ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬರದಲ್ಲಿ ಕಣ್ಮರೆಯಾದ ತಾಯಿಯ ಅಳಲು

Last Updated 11 ನವೆಂಬರ್ 2014, 19:30 IST
ಅಕ್ಷರ ಗಾತ್ರ

ತೀರ್ಥಹಳ್ಳಿಯ ಸೀಬಿನಕೆರೆ ಸರ್ಕಲ್ಲಿನಲ್ಲಿ ಎರಡು ವರ್ಷಗಳ ಕೆಳಗೆ ಹೊಸ ತಲೆ­ಮಾರಿನ ತರುಣರು ಸಮಾಜವಾದಿ ಹೋರಾಟ­ಗಾರ ಶಾಂತವೇರಿ ಗೋಪಾಲಗೌಡರ ಪ್ರತಿಮೆ­ಯನ್ನು ಸ್ಥಾಪಿಸಿದರು. ಅವತ್ತು ಅವರೊಡನಿದ್ದ ನನಗೆ ಕುವೆಂಪು, ಶಾಂತವೇರಿ, ಅನಂತಮೂರ್ತಿ­ಯವರ ವೈಚಾರಿಕ ಪ್ರಭಾವ ಅಲ್ಲಿನ ಸೂಕ್ಷ್ಮ­ಜೀವಿಗಳಲ್ಲಿ ಇನ್ನೂ ಇರುವಂತೆ ಕಾಣುತ್ತಿತ್ತು. ಅಲ್ಲಿನ ಹಳಬರನ್ನು ಮಾತಾಡಿಸಿದರೆ ಸಮಾಜ­ವಾದಿ ಚಿಂತನೆಯ ಹೊಳಹುಗಳು ಮಿಂಚುತ್ತಿ­ದ್ದವು. ಇವತ್ತಿಗೂ ರೈತ ಚಳವಳಿ ಇಲ್ಲಿ ಉಸಿರಾ­ಡುತ್ತಿದೆ.  ತೀರ್ಥಹಳ್ಳಿಯ ಪಕ್ಕದಲ್ಲಿರುವ ಕುವೆಂಪು ಅವರ ಕುಪ್ಪಳಿಗೆ ಕರ್ನಾಟಕದ ಎಲ್ಲೆಡೆ­ಯಿಂದ ಬರುವ ನೂರಾರು ಜನರು, ಶಾಲಾ­ಮಕ್ಕಳು ಪ್ರತಿದಿನ ಸ್ಫೂರ್ತಿ ಪಡೆಯುತ್ತಲೇ ಇರುತ್ತಾರೆ.

ಆದರೆ ಇವತ್ತು ಅನಾರೋಗ್ಯಕರ ಕಾರಣಗಳಿ­ಗಾಗಿ ಸುದ್ದಿಯಲ್ಲಿರುವ ತೀರ್ಥಹಳ್ಳಿಯ ಘಟನೆ­ಗಳು ಈ ಊರಿನ ಹಿರಿಮೆಯನ್ನು ಹಿನ್ನೆಲೆಗೆ ಸರಿಸುವಂತಿವೆ. ಎಂಬತ್ತೈದು ವರ್ಷಗಳ ಹಿಂದೆ ಇಲ್ಲಿಗೆ  ಗಾಂಧೀಜಿ ಬಂದಿದ್ದರೆಂಬುದನ್ನು ಕೂಡ ಇಲ್ಲಿನ ಅನೇಕರು ಮರೆತಂತಿದೆ. ಹಾದಿಗಲ್ಲು ರಾಘವೇಂದ್ರ ಹಾಗೂ ಕೆ.ಗಂಗಾಧರ ಸಂಪಾ­ದಿಸಿರುವ ‘ತೀರ್ಥಹಳ್ಳಿಯ ಸುತ್ತಮುತ್ತ’ ಎಂಬ ಪುಸ್ತಕದಲ್ಲಿ ಈ ಕುರಿತ ದಾಖಲೆಗಳಿವೆ: ಮಹಾತ್ಮ ಗಾಂಧೀಜಿ  1927 ರ ಆಗಸ್ಟ್ 17 ರಂದು ತೀರ್ಥ­ಹಳ್ಳಿಯ ಕಾರ್ಯಕ್ರಮದಲ್ಲಿ ಭಾಗವಹಿಸ­ಬೇಕಿತ್ತು.

ಆದರೆ ಹಿಂದಿನ ರಾತ್ರಿ ಶಿವಮೊಗ್ಗ­ದಲ್ಲಿದ್ದ ಗಾಂಧೀಜಿಗೆ ಜ್ವರ ಬಂತು. ಜೊತೆ­ಯಲ್ಲಿದ್ದ ರಾಜಗೋಪಾಲಾಚಾರಿ ಮೊದಲಾದ­ವರು  ತೀರ್ಥಹಳ್ಳಿಯ ಕಾರ್ಯಕ್ರಮವನ್ನು ರದ್ದು ಮಾಡಲು ಸಲಹೆ ಕೊಟ್ಟರು. ‘ಇದಕ್ಕೆ ಸ್ವಾಗತ ಸಮಿತಿಯ ಕಾರ್ಯದರ್ಶಿ ಒಪ್ಪಿಕೊಂಡಿ­ದ್ದಾರೆ ಯೇ?’ ಎಂದು ಗಾಂಧೀಜಿ ಕೇಳಿದರು.  ಕಾರ್ಯ­ದರ್ಶಿ ತಕ್ಷಣ ಸಿಕ್ಕಲಿಲ್ಲ. ನಂತರ ಸಿಕ್ಕ ಕಾರ್ಯ­ದರ್ಶಿ­ಗೆ ರಾಜ ಗೋಪಾಲಚಾರಿಯವರು ‘ಗಾಂಧೀಜಿ ಯವರ ಆರೋಗ್ಯ  ಸರಿಯಿಲ್ಲ; ಕಾರ್ಯಕ್ರಮ ನಿಲ್ಲಿಸೋಣ’ ಎಂದು ಹೇಳಿದರು.

ಗಾಂಧೀಜಿಗೆ ಇದು ಗೊತ್ತಿರಲಿಲ್ಲ. ಮಾರ­ನೆಯ ಬೆಳಗ್ಗೆ ಏಳು ಗಂಟೆಗೆ ವಿದ್ಯಾರ್ಥಿಗಳ ಕಾರ್ಯ­ಕ್ರಮದಲ್ಲಿ ಭಾಗವಹಿಸಿ, ನಂತರ ತೀರ್ಥಹಳ್ಳಿಗೆ ಹೊರಡಲು ಸಿದ್ಧರಾದ ಗಾಂಧೀ­ಜಿಗೆ ಕಾರ್ಯ­ಕ್ರಮ ರದ್ದಾಗಿರುವ ವಿಷಯ ತಿಳಿಯಿತು. ತನ್ನನ್ನು ಕೇಳದೆ, ತೀರ್ಥಹಳ್ಳಿಯ ಜನರನ್ನು ಕೇಳದೆ, ದಾರಿಯಲ್ಲಿ ಉದ್ದಕ್ಕೂ ನಿಂತಿರುವ ಜನರನ್ನೂ ಕೇಳದೆ ಕಾರ್ಯಕ್ರಮ ಹೇಗೆ  ರದ್ದಾಯಿತು ಎಂದು ಗಾಂಧೀಜಿ ಕೇಳಿ­ದರು. ಕಾರ್ಯದರ್ಶಿಯನ್ನು ಕರೆದು ವಾಹನ ಏರ್ಪಾಡು ಮಾಡಲು ಹೇಳಿ ತೀರ್ಥಹಳ್ಳಿಯ ದಾರಿಯಲ್ಲಿ ನಡೆದೇಬಿಟ್ಟರು! ನಂತರ ಯಾರದೋ ಕಾರು ಬಂತು. ಎಲ್ಲರೂ ಗಾಂಧೀಜಿ ಯವರ ಜೊತೆ ತೀರ್ಥಹಳ್ಳಿಗೆ ಬಂದರು.

ತೀರ್ಥಹಳ್ಳಿಯ ಜನ  ಗಾಂಧೀಜಿ­ಯವರ ಖಾದಿನಿಧಿಗಾಗಿ  ಸಾವಿರದ ಐನೂರ ಆರು ರೂಪಾ­ಯಿ­ಗಳನ್ನೂ ಮಹಿಳೆಯರು  ಖಾದಿ­ನಿಧಿಗಾಗಿ ಒಡವೆಗಳನ್ನೂ ಕೊಟ್ಟರು.  ಅವತ್ತು ಗಾಂಧೀಜಿಗೆ ‘ತೀರ್ಥಹಳ್ಳಿ ತಾಲ್ಲೂಕಿನ ಪ್ರಜೆಗಳು ವಿನಯಪೂರ್ವಕವಾಗಿ ಒಪ್ಪಿಸಿದ ವಿಜ್ಞಾಪನಾ ಪತ್ರಿಕೆ’ಯಲ್ಲಿ ಈ ಪ್ರದೇಶದ ವರ್ಣನೆಯ ಜೊತೆಗೆ  ಇವತ್ತಿನ ಸ್ಥಿತಿಯಲ್ಲಿ ಎಲ್ಲರೂ ಅತ್ಯಗತ್ಯ­ವಾಗಿ ನೆನಪಿಸಿಕೊಳ್ಳಲೇಬೇಕಾದ ಒಂದು ವಿವರ­ವಿದೆ: ‘ನಮ್ಮ ಪ್ರದೇಶದಲ್ಲಿ ಹಿಂದೂ, ಮುಸ­ಲ್ಮಾನರ ವಿವಾದದ ಪ್ರಶ್ನೆಯೇ ಇಲ್ಲವೆಂದೂ ಮತ್ತು ಉಭಯ ಪಂಗಡದವರೂ ಮಿತ್ರ ಭಾವ ದಲ್ಲಿರುವರೆಂದೂ ತಿಳಿಸಲು ಸಂತೋಷ ಪಡುತ್ತೇವೆ’.

ಈ ಬಗೆಯ ಸಹಜ ಬಾಂಧವ್ಯಕ್ಕೆ ಚಾರಿತ್ರಿಕ ಪುರಾವೆಯೆಂಬಂತೆ ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆಕಟ್ಟೆಯಲ್ಲಿ ‘ಶ್ರೀ ಹಜರತ್ ಸೈಯದ್ ಸ್ವಾಮಿ ದರ್ಗಾ, ಭೂತರಾಯ ಮತ್ತು ಚೌಡೇಶ್ವರಿ ದೇವಸ್ಥಾನ ಒಂದೇ ಸೂರಿನಡಿ­ಯಲ್ಲಿವೆ. ಹಿಂದೂ ಮುಸ್ಲಿಮರು ಎರಡೂ ಕಡೆ ಪೂಜೆ ಸಲ್ಲಿಸುತ್ತಾರೆ’ ಎಂಬುದನ್ನು ದಾಖಲಿಸುವ ‘ತೀರ್ಥಹಳ್ಳಿಯ ಸುತ್ತಮುತ್ತ’ ಪುಸ್ತಕದಲ್ಲಿ ಇನ್ನೂ ಕೆಲವು ಮಹತ್ವದ ವಿವರಗಳಿವೆ: ತೀರ್ಥಹಳ್ಳಿ ತಾಲ್ಲೂಕಿನ ಹಳ್ಳಿಗಳಲ್ಲಿ ಗೌರಿ­ಹಬ್ಬದ ಸಾಮಾನುಗಳನ್ನು ತಂದು ಮಾರುವ ಕೆಲಸವನ್ನು  ಇನ್ನೂರು ವರ್ಷ­ಗಳ ಹಿಂದೆಯೇ ಮಹಮದ್ ಕತಾಲ್ ಸಾಬರು ನಡೆಸುತ್ತಿದ್ದರು. ಇವತ್ತಿಗೂ ಕೋಣಂದೂರಿನಲ್ಲಿ ಅವರ ಮರಿ ಮಗ  ಅಬ್ದುಲ್ ರಹಮನ್ ಸಾಬರು ಈ ಕೆಲಸ ಮುಂದು­ವರಿಸಿದ್ದಾರೆ. ಕೆಲವೇ ದಶಕಗಳ ಕೆಳಗೆ ಡಾ. ರಾಜಾಸಾಹೇಬರು ಸೂರಳಿ ಸುಬ್ಬಯ್ಯ­ನವರ ಹರಿಕತೆಯಲ್ಲಿ ಮತ್ತು ರಾಮನವಮಿ­ಯಲ್ಲಿ ಹಾರ್ಮೋನಿಯಂ ನುಡಿಸುತ್ತಿದ್ದರು. ಹಿಂದೂಗಳು ಮೊಹರಂ ಹಬ್ಬದಲ್ಲಿ ಬೆಂಕಿ ಹಾಯ್ದು ಹರಕೆ ತೀರಿಸುತ್ತಿದ್ದರು.

ಒಂದು ಪ್ರದೇಶದ ಇಂಥ ಆರೋಗ್ಯಕರ ಪರಂಪರೆಗಳು ಹೊಸ ತಲೆಮಾರಿನ ಹಿಂದೂ ಹಾಗೂ ಮುಸ್ಲಿಂ  ತರುಣ, ತರುಣಿಯರಿಗೆ ತಿಳಿಯ­ದಂತೆ ಮಾಡಿರುವ ಬೇಜವಾವ್ದಾರಿಯ ಹಿರಿಯ­ರಿದ್ದಾರೆ.  ಕೋಮುವಾದಿಗಳು ಇಂಥ ಸಾಮ­ರಸ್ಯದ ಚರಿತ್ರೆಯ ಬಗ್ಗೆ ಕೃತಕ ‘ವಿಸ್ಮೃತಿ’ ಮೂಡಿಸಲು  ಸಂಶೋಧನೆಗಳನ್ನೂ ವ್ಯವಸ್ಥಿತ ಪ್ರಯತ್ನಗಳನ್ನೂ ಮಾಡುತ್ತಲೇ ಇದ್ದಾರೆ. ಇದೆಲ್ಲ ದರಿಂದ ನೆಮ್ಮದಿಯ ಊರುಗಳು ಸ್ಮಶಾನ ವಾಗತೊಡಗುತ್ತವೆ.         

ಎಂಬತ್ತೈದು ವರ್ಷಗಳ ಕೆಳಗೆ ತೀರ್ಥಹಳ್ಳಿಯ ಜವಳಿ ಮಾಧವರಾವ್ ಮೊದಲಾದ ಹಿರಿಯರು ಗಾಂಧೀಜಿಯವರಿಗೆ ಒಪ್ಪಿಸಿದ ಕೋಮು ಸಾಮರಸ್ಯದ ಆದರ್ಶಚಿತ್ರವನ್ನು ಹಾಳು ಗೆಡವುವ ಘಟನೆಗಳು ತೀರ್ಥಹಳ್ಳಿಯ ಸುತ್ತಮುತ್ತ ಆಗಾಗ್ಗೆ ನಡೆದಿವೆ.  ಶಿವಮೊಗ್ಗೆಯ ಸಮಾಜವಾದಿ ಹೆಜ್ಜೆಗಳ ಬಗ್ಗೆ ಸದಾ ಹೆಮ್ಮೆ ಪಡುವ ನಮ್ಮಂಥ­ವರಿಗೆ ಅಲ್ಲಿ ನಡೆದಿರುವ ಘಟನೆಗಳು ಹಾಗೂ ಗಾಳಿಸುದ್ದಿಗಳ ಹಾರಾಟ ತೀವ್ರ ನೋವನ್ನೂ ದಿಗ್ಭ್ರಮೆಯನ್ನೂ ತರ­ತೊಡಗಿದೆ. ಅದರಲ್ಲೂ ಮಗಳನ್ನು ಕಳೆದು­ಕೊಂಡ  ತಾಯಿಯ ದುಃಖದ ಬಗ್ಗೆ ತಲೆ ಕೆಡಿಸಿ­ಕೊಳ್ಳದೆ ಎಲ್ಲವನ್ನೂ ಅಧಿಕಾರ ರಾಜಕಾರಣಕ್ಕೆ ಬಳಸಿ­ಕೊಳ್ಳಲು ಹೊರಟ ಪುರುಷ ಭಾಷೆಯ ನಿರ್ಲಜ್ಜೆ ಅಸಹ್ಯಕರವಾಗಿದೆ. ಇಂಥ  ಸಂದರ್ಭ­ದಲ್ಲಿ ಮಹಿಳೆಯರು, ತಾಯಿಯರು ಹಾಗೂ ಕೂಲಿನಾಲಿ ಮಾಡಿ ಬದುಕುವ ಬಡವರು  ಆಡುವ ಶಾಂತಿಯ ಮಾತುಗಳಿಗೆ ಪ್ರಚಾರ ಕೊಟ್ಟು ಜನರನ್ನು ಬೆಸೆಯುವ ಜವಾವ್ದಾರಿ­ಯನ್ನು ಮಾಧ್ಯಮಗಳು ಮರೆತಿರುವುದು ಗಾಬರಿ ಹುಟ್ಟಿಸುತ್ತದೆ.

ಈಚೆಗೆ ಎದ್ದು ಕಾಣುತ್ತಿರುವ ರಾಜಕಾ­ರಣಿಗಳ ಬೇಜವಾಬ್ದಾರಿ ನಡೆಗಳು, ಸಡಿಲ ನಾಲಗೆಗಳು ಎಲ್ಲರ ಟೀಕೆಗೆ ಒಳಗಾಗುತ್ತಿವೆ. ಆದರೆ ಇಂಥ ಸನ್ನಿವೇಶಗಳಲ್ಲಿ ವ್ಯವಸ್ಥಿತವಾಗಿ ಸುಳ್ಳು ಹೇಳುವ ಹಾಗೂ ಬಾಯಿಗೆ ಬಂದ ವಿಶ್ಲೇಷಣೆಗಳನ್ನು ಬಿತ್ತುವ ವ್ಯವಸ್ಥಿತ ಗುಂಪುಗಳ ಸಂಚು ಸುಲಭವಾಗಿ ಕಾಣುವುದಿಲ್ಲ.  ಈ ಥರದ ಪ್ರಕರಣಗಳು ಗಾಳಿ­ಸುದ್ದಿಗಳಿಂದ ಕೈಕಾಲು ಪಡೆಯುತ್ತವೆ ಎಂಬು­ದನ್ನೂ ಅನೇಕ ಸಂದರ್ಭ­ಗಳಲ್ಲಿ ನೋಡಿ­ದ್ದೇವೆ. ಅದು ಯಾಕೋ ಏನೋ, ಇಂಡಿಯಾ­ದಲ್ಲಿ ಸತ್ಯವೊಂದನ್ನು ಬಿಟ್ಟು ಬೇರೆಲ್ಲ ವನ್ನೂ ನಂಬುವ ವಿಚಿತ್ರ ಮನೋ ಲೋಕ­ವೊಂದು ಸೃಷ್ಟಿ­ಯಾದಂತಿದೆ. ಅದಕ್ಕೆ ತಕ್ಕಂತೆ ಒಂದು ಸುಳ್ಳನ್ನು ಮತ್ತೆ ಮತ್ತೆ ಹೇಳಿ ಅದನ್ನು ಸಾಬೀತು ಮಾಡಲು ಆನಂತರ ಘಟನಾವಳಿ­ಗಳನ್ನು ಸೃಷ್ಟಿ ಮಾಡುವ ಹುನ್ನಾರಗಳೂ­ ಇಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿವೆ.
 
ಇಂಡಿಯಾದ ಸಾರ್ವಜನಿಕ ಬದುಕಿನ ಒಂದು ವಿಚಿತ್ರವನ್ನು ಇಂಗ್ಲಿಷ್ ಲೇಖಕ ಜಾರ್ಜ್ ಆರ್ವೆಲ್  ಹಲವು ದಶಕಗಳ ಕೆಳಗೆ ಬರ್ಮಾ­ದಲ್ಲಿ ವಸಾಹತು ಪೊಲೀಸ್ ಅಧಿಕಾರಿ­ಯಾಗಿದ್ದಾಗ ಕಂಡುಕೊಂಡ:  ಇಂಡಿಯಾದಲ್ಲಿ ದೂರದಲ್ಲಿ ನಿಂತು ನೋಡಿದಾಗ  ಎಲ್ಲವೂ ಸ್ಪಷ್ಟವೆಂಬಂತೆ ಕಾಣುತ್ತದೆ; ಆದರೆ ಹತ್ತಿರ ಹತ್ತಿರ ಹೋದಂತೆ ಎಲ್ಲವೂ ಗೋಜಲಾಗತೊಡಗುತ್ತದೆ ಎಂದು ಆರ್ವೆಲ್ ಆ ಕಾಲದಲ್ಲಿ ಹೇಳಿದ್ದು ಇವತ್ತಿಗೂ ನಮ್ಮ ಪೊಲೀಸರ ಅನುಭವಕ್ಕೆ ಬರುತ್ತಿರುತ್ತದೆ. ಅದೆಲ್ಲದರ ಜೊತೆಗೆ, ಇಲ್ಲಿ ‘ಮೇಲಿನಿಂದ’ ಆದೇಶ ಬರದೆ ಯಾವ ವಿವರಗಳನ್ನೂ ಸಂಗ್ರಹಿಸದ ಪೊಲೀಸರಿದ್ದಾರೆ! ಅಕಸ್ಮಾತ್ ಅವರು ಸತ್ಯವಾದ ದಾಖಲೆಗಳನ್ನು ಸಂಗ್ರಹಿಸಿದರೂ ಅದನ್ನು ದಾಖಲಿಸಲು ಬಿಡದ ರಾಜಕಾರಣಿಗಳ  ಒತ್ತಡ; ಆ ಒತ್ತಡವನ್ನೂ ಮೀರಿ ಸತ್ಯ ದಾಖಲಿಸಿದರೆ ತಮ್ಮ ಕೆಲಸಕ್ಕೆಲ್ಲಿ ಕುತ್ತು ಬರುತ್ತದೋ ಎಂಬ ಸಂದಿಗ್ಧದಲ್ಲಿರುವ ಪೊಲೀಸರು; ಊಹಿಸಿ ತೀರ್ಪು ಕೊಡುವ ಆತುರದಲ್ಲಿರುವ ಮಾಧ್ಯಮಗಳು; ಎಲ್ಲವನ್ನೂ ಚುನಾವಣೆಯ ಲೆಕ್ಕಾಚಾರದಲ್ಲೇ ನೋಡುವ ವಿವಿಧ ಪಕ್ಷಗಳ ನಾಯಕರು.

ಇಂಥ ಸ್ಥಿತಿಯಿಂದಾಗಿ ಇದ್ದಕ್ಕಿದ್ದಂತೆ ಊರು­ಗಳು ಹತ್ತಿ ಉರಿಯ ತೊಡಗುತ್ತವೆ. ಯಾವುದ­ನ್ನಾದರೂ ಜಾತಿ ಗಲಭೆಯನ್ನಾಗಿಸಲು, ಕೋಮು ಗಲಭೆಯನ್ನಾಗಿಸಲು ಹಾಗೂ ‘ನೈತಿಕ’ ಪ್ರಶ್ನೆಯ ಗಲಭೆಯನ್ನಾಗಿಸಲು ನಿರುದ್ಯೋಗಿಗಳ ತಂಡಗಳನ್ನು ಬಳಸಿಕೊಳ್ಳುವ ಗುಂಪುಗಳು ಈಗ ಎಲ್ಲೆಡೆ ಚಾಲ್ತಿಯಲ್ಲಿವೆ. ಈ ಗುಂಪುಗಳ ಬಗ್ಗೆ ಹಾಗೂ ಯಾವ ಜಿಲ್ಲೆಯ ಗಲಭೆಯಲ್ಲಿ ಯಾವ ಜಿಲ್ಲೆಯವರು ಮುಂಚೂಣಿಯಲ್ಲಿರಬೇಕು ಎಂದು ವ್ಯವಸ್ಥಿತವಾಗಿ ತರಬೇತಿ ಕೊಡುವ ಗುಂಪು­ಗಳ ಬಗ್ಗೆ ಪೊಲೀಸರಲ್ಲಿ ಮಾಹಿತಿ ಇರುವ ಸಾಧ್ಯತೆ ಇದೆ.

ಆದರೆ ಈ ದಿಸೆಯಲ್ಲಿ ದಿಟ್ಟವಾಗಿ ಕೆಲಸ ಮಾಡಲು ಹೊರಡುವ ಅವರ ಕೈ ಕಟ್ಟಿ­ಹಾಕುವ ಹಗ್ಗಗಳು ಎಲ್ಲ ರಾಜಕೀಯ ಪಕ್ಷಗಳ ಕೈಯಲ್ಲೂ ಇವೆ. ಆದರೆ ಜನರನ್ನು ಎತ್ತಿ ಕಟ್ಟುವ ರಾಜಕೀಯ ಪಕ್ಷಗಳ ನಾಯಕರು ಹಾಗೂ ತಮ್ಮ ಮಕ್ಕಳನ್ನು ಗಲಭೆಕೋರ ಗುಂಪು­ಗಳಿಗೆ ಕಳಿಸಲು ಸಿದ್ಧರಿರುವ ಬೇಜವಾವ್ದಾರಿ ಪೋಷಕರು ಸದಾ ನೆನಪಿಡ ಬೇಕಾದ ಸತ್ಯ ಒಂದಿದೆ: ಹೀಗೆ ಕೆಟ್ಟುಹೋದ ಮನಸ್ಸುಗಳು ರಿಪೇರಿಯಾ­ಗುವುದು ಕಷ್ಟ. ಅವು ಒಂದಾದ ಮೇಲೊಂದರಂತೆ ಅಪರಾಧಗಳನ್ನು ಮಾಡುತ್ತಾ ಹೋಗು­ತ್ತವೆ. ಮನೆಯಲ್ಲಿ ಮಕ್ಕಳ  ಮನಸ್ಸಿನಲ್ಲಿ ಇತರ ಜಾತಿ, ಧರ್ಮಗಳ ಬಗ್ಗೆ ಪೂರ್ವಗ್ರಹ ಬಿತ್ತುವ ಪೋಷ­ಕರು ತಮ್ಮ ಮಕ್ಕಳನ್ನು ಕಾಯಂ ಆಗಿ ಕಳೆದುಕೊಳ್ಳುತ್ತಾರೆ. ಕಾರಣ, ಒಬ್ಬರ ಬಗ್ಗೆ ಪೂರ್ವ­ಗ್ರಹದಿಂದ ಯೋಚಿಸುವುದು ರೂಢಿ­ಯಾದ ಮನಸ್ಸು ಇನ್ಯಾರ ಬಗ್ಗೆಯಾದರೂ ಮುಕ್ತ­ವಾಗಿ ಯೋಚಿಸುವ ಸಹಜ ಶಕ್ತಿಯನ್ನೇ ಕಳೆದುಕೊಳ್ಳುತ್ತದೆ. 

ಇದೀಗ ತೀರ್ಥಹಳ್ಳಿಯಲ್ಲಿ ಭಾರತದಲ್ಲಿ ನಡೆಯುತ್ತಲೇ ಬಂದಿರುವ ಮತೀಯ ವಿಕಾರಗಳ ಒಂದು ಮುಖ ಕಾಣಿಸಿಕೊಂಡಿದೆ. ಇದೆಲ್ಲ ಯಾರಿಂದ, ಹೇಗೆ  ನಡೆಯುತ್ತಿದೆ  ಎಂಬ ಬಗ್ಗೆ  ಯಾರು ಏನೇ ಹೇಳಲಿ, ಅಲ್ಲಿನ ಜನರ ಆತ್ಮಸಾಕ್ಷಿ­ಗಾದರೂ ಸತ್ಯ ಗೊತ್ತಿರುತ್ತದೆ. ವ್ಯಾಪಾರದ ಸ್ಪರ್ಧೆಗಳು ಹಾಗೂ ಸೋಲುಗಳು, ರಾಜಕೀಯ ಹಾಗೂ ಧಾರ್ಮಿಕ ಸಂಚುಗಳು ಹುಟ್ಟು ಹಾಕುವ ಈ ಬಗೆಯ ದಳ್ಳುರಿಯಲ್ಲಿ ಬೆಂದ ಮನೆ­ಯಲ್ಲಿ ಗಳ ಹಿರಿದುಕೊಂಡು ಲಾಭ  ಮಾಡಿ­ಕೊಳ್ಳಲು ಹೊರಟ ನಾಯಕರ ಸ್ವಾರ್ಥವೂ ಎದ್ದು ಕಾಣುತ್ತಿದೆ. ಆದರೆ ಒಂದಂತೂ ಸ್ಪಷ್ಟ­ವಾಗಿದೆ. ಆಳುವ ಸರ್ಕಾರಗಳ ಬೆಂಬಲವಿ­ಲ್ಲದಿದ್ದರೆ ಇಂಥ ಗಲಭೆಗಳು ಹೆಚ್ಚು ಕಾಲ ನಡೆಯುವುದಿಲ್ಲ.

ಮೊದಮೊದಲು ಪರಿಸ್ಥಿತಿ­ಯನ್ನು ಹಗುರಾಗಿ ಕಂಡ ಸರ್ಕಾರ ನಂತರ  ಎಚ್ಚೆತ್ತುಕೊಂಡಿದ್ದರಿಂದ ಸಿ.ಐ.ಡಿ ತನಿಖೆ ಬೇಗ ಶುರುವಾಗಿದೆ. ಈ ಘಟ್ಟದಲ್ಲಿ ಎಲ್ಲರೂ ಊಹೆ­ಗಳ ಸುತ್ತ ಪ್ರಕರಣವನ್ನು ಬೆಳೆಸಲು ಹೋಗದೆ ಸತ್ಯ ಹೊರಬರಲು  ಕಾಯುವುದು ಒಳ್ಳೆಯದು. ಗಾಳಿಸುದ್ದಿಗಳ ಕಾರ್ಖಾನೆಗಳು ಸುಮ್ಮನಿದ್ದರೆ ಮಾತ್ರ ಊರು ಸಹಜ ಸ್ಥಿತಿಗೆ ಮರಳಬಹುದು. ಅದೆಲ್ಲದರ ಜೊತೆಗೆ, ಅಲ್ಲಿ ಎರಡು ಸಲ ಸತತವಾಗಿ ಚುನಾವಣೆ ಗೆದ್ದಿರುವ ಸಜ್ಜನರಾದ ಕಿಮ್ಮನೆ ರತ್ನಾಕರ ಅವರನ್ನು ಮಂತ್ರಿ ಪದವಿ­ಯಿಂದ ಕೆಳಗಿಳಿಸಲು ಈ ಬಗೆಯ ಗಲಭೆಗಳು ನಡೆಯುತ್ತಿವೆಯೆಂಬ ಮಾತು ಕೂಡ ಕೇಳಿ ಬರು­ತ್ತಿದೆ.

ಈ ಬಗೆಯ ಹಿಂಬಾಗಿಲ ರಾಜಕಾರಣ ಒಮ್ಮೆ ಶುರುವಾದರೆ ಇತರ ಪಕ್ಷಗಳ­ವರಿರಲಿ, ಆಯಾ ಪಕ್ಷದವರೇ ಇಂಥ ಗಲಭೆ­ಗಳನ್ನು ಹುಟ್ಟು ಹಾಕುವ ಸಾಧ್ಯತೆಗಳೂ ಇಂಡಿ­ಯಾ­ದಲ್ಲಿವೆ. ಇದೆಲ್ಲಕ್ಕಿಂತ ಮುಖ್ಯವಾಗಿ, ಮಗ­ಳನ್ನು ಕಳೆದುಕೊಂಡ ತಾಯಿಯ ವೇದನೆಯನ್ನು ಮೊದಲು ಆಳವಾಗಿ ಅರಿತು ಅಲ್ಲಿನ ಜನ ಒಂದು ಗಂಟೆಯ ಮಟ್ಟಿಗಾದರೂ ಆತ್ಮಪರೀಕ್ಷೆಯ ಮೌನ ಆಚರಿಸಿ ತೀರ್ಥಹಳ್ಳಿಯ ಆರೋಗ್ಯವನ್ನು ಮರಳಿ ಗಳಿಸಿಕೊಳ್ಳುವುದು ಒಳ್ಳೆಯದು. ಈ ಅಂಕಣ ಬರೆಯುವ  ಸಂಜೆ ‘ಮಲೆನಾಡು ಕ್ರಿಯಾ­ಸಮಿತಿ’ಯ ತರುಣರು ತೀರ್ಥಹಳ್ಳಿಯ ಬೀದಿ­ಗಳಲ್ಲಿ ಅಡ್ಡಾಡುತ್ತಾ, ನೊಂದವರಲ್ಲಿ ಸಾಂತ್ವನ ತುಂಬುತ್ತಿದ್ದರು.

ಆ ತರುಣರಿಗೆ ಹಲವು ದಶಕ­ಗಳ ಕೆಳಗೆ ಗಾಂಧೀಜಿ ಅಲ್ಲಿಗೆ ಬಂದದ್ದು ನೆನಪಿರ­ಲಿಕ್ಕಿಲ್ಲ. ಆದರೆ  ಮೊನ್ನೆ ಮೊನ್ನೆ ಅಂಥ ಆದರ್ಶ­ಗಳನ್ನು ಮತ್ತೆ ನೆನಪಿಸಿದ ಗೋಪಾಲ­ಗೌಡರು ಅವರ ನೆನಪಿನಲ್ಲಿದ್ದರು. ಸದಾ ನಮ್ಮೊಡನಿರುವ ಕಡಿದಾಳು ಶಾಮಣ್ಣ, ಕೋಣಂದೂರು ಲಿಂಗಪ್ಪ­ನವರ ಸಮಾಜವಾದಿ ಚೈತನ್ಯವೂ ಈ ತರುಣರ ನಡಿಗೆಯಲ್ಲಿತ್ತು. ಇಂಡಿಯಾದಲ್ಲಿ ಕೆಡ­ವಿದ್ದನ್ನು ಮತ್ತೆ ಕಟ್ಟುವ ಮನಸ್ಸುಗಳು ಎಲ್ಲ ಕಾಲಕ್ಕೂ ಇರುತ್ತವೆ ಎಂಬ ನಂಬಿಕೆ ಈ ತರುಣರ ನಡಿಗೆ­ಯಿಂದ ಎಲ್ಲರಲ್ಲೂ ಮತ್ತೆ ಹುಟ್ಟುವಂತಾಗಲಿ.

ಕೊನೆ ಟಿಪ್ಪಣಿ: ಗಲಭೆಗಳು ಮತ್ತು ಭಾಷೆ
ಯಾವುದೇ ಗಲಭೆಯಾದ ತಕ್ಷಣ ಯಾವ ಪಕ್ಷಗಳು ಯಾವ ಭಾಷೆ ಬಳಸುತ್ತವೆ ಎಂಬು­ದನ್ನು ಸುಲಭವಾಗಿ ಊಹಿಸಬಹುದು. ಇವು ಸಾಮಾನ್ಯ ವಾಗಿ ಜನರನ್ನು ಬೆಸೆಯದೆ, ಎತ್ತಿ­ಕಟ್ಟುವ ಒಡಕಿನ ಭಾಷೆಗಳಾಗಿರುತ್ತವೆ. ಯಾವು­ದನ್ನು ನಾವು ‘ಅಪರಾಧ’ ಎಂದು ಚೀರುತ್ತೇವೋ ಅದರ ಉರುಳು ಒಂದಲ್ಲ ಒಂದು ದಿನ ಯಾರ ಕೊರಳಿಗಾದರೂ ಸುತ್ತಿಕೊಳ್ಳಬಹುದು ಎಂಬ ಕಟುಸತ್ಯ ಗೊತ್ತಿದ್ದರೆ ಮಾತ್ರ  ಸಹಾನುಭೂತಿಯ ಭಾಷೆ ನಮ್ಮ ಬಾಯಲ್ಲಿ ತಂತಾನೇ ಬರುತ್ತದೆ. ಸಮುದಾಯಗಳನ್ನು ಒಡೆಯುವ ಗಲಭೆಗಳ ಸಂದರ್ಭದಲ್ಲಿ ಧರ್ಮ ಗುರುಗಳು ಹಾಗೂ ಹಿರಿಯ ರಾಜಕಾರಣಿಗಳು ಕೂಡ ಜನರನ್ನು ತಿದ್ದುವ ಭಾಷೆ ಬಳಸದೆ ಅವರನ್ನು ಒಡೆಯುವ ಭಾಷೆಯನ್ನೇ ಬಳಸುವುದು ಪರಿಸರವನ್ನು ಇನ್ನಷ್ಟು ಮಲಿನಗೊಳಿಸುತ್ತದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT