ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶಯ ಮತ್ತು ಅನುಷ್ಠಾನದ ನಡುವಿನ ಅಂತರ ಕಡಿಮೆಯೇ? ಹೆಚ್ಚೇ?

Last Updated 4 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಆಶಯ ಮತ್ತು ಅನುಷ್ಠಾನದ ನಡುವಿನ ಸಂಘರ್ಷ ಇಂದು ನಿನ್ನಿನದಲ್ಲ. ಆಶಯಕ್ಕೆ ಒಳ್ಳೆಯ ಉದ್ದೇಶ ಇರುತ್ತದೆ. ಅನುಷ್ಠಾನಕ್ಕೆ ಅದು ಇರುವುದು ಅನುಮಾನ. ಆಶಯದಲ್ಲಿ ಹಿತಾಸಕ್ತಿ ಇರುವುದಿಲ್ಲ; ಅನುಷ್ಠಾನದಲ್ಲಿ ಇರುತ್ತದೆ. ನಮ್ಮ ಎಲ್ಲ ಯೋಜನೆಗಳ ಆಶಯ ಯಾವಾಗಲೂ ಚೆನ್ನಾಗಿಯೇ ಇರುತ್ತದೆ. ಅವುಗಳ ಅನುಷ್ಠಾನದಲ್ಲಿ ಸಮಸ್ಯೆ ಇರುವುದಕ್ಕೆ ಕಾರಣಗಳು ಎದ್ದು ಕಾಣುವಂತೆಯೇ ಇವೆ. ಆಶಯ ರೂಪಿಸಿದವರ ಕೈಗೆ ಕೆಸರು ಹತ್ತಿರುವುದಿಲ್ಲ; ಅನುಷ್ಠಾನ ಮಾಡುವವರ ಕೈಗೆ ಅದೇ ಮೆತ್ತಿಕೊಂಡಿರುತ್ತದೆ!

ವಿಕೇಂದ್ರೀಕರಣದ ಆಶಯ ಎಷ್ಟು ಚೆನ್ನಾಗಿತ್ತು! ಪ್ರಜಾಪ್ರಭುತ್ವದ ಆಶಯವೇ ಅದು. ತೀರಾ ಕೆಳಹಂತದಿಂದ ಅಧಿಕಾರ ವಿಕೇಂದ್ರೀಕರಣ ಆಗುತ್ತ ಬರಬೇಕು. ದೂರದ ದೆಹಲಿಯಿಂದ ಅಥವಾ ರಾಜ್ಯದ ರಾಜಧಾನಿಯಿಂದ ಆಡಳಿತ ಮಾಡುವುದಕ್ಕೂ ನಮ್ಮ ಹಳ್ಳಿಯಿಂದಲೇ ಆಡಳಿತ ಮಾಡುವುದಕ್ಕೂ ಎಷ್ಟೊಂದು ವ್ಯತ್ಯಾಸ! ಆದರೆ, ಆಶಯ ಮತ್ತು ಅನುಷ್ಠಾನದ ನಡುವೆ ಮತ್ತೆ ಸಂಘರ್ಷ. ಪಂಚಾಯ್ತಿರಾಜ್‌ ಸಂಸ್ಥೆಗಳಿಗೆ ಅಧಿಕಾರ ಕೊಡಲು ಪಾಳೆಗಾರಿಕೆ ವ್ಯವಸ್ಥೆ ಒಪ್ಪುವುದಿಲ್ಲ. ಕರ್ನಾಟಕದಲ್ಲಿ 80ರ ದಶಕದಲ್ಲಿ ಹೀಗೆಯೇ ಆಯಿತು. ಹಾಗೂ ಹೀಗೂ ಪಂಚಾಯ್ತಿ ರಾಜ್‌ ವ್ಯವಸ್ಥೆ ಇಲ್ಲಿ ಜಾರಿಗೆ ಬಂತು; ಈಗಲೂ ಅದರಲ್ಲಿ ಅನೇಕ ಲೋಪದೋಷಗಳು ಉಳಿದಿರಬಹುದು ಮತ್ತು ಈ ಲೋಪ ದೋಷಗಳು ಉಳಿದಿರುವುದಕ್ಕೆ ‘ಹಿತಾಸಕ್ತ’ ಶಾಸಕಾಂಗ ಅಡ್ಡಿಯಾಗಿದೆ ಎಂಬುದರಲ್ಲಿ ಯಾರಿಗೂ ಅನುಮಾನವೇನೂ ಇಲ್ಲ.

ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಗೆ ಇನ್ನೇನು ಚುನಾವಣೆ ನಡೆಯಬೇಕು. ಸಕಾಲದಲ್ಲಿ ಚುನಾವಣೆ ನಡೆಯುತ್ತದೆ ಎಂದು ಈಗ ಯಾರಿಗೂ ಅನಿಸುತ್ತಿಲ್ಲ. ಅದಕ್ಕೆ ರಾಜಕೀಯ ಕಾರಣಗಳೂ ಇರಬಹುದು, ವೈಧಾನಿಕ ಕಾರಣಗಳೂ ಇರಬಹುದು. ಆದರೆ, ರಾಜಕೀಯ ಕಾರಣಗಳಿಗೆ ವೈಧಾನಿಕ ಕಾರಣಗಳ ಲೇಪನ ಅಂಟಿಕೊಳ್ಳುವಂತೆ ಕಾಣುತ್ತಿದೆ. ಅದಕ್ಕಾಗಿಯೇ ಈಗ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡುವ ಕುರಿತು ವರದಿ ಸಲ್ಲಿಸಲು ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್‌.ಪಾಟೀಲರ ನೇತೃತ್ವದಲ್ಲಿ ಸಮಿತಿಯೊಂದು ರಚನೆಯಾಗಿದೆ. ನಿಜ, ಚಿಕ್ಕದು ಚೆನ್ನಾಗಿ ಇರುತ್ತದೆ.

ಈಗ ಬೆಂಗಳೂರು ಪಾಲಿಕೆ ಬಹಳ ದೊಡ್ಡದಾಗಿ ಬೆಳೆದಿದೆ. ನೂರು ವಾರ್ಡುಗಳ ವ್ಯಾಪ್ತಿಯಿದ್ದ ಇದ್ದ ಪಾಲಿಕೆಯನ್ನು ಹಿಂದಿನ ಸರ್ಕಾರದ ಅವಧಿಯಲ್ಲಿ 198 ವಾರ್ಡುಗಳಿಗೆ ಏರಿಸಲಾಯಿತು. ಈಗಿನ ಬೆಂಗಳೂರಿನ ಸಮಸ್ಯೆಗಳಿಗೆ, ಹೀಗೆ ‘ವಿಸ್ತರಿಸಿದ್ದೇ’ ಕಾರಣ ಎಂಬ ಅಭಿಪ್ರಾಯ ಇದೆ. ಇದ್ದರೂ ಇರಬಹುದು. ಹಾಗೆ ಬೆಂಗಳೂರನ್ನು ದುಪ್ಪಟ್ಟು ವಿಸ್ತರಿಸಲು ಆಗಿನ ಬಿಜೆಪಿ ಸರ್ಕಾರಕ್ಕೆ ವೈಧಾನಿಕ ಕಾರಣಗಳಿಗಿಂತ ರಾಜಕೀಯ ಕಾರಣಗಳು ಹೆಚ್ಚಿಗೆ ಇದ್ದುವು ಎಂದು ಕಾಣುತ್ತದೆ. ಆಗಿನ ಬೆಂಗಳೂರಿನ ಹೊರವಲಯದ ಪುರಸಭೆಗಳನ್ನು, ಪಟ್ಟಣ ಪಂಚಾಯ್ತಿಗಳನ್ನು ಬೆಂಗಳೂರಿಗೆ ಸೇರಿಸಿಕೊಳ್ಳುವ ಮೂಲಕ ತಾವು ಅಧಿಕಾರಕ್ಕೆ ಬರಬಹುದು ಎಂದು ಬಿಜೆಪಿಯ ಧುರೀಣರು ಭಾವಿಸಿದ್ದು ನಿಜವೇ ಆಯಿತು. ಅವರೇ ಅಧಿಕಾರಕ್ಕೆ ಬಂದರು. ಬೆಂಗಳೂರು ಅಳತೆ ಮೀರಿ ದೊಡ್ಡದು ಆದುದಕ್ಕೋ ಅಥವಾ ಆಡಳಿತ ಹಿಡಿದ ಬಿಜೆಪಿಯ ಬಹುತೇಕ ಪುರಪಿತೃಗಳ ಮೇರೆಮೀರಿದ ಭ್ರಷ್ಟಾಚಾರದಿಂದಲೋ ಬೆಂಗಳೂರು ಗಬ್ಬು ನಾರುತ್ತಿದೆ; ಎಲ್ಲ ಅರ್ಥದಲ್ಲಿಯೂ.

ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ಮಾಡುತ್ತಿದೆ. ಬೆಂಗಳೂರಿನ ಮೇಲೆ ಎಲ್ಲ ರಾಜಕೀಯ ಪಕ್ಷಗಳ ಕಣ್ಣೂ ಇರುತ್ತದೆ. ಬೆಂಗಳೂರು ಪಾಲಿಕೆಯ ಸ್ವರೂಪವನ್ನು ಈಗಿನ ಹಾಗೆಯೇ ಇಟ್ಟುಕೊಂಡರೆ ತಾನು ಆಡಳಿತಕ್ಕೆ ಬರುವುದು ಕಷ್ಟ ಎಂದು ಕಾಂಗ್ರೆಸ್‌ ಪಕ್ಷಕ್ಕೆ ಅನಿಸುತ್ತಿರಬಹುದು. ಅಥವಾ ಗಬ್ಬು ನಾರುತ್ತಿರುವ ಪಾಲಿಕೆಯನ್ನು ಸ್ವಚ್ಛ ಮಾಡುವ ಉಮೇದೂ ಅದಕ್ಕೆ ಇರಬಹುದು. ಆದರೆ, ಕಾಂಗ್ರೆಸ್‌ ಪಕ್ಷ ಅಥವಾ ಕಾಂಗ್ರೆಸ್‌ ಆಡಳಿತ ಇರುವ ರಾಜ್ಯ ಸರ್ಕಾರ ಅದಕ್ಕೆ ಅನುಸರಿಸುತ್ತಿರುವ ವಿಧಾನ ಅನುಮಾನ ಹುಟ್ಟಿಸುವಂತೆ ಇದೆ. ನಿಜವಾಗಿಯೂ ಅದು ಪಾಲಿಕೆಯನ್ನು ಅಥವಾ ಪಾಲಿಕೆಯಂಥ ನಗರಾಡಳಿತ ಸಂಸ್ಥೆಗಳನ್ನು ಬಲಪಡಿಸಲು ಬಯಸುತ್ತಿದೆಯೇ? ಬಲಪಡಿಸಬೇಕಾದರೆ ಏನು ಮಾಡಬೇಕು?

ಸಂವಿಧಾನದಲ್ಲಿಯೇ ಅದಕ್ಕೆ ಉತ್ತರ ಇದೆ. ರಾಜೀವ ಗಾಂಧಿಯವರು ಕರ್ನಾಟಕದ ಪಂಚಾಯ್ತಿರಾಜ್‌ ಪ್ರಯೋಗದ ಯಶಸ್ಸನ್ನು ನೋಡಿ ಇಡೀ ದೇಶದಲ್ಲಿ ಪಂಚಾಯ್ತಿ ಸಂಸ್ಥೆಗಳ ಮತ್ತು ಪಟ್ಟಣ ಹಾಗೂ ನಗರಾಡಳಿತ ಸಂಸ್ಥೆಗಳಿಗೆ ಶಕ್ತಿ ತುಂಬಲು ಸಂವಿಧಾನಕ್ಕೆ ಕ್ರಮವಾಗಿ 73 ಮತ್ತು 74ನೇ ತಿದ್ದುಪಡಿಗಳನ್ನು ತರಲು ಬಯಸಿದ್ದರು. ಆದರೆ, ಅವರಿಗೆ ರಾಜ್ಯಗಳಿಂದ ಸಿಗಬೇಕಾದ ಬೆಂಬಲ ಸಿಗಲಿಲ್ಲ. ಈ ಎರಡೂ ತಿದ್ದುಪಡಿಗಳು 1992ರಲ್ಲಿ ಪಿ.ವಿ.ನರಸಿಂಹರಾವ್‌ ಅವರು ಪ್ರಧಾನಿ ಆಗಿದ್ದಾಗ ಜಾರಿಗೆ ಬಂದುವು. ಆದರೆ, ಅವರೂ ‘ಹಿತಾಸಕ್ತ’ ರಾಜ್ಯಗಳ ಜತೆಗೆ ರಾಜಿ ಮಾಡಿಕೊಳ್ಳಬೇಕಾಯಿತು. ಅವರು ತಿದ್ದುಪಡಿಯನ್ನೇನೋ ತಂದರು. ಅದರ ಅನುಷ್ಠಾನವನ್ನು ರಾಜ್ಯಗಳ ಹೆಗಲ ಮೇಲೆ ಹಾಕಿದರು.

ಸಂವಿಧಾನದ 74ನೇ ತಿದ್ದುಪಡಿಯ ಉದ್ದೇಶ ಮತ್ತು ಕಾರಣ ಆರಂಭ ಆಗುವುದು ಹೀಗೆ : ‘ಅಸಮರ್ಪಕ ಅಧಿಕಾರ ವಿಕೇಂದ್ರೀಕರಣ ಮತ್ತು ದೀರ್ಘ ಕಾಲದವರೆಗೆ ಚುನಾವಣೆ ನಡೆಸದೇ ಆಡಳಿತಾಧಿಕಾರಿಗಳನ್ನು ನೇಮಿಸಿರುವುದರಿಂದ ಅನೇಕ ರಾಜ್ಯಗಳಲ್ಲಿ ಸ್ಥಳೀಯ ಸಂಸ್ಥೆಗಳು ದುರ್ಬಲವಾಗಿವೆ ಮತ್ತು ಅವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ನಡುವಿನ ಸಂಬಂಧವನ್ನು ಗಟ್ಟಿಯಾದ ಬುನಾದಿಯ ಮೇಲೆ ನಿರ್ಮಿಸಬೇಕಾಗಿದೆ.’

ಗಟ್ಟಿಯಾದ ಈ ಸಂಬಂಧ ಏರ್ಪಡುವುದು ಹೇಗೆ ಎಂದರೆ ತೆರಿಗೆ ಅಧಿಕಾರ ಕೊಡುವುದು, ವರಮಾನವನ್ನು ಸಮರ್ಪಕವಾಗಿ ಹಂಚಿಕೊಳ್ಳುವುದು, ಸಕಾಲದಲ್ಲಿ ಚುನಾವಣೆ ನಡೆಸುವುದು ಮತ್ತು ದುರ್ಬಲ ವರ್ಗಗಳಿಗೆ ಮೀಸಲಾತಿ ಕೊಡುವುದು ಇತ್ಯಾದಿ ಇತ್ಯಾದಿ ಸಂಗತಿಗಳನ್ನು ಸಂವಿಧಾನದ ತಿದ್ದುಪಡಿ ಹೇಳುತ್ತ ಹೋಗುತ್ತದೆ. ಎಲ್ಲ ತಿದ್ದುಪಡಿಗಳನ್ನು ಅಕ್ಷರಶಃ ಜಾರಿಗೆ ತಂದಿದ್ದರೆ ದೇಶದ ಎಲ್ಲ ಮಹಾನಗರಪಾಲಿಕೆಗಳ ಮೇಯರ್‌ಗಳು ಸರ್ವ ಸ್ವತಂತ್ರರಾಗಿ ಕೆಲಸ ಮಾಡಬೇಕಿತ್ತು. ಒಂದೋ ಅವರು ಜನರಿಂದಲೇ ನೇರವಾಗಿ ಆಯ್ಕೆಯಾಗಬೇಕಿತ್ತು, ಇಲ್ಲವಾದರೆ ಅವರಿಗೆ ರಾಜ್ಯ ಸರ್ಕಾರ ಸಾಕಷ್ಟು ಅಧಿಕಾರ ಕೊಡಬೇಕಿತ್ತು. ಆದರೆ, ಹಾಗೆ ಆಗಲಿಲ್ಲ. ಮೇಯರ್‌ಗಳು ಮತ್ತು ಪುರಪಿತೃಗಳು ಸರ್ವ ಸ್ವತಂತ್ರರಾಗಿ ಕೆಲಸ ಮಾಡುವುದು ಆಯಾ ಪಾಲಿಕೆಗಳ ವ್ಯಾಪ್ತಿಯ ಶಾಸಕರಿಗೆ ಮತ್ತು ಸಚಿವರಿಗೆ ಬೇಕಾಗಿರಲಿಲ್ಲ.

ಹಾಗೆ ಬೇಕಾಗಿದ್ದರೆ ಕೇಂದ್ರದಲ್ಲಿ ಇದ್ದ  ಕಾಂಗ್ರೆಸ್ ಸರ್ಕಾರದ ಆಶಯಗಳಿಗೆ ತಕ್ಕಂತೆ ರಾಜ್ಯದಲ್ಲಿ ಆಗ ಇದ್ದ ಕಾಂಗ್ರೆಸ್ ಸರ್ಕಾರವೂ ನಡೆದುಕೊಳ್ಳಬೇಕಿತ್ತು. ಬೆಂಗಳೂರಿನ ಮೇಲೆ ನಿಯಂತ್ರಣ ಕಳೆದುಕೊಳ್ಳಲು ಯಾವ ಸರ್ಕಾರಕ್ಕೂ ಇಷ್ಟವಿಲ್ಲ. ಎಲ್ಲವೂ ತಾನು ಹೇಳಿದಂತೆಯೇ ನಡೆಯಬೇಕು ಎಂದು ಎಲ್ಲ ಸರ್ಕಾರಗಳೂ ನಡೆದುಕೊಂಡಿವೆ.

1994ರಲ್ಲಿ ಆಗಿನ ಕಾಂಗ್ರೆಸ್‌ ಸರ್ಕಾರ ತಂದ ತಿದ್ದುಪಡಿಯೊಂದರ ಪ್ರಕಾರ ಮೇಯರ್‌ಗೆ ಇರುವ ಅಧಿಕಾರ
ಇಷ್ಟು: ಮೇಯರನು (ಹೆಣ್ಣು ಮಗಳು ಮೇಯರ್‌ ಆಗಲಾರರು ಎಂದು ಆಗಿನ ಕಾನೂನು ನಿರ್ಮಾಪಕರು ಅಂದುಕೊಂಡಿದ್ದರೋ ಏನೋ?!) ಪರಿಶೀಲನೆಯ ಸಾಮಾನ್ಯ ಅಧಿಕಾರ ಹೊಂದಿರತಕ್ಕುದು... ಯಾವುದೇ ನಿರ್ಣಯಗಳನ್ನು ಜಾರಿಗೆ ತರುವುದಕ್ಕೆ ಸಂಬಂಧಿಸಿದಂತೆ ಕಮೀಷನರನಿಗೆ (ಹೆಣ್ಣು ಮಗಳು ಕಮಿಷನರ್‌ ಆಗಲು ಸಾಧ್ಯವಿಲ್ಲ ಎಂದೂ ಆಗಿನ ಕಾನೂನಿನ ನಿರ್ಮಾಪಕರು ಅಂದುಕೊಂಡಿದ್ದರು!) ನಿರ್ದೇಶನ ನೀಡಬಹುದು. ಮೇಯರನು ನಿಗಮದ (ಪಾಲಿಕೆಯ) ಯಾವುದೇ ದಾಖಲೆ ತರಿಸಿಕೊಳ್ಳಬಹುದು ಮತ್ತು ಹದಿನೈದು ದಿನಗಳ ಒಳಗೆ ಹಿಂದಿರುಗಿಸತಕ್ಕುದು. (ಅದರ ಮೇಲೆ ತನ್ನ ಅಭಿಪ್ರಾಯ, ಸೂಚನೆ, ಆದೇಶ ಬರೆಯುವ ಅಧಿಕಾರ ಇಲ್ಲ ಎಂಬುದು ಮಥಿತಾರ್ಥ!).

ಅದೇ ತಿದ್ದುಪಡಿಯಲ್ಲಿ ಕಮಿಷನರ್‌ಗೆ ಎಲ್ಲ ಅಧಿಕಾರ ಕೊಡಲಾಗಿದೆ. ಆತ ಅಥವಾ ಆಕೆ ಸರ್ಕಾರದ ನೇರ ನಿರ್ದೇಶನದಲ್ಲಿ ಎಲ್ಲ ಕೆಲಸ ಮಾಡುತ್ತಾರೆ. ಕಚ್ಚುವ, ಶಿಸ್ತು ಕ್ರಮ ತೆಗೆದುಕೊಳ್ಳುವ, ಆದೇಶ ನೀಡುವ, ಅದು ಜಾರಿಗೆ ಬಂತೇ ಇಲ್ಲವೇ ಎಂದು ನೋಡುವ ಯಾವ ಅಧಿಕಾರವೂ ಇಲ್ಲದ ಒಬ್ಬ ವ್ಯಕ್ತಿಯಿಂದ ಏನು ತಾನೇ ನಿರೀಕ್ಷಿಸಲು ಸಾಧ್ಯ? ಈ ತಿದ್ದುಪಡಿ  ಮಾಡಿದಾಗ ಬೆಂಗಳೂರಿನಿಂದ 12 ಮಂದಿ ಶಾಸಕರು ಆಯ್ಕೆಯಾಗುತ್ತಿದ್ದರು. ಈಗ ಅವರ ಸಂಖ್ಯೆ 27. ಪಾಲಿಕೆಯ ಆಡಳಿತದಲ್ಲಿ ಮೂಗು ತೂರಿಸಲು ಅವರು ಎಷ್ಟು ಮಂದಿಯೇ ಇರಲಿ, ಶಾಸಕರಿಗೆ ಪಕ್ಷಭೇದ ಎಂದು ಇಲ್ಲ. ಬಿಜೆಪಿಯವರು ಮತ್ತು ಕಾಂಗ್ರೆಸ್ಸಿಗರು ಸೇರಿ ಪಾಲಿಕೆಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾರೆ.

ಸಂಸದರ ಮತ್ತು ಶಾಸಕರ ಮರ್ಜಿ ಇಲ್ಲದೆ ಇಲ್ಲಿ ಒಬ್ಬ ಮೇಯರ್‌ ಆಯ್ಕೆಯಾಗಲು ಸಾಧ್ಯವಿಲ್ಲ. ಮೊನ್ನೆ ಮೊನ್ನೆ ಮೇಯರ್‌ ಆಗಿ ಆಯ್ಕೆಯಾದ ಶಾಂತಕುಮಾರಿಯವರು ಯಾರ ಮರ್ಜಿಯಿಂದ ಆಯ್ಕೆಯಾದರು ಎಂಬುದು ರಹಸ್ಯವಾಗಿಯೇನೂ ಇಲ್ಲ. ಯಾವ ಅಧಿಕಾರವೂ ಇಲ್ಲದ ಮೇಯರ್ ಆಗಲು ನೀವೆಲ್ಲ ಇಷ್ಟೇಕೆ ಸಾಯುತ್ತೀರಿ ಎಂದು ಹಿರಿಯ ಕಾರ್ಪೊರೇಟರ್‌ ಒಬ್ಬರಿಗೆ ಕೇಳಿದೆ. ‘ನಿಮ್ಮ ಮುಂದೆ ಏನು ಸುಳ್ಳು ಹೇಳುವುದು? ಎಂಜಲು ಕಾಸಿಗೆ’ ಎಂದು ಅವರು ಒಪ್ಪಿಕೊಂಡರು!

ಕಾರ್ಪೊರೇಟರ್‌ಗಳು ಎಲ್ಲರೂ ಸಾಚಾ ಎಂದು ನಾನೇನು ಅವರಿಗೆ ಪ್ರಮಾಣ ಪತ್ರ ಕೊಡುತ್ತಿಲ್ಲ. ಅವರು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿಕೊಂಡು ಇಡೀ ಬೆಂಗಳೂರಿನ ಮೇಲೆ ‘ಅತ್ಯಾಚಾರ’ ಮಾಡುತ್ತಿದ್ದಾರೆ. ನಮ್ಮ ಎಲ್ಲ ಸಮಸ್ಯೆಗಳಿಗೆ ನಮ್ಮ ಕೆಟ್ಟ ಪಾದಚಾರಿ ರಸ್ತೆಗಳಿಗೆ, ದುರಸ್ತಿ ಕಾಣದ ಚರಂಡಿಗಳಿಗೆ, ಬೆಟ್ಟದಂತೆ ಎದ್ದು ನಿಲ್ಲುತ್ತಿರುವ ಕಸದ ರಾಶಿಗಳಿಗೆ, ಎಂದೂ ಬೆಳಗದ ಬೀದಿ ದೀಪಗಳಿಗೆಲ್ಲ ಈ ದುಷ್ಟಕೂಟ ಕಾರಣವಾಗಿದೆ. ದಿಕ್ಕು ದೆಸೆಯಿಲ್ಲದ ಬೆಂಗಳೂರಿನ ಬೆಳವಣಿಗೆಗೆ, ಮುಂದಿನ ಸಾವಿರಾರು ವರ್ಷಗಳ ವರೆಗೆ ಕಾದಿಡಬೇಕಿದ್ದ ಅಂತರ್ಜಲದ ಶೋಷಣೆಗೆ ಈ ದುಷ್ಟಕೂಟವೇ ಹೊಣೆಯಾಗಿದೆ.

ಈ ಆಸೆಬುರುಕ ಕಾರ್ಪೊರೇಟರ್‌ಗಳ ಜತೆಗೆ ಪ್ರಭಾವಿ ಸಚಿವರು ಮತ್ತು ಶಾಸಕರೂ ಕೈ ಜೋಡಿಸಿದ್ದಾರೆ. ಸಚಿವರಿಗೆ ಮತ್ತು ಶಾಸಕರಿಗೆ ಕಾರ್ಪೊರೇಟರ್‌ಗಳ ಸಣ್ಣ ಪುಟ್ಟ ಆಸೆಗಳ ದೌರ್ಬಲ್ಯ ಗೊತ್ತಿದೆ. ಆದರೆ, ಭ್ರಷ್ಟಾಚಾರದಲ್ಲಿ ಸಿಂಹಪಾಲು ಪ್ರಭಾವಿ ಸಚಿವರಿಗೇ ತಲುಪುತ್ತಿದೆ. ಇಂಥ ಸಚಿವರು ಹಿಂದಿನ ಸರ್ಕಾರದಲ್ಲಿಯೂ ಇದ್ದರು. ಈಗಿನ ಸರ್ಕಾರದಲ್ಲಿಯೂ ಇದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಾಲಿಕೆಯ ಆಡಳಿತ ಕುಲಗೆಟ್ಟು ಹೋಗಿರುವುದು ಗೊತ್ತಿದೆ. ಅದನ್ನು ಸರಿಪಡಿಸಬೇಕು ಎಂಬ ಆಸೆಯೂ ಅವರಿಗೆ ಇದ್ದಂತೆ ಕಾಣುತ್ತದೆ. ಅದಕ್ಕೆ ಅವರು ಕಂಡುಕೊಂಡಿರುವ ಪರಿಹಾರ : ಪಾಲಿಕೆಯನ್ನು ವಿಭಜಿಸುವುದು. ಸ್ವಲ್ಪ ಕಾಲ ಅಧಿಕಾರವನ್ನು ಸರ್ಕಾರದ ಕೈಯಲ್ಲಿ ಇಟ್ಟುಕೊಳ್ಳುವುದು. ನಂತರ ಚುನಾವಣೆ ಮಾಡುವುದು. ಇದೆಲ್ಲ ಕಸರತ್ತಿನ ಹಿಂದೆ ಬಿಜೆಪಿ ಹಿಡಿತದಿಂದ ಪಾಲಿಕೆಯನ್ನು ‘ಮುಕ್ತಗೊಳಿಸುವ’ ಉದ್ದೇಶವೂ ಅವರಿಗೆ ಇರಬಹುದು.

ಅವರ ಆಶಯ ಒಳ್ಳೆಯದು. ಆದರೆ, ಅದರ ಅನುಷ್ಠಾನದಲ್ಲಿ ದೋಷ ಉಳಿದೇ ಉಳಿಯುತ್ತದೆ. ಅವರು ಅಂದುಕೊಂಡ ಹಾಗೆ ಈಗಿನ ಪಾಲಿಕೆಯನ್ನು ಮೂರು ಭಾಗಗಳಾಗಿ ವಿಂಗಡಿಸಿ ಚುನಾವಣೆ ಮಾಡಿದರೆ ಅಧಿಕಾರ ಅವರ ಪಕ್ಷದ ಕೈಗೇ ಸಿಗಬಹುದು. ಆದರೆ, ಸಂವಿಧಾನದ ಆಶಯದಂತೆ ಅಧಿಕಾರದ ವಿಕೇಂದ್ರೀಕರಣ ಆಗುತ್ತದೆಯೇ? ಯಾವ ಅಧಿಕಾರವೂ ಇಲ್ಲದ ಮೇಯರ್‌ ಈಗಿನ ಹಾಗೆಯೇ ಇರುತ್ತಾರೆ. ಕಾರ್ಪೊರೇಟರ್‌ಗಳು ಈಗಿನ ಹಾಗೆಯೇ ಇರುತ್ತಾರೆ. ಪಾಲಿಕೆಯನ್ನು ವಿಭಜಿಸುವುದು ಭ್ರಷ್ಟಾಚಾರಕ್ಕೆ ಪರಿಹಾರವಲ್ಲ, ದಕ್ಷತೆ ತರುವುದಕ್ಕೂ ಉಪಾಯವಲ್ಲ.

ಬೆಂಗಳೂರು ಬರೀ ಒಂದು ರಾಜ್ಯದ ರಾಜಧಾನಿಯಲ್ಲ. ಅದು ಕೇವಲ ಒಂದು ಮಹಾನಗರವೂ ಅಲ್ಲ. ಇಡೀ ಜಗತ್ತು ನಮ್ಮ ಬೆಂಗಳೂರಿನ ಮೇಲೆ ಗಮನ ನೆಟ್ಟಿದೆ. ಇದು ಒಂದು  ಅಂತರರಾಷ್ಟ್ರೀಯ ಮನ್ನಣೆಯ ನಗರ. ಇಲ್ಲಿನ ಜನರು ಕೊಡುವ ತೆರಿಗೆಗೆ ಪ್ರತಿಯಾಗಿ ಅವರಿಗೆ ಸಿಗುತ್ತಿರುವ ಸೌಕರ್ಯಗಳು ಯಾತಕ್ಕೂ ಸಾಲವು. ಆದರೆ, ಅವರಿಗೆ ಅಗಾಧವಾದ ಸಹನೆ ಇದೆ. ಇಲ್ಲಿನ ಜನರು ಇನ್ನೂ ಬೀದಿಗೆ ಬಂದಿಲ್ಲ. ಬರುತ್ತಾರೋ ಇಲ್ಲವೋ ಗೊತ್ತಿಲ್ಲ.

ಸಿದ್ದರಾಮಯ್ಯನವರು ಗ್ರಾಮೀಣ ಭಾಗದಿಂದ ಬಂದವರು. ಅವರಿಗೆ ಬೆಂಗಳೂರಿನ ಜತೆಗೆ ಎಂಥ ‘ಸಂಬಂಧ’ ಇದೆಯೋ ಏನೋ? ಅವರಿಗೆ ನಿಜವಾಗಿಯೂ ಬೆಂಗಳೂರಿಗೆ ಒಳ್ಳೆಯದು ಮಾಡಬೇಕು ಎಂಬ ಆಶಯ ಇದ್ದರೆ ಸಂವಿಧಾನದ 74ನೇ ತಿದ್ದುಪಡಿ ಕೊಟ್ಟ ಎಲ್ಲ ಅಧಿಕಾರಗಳನ್ನು ಪಾಲಿಕೆಗೆ ಕೊಡಬೇಕು.
ಆ ಮೂಲಕ ಪಾಲಿಕೆಯ ಮೇಲಿನ ಸಚಿವರ ಮತ್ತು ಶಾಸಕರ ನಿಯಂತ್ರಣವನ್ನು ತೆಗೆದು ಹಾಕಬೇಕು.

ಮೇಯರ್‌ ಮತ್ತು ಕಾರ್ಪೊರೇಟರ್‌ಗಳಿಗೆ ಏನೆಲ್ಲ ಅಧಿಕಾರ ಕೊಡಬೇಕೋ ಅದನ್ನು ಕೊಡಬೇಕು. ಆ ಮೇಲೆ ನೀವೇಕೆ ಕೆಲಸ ಮಾಡಲಿಲ್ಲ ಎಂದು ಅವರನ್ನು ಕೇಳಬೇಕು? ಹಾಗೆ ಮಾಡಲು 27 ಮಂದಿ ಶಾಸಕರ ಮರ್ಜಿಯನ್ನು ಅವರು ಮೀರಬೇಕು. ಇದೆಲ್ಲ ಆದೀತೇ? ಅಥವಾ ಇದು ಕೇವಲ ತಿರುಕನ ಕನಸೇ? ಆಶಯ ಮತ್ತು ಅನುಷ್ಠಾನದ ನಡುವಿನ ಅಂತರ ಕಡಿಮೆಯೇ? ಅಥವಾ ಹೆಚ್ಚೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT