ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೂಲ್ಯ ಬದುಕು

Last Updated 19 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಅವನೊಬ್ಬ ಭಾರಿ ಶ್ರೀಮಂತ. ಶ್ರೀಮಂತಿಕೆ ಏನೇನು ವಸ್ತುಗಳನ್ನು ತೋರಿ­ಸ­ಬಹುದೋ ಎಲ್ಲವೂ ಅವನ ಬಳಿ­ಯಲ್ಲಿದ್ದವು. ಅನೇಕ ಅರಮನೆ­ಗಳಂಥ ಮನೆ­ಗಳು, ನೂರಾರು ಕಾರು­ಗಳು, ಅತ್ಯಂತ ಶ್ರೀಮಂತ ಕ್ಲಬ್‌ಗಳ ಸದಸ್ಯತ್ವ ಅವ­ನಲ್ಲಿ ಇದ್ದವು.  ಅವನು ವಾಸ­ವಾಗಿದ್ದುದು ದೇಶದ ರಾಜ­ಧಾನಿಯ ಅತ್ಯಂತ ಸಿರಿ­ವಂತರ ಬಡಾ­ವಣೆಯಲ್ಲಿ. ಅಲ್ಲಿಯೂ ಇವನದೇ ದೊಡ್ಡ ಮನೆ.

ಸುಮಾರು ಐದು ಎಕರೆಯಷ್ಟು ಜಮೀನಿನಲ್ಲಿ ನಲವತ್ತು ಕೊಠಡಿಗಳಿದ್ದ ಅರಮನೆ ಅದು. ಅದರ ಮುಂದೆ ವಿಶಾಲವಾದ ಹೂದೋಟ, ಅದರಲ್ಲಿ ಬಣ್ಣ ಬಣ್ಣದ ನೀರಿನ ಕಾರಂಜಿ­­ಗಳು. ರಾತ್ರಿಯಿಡೀ ಹೂದೋಟಗಳನ್ನು ಬೆಳಗಿಸುವ ಕಾಲುದೀಪಗಳು. ಈ ಮನೆಯನ್ನು ಸರಿಯಾಗಿ ಇಡುವುದಕ್ಕೆ ನೂರಾರು ಸೇವಕರು, ಅಡಿಗೆಯವರು. ಹೀಗೆ ಸಕಲ ಸೌಭಾಗ್ಯಗಳು ಆತನಿಗಿದ್ದವು. ಅವನಿಗೆ ಇವೆಲ್ಲ ಚಿಕ್ಕವಯಸ್ಸಿನಲ್ಲಿಯೇ ದೊರೆತಿದ್ದವು. ಅವನಿಗೊಬ್ಬನೇ ಮಗ. ಆತನಿಗೆ ಸುಮಾರು ಹತ್ತು ವರ್ಷ.

ಈ ಹುಡುಗನ ಮನಸ್ಸು ಬಲುಸೂಕ್ಷ್ಮ. ಸದಾ ಆತ ಹೊಸ ವಿಷಯಗಳನ್ನು, ಹೊಸ ರೀತಿಯಲ್ಲಿ ಗಮನಿಸುವನು. ಒಂದು ಬಾರಿ ತಂದೆ ಯೋಚಿಸಿದ. ನನ್ನ ಮಗ ಸದಾಕಾಲ ಶ್ರೀಮಂತಿಕೆಯಲ್ಲೇ ಹುಟ್ಟಿ ಬೆಳೆದವನು. ಅವನಿಗೆ ಬಡತನ ಎಂದರೆ ಹೇಗಿರುತ್ತದೆ ಎಂಬುದನ್ನು ತೋರಿಸಿದರೆ ಶ್ರೀಮಂತಿಕೆಯ ಬೆಲೆ ಅರ್ಥವಾಗುತ್ತದೆ. ಅದರೊಂದಿಗೆ ತನ್ನ ತಂದೆಯ ಸಾಧನೆಯೂ ಅರಿವಾಗುತ್ತದೆ. ಹೀಗೆ ಯೋಚಿಸಿ ಮಗ­ನನ್ನು ಕರೆದುಕೊಂಡು ಅತ್ಯಂತ ಹಿಂದುಳಿದ ಬುಡಕಟ್ಟು ಜನಾಂಗ­ದವರು ವಾಸಿಸುತ್ತಿದ್ದ ಅರಣ್ಯ­ಪ್ರದೇಶಕ್ಕೆ ಹೋದ. ಅಲ್ಲಿಯ ಜನರಿಗೆ ಮನೆ ಎಂಬುದೇ ಇಲ್ಲ. ಗುಡಿಸಲು ಇದ್ದರೆ ಇತ್ತು, ಇಲ್ಲದಿದ್ದರೆ ಆಕಾಶವೇ ಮನೆ. ಅವರಲ್ಲಿ ಹಿರಿ­ಯರ ಹತ್ತಿರ ಮಾತನಾಡಿ ತನ್ನ ಮಗನನ್ನು ಒಂದು ವಾರ ಇಟ್ಟು­ಕೊಳ್ಳುವಂತೆ ಕೇಳಿ ಮಗನನ್ನು ಅಲ್ಲಿಯೇ ಬಿಟ್ಟು ಬಂದ.

ಒಂದು ವಾರದ ನಂತರ ಮಗನನ್ನು ಕರೆತಂದ. ಮಗ ಎಲ್ಲಿ ಬೇಜಾರಿನಲ್ಲಿ ಇರುತ್ತಾನೋ ಎಂದು ಚಿಂತಿ­ಸಿದ್ದ ತಂದೆಗೆ ಆಶ್ಚರ್ಯ. ಮಗ ಗೆಲುವಾಗಿಯೇ ಇದ್ದ. ಮಗನನ್ನು ಕೇಳಿದ, ‘ಮಗೂ ಒಂದು ವಾರ ಅಲ್ಲಿದ್ದದ್ದು ನಿನಗೆ ಹೇಗೆನಿಸಿತು?’. ‘ತುಂಬ ಅದ್ಭುತವಾಗಿತ್ತಪ್ಪ’. ‘ಬಡತನ ಹೇಗಿರುತ್ತದೆ, ಬಡವರು ಹೇಗೆ ಬದು­ಕು­ತ್ತಾರೆ ತಿಳಿಯತಲ್ಲವೇ?’, ‘ಹೌದಪ್ಪ, ನಾವು ಎಷ್ಟು ಬಡವರು ಎಂಬುದು ತಿಳಿ­ಯಿತು’ ಎಂದ ಮಗ. ‘ನಾವು ಬಡವರೇ? ಅವರು ಬಡವರ­ಲ್ಲವೇ?‘ ಆಶ್ಚರ್ಯ­ದಿಂದ ಕೇಳಿದ ತಂದೆ. ‘ಅಪ್ಪಾ, ನಾವೇ ಬಡವರು, ನಮ್ಮ ಮನೆ ಕಾಯಲು ನಾಲ್ಕು ನಾಯಿಗಳಿವೆ, ಆದರೆ ಅವರ ಮನೆಯ ಮುಂದೆ ನೂರಾರು ನಾಯಿಗಳು.

ನಮ್ಮ ಮನೆಗೆ ಗೋಡೆಗಳ ಬಂಧನವಿದೆ, ಅವರ ಮನೆಗೆ ಗೋಡೆಗಳೇ ಇಲ್ಲ. ನಮ್ಮ ಮನೆ ತೋಟದಲ್ಲಿ ನೀರಿನ ಕಾರಂಜಿ ಇದೆ, ಅವರ ಮನೆಯ ಮುಂದೆ ನದಿಯೇ ಇದೆ. ನಮ್ಮ ಬಂಗಲೆಯ ತೋಟವನ್ನು ಬೆಳಗಿಸಲು ನೂರಾರು ವಿದ್ಯುತ್ ದೀಪಗಳಿವೆ, ಅವರ ತೋಟ ಬೆಳಗಿಸಲು ಅಸಂಖ್ಯೆ ತಾರೆಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ಅದು ಬೇಕು, ಇದು ಬೇಕು ಎಂಬ ಆಸೆಗಳಿವೆ. ಆದರೆ, ಅವರಿಗೆ ಆಸೆಗಳ ಆಸೆಯೇ ಇಲ್ಲ. ಅವರು ತುಂಬ ನಿರಾಳವಾಗಿದ್ದಾರೆ, ನಮಗಿಂತ ಹೆಚ್ಚು ಸುಖಿಗಳಾಗಿದ್ದಾರೆ. ಆದ್ದರಿಂದ ನಮಗಿಂತ ಅವರೇ ಶ್ರೀಮಂತರು’ ಎಂದ ಮಗ. ಅಪ್ಪ ಮಗನ ಮಾತಿಗೆ ಬೆರಗಾದ.

‘ಅಪ್ಪ, ನಾವು ಎಷ್ಟು ಬಡವರು ಎಂದು ತಿಳಿಸಿದ್ದಕ್ಕೆ ನಿನಗೆ ಧನ್ಯವಾದ­ಗಳು’ ಎಂದು ನುಡಿದ ಮಗ. ನಾವು ನೋಡುವ ದೃಷ್ಟಿ ವಸ್ತುಸ್ಥಿತಿ­ಯನ್ನು ಬದ­ಲಿಸು­­­ತ್ತದೆ. ನಮ್ಮಲ್ಲಿ ಸಂತೋಷ, ತೃಪ್ತಿ, ಹಾಸ್ಯ ಮನೋ­ಭಾವ, ಆತ್ಮಗೌರವ­ವಿದ್ದರೆ ಅದಕ್ಕಿಂತ ಶ್ರೀಮಂತಿಕೆ ಬೇರೆಯಿಲ್ಲ. ಯಾಕೆಂದರೆ ಇವು ಯಾವುದನ್ನು ಹಣ ಕೊಂಡು­ಕೊಳ್ಳಲಾರದು. ನಿಮ್ಮಲ್ಲಿ ಸಾಕಷ್ಟು ಹಣವಿದ್ದು ತೃಪ್ತಿ, ಸಂತೋಷಗಳಿಲ್ಲ­ದಿದ್ದರೆ ನಿಮಗಿಂತ ಬಡವರು ಮತ್ತಾರೂ ಇಲ್ಲ. ಅಮೂಲ್ಯ ಎಂದರೆ ಯಾವುದಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲವೋ ಅದು. ನಮ್ಮ ಜೀವನ ಅಮೂಲ್ಯವಾಗುವುದು ಯಾವಾಗ ಗೊತ್ತೇ? ಎಂದು ಪ್ರಪಂಚದ ಯಾವ ಶಕ್ತಿಯೂ, ಆಸೆಯೂ, ಧನವೂ ನಮ್ಮ ಆತ್ಮಗೌರವವನ್ನು ಕೊಂಡು­ಕೊಳ್ಳಲು ಅಸಮರ್ಥವಾ­ಗುತ್ತದೆಯೋ ಅಂದೇ ನಮ್ಮ ಬದುಕು ಅಮೂಲ್ಯ­ವಾಗುತ್ತದೆ, ಅಪಾರ ಶ್ರೀಮಂತವಾಗು­ತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT