ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವಿನ ಬೆಳಕಿನ ಅಹಲ್ಯೆ

Last Updated 23 ಮಾರ್ಚ್ 2016, 9:01 IST
ಅಕ್ಷರ ಗಾತ್ರ

ಒಟ್ಟೂ ಭಾರತೀಯ ಪರಿಸರಕ್ಕೇ ಚಿರಪರಿಚಿತವಾಗಿರುವ, ನಮ್ಮ ಮನೋಭೂಮಿಕೆಯ ಅಖಂಡ ಭಾಗವೇ ಆಗಿರುವ ಕೆಲವು ವ್ಯಕ್ತಿತ್ವಗಳಿವೆ. ಅವುಗಳಲ್ಲಿ ಕೆಲವು ಪಾತ್ರಗಳ ಜೊತೆ ನಮ್ಮದು ನಿತ್ಯ ಸಂವಾದ. ಮತ್ತೆ ಕೆಲವು ಪಾತ್ರಗಳ ಜೊತೆ ಸಂವಾದವಿಲ್ಲದಿದ್ದರೂ ಮೂಕ ಸಂಬಂಧವೊಂದು ಮೌನವಾಗಿ ಸದಾ ನಮ್ಮೊಳಗೆ ಕಂಡೂ ಕಾಣದ ಹಾಗೆ ಇರುತ್ತದೆ. ಅಹಲ್ಯೆ ಅಂಥ ಪಾತ್ರಗಳಲ್ಲೊಂದು. ಸೀತೆ ದ್ರೌಪದಿಯರ ಹಾಗೆ, ಮೇನಕೆ ಊರ್ವಶಿಯರ ಹಾಗೆ ನಮ್ಮ ದಿನನಿತ್ಯದ ಬದುಕಿನಲ್ಲಿ ಇವಳ ಪ್ರಸ್ತಾಪವಿಲ್ಲ. ಆದರೆ ಇವಳಿದ್ದೇ ಇದ್ದಾಳೆ ನಮ್ಮೊಳಗೆ. ಅಹಲ್ಯೆ ಮತ್ತು ಕಲ್ಲಿನ ಚಿತ್ರವೊಂದು ಎಲ್ಲ ಭಾರತೀಯ ಮನಸ್ಸಿನ ಮೇಲೆ ತೂಗು ಹಾಕಿರುವ ಖಾಯಂ ಚಿತ್ರಪಟ.

ಯಾಕಾಗಿ ಇವಳ ಬಗ್ಗೆ ನಾವು ಹೆಚ್ಚು ಮಾತನಾಡುವುದಿಲ್ಲ? ಏನೆಲ್ಲ ಎಷ್ಟೆಲ್ಲ ಮೌಲ್ಯವ್ಯವಸ್ಥೆಯ ವಕೀಲಿಕೆ, ಯಾವುದೋ ಮೂಲೆಯಿಂದ ಒತ್ತರಿಸಿ ಬರುವ ಸ್ಥಾಪಿತ ನೈತಿಕತೆಯ ಆಕಾರಗಳು ನಮ್ಮನ್ನು ನಿಯಂತ್ರಿಸುತ್ತವೆಯೆ? ಇದೆಲ್ಲಾ ಸರಿಯೇ... ಆದರೂ... ಎನ್ನುವ ಮತ್ತದೇ ಯಥಾಸ್ಥಿತಿವಾದದ ಸುರಕ್ಷತೆಯ ಬಂದಿಗಳಾಗುವ ಬಯಕೆಯೆ?

ಇದೆಲ್ಲವನ್ನೂ ಮೀರಿದ ಕಾರಣವೊಂದಿದ್ದೀತು ಎನಿಸುತ್ತದೆ ನನಗೆ. ಅಹಲ್ಯೆಯ ಬದುಕು ಎತ್ತುವ ಆದಿಮ ಪ್ರಶ್ನೆಗಳನ್ನು ನೇರವಾಗಿ ಮುಕ್ತವಾಗಿ ಚರ್ಚಿಸುವುದರ ಕಷ್ಟದ ವಾತಾವರಣವೊಂದು ನಮ್ಮಲ್ಲಿರುವುದರಿಂದಲೇ ಮತ್ತು ಅದನ್ನು ಎತ್ತಿತ್ತಿರುವವಳು ಹೆಣ್ಣಾದ್ದರಿಂದ ಅದು ಇನ್ನೂ ಕಷ್ಟದ್ದು.
‘ಹುಲು ಬಯಕೆ ಬಾ ಎನಲು ಓ ಎಂದು ಬಾರದಿರು / ವಾತಾಪಿಯಂದದೊಳು ಬಾಳನೊಡೆದು’ ಎನ್ನುವ ಪ್ರಶ್ನೆಯನ್ನು ಗಂಡು ಎತ್ತಿದ್ದರೆ, ಅದು ಬದುಕಿನ ಮತ್ತು ಪ್ರಕೃತಿಯ ಮೂಲ ಪ್ರಶ್ನೆಗಳಲ್ಲೊಂದಾಗಿ ಬಿಡುತ್ತಿತ್ತು!

ನಮ್ಮ ಎಲ್ಲ ಮುಖ್ಯ ಪೌರಾಣಿಕ, ಚಾರಿತ್ರಿಕ ಸ್ತ್ರೀಪಾತ್ರಗಳನ್ನು ಸ್ತ್ರೀವಾದಿಗೆ ಒಳಗು ಮಾಡಿದರೆ ಹೇಗಿರಬಹುದು? ಇಂಥ ಮಹತ್ವದ ಪ್ರಯತ್ನದಲ್ಲಿ ತೊಡಗಿಕೊಂಡಿರುವ ತೆಲುಗು ಲೇಖಕಿ ಓಲ್ಗಾ. ಸೀತೆ, ಶೂರ್ಪನಖಿ, ಅಹಲ್ಯೆ, ರೇಣುಕೆ, ಊರ್ಮಿಳೆ... ಹೀಗೆ ಈ ಎಲ್ಲ ಪಾತ್ರಗಳನ್ನೂ ಅವುಗಳ ಮರುನಿರೂಪಣೆಯಲ್ಲಿ ಹೊಸದಾಗಿ ಕಾಣಿಸುವ ಪ್ರಯತ್ನ ಇವರದು. ಇಂಥ ಪ್ರಯತ್ನಗಳಿಂದ ಹಲವಾರು ಸಂಗತಿಗಳು ಕಾರ್ಯಶೀಲವಾಗುತ್ತಾ ಹೋಗುತ್ತವೆ. ಮೊದಲನೆಯದು ಹೆಣ್ಣನ್ನು ತನ್ನ ಅನುಕೂಲ ಮತ್ತು ಅಧಿಕಾರಕ್ಕೆ ಅನುಗುಣವಾಗಿ ನಿಯಂತ್ರಿಸುವ ಭಿತ್ತಿಯನ್ನು ‘ರಚಿಸಲಾಗಿರುವ’ ವಿವರಗಳು ಮುನ್ನೆಲೆಗೆ ಬರುವುದು ಸಾಧ್ಯವಾಗುತ್ತದೆ.  ಎರಡನೆಯದು, ಹೆಣ್ಣಿನ ವ್ಯಕ್ತಿತ್ವದ ಕಲಾ ಮತ್ತು ಇತಿಹಾಸದ ಪಠ್ಯಗಳ ನಿರೂಪಣೆಯಲ್ಲಿಯೂ ಪಿತೃಸಂಸ್ಕೃತಿ ತನ್ನ ಕೈವಾಡವನ್ನು ಪ್ರಯೋಗಿಸುವ ಬಗೆಯೂ ನಮ್ಮ ಅನುಭವಕ್ಕೆ ಬರುವುದಕ್ಕೆ ಈ ಮರು ನಿರೂಪಣೆಗಳು ಸಹಾಯ ಮಾಡುತ್ತವೆ. ಮೂರನೆಯದು ಪಿತೃಸಂಸ್ಕೃತಿಯು ‘ಮಾದರಿ ಹೆಣ್ಣು’ಗಳಾಗಿ ಕಟ್ಟಿರುವ ಈ ಮಹಿಳೆಯರು ನಿಜದಲ್ಲಿ ಅದನ್ನು ಒಳಗಿನಿಂದಲೇ ಧಿಕ್ಕರಿಸುವ ಮತ್ತು ದುರ್ಬಲಗೊಳಿಸುವ ಪ್ರಯತ್ನಗಳನ್ನು ಮಾಡಿರುವುದರ, ಈ ಪ್ರಯತ್ನಗಳ ಮೂಲಕವೇ ಸ್ತ್ರೀ ಸಂಕಥನವನ್ನು ನಿರಂತರವಾಗಿಸುತ್ತಲೇ ಅದನ್ನು ಬಲಗೊಳಿಸಿರುವ ಅಪೂರ್ವ ಕ್ರಮವೂ ನಮ್ಮ ಅರಿವಿಗೆ ಬರುತ್ತದೆ.

ಆದ್ದರಿಂದಲೇ ಈ ಬಗೆಯ ಪ್ರಯತ್ನಗಳನ್ನು ಕೇವಲ ಸಾಹಿತ್ಯಕ ಪ್ರಯೋಗಗಳೆಂದಾಗಲೀ, ಸ್ತ್ರೀವಾದಿ ಓದಿನ ಶೈಕ್ಷಣಿಕ ಮಾದರಿಗಳೆಂದಾಗಲೀ ಸೀಮಿತಗೊಳಿಸಲು ಸಾಧ್ಯವಿಲ್ಲ. ವಿಶಾಲಾರ್ಥದಲ್ಲಿ ಇವು ವರ್ತಮಾನದ ಮತ್ತು ಭವಿಷ್ಯದಲ್ಲಿ ಮೂಲಭೂತವಾದ ಪಲ್ಲಟಗಳನ್ನು ಉದ್ದೇಶಿಸಿರುವ ಇತಿಹಾಸದ ಮರು ನಿರೂಪಣೆಗಳೂ ಆಗಿರುತ್ತವೆ.

ಈ ಮರುನಿರೂಪಣೆಗೆ ಓಲ್ಗಾ ಅಳವಡಿಸಿಕೊಂಡಿರುವ ಶೈಲಿ ಮತ್ತು ತಂತ್ರವೂ ಇದಕ್ಕೆ ಪೂರಕವಾಗಿದೆ. ಇಲ್ಲಿನ ಪಾತ್ರಗಳು ಇತರರ ನಿರೂಪಣೆಗಳಿಗೆ– ಕಲಾಕಾರರ ನಿರೂಪಣೆಗಳೂ ಸೇರಿದಂತೆ– ಒಳಗಾಗುವುದಿಲ್ಲ. ಈ ಪಾತ್ರಗಳು ಒಂದೋ ಸ್ವಗತದಲ್ಲಿ ಇಲ್ಲವೇ ತನ್ನ ಮನೋದೈಹಿಕ ಚಲನೆಗಳನ್ನು ಅವುಗಳ ಸೂಕ್ಷ್ಮ ವಿವರಗಳಲ್ಲಿ ಅರ್ಥ ಮಾಡಿಕೊಳ್ಳಬಲ್ಲ, ಸ್ಪಂದಿಸಬಲ್ಲ ಮುಕ್ತ–ಸಮಾನ ಮನಸ್ಕರೊಂದಿಗೆ ನಡೆಸುವ ಸಂವಾದಗಳು. ಕೆಲವೊಮ್ಮೆ ಓಲ್ಗಾ ಇನ್ನೊಂದು ವಿನ್ಯಾಸವನ್ನೂ ಬಳಸುವುದುಂಟು. ಅದು, ಜೊತೆಯ ಹೆಣ್ಣುಮಕ್ಕಳಲ್ಲಿ, ಸಖಿಯರಲ್ಲಿ ‘ಅರಿವಿನ ಬೆಳಕ’ನ್ನು ಉದ್ದೀಪಿಸುವ ಮಾದರಿ.
ಈ ಬಾರಿ ಚರ್ಚಿಸಬೇಕೆಂದಿರುವ ಅಹಲ್ಯೆಯನ್ನು ಕುರಿತ ಓಲ್ಗಾ ಅವರ ‘ಮೃಣ್ಮಯ ನಾದ’ ಎರಡನೆಯ ಮಾದರಿಯ ಕಥೆ.

ಅಜ್ಜಿಯರು ಕಥೆಗಳ ಮೂಲಕ ಎಳೆಯ ಮನಸ್ಸುಗಳನ್ನು ತಿದ್ದಿ ತೀಡಿ, ನಡೆಯಬೇಕಾದ, ನಡೆಯಬಾರದ ದಾರಿಗಳ ಬಗ್ಗೆ ನಮಗೆ ತಿಳಿವಳಿಕೆ ನೀಡಿ ಜನಾಂಗವನ್ನು ಸರಿದಾರಿಗೆ ಹಚ್ಚುತ್ತಾರೆಯಷ್ಟೆ. ‘ಮೃಣ್ಮಯ ನಾದ’ದ ಅಹಲ್ಯೆಯೂ ಸೀತೆಗೆ ಇಂಥ ತಿಳಿವಳಿಕೆ ನೀಡುತ್ತಾಳೆ. ಆದರೆ ಈ ಅಹಲ್ಯೆ ನೀಡುವ ತಿಳಿವಳಿಕೆ, ‘ಅತ್ತೆ ಮಾವರಿಗಂಜಿ, ಸುತ್ತೇಳು ನೆರೆಗಂಜಿ’ ತನ್ನನ್ನು ಕಳೆದುಕೊಳ್ಳುವ ಹೆಣ್ಣಿನ ತಿಳಿವಳಿಕೆಯಲ್ಲ, ತನ್ನನ್ನು ತಾನು ಕಟ್ಟಿಕೊಳ್ಳುವ ‘ವಿಚಾರಣೆಯನ್ನು ಎಂದೂ ಸ್ವೀಕರಿಸದಿರುವ’ ತಿಳಿವಳಿಕೆಯನ್ನು.

ಸರಳವಾಗಿ ಹೇಳುವುದಾದರೆ, ಅಹಲ್ಯೆ ಸೀತೆಗೆ Making of the Woman ಗೀತೋಪದೇಶ ಮಾಡುತ್ತಾಳೆ. ರಾಮನನ್ನು ಮದುವೆಯಾದಾಗಿನಿಂದ ಸೀತೆಗೆ ಅಹಲ್ಯೆಯನ್ನು ಕುರಿತ ಕುತೂಹಲ. ರಾಮ, ವಿಶ್ವಾಮಿತ್ರ ಮಹರ್ಷಿ ಅಹಲ್ಯೆಯನ್ನು ಭೇಟಿ ಮಾಡಿಸಿದಾಗಿನ ತನ್ನ ಅನುಭವವನ್ನು ಹೇಳುತ್ತಾ, “ಆ ದಿವ್ಯ ಮೂರ್ತಿಯನ್ನು ಕಂಡಾಗ ನನಗರಿವಿಲ್ಲದೆ, ಕೈಯೆತ್ತಿ ಮುಗಿದೆ. ಆದರೆ ವಿಶ್ವಾಮಿತ್ರ ಅವಳ ಬದುಕಿನ ವಿವರಗಳನ್ನು ಹೇಳಿದಾಗ ಮನಸ್ಸೆಲ್ಲ ಕಹಿಯಾಯಿತು’’ ಅನ್ನುತ್ತಾನೆ. ಕಣ್ಣೆದುರಿಗಿನ ದಿವ್ಯ ಮೂರ್ತಿ ಕ್ಷಣಮಾತ್ರದಲ್ಲೇ ಖಳನಾಯಕಿಯಾಗಿ ಮಾರ್ಪಡುತ್ತಾಳೆ. ಅಹಲ್ಯೆಯಲ್ಲಿ ‘ಸೌಶೀಲ್ಯ’ವಿಲ್ಲದ್ದೇ ಇದಕ್ಕೆ ಕಾರಣ ಎನ್ನುವುದು ರಾಮ ಸೀತೆಗೆ ಮಾಡುವ ಪಾಠ/ಪಾಠಾಂತರ.

ಮುಂದೊಮ್ಮೆ ಸೀತೆ ಅಹಲ್ಯೆಯನ್ನು ಭೇಟಿ ಮಾಡುವ ಪ್ರಸಂಗ ಬಂದಾಗ, ಸೀತೆ, ರಾಮ ಹೇಳಿದ್ದನ್ನು ಬಿಟ್ಟು ತನ್ನ ಅತ್ತೆ ಕೌಸಲ್ಯ ಹೇಳಿದ ಕತೆಯನ್ನು ಅಹಲ್ಯೆಯ ಮುಂದಿಡುತ್ತಾಳೆ. ಬಂದವನು ಇಂದ್ರ ಎನ್ನುವುದು ಅಹಲ್ಯೆಗೆ ಗೊತ್ತಿರದಿದ್ದರೂ ಅವಳು ಗೌತಮನ ಶಾಪಕ್ಕೆ ಗುರಿಯಾಗಬೇಕಾಯಿತು. ತಾನು ಮಾಡಿದ ತಪ್ಪಿಗೆ ಶಿಕ್ಷೆಗೆ ಗುರಿಯಾದವಳ ಬಗ್ಗೆ ಇವಳು ಅನುಕಂಪದಿಂದ ಮಾತಾಡುತ್ತಿದ್ದರೆ ಅಹಲ್ಯೆ, ಆ ಕನಿಕರವನ್ನೇ ಧಿಕ್ಕರಿಸುವ ದೃಢತೆಯಲ್ಲಿ– ‘‘ಆ ರಾತ್ರಿ ಬಂದವನು ಗೌತಮನಲ್ಲ ಎನ್ನುವುದು ಗೊತ್ತಿತ್ತೋ ಗೊತ್ತಿರಲಿಲ್ಲವೋ ಎಂಬುದು ನಿನಗೆ ಗೊತ್ತಾ? ಹೌದು, ಬೇರೆ ಯಾರಿಗಾದರೂ ಗೊತ್ತಾ?’’ ಎಂದು ಪ್ರಶ್ನಿಸುತ್ತಾಳೆ. ತಲೆ ತಿರುಗಿದಂತಾದರೂ ಸೀತೆ, ‘ಅಂದ್ರೆ, ನಿಮಗೆ ಗೊತ್ತಿತ್ತಾ’ ಎಂದು ಪ್ರಶ್ನಿಸಿದರೆ ಅದಕ್ಕೆ ಅಹಲ್ಯೆ ಕೊಡುವ ಉತ್ತರ– ‘‘ಸತ್ಯ ಎನ್ನುವುದು ಒಂದಿದ್ದರೆ ಅದಕ್ಕೆ ಅರ್ಥ ಒಂದೇ ಇರಲಾರದು... ಅವರವರ ಸತ್ಯ ಅವರದು. ಸತ್ಯಾಸತ್ಯಗಳನ್ನು ನಿರ್ಣಯಿಸಬಲ್ಲ ಶಕ್ತಿ ಪ್ರಪಂಚದಲ್ಲಿ ಯಾರಿಗಾದರೂ ಇದೆಯ?’’.

ಆದರ್ಶ ಸತಿಯೂ ಸೊಸೆಯೂ ರಾಣಿಯೂ ಆಗುವ ಹೆದ್ದಾರಿಯಲ್ಲಿದ್ದ ಸೀತೆಗೆ ಒಳಗೆಲ್ಲೋ ರಾಮ ಹೇಳಿದ, ಸೌಶೀಲ್ಯ ಅಹಲ್ಯೆಗೆ ಇಲ್ಲವೇನೋ ಎನ್ನುವ ಭಾವ ಸುಳಿದು ಮಾಯವಾಗುತ್ತದೆ. ಅಹಲ್ಯೆ ಸಿನಿಕಳ ಹಾಗೆ, ಅಧಿಕಪ್ರಸಂಗಿಯ ಹಾಗೆ ಕಾಣಿಸತೊಡಗುತ್ತಾಳೆ. ತನ್ನ ಬದುಕಿನ ಸತ್ಯವನ್ನು ಕುರಿತು ನೇರವಾಗಿ ಮಾತನಾಡಲಾರದವಳು ಎನಿಸಿ ಕೇಳಿದರೆ, ಅಹಲ್ಯೆ, ‘ನಿನ್ನ ಮನಸ್ಸಿಗೆ ಯಾವುದು ಶಾಂತಿ ನೀಡುವುದೋ ಅದನ್ನು ಸತ್ಯವೆಂದು ತಿಳಿ’ ಎನ್ನುತ್ತಾಳೆ. ಹೊರಡುವಾಗ ಸೀತೆ ನಮಸ್ಕರಿಸಿದರೆ, ಅಹಲ್ಯೆ ಮಾಡುವ ವಿಚಿತ್ರವಾದ ಆಶೀರ್ವಾದ ನೋಡಿ, ‘ಎಂದೂ ವಿಚಾರಣೆಯನ್ನು ಅಂಗೀಕರಿಸಬೇಡ ಸೀತೆ. ಅಧಿಕಾರಕ್ಕೆ ಶರಣಾಗಬೇಡ’.

ಅರ್ಥವಾಗದ ಕಗ್ಗದಂತಹ ಈ ಮಾತುಗಳು ಸೀತೆಗೆ ಅರ್ಥವಾಗುವುದಕ್ಕೆ ಕಾಲ ಬೇಕಾಯಿತು. ರಾಮ ಪ್ರಜೆಗಳಿಗಾಗಿ ಸೀತೆಯನ್ನು ‘ಶೀಲ ಪರೀಕ್ಷೆಗೆ’ ಒಳಗು ಮಾಡಬೇಕಾದಾಗ ಕಂಗಾಲಾದ ಸೀತೆಗೆ, ಅಹಲ್ಯೆಯ ಮಾತುಗಳು ನೆನಪಾಗುತ್ತವೆ– ‘‘ವಿಚಾರಣೆಗೆ ಒಳಗಾಗುವುದು ಎಂದರೆ ಏನು ಸೀತಾ! ಅಪನಂಬಿಕೆಯಲ್ಲವೆ? ಅದಕ್ಕಿಂತ ಯಾವುದೋ ಒಂದು ನಂಬಿಕೆಯೇ ಒಳ್ಳೆಯದಲ್ಲವೆ?’’.

ಓಲ್ಗಾ ಎನ್ನುವ ಹೆಸರಿನಿಂದ ಪ್ರಖ್ಯಾತರಾದ ಲಲಿತಕುಮಾರಿ ಎಡಪಂಥೀಯ ವಿಚಾರಧಾರೆಗಳಿಂದ ದಟ್ಟವಾಗಿ ಪ್ರಭಾವಿತರಾದ ಲೇಖಕಿ. (ಇವರ ತಂದೆ ಪೋಪೂರಿ ವೆಂಕಟಸುಬ್ಬರಾವು ಆಂಧ್ರಪ್ರದೇಶದ ಮುಖ್ಯ ಎಡಪಂಥೀಯ ಚಿಂತಕರಲ್ಲೊಬ್ಬರು. ಆದ್ದರಿಂದಲೇ ಇವರಿಗೆ ರಷ್ಯಾದ ಮುಖ್ಯ ನದಿ ಓಲ್ಗಾ ಎನ್ನುವ ಹೆಸರು).

ಬರವಣಿಗೆಯೂ ಆಕ್ಟಿವಿಸಂನ ಒಂದು ಭಾಗವೇ ಎಂದು ತಿಳಿಯುವ ಓಲ್ಗಾ ವಿದ್ಯಾರ್ಥಿ ಜೀವನದಲ್ಲೇ ನಕ್ಸಲ್ಬಾರಿ ಚಳವಳಿಯಲ್ಲಿ ಆಸಕ್ತರಾಗಿದ್ದವರು. ೭೦ರ ದಶಕದ ಶ್ರೀಕಾಕುಳಂ ಚಳವಳಿಯಲ್ಲಿ ಪಾಲ್ಗೊಳ್ಳುವುದರಿಂದ ಆರಂಭವಾದ ಇವರ ಹೋರಾಟದ ಬದುಕು ಇಂದಿಗೂ ಮುಂದುವರಿದಿದೆ. ೧೯೯೧ರಲ್ಲಿ ಆರಂಭವಾದ ‘ಅಸ್ಮಿತ ರಿಸೋರ್ಸ್ ಸೆಂಟರ್ ಫಾರ್ ವುಮೆನ್’ ಸಂಸ್ಥೆಯ ವ್ಯವಸ್ಥಾಪಕ ಸದಸ್ಯರಲ್ಲೊಬ್ಬರು. ‘ಸ್ವೇಚ್ಛಾ’ ಇವರ ಬಹುಚರ್ಚಿತ ಕಾದಂಬರಿ. ‘ಮಾಕು ಗೋಡಲು ಲೇವು’ (ನಮಗೆ ಗೋಡೆಗಳಿಲ್ಲ), ‘ನೀಲಿ ಮೇಘ್ಹಾಲು’ ಇವರ ಮುಖ್ಯ ಸಂಪಾದಿತ ಕೃತಿಗಳು. ‘ರಾಜಕೀಯ ಕಥೆಗಳು’, ‘ವಿಮುಕ್ತ’ ಕಥಾ ಸಂಕಲನಗಳು. ಈ ಎರಡೂ ಕೃತಿಗಳ ಅನುವಾದವನ್ನು ಜಿ. ವೀರಭದ್ರೇಗೌಡ ಅವರು ಮಾಡಿದ್ದಾರೆ. (ಕ್ರಮವಾಗಿ ಸೃಷ್ಟಿ ಮತ್ತು ಅಭಿನವ ಇದರ ಪ್ರಕಾಶಕರು). ಕಾವ್ಯದ ತೀವ್ರತೆಯನ್ನು, ತಾತ್ವಿಕತೆಯ ವಸ್ತು ನಿಷ್ಠತೆಯನ್ನು, ಸಮಕಾಲೀನ ಸನ್ನಿವೇಶದ ಸವಾಲುಗಳನ್ನು ನಿಭಾಯಿಸಬೇಕಾದ ಕಲೆಯ ಹೊಣೆಗಾರಿಕೆಯನ್ನು ಪ್ರಶ್ನಿಸಲಾಗದ ಬದ್ಧತೆಯಲ್ಲಿ ನಿಭಾಯಿಸುತ್ತಿರುವ ಲೇಖಕಿ ಓಲ್ಗಾ.

ಸೀತೆ ಮತ್ತು ಅಹಲ್ಯೆಯ ನಡುವೆ ಒಂದು ಘಟ್ಟದಲ್ಲಿ ಸಂವಹನ ಪ್ರಕ್ರಿಯೆಯೊಂದು ಆರಂಭವಾಗುತ್ತದೆ. ಒಂದು ಘಟ್ಟದಲ್ಲಿ ಸೀತೆಗೆ ಅಹಲ್ಯೆಯ ಜೊತೆಯಲ್ಲಿ ನಡೆಯದ ಸಂವಾದ ಈಗ ಆರಂಭವಾಗುತ್ತದೆ. ಈ ಸಂಗತಿ ಹೆಣ್ಣು ಬದುಕಿನ ಒಂದಿಲ್ಲೊಂದು ಘಟ್ಟದಲ್ಲಿ ಎದುರಾಗುವ ಸನ್ನಿವೇಶಗಳ ಸಾಧಾರಣೀಕರಣ ಮತ್ತು ಅವುಗಳಿಂದಾಗಿಯೇ ಹೆಣ್ಣುಮಕ್ಕಳಿಗೆ ಪರಸ್ಪರರ ನಡುವೆ ಸಾಂಗತ್ಯವೊಂದನ್ನು ಕಟ್ಟಿಕೊಳ್ಳಲು ಸಾಧ್ಯವಾಗುವ ಸ್ಥಿತಿಯನ್ನು ಸಂಕೇತಿಸುತ್ತದೆ. ಅಧಿಕಾರಕ್ಕೆ ಒಳಗಾಗುವುದರಲ್ಲೇ ಪರಮ ಸುಖ ಕಂಡಿದ್ದ ಸೀತೆಗೆ ಅದರ ಹಿಂಸೆ ಆರಂಭವಾದಾಗ ಮಾತ್ರ, ಅದು ಅಧಿಕಾರವೆಂದು, ದಮನವೆಂದು, ಶೋಷಣೆಯೆಂದು ಅರಿವಾಗುತ್ತದೆ. ಹೆಣ್ಣಿನ ವ್ಯಕ್ತಿತ್ವ, ಅದರ ಸತ್ಯ, ಅದರ ನೋವು ನಲಿವು ಎಲ್ಲವನ್ನೂ ಗಂಡು ತನಗೆ, ತನ್ನ ಅನುಕೂಲಕ್ಕೆ ಬೇಕಾಗಿ ಬಳಸಿಕೊಳ್ಳುವ ಸಾಧನಗಳು ಮಾತ್ರ ಎನ್ನುವ ಅರಿವು ಅಹಲ್ಯೆಯಿಂದ ಸೀತೆಗೆ ಅರಿವಾಗಿಯೂ ಅನುಭವವಾಗಿಯೂ ದಾಟಿ ಬರುತ್ತದೆ.

ರಾಮನ ಸಲುವಾಗಿ ಎಲ್ಲ ವಿಚಾರಣೆಗಳನ್ನೂ ಅವಮಾನಗಳನ್ನೂ ಸಹಿಸಿದ ಸೀತೆಗೂ ಒಂದು ಘಟ್ಟದಲ್ಲಿ ತಾನು ಇಷ್ಟನ್ನೆಲ್ಲ ಮಾಡಬೇಕಾದ ಅಗತ್ಯವಿತ್ತೆ ಎನ್ನುವ ಪ್ರಶ್ನೆ ಕಾಡತೊಡಗುತ್ತದೆ. ತಾನೂ ರಾಮನೂ ಅಭಿನ್ನ ಎಂದು ತಿಳಿದವಳಿಗೀಗ ತಾನು ಯಾರು ಎನ್ನುವ ಪ್ರಶ್ನೆ ಎದುರಾಗುತ್ತದೆ. ಮತ್ತೆ ಅಹಲ್ಯೆಯ ಮೊರೆ ಹೋದರೆ–

‘‘ಸೀತೆ ನೀನು ಯಾರೋ, ನಿನ್ನ ಜೀವನದ ಗುರಿಯೇನೋ ತಿಳಿಯಲು ಪ್ರಯತ್ನಿಸು. ಅದು ಅಷ್ಟು ಸುಲಭವಲ್ಲ. ಆದರೆ ಪ್ರಯತ್ನ ನಿಲ್ಲಿಸಬೇಡ. ಕೊನೆಗೆ ತಿಳಿದುಕೊಳ್ಳುವಿ. ನಿನಗೆ ಆ ಶಕ್ತಿ ಇದೆ. ಶ್ರೀರಾಮನನ್ನು ಕಾಪಾಡಬಲ್ಲವಳು, ನಿನ್ನನ್ನು ಕಾಪಾಡಿಕೊಳ್ಳಲಾರೆಯಾ- ಇದೆಲ್ಲಾ ಯಾಕೆ ನಡೆದಿದೆ ವಿಚಾರಿಸದಿರು. ಇದು ನಿನ್ನ ಒಳ್ಳೆಯದಕ್ಕೆ, ನಿನ್ನನ್ನು ನೀನು ತಿಳಿದುಕೊಳ್ಳುವ ಕ್ರಮದ ಭಾಗವಾಗಿ ನಡೆದಿದೆ. ಆನಂದದಿಂದ ಇರು. ಈ ಪ್ರಕೃತಿಯನ್ನು, ಸಕಲ ಜೀವರಾಶಿಯ ಕ್ರಮವನ್ನು ಪರಿಶೀಲಿಸು. ಅದರಲ್ಲಿ ನಿರಂತರವಾಗಿ ಜರುಗುವ ಬದಲಾವಣೆಗಳನ್ನು ಗಮನಿಸು.... ಈ ಸಕಲ ಪ್ರಪಂಚದಲ್ಲಿ ನೀನಿರುವಿ. ಒಬ್ಬ ರಾಮನಿಗೆ ಮಾತ್ರ ಅಲ್ಲ’’.

ಅಹಲ್ಯೆಯ ಈ ಮಾತುಗಳು ಹೆಣ್ಣು ಕುಟುಂಬ ವಿಶ್ವದಿಂದ ವಿಶ್ವ ಕುಟುಂಬದ ವಿಸ್ತಾರದ ಕಡೆಗೆ ಕಣ್ಣು ಹಾಯಿಸಬೇಕಾದ ಅಗತ್ಯವನ್ನು ಮನಗಾಣಿಸುತ್ತಿವೆ. ಲೋಕ ಸರಿ ತಪ್ಪೆಂದು, ಅವಳು ನಡೆಯ ಬೇಕಾದ ದಾರಿಯನ್ನೂ ಆ ದಾರಿಯಲ್ಲಿನ ಅವಳ ನಡಿಗೆಯ ಕ್ರಮ, ವೇಗ... ಸಕಲವನ್ನೂ ನಿರ್ದೇಶಿಸುತ್ತಲೇ ಇದು ನಿನ್ನ ದಾರಿ ಎನ್ನುವ ಭ್ರಮೆಯನ್ನು ಹುಟ್ಟಿಸುತ್ತಿರುತ್ತದೆ. ಅಹಲ್ಯೆ, ಅದನ್ನು ಭಂಜಿಸಿ, ನಡೆಯಬೇಕಾದ ದಾರಿಯನ್ನು ಆರಿಸಿಕೊಳ್ಳುವುದು ಹೆಣ್ಣಿನ ಪ್ರಾಕೃತಿಕ ಹಕ್ಕು ಎನ್ನುವ ಅರಿವಿನ ಬೆಳಕಿನಲ್ಲಿ ಸಾಗುತ್ತಾಳೆ.

ಅಹಲ್ಯೆಯ ಬಹುದೊಡ್ಡ ಜ್ಞಾನವೆಂದರೆ, ಹೆಣ್ಣಿನ ಬಗ್ಗೆ ತೀರ್ಮಾನಗಳನ್ನು ಗಂಡು ಏಕಪಕ್ಷೀಯವಾಗಿ ತೆಗೆದುಕೊಳ್ಳಲಾರ ಮತ್ತು ಅದನ್ನು ಹೆಣ್ಣು ಮಾನ್ಯ ಮಾಡಬೇಕಾಗಿಲ್ಲ ಎನ್ನುವುದು. ಅವಳನ್ನು ಮಾಡಿದ, ಮಾಡದ, ಮಾಡಿರಬಹುದಾದ, ಗಂಡಿಗೆ ‘ತಪ್ಪಾಗಿ’ ಕಾಣಿಸುವ ನಡವಳಿಕೆಯೊಂದಕ್ಕೆ ಕಲ್ಲಾಗುವ ಶಿಕ್ಷೆಯನ್ನು ಗೌತಮ ಕೊಡುತ್ತಾನೆ. ಅದನ್ನು ಅಹಲ್ಯೆ ಶಿಕ್ಷೆ ಎಂದು ತಿಳಿಯದೇ ಇರುವುದರಲ್ಲಿಯೇ ಗಂಡಿನ ಮತ್ತು ಮೌಲ್ಯ ವ್ಯವಸ್ಥೆಯ ಸೋಲಿದೆ. ಅವಳು ತನ್ನ ಕಲ್ಲಾಗುವ ಪ್ರಕ್ರಿಯೆಯನ್ನು ತನ್ನ ಮೂಲ ಧಾತುವಾದ ಪ್ರಕೃತಿಯ ಜೊತೆಗಿನ ಸಖ್ಯದ ನೆಲೆ ಎಂದೇ ತಿಳಿಯುತ್ತಾಳೆ.

ಪ್ರಶ್ನೆ ಕಲ್ಲಾಗುವ ಪ್ರಾಯೋಗಿಕ ಸಾಧ್ಯಾಸಾಧ್ಯತೆಗಳದ್ದಲ್ಲ, ಹೆಣ್ಣನ್ನು ಎಂಥ ಸ್ಥಾವರದ, ಜಡ ನೆಲೆಯಲ್ಲಿ ನೋಡಲಾಗುತ್ತದೆ ಮತ್ತು ಅದನ್ನು ಬಳಕೆಗೆ ತರಲು ಸಾಧ್ಯವಾಗುತ್ತದೆಯಲ್ಲ ಎನ್ನುವುದೇ ನಿಜವಾದ ಪ್ರಶ್ನೆ. ಅವಳು ಬೇಟೆಗೆ ಬಳಸುವ ಕವಣೆಯ ಕಲ್ಲೂ ಹೌದು, ಮನಸುಖರಾಯರು ದೇವಿ ಎಂದು ಭ್ರಮಿಸಿ ಪೂಜಿಸಿ ಅವಳನ್ನು ಸ್ಥಾವರವಾಗಿಸುವ ಪರಿಕರವೂ ಹೌದು. ಬಳಸುವುದು ಯಾವುದಕ್ಕೇ ಇರಲಿ, ಅವಳು ಅವರ ಕಣ್ಣಿನ ‘ಹಾಹೆ’ (ಗೊಂಬೆ). ಅದಕ್ಕೇ ಸತ್ಯಕ್ಕ ಹೇಳಿದ್ದು– ‘‘ಅದು ಜಗದ ಹಾಹೆ; ಬಲ್ಲವರ ನೀತಿಯಲ್ಲ’’.

ಓಲ್ಗಾ ಅವರ ಅಹಲ್ಯೆಯ ರಾಜಕೀಯ ನಿರೂಪಣೆಯನ್ನೇ ಪುತಿನ ಕಾವ್ಯದ ಮೋಹಕತೆಯಲ್ಲಿ ಮಂಡಿಸುತ್ತಾರೆ. ಪ್ರಕೃತಿಯ ದುರ್ದಮ್ಯ ಒತ್ತಡಕ್ಕೆ ಗಂಡು ಹೆಣ್ಣುಗಳಿಬ್ಬರೂ ಅಯಾಚಿತವಾಗಿ ಒಳಗಾಗುವುದನ್ನು ಹೇಳುವ ಪುತಿನ ಅವರ ‘ಅಹಲ್ಯೆ’ ಗೀತ ನಾಟಕ , ಯಾರೂ ಯಾರನ್ನೂ ನಿರ್ಬಂಧಿಸಲು ಸಾಧ್ಯವಿಲ್ಲ. ಅವರವರ ಬದುಕಿನ ಗತಿಯನ್ನು ಅವರವರೇ ಹುಡುಕುತ್ತಾ ಹೋಗುತ್ತಾರೆ ಎನ್ನುವುದನ್ನು ಅಪೂರ್ವವಾಗಿ ಹೇಳುತ್ತದೆ. ಎಚ್ಚರ, ವಿಸ್ಮೃತಿಗಳ ದ್ವಂದ್ವದ ಜೊತೆಯಲ್ಲೇ ಪ್ರತಿ ವ್ಯಕ್ತಿತ್ವವೂ ತನ್ನದೇ ಪರಿಧಿಯಲ್ಲೆ ಪರಿಭ್ರಮಣ ನಡೆಸುವ ಉತ್ಕಟತೆಯನ್ನು ಪ್ರಾಕೃತಿಕವಾಗಿಯೇ ಪಡೆದಿರುತ್ತದೆ, ಅದನ್ನು ಒಪ್ಪುವುದನ್ನು ಬಿಟ್ಟು ಅನ್ಯ ಮಾರ್ಗವಿಲ್ಲ ಎನ್ನುವುದನ್ನು ಧ್ವನಿಸುತ್ತದೆ.

ಬಯಸುವೆ ನಾ ಗಂಗೆಯ ತೆರ
ಪದದಿ ಕರಗಿ ಹರಿಯೆ,
ಇಲ್ಲದಿರಲು ಹಗುರವಾಗಿ
ಕಂಪಿನಂತೆ ಸರಿಯೆ
ಮೈಯೆ ಭಾರ ಮನವೆ ಭಾರ
ಬದುಕೆ ಭಾರವೆಂಬ
ಆಸರೆಯೇ ಬೇಡದಂಥ
ನಲವೆ ನನ್ನ ತುಂಬ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT