ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಎಫ್‌ಡಿಎ ಪ್ರಭಾವ ಕ್ಷೀಣ

Last Updated 28 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಷೇರುಪೇಟೆಯಲ್ಲಿ ಷೇರು ಬೆಲೆಗಳು ವಿನಾ ಕಾರಣ ಏರಿಳಿತ  ಕಾಣುತ್ತಿವೆ. ಕಾರ್ಪೊರೇಟ್ ವಲಯದಲ್ಲಿ ಸಾಧನೆಗಿಂತ ಸಂಗ್ರಹಣೆಗೆ ಹೆಚ್ಚು ಆದ್ಯತೆ ಇದೆ.  ಅಂದರೆ ಕಂಪೆನಿಗಳು ತಮ್ಮ ಸಾಲ ಮತ್ತು ಅದಕ್ಕೆ ತಗಲುವ ಬಡ್ಡಿಯ ಹೊರೆ ತಗ್ಗಿಸಿಕೊಳ್ಳಲು ವಿವಿಧ ಮಾರ್ಗೋಪಾಯ ಕಂಡುಕೊಳ್ಳುತ್ತಿವೆ.

ಇದೀಗ ಕಂಪೆನಿಗಳು ಎನ್‌ಎಸ್‌ಡಿ  ಮೂಲಕ ಸಂಗ್ರಹಣೆಗೆ ಮುಂದಾಗಿವೆ.  ಸದ್ಯ ಗೃಹ ವಲಯದ  ದಿವಾನ್ ಹೌಸಿಂಗ್ ಫೈನಾನ್ಸ್, ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್, ಎಚ್‌ಡಿಎಫ್‌ಸಿ ಈಗ ಕೋಟಿಗಟ್ಟಲೆ ಸಂಪನ್ಮೂಲ ಸಂಗ್ರಹಣೆಗೆ ಮುಂದಾಗಿವೆ. 

ಒಂದು ವರದಿಯಂತೆ 2 ತಿಂಗಳಲ್ಲಿ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ ಎಲೆಕ್ಟ್ರಾನಿಕ್ ಬುಕ್ ಮೂಲಕ 26 ಸಾವಿರ ಕೋಟಿಗೂ ಹೆಚ್ಚು ಸಾಲಪತ್ರ ವಿತರಿಸಲಾಗಿದೆ. ಹಾಗೆಯೇ ಹೂಡಿಕೆದಾರರು ಹೂಡಿಕೆ ಸುರಕ್ಷತೆಗಿಂತ ಇತರ ಸಂಗತಿಗಳಿಗೆ ಆದ್ಯತೆ ನೀಡಿ ಹೂಡಿದ ಬಂಡವಾಳವನ್ನು ಆಪತ್ತಿಗೆ ತಳ್ಳುವುದು ಸಾಮಾನ್ಯವಾಗಿದೆ.  ಕಂಪೆನಿಗಳ ಸಾಧನೆಆಧಾರಿತ, ಮೌಲ್ಯಾಧಾರಿತ ಹೂಡಿಕೆ ಯ ಹವ್ಯಾಸ ಬೆಳೆಸಿಕೊಳ್ಳಬೇಕಾಗಿದೆ.

ಉತ್ತಮ ಕಂಪೆನಿಗಳಲ್ಲಿ ಹೂಡಿಕೆ ಮಾಡಿದಾಗ ಬೆಲೆ ಇಳಿದರೂ ಚಿಂತಿಸುವ ಅಗತ್ಯವಿಲ್ಲ.  ಅವು ಇಳಿದ ರೀತಿಯಲ್ಲೇ ಪುಟಿದೇಳುತ್ತವೆ. ಈ ವಾರದಲ್ಲಿ  ರೆಡ್ಡೀಸ್ ಲ್ಯಾಬ್, ವೊಕಾರ್ಡ್, ಚೆನ್ನೈ ಪೆಟ್ರೋಲಿಯಂ, ಲುಪಿನ್,  ಬಯೋಕಾನ್‌ ಇದಕ್ಕೆ ಉತ್ತಮ ಉದಾಹರಣೆ. ಇದೇ ರೀತಿ ಈಚಿನ ದಿನಗಳಲ್ಲಿ ಎಐಎ ಎಂಜಿನಿಯರಿಂಗ್,  ಮಂದನಾ ಇಂಡಸ್ಟ್ರೀಸ್, ಜೆ ಕುಮಾರ್ ಇನ್ಫ್ರಾ  ಪ್ರಾಜೆಕ್ಟ್ಸ್ ಸಹ ಭಾರಿ ಏರಿಳಿತ ಪ್ರದರ್ಶಿಸಿವೆ.

ಈ ವಾರ ಸಂವೇದಿ ಸೂಚ್ಯಂಕವು 294 ಪಾಯಿಂಟು ಮತ್ತು ಮಧ್ಯಮ ಶ್ರೇಣಿಯ ಸೂಚ್ಯಂಕ 35 ಪಾಯಿಂಟು ಇಳಿಕೆ ಕಂಡಿದೆ. ಆದರೆ, ಕೆಳ ಮಧ್ಯಮ ಶ್ರೇಣಿಯ ಸೂಚ್ಯಂಕ 27 ಪಾಯಿಂಟು ಏರಿಕೆ ಕಂಡಿದೆ.   

ವಿದೇಶಿ ವಿತ್ತೀಯ ಸಂಸ್ಥೆಗಳು  ಎಂಟು ವಾರಗಳ  ಸತತ ಕೊಳ್ಳುಬಾಕುತನದ ನಂತರ ₹370 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿವೆ. ಸ್ವದೇಶಿ ವಿತ್ತೀಯ ಸಂಸ್ಥೆಗಳು ಸಹ ₹893 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ.  ಪೇಟೆಯ ಬಂಡವಾಳೀಕರಣ ಮೌಲ್ಯವು ₹109.01 ಲಕ್ಷ ಕೋಟಿಗೆ ಇಳಿದಿದೆ.

ಫಾರ್ಮಾ ವಲಯದ ಜೆ ಬಿ ಕೆಮಿಕಲ್ಸ್ ಲಿಮಿಟೆಡ್ ಕಂಪೆನಿಯ ಷೇರಿನ ಬೆಲೆಯು ಬುಧವಾರ ₹281ರ ಸಮೀಪದಿಂದ ₹321ರವರೆಗೂ ಏರಿಕೆ ಕಂಡು ₹311ರ ಸಮೀಪ ಕೊನೆಗೊಂಡಿದೆ. ಈ  ಕಂಪೆನಿಯ ಆಡಳಿತ ಮಂಡಳಿ ಶುಕ್ರವಾರ  ತನ್ನ ತ್ರೈಮಾಸಿಕ ಫಲಿತಾಂಶ ಪ್ರಕಟಿಸುವ ಕಾರ್ಯ ಸೂಚಿಯಿದ್ದ ಕಾರಣ ಎರಡು ದಿನ ಮುನ್ನವೇ ಈ ರೀತಿಯ ರಭಸದ ಏರಿಕೆ ಪ್ರದರ್ಶಿಸಿರುವುದು ವಿಸ್ಮಯಕಾರಿಯಾಗಿದೆ.

ಶುಕ್ರವಾರ ಪ್ರಕಟಿಸಿದ ಅಂಕಿ ಅಂಶ  ಉತ್ತೇಜಕವಾಗಿವೆ.  ಷೇರಿನ ಬೆಲೆಯು  ₹356 ರವರೆಗೂ ಏರಿಕೆ ಕಂಡು ನಂತರ ₹336 ರ ಸಮೀಪಕ್ಕೆ ಇಳಿಯಿತು. ಒಂದೇ ವಾರದಲ್ಲಿ ₹270ರ ಸಮೀಪದಿಂದ ₹356 ಕ್ಕೆ ಜಿಗಿತ ಕಂಡಿದೆ. 

ಅಮೆರಿಕದ ಎಫ್‌ಡಿಎ ಪ್ರಭಾವವು ಕ್ಷೀಣವಾಗುತ್ತಿರುವಂತಿದೆ.  ಇದರ ಎಚ್ಚರಿಕೆ ಪಾತ್ರದ ಕಾರಣ ಭಾರಿ ಕುಸಿತ ಕಂಡಿದ್ದ ವೊಕಾರ್ಡ್ ಈ ವಾರ ಚೇತರಿಕೆ ಕಂಡಿದೆ. ₹781 ರ ಸಮೀಪದಿಂದ ₹847 ರ ವರೆಗೂ ಚೇತರಿಕೆ ಕಂಡು ₹817 ರಲ್ಲಿ ವಾರಾಂತ್ಯ ಕಂಡಿದೆ.

ಲುಪಿನ್ ಮತ್ತು ಸ್ಟ್ರೈಡ್ಸ್ ಶಾಸೂನ್ ಕಂಪೆನಿಗಳಿಗೆ ಎರಡೆರಡು ಔಷಧಿಗಳಿಗೆ ಎಫ್‌ಡಿಎ ಒಪ್ಪಿಗೆ ಸಿಕ್ಕರೂ ಗಮನಾರ್ಹ ಪ್ರಭಾವ ಬೀರದಾದವು.  ಫಾರ್ಮಾ ವಲಯದ ಕ್ಯಾಡಿಲ್ಲಾ ಹೆಲ್ತ್ ಮತ್ತು ಸಿಪ್ಲಾ ಉತ್ತಮ ಚೇತರಿಕೆ ದಾಖಲಿಸಿವೆ.

ಚೆನ್ನೈ ಪೆಟ್ರೊ ಕೆಮಿಕಲ್ಸ್ ಲಿಮಿಟೆಡ್ ಕಂಪೆನಿಯ ಷೇರಿನ ಬೆಲೆಯು ಬುಧವಾರ ₹262ರ ಸಮೀಪದಿಂದ ₹283 ರವರೆಗೂ ಏರಿಕೆ ಕಂಡಿದೆ.  ಒಂದೇ ದಿನ ₹21ರಷ್ಟು ಏರಿಕೆ ಕಂಡಿರುವುದು ಸಹ ವಿಸ್ಮಯಕಾರಿ ಅಂಶವಾದರೂ  ಕೇವಲ ಎರಡುವಾರಗಳಲ್ಲಿ ಷೇರಿನ ಬೆಲೆಯು ₹290ರ ಸಮೀಪದಿಂದ ₹255 ರ ಸಮೀಪದವರೆಗೂ ಕುಸಿದು ₹286 ರ ಸಮೀಪಕ್ಕೆ ಪುಟಿದೆದ್ದಿದೆ. ಇದು ವ್ಯವಹಾರದ ವೇಗವನ್ನು ತೋರಿಸುತ್ತದೆ.  ಈ ಕಂಪೆನಿಯು ವಿತರಿಸಲಿರುವ ಪ್ರತಿ ಷೇರಿಗೆ ₹4 ರ ಲಾಭಾಂಶಕ್ಕೆ ಈ ತಿಂಗಳ 31 ನಿಗದಿತ ದಿನವಾಗಿದೆ.

ಲಾಭಂಶ: ಮಹಾನಗರ ಗ್ಯಾಸ್, ಪ್ರತಿ ಷೇರಿಗೆ ₹17.50,  ಜಿಲ್ಲೆಟ್  ₹ 20 ,  ಪ್ರಾಕ್ಟರ್ ಅಂಡ್ ಗ್ಯಾಂಬಲ್ ಹೈಜಿನ್ ಆ್ಯಂಡ್ ಹೆಲ್ತ್ ಕೇರ್  ₹36. 

ಬೋನಸ್ ಷೇರು: ಸರ್ಕಾರಿ ವಲಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್  29 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ. ತಾಂತ್ರಿಕ ವಲಯದ 8ಕೆ ಮೈಲ್ಸ್ ಸಾಫ್ಟ್ ಸರ್ವಿಸಸ್  ಲಿ., ಕಂಪೆನಿಯು 1:3 ರ ಅನುಪಾತದ ಬೋನಸ್ ಷೇರು ವಿತರಿಸಲಿದೆ.

ವಿಮ್ ಪ್ಲಾಸ್ಟ್ ಲಿಮಿಟೆಡ್ ಕಂಪೆನಿ ವಿತರಿಸಲಿರುವ 1:1 ಅನುಪಾತದ ಬೋನಸ್ ಷೇರಿಗೆ ಸೆ.9 ನಿಗದಿತ ದಿನವಾಗಿದೆ. ಅಲಂಕಿತ್ ಲಿಮಿಟೆಡ್ ಕಂಪೆನಿಯು 1:1 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. ಪಿಕ್ಯಾಡೆಲಿ ಆಗ್ರೊ ಇಂಡಸ್ಟ್ರೀಸ್ ಸೆ.3ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

ಮುಖಬೆಲೆ ಸೀಳಿಕೆ:  ತಾಂತ್ರಿಕ ವಲಯದ 8ಕೆ ಮೈಲ್ಸ್ ಸಾಫ್ಟ್ ಸರ್ವಿಸಸ್  ಲಿ., ಕಂಪೆನಿಯು  ಷೇರಿನ ಮುಖಬೆಲೆಯನ್ನು ₹10 ರಿಂದ  ₹5 ಕ್ಕೆ ಸೀಳಲಿದೆ.
ವಿ ಗಾರ್ಡ್ ಕಂಪೆನಿಯ ಷೇರಿನ ಮುಖಬೆಲೆಯನ್ನು ₹10 ರಿಂದ ₹1ಕ್ಕೆ ಸೀಳಲು ಆ.31 ನಿಗದಿತ ದಿನವಾಗಿದೆ. 

ಕೆಮ್ ಬಾಂಡ್ ಕೆಮಿಕಲ್ಸ್ ಲಿಮಿಟೆಡ್ ಕಂಪೆನಿಯ ಷೇರಿನ ಮುಖಬೆಲೆಯನ್ನು ₹10 ರಿಂದ ₹5 ಕ್ಕೆ ಸೀಳಲು ಸೆಪ್ಟೆಂಬರ್ 9 ನಿಗದಿತ ದಿನವಾಗಿದೆ.
ಇಂಡೊ ಕೌಂಟ್  ಇಂಡಸ್ಟ್ರೀಸ್ ಲಿಮಿಟೆಡ್ ಕಂಪೆನಿಯ ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲಿದೆ. ಅಲಂಕಿತ್ ಲಿಮಿಟೆಡ್ ಷೇರಿನ ಮುಖಬೆಲೆಯನ್ನು ₹2 ರಿಂದ ₹1 ಕ್ಕೆ ಸೀಳಲಿದೆ. ಮಿಂದಾ ಇಂಡಸ್ಟ್ರೀಸ್ ಲಿ., ಕಂಪೆನಿಯ ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲು ಸೆಪ್ಟೆಂಬರ್ 14 ನಿಗದಿತ ದಿನವಾಗಿದೆ.

ಹೊಸ ಷೇರು: ಕೋಲ್ಕತ್ತದ ಗೋಲ್ಡನ್ ಕ್ರೆಸ್ಟ್ ಎಜುಕೇಷನ್ ಅಂಡ್ ಸರ್ವಿಸಸ್ ಲಿಮಿಟೆಡ್ ಕಂಪೆನಿಯು 26 ರಿಂದ ಬಾಂಬೆ ಷೇರು ವಿನಿಮಯ ಕೇಂದ್ರದ  ಎಕ್ಸ್‌ಟಿ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

ಜೆಡ್‌  ಗುಂಪಿಗೆ ವರ್ಗಾವಣೆ: ನಿರಂತರವಾಗಿ ಎರಡು ತ್ರೈಮಾಸಿಕಗಳಲ್ಲಿ ಲಿಸ್ಟಿಂಗ್ ನಿಯಮ ಪಾಲನೆ ಮಾಡದ ಕಾರಣ  ಸೂರ್ಯಜ್ಯೋತಿ ಸ್ಪಿನ್ನಿಂಗ್,  ಕೆಎಸ್ ಆಯಿಲ್,  ಫೆಕಾರ್ ಸ್ಟಿಲ್, ಆಕ್ರೊಪೇಟಲ್ ಟೆಕ್ನಾಲಜಿಸ್, ಲೋಕ್ ಹೌಸಿಂಗ್ ಅಂಡ್ ಕನ್ಸ್ ಟ್ರಕ್ಷನ್, ಕೆಮ್ ರಾಕ್ ಇಂಡಸ್ಟ್ರೀಸ್,  ಅನಿಲ್ ಸ್ಪೆಷಲ್  ಸ್ಟಿಲ್ ಇಂಡಸ್ಟ್ರೀಸ್,  ಬ್ರಾಡ್ ಕ್ಯಾಸ್ಟ್  ಇನಿಶಿಯೇಟಿವ್ಸ್,  ಲುಮ್ಯಾಕ್ಸ್ ಆಟೋಮೋಟಿವ್  ಸಿಸ್ಟಮ್ಸ್ ಲಿಮಿಟೆಡ್,  ತಿರುಪತಿ ಇಂಕ್ಸ್ ಸೇರಿ 30 ಕಂಪೆನಿಗಳನ್ನು ಸೆ.1 ರಿಂದ ಜೆಡ್‌ ಗುಂಪಿಗೆ ವರ್ಗಾಯಿಸಲಾಗಿದೆ.

ವ್ಯವಸ್ಥಿತ ಯೋಜನೆ : ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ ಆಫ್ ಇಂಡಿಯಾ ಕಂಪೆನಿಯಿಂದ ಟಿಸಿಐ ಎಕ್ಸ್‌ಪ್ರೆಸ್ ಲಿಮಿಟೆಡ್  ಬೇರ್ಪಡಿಸಲು ನ್ಯಾಯಾಲಯದ ಅನುಮತಿ ದೊರೆತಿದ್ದು ಪ್ರತಿ ಎರಡು ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ ಆಫ್ ಇಂಡಿಯಾ ಷೇರಿಗೆ  1 ಟಿಸಿಐ ಎಕ್ಸ್ ಪ್ರೆಸ್ ಲಿಮಿಟೆಡ್ ಷೇರು ನೀಡಲು ಈ ತಿಂಗಳ  29 ನಿಗದಿತ ದಿನವಾಗಿದೆ.

*
ವಾರದ ವಿಶೇಷ
ಕಂಪೆನಿಗಳು ಹೊಂದಿರುವ ಮೀಸಲು ನಿಧಿಯು ಹೆಚ್ಚಿದ್ದಾಗ ಅವು ತಮ್ಮ ಬಂಡವಾಳ ಕಡಿತಕ್ಕೆ ಮುಂದಾಗುತ್ತವೆ. ಬಂಡವಾಳ ಮೊಟಕು ಮಾಡುವುದು ಎರಡು ವಿಧ. ಒಂದು ಕಂಪೆನಿಯು ಆರ್ಥಿಕ ತೊಂದರೆಯಲ್ಲಿದ್ದಾಗ ಷೇರಿನ ಬಂಡವಾಳ ಕಡಿತ ಮಾಡಿ ಹೊರೆ ಇಳಿಸಿಕೊಂಡು ಸುಧಾರಣೆಗೆ ಪ್ರಯತ್ನಿಸುವುದು. ಷೇರುದಾರರಿಂದ ಯೋಗ್ಯ ಬೆಲೆಯಲ್ಲಿ ಹಿಂದೆಕೊಳ್ಳುವುದು ಮತ್ತೊಂದು ವಿಧ.

ತಮ್ಮ ಕಾಲ್ಗೇಟ್ ಪಾಲ್ಮೊಲೀವ್ ಕಂಪೆನಿಯು ತನ್ನ ಅಗಾಧವಾದ ಮೀಸಲು ನಿಧಿಯನ್ನು ಷೇರಿನ ಮುಖಬೆಲೆಯಾದ ₹10 ರಲ್ಲಿ ₹9 ನ್ನು ಹಿಂದಿರುಗಿಸುವ ಮೂಲಕ ಬಂಡವಾಳ ಕಡಿಮೆ ಮಾಡಿಕೊಂಡಿದೆ. ಕ್ಯಾಸ್ಟ್ರಾಲ್ ಕಂಪೆನಿಯು ಮುಖಬೆಲೆಯ ₹10 ರಲ್ಲಿ  ₹5 ನ್ನು  ಹಿಂದಿರುಗಿಸುವ ಮೂಲಕ ಬಂಡವಾಳ ಕಡಿಮೆ ಮಾಡಿಕೊಂಡಿದೆ.

ಈಗ ಸರ್ಕಾರಿ ವಲಯದ ಕಂಪೆನಿಗಳಾದ ಎನ್ಎಂಡಿಸಿ, ನ್ಯಾಷನಲ್ ಅಲ್ಯೂಮಿನಿಯಂ ಷೇರು ಹಿಂದೆ ಕೊಳ್ಳುವಿಕೆಗೆ ಮುಂದಾಗಿವೆ. ಈ ಕ್ರಮವು ಸರ್ಕಾರದ ಷೇರು ವಿಕ್ರಯ ಕ್ರಮವೂ ಆಗಿದೆ.  ಈ ವಿಧದ ಮೂಲಕ  ಕೇಂದ್ರ ಸರ್ಕಾರ ತನ್ನಲ್ಲಿರುವ ಷೇರುಗಳನ್ನು ಕಂಪೆನಿಗೆ ಹಿಂದಿರುಗಿಸುವ ಮೂಲಕ ಸಂಪನ್ಮೂಲ ಸಂಗ್ರಹಣೆ ಮಾಡಲಿದೆ.  


ಕಂಪೆನಿಗಳ ಹಿಂದೆಕೊಳ್ಳುವ ಬೆಲೆಯು ಪೇಟೆಯ ದರಕ್ಕಿಂತ ಕಡಿಮೆಯಾಗಿರುವುದರಿಂದ ಸಾರ್ವಜನಿಕರು ತಮ್ಮ ಷೇರುಗಳನ್ನು ಕಂಪೆನಿಗೆ ಹಿಂದಿರುಗಿಸಲು ನಿರಾಸಕ್ತರಾಗುವ ಕಾರಣ ಸರ್ಕಾರದ ಹೆಚ್ಚಿನ ಭಾಗವನ್ನು ಕಂಪೆನಿಗೆ ಹಿಂದಿರುಗಿಸಬಹುದು.

ಈ ಕ್ರಮದಿಂದ ಸರ್ಕಾರ ತನ್ನ ಷೇರು ವಿಕ್ರಯದ ಗುರಿಯನ್ನು ತಲುಪಬಹುದು ಹಾಗು ಕಂಪೆನಿಯ ಷೇರಿನ ದರದಲ್ಲಿ ಹೆಚ್ಚಿನ ಏರುಪೇರು ತಡೆಯಬಹುದು. 

ಎನ್‌ಎಂಡಿಸಿ  ಷೇರಿನ ಬೆಲೆಯು ₹105 ರ ಸಮೀಪವಿರುವಾಗ ಕಂಪೆನಿಯು ಪ್ರತಿ ಷೇರಿಗೆ ₹94 ರಂತೆ ಹಿಂದೆಕೊಳ್ಳುವದಾಗಲಿ, ನ್ಯಾಷನಲ್ ಅಲ್ಯೂಮಿನಿಯಂ ಷೇರಿನ ಬೆಲೆಯು ₹47 ರ ಸಮೀಪವಿರುವಾಗ  ₹44 ರಲ್ಲಿ ಕಂಪೆನಿ ಹಿಂದೆಕೊಳ್ಳುವ ದರಗಳು ಆಕರ್ಷಕವಾಗಿರದ ಕಾರಣ ಸಾರ್ವಜನಿಕರು ಆಸಕ್ತಿ ಕಳೆದುಕೊಳ್ಳುವರು.

ಸರ್ಕಾರದ ಷೇರುಗಳು ಅಂಗೀಕರಿಸಲ್ಪಡುವುದರಿಂದ ಷೇರು ವಿಕ್ರಯ ಗುರಿ ಸಾಧನೆ ಸುಲಭವಾಗುವುದು.
ಮೊ: 9886313380 (ಸಂಜೆ 4.30ರ ನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT