ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರೂಪತೆಯ ಅಪೇಕ್ಷೆ

Last Updated 24 ಜುಲೈ 2014, 19:30 IST
ಅಕ್ಷರ ಗಾತ್ರ

ಒಂದು ಸಂಜೆ ನನ್ನ ಸ್ನೇಹಿತನ ಮನೆಗೆ ಹೋಗಿದ್ದೆ. ಅವನೊಡನೆ ಮಾತ­ನಾಡುತ್ತ ಕುಳಿತಾಗ ಅವನ ಮೂರು ಮಕ್ಕಳು ಕೋಲಾಹಲವನ್ನೇ ಮಾಡು­ತ್ತಿದ್ದವು. ಅವು ಹೊಡೆದಾಡುತ್ತ, ಕಿರಿಚಾಡುವಾಗ ನಾವು ಮಾತನಾಡಿದ್ದು ನಮಗೇ ಕೇಳಿಸುತ್ತಿರಲಿಲ್ಲ.

ಸ್ನೇಹಿತನಿಗೆ ಏನು ಮಾಡಲೂ ತೋಚದೆ ಚಡಪಡಿ­ಸುತ್ತಿದ್ದ. ನಾನು ಪಕ್ಕದ ಅಂಗಡಿಗೆ ಹೋಗಿ ಆರೇಳು ಬಣ್ಣ ಬಣ್ಣದ ಪ್ಲಾಸ್ಟಿಕ್ ಚೆಂಡುಗಳನ್ನು ತಂದು ಮಕ್ಕಳಿಗೆ ಕೊಟ್ಟು ಹೊರಗೆ ಆಡಿಕೊಂಡಿರಲು ಹೇಳಿದೆ. ಅವರು ಸಂತೋಷವಾಗಿ ಕೂಗುತ್ತ ಹೊರನಡೆದರು. ಮನೆ ಶಾಂತ­ವಾ­ಯಿತು. ಆದರೆ, ಆ ಶಾಂತಿ ಹೆಚ್ಚು ಹೊತ್ತು ಉಳಿಯಲಿಲ್ಲ, ಮತ್ತೆ ಮಕ್ಕಳು ಕಿರುಚುತ್ತ, ಹೊಡೆದಾಡುತ್ತ, ಒಬ್ಬರ­ನ್ನೊಬ್ಬರು ಎಳೆದಾಡುತ್ತ ಒಳಗೆ ಬಂದರು. ಮತ್ತೇಕೆ ಈ ಜಗಳ ಎಂದು ನೋಡಿದರೆ ವಿಷಯ ಅರ್ಥವಾಯಿತು.

ಆ ಆರು ಚೆಂಡುಗಳಲ್ಲಿ ಒಂದು ಕೆಂಪುಬಣ್ಣದ್ದು, ಉಳಿದ ಐದು ನೀಲಿ ಬಣ್ಣದ್ದವುಗಳು. ಅದು ಆಕಸ್ಮಿಕವಾಗಿ ಆಗಿದ್ದು. ಈಗ ಪ್ರತಿಯೊಂದು ಮಗುವೂ ತನಗೇ ಕೆಂಪು ಬಣ್ಣದ್ದು ಬೇಕು ಎಂದು ಹೊಡೆದಾಡುತ್ತಿದೆ. ಇದಕ್ಕೆ ಕಾರಣ ವಿಶೇಷವಾದದ್ದೇನಲ್ಲ. ಕೆಂಪು ಬಣ್ಣದ ಚೆಂಡು ಒಂದೇ ಇದ್ದು ಅದು ಅಪರೂಪ­ವಾಗಿದೆ. ಯಾವಾಗಲೂ ಅಪರೂಪ­ವಾದದ್ದೇ ಮನಸ್ಸನ್ನು ಸೆಳೆಯುತ್ತದೆ.

೨೦೦೫ರಲ್ಲಿ ಗೂಗಲ್ ಕಂಪನಿ ತನ್ನದೇ ಇ–ಮೇಲ್ ಸೇವೆಯನ್ನು ಒದಗಿಸಲು ನಿರ್ಧರಿಸಿತು. ಇದಕ್ಕೆ ಸಂಸ್ಥೆಯು ಒಂದು ನಿರ್ಬಂಧ ವಿಧಿಸಿತು. ತಮ್ಮ ಕಂಪನಿಯ ಇ–ಮೇಲ್ ಎಲ್ಲರಿಗೂ ಅಲ್ಲ. ತಮ್ಮ ಖಾತೆ (ಅಕೌಂಟ್) ತೆರೆಯಬೇಕಾದರೆ ಈಗಾ­ಗಲೇ ಅಕೌಂಟ್ ಇರುವವ­ರೊಬ್ಬರಿಂದ ಆಮಂತ್ರಣ ಪಡೆದಿರಬೇಕು. ಅದು ದೊರಕುವುದು ಕಷ್ಟ ಎಂದೊಡನೆ ಜನ ಒದ್ದಾಡತೊಡಗಿದರು. ಹೇಗಾ­ದರೂ ಮಾಡಿ ಅಕೌಂಟ್ ಇರುವ­ವರಿಂದ ಆಮಂತ್ರಣ  ಪಡೆಯ­ಬೇಕು, ತಮ್ಮ ಅಕೌಂಟ್‌ ತೆರೆದೊಡನೆ ಮತ್ತೊ­ಬ್ಬ­ರೊಡನೆ, ನನಗೆ ಜಿ–ಮೇಲ್ ಅಕೌಂಟ್ ಬಂದಿದೆ ಎಂದು ಕೊಚ್ಚಿಕೊಳ್ಳ­ಬೇಕೆಂಬ ಹಪಹಪಿ ಶುರುವಾಯಿತು. ಆಗ ಆಗಲೇ ಹಾಟ್‌ಮೇಲ್, ಯಾಹೂ ಕಂಪನಿಗಳ ಅಕೌಂಟ್ ತುಂಬ ಸುಲಭ­ವಾಗಿ ದೊರೆಯುತ್ತಿತ್ತು. ಆದರೆ ಮನು­ಷ್ಯನ ಮನಸ್ಸೇ ಹೀಗಲ್ಲವೇ? ಯಾವುದು ಕೊರತೆಯೋ ಯಾವುದು ದುರ್ಲಭ ಆ ಕಡೆಗೇ ಹೋಗಬೇಕೆ­ನ್ನುತ್ತದೆ.

ಈ ಮನಸ್ಸಿನ ಬಗೆಯನ್ನು ವ್ಯಾಪಾರ ಮಾಡುವವರು ಚೆನ್ನಾಗಿ ಬಳಸಿಕೊಳ್ಳು­ತ್ತಾರೆ, ನನ್ನ ಗೆಳೆಯನ ಮಗ ಊರ ಹೊರಗೆ ಇದ್ದ ಹೊಸ ಬಡಾವಣೆಯಲ್ಲಿ ಒಂದು ನಿವೇಶನವನ್ನು ಕೊಳ್ಳಲು ಬಯಸಿದ್ದ. ಅವನಿಗೆ ಅದು ಇಷ್ಟವೂ ಆಗಿತ್ತು. ಆದರೆ, ಕೆಲವರು ಅದು ತುಂಬ ದೂರ ಎಂತಲೂ ಮತ್ತೆ ಕೆಲವರು ಬೆಲೆ ಹೆಚ್ಚಾಯಿತು ಎಂದದ್ದರಿಂದ ತೀರ್ಮಾನ ತೆಗೆದುಕೊಳ್ಳಲು ಆಗಿರಲಿಲ್ಲ. ಅದಕ್ಕೇನು ಅವಸರ, ಮುಂದಿನ ತಿಂಗಳು ನೋಡಿ­ದರಾಯಿತು ಎಂದಿದ್ದ. ಆದರೆ, ಹಿಂದಿನ ದಿನ ರಾತ್ರಿ ನಿವೇಶನ ಮಾರಾಟ­ಮಾಡುವ ಸಂಸ್ಥೆಯ ಮುಖ್ಯಸ್ಥ ಈತನಿಗೆ ಫೋನ್ ಮಾಡಿ, ‘ಸರ್, ಇಂದು ಬೆಳಿಗ್ಗೆ ಲಂಡನ್‌ನಿಂದ ಡಾಕ್ಟರ್‌ರೊಬ್ಬರು ಬಂದು ಇದೇ ನಿವೇಶನವನ್ನು ಮೆಚ್ಚಿ ಆಯ್ಕೆ ಮಾಡಿದ್ದಾರೆ. ನಿಮಗೆ ಹೇಳಿದ ಬೆಲೆಗೇ ಅವರು ಒಪ್ಪಿದ್ದಾರೆ. ನಿಮಗೆ ಮೊದಲು ತೋರಿಸಿದ್ದರಿಂದ ತಮ್ಮನ್ನು ಒಂದು ಮಾತು ಕೇಳುತ್ತೇನೆಂದು ಅವರಿಗೆ ಹೇಳಿದ್ದೇನೆ. ತಮಗೆ ಆ ನಿವೇಶನದಲ್ಲಿ ಆಸಕ್ತಿ ಇಲ್ಲದಿದ್ದರೆ ನಾಳೆ ಅವರು ಅದನ್ನು ಕೊಂಡುಕೊಳ್ಳುತ್ತಾರೆ’ ಎಂದ. ತಕ್ಷಣ ಈ ಹುಡುಗನಿಗೆ ಗಾಬರಿಯಾಯಿತು. ‘ಬೇಡ, ನಾನು ಇವತ್ತೇ ಬಂದು ಅಡ್ವಾನ್ಸ್ ಕಟ್ಟಿ ಹೋಗುತ್ತೇನೆ’ ಎಂದ.

ಹಾಗೆಯೇ ಮಾಡಿದ. ಇದು ಯಾಕೆ ಹೀಗೆ? ಲಂಡನ್ನಿನವರು, ಅದರಲ್ಲೂ ವೈದ್ಯರು ಇದೇ ನಿವೇಶನವನ್ನು ಒಪ್ಪಿದ್ದರೆ ಅದೇನೋ ವಿಶೇಷವಿರಬೇಕು. ಅದು ಹೋಗಿಬಿಟ್ಟರೆ ತನಗೆ ದೊರೆತ ಅವಕಾಶ ಇಲ್ಲವಾಗುತ್ತದಲ್ಲ ಎಂಬ ಭಯದಿಂದ ಹೆಚ್ಚು ಹಣ ಕೊಟ್ಟುಕೊಂಡಿದ್ದ. ಬಹುಶಃ ಇದೇ ಮಾತನ್ನು ಕಂಪನಿಯವರು ಎಲ್ಲರಿಗೂ ಹೇಳಿದ್ದಿರಬಹುದು. ಇತ್ತೀಚಿಗೆ ಮನಃಶಾಸ್ತ್ರಜ್ಞರೊಬ್ಬರು ಪರೀಕ್ಷೆ ಮಾಡಿದರು. ನೂರು ಜನರನ್ನು ಕೂಡ್ರಿಸಿ ಅವರ ಮುಂದೆ ನಾಲ್ಕು ಚಿತ್ರಗಳನ್ನು ತೋರಿಸಿ ಅವುಗಳನ್ನು ಶ್ರೇಷ್ಠತೆಯ ಆಧಾರದ ಮೇಲೆ ವಿಂಗಡಿಸಲು ಹೇಳಿ­ದರು. ಎಲ್ಲರೂ  ತಮಗೆ ತೋಚಿ­­ದಂತೆ ೧,೨,೩ ಮತ್ತು ೪ ಸಂಖ್ಯೆಗಳನ್ನು ನೀಡಿ­ದರು.

ಇವುಗಳನ್ನು ಇಸಿದುಕೊಂಡು ಹತ್ತು ನಿಮಿಷಗಳ ನಂತರ ಅವುಗಳನ್ನು ಮತ್ತೊಮ್ಮೆ ಗಮನಿಸಲು ಹೇಳಿದರು. ಈ ಮಧ್ಯೆ ಇನ್ನೊಂದು ವಿಷಯವನ್ನು ಅವರಿಗೆ ತಿಳಿಸಿದರು. ಒಂದನೇ ಚಿತ್ರದ ಬಹಳ ಪ್ರತಿಗಳು ಲಭ್ಯವಿವೆ, ಎರಡನೆ­ಯದರ ನೂರು ಪ್ರತಿಗಳು ಮಾತ್ರ ದೊರೆಯುತ್ತವೆ, ಮೂರನೇ ಚಿತ್ರ ಸಂಪೂರ್ಣ ಮಾರಾಟವಾಗಿರುವುದು ಮಾತ್ರವಲ್ಲ, ೨,೦೦೦ ಪ್ರತಿಗಳಿಗೆ ಅಡ್ವಾನ್ಸ್ ಬಂದಿದೆ, ನಾಲ್ಕನೆಯದಕ್ಕೆ ಬೇಡಿಕೆ ಕಡಿಮೆ. ಮತ್ತೊಮ್ಮೆ ಈ ಚಿತ್ರಗಳನ್ನು ಆಯ್ಕೆ ಮಾಡಲು ಕೇಳಿದಾಗ ಮೂರನೇ ಚಿತ್ರಕ್ಕೆ ೯೯ ಜನ ಒಂದನೇ ಸ್ಥಾನಕೊಟ್ಟಿದ್ದರು ಮತ್ತು ಎಲ್ಲರೂ ನಾಲ್ಕನೆಯದಕ್ಕೆ ನಾಲ್ಕನೇ ನಂಬರು ನೀಡಿದ್ದರು. ಅಂದರೆ ಅವರು ತಮ್ಮ ಮೊದಲಿನ ಅಭಿಪ್ರಾಯವನ್ನು ಬದಲಿ­ಸಿದ್ದರು. ಯಾಕೆ? ಯಾವುದಕ್ಕೆ ಬಹಳ ಬೇಡಿಕೆ ಇದೆಯೋ ಅದು ನಂಬರ ಒಂದೇ ಆಗಿರಬೇಕೆಂಬ ನಂಬಿಕೆ.

ಈ ಅಪರೂಪ­ವೆನ್ನಿಸುವ, ದುರ್ಲಭವೆನ್ನಿಸುವ ವಸ್ತುಗಳ ಆಯ್ಕೆ ಮಾಡುವಾಗ ವೈಚಾರಿಕತೆ ಮರೆತು ಹೋಗುತ್ತದೆ, ಭಾವನೆ ಉಕ್ಕುತ್ತದೆ. ಆದ್ದರಿಂದ ಆಯ್ಕೆಯ ವಿಷಯ ಬಂದಾಗ ನಮಗೆ ಬೇಕಾದ ಗುಣಗಳ, ನಮ್ಮ ಶಕ್ತಿಯ ಮಿತಿಯಲ್ಲಿ­ರುವ ದರಗಳನ್ನು ಗಮನಿಸಿ ತೀರ್ಮಾನ ತೆಗೆದುಕೊಳ್ಳಬೇಕೇ ವಿನಾ ಮತ್ತೊಬ್ಬರು ತೋರುವ ಅಭಿಪ್ರಾಯಗಳಾಗಲೀ, ಅದರ ಅಪರೂಪತೆಯಾಗಲೀ ಮುಖ್ಯ­ವಾಗ­ಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT