ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧ ಗಂಟೆಯಲ್ಲೇ ಪೂರ್ತಿ ಚಾರ್ಜ್!

Last Updated 29 ಜೂನ್ 2016, 19:30 IST
ಅಕ್ಷರ ಗಾತ್ರ

ಸಿಕ್ಕಾಪಟ್ಟೆ ಕುತೂಹಲ ಹುಟ್ಟಿಸಿದ, ಹುಟ್ಟಿಸಿದ ಕುತೂಹಲ ಸರಿಯೆಂದು ಸಾಧಿಸಿದ ಒಂದು ಅತ್ಯುತ್ತಮ ಫೋನ್ ಇದು

ಒನ್‌ಪ್ಲಸ್ ಕಂಪೆನಿ ಒನ್‌ಪ್ಲಸ್ ಒನ್, ಒನ್‌ಪ್ಲಸ್ ಟು ನಂತರ ಒನ್‌ಪ್ಲಸ್ ಎಕ್ಸ್ ಮೂಲಕ ಮಾರುಕಟ್ಟೆಯಲ್ಲಿ ವಿಶಿಷ್ಟ ಸ್ಥಾನ ಗಳಿಸಿಕೊಂಡಿದೆ. ಮೊದಲಿಗೆ ಫೋನ್‌ಗಳನ್ನು ಆಹ್ವಾನದ ಮೂಲಕ ಮಾತ್ರವೇ ಮಾರಿ ತುಂಬ ಜನಪ್ರಿಯವಾಯಿತು.

ಈ ವಿಧಾನದಿಂದಾಗಿ ಒನ್‌ಪ್ಲಸ್ ಫೋನ್ ಉಳ್ಳವರು ಇಲ್ಲದವರನ್ನು ಹೆಮ್ಮೆಯಿಂದ ನೋಡುವಂತೆ ಮಾಡಿತ್ತು. ಈಗ ಒನ್‌ಪ್ಲಸ್ ಕಂಪೆನಿಯ ಎಲ್ಲ ಫೋನ್‌ಗಳು ಆಹ್ವಾನವಿಲ್ಲದೇ ದೊರೆಯುತ್ತಿವೆ. ಈಗ ಹೊಸದಾಗಿ ಬಂದಿರುವ ಒನ್‌ಪ್ಲಸ್ 3 (Oneplus 3) ನಮ್ಮ ಈ ವಾರದ ಗ್ಯಾಜೆಟ್.

ಗುಣವೈಶಿಷ್ಟ್ಯಗಳು
ನಾಲ್ಕು ಹೃದಯಗಳ ಕ್ವಾಲ್ಕಾಂ ಸ್ನಾಪ್‌ಡ್ರ್ಯಾಗನ್ (2x 2.2 GHz, 2x1.6 GHz, Qualcomm© Snapdragon™ 820) ಪ್ರೊಸೆಸರ್, ಗ್ರಾಫಿಕ್ಸ್‌ಗೆಂದೇ ಪ್ರತ್ಯೇಕ ಅಡ್ರೆನೋ 530 ಪ್ರೊಸೆಸರ್, 6+64 ಗಿಗಾಬೈಟ್ ಮೆಮೊರಿ, 4ಜಿ ಎರಡು ನ್ಯಾನೋ ಸಿಮ್, ಮೈಕ್ರೋಎಸ್‌ಡಿ ಮೆಮೊರಿ ಕಾರ್ಡ್ ಹಾಕುವ ಸೌಲಭ್ಯ ಇಲ್ಲ,

ಯುಎಸ್‌ಬಿ ಆನ್-ದ-ಗೋ (USB OTG) ಇದೆ, 5.5 ಇಂಚು ಗಾತ್ರದ 1080x1920 ಪಿಕ್ಸೆಲ್ ರೆಸೊಲೂಶನ್ನಿನ ಅಮೋಲೆಡ್ ಪರದೆ, ಗೊರಿಲ್ಲ-4 ಗಾಜು, f2.0 ಅಪೆರ್ಚರ್‌ನ ಲೆನ್ಸ್ ಉಳ್ಳ 16 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಮತ್ತು 8 ಮೆಗಾಪಿಕ್ಸೆಲ್‌ನ ಇನ್ನೊಂದು ಸ್ವಂತೀ ಕ್ಯಾಮೆರಾ, ಕ್ಯಾಮೆರಾಗೆ ಎಲ್ಇಡಿ ಫ್ಲಾಶ್,

ಪೂರ್ತಿ ಹೈಡೆಫಿನಿಶನ್ (1080p) ಮತ್ತು 4k ವಿಡಿಯೊ ಚಿತ್ರೀಕರಣ, 3000mAh ಶಕ್ತಿಯ ತೆಗೆಯಲಸಾಧ್ಯವಾದ ಬ್ಯಾಟರಿ, 152.7 x 74.7 x 7.35 ಮಿ.ಮೀ ಗಾತ್ರ, 158 ಗ್ರಾಂ ತೂಕ, ವೈಫೈ, ಬ್ಲೂಟೂತ್, ಜಿಪಿಎಸ್, ಎನ್‌ಎಫ್‌ಸಿ, ಆಂಡ್ರಾಯ್ಡ್ 6.0.1+ಆಕ್ಸಿಜನ್ 3.1.2, ಡ್ಯಾಶ್ ಚಾರ್ಜಿಂಗ್, ಇತ್ಯಾದಿ. ಬೆಲೆ ₹27,999.

ಈ ಫೋನ್ ಕೂಡ ಬಹುಮಟ್ಟಿಗೆ ಒನ್‌ಪ್ಲಸ್ ಒನ್ ಮತ್ತು ಟು ಗಳ ಮಾದರಿಯಲ್ಲೇ ಇದೆ. ಒನ್‌ಪ್ಲಸ್ ಎಕ್ಸ್ ಮಾತ್ರ ಸಂಪೂರ್ಣ ಬೇರೆಯೇ ವಿನ್ಯಾಸವನ್ನು ಹೊಂದಿದೆ.

ಒನ್‌ಪ್ಲಸ್ 3ರ ಹಿಭಾಗ 1 ಮತ್ತು 2 ಗಳಿಗಿಂತ ಸ್ವಲ್ಪ ವಿಭಿನ್ನವಾಗಿ ನಯವಾಗಿದೆ. 1 ಮತ್ತು 2ರ ಮಾದರಿಯ ದೊರಗಾದ (ಸ್ಯಾಂಡ್‌ಸ್ಟೋನ್) ಹಿಂಭಾಗ ಬೇಕಿದ್ದಲ್ಲಿ ಅದಕ್ಕೆ ಅವರೇ ಹೆಚ್ಚಿಗೆ ಕವಚ ನೀಡಿದ್ದಾರೆ.

ಆದರೆ ಅದಕ್ಕೆ ಹಣ ನೀಡಿ ಕೊಳ್ಳಬೇಕು. ಬಲಭಾಗದಲ್ಲಿ ಆನ್/ಆಫ್ ಬಟನ್, ಎಡಭಾಗದಲ್ಲಿ ವಾಲ್ಯೂಮ್ ಬಟನ್ ಇವೆ. ವಾಲ್ಯೂಮ್‌ ಬಟನ್‌ನ ಪಕ್ಕದಲ್ಲಿ ವಿಶೇಷ ಬಟನ್ ಇದೆ.

ಅದನ್ನು ಸೂಚನೆಗಳನ್ನು ಆನ್ ಅಥವಾ ಆಫ್  ಮಾಡಲು ಬಳಸಬಹುದು. ಕೆಲಸ ಮಾಡುತ್ತಿರುವಾಗ ಅಥವಾ ಸಭೆಯಲ್ಲಿದ್ದಾಗ ಯಾವುದೇ ಕರೆ, ಸಂದೇಶ ಬರಬಾರದು ಎಂದಿದ್ದಲ್ಲಿ ಈ ಬಟನ್ ಮೂಲಕ ಹಾಗೆ ಆಯ್ಕೆ ಮಾಡಿಕೊಳ್ಳಬಹುದು.

ಕೆಳಭಾಗದಲ್ಲಿ ಮೈಕ್ರೋಯುಎಸ್‌ಬಿ ಕಿಂಡಿಯಿದೆ. ಅದರ ಪಕ್ಕದಲ್ಲಿ 3.5 ಮಿ.ಮೀ ಇಯರ್‌ಫೋನ್ ಕಿಂಡಿಯಿದೆ. 1 ಮತ್ತು 2ರಲ್ಲಿ ಈ ಕಿಂಡಿ ಮೇಲ್ಭಾಗದಲ್ಲಿತ್ತು. ಹಿಂಭಾಗದ ಕವಚ ತೆಗೆಯುವಂತಿಲ್ಲ. ಅಂದರೆ ಬ್ಯಾಟರಿ ಬದಲಿಸುವಂತಿಲ್ಲ.

ಆನ್/ಆಫ್ ಬಟನ್‌ನ ಪಕ್ಕದಲ್ಲಿ ಎರಡು ಸಿಮ್ ಹಾಕಲು ಹೊರಬರುವ ಚಿಕ್ಕ ಟ್ರೇ ಕಂಡುಬರುತ್ತದೆ. ಈ ಫೋನಿನ ತೂಕ ಕೇವಲ 158 ಗ್ರಾಂ ಮತ್ತು ದಪ್ಪ ಸುಮಾರು 7-7.5 ಮಿ.ಮೀ. ಅಂದರೆ ತೆಳ್ಳಗಾಗಿದ್ದು ಹಗುರವಾಗಿದೆ. ಒಟ್ಟಿನಲ್ಲಿ ಕೈಯಲ್ಲಿ ಹಿಡಿಯುವ ಮತ್ತು ಬಳಸುವ ಅನುಭವ ಚೆನ್ನಾಗಿದೆ. ಒಂದು ಮೇಲ್ದರ್ಜೆಯ ಫೋನನ್ನು ಕೈಯಲ್ಲಿ ಹಿಡಿದ ಭಾವನೆ ಬರುತ್ತದೆ.

ಗಮನಿಸಿ –ಈ ಫೋನಿನಲ್ಲಿರುವುದು 6 ಗಿಗಾಬೈಟ್ ಪ್ರಾಥಮಿಕ ಮೆಮೊರಿ. ಕೆಲವು ಲ್ಯಾಪ್‌ಟಾಪ್‌ಗಳಲ್ಲಿರುವುದು 4 ಗಿಗಾಬೈಟ್ ಮೆಮೊರಿ ಮಾತ್ರ. ಅಂದ ಮೇಲೆ ಇದರ ಕೆಲಸದ ಶಕ್ತಿಯನ್ನು ಊಹಿಸಿಕೊಳ್ಳಬಹುದು.

ನಿಮ್ಮ ಕಿಸೆಯಲ್ಲೇ ಒಂದು ಸರ್ವರ್ ಶಕ್ತಿಯ ಸಾಧನ ಇದೆ ಎಂದೂ ಹೇಳಿಕೊಳ್ಳಬಹುದು. ಸಹಜವಾಗಿಯೇ ಕೆಲಸದ ವೇಗ ಅತ್ಯುತ್ತಮವಾಗಿದೆ. ಯಾವ ಆಟವನ್ನು ಬೇಕಾದರೂ ಆಡಬಹುದು. ವಿಡಿಯೊ ವೀಕ್ಷಣೆ ಚೆನ್ನಾಗಿದೆ. ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೊ ವೀಕ್ಷಣೆ ಕೂಡ ಮಾಡಬಹುದು.

ಬ್ಯಾಟರಿ ಶಕ್ತಿಶಾಲಿಯಾಗಿದೆ. ದಿನವಿಡೀ ಅಂತರಜಾಲ ಬಳಕೆ, ಟ್ವಿಟ್ಟರ್, ಫೇಸ್‌ಬುಕ್, ವಾಟ್ಸ್‌ಆಪ್, ಜಿಪಿಎಸ್, ಕ್ಯಾಮೆರಾ ಬಳಸಿ ಸುಮಾರು ಫೋಟೊ ತೆಗೆಯುವುದು, ಸಂಗೀತ ಆಲಿಸುವುದು–ಇತ್ಯಾದಿ ಎಲ್ಲ ಮಾಡಿದರೂ ಸಾಯಂಕಾಲದ ತನಕ ಬ್ಯಾಟರಿ ಬಾಳಿಕೆ ಬರುತ್ತದೆ.

ಈ ಫೋನಿನ ಜೊತೆ ಡ್ಯಾಶ್ ಚಾರ್ಜರ್ ಎಂಬ ವಿಶಿಷ್ಟ ಚಾರ್ಜರ್ ನೀಡಿದ್ದಾರೆ. ಅದನ್ನು ಮತ್ತು ಅದರ ಜೊತೆ ನೀಡಿರುವ ಕೇಬಲ್ ಬಳಸಿ ಚಾರ್ಜ್ ಮಾಡಿದರೆ 20% ನಿಂದ 100%ಗೆ ಸುಮಾರು 25-30 ನಿಮಿಷದಲ್ಲಿ ಚಾರ್ಜ್ ಆಗುತ್ತದೆ. ರಾತ್ರಿ ಪೂರ್ತಿ ಚಾರ್ಜರ್‌ಗೆ ಫೋನನ್ನು ಜೋಡಿಸಿ ಮಲಗುವ ಕಾಲ ಇನ್ನಿಲ್ಲ. ಕಾರಿನಲ್ಲಿ ಬಳಸಲು ಕೂಡ ಡ್ಯಾಶ್ ಚಾರ್ಜರ್ ಕೊಳ್ಳಲು ಲಭ್ಯವಿದೆ.

16 ಮೆಗಾಪಿಕ್ಸೆಲ್‌ನ f2 ಲೆನ್ಸ್‌ನ ಪ್ರಾಥಮಿಕ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್‌ನ ಸ್ವಂತೀ ಕ್ಯಾಮೆರಾಗಳು ಎರಡೂ ನಿಜಕ್ಕೂ ಚೆನ್ನಾಗಿವೆ. ಮ್ಯಾನ್ಯುವಲ್ ವಿಧಾನದಲ್ಲಿ ಎಲ್ಲ ನಮೂನೆಯ ಫೋಟೊಗಳನ್ನು ತೆಗೆಯಬಹುದು. ಉದಾಹರಣೆಗೆ ನಾನು ಮಂಗಳೂರಿನ ಮಳೆಯ ಫೋಟೊ ತೆಗೆದೆ.

ಈ ರೀತಿ ಫೋಟೊ ತೆಗೆಯಬೇಕಾದರೆ ತೊಟ್ಟಿಕ್ಕುತ್ತಿರುವ ನೀರ ಹನಿಗಳನ್ನು ಫೋಟೊದಲ್ಲಿ ತಟಸ್ಥಗೊಳಿಸಿ (freeze) ಹಿನ್ನೆಲೆಯಲ್ಲಿ ಕಂಡುಬರುವ ಮರಗಳನ್ನು ಮಸುಕುಗೊಳಿಸಿ ತೆಗೆಯಬೇಕು. ಡಿಎಸ್‌ಎಲ್ಆರ್ ಕ್ಯಾಮೆರಾ ಬಳಸಿ ಇವೆಲ್ಲವನ್ನು ಆರಾಮವಾಗಿ ಆಡಬಹುದು.

ನಾನು ಒನ್‌ಪ್ಲಸ್ 3 ಬಳಸಿ ಈ ಕೆಲಸದಲ್ಲಿ ಒಂದು ಮಟ್ಟಿಗೆ ಯಶಸ್ಸು ಸಾಧಿಸಿದೆ. ಅತಿ ಕಡಿಮೆ ಬೆಳಕಿನಲ್ಲಿ ಮಾತ್ರ ಸ್ವಲ್ಪ ಕಡಿಮೆ ತೃಪ್ತಿದಾಯಕವಾಗಿ ಫೋಟೊ ತೆಗೆಯುತ್ತದೆ.

ಆದಷ್ಟು ಬೇಗನೆ ಈ ಸಮಸ್ಯೆಯ ಪರಿಹಾರಕ್ಕೆ ಒಂದು ತಂತ್ರಾಂಶ ನವೀಕರಣ ನೀಡುತ್ತೇವೆ ಎಂದು ಕಂಪೆನಿಯವರು ಹೇಳಿಕೊಂಡಿದ್ದಾರೆ. ಸದ್ಯಕ್ಕೆ ನಾನು ಕಂಡಂತೆ ಮೊಬೈಲ್ ಫೋನ್ ಕ್ಯಾಮೆರಾಗಳಲ್ಲೇ ಇದು ಅತ್ಯುತ್ತಮ ಅನ್ನಬಹುದು.

ಇತರೆ ಒನ್‌ಪ್ಲಸ್ ಫೋನ್‌ಗಳಂತೆ ಇದರ ಆಡಿಯೊ ಇಂಜಿನ್ ಕೂಡ ಚೆನ್ನಾಗಿದೆ. ಆದರೆ ಇಯರ್‌ಫೋನ್ ನೀಡಿಲ್ಲ. ಮೂರು ಮೈಕ್ರೋಫೋನ್ ಇವೆ. ಹಿನ್ನೆಲೆಯ ಗದ್ದಲವನ್ನು ನಿವಾರಿಸಿ ನೀವು ಮಾತನಾಡಿದ್ದನ್ನು ಮಾತ್ರ ಪ್ರತ್ಯೇಕಿಸಿ ಕಳುಹಿಸುವುದರಿಂದ ನಿಮ್ಮ ಮಾತನ್ನು ಆಲಿಸುವವರಿಗೆ ಧ್ವನಿಯಲ್ಲಿ ಸ್ಪಷ್ಟತೆ ಇರುತ್ತದೆ.

ಆಂಡ್ರಾಯ್ಡ್‌ 6.0.1 ಜೊತೆ ಆಕ್ಸಿಜನ್ ಓಎಸ್ ಇದೆ. ಕನ್ನಡದ ಯೂಸರ್ ಇಂಟರ್‌ಫೇಸ್ ಕೂಡ ಇದೆ. ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ಅತ್ಯುತ್ತಮ ಫೋನ್ ಎನ್ನಬಹುದು.

ವಾರದ ಆ್ಯಪ್- ಸೂಪರ್ ಜಾಬ್ಬರ್ ಜಂಪ್
ಗೂಗಲ್ ಪ್ಲೇ ಸ್ಟೋರಿನಲ್ಲಿ ಹೋಗಿ ನೋಡಿದರೆ ಆಂಡ್ರಾಯ್ಡ್‌ ಫೋನ್‌ಗಳಿಗೆ ಬೇಕಾದಷ್ಟು ಆಟಗಳು ದೊರೆಯುತ್ತವೆ. ಕೆಲವು ತುಂಬ ಸರಳ. ಕೆಲವು ಅತಿ ದೊಡ್ಡವು. ಇನ್ನು ಕೆಲವಕ್ಕೆ ತುಂಬ ಶಕ್ತಿಯ ಫೋನ್‌ಗಳೇ ಬೇಕು.

ಹೀಗೆ ಎಲ್ಲ ನಮೂನೆಯ ಆಟಗಳಿವೆ. ಅಂತಹ ಕ್ಲಿಷ್ಟವಲ್ಲದ ಒಂದು ಆಟ ಬೇಕಿದ್ದಲ್ಲಿ ಗೂಗಲ್‌ ಪ್ಲೇ ಸ್ಟೋರಿಗೆ ಹೋಗಿ  Super Jabber Jump ಎಂದು ಹುಡುಕಿ.

ಅಥವಾ bit.ly/gadgetloka233 ಕೊಂಡಿಯ ಮೂಲಕವೂ ಪಡೆಯಬಹುದು. ಇದು ಒಂದು ಸರಳ ಆಟ. ಇದರಲ್ಲಿ ಎಲ್ಲ ಆಟಗಳಂತೆ ಹಲವು ಹಂತಗಳಿವೆ. ಸ್ವಲ್ಪ ಸಮಯ ಆಡಬಹುದಾದ ಆಟ. ಇದನ್ನು ಆಡಲು ತುಂಬ ಶಕ್ತಿಯ ಫೋನ್ ಬೇಕಾಗಿಲ್ಲ.

ಗ್ಯಾಜೆಟ್‌ ಸುದ್ದಿ  -ಗಣಕ ಆಟ ಆಡಲು ಪಾದರಕ್ಷೆ
ಕೈಗಳನ್ನು ಯಾವುದೋ ಕಾರಣಕ್ಕೆ ಕಳೆದುಕೊಂಡವರು ಗಣಕ ಅಥವಾ ವಿಡಿಯೊ ಆಟ ಆಡುವುದು ಹೇಗೆ? ಅವರೂ ಆಡುವಂತಿದ್ದರೆ ಉತ್ತಮವಲ್ಲವೇ? ಅಂತಹವರಿಗಾಗಿ ಈಗ ವಿಶೇಷ ಪಾದರಕ್ಷೆ ಸಿದ್ಧವಾಗಿದೆ.

ಇದನ್ನು ಕಾಲಿಗೆ ಧರಿಸಿ ಗಣಕ ಅಥವಾ ಲ್ಯಾಪ್‌ಟಾಪ್‌ಗೆ ಜೋಡಿಸಬೇಕು. ಈ ಪಾದರಕ್ಷೆಗಳಲ್ಲಿ ಹಲವು ಸಂವೇದಕಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಅಳವಡಿಸಲಾಗಿದೆ. ಪಾದದ ಹಲವು ವಿಧದ ಚಲನೆ, ಒತ್ತುವಿಕೆ, ಬೆರಳುಗಳ ಮೂಲಕ ಆಜ್ಞೆ, ಹೀಗೆ ಸುಮಾರು 20 ವಿಧದಲ್ಲಿ ಆಟಗಳಿಗೆ ಸಂಕೇತ ಕಳುಹಿಸಬಹುದಾಗಿದೆ. ಈ ಪಾದರಕ್ಷೆ ವಿನ್ಯಾಸಕ್ಕೆ 2016ರ ಇಂಟೆಲ್-ಕಾರ್ನೆಲ್ ಪ್ರಶಸ್ತಿ ದೊರಕಿದೆ.

ಕೈ ಕಳೆದುಕೊಂಡವರು ಮಾನಸಿಕ ಖಿನ್ನತೆಯಿಂದ ಹೊರಬರಲು ಆಟ ಆಡುವ ಮೂಲಕ ಸಾಧ್ಯ ಎಂದು ಕೆಲವು ವೈದ್ಯರ ಅಂಬೋಣ. ಈ ಪಾದರಕ್ಷೆ ಅದಕ್ಕೆ ಸಹಾಯ ಮಾಡುತ್ತದೆ.

ಗ್ಯಾಜೆಟ್‌ ಸಲಹೆ - ಶಶಾಂಕ ದೀಕ್ಷಿತರ ಪ್ರಶ್ನೆ: ನಾನು ಒನ್‌ಪ್ಲಸ್ ಒನ್ ಫೋನನ್ನು ಖರೀದಿಸಬೇಕೆಂದು ಇದ್ದೇನೆ. ಆದರೆ ಈ ಫೋನಿನ ಬ್ಯಾಟರಿ ಸಿಡಿದಿದೆ ಎಂದು ಯಾರೋ ಅಮೆಝಾನ್‌ನಲ್ಲಿ ಬರೆದಿದ್ದಾರೆ. ಫೋಟೊ ಕೂಡ ಹಾಕಿದ್ದಾರೆ. ನಾನು ಈ ಫೋನನ್ನು ಖರೀದಿಸುವುದೋ ಬೇಡವೋ ತಿಳಿಸಿ.

ಉ: ಸಾಮಾನ್ಯವಾಗಿ ಫೋನ್ ಜೊತೆ ಬಂದ ಚಾರ್ಜರ್ ಬದಲಿಗೆ ಯಾವುದೋ ನಕಲಿ ಚಾರ್ಜರ್ ಜೋಡಿಸಿ ಜಾರ್ಜ್ ಮಾಡಿದಾಗ, ಜೊತೆಗೆ ತುಂಬ ಬಿಸಿಯಾಗಿದ್ದಾಗ, ಫೋನ್‌ಗಳು ಸಿಡಿದ ಉದಾಹರಣೆಗಳಿವೆ. ಅಮೆಝಾನ್‌ ಜಾಲತಾಣದಲ್ಲಿ ನೀವು ಹೇಳಿದ ಉದಾಹರಣೆ ಓದಿದೆ.

ಯಾವ ಚಾರ್ಜರ್ ಬಳಸಿದ್ದರು ಎಂಬ ಬಗ್ಗೆ ಅಲ್ಲಿ ಮಾಹಿತಿ ಇರಲಿಲ್ಲ. ಯಾವ ಸಂದರ್ಭದಲ್ಲಿ ಹಾಗೆ ಆಯಿತು ಎಂದೂ ಬರೆದಿಲ್ಲ. ನನ್ನಲ್ಲಿ ಒನ್‌ಪ್ಲಸ್ 1, 2, ಎಕ್ಸ್ ಮತ್ತು ಈಗ 3 ಎಲ್ಲವೂ ಇವೆ. ಎಲ್ಲವೂ ಚೆನ್ನಾಗಿವೆ. ಯಾವ ತೊಂದರೆಯನ್ನೂ ನೀಡಿಲ್ಲ.

ಒನ್‌ಪ್ಲಸ್ 2 ತಂತ್ರಾಂಶ ನವೀಕರಣಗೊಳಿಸಿದಾಗ ತಟಸ್ಥವಾಯಿತು. ಬೆಂಗಳೂರಿನ ಕೋರಮಂಗಲದಲ್ಲಿರುವ ಅವರ ಸೇವಾ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಕೊಟ್ಟಾಗ ಐದೇ ನಿಮಿಷದಲ್ಲಿ ಸರಿ ಮಾಡಿಕೊಟ್ಟರು. ಹಣವನ್ನೂ ತೆಗೆದುಕೊಳ್ಳಲಿಲ್ಲ. ನೀವು ಖಂಡಿತ ಕೊಳ್ಳಬಹುದು.

ಗ್ಯಾಜೆಟ್‌ ತರ್ಲೆ - ಒಬ್ಬಾತ ಗುರುಗಳ ಬಳಿಗೆ ಬಂದು ಹೇಳಿಕೊಂಡ ‘ಗುರುಗಳೇ ರಾತ್ರಿ ಹೊತ್ತು ನನ್ನ ಹೆಂಡತಿ ಹೊದಿಕೆಯೊಳಗಿದ್ದಾಗ ವಿಶೇಷ ಬೆಳಕು ಆಕೆಯ ಮುಖದಿಂದ ಬರುತ್ತಿದೆ. ಇದಕ್ಕೆ ಕಾರಣವೇನಿರಬಹುದು?’

ಅದಕ್ಕೆ ಗುರುಗಳೆಂದರು ‘ಅಯ್ಯೋ ಬೆಪ್ಪೇ. ಆಕೆ ಹೊದಿಕೆಯೊಳಗೆ ನಿನ್ನ ಫೋನನ್ನು ಅಡಗಿಸಿಕೊಂಡು ಅದರಲ್ಲಿರುವ ನಿನ್ನ ವಾಟ್ಸ್‌ಆಪ್ ಮತ್ತು ಎಸ್‌ಎಂಎಸ್ ಸಂದೇಶಗಳನ್ನು ಓದುತ್ತಿದ್ದಾಳೆ’ (ವಾಟ್ಸ್‌ಆ್ಯಪ್ ಮತ್ತು ಫೇಸ್‌ಬುಕ್‌ಗಳಲ್ಲಿ ಹರಿದಾಡುತ್ತಿರುವ ಜೋಕು. ಕರ್ತೃ ಗೊತ್ತಿಲ್ಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT