್ಚಾತ್ತಾಪವೇನೂ ಆದಂತೆ ಕಾಣುತ್ತಿರಲಿಲ್ಲ. ಏಕೆಂದರೆ ಮತ್ತೆ ಅಧಿಕಾರಕ್ಕೆ ಬಂದರೆ ಮತ್ತೆ ಜಗಳವಾಡುವುದೇ ಅವರಿಗೆ ಅಂಟಿದ ರೋಗವಾಗಿತ್ತು.

ಕೇಂದ್ರದ ಮಾತು ಬಿಡಿ ; 1983ರಲ್ಲಿ ರಾಜ್ಯದಲ್ಲಿ ಮೊದಲ ಜನತಾ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಅದೇ ಆಯಿತು. 1994ರಲ್ಲಿ ಮತ್ತೆ ಅಧಿಕಾರಕ್ಕೆ ಬಂದಾಗಲೂ ಅದೇ ಜಗಳ. 1996ರಲ್ಲಿ ಎಚ್‌.ಡಿ.ದೇವೇಗೌಡರು ಪ್ರಧಾನಿಯಾದಾಗಲೂ ಪರಸ್ಪರ ವೈರ ಸಾಧಿಸುವುದು ನಿಲ್ಲಲಿಲ್ಲ. ಅಸೂಯಾಪರರೂ, ಮತ್ಸರವುಳ್ಳವರೂ ಆದ ಜನತಾ ಪರಿವಾರದ ನಾಯಕರು ಒಬ್ಬರ ಕಾಲು ಒಬ್ಬರು ಎಳೆದು ಇಬ್ಬರೂ ಕೆಳಕ್ಕೆ ಬಿದ್ದ ಮೇಲೆಯೇ ‘ಆಹಾ’ ಎಂದು ನೆಮ್ಮದಿ  ಪಡುವವರು.

ಇದನ್ನೆಲ್ಲ ಬರೆಯಲು ಕಾರಣ ಇದೆ : ಉಳಿದ ಪಳಿದ ಜನತಾ ಪರಿವಾರದ ನಾಯಕರು ದೆಹಲಿಯಲ್ಲಿ ಸಭೆ ಸೇರಿ ಮತ್ತೆ ಒಂದುಗೂಡುವ ಮಾತು ಆಡುತ್ತಿದ್ದಾರೆ. ಪರಿವಾರದ ಪಕ್ಷಗಳನ್ನು ಒಂದುಗೂಡಿಸುವ ಮತ್ತು ಅದರ  ವಿಧಿ ವಿಧಾನಗಳನ್ನು ರೂಪಿಸುವ  ಹೊಣೆಯನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಅವರಿಗೆ ವಹಿಸಲಾಗಿದೆ.  ಬಿಹಾರದಲ್ಲಿ ಈಗಾಗಲೇ ಜೆ.ಡಿ (ಯು) ಮತ್ತು ಆರ್.ಜೆ.ಡಿಗಳು ಒಂದಾಗಿ ಚುನಾವಣೆ  ಎದುರಿಸಲು ನಿರ್ಧರಿಸಿವೆ. ಬಿಜು ಜನತಾದಳದ ಮುಖ್ಯಸ್ಥರೂ ಆದ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಈ ವಿಲೀನ ಪ್ರಕ್ರಿಯೆಯಿಂದ ಹೊರಗೆ ಉಳಿದಿದ್ದಾರೆ. ‘ಕಾಂಗ್ರೆಸ್‌ ಮತ್ತು ಬಿಜೆಪಿಗಳನ್ನು ಸಮಾನ ದೂರದಲ್ಲಿ ಇಟ್ಟು ರಾಜಕಾರಣ ಮಾಡಬೇಕಿರುವ’ ಜನತಾ ಪರಿವಾರಕ್ಕೆ ಈಗ ಮತ್ತೆ  ಒಂದುಗೂಡುವ ಬಯಕೆ. ನೆಲೆ ಕಳೆದುಕೊಂಡಿರುವ ಕಾಂಗ್ರೆಸ್‌ ಬದಲಿಗೆ ಪರ್ಯಾಯವಾಗುವ ಆಸೆ.

ಜನತಾ ಪರಿವಾರದ ನಾಯಕರ ಸಮಸ್ಯೆ ಎಂದರೆ ಅವರು ಒಂದಲ್ಲ ಒಂದು ದೊಡ್ಡ ಜಾತಿಗೆ ಸೀಮಿತವಾದ ನಾಯಕರು. ಅದರ ಜತೆಗೆ ಒಂದೋ ಎರಡೋ ಜಾತಿಗಳನ್ನು ಸೇರಿಸಿಕೊಂಡು ಅಧಿಕಾರ ಹಿಡಿಯುವ ಸೂತ್ರ  ಕಂಡುಕೊಂಡವರು. ಇದು ಉತ್ತರಪ್ರದೇಶಕ್ಕೂ ಅನ್ವಯಿಸುವ ಮಾತು, ಬಿಹಾರಕ್ಕೂ ಅನ್ವಯಿಸುವ ಮಾತು. ಕರ್ನಾಟಕದ ಜೆ.ಡಿ (ಎಸ್‌)ಗೂ ಅದೇ  ಮಾತು ಅನ್ವಯಿಸುತ್ತದೆ.

ಅವರ  ಇನ್ನೊಂದು ದೌರ್ಬಲ್ಯ ಕುಟುಂಬದಲ್ಲಿಯೇ ಅಧಿಕಾರದ ಸೂತ್ರಗಳನ್ನು ಇಟ್ಟುಕೊಂಡಿರುವುದು. ಇದು ಮೂಲತಃ ಕಾಂಗ್ರೆಸ್ಸಿನ ರೋಗ  ಕೂಡ.  ಅಥವಾ ಆ ಪಕ್ಷದಿಂದಲೇ ಸಾಂಸರ್ಗಿಕವಾಗಿ ಜನತಾ ಪರಿವಾರಕ್ಕೂ ಅಂಟಿದ ರೋಗ. ಜನರು ಇದನ್ನೆಲ್ಲ ಗಮನಿಸುವುದಿಲ್ಲ ಎಂದು ಯಾರೂ ಅಂದುಕೊಳ್ಳಬಾರದು. ಹೊಸ ಪೀಳಿಗೆಯ ಮತದಾರರು ನಿತ್ಯ ಮತಪಟ್ಟಿಗೆ ಸೇರಿಕೊಳ್ಳುವಾಗ ತಮ್ಮ ಆಶೋತ್ತರಗಳನ್ನು ಯಾರು ಈಡೇರಿಸುತ್ತಾರೆ ಎಂಬುದನ್ನು ನೋಡುತ್ತಾರೆಯೇ  ಹೊರತು ಹಳೆಯ ಹಳವಂಡಗಳು ಅವರಿಗೆ ಬೇಕಿಲ್ಲ.

ಇದನ್ನು ವಿಪರ್ಯಾಸ ಎನ್ನಬೇಕೋ ಅಥವಾ ಆ ಪಕ್ಷದ ಹಣೆಬರಹ ಎನ್ನಬೇಕೋ ಗೊತ್ತಿಲ್ಲ. ಅಲ್ಲಿ ದೇವೇಗೌಡರು ಉಳಿದ ಜನತಾ ಪರಿವಾರದ ನಾಯಕರ ಜತೆಗೆ ಸೇರಿಕೊಂಡು ಹರಿದು ಹಂಚಿ ಹೋಗಿರುವ ಪಕ್ಷಗಳನ್ನು ದೇಶ ಮಟ್ಟದಲ್ಲಿ ಮತ್ತೆ ಒಂದುಗೂಡಿಸುವ ಮಾತುಕತೆ ನಡೆಸುತ್ತಿರುವಾಗಲೇ ಇತ್ತ ಬೆಂಗಳೂರಿನಲ್ಲಿ ಜೆ.ಡಿ (ಎಸ್‌) ಶಾಸಕಾಂಗ ಸಭೆ ಸೇರಿತ್ತು. ಪಕ್ಷದ ನಲವತ್ತು ಮಂದಿ ಶಾಸಕರ ಪೈಕಿ ಇಪ್ಪತ್ತು ಮಂದಿ ಸಭೆಗೆ ಬಂದಿರಲಿಲ್ಲ.

ರಾಜ್ಯದ ಜೆ.ಡಿ (ಸ್‌)ನಲ್ಲಿ ಎಲ್ಲವೂ ಸರಿ ಇಲ್ಲ. ಇದೆ ಎಂದು ದೇವೇಗೌಡರಾಗಲೀ, ಕುಮಾರಸ್ವಾಮಿಯವರಾಗಲೀ ಎದೆ ಮುಟ್ಟಿಕೊಂಡು ಹೇಳಲು ಆಗುತ್ತದೆಯೇ?  ಬಿಜೆಪಿ ದುರಾಡಳಿತದಿಂದ ಬೇಸತ್ತಿದ್ದ ರಾಜ್ಯದ ಜನರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮಾತ್ರ ಅಧಿಕಾರಕ್ಕೆ ತಂದಿರಲಿಲ್ಲ. ಜೆ.ಡಿ (ಎಸ್‌)ಗೆ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ಸಿಗುವ ಹಾಗೆ ಶೇಕಡಾವಾರು ಮತಗಳನ್ನು ಹೆಚ್ಚಿನ ಪ್ರಮಾಣದಲ್ಲಿಯೂ ಹಾಕಿದ್ದರು.

ಆದರೆ, ಈಗ ಆಯ್ಕೆಯಾಗಿರುವ ನಲವತ್ತು ಶಾಸಕರಲ್ಲಿ ಕೆಲವರು ಬಿಜೆಪಿ ಬಾಗಿಲು ಬಡಿಯುತ್ತಿದ್ದಾರೆ, ಇನ್ನು ಕೆಲವರು ಕಾಂಗ್ರೆಸ್‌  ಬಾಗಿಲು ಬಡಿಯುತ್ತಿದ್ದಾರೆ. ವಿರೋಧ ಪಕ್ಷದಲ್ಲಿ ಇದ್ದುಕೊಂಡು ಕೆಲಸ ಮಾಡುವುದು ಸಾಧ್ಯವೇ ಇಲ್ಲ, ಇದ್ದರೆ ಆಡಳಿತ ಪಕ್ಷದಲ್ಲಿಯೇ ಇರಬೇಕು, ಗೆದ್ದರೆ ಮಂತ್ರಿಯೇ ಆಗಬೇಕು ಎನ್ನುವವರ ಕಾಲ ಇದು.

1977ರಲ್ಲಿ ಹುಟ್ಟಿದ ಜನತಾ ಪಕ್ಷದಲ್ಲಿ ಇದ್ದವರ ಮಕ್ಕಳು ಈಗ ಮುನ್ನೆಲೆಗೆ ಬಂದಿದ್ದಾರೆ. 77ರಲ್ಲಿ ತುರ್ತುಸ್ಥಿತಿಯ ಅಗ್ನಿದಿವ್ಯದಲ್ಲಿ ಅಧಿಕಾರಕ್ಕೆ ಬಂದ ಜನತಾ ಪರಿವಾರದವರೇ ಕೇವಲ ಮೂವತ್ತು ತಿಂಗಳಲ್ಲಿ ಗಂಟು ಮೂಟೆ ಕಟ್ಟಿಕೊಂಡು ಮನೆಗೆ ಹೋದರು. ಅವರ ಮೇಲೆ ನಮಗೆ ನಂಬಿಕೆಯೇ ಇಲ್ಲ. ಏಕೆಂದರೆ  ಅವರು ಮತ್ತೆ ಮತ್ತೆ ನಮ್ಮ ಕನಸುಗಳನ್ನು ಭಗ್ನ ಮಾಡಿದ್ದಾರೆ. ಈಗ ಮತ್ತೆ ಒಂದುಗೂಡುವ ಮಾತು ಆಡುತ್ತಿದ್ದಾರೆ. ಅದು ಟ್ಯೂಬಿನಿಂದ ಹೊರಗೆ ಬಿದ್ದ ಪೇಸ್ಟ್ ಅನ್ನು ಮತ್ತೆ ತುಂಬುವ ಯತ್ನವೇ? ಹಾಗೆಯೇ ಅನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT