ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯ: ಸಪ್ತ ಬೆದರಿಕೆಗಳ ಅಧಿಪತ್ಯ

Last Updated 16 ಜೂನ್ 2018, 9:16 IST
ಅಕ್ಷರ ಗಾತ್ರ

ಭಾರತ ಅರ್ಧಂಬರ್ಧ ಪ್ರಜಾಪ್ರಭುತ್ವ ರಾಷ್ಟ್ರ ಎಂಬುದನ್ನು ನಾನು ಹಿಂದಿ­ನಿಂದಲೂ ಪ್ರತಿಪಾದಿ­ಸುತ್ತಲೇ ಬಂದಿದ್ದೇನೆ. ಮುಕ್ತ ಹಾಗೂ ನ್ಯಾಯ­ಸಮ್ಮತ ಚುನಾವಣೆ, ನಿರ್ಬಂಧರಹಿತ ಚಲನ­ವಲನ­ದಂತಹ ಕೆಲವು ವಿಚಾರಗಳಲ್ಲಿ ನಾವು ವಿಶ್ವದ ಇತರ ಯಾವುದೇ ರಾಷ್ಟ್ರದಂತೆ ಪ್ರಜಾಪ್ರ­ಭುತ್ವ ವ್ಯವಸ್ಥೆ ಹೊಂದಿ­ದ್ದೇವೆ. ಆದರೆ ಇತರ ಕೆಲವು ವಿಷಯಗಳಲ್ಲಿ ಮಾತ್ರ ಸಾಕಷ್ಟು ಹಿಂದೆ ಉಳಿದಿದ್ದೇವೆ. ಅಂತಹ ಸಂಗತಿಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಒಂದು.

ಓಬಿರಾಯನ ಕಾಲದ ವಸಾಹತುಶಾಹಿ ಕಾನೂನು ಪುಸ್ತಕಗಳನ್ನೇ ನಾವಿನ್ನೂ ಉಳಿಸಿ­ಕೊಂಡಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಮೊದಲ ಬೆದರಿಕೆ. ಆರ್‌ಎಸ್‌ಎಸ್‌ ಕಾರ್ಯ­ಕರ್ತ ದೀನಾನಾಥ್‌ ಬಾತ್ರ ಅವರು ವೆಂಡಿ ಡೋನಿ­ಗರ್‌ ಅವರ ‘ದಿ ಹಿಂದೂಸ್‌: ಆ್ಯನ್‌ ಆಲ್ಟರ್ನೆಟಿವ್‌ ಹಿಸ್ಟ್ರಿ’ ಪುಸ್ತಕಕ್ಕೆ ಸಂಬಂಧಿಸಿದಂತೆ ಈಗ ಹೂಡಿರುವ ಕುಖ್ಯಾತ ದಾವೆಯಲ್ಲಿ, ಅದರ ನಿಷೇಧಕ್ಕೆ ಪೂರಕವಾಗಿ ಭಾರತೀಯ ದಂಡ ಸಂಹಿತೆಯ 6 ನಿರ್ದಿಷ್ಟ ವಿಧಿಗಳನ್ನು ಉಲ್ಲೇಖಿಸಿ­ದ್ದಾರೆ.

ಅವುಗಳೆಂದರೆ: ಸೆಕ್ಷನ್‌ 153 (ದೊಂಬಿ ಎಬ್ಬಿಸುವ ಸಲುವಾಗಿ ಹೊಣೆಗಾರಿಕೆ ಮರೆತು ಪ್ರಚೋದನೆ ನೀಡುವುದು); ಸೆಕ್ಷನ್‌ 153 ಎ (ಧರ್ಮ, ಜನಾಂಗ, ಜನ್ಮಸ್ಥಳ, ನಿವಾಸ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ವೈಷಮ್ಯವನ್ನು ಉತ್ತೇಜಿಸು­ವುದು ಮತ್ತು ಸಾಮರಸ್ಯ ನಿರ್ವಹಣೆಯಲ್ಲಿ ಪೂರ್ವಗ್ರಹ­ಪೀಡಿತ­ವಾಗಿ ವರ್ತಿಸುವುದು); ಸೆಕ್ಷನ್‌ 295 (ಇತರ ಧರ್ಮದವರನ್ನು ಅಪ­ಮಾನಗೊಳಿಸಲು ಪ್ರಾರ್ಥನಾ ಸ್ಥಳವನ್ನು ಹಾನಿ  ಮಾಡುವುದು ಅಥವಾ ಅಪವಿತ್ರಗೊಳಿ­ಸು­ವುದು); ಸೆಕ್ಷನ್‌ 295ಎ (ದುರುದ್ದೇಶ­ಪೂರ್ವಕ­ವಾಗಿ ಯಾವುದೇ ಧರ್ಮ ಅಥವಾ ಧಾರ್ಮಿಕ ನಂಬಿಕೆಗೆ ಅಪಮಾನ ಮಾಡುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸು­ವುದು) ಸೆಕ್ಷನ್‌ 298 (ವ್ಯಕ್ತಿಯ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಲು ಉದ್ದೇಶ­ಪೂರ್ವಕ­ವಾಗಿ ಆಡುವ ಮಾತುಗಳು, ಪದಗಳು ಇತ್ಯಾದಿ); ಸೆಕ್ಷನ್‌ 505 (ಸಾರ್ವಜನಿಕವಾಗಿ ಅಪಹಾಸ್ಯಕ್ಕೆ ದಾರಿಯಾಗುವಂತಹ ಹೇಳಿಕೆಗಳು)

ಭಾರತೀಯ ದಂಡ ಸಂಹಿತೆಯ ಮೂಲ ಕರಡನ್ನು ರಚಿಸಿದವರು, ಆರ್‌ಎಸ್‌ಎಸ್‌ ಬಹಿ­ರಂಗ­­ವಾಗಿ ಕಡೆಗಣಿಸುತ್ತಲೇ ಬಂದಿರುವ ಥಾಮಸ್‌ ಬ್ಯಾಬಿಂಗ್ಟನ್‌ ಮೆಕಾಲೆ. ಪರಕೀಯ­ರಾದ ಬ್ರಿಟಿಷರ ಆಡಳಿತದಿಂದ ಭಾರತೀಯ ಸಂಸ್ಕೃತಿ ಹೇಗೆ ಕಲುಷಿತಗೊಂಡಿತು ಎಂಬುದರ ಬಗ್ಗೆ ಆರ್‌ಎಸ್‌ಎಸ್‌ ಆಗಾಗ್ಗೆ ಆಕ್ರೋಶಭರಿತ ಹೇಳಿಕೆಗಳನ್ನು ನೀಡುತ್ತಲೇ ಇರುತ್ತದೆ. ಆದರೂ ತಮಗೆ ಅನುಕೂಲವಾಗುತ್ತದೆ ಎಂದಾಗ ಮಾತ್ರ, ಮೆಕಾಲೆ ರೂಪಿಸಿದ ವಸಾಹತುಶಾಹಿ ಕಾನೂನು­ಗ­ಳನ್ನೇ ಬಳಸಿಕೊಳ್ಳಲು ಅವರು  ಹಿಂಜರಿಯು­ವುದಿಲ್ಲ.

ಇದು, ಪ್ರಜಾತಾಂತ್ರಿಕ ಕಾಲಮಾನಕ್ಕೆ ಹೊಂದಿಕೆಯಾಗದಿದ್ದರೂ ಅಂತಹ ಕಾನೂನು­ಗಳನ್ನು ತೆಗೆದುಹಾಕಲು ವಸಾಹ­ತೋತ್ತರ ಆಡಳಿತ ಮುಂದಾಗದೇ ಇರುವುದರ ಫಲ. ಮೇಲೆ ಉಲ್ಲೇಖಿಸಿದ ಕೆಲವು ವಿಧಿಗಳ ಹೊರ­ತಾಗಿಯೂ ಭಾರತೀಯ ದಂಡ ಸಂಹಿತೆ ಮತ್ತು ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯಲ್ಲಿ ಪುಸ್ತಕ­­ಗಳು ಅಥವಾ ಚಲನಚಿತ್ರಗಳ ನಿಷೇಧಕ್ಕೆ  ಅವ­ಕಾಶ ಕಲ್ಪಿಸುವ ನಿಬಂಧನೆಗಳಿವೆ.

ಪ್ರಕಟಣೆಗ­ಳನ್ನು ನಿಷೇಧಿಸುವ ಅಥವಾ ಮುಟ್ಟುಗೋಲು ಹಾಕಿ­ಕೊಳ್ಳುವ ಅಧಿಕಾರವನ್ನು ಪ್ರಭುತ್ವವೂ ತನ್ನಲ್ಲಿ ಉಳಿಸಿಕೊಂಡಿದೆ.
ಸಂವಿಧಾನವು ಮೂಲಭೂತವಾಗಿ ಕೊಟ್ಟಿದ್ದ ವ್ಯಾಪಕವಾದ ವಾಕ್‌ ಸ್ವಾತಂತ್ರ್ಯವನ್ನು  ನಿಯಂತ್ರಿ­ಸಲು ತರಲಾದ ಸಂವಿಧಾನದ ಮೊದಲ ತಿದ್ದು­ಪಡಿ­ಯನ್ನು, ಸ್ವತಂತ್ರ ಚಿಂತನೆಯನ್ನು ಹತ್ತಿಕ್ಕಲು ಪ್ರಭುತ್ವ ಕೂಡ ಬಳಸಿ­ಕೊಳ್ಳುತ್ತದೆ. ಜವಾಹರ­ಲಾಲ್‌ ನೆಹರು ಪ್ರಧಾನಿ­ಯಾಗಿ, ಬಿ.ಆರ್‌. ಅಂಬೇಡ್ಕರ್‌ ಅವರು ಕಾನೂನು ಸಚಿವರಾಗಿ­ದ್ದಾಗ 1951ರ ಮೇ ತಿಂಗಳಿನಲ್ಲಿ ಈ ತಿದ್ದುಪಡಿಯನ್ನು ಜಾರಿಗೆ ತರ­ಲಾಯಿತು.

‘ರಾಷ್ಟ್ರದ ಭದ್ರತೆ, ವಿದೇಶಗ­ಳೊಂದಿ­ಗಿನ ಸ್ನೇಹ ಸಂಬಂಧ ಅಥವಾ ಸಾರ್ವ­ಜನಿಕ ವ್ಯವಸ್ಥೆಗೆ ಬೆದರಿಕೆ ಒಡ್ಡುವ’ ಪುಸ್ತಕಗಳು ಅಥವಾ ನಿಯತಕಾಲಿಕೆಗಳನ್ನು ನಿಷೇಧಿಸಲು ಈ ತಿದ್ದುಪಡಿ ಸರ್ಕಾರಕ್ಕೆ ಅನುವು  ಮಾಡಿಕೊಡು­ತ್ತದೆ. ಈ ಮೂಲಕ, ಅಧಿಕಾರ ವರ್ಗವು ತಮಗೆ ಇಷ್ಟವಾ­ಗದ ಪುಸ್ತಕಗಳು, ವೃತ್ತಪತ್ರಿಕೆಗಳು ಅಥವಾ ಚಲನಚಿತ್ರಗಳಿಗೆ ತಡೆ ಒಡ್ಡಲು ಮುಕ್ತ ಅವಕಾಶ ದೊರಕಿಸಿಕೊಂಡಂತಾಗಿದೆ.
ಬ್ರಿಟನ್‌ನಲ್ಲಿ ಬಿಡುಗಡೆಯಾದ ಡಿ.ಎಚ್‌. ಲಾರೆನ್‌್ಸ ಅವರ ಕಾದಂಬರಿ ‘ಲೇಡಿ ಚಾಟ­ರ್ಲೀಸ್‌ ಲವರ್‌’ನ ಪ್ರಕಟಣೆಗೆ ಸಂಬಂಧಿಸಿದ ಪುಸ್ತಕವೊಂದನ್ನು ಇತ್ತೀಚೆಗೆ ಓದುತ್ತಿದ್ದೆ. ‘ಅಶ್ಲೀಲ ಪ್ರಕಟಣಾ ಕಾಯ್ದೆ’ಯ ವಿಧಿಯೊಂದರ ಅಡಿ ಈ ಕಾದಂಬರಿಯನ್ನು ನಿಷೇಧಿಸಲಾಗಿತ್ತು.

ಅಂತಹ ಪುಸ್ತಕಗಳು ಓದುಗರಿಗೆ ಕೆಡುಕುಂಟು ಮಾಡುವಂತಿದ್ದರೆ, ಅವರನ್ನು ಭ್ರಷ್ಟರನ್ನಾಗಿ ಮಾಡುವ ಸಾಧ್ಯತೆ ಇದ್ದರೆ ಅವುಗಳ ಪ್ರಸಾರ­ವನ್ನು ಸ್ಥಗಿತಗೊಳಿಸಬಹುದಾದ ಅವಕಾಶವನ್ನು ಈ ಕಾಯ್ದೆಯು ಪ್ರಭುತ್ವಕ್ಕೆ ನೀಡುತ್ತದೆ. ಆದರೂ ಇದೇ ಕಾಯ್ದೆಯ ಮತ್ತೊಂದು ವಿಧಿಯನ್ನು ಬಳಸಿ ನಿಷೇಧ ಹಿಂತೆಗೆದುಕೊಳ್ಳುವಂತೆ  ಮಾಡು­ವಲ್ಲಿ ಪ್ರತಿವಾದಿಗಳು ಸಮರ್ಥರಾಗಿದ್ದರು. ‘ಪುಸ್ತಕದ ಕೆಲ ಭಾಗ ಅಶ್ಲೀಲ ಎಂದು ಪರಿಗಣಿತ­ವಾದರೂ ಅದು ವಿಜ್ಞಾನ, ಸಾಹಿತ್ಯ, ಕಲೆ, ಕಲಿಕೆ ಅಥವಾ ಇತರ ಸಾಮಾನ್ಯ ಆಸಕ್ತಿಯ ಮೂಲಕ ಸಾರ್ವಜನಿಕ ಒಳಿತಿಗೆ ಪೂರಕವಾಗಿದ್ದರೆ ಪ್ರಸಾರಕ್ಕೆ ಅರ್ಹ’ ಎಂದು ಆ ವಿಧಿ ಹೇಳುತ್ತದೆ.

ದುರದೃಷ್ಟವಶಾತ್‌ ಭಾರತೀಯ ಕಾನೂನಿ­ನಲ್ಲಿ ಇಂತಹ ಯಾವ ನಿಬಂಧನೆಯೂ ಇಲ್ಲ. ಇದ್ದಿದ್ದರೆ, ಜ್ಞಾನ ಮತ್ತು ಸಾಹಿತ್ಯಕ್ಕೆ ಪೂರಕವಾಗಿ­ರುವ ಡೋನಿಗರ್‌ ಅವರ ಪುಸ್ತಕವನ್ನು  ಸಮರ್ಥಿಸಿಕೊಳ್ಳಲು ಅವಕಾಶ ಇರುತ್ತಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಎರಡನೇ ಬೆದರಿಕೆ ಎಂದರೆ, ನಮ್ಮ ನ್ಯಾಯಾಂಗ ವ್ಯವಸ್ಥೆ­ಯಲ್ಲಿನ ದೌರ್ಬಲ್ಯ. ವಸಾಹತು ಯುಗದ ಕಾನೂನು ಆಧರಿಸಿ ಚಲನಚಿತ್ರಗಳು, ಪುಸ್ತಕಗಳು ಅಥವಾ ಕಲಾಕೃತಿಗಳ ನಿಷೇಧ ಕೋರುವ ದಾವೆ­ಗಳಿಗೆ ಕೆಳ ಹಂತದ ನ್ಯಾಯಾಲಯಗಳು ತ್ವರಿತ­ವಾಗಿ ಸ್ಪಂದಿಸುತ್ತವೆ ಮತ್ತು ಅಧೀನ ನ್ಯಾಯಾ­ಧೀಶರು ಅವುಗಳನ್ನು ಪುರಸ್ಕರಿಸಲು ತುದಿಗಾಲಿ­ನಲ್ಲಿ ನಿಂತಿರುತ್ತಾರೆ.

ಹೀಗೆ ಮಣಿಯಬಹುದಾದ ನ್ಯಾಯಾಲಯಗಳು ಮತ್ತು ನ್ಯಾಯಾಧೀಶರು ಯಾರು ಎಂಬುದು ದುರುದ್ದೇಶವುಳ್ಳ ದಾವೆದಾ­ರ­ರಿಗೆ ತಿಳಿದಿರುತ್ತದೆ. ದೆಹಲಿಯಲ್ಲಿ ಪ್ರಕಟವಾ­ಗುವ ‘ಕ್ಯಾರವಾನ್‌’ ನಿಯತಕಾಲಿಕಕ್ಕೆ ಸಂಬಂಧಿ­ಸಿದ ದಾವೆಯನ್ನು ದೂರದ ಸಿಲ್‌ಚಾರ್‌ನ ನ್ಯಾಯಾಧೀಶರು ಪುರಸ್ಕರಿಸಿದ್ದರು. ವಿದ್ವತ್‌­ಪೂರ್ಣ ಕೃತಿಗಳನ್ನು ಹತ್ತಿಕ್ಕಲು ಹಲವಾರು ಪ್ರಯ­ತ್ನಗಳನ್ನು ನಡೆಸಿರುವ ಬಾತ್ರಾ ಅವರೇ ಸ್ವತಃ ದೇರಾ ಬಸ್ಸಿ ಎಂಬ ಪಟ್ಟಣದಲ್ಲಿ  ಹೀಗೆ ನ್ಯಾಯಾಲಯದ ಕೆಲಸವನ್ನು ಹಗುರ ಮಾಡಿಕೊಟ್ಟಿದ್ದಾರೆ.

ಸಾಮಾನ್ಯವಾಗಿ ಹೈಕೋರ್ಟ್‌ಗಳು ಮತ್ತು ಸುಪ್ರೀಂಕೋರ್ಟ್‌ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮರ್ಥಿಸಿಕೊಳ್ಳುವಲ್ಲಿ ಸಕ್ರಿಯ ಪಾತ್ರ ವಹಿ­ಸು­ತ್ತವೆ. ಆದರೆ ಯಾವುದೇ ಪುಸ್ತಕ ಅಥವಾ ಕಲಾ­ಕೃತಿ ಒಮ್ಮೆ ಕೆಳ ಕೋರ್ಟ್‌ನಲ್ಲಿ ನಿಷೇಧಕ್ಕೆ ಒಳಗಾ­ಯಿತೆಂದರೆ, ಉನ್ನತ ನ್ಯಾಯಾಲಯ­ಗಳಲ್ಲಿ ಅದು ರದ್ದಾಗುವಂತೆ ಮಾಡಲು ಸಾಕಷ್ಟು ವರ್ಷ­ಗಳೇ ತಗುಲಬಹುದು. ಕೆಲವು ಪ್ರಕಾಶ­ಕರು ಮತ್ತು ಬೆರಳೆಣಿಕೆ ಮಂದಿಗಷ್ಟೇ ಕಾನೂನು ಹೋರಾಟ­ವನ್ನು ಮುಂದುವರಿಸಲು ಅಗತ್ಯವಾದ ಹಣ, ಸಹನೆ, ಧೈರ್ಯ ಇರುತ್ತದೆ.

ಆರ್‌ಎಸ್‌ಎಸ್‌ ಮತ್ತು ವಿಎಚ್‌­ಪಿಯು ಖ್ಯಾತ ಕಲಾವಿದ ಎಂ.ಎಫ್‌.ಹುಸೇನ್‌ ಅವರನ್ನು ಗುರಿಯಾಗಿಸಿ­ಕೊಂಡು ದೇಶದ ವಿವಿಧ ನ್ಯಾಯಾಲಯಗಳಲ್ಲಿ  ದಾವೆಗಳನ್ನು ಹೂಡಿ­ದ್ದವು. ಅಂತೂ ಇಂತೂ ಅವೆಲ್ಲವುಗಳನ್ನೂ ಕ್ರೋಡೀ­­ಕರಿಸಿ ವಿಚಾರಣೆ ನಡೆ­ಸಲು ಸುಪ್ರೀಂ­ಕೋರ್ಟ್‌ಗೆ ಮನವರಿಕೆ ಮಾಡಿ­ಕೊಡು­ವಲ್ಲಿ ಹುಸೇನ್‌ ಪರ ವಕೀಲರು ಕೊನೆಗೂ ಯಶಸ್ವಿ­ಯಾ­­ದರು. ಆದರೆ ಅಷ್ಟು ಹೊತ್ತಿಗಾ­ಗಲೇ 90ನೇ ವಸಂತದಲ್ಲಿದ್ದ ಕಲಾವಿದ ಅತ್ಯಂತ ವಿಷಣ್ಣರಾಗಿ ದೇಶವನ್ನೇ ತೊರೆದು ಹೋಗಲು ನಿರ್ಧರಿಸಿದ್ದರು.

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಮೂರನೇ ಬೆದರಿಕೆಯೆಂದರೆ ಪೊಲೀಸರ ನಡವಳಿಕೆ. ಕೆಲ­ವೊಮ್ಮೆ ನ್ಯಾಯಾಲಯಗಳೇ ಬರಹಗಾರರು ಅಥವಾ ಕಲಾವಿದರ ಪರವಾಗಿ ಇದ್ದರೂ ಪೊಲೀಸರು ಮಾತ್ರ ಗೂಂಡಾಗಳು,  ಸ್ವಮ­ತಾಂಧರ ಪರವಾಗಿ ನಿಲ್ಲುತ್ತಾರೆ. ಶಿವಾಜಿಯನ್ನು ಕುರಿತ ಜೇಮ್‌್ಸ ಲೇನ್‌ ಅವರ ವಿದ್ವತ್‌ಪೂರ್ಣ ಪುಸ್ತಕದ ಮೇಲಿನ ನಿಷೇಧವನ್ನು ಹೈಕೋರ್ಟ್‌ ತೆಗೆದುಹಾಕಿತ್ತು. ಆದರೂ ಅದನ್ನು  ವಿತರಿಸುವ ಧೈರ್ಯ ಪ್ರಕಾಶಕರಿಗೆ ಇರಲಿಲ್ಲ.

ಏಕೆಂದರೆ ಶಿವ ಸೈನಿಕರು ಅಥವಾ ಎನ್‌ಸಿಪಿ ಗೂಂಡಾಗಳೇನಾ­ದರೂ ಪ್ರಕಾಶನದ ಮುಂಬೈ ಕಚೇರಿಯ ಮೇಲೆ ದಾಳಿ ನಡೆಸಿದರೆ ಪೊಲೀಸರು ಮೌನದಿಂದ ನಿಸ್ತೇಜವಾಗಿ ನಿಂತು ವೀಕ್ಷಿಸುತ್ತಾರಷ್ಟೆ (ಹುರಿದುಂಬಿಸದಿದ್ದರೂ) ಎಂಬುದು ಅವರಿಗೆ ತಿಳಿದಿತ್ತು.
ಅಹಮದಾಬಾದ್‌ನಲ್ಲಿರುವ ‘ಹುಸೇನ್‌_ ದೋಷಿ ಗೂಫ’ ಕಲಾ ಗ್ಯಾಲರಿಯನ್ನು ಬಜರಂಗ­ದಳದ ಕಾರ್ಯಕರ್ತರು ನಾಶ ಮಾಡಿದಾಗಲೂ ಗುಜರಾತ್‌ ಪೊಲೀಸರು ಅವರನ್ನು ತಡೆಯುವ ಪ್ರಯತ್ನವನ್ನೇ ಮಾಡಲಿಲ್ಲ.

ಪೊಲೀಸರು ಇತರ ಮಾರ್ಗಗಳ ಮೂಲಕ ಸಹ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತಡೆ ಒಡ್ಡುತ್ತಾರೆ. ನನ್ನ ತವರು ರಾಜ್ಯವಾದ ಉತ್ತರಾಖಂಡದಲ್ಲಿ ಉಮೇಶ್‌ ದೊಭಾಲ್‌ ಎಂಬ ಯುವ ಪತ್ರಕರ್ತ­ನೊಬ್ಬ 1988ರಲ್ಲಿ ಮದ್ಯ ಮಾಫಿಯಾದಿಂದ ಕೊಲೆಗೀಡಾದ. ಮೊದಲೇ ಅವನಿಗೆ ಜೀವ ಬೆದರಿಕೆ ಇತ್ತಾದರೂ ಪೊಲೀಸರು ಈ ವಿಷಯದಲ್ಲಿ ಅಸಡ್ಡೆ ತೋರಿದರು.  ನಂತರವೂ ಕೊಲೆಗಾರರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುವ ಪ್ರಯತ್ನವನ್ನೇ ಮಾಡಲಿಲ್ಲ. ತೀರಾ ಇತ್ತೀಚೆಗೆ ಅದೇ ಉತ್ತರಾಖಂಡದ ಹೇಮ್‌ ಪಾಂಡೆ ಎಂಬ ಪತ್ರಕರ್ತನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಯಿತು.

ಸ್ವತಂತ್ರ ಮನೋಭಾವದ ಪತ್ರಕರ್ತರ ಕಾರ್ಯ ಮತ್ತು ಬರವಣಿಗೆಯನ್ನು ಪೊಲೀಸರು ಹತ್ತಿಕ್ಕುವುದಕ್ಕೆ ನಮ್ಮ ಗಣರಾಜ್ಯ ಒಕ್ಕೂಟದ ಪ್ರತಿ ರಾಜ್ಯದಲ್ಲೂ ಇಂತಹ ಉದಾಹರಣೆಗಳು ಸಿಗುತ್ತವೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಾಲ್ಕನೇ ಬೆದರಿಕೆ ಇರುವುದು ಹೇಡಿ ರಾಜಕಾರಣಿಗಳಿಂದ. ದೇಶದ ಯಾವುದೇ ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಗಟ್ಟಿ ನಿರ್ಧಾರಗಳನ್ನು ಕೈಗೊಂಡಿಲ್ಲ. ಬದಲಾಗಿ ಹಲವಾರು ಮುಖ್ಯಮಂತ್ರಿಗಳು ಮತ್ತು ಕೆಲವು ಪ್ರಧಾನಿಗಳು ಪುಸ್ತಕ ಅಥವಾ ಕಲಾಕೃತಿಗಳನ್ನು ನಿಷೇಧ ಮಾಡಬೇಕೆಂಬ ಮತಾಂಧರಿಗೆ ಸಕ್ರಿಯ ಬೆಂಬಲವನ್ನೇ ನೀಡಿದ್ದಾರೆ.

ಸಲ್ಮಾನ್‌ ರಶ್ದಿ ಅವರ ‘ದಿ ಸಟಾನಿಕ್‌ ವರ್ಸಸ್‌’ ಕೃತಿಯ ನಿಷೇಧದಲ್ಲಿ ಕಾಂಗ್ರೆಸ್‌ ಮುಖಂಡ ರಾಜೀವ್‌ ಗಾಂಧಿ ಪ್ರಮುಖ ಪಾತ್ರ ವಹಿಸಿದ್ದರು. ತಸ್ಲಿಮಾ ನಸ್ರೀನ್‌ ಅವರ ಕೃತಿಗಳನ್ನು ಪಶ್ಚಿಮ ಬಂಗಾಳದ ಎಡರಂಗ ಸರ್ಕಾರ ನಿಷೇಧಿಸಿದ್ದಷ್ಟೇ ಅಲ್ಲ, ರಾಜ್ಯದಲ್ಲಿ ವಾಸಿಸಲೂ ಅವರಿಗೆ ಅವಕಾಶ ಕೊಡಲಿಲ್ಲ.  ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿ­ಯಾಗಿದ್ದಾಗ ಪುಸ್ತಕಗಳು, ಚಲನಚಿತ್ರಗಳು ಮತ್ತು ಕಲಾಕೃತಿಗಳ ಪ್ರದರ್ಶನವನ್ನು ಅಧಿಕೃತ ಅಥವಾ ಅನಧಿಕೃತವಾಗಿ ನಿಷೇಧಿಸಿದ್ದರು.

ಇತ್ತೀಚೆಗೆ ತಮಿಳು ಬರಹಗಾರ ಪೆರುಮಾಳ್‌ ಮುರುಗನ್‌ ಅವರ ಬಾಯಿ ಮುಚ್ಚಿಸಿರುವುದು ಇದಕ್ಕೊಂದು ನಿದರ್ಶನ.  ಮುರುಗನ್‌ ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ನಿಲ್ಲಲು ಆ ರಾಜ್ಯದ ಯಾವ ಪ್ರಮುಖ ರಾಜಕೀಯ ಪಕ್ಷವೂ ತಯಾರಿರಲಿಲ್ಲ. ಸ್ಥಳೀಯ ಆಡಳಿತವಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮತ್ತಷ್ಟು ಅಪಾಯಕಾರಿಯಾದ ಪಾತ್ರವನ್ನು ವಹಿಸಿತು. ಮುರುಗನ್‌ ಅವರನ್ನು ರಕ್ಷಿಸುವುದಿರಲಿ, ಅವರ ಮೇಲೆ ಒತ್ತಡ ಹೇರಿ ತಮ್ಮನ್ನು ಬೆಂಬತ್ತಿದ್ದ ಗುಂಪಿನ ಬಳಿ ಅವರು ಬೇಷರತ್‌ ಕ್ಷಮೆ ಯಾಚಿಸುವಂತೆ ಮಾಡಿತು.
ಇನ್ನು ಐದನೇ ಬೆದರಿಕೆಯೆಂದರೆ ಸರ್ಕಾರಿ ಜಾಹೀರಾತುಗಳ ಮೇಲಿನ ಮಾಧ್ಯಮದ ಅವಲಂಬನೆ.

ಪ್ರಾದೇಶಿಕ ಮತ್ತು ವಲಯ ಮಟ್ಟದ ಪತ್ರಿಕೆಗಳಿಗಂತೂ ಇದು ಹೆಚ್ಚು ಅನ್ವ­ಯಿಸುತ್ತದೆ. ರಾಜ್ಯ ರಾಜಧಾನಿ ಮತ್ತು ಜಿಲ್ಲಾ ಕೇಂದ್ರಗಳ ವೃತ್ತಪತ್ರಿಕೆಗಳು, ನಿಯತಕಾಲಿಕಗಳು ಕೆಲವೊಮ್ಮೆ ರಾಜ್ಯ ಸರ್ಕಾರಗಳ ಬಕ್ಷೀಸನ್ನು ಅತಿಯಾಗಿ ಅವಲಂಬಿಸುತ್ತವೆ. ಇದರ ಪರಿಣಾ­ಮ­ವಾಗಿ ಆಡಳಿತಾರೂಢ ಪಕ್ಷ ಅಥವಾ ಅದರ ಸಚಿವರುಗಳ ದುಷ್ಕೃತ್ಯಗಳನ್ನು ಅವು ಮುಕ್ತವಾಗಿ, ನಿರ್ಭೀತಿಯಿಂದ ಹೊರಗೆಳೆಯಲಾರವು.
ಇನ್ನು ವಾಣಿಜ್ಯ ಜಾಹೀರಾತುಗಳ ಮೇಲಿನ ಮಾಧ್ಯಮದ ಅವಲಂಬನೆಯು ಆರನೇ ಬೆದರಿಕೆ. ಮಧ್ಯಮ ವರ್ಗವನ್ನು ಗುರಿಯಾಗಿಸಿಕೊಂಡಿರುವ ಇಂಗ್ಲಿಷ್‌ ಭಾಷಾ ವೃತ್ತಪತ್ರಿಕೆಗಳು ಮತ್ತು ಟಿ.ವಿ ವಾಹಿನಿಗಳು ಇದರಡಿ ಬರುತ್ತವೆ.

ಆಟೊ­ಮೊಬೈಲ್‌, ಸ್ಮಾರ್ಟ್‌ ಫೋನ್‌ಗಳು, ಸಪಾಟು ಪರದೆಯ ಟಿ.ವಿ.ಗಳು, ವಾಷಿಂಗ್‌ ಮಷೀನ್‌­ಗಳನ್ನು ಹೆಚ್ಚಾಗಿ ಕೊಳ್ಳುವ, ತೈಲ ಮತ್ತು ಅನಿಲವನ್ನು ಅಧಿಕ ಪ್ರಮಾಣದಲ್ಲಿ ಬಳಸುವ ವರ್ಗ ಇದೇ ಆಗಿರುತ್ತದೆ. ಈ ಉತ್ಪನ್ನಗಳ ತಯಾರಕರು ಹಾಗೂ ಅವುಗಳ ಜಾಹೀರಾತುದಾರರಿಗೆ ವರದಿಗಾರರು, ಸಂಪಾ­ದ­ಕರು, ಅದರಲ್ಲೂ ವಿಶೇಷವಾಗಿ ಮಾಲೀಕರು ಉದಾರವಾದ ಪ್ರಚಾರ ನೀಡುತ್ತಾರೆ.
ಪರಿಸರ ಕ್ಷೇತ್ರದಲ್ಲಂತೂ ಈ ಬಗೆಯ ಸ್ವಯಂ ಸೆನ್ಸಾರ್‌ಶಿಪ್‌ ಹೆಚ್ಚಾಗಿ ಕಂಡುಬರುತ್ತದೆ.

ಗಣಿ­ಗಳು, ರಾಸಾಯನಿಕಗಳು ಮತ್ತು ತೈಲ ಕಂಪೆನಿ­ಗಳು ತಂದೊಡ್ಡುವ ಪರಿಸರ ನಾಶವನ್ನು ವಿಸ್ತೃತ­ವಾಗಿ, ಮೊದಲ ಬಾರಿ ನಿರ್ಭೀತಿಯಿಂದ ವರದಿ ಮಾಡುವವರಿಗೆ, ಅಂತಹ ವರದಿಗಳು ಜಾಹೀ­ರಾತು­ದಾರರನ್ನು ಕೆರಳಿಸುತ್ತವೆ ಎಂಬ ಕಾರಣ­ದಿಂದ ಕಡಿವಾಣ ಹಾಕಲಾಗುತ್ತದೆ. ಎಷ್ಟೋ ಬಾರಿ ಸಂಪಾದಕರು ಇಂತಹ ವರದಿಗಳಿಗೆ ಯಾರನ್ನೂ ನಿಯೋಜಿಸುವುದೇ ಇಲ್ಲ. ಏಳನೇ ಬೆದರಿಕೆಯು ಸ್ವಾರ್ಥಸಾಧಕ ಮತ್ತು ಸಿದ್ಧಾಂತ ನಿಷ್ಠ ಬರಹಗಾರರದು.

ಬರಹಗಾರರು ಎಂದಿಗೂ ರಾಜಕೀಯ ಪಕ್ಷಗಳ ನಿಷ್ಠ ಸದಸ್ಯರಾಗಿ­ರ­ಬಾರದು ಎಂದು ಜಾರ್ಜ್‌ ಆರ್ವೆಲ್‌ ಹೇಳಿ­ದ್ದರು. ಆದರೆ ನಮ್ಮಲ್ಲಿ ಬಹಳಷ್ಟು ಬರಹಗಾ­ರರು ಹಾಗೂ ಪತ್ರಕರ್ತರು ನಿರ್ದಿಷ್ಟ ಪಕ್ಷಗ­ಳೊಂದಿಗೆ, ನಿರ್ದಿಷ್ಟ ವ್ಯಕ್ತಿಗಳೊಂದಿಗೆ ಗುರುತಿಸಿ­ಕೊಂಡು ತಮ್ಮ ಕೃಪಾಪೋಷಿತರ ಕಾರ್ಯಸೂಚಿ­ಯನ್ನು ಮುನ್ನೆಲೆಗೆ ತರಲು ಯತ್ನಿಸುತ್ತಾರೆ. ಬೌದ್ಧಿಕ ಸ್ವಾತಂತ್ರ್ಯದ ಇಂತಹ ದುರ್ಬಳಕೆಯು  ರಾಜ­ಕೀಯ ವಲಯದಲ್ಲಿ ನಡೆಯುತ್ತಲೇ ಇರು­ತ್ತದೆ. ಅದೇ ರೀತಿ ಬಿಜೆಪಿಗೆ ಪ್ರಚಾರ ಗಿಟ್ಟಿಸಿಕೊ­ಡುವ ಬರಹಗಾರರು, ಕಾಂಗ್ರೆಸ್‌ ವಕ್ತಾರರಾ­ಗುವ ಬರ­ಹ­ಗಾರರು, ಸಿಪಿಎಂ ಅನ್ನು ಸಮರ್ಥಿ­ಸಿಕೊಳ್ಳುವ ಬರಹಗಾರರು, ನಕ್ಸಲೀಯರಿಗೆ ಅನುಕೂಲ ಕಲ್ಪಿಸಿ­ಕೊಡುವ ತಿಳಿಗೇಡಿ ಬರಹಗಾರರೂ ಇರುತ್ತಾರೆ.

ಮುಕ್ತ ಅಭಿವ್ಯಕ್ತಿಗೆ ಇರುವ ಈ ಏಳು ಬೆದರಿಕೆಗಳು ದೇಶದ ಪ್ರಜಾಪ್ರಭುತ್ವದ ನೈತಿಕ ಮತ್ತು ಸಾಂಸ್ಥಿಕ ತಳಹದಿಯನ್ನು ಒಳಗೊಳಗೇ ಶಿಥಿಲಗೊಳಿಸುತ್ತವೆ. ನಿಜ ಹೇಳಬೇಕೆಂದರೆ ನಮ್ಮ ಬರಹಗಾರರು, ಕಲಾವಿದರು ಮತ್ತು ಚಿತ್ರ ತಯಾರಕರು ಚೀನಾ, ರಷ್ಯಾದಂತಹ ಅರೆ ನಿರಂಕುಶ ದೇಶಗಳಲ್ಲಿನ ತಮ್ಮ ಸಹವರ್ತಿಗಳಿ­ಗಿಂತ ಹೆಚ್ಚಿನ ಸ್ವಾತಂತ್ರ್ಯವನ್ನು ಅನುಭವಿಸುತ್ತಿ­ದ್ದಾರೆ. ಆದರೆ, ಸಂಪೂರ್ಣ ಪ್ರಜಾಪ್ರಭುತ್ವ ಇರುವ ಸ್ವೀಡನ್‌ ಅಥವಾ ಕೆನಡಾದಂತಹ ರಾಷ್ಟ್ರಗಳಿಗೆ ಹೋಲಿಸಿದರೆ ಅವರ ಈ ಸ್ವಾತಂತ್ರ್ಯ ಅನಿರ್ಬಂಧಿತವಂತೂ ಅಲ್ಲ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT