ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲಾಸ್ಕ, ನಿನಗೆ ನಮಸ್ಕಾರ!

Last Updated 8 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನನ್ನ ಗ್ರಹಿಕೆಯ ಅಲಾಸ್ಕ ಕೊನೆಯ ಭಾಗ (13)

ಆ ಶ್ವಾನರಥವು ಗಂಟೆಗೆ ಮೂವತ್ತು ಕಿಲೋಮೀಟರ್ ವೇಗದಲ್ಲಿ ಓಡುತ್ತಿತ್ತು. ಬೊಗಳುವಿಕೆ ಮತ್ತು ಏದುಸಿರು ಬೆರೆತ ವಿಚಿತ್ರ ಶಬ್ದವನ್ನು ಹೊರಡಿಸುತ್ತಾ ನಾಯಿಗಳು ರಥವನ್ನೆಳೆದುಕೊಂಡು ಎಲ್ಲೋ ತುರ್ತು ಕೆಲಸವಿರುವಂತೆ ಓಡುತ್ತಿದ್ದವು. ಅಲಾಸ್ಕಗೆ ಹೋದವರು ಶ್ವಾನರಥವನ್ನೇರುವುದು ಸಾಮಾನ್ಯ. ಪ್ರೇಕ್ಷಕರಿಗೆ ಅದು ಮೋಜಿನ ಸವಾರಿ. ಆದರೆ ಅಲಾಸ್ಕ ಸಂಸ್ಕೃತಿಯಲ್ಲಿ Dog Sledding ಎನ್ನುವುದಕ್ಕೆ ಮಹತ್ವದ ಸ್ಥಾನವಿದೆ. ಮನುಷ್ಯರ ಹೆಜ್ಜೆ ಗುರುತು ಇನ್ನೂ ಸೋಕಿರದ ಅನೇಕ ಜಾಗಗಳು ಅಲ್ಲಿವೆ. ಅಲ್ಲಿಗೆ ಬಸ್ಸು ರೈಲು ಹೋಗಲಾರವು. ದ್ವಿಚಕ್ರವಾಹನಗಳು ಮುಟ್ಟಲಾರವು. ಹೆಲಿಕಾಪ್ಟರ್ ಇಳಿಯಲಾರದು. ಅಂಥ ಕಡೆಗೆ ನಾಯಿಗಳೇ ದಿಕ್ಕು.

ಶ್ವಾನರಥವೆಂಬುದು ಇಲ್ಲಿ ಕ್ರೀಡೆಯೂ ಹೌದು. ನಿರ್ದಿಷ್ಟ ಋತುಮಾನದಲ್ಲಿ ಮತ್ತು ಜಾಗಗಳಲ್ಲಿ ನಡೆಯುವ ಈ ರೇಸಿನಲ್ಲಿ ನಾಯಿಗಳು ಐವತ್ತು ಸಾವಿರ ಡಾಲರ್‌ಗಳವರೆಗೆ ಬಹುಮಾನ ಗೆಲ್ಲುತ್ತವೆ. ರೇಸ್‌ಗೆ ಕುದುರೆಗಳನ್ನು ಸಾಕಿದಂತೆ ಅವರು ನಾಯಿಗಳನ್ನು ಸಾಕಿ ತರಬೇತಿ ಕೊಡುತ್ತಾರೆ. ಸಂಶೋಧಕರು, ಜನಸಾಮಾನ್ಯರು ಮಾತ್ರವಲ್ಲ ಸಾಕ್ಷ್ಯಚಿತ್ರ ನಿರ್ಮಿಸುವವರೂ ತಮ್ಮ ಸಲಕರಣೆಗಳನ್ನು ಹೇರಿಕೊಂಡು ಈ ರಥಗಳನ್ನೇರುತ್ತಾರೆ. ಆದರೆ ನಾಯಿಗಳು ಇದಕ್ಕೆ ಎಕ್ಸ್‌ಟ್ರಾ ಬಾಟಾ ಕೇಳುವುದಿಲ್ಲ. ಹಿಮದ ಹೊಲಗಳ ಮೇಲೆ ಶ್ವಾನರಥಗಳು ಓಡುವ ಚಿತ್ರ ಅಲ್ಲಿ ಸಾಮಾನ್ಯ. ತನ್ನ ಭೌಗೋಳಿಕತೆಗನುಗುಣವಾಗಿ ಮನುಷ್ಯ ಆಯಾ ಪರಿಸರದ ಪ್ರಾಣಿಗಳನ್ನೇ ಬಳಸಿಕೊಳ್ಳುತ್ತಾನೆ. ನಾವು ಆನೆ, ಕುದುರೆಗಳನ್ನು ಬಳಸಿಕೊಂಡಂತೆ, ಮರುಭೂಮಿಗಳಲ್ಲಿ ಒಂಟೆಯು ಬಳಕೆಯಾದಂತೆ ಇಲ್ಲಿ ನಾಯಿಗಳ ಪಾಡು. ಶೋಷಣೆ, ಪ್ರಾಣಿಹಿಂಸೆ ಎಂಬ ಮಾತುಗಳನ್ನು ಯಾರೂ ಕೇಳಿಸಿಕೊಳ್ಳುವುದಿಲ್ಲ.

ನಮ್ಮ ಶ್ವಾನರಥಿಕ ಕೆಲವು ಸ್ವಾರಸ್ಯಕರ ವಿಚಾರಗಳನ್ನು ಹೇಳಿದ. ರಥಕ್ಕೆ ಹೂಡುವಾಗ ತನ್ನ ಪಕ್ಕದಲ್ಲಿ ಹೆಣ್ಣುನಾಯಿಯನ್ನು ಇರಿಸಲು ಗಂಡುನಾಯಿ ಒಪ್ಪುವುದಿಲ್ಲವಂತೆ. ಆದರೆ ಹೆಣ್ಣುನಾಯಿ, ಗಂಡುನಾಯಿಯ ಪಕ್ಕದಲ್ಲಿ ಇರಲು ಬಹಳ ಇಷ್ಟಪಡುತ್ತದಂತೆ. ಪ್ರಾಣಿಗಳಲ್ಲೂ ಲಿಂಗಭೇದನೀತಿ ಇರುವಂತಿದೆ. ತನ್ನ ಪಕ್ಕದಲ್ಲಿ ಹೆಣ್ಣುನಾಯಿ ಇದ್ದರೆ ಅದು ತನ್ನಷ್ಟು ಜೋರಾಗಿ ಓಡುವುದಿಲ್ಲ; ಬದಲಾಗಿ ಮನಸ್ಸನ್ನು ಚಂಚಲಗೊಳಿಸುತ್ತದೆ ಎಂಬುದು ಗಂಡುನಾಯಿಯ ದೂರು. ಈ ದೂರನ್ನು ಅದು ಹೇಗೆ, ಯಾವ ರೂಪದಲ್ಲಿ ಸಲ್ಲಿಸಿತ್ತೋ ಅರಿಯೆ. ಆದರೆ ಗಂಡುನಾಯಿಯ ಜತೆಯಲ್ಲಿ ಓಡಿ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಬೇಕೆಂಬುದು ಹೆಣ್ಣುನಾಯಿಯ ಛಲ.

ನಮ್ಮ ಗಾಡಿ ಹೊರಡುವ ಮುನ್ನ ಗಂಡುನಾಯಿ ಬಹಳ ತಕರಾರು ತೆಗೆಯಿತು. ಹೆಣ್ಣುನಾಯಿ ಅವಮಾನದಿಂದ ಕುಯ್ಞ್‌ಗುಟ್ಟುತ್ತಾ ಮತ್ತೊಂದು ಹೆಣ್ಣುನಾಯಿಯ ಬದಿಗೆ ಹೋಗಿ ಒಲ್ಲದ ಮನಸ್ಸಿನಿಂದ ನಿಂತುಕೊಂಡಿತು. ಇನ್ನೊಂದು ಸ್ವಾರಸ್ಯಕರ ಸಂಗತಿಗಳೆಂದರೆ ದಪ್ಪಗಿರುವ ನಾಯಿಗಳಿಗಿಂತ ಸಣಕಲು ನಾಯಿಗಳೇ ಹೆಚ್ಚು ಬಲಶಾಲಿಗಳಂತೆ. ಅವುಗಳಿಗೆ ನಾಯಕತ್ವಗುಣವಿದೆಯಂತೆ. ಮೈಬೆಳೆಸಿಕೊಂಡ ನಾಯಿಗಳು ಸೋಂಬೇರಿಗಳಂತೆ. ನಾಯಿಗಳ ಹಿಂಡಿನಲ್ಲಿ ಮೈಗಳ್ಳತನ ಇರುವವುಗಳನ್ನು ಗುಂಪಿನ ಮಧ್ಯೆ ಕಟ್ಟುತ್ತಾರಂತೆ. ಕುದುರೆಗಳಂತೆ ನಾಯಿಗಳೂ ಸೂಕ್ಷ್ಮಪ್ರಾಣಿಗಳು. ಸನ್ನೆ ಮತ್ತು ಶಬ್ದದಿಂದಲೇ ಸೂಚನೆಗಳನ್ನು ಗ್ರಹಿಸುತ್ತವೆ. ಒಂದು ಸುತ್ತು ಓಡಿಬಂದ ಕೂಡಲೇ ಅವಕ್ಕೆ ಊಟ, ಉಪಚಾರ, ಚಿಕಿತ್ಸೆ ಎಲ್ಲಾ ಉಂಟು. ಅಲಾಸ್ಕದಲ್ಲಿ ಮುದ್ದಾದ ಗೂಬೆಗಳೂ, ಲಕ್ಷಣವಾದ ನಾಯಿಗಳೂ ಇವೆ. ಇನ್ನಾದರೂ ಮನುಷ್ಯರಿಗೆ ಗೂಬೆ, ನಾಯಿ ಎಂದು ಬೈಯ್ಯುವುದನ್ನು ಬಿಟ್ಟುಬಿಡಬೇಕು ಎಂದು ತೀರ್ಮಾನಿಸಿದೆ.

ನಮ್ಮ ಹಡಗಿನ ಕೊನೆಯ ನಿಲ್ದಾಣ ವೈಟಿಯರ್. ಆ ಊರು ನನಗೆ ಇಷ್ಟವಾಗಲು ಕಾರಣ ಅಲ್ಲಿನ ಜನಸಂಖ್ಯೆ ಬರೀ ಇನ್ನೂರು. ನಮ್ಮ ನಾಗತಿಹಳ್ಳಿಯಲ್ಲಿ ಕೂಡಾ ಎರಡು ಸಾವಿರ ಜನರಿದ್ದಾರೆ. ಅಲ್ಲಿಂದ ಆಂಕ್ರೆಜ್‌ಗೆ ಬಸ್ಸಿನಲ್ಲಿ ಹೊರಟೆ. ಅದು ಅರವತ್ತು ಮೈಲಿ ದೂರವಿದ್ದರೆ, ದಾರಿಯಲ್ಲಿ ಅರವತ್ತು ಗ್ಲೇಸಿಯರ್‌ಗಳೂ ಇವೆ. ಮೈಲಿಗೊಂದು ಮೋಹಕ ಗ್ಲೇಸಿಯರ್. ಈ ದಾರಿಯಲ್ಲಿ ಎರಡೂವರೆ ಮೈಲು ಉದ್ದದ, ಒಂದೇ ಸುರಂಗದಲ್ಲಿ ಬಸ್ಸೂ, ರೈಲೂ ಚಲಿಸುವ ಮಾರ್ಗ ಒಂದಿದೆ. ಸ್ಕಾಗ್‌ವೇನ ವೈಟ್‌ಪಾಸ್ ರೈಲಿನ ಯಾನ ಒಂದು ರೋಚಕತೆಯನ್ನು ಸೃಷ್ಟಿಸಿದರೆ, ಈ ಹಾದಿ ಮತ್ತೊಂದು ಬಗೆಯ ಮೋಹಕತೆಯನ್ನು ತಂದುಕೊಡುತ್ತದೆ. ಎಲ್ಲಿ ಕಾಣಿಸದಿದ್ದರೂ ಈ ಹಾದಿಯಲ್ಲಿ ಮುದ್ದಾದ ಬಿಳಿ ಕರಡಿಗಳು ಕಂಡೇ ಕಾಣುತ್ತವೆ. ಈ ಪೋಲಾರ್ ಬೇರ್‌ಗಳನ್ನು ಕಾಣದೆ ಬಂದರೆ ಅಲಾಸ್ಕ ಯಾತ್ರೆ ಅಪೂರ್ಣ.

ಹಿಮದ ಗುಹೆಯಲ್ಲಿ ಸಂಸಾರ ಸಮೇತ ಬದುಕಿದ್ದ ಬಿಳಿಕರಡಿಯ ಸಮೂಹವೊಂದು ವೈಟಿಯರ್ ದಾಟುತ್ತಿದ್ದಂತೆ ಎದುರಾಯಿತು. ಹೀಗೆ ಪ್ರಕೃತಿಯಲ್ಲಿ ಸಹಜವಾಗಿ ಪೋಲಾರ್ ಬೇರ್‌ಗಳನ್ನು ಕಾಣುವ ಅವಕಾಶವಿಲ್ಲದವರಿಗಾಗಿ ಆಂಕ್ರೆಜ್‌ನಲ್ಲಿರುವ ಜೂನಲ್ಲಿ ಅವುಗಳನ್ನು ಇರಿಸಲಾಗಿದೆ. ನಾನು ಅಲ್ಲಿಗೆ ಹೋದ ದಿನ ಶಾಲಾಮಗುವೊಂದು ಅಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿತ್ತು. ಆ ಮೃಗಾಲಯದಲ್ಲಿ ವಯಸ್ಸಾದ ಮತ್ತು ಗಾಯಗೊಂಡ ಪ್ರಾಣಿಗಳನ್ನೂ ಆರೈಕೆ ಮಾಡಲಾಗುತ್ತಿತ್ತು. ಈ ಪ್ರಾಣಿ ಪ್ರೀತಿಯು, ಮನುಷ್ಯರೂ ಪ್ರಾಣಿಗಳೂ ಒಂದೇ ಎಂಬ ಸಮಾನ ಭಾವದಿಂದ ಹುಟ್ಟಿದುದೋ ಅಥವಾ ಮನುಷ್ಯರ ಕೃತಘ್ನತೆ ಮತ್ತು ಸಣ್ಣತನಗಳಿಂದ ಬೇಸತ್ತು, ಪ್ರಾಣಿಗಳೇ ವಾಸಿ ಎಂಬ ತರತಮಜ್ಞಾನದಿಂದ ಹುಟ್ಟಿದುದೋ ಹೇಳಲಾಗದು. ಅದಿರಲಿ, ಅಲಾಸ್ಕದ ವಿವಿಧ ಬುಡಕಟ್ಟುಗಳು ಸಂಗೀತ, ನೃತ್ಯದ ಪಿತಾಮಹರು. ಅವರು ನಾಗರಿಕ ಪ್ರಪಂಚವನ್ನು ಎದುರಿಸುವ ಮುನ್ನವೇ ಅವರದೇ ಆದ ಸಂಗೀತ ನೃತ್ಯದ ಅಭಿವ್ಯಕ್ತಿಗಳು ಇದ್ದುವು.

ಹಿಮದ ಬೆಟ್ಟಲಿನ ತಪ್ಪಲು, ಮೀನುಗಾರಿಕೆ, ಕಾಡಿನೊಂದಿಗೆ ಓಡಾಟ, ಅತಿ ಶೀತ, ಅಪರೂಪದ ಸೂರ್ಯನ ಬೆಳಕು, ನಾಯಿ ಸವಾರಿ ಮುಂತಾದವುಗಳು ಈ ಅಭಿವ್ಯಕ್ತಿಗೆ ಪ್ರೇರಕವಾಗಿದ್ದುವು. ಚರ್ಚು, ಪಾದ್ರಿಗಳು ಮತ್ತು ನಾಗರೀಕತೆ ಪ್ರವೇಶಿಸಿದ ಮೇಲೆ ಎಲ್ಲ ಅಭಿವ್ಯಕ್ತಿ ಪ್ರಕಾರಗಳು ಬದಲಾದವು. ನನ್ನ ಮೊದಲ ಅಲಾಸ್ಕ ಭೇಟಿಯಲ್ಲಿ ಫೇರ್‌ಬ್ಯಾಂಕ್ಸ್ ಎಂಬ ಊರಿನಲ್ಲಿ ಅಲಾಸ್ಕದ ಸಂಗೀತ ಕೇಳುವ ಅವಕಾಶ ಒದಗಿತ್ತು. ಅದು Song of the Salmon ಎಂಬ ಗೀತೆ. ಕನ್ನಡದಲ್ಲಿ ಮತ್ಸ್ಯಗೀತೆ ಅನ್ನಬಹುದೇನೋ. ಮೀನು ಹಿಡಿಯುವ ಖುಷಿ, ಅತಿಥಿ ಸತ್ಕಾರ, ಔತಣದ ಸೊಬಗು ಇತ್ಯಾದಿಗಳನ್ನು ಈ ಗೀತೆ ಪ್ರಾಸಬದ್ಧವಾಗಿ ವಿವರಿಸುತ್ತದೆ. ಇದು ಅಲಾಸ್ಕದ ದೇಶೀಯ ಸಂಗೀತವಲ್ಲ, ಪರಿಷ್ಕೃತ ಸಂಗೀತ.
*
ಇದೆಂಥ ವಿದಾಯ? ಕೈ ಬೀಸಲು ಒಬ್ಬರೂ ಇಲ್ಲ. ನನಗೆ ನಾನೇ ಹೇಳಿಕೊಳ್ಳಬೇಕಾದ ವಿದಾಯ. ಒಂದು ರೀತಿಯಲ್ಲಿ ರಂಗಣ್ಣನನ್ನು ಬಿಟ್ಟು ಒಬ್ಬನೇ ಬಂದಿದ್ದು ಒಳ್ಳೆಯದೇ ಆಯಿತು. ಅವರು ಜೊತೆಗಿದ್ದರೆ ಅನುಭವಗಳು ಬೇರೆಯೇ ಆಗಿರುತ್ತಿದ್ದುವೇನೋ. ಕ್ಯಾಬಿನ್‌ನಲ್ಲಿ ಚಕ್ಕಂಬಕ್ಕಳೆ ಹಾಕಿ ಕೆಲ ಹೊತ್ತು ಪದ್ಮಾಸನದಲ್ಲಿ ಕುಳಿತೆ. ಇದುವರೆಗೆ ಕಟ್ಟಿಕೊಂಡಿದ್ದ ಸ್ವರ್ಗಸೀಮೆಯ ಪ್ರಪಂಚವೇ ಬೇರೆ. ಊರು ಸೇರಿದ ಮೇಲೆ ಇದಿರ್ಗೊಳ್ಳುವ ವಾಸ್ತವ ಪ್ರಪಂಚವೇ ಬೇರೆ. ಕಾದಂಬರಿ ಮುಗಿದಿತ್ತು. ತನ್ನ ಪ್ರಿಯತಮೆಯನ್ನು ನೀಗಿಕೊಂಡ ನಾಯಕ ಅವಳ ನೆನಪಿಗಾಗಿ ಮ್ಯೂಸಿಯಂ ನಿರ್ಮಿಸಲು ಜಗತ್ತನ್ನು ಸುತ್ತಲು ಹೊರಟಿದ್ದ. ಪ್ರತಿ ಪ್ರವಾಸದ ಅಂತ್ಯದಲ್ಲಿ ಏನಾದರೊಂದು ದೌರ್ಬಲ್ಯವನ್ನು ಅವಗುಣವನ್ನು ಬಿಟ್ಟು ಬರಬೇಕೆಂಬುದು ಪ್ರತೀತಿ. ಅಲಾಸ್ಕದಲ್ಲಿ ನಾನು ಬಿಟ್ಟು ಬಂದದ್ದು ಧಾವಂತ. ಏದುಬ್ಬಸಪಡುತ್ತಾ ಅದೇನನ್ನೋ ಹಿಡಿಯಹೋಗುವ ಚಡಪಡಿಕೆ. ಇದುವರೆಗಿನ ದೈತ್ಯ ವೇಗ ಇನ್ನು ಕೂಡದು. ಒಂದು ಸಾವಕಾಶ, ಸಾವಧಾನ ಸ್ಥಿತಿಗೆ ಒಗ್ಗಿಕೊಳ್ಳುವುದು. ಇದರಿಂದ ಸ್ಪರ್ಧೆಯೂ, ವೈರವೂ ಕಡಿಮೆಯಾಗುತ್ತದೆ. ನೀನೇ ಮುಂದೆ ಹೋಗಪ್ಪ, ನಾನು ಆಮೇಲೆ ಬರ್ತೀನಿ ಎಂದು ದಾರಿ ಬಿಟ್ಟುಕೊಡುವ ಮನಸ್ಥಿತಿ ಅದು. ಅದನ್ನು ಪ್ರಜ್ಞಾಪೂರ್ವಕವಾಗಿ ತಂದುಕೊಂಡೆ. ಸೌಂದರ್ಯ ಮತ್ತು ಸಾವಧಾನವನ್ನು ತನ್ನ ಪ್ರಧಾನ ಲಕ್ಷಣವಾಗಿಸಿಕೊಂಡಿರುವ ಅಲಾಸ್ಕಗೆ ಇದು ನಾನು ತೋರಬಹುದಾದ ಗೌರವ ಅನ್ನಿಸಿತು.

ಪ್ರವಾಸ ಕಥನಗಳಿಗೆ ಆದಿ ಅಂತ್ಯಗಳಿರುವುದಿಲ್ಲ. ಕಾರಣ ನಮ್ಮ ಮರುಭೇಟಿಗಳಲ್ಲಿ, ಅದೇ ಭೂಮಿ ಬೇರೆ ಬಗೆಯಲ್ಲಿ ಅವತರಿಸುತ್ತದೆ. ಈ ದಿನಗಳಲ್ಲಂತೂ ಬದಲಾವಣೆ ಎಂಬುದು ಮನುಷ್ಯರಿಗೆ ಮಾತ್ರ ಸೀಮಿತವಲ್ಲ. ಭೂಮಿ, ಕಾಡು, ನದಿ, ಪರ್ವತ, ಪಟ್ಟಣಗಳಿಗೂ ಅನ್ವಯವಾಗುತ್ತದೆ. ಈ ಮುಂಚೆ ಶತಮಾನಕ್ಕೆ, ದಶಮಾನಕ್ಕೆ ಎಂಬಂತಾಗುತ್ತಿದ್ದ ಬದಲಾವಣೆಗಳು ಈಗ ಕ್ಷಣಕ್ಕೆ ಇಳಿದಿವೆ. ಆದರೂ ವರ್ತಮಾನದ ಸತ್ಯಗಳ ಜೊತೆಗೇ ನಿನ್ನೆಯ ಮತ್ತು ನಾಳಿನ ಸತ್ಯಗಳನ್ನು ಪ್ರವಾಸ ಕಥನಕಾರ ಗ್ರಹಿಸಬೇಕಾಗುತ್ತದೆ. ನನ್ನ ಗ್ರಹಿಕೆಗೆ ಸಿಕ್ಕಿದ ಎಲ್ಲವುಗಳನ್ನೂ -ಅವು ಮೌಲಿಕ ಎನಿಸಿದರೂ -ಇಲ್ಲಿ ದಾಖಲಿಸಿಲ್ಲ. ಕಾರಣ ಅಂಕಣ ಓದುವವರಿಗೆ ಸಹಜವಾಗಿ ಇರುವ ಮನಸ್ಥಿತಿ ಎಂದರೆ ಅಂದಂದಿನ ವರ್ತಮಾನದ ವಿವರಗಳಿಗೆ ಸ್ಪಂದಿಸುತ್ತಾ ಹೋಗುವುದು. ಆದರೆ ಪ್ರವಾಸ ಕಥನಗಳನ್ನು ಕಂತಿನಲ್ಲಿ ಓದಬೇಕಾದಾಗ ಒಂದು ಬಗೆಯ ಸಾತತ್ಯ ಅನಿವಾರ್ಯ. ನೆನಪುಗಳು ಭಾವಕೋಶವನ್ನು ಭರ್ತಿ ಮಾಡುತ್ತವೆ. ಎಷ್ಟು ಆಸ್ವಾದ್ಯವಾದ ನೆನಪು ಕೂಡಾ ವಾರದಿಂದ ವಾರಕ್ಕೆ ಭಾರವಾಗುವ ಆತಂಕವಿರುತ್ತದೆ. ಒಂದೆರಡು ಬಿಡುವಿನಲ್ಲಿ ಇಡೀ ಪುಸ್ತಕ ಓದಿದಂತಲ್ಲ. ಇಷ್ಟಾದರೂ ಪ್ರತಿ ಕಂತನ್ನು ಓದಿ ಪ್ರತಿಕ್ರಿಯಿಸುತ್ತಾ ಬಂದ ಅನೇಕ ಓದುಗರಿಗೆ ನಾನು ಋಣಿಯಾಗಿದ್ದೇನೆ. ಇನ್ನಷ್ಟು ವಿಸ್ತೃತವಾಗಿ ಪುಸ್ತಕ ರೂಪದಲ್ಲಿ ನನ್ನ ಗ್ರಹಿಕೆಯ ಅಲಾಸ್ಕ ಪುಸ್ತಕವು ಹೊರಬರಲಿದೆ. ಅದರೊಂದಿಗೆ ನಾನೇ ಚಿತ್ರಿಸಿದ ಡಿವಿಡಿಯನ್ನೂ ನೀಡಬೇಕೆಂದುಕೊಂಡಿದ್ದೇನೆ.

ಕಾರಣ ಅಲಾಸ್ಕ ಎಂದರೆ ದೃಶ್ಯಕಾವ್ಯ. ಓದುವುದರಲ್ಲಿ ಕ್ರಮೇಣ ಆಸಕ್ತಿ ಕಳೆದುಕೊಳ್ಳುತ್ತಾ, ನೋಡುವುದರಲ್ಲಿ ಮಾತ್ರ ನಂಬಿಕೆ ಉಳಿಸಿಕೊಂಡ ಮನಸ್ಸುಗಳು ಈಗ ಹೆಚ್ಚಾಗುತ್ತಿವೆ. ನೋಡಿದ ನಂತರ ಓದುವಂತಾಗಲೆಂದು ಈ ಏರ್ಪಾಟು. ನಾನು ಕಂಡ ಆಕಾಶವನ್ನು ಇತರರಿಗೂ ತೋರಬೇಕೆಂಬ ನನ್ನ ಹುಚ್ಚಿಗೆ ಕ್ಷಮೆ ಇರಲಿ. ಪ್ರತಿ ಯಾತ್ರೆಯನ್ನು ಮುಗಿಸಿದಾಗ ಆಗುವ ಸಾಮಾನ್ಯ ಅನುಭವವೆಂದರೆ, ಇಂಥ ಅನುಭವ ಶ್ರೀಮಂತಿಕೆಯನ್ನು ತುಂಬಿಕೊಳ್ಳದಿದ್ದರೆ ನಾನೆಷ್ಟು ಬಡವನಾಗುತ್ತಿದ್ದೆ ಎಂಬ ಹಳಹಳಿಕೆ. ಯಾತ್ರೆ ಮುಗಿಸಿ ಹಡಗಿನಿಂದ ಇಳಿಯುವಾಗ ಇದೇ ಭಾವ ತೀವ್ರವಾಗಿತ್ತು. ಈ ದ್ರವ್ಯವನ್ನು ಹಂಚಿಕೊಂಡು ಹಗುರಾಗಿದ್ದೇನೆ. ಮುಂದೊಮ್ಮೆ ಭೇಟಿ ಇತ್ತಾಗ ಅಲಾಸ್ಕ ಕೂಡಾ ಬದಲಾಗಿರಬಹುದು. ಗ್ಲೇಸಿಯರ್‌ಗಳು ಸಾವಕಾಶವಾಗಿ ಕಣ್ಮರೆಯಾಗುತ್ತಾ ಅಪಾರ್ಟ್‌ಮೆಂಟುಗಳು ಮೇಲೆದ್ದಿರಬಹುದು.

ಭೂಮಧ್ಯರೇಖೆಯ ಆಸುಪಾಸಿನ ಜನರು ತಂಪನ್ನು ಹುಡುಕಿ ಧ್ರುವ ಪ್ರದೇಶಗಳಿಗೂ; ಧ್ರುವ ಪ್ರದೇಶದ ಜನರು ಸೂರ್ಯನನ್ನು ಹುಡುಕಿ ಭೂಮಧ್ಯರೇಖೆಯತ್ತಲೂ ವಲಸೆ ಹೋಗುತ್ತಿರುವ ಇಂದಿನ ಪರಿಸ್ಥಿತಿ ಬದಲಾಗಿ, ಯಾರು ಎತ್ತ ಹೋಗಬೇಕೆಂಬ ಜಿಜ್ಞಾಸೆಯಿಂದ ಅಯೋಮಯವಾಗಬಹುದು. ಮಂಗಳ ಗ್ರಹದಲ್ಲಿ ಈಗ ಭಾಳಾ ಸೆಖೆ ಕಣ್ರಿ ಎನ್ನುತ್ತಾ ವಿಮಾನದಿಂದಿಳಿದು ಬೆವರೊರೆಸಿಕೊಳ್ಳುತ್ತಾ ಭೂಮಿಗೆ ಬರುವ ಪ್ರಯಾಣಿಕರು ಕಾಣಸಿಗಬಹುದು. ಸರಿ ತಪ್ಪುಗಳ ವ್ಯಾಖ್ಯಾನ ಮಾಡುವವರಾರು? ಈ ಬದಲಾವಣೆಗಳ ಆತಂಕದ ನಡುವೆ ಅಲಾಸ್ಕದ ಪ್ರಜೆಯೊಬ್ಬನ ದಿಟ್ಟವ್ಯಾಖ್ಯಾನವನ್ನು ನೆನೆಯುತ್ತಾ ಈ ಪ್ರವಾಸ ಕಥನವನ್ನು ಮುಗಿಸುವುದು ಸೂಕ್ತ. ನಾನು ಅವನನ್ನು ಕೇಳಿದೆ. ಈ ಊರಿನಲ್ಲಿ ಭೂಕಂಪ ವಿಪರೀತ. ಇಷ್ಟು ವರ್ಷದಿಂದ ಇಲ್ಲೇ ಜೀವಿಸುವ ನಿನಗೆ ಅದರ ಭಯವಿಲ್ಲವೆ?
ಆತ ಹೇಳಿದ: ಇಲ್ಲ. ಚಿಕಾಗೋ ಅಥವಾ ನ್ಯೂಯಾರ್ಕ್‌ನ ವಿಪರೀತ ಟ್ರಾಫಿಕ್‌ನಲ್ಲಿ ಹೊಗೆ ಕುಡಿಯುತ್ತಾ ಬದುಕಿ, ವಾಹನ ಅಪಘಾತದಲ್ಲಿ ಸಾಯುವುದಕ್ಕಿಂತ, ಅಲಾಸ್ಕದಂಥ ಸುಂದರ ಜಾಗದಲ್ಲಿ ಬದುಕುವುದು ಮತ್ತು ಸಾಯುವುದು ಅರ್ಥಪೂರ್ಣ. ಇಲ್ಲಿ ಹೇಗೆ ಸತ್ತರೂ ಅದಕ್ಕೊಂದು ಘನತೆ ಇರುತ್ತದಲ್ಲವೆ?

(ಅಲಾಸ್ಕ ಯಾತ್ರೆ ಮುಗಿಯಿತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT