ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪ್ಟಿಕಲ್ ಝೂಮ್ ಕ್ಯಾಮೆರಾ ಫೋನ್

Last Updated 17 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಏಸುಸ್ ಕಂಪೆನಿಯ ಹಲವು ಮಾದರಿಯ ಫೋನ್‌ಗಳ ವಿಮರ್ಶೆ ಈ ಅಂಕಣದಲ್ಲಿ ಪ್ರಕಟವಾಗಿತ್ತು. ಈ ಸಲ ನಾವು ವಿಮರ್ಶೆ ಮಾಡುತ್ತಿರುವ ಫೋನ್ ಸ್ವಲ್ಪ ವಿಶೇಷವಾದುದು. ಇದರಲ್ಲಿ 3X ಆಪ್ಟಿಕಲ್ ಝೂಮ್ ಇದೆ. ಹಾಗೆಂದು ಹೇಳಿ ಇದರ ಕ್ಯಾಮೆರಾದ ಲೆನ್ಸ್ ಹೊರಗಡೆ ಚಾಚಿಕೊಂಡಿಲ್ಲ. ಆದ್ದರಿಂದ ಈ ಫೋನ್ ತುಂಬ ದಪ್ಪನಾಗಿಲ್ಲ. ಅದುವೇ ಏಸುಸ್  ಝೆನ್‌ಪೋನ್ ಝೂಮ್ (Asus Zenfone Zoom).

ಗುಣವೈಶಿಷ್ಟ್ಯಗಳು
2.5 ಗಿಗಾಹರ್ಟ್ಸ್ ವೇಗದ 4 ಹೃದಯಗಳ ಇಂಟೆಲ್ ಆಟಂ ಪ್ರೊಸೆಸರ್ (Z3590), 4ಗಿಗಾಬೈಟ್ ಪ್ರಾಥಮಿಕ ಮೆಮೊರಿ, 64 ಅಥವಾ 128 ಗಿಗಾಬೈಟ್ ಮೆಮೊರಿ, 128 ಗಿಗಾಬೈಟ್ ತನಕ ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ, ಯುಎಸ್‌ಬಿ ಓಟಿಜಿ ಸೌಲಭ್ಯ, 2ಜಿ/3ಜಿ/4ಜಿ ಒಂದು ಸಿಮ್, 5.5 ಇಂಚು ಗಾತ್ರದ 1920x1080 ಪಿಕ್ಸೆಲ್ ರೆಸೊಲೂಶನ್‌ನ ಐಪಿಎಸ್ ಸ್ಪರ್ಶಸಂವೇದಿ ಪರದೆ, ಗೊರಿಲ್ಲ-4 ಗಾಜು, 13  ಮೆಗಾಪಿಕ್ಸೆಲ್ ರೆಸೊಲೂಶನ್‌ನ 3X ಆಪ್ಟಿಕಲ್ ಝೂಮ್ ಇರುವ ಪ್ರಾಥಮಿಕ ಮತ್ತು 5 ಮೆಗಾಪಿಕ್ಸೆಲ್‌ನ ಇನ್ನೊಂದು (ಸ್ವಂತೀ) ಕ್ಯಾಮೆರಾಗಳು, ಪ್ರಾಥಮಿಕ ಕ್ಯಾಮೆರಾಕ್ಕೆ ಫ್ಲಾಶ್, 158.9 x 78.84 x 5~11.95 ಮಿ.ಮೀ ಗಾತ್ರ, 185 ಗ್ರಾಂ ತೂಕ, 3000 mAh ಶಕ್ತಿಯ ತೆಗೆಯಲಸಾಧ್ಯವಾದ ಬ್ಯಾಟರಿ, ಎಫ್‌ಎಂ ರೇಡಿಯೊ, ಆಂಡ್ರಾಯ್ಡ್‌ 5.0, ಇತ್ಯಾದಿ. 128 ಗಿಗಾಬೈಟ್ ಮಾದರಿಯ ನಿಗದಿತ ಬೆಲೆ ₹37,999.

ಇದರ ರಚನೆ ಮತ್ತು ವಿನ್ಯಾಸ ಬಹುಮಟ್ಟಿಗೆ ಇತರೆ ಝೆನ್‌ಫೋನ್-2 ಫೋನ್‌ಗಳಂತೆಯೇ ಇದೆ. ಹಿಂಭಾಗ ಬದಿಗಳಲ್ಲಿ ತೆಳ್ಳಗಾಗಿದ್ದು ಮಧ್ಯದಲ್ಲಿ ದಪ್ಪಗಾಗಿದೆ. ಅಂದರೆ ಬಹುಮಟ್ಟಿಗೆ ತಲೆದಿಂಬಿನಂತೆ ಎನ್ನಬಹುದು. ಹಿಂಭಾಗದ ಪ್ಲಾಸ್ಟಿಕ್ ಕವಚ ತೆಗೆಯಬಹುದು. ಆಗ ಮೈಕ್ರೊಸಿಮ್ ಮತ್ತು ಮೈಕ್ರೊಎಸ್‌ಡಿ ಕಾರ್ಡ್‌ಗಳನ್ನು ಹಾಕುವ ಜಾಗ ಕಂಡುಬರುತ್ತದೆ. ಆದರೂ ಬ್ಯಾಟರಿ ಮಾತ್ರ ತೆಗೆಯಲು ಸಾಧ್ಯವಿಲ್ಲ. ಹಿಂದಿನ ಕವಚ ಸ್ವಲ್ಪ ಚರ್ಮದ ಮಾದರಿಯಲ್ಲಿದೆ. ಅಂದರೆ ದೊರಗಾಗಿದೆ. ಇದರಿಂದಾಗಿ ಇದರ ಗಾತ್ರ ದೊಡ್ಡದಿದ್ದರೂ ಕೈಯಿಂದ ಜಾರಿ ಬೀಳುವ ಭಯವಿಲ್ಲ.

ಬಲಭಾಗದಲ್ಲಿ ವಾಲ್ಯೂಮ್ ಮತ್ತು ಆನ್/ಆಫ್ ಬಟನ್‌ಗಳಿವೆ. ಬಲಭಾಗದಲ್ಲಿ ಕೆಳಗಡೆ ಕ್ಯಾಮೆರಾಕ್ಕೆಂದೇ ಪ್ರತ್ಯೇಕ ಬಟನ್‌ಗಳಿವೆ. ಒಂದು ದೊಡ್ಡ ಬಟನ್ ಒತ್ತಿದರೆ ಸ್ಥಿರಚಿತ್ರಣ ಮತ್ತು ಅದರ ಪಕ್ಕ ಇರುವ ಚಿಕ್ಕ ಬಟನ್ ಒತ್ತಿದರೆ ವಿಡಿಯೊ ಚಿತ್ರೀಕರಣ ಮಾಡಬಹುದು. ಮೇಲ್ಗಡೆ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಇದೆ. ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಕಿಂಡಿಯಿದೆ. ಫೋನಿನ ಹಿಂಭಾಗದಲ್ಲಿ ಕ್ಯಾಮೆರಾದ ಲೆನ್ಸ್ ಇರುವ ಜಾಗಕ್ಕೆ 5 ಸೆ.ಮೀ. ಗಾತ್ರದ ಬಳೆಯ ಆಕಾರದ ರಚನೆ ಇದೆ. ಇದು ಫಕ್ಕನೆ ನೋಡುವವರಿಗೆ ನಿಜವಾದ ಕ್ಯಾಮೆರಾವನ್ನೇ ಹಿಡಿದುಕೊಂಡಿರುವಂತೆ ಭಾವನೆ ಮೂಡಿಸುತ್ತದೆ. 

ಈ ಫೋನಿನಲ್ಲಿರುವುದು ಶಕ್ತಿಶಾಲಿಯಾದ ಇಂಟೆಲ್ ಪ್ರೊಸೆಸರ್. ಇದರ ಕೆಲಸದ ವೇಗ ಅತ್ಯುತ್ತಮವಾಗಿದೆ. ಎಲ್ಲ ನಮೂನೆಯ ಆಟಗಳನ್ನು ಆಡುವ ಅನುಭವ, ಅದರಲ್ಲೂ ಅಧಿಕ ಶಕ್ತಿಯನ್ನು ಬೇಡುವ ಮೂರು ಆಯಾಮಗಳ ಆಟ ಆಡುವ ಅನುಭವ ನಿಜಕ್ಕೂ ಚೆನ್ನಾಗಿದೆ. ವಿಡಿಯೊ ವೀಕ್ಷಣೆಯ ಅನುಭವ ಚೆನ್ನಾಗಿದೆ. ಇದು ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೊಗಳನ್ನೂ ಯಾವುದೇ ಅಡೆತಡೆಯಿಲ್ಲದೆ ಪ್ಲೇ ಮಾಡುತ್ತದೆ. ಈ ಫೋನಿನ ಆಡಿಯೊ ಇಂಜಿನ್ ಕೂಡ ಉತ್ತಮವಾಗಿದೆ.

ಫೋನಿನ ಜೊತೆ ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿರುವ ಯಾವುದಾದರೂ ಉತ್ತಮ ಇಯರ್‌ಫೋನ್ ಜೋಡಿಸಿದರೆ ಉತ್ತಮ ಸಂಗೀತ ಆಲಿಸುವ ಅನುಭವ ನಿಮ್ಮದಾಗುವುದು. ಚೆನ್ನಾಗಿರುವ ಆಡಿಯೊ ಇಂಜಿನ್, ಉತ್ತಮ ಗುಣಮಟ್ಟದ ಹೈಡೆಫಿನಿಶನ್ ಪರದೆ, ಶಕ್ತಿಶಾಲಿಯಾದ ಪ್ರೊಸೆಸರ್ ಇವೆಲ್ಲ ಜೊತೆಗೂಡಿ ನಿಮಗೆ ಉತ್ತಮ ಅನುಭವ ನೀಡುತ್ತವೆ.

ಇದನ್ನು ಫೋನ್ ಎನ್ನುವುದಕ್ಕಿಂತ ಝೂಮ್ ಸೌಲಭ್ಯವಿರುವ ಕ್ಯಾಮೆರಾ, ಜೊತೆಗೆ ಉಚಿತ ಫೋನ್ ಎಂದೇ ಹೇಳಬಹುದು. ಈ ಕ್ಯಾಮೆರಾದಲ್ಲಿ ವಿಶೇಷ 10 ಅಂಗಗಳಿರುವ ಲೆನ್ಸ್‌ ಇದೆ. ಈ ಲೆನ್ಸ್‌ಗಳು ಚಲಿಸಿ ನಿಜವಾದ ಕ್ಯಾಮೆರಾದಂತೆ ಆಪ್ಟಿಕಲ್ ಝೂಮ್ ಮಾಡುತ್ತವೆ. ಆಪ್ಟಿಕಲ್ ಝೂಮ್ ಮಾಡಬೇಕಾದರೆ ಲೆನ್ಸ್ ಚಲಿಸಬೇಕು.

ಸ್ಯಾಮ್ಸಂಗ್‌ನವರೂ ಒಂದು ಆಪ್ಟಿಕಲ್ ಝೂಮ್ ಕ್ಯಾಮೆರಾ ಇರುವ ಫೋನ್ ತಯಾರಿಸಿದ್ದರು. ಆದರೆ ಅದರಲ್ಲಿ ಲೆನ್ಸ್ ತುಂಬ ಹೊರಗಡೆ ಬರುತ್ತಿತ್ತು. ಈ ಏಸುಸ್ ಝೂಮ್ ಫೋನ್ (ಅಲ್ಲ, ಕ್ಯಾಮೆರಾ) ಈ ಸಮಸ್ಯೆಯನ್ನು ಪೆರಿಸ್ಕೋಪ್ ತಂತ್ರಜ್ಞಾನವನ್ನು ಬಳಸಿ ಪರಿಹರಿಸಿದೆ. ಅಂದರೆ ಕ್ಯಾಮೆರಾದ ಒಳಗೆ ಲೆನ್ಸ್ ಕ್ಯಾಮೆರಾದ ದೇಹಕ್ಕೆ ಸಮಾನಾಂತರವಾಗಿ ಚಲಿಸುತ್ತದೆ.

ಲೆನ್ಸ್‌ ಕ್ಯಾಮೆರಾದಿಂದ ಹೊರಕ್ಕೆ ಬರುವುದಿಲ್ಲ. ಆಪ್ಟಿಕಲ್ ಝೂಮ್ ಮಾಡುತ್ತಿದ್ದೇವೆ ಎಂದು ನೋಡುವವರಿಗೆ ಗೊತ್ತಾಗುವುದಿಲ್ಲ. ಇನ್ನೂ ಒಂದು ಸವಲತ್ತೆಂದರೆ ಈ ಕ್ಯಾಮೆರಾಕ್ಕೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೆಶನ್ ಇದೆ. ಅಂದರೆ ಫೋಟೊ ತೆಗೆಯುವಾಗ ಕೈ ಸ್ವಲ್ಪ ಅಲುಗಾಡಿದರೂ ಚಿತ್ರ ಸ್ಫುಟವಾಗಿ ಮೂಡಿಬರುತ್ತದೆ.

ಕ್ಯಾಮೆರಾದ ಕಿರುತಂತ್ರಾಂಶದಲ್ಲಿ ಹಲವು ನಮೂನೆ ಆಯ್ಕೆಗಳಿವೆ. ಬಹುತೇಕ ಎಲ್ಲ ಏಸುಸ್ ಝೆನ್‌ಫೋನ್‌ಗಳಲ್ಲಿ ಇದೇ ಕ್ಯಾಮೆರಾ ತಂತ್ರಾಂಶ ಇದೆ. ಮ್ಯಾನ್ಯುವಲ್ ವಿಧಾನ ಕೂಡ ಇದೆ. ಅವುಗಳ ಬಗ್ಗೆ ಇದೇ ಅಂಕಣದಲ್ಲಿ ಬರೆಯಲಾಗಿದೆ. ಸ್ಥಿರ ಚಿತ್ರ, ವಿಡಿಯೊ ಚಿತ್ರೀಕರಣ, ಹಲವು ನಮೂನೆಯಲ್ಲಿ ಫೋಟೊಗ್ರಫಿ ನೀಡುವ ಹಣಕ್ಕೆ ತೃಪ್ತಿದಾಯಕವಾಗಿವೆ.

ಒಂದು ಉತ್ತಮ ಫೋನ್ ಮತ್ತು ಒಂದು ಮಟ್ಟಿಗೆ ಉತ್ತಮ ಎನ್ನಬಹುದಾದ ಕ್ಯಾಮೆರಾ ಎರಡೂ ಒಂದರಲ್ಲೇ ಅಡಕವಾಗಿದೆ ಎನ್ನಬಹುದು. ಪ್ರಯಾಣ ಹೋಗುವಾಗ ಈ ಫೋನ್ (ಅಲ್ಲ, ಕ್ಯಾಮೆರಾ) ಜೊತೆ ತೆಗೆದುಕೊಂಡು ಹೋದರೆ ಸಾಕು. ಪ್ರತ್ಯೇಕ ಕ್ಯಾಮೆರಾ ಬೇಕಾಗಿಲ್ಲ.

ಆಂಡ್ರಾಯ್ಡ್‌ 5.0 ಆಧಾರಿತ ಫೋನ್ ಆಗಿರುವುದರಿಂದ ಕನ್ನಡದ ತೋರುವಿಕೆ (ರೆಂಡರಿಂಗ್) ಸರಿಯಾಗಿದೆ. ಅಷ್ಟು ಮಾತ್ರವಲ್ಲ. ಈ ಫೋನಿನಲ್ಲಿ ಕನ್ನಡದ ಸಂಪೂರ್ಣ ಯೂಸರ್ ಇಂಟರ್‌ಫೇಸ್ ಕೂಡ ಇದೆ. ಜೊತೆಗೆ ಅವರದೇ ಕೀಲಿಮಣೆಯೂ ಇದೆ. 

ವಾರದ ಆ್ಯಪ್
ವಿಳಾಸ ಪುಸ್ತಕ

ನಿಮ್ಮ ಆಂಡ್ರಾಯ್ಡ್‌ ಫೋನಿನಲ್ಲೇ ಅಡಕವಾಗಿರುವ ವಿಳಾಸ ಪುಸ್ತಕದಲ್ಲಿ ಹಲವು ಸವಲತ್ತುಗಳು ಇಲ್ಲ ಎಂದು ನಿಮಗೆ ಹಲವು ಸಲ ಅನ್ನಿಸಿರಬಹುದು. ಗೂಗಲ್‌ ಪ್ಲೇ ಸ್ಟೋರಿನಲ್ಲಿ ಹುಡುಕಿದರೆ ಇಂತಹ ಹಲವಾರು ಕಿರುತಂತ್ರಾಂಶಗಳು ದೊರೆಯುತ್ತವೆ. ಅಂಥವುಗಳಲ್ಲಿ ಒಂದು Contacts+. ಫೋನ್ ಮತ್ತು ಇತರೆ ವಿವರಗಳನ್ನು ದಾಖಲಿಸಿಟ್ಟುಕೊಳ್ಳುವುದು ಮಾತ್ರವಲ್ಲದೆ ಇದು ಡಯಲರ್, ಸಂದೇಶ (ಎಸ್‌ಎಂಎಸ್), ಇಷ್ಟವಿಲ್ಲದವರನ್ನು ನಿರ್ಬಂಧಿಸುವುದು, ವಿಳಾಸಗಳನ್ನು ಅಂತರಜಾಲದ ಮೂಲಕ ಬ್ಯಾಕ್‌ಅಪ್ ಮಾಡಿಟ್ಟುಕೊಳ್ಳುವುದು ಇತ್ಯಾದಿ ಹಲವು ಉಪಯುಕ್ತ ಸವಲತ್ತುಗಳು ಇದರಲ್ಲಿವೆ. ಆದರೆ ಇದರ ಉಚಿತ ಆವೃತ್ತಿಯಲ್ಲಿ 2000 ವಿಳಾಸಗಳ ಮಿತಿಯಿದೆ.

ಗ್ಯಾಜೆಟ್ ಸುದ್ದಿ
ಭೂಕಂಪ ಸೂಚನೆಗೆ ಕಿರುತಂತ್ರಾಂಶ

ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಎಕ್ಸಲರೋಮೀಟರ್ ಇದೆ. ಅದನ್ನು ಬಳಸಿ ಸೂಕ್ತ ಕಿರುತಂತ್ರಾಂಶಗಳ ಮೂಲಕ ಹಲವು ಕೆಲಸಗಳನ್ನು ಮಾಡಬಹುದು. ಉದಾಹರಣೆಗೆ ನೀವು ಎಷ್ಟು ಹೆಜ್ಜೆ ನಡೆದಿದ್ದೀರಿ ಎಂದು ಲೆಕ್ಕ ಹಾಕಿ ಹೇಳುವುದು. ಅಮೆರಿಕದ ವಿಶ್ವವಿದ್ಯಾಲಯವೊಂದು ಈ ಸೌಲಭ್ಯವನ್ನು ಭೂಕಂಪವನ್ನು ಅಳೆಯಲು ಮತ್ತು ಮುನ್ಸೂಚನೆ ನೀಡಲು ಬಳಸಬಹುದು ಎಂದು ಹೇಳುತ್ತಿದೆ. ಅದು MyShake ಎಂಬ ಒಂದು ಕಿರುತಂತ್ರಾಂಶವನ್ನು ತಯಾರಿಸಿದೆ.

ಈ ಕಿರುತಂತ್ರಾಂಶವನ್ನು ಎಲ್ಲರೂ ತಮ್ಮ ತಮ್ಮ ಫೋನ್‌ಗಳಲ್ಲಿ ಹಾಕಿಕೊಂಡರೆ ಅದು ಎಲ್ಲ ಸ್ಥಳಗಳಿಂದಲೂ ಕಂಪನದ ಮಾಹಿತಿಗಳನ್ನು ಸಂಗ್ರಹಿಸುತ್ತಿರುತ್ತದೆ. ಎಲ್ಲಿಯಾದರೂ ಭೂಕಂಪವಾಗುತ್ತಿದೆ ಎಂದು ಅದಕ್ಕೆ ಅನ್ನಿಸಿದರೆ ಕೂಡಲೆ ಅದು ಎಲ್ಲರಿಗೂ ಎಚ್ಚರಿಕೆ ನೀಡುತ್ತದೆ. ಇದು ಯಶಸ್ವಿಯಾಗಲು ಹಲವು ಜನ ಇದನ್ನು ಬಳಸುವುದು ಅಗತ್ಯ. ಭೂಕಂಪಗಳ ಬಗ್ಗೆ ವ್ಯವಸ್ಥಿತ ಮಾಹಿತಿ ಇರುವ ಅಮೆರಿಕ ದೇಶದಲ್ಲಿ ಇದರ ಕೆಲಸ ಸುಲಭ. ಇತರೆ ದೇಶಗಳಲ್ಲಿ ಇದು ನಿಜಕ್ಕೂ ಉಪಯುಕ್ತವಾಗಬೇಕಾದರೆ ಸಾಕಷ್ಟು ಮಾಹಿತಿಯನ್ನು ಮೊದಲು ಕಲೆಹಾಕಬೇಕು. ಈ ಕಿರುತಂತ್ರಾಂಶ ಅದನ್ನೇ ಮಾಡುತ್ತದೆ.


ಗ್ಯಾಜೆಟ್ ಸಲಹೆ
ಶರತ್ ಅವರ ಪ್ರಶ್ನೆ: ನನ್ನ ಆಂಡ್ರಾಯ್ಡ್‌ ಫೋನಿನ ಪ್ರೈಮರಿ ಮೆಮೊರಿಯಲ್ಲಿರುವ ಆ್ಯಪ್‌ಗಳನ್ನು ಮತ್ತು ಡೌನ್‌ಲೋಡ್‌ ಮಾಡಿದ ವಿಡಿಯೊಗಳನ್ನು ಮೆಮೊರಿ ಕಾರ್ಡ್‌ಗೆ (ಮೈಕ್ರೊಎಸ್‌ಡಿ ಕಾರ್ಡ್‌) ವರ್ಗಾಯಿಸುವುದು ಹೇಗೆ?

ಉ: ಆ್ಯಪ್‌ಗಳನ್ನು ಪ್ರೈಮರಿ ಮೆಮೊರಿಯಿಂದ ಮೈಕ್ರೊಎಸ್‌ಡಿ ಕಾರ್ಡ್‌ಗೆ ವರ್ಗಾಯಿಸಲು App2SD ಎಂಬ ಕಿರುತಂತ್ರಾಂಶ ಬಳಸಬಹುದು. ವಿಡಿಯೊಗಳನ್ನು ವರ್ಗಾಯಿಸಲು X-plore ಎಂಬ ಕಿರುತಂತ್ರಾಂಶ ಬಳಸಬಹುದು.

ಗ್ಯಾಜೆಟ್ ತರ್ಲೆ
ಸ್ಮಾರ್ಟ್‌ಫೋನ್ ಕಂಪೆನಿಯ ಗ್ರಾಹಕ ಸೇವೆಗೆ ಬಂದ ಒಂದು ಪ್ರಶ್ನೆ -‘ನಾನು ನನ್ನ ಫೋನ್ ಉಪಯೋಗಿಸಿ ಆನ್‌ಲೈನ್ ಮೂಲಕ ಸಾಮಾನು ಕೊಳ್ಳಲು ಹೊರಟಿದ್ದೇನೆ. ಆದರೆ ಇದರಲ್ಲಿ ನಾನು ನನ್ನ ಕ್ರೆಡಿಟ್ ಕಾರ್ಡ್ ಅನ್ನು ಎಲ್ಲಿ ತುರುಕಿಸಬೇಕು?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT