ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಾಯಕರ ಬಲಿ

Last Updated 13 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಒಬ್ಬ ಚಕ್ರವರ್ತಿಗೆ ಇಬ್ಬರು ಗಂಡು ಮಕ್ಕಳು. ಇಬ್ಬರ ನಡುವಣ ಅಂತರ ಕೇವಲ ಒಂದೂವರೆ ವರ್ಷ. ಅಂತರ ಕಡಿಮೆ ಇದ್ದಾಗ ಜಗಳಗಳು ಬರು­ವುದು ಸಹಜ. ರಾಣಿಗೆ, ಸೇವಕರಿಗೆ ಇವರಿಬ್ಬರ ನಡುವಣ ಜಗಳವನ್ನು ಪರಿ­ಹರಿಸು­ವುದು ಬಹಳ ಕಷ್ಟದ ಕೆಲಸವಾಗಿತ್ತು. ದಿನಗಳು ಕಳೆದಂತೆ ಈ ಜಗಳ ಮತ್ತಷ್ಟು ಹೆಚ್ಚಾಗುವಂತೆ ತೋರಿತು. ಅದಕ್ಕೇ ರಾಜ ಯೋಚಿಸಿ ಒಂದು ಉಪಾಯ ಮಾಡಿದ. ಮಕ್ಕಳು ಹದಿನೆಂಟು ವಯಸ್ಸಿನವರಾಗುತ್ತಿದ್ದಂತೆ ತನ್ನ ದೇಶ­ವನ್ನು ಎರಡು ಸಮಾನ ಭಾಗಗಳನ್ನಾಗಿ ಮಾಡಿ ಇಬ್ಬರನ್ನೂ ಒಂದೊಂದು ದೇಶಕ್ಕೆ ರಾಜನನ್ನಾಗಿ ಮಾಡಿಬಿಟ್ಟ. ಅವರ ಪಟ್ಟಾಭಿಷೇಕಕ್ಕೆ ಮೊದಲು ಇಬ್ಬ­ರನ್ನೂ ಕರೆದು ಹೇಳಿದ, ‘ಮಕ್ಕಳೇ, ಬಾಲ್ಯದಿಂದ ನಿಮ್ಮ ನಡುವಣ ಜಗಳವನ್ನು ಗಮನಿ­ಸಿದ್ದೇನೆ. ಹುಡುಗುತನದ ಈ ಜಗಳ­ವೇನೋ ಸರಿ, ಆದರೆ ನೀವೀಗ ರಾಜರು. ಇನ್ನು ನೀವು ಹೊಡೆದಾಡದೆ ನಿಮ್ಮ ನಿಮ್ಮ ರಾಜ್ಯಗಳಲ್ಲಿ ಸುಖವಾಗಿರ­ಬೇಕು. ನಿಮ್ಮ ಶಕ್ತಿಗಳನ್ನು ಬಳಸಿಕೊಂಡು ರಾಜ್ಯಗಳನ್ನು ಸಮೃದ್ಧ ಮಾಡಿಕೊಳ್ಳಿ ’. ಮಕ್ಕಳು ಒಪ್ಪಿದರು. ತಂದೆ ಕಾಡಿಗೆ ಹೋಗಿ ಅಲ್ಲಿಯೇ ನೆಲೆಸಿದರು. ತಾಯಿ ಹಿರಿಯ ಮಗನ ಹತ್ತಿರ ಉಳಿದರು.  ಅಣ್ಣತಮ್ಮಂದಿರು ತಂದೆ ಮಾತಿನಂತೆ ಶಾಂತ­ವಾಗಿಯೇ ಉಳಿದರು. ಮುಂದಿನ ನಲವತ್ತು ವರ್ಷಗಳ ಕಾಲ ಇಬ್ಬರೂ ತಮ್ಮ ರಾಜ್ಯಗಳನ್ನು ಬಲಪಡಿಸಿ­ಕೊಂಡರು, ಇಬ್ಬರ ನಡುವಣ ಬಾಂಧವ್ಯ ಆದರ್ಶ­ವೆನ್ನಿಸು­ವಂತಿತ್ತು.

ಕೆಲ ವರ್ಷಗಳ ನಂತರ ತಮ್ಮನು ತನ್ನ ರಾಜ್ಯಕ್ಕೆ ಒಬ್ಬ ತರುಣ ಮಂತ್ರಿಯನ್ನು ಆಯ್ಕೆ ಮಾಡಿದ. ಆತ ತುಂಬ ಮಹತ್ವಾಕಾಂಕ್ಷಿ ವ್ಯಕ್ತಿ. ದಿನ, ಪ್ರತಿದಿನ ರಾಜನಿಗೆ ರಾಜ್ಯ ವಿಸ್ತಾರ ಮಾಡಲು ಹೇಳತೊಡಗಿದ. ಮೊದ­ಮೊದಲು ಅದನ್ನು ವಿರೋಧಿ­ಸಿದ ರಾಜ ನಂತರ ನಿಧಾನವಾಗಿ ಅದರ ಆಕರ್ಷಣೆಗೆ ಒಳಗಾದ. ಸೈನ್ಯವನ್ನು ಒಗ್ಗೂಡಿಸಿ ಅಣ್ಣನ ರಾಜ್ಯದ ಮೇಲೆ ದಂಡೆತ್ತಿ ಹೋಗಲು ಸಿದ್ಧತೆ ಮಾಡಿಕೊಂಡ. ಅಣ್ಣನಿಗೆ ಈ ವಿಷಯವನ್ನು ನಂಬಲೂ ಆಗಲಿಲ್ಲ. ನಲವತ್ತು ವರ್ಷಗಳ ಕಾಲ ಶಾಂತಿ­ಯಿಂದ ಬದುಕಿದ ಆತನಿಗೆ, ತಮ್ಮ ತನ್ನ ಮೇಲೆ ಯುದ್ದ ಮಾಡಿಯಾನು ಎನ್ನಿಸಿರಲಿಲ್ಲ. ಅವನ ಸೈನ್ಯ ಯುದ್ಧಕ್ಕೆ ಸಿದ್ಧವಾಗಿಯೇ ಇರಲಿಲ್ಲ. ಅವನಿಗಂತೂ ಯುದ್ಧ ಮಾಡುವುದೇ ಮರೆತು ಹೋಗಿದೆ. ಆದರೂ ರಾಜ್ಯದ ಗಡಿಗೆ ವೈರಿಗಳ ಸೈನ್ಯ ಬಂದು ನಿಂತಾಗ ಆತ ಹೊರಡಲೇಬೇಕಲ್ಲ.

ನೆನಪು­ಮಾಡಿ­ಕೊಂಡು ಯುದ್ಧದ ಕವಚಗಳನ್ನು ಧರಿಸಿದ. ತಾಯಿಗೆ ಹೇಳಿದ, ‘ಅಮ್ಮ, ಈ ಯುದ್ಧ ಅನಪೇಕ್ಷಿತವಾಗಿ ನನ್ನ ತಲೆಯ ಮೇಲೆ ಬಂದು ಕೂತಿದೆ. ನೀನೇ ಶಸ್ತ್ರಾಗಾರದಿಂದ ನನ್ನ ಶಿರಸ್ತ್ರಾಣವನ್ನು ತಂದು ತಲೆಯ ಮೇಲಿಡು. ಅದೇ ನನ್ನನ್ನು ಕಾಪಾಡಲಿ’. ಅಮ್ಮ ಶಸ್ತ್ರಾಗಾರಕ್ಕೆ ಹೋಗಿ ಶಿರಸ್ತ್ರಾಣವಿಲ್ಲದೇ ಮರಳಿ ಬಂದಳು. ‘ಮಗೂ ನಾನು ಅದನ್ನು ತರಲಾರೆ’ ಎಂದಳು. ‘ಯಾಕಮ್ಮ, ಅದು ಅಷ್ಟು ಭಾರವಾಗಿ­ದೆಯೇ?’ ಎಂದು ಕೇಳಿದ ರಾಜ. ಆಗ ಅಕೆ, ‘ಶಸ್ತ್ರಾಗಾರವನ್ನು ಬಳಸಿಯೇ ಎಷ್ಟೋ ದಿನವಾಯಿತಲ್ಲವೇ? ನಿನ್ನ ಶಿರಸ್ತ್ರಾಣದಲ್ಲಿ ಪಾರಿವಾಳವೊಂದು ತನ್ನ ತೀರ ಪುಟ್ಟದಾದ ಮೂರು ಮರಿಗಳನ್ನಿಟ್ಟು ಕಾಪಾಡುತ್ತಿದೆ. ನಾನು ಹತ್ತಿರ ಹೋದರೆ ತಾಯಿ ಪಕ್ಷಿ ಗಾಬರಿಯಾಗಿ ಹಾರಿಹೋಗುತ್ತದೆ. ಪಾಪ! ಮರಿಗಳು ಸತ್ತು ಹೋಗುತ್ತವೆ. ಅದಕ್ಕೇ ತರಲಿಲ್ಲ’ ಎಂದಳು.

ಮಗ ಶಿರಸ್ತ್ರಾಣವಿಲ್ಲದೇ ಯುದ್ಧಕ್ಕೆ ಹೋದ. ಅಣ್ಣ ಹೀಗೆ ಬಂದದ್ದನ್ನು ನೋಡಿ ತಮ್ಮನಿಗೆ ಆಶ್ಚರ್ಯ­ವಾಯಿತು. ನೇರವಾಗಿ ಬಂದು ಕಾರಣ ಕೇಳಿದ. ಅಣ್ಣ ಸರಳವಾಗಿ ನಡೆದದ್ದನ್ನೇ ತಿಳಿಸಿದ. ತಮ್ಮನಿಗೆ ತನ್ನ ಬಗ್ಗೆಯೇ ಮುಜುಗರ­ವಾಯಿತು. ಮೂರು ಮರಿಗಳ ಪ್ರಾಣವನ್ನು ತೆಗೆಯಲು ಹಿಂಜರಿದ ಅಣ್ಣ ತನ್ನ ಪ್ರಾಣವನ್ನೇ ಪಣವಾಗಿಟ್ಟು ಬಂದಿದ್ದಾನೆ. ಅಮಾಯಕರಾದ ಅಷ್ಟೊಂದು ಜನ ಸೈನಿಕರನ್ನು ಮತ್ತು ದೇವರಂಥ ಅಣ್ಣನನ್ನು ನಾನು ಕೊಲ್ಲಲು ಹೊರಟಿದ್ದೇನೆ. ತನ್ನಂತಹ ಕೃತಘ್ನ ಮತ್ತಾರೂ ಇರಲು ಸಾಧ್ಯವಿಲ್ಲ ಎಂದುಕೊಂಡು ಅಣ್ಣನಿಗೆ ನಮಸ್ಕಾರ ಮಾಡಿ ಯುದ್ಧ ನಿಲ್ಲಿಸಿ ತನ್ನ ಮಂತ್ರಿಯನ್ನು ಮನೆಗೆ ಕಳುಹಿಸಿದ. 

ದಿನನಿತ್ಯವೂ ಯುದ್ಧದ ವಿಷಯಗಳನ್ನು ಕೇಳುತ್ತೇವೆ. ಆದರೆ ಇದರಲ್ಲಿ ಸಾಯು­ವವರು, ನೋಯುವವರು ಯಾರು? ಯುದ್ಧದ ಕ್ರೌರ್ಯವನ್ನು ಮನದಲ್ಲಿ ತುಂಬಿಕೊಂಡು ಇದಕ್ಕೆ ಹೊಂಚು ಹಾಕಿದ­ವರು ಬೆಚ್ಚಗೆ ಕುಳಿತಿರುತ್ತಾರೆ. ಆದರೆ, ಅಮಾಯಕರಾದ ಸೈನಿಕರು, ಗಡಿಯಲ್ಲಿದ್ದ ಪ್ರಜೆಗಳು ಬಲಿಯಾ­ಗುತ್ತಾರೆ. ಈ ಜಗತ್ತಿನಲ್ಲಿ ಎಲ್ಲರಿಗೂ ಸ್ಥಳವಿದೆ, ಬೆಳೆಯಲು ಅವಕಾಶವಿದೆ. ಆದರೆ, ಮತದ ಹೆಸರಿನಲ್ಲಿ, ರಾಜಕೀಯ ಚಿಂತನೆಯ ಹೆಸರಿನಲ್ಲಿ, ಅಹಮಿಕೆಯ ಪ್ರದರ್ಶನದಲ್ಲಿ ರಕ್ತಪಾತವಾಗುತ್ತದೆ. ಇಂಥ ಸಂದರ್ಭದಲ್ಲಿ ನಿರ್ದೋಷಿ­ಯಾದ ಪಾರಿವಾಳದ ಮೂರು ಮರಿಗಳ ರಕ್ಷಣೆಗಾಗಿ ತನ್ನ ಪ್ರಾಣ­ವನ್ನೇ ಒಡ್ಡಿದ ರಾಜನ ನೆನಪಾಗಬೇಕು, ಅವನ ಆದರ್ಶ ಮಾದರಿಯಾಗಬೇಕು. ಆದರೆ ರಕ್ತಪಿಪಾ­ಸು­ಗಳಿಗೆ ಇದನ್ನು ಹೇಳುವವರು ಯಾರು ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT