ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಶೈಲಿ ನೆನಪಿಸುವ ಮೋದಿ ಆಡಳಿತ

Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ದೇಶದ ಅತ್ಯಂತ ಪ್ರಭಾವಶಾಲಿ ವ್ಯಕ್ತಿ­ಯಾ­ಗಿದ್ದ ಇಂದಿರಾ ಗಾಂಧಿ 1971ರ ಬೇಸಿಗೆಯಲ್ಲಿ ನನ್ನ ತವರು ಪಟ್ಟಣಕ್ಕೆ ಬಂದಿ­ದ್ದರು. ಅವರು ಜನಪ್ರಿಯತೆಯ ಉತ್ತುಂಗದ­ಲ್ಲಿದ್ದ ಕಾಲಘಟ್ಟ ಅದು. ಸ್ನೇಹಿತರು ಮತ್ತು ವಿರೋಧಿಗಳು ಕರೆಯುತ್ತಿದ್ದಂತೆ ದಿಟವಾಗಿಯೂ ಅವರು ‘ಭಾರತದ ಸರ್ವಾಧಿಕಾರಿಣಿ’ಯೇ ಆಗಿದ್ದರು. ಆಗಷ್ಟೇ ಸಾರ್ವತ್ರಿಕ ಚುನಾವಣೆ­ಯಲ್ಲಿ ಮಹತ್ವಪೂರ್ಣವಾದ ಗೆಲುವನ್ನು ಸಾಧಿ­ಸಿ­ದ್ದರು; ಅದೇ ವರ್ಷ ಮುಗಿಯುವುದರೊಳಗೆ ಮತ್ತೊಂದು ಚುನಾವಣೆಯಲ್ಲಿ ಇನ್ನಷ್ಟು ದೊಡ್ಡ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದ್ದರು.

ರಜೆಯ ಮೇಲೆ ಡೆಹ್ರಾಡೂನ್‌ಗೆ ಬಂದಿದ್ದ ಅವರ ಮನವೊಲಿಸಿ, ನನ್ನ ಶಾಲೆಯ ಬಾಲಕ­ರನ್ನು ಉದ್ದೇಶಿಸಿ ಮಾತನಾಡಲು ಕರೆತರ­ಲಾ­ಗಿತ್ತು. ಅವರ ಮಕ್ಕಳೂ ಹಿಂದೆ ಇದೇ ಶಾಲೆ­ಯಲ್ಲಿ ಓದಿದ್ದರು. ಇಂದಿರಾ ಜೊತೆ ಅವರ ಹಿರಿಯ ಮಗ ರಾಜೀವ್‌ ಮತ್ತು ಸೊಸೆ ಸೋನಿಯಾ ಕೂಡ ಬಂದಿದ್ದರು. (ಸಂಜಯ್‌ ಗಾಂಧಿ ಅವರನ್ನು ಆ ಶಾಲೆಯಿಂದ ಹಿಂದೆ ಉಚ್ಚಾಟನೆ ಮಾಡಲಾಗಿತ್ತಾದ್ದರಿಂದ, ಅವರನ್ನು ಕರೆತರದೇ ಇದ್ದುದು ಜಾಣ್ಮೆಯ ನಿರ್ಧಾರವೇ ಆಗಿತ್ತು) ಈ ಭೇಟಿಗೆ ಸಂಬಂಧಿಸಿದಂತೆ ಮೂರು ಪ್ರಮುಖ ಸಂಗತಿಗಳು ನನಗೆ ನೆನಪಾಗುತ್ತವೆ.

ಮೊದಲನೆಯದು, ರಾಜೀವ್‌ ಸ್ವಯಂಪ್ರೇರಿತ­ರಾಗಿ ತಮ್ಮ ಶಿಕ್ಷಕರಾಗಿದ್ದವರ ಕಾಲು ಮುಟ್ಟಿ ನಮಸ್ಕರಿಸಿದ್ದು; ಎರಡನೆಯದು, ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಸಂಗತಿಗಳ ಬಗ್ಗೆ ಗಮನ ಕೇಂದ್ರೀಕರಿಸುವುದನ್ನು ಪ್ರತಿಯೊಬ್ಬರೂ ಕಲಿಯು­ವಂತೆ ಇಂದಿರಾ ಒತ್ತಿ ಹೇಳಿದ್ದು; ಮೂರನೆ­ಯದು, ಭಾಷಣದ ತರುವಾಯ ಅವರು ಮಾಡಿದ ಒಂದು ಕೆಲಸ. ಅದೆಂದರೆ, ಜನರ ನಡುವೆ ಕುಳಿತಿದ್ದ ವ್ಯಕ್ತಿಯೊಬ್ಬರನ್ನು ವೇದಿಕೆಗೆ ಕರೆದ ಪ್ರಧಾನಿ, ಅವರನ್ನು ನಮಗೆ ಹೀಗೆ ಪರಿ­ಚ­ಯಿಸಿದರು: ‘ಇನ್‌ಕಾ ನಾಮ್‌ ರಾಮ್‌ ನಿವಾಸ್‌ ಮಿರ್ಧಾ ಹೈ. ಯೇ ಹಮಾರೇ ನೇತಾ ಹೈ. ಉನ್‌ಕೋ ಆಪ್‌ ಸಬ್‌ ನಮಸ್ತೇ ಕೀಜಿಯೆ’.

ಆಗ ನಾವೆಲ್ಲ ವಿನೀತರಾಗಿ ಎದ್ದು ನಿಂತು ಆ ಸಚಿವರಿಗೆ ನಮಸ್ಕರಿಸಿದೆವು. ತನ್ನ ಒಡತಿಯಿಂದ ನಯವಾಗಿ ನೇವರಿಸಿಕೊಳ್ಳುತ್ತಾ ಹೆಮ್ಮೆ ಪಡುವ ಮುದ್ದಾದ ನಾಯಿಮರಿಯಂತೆ ಆ ಸಚಿವರು ಕಾಣುತ್ತಿದ್ದರು. ಆಗ ಎರಡೂ ಕಡೆ ಕಂಡುಬಂದ ಮುಖಭಾವ­ಗಳು ವಿಶಿಷ್ಟವಾಗಿದ್ದವು. ಚಕ್ರವರ್ತಿನಿಯು ತನ್ನ ನಿಷ್ಠ ಪ್ರಜೆಯನ್ನು ಅನುಗ್ರಹಿಸುವಂತಹ ಮಾತು­ಗಳನ್ನು ಆಡುತ್ತಿದ್ದರೆ, ನಿಷ್ಠ ಪ್ರಜೆಯು ತನ್ನನ್ನು ಗುರುತಿಸಿದ ಮಾತ್ರಕ್ಕೇ ಪರಮ ತೃಪ್ತನಾದಂತೆ ಇತ್ತು ಆ ಸನ್ನಿವೇಶ.

ಪಕ್ಷದ ಸಹೋದ್ಯೋಗಿಗಳ ಬಗ್ಗೆ ತಂದೆಗೆ ಇದ್ದ ಗೌರವ ಇಂದಿರಾ ಅವರಿಗೆ ಇರಲಿಲ್ಲ. ಇದಕ್ಕೆ ಪೂರಕ­ವಾಗಿ ಸ್ವಾರಸ್ಯಕರವಾದ ಒಂದು ಕಥೆ­ಯನ್ನೇ ಕೆಲವರು ಹೇಳುತ್ತಾರೆ. ಒಮ್ಮೆ ಇಂದಿರಾ ಅಮೆರಿಕಕ್ಕೆ ಭೇಟಿ ನೀಡಲಿದ್ದರು. ಆಗ ಅಲ್ಲಿನ ಅಧ್ಯಕ್ಷರಾಗಿದ್ದ ಲಿಂಡನ್‌ ಜಾನ್ಸನ್‌, ‘ಇಂದಿರಾ ಅವರನ್ನು ನಾನು ‘ಮೇಡಂ’ ಎಂದು ಸಂಬೋಧಿ­ಸಲೋ ಅಥವಾ ‘ಮಿಸೆಸ್‌ ಗಾಂಧಿ’ ಎಂದೋ? ಅವರ ಸಂಪುಟ ಸಹೋದ್ಯೋಗಿಗಳು ಅವರನ್ನು ಏನೆಂದು ಕರೆಯುತ್ತಾರೆ?’ ಎಂದು ವಾಷಿಂಗ್ಟನ್‌­ನಲ್ಲಿದ್ದ ಭಾರತೀಯ ರಾಯಭಾರಿಯನ್ನು ಕೇಳಿದ­ರಂತೆ. ಈ ವಿಷಯ ಕೂಡಲೇ ದೆಹಲಿ ಮುಟ್ಟಿ, ತಮ್ಮ ಸಚಿವರು ತಮ್ಮನ್ನು ಸಾಮಾನ್ಯವಾಗಿ ‘ಸರ್‌’ ಎಂದು ಕರೆಯುತ್ತಾರೆಂದು ತಿಳಿಸುವಂತೆ ಇಂದಿರಾ, ರಾಜತಾಂತ್ರಿಕರಿಗೆ ಸೂಚಿಸಿದರಂತೆ.

ಇಂದಿರಾ ಅವರ ಹಮ್ಮಿನ ನಡವಳಿಕೆಗೆ ಅವರ­ಲ್ಲಿದ್ದ ಅಭದ್ರತೆಯೂ ಒಂದು ಕಾರಣ. ಏಕಾಂಗಿ­ಯಾಗಿ ಬಾಲ್ಯ ಕಳೆದಿದ್ದ ಅವರು ವೈವಾಹಿಕ ಜೀವನದಲ್ಲೂ ತೊಡಕುಗಳನ್ನು ಎದುರಿಸಿದ್ದರು (ಪತಿ ಅವರಿಗೆ ನಿಷ್ಠರಾಗಿ ಇರಲಿಲ್ಲ ಎಂಬ ಮಾತಿದೆ) 1966ರ ಜನವರಿಯಲ್ಲಿ ಸಂಭವಿಸಿದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಅಕಾಲಿಕ ಸಾವು ಇಂದಿರಾ ಅವರನ್ನು ಆಕಸ್ಮಿಕವಾಗಿ ಪ್ರಧಾನಿ ಪಟ್ಟಕ್ಕೆ ಏರಿಸಿತ್ತು. ಈ ಸಂದರ್ಭದಲ್ಲಿ ಅವರು ವಿರೋಧಿಗಳಿಂದ ತೀವ್ರ ಟೀಕೆಗೆ ಗುರಿಯಾಗುತ್ತಿದ್ದರು. ಇದು  ಕೆಲವೊಮ್ಮೆ ಲಿಂಗ­ಭೇದದ ರೂಪದಲ್ಲಿಯೂ ಇರುತ್ತಿತ್ತು. ಆಗ ಪಕ್ಷವನ್ನು ನಿಯಂತ್ರಿಸುತ್ತಿದ್ದ ಸಂಪ್ರದಾಯವಾದಿ­ಗಳು ಮತ್ತು ವಯಸ್ಕರ ಕೂಟವು ಕಾರ್ಯ­ನಿರ್ವಹಣೆಯಲ್ಲಿ ಅವರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿರಲಿಲ್ಲ. ಸ್ವತಃ ಉಪ ಪ್ರಧಾನಿಯೇ ಅವರ ಸ್ಥಾನಕ್ಕೆ ಏರುವ ಇಂಗಿತ ವ್ಯಕ್ತಪಡಿಸಿದ್ದರು.

ಹೀಗೆ ಪಕ್ಷದ ಒಳಗಿನ ಮತ್ತು ಹೊರಗಿನ ತಮ್ಮ ವಿರೋಧಿಗಳೆಲ್ಲರನ್ನೂ  ಮಟ್ಟಹಾಕಲು ಇಂದಿರಾ, ಪ್ರಧಾನಿ ಕಚೇರಿಯನ್ನು ಪ್ರಮುಖ ನಿರ್ಧಾರಗಳ ಕೇಂದ್ರ ಸ್ಥಾನವನ್ನಾಗಿ ಮಾಡಿ­ಕೊಂಡರು. ಎಲ್ಲ ಮಹತ್ವದ  ನೇಮಕಾತಿಗಳೂ ಸಂಪುಟ ಸದಸ್ಯರ ಬದಲಾಗಿ ಪ್ರಧಾನಿ ಕಚೇರಿಯ ಮೂಲಕವೇ ನಡೆಯುತ್ತಿದ್ದವು. ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದ ಪಿ.ಎನ್‌.ಹಕ್ಸರ್‌ ಸರ್ಕಾ­ರದ ಎರಡನೇ ಪ್ರಭಾವಿ ವ್ಯಕ್ತಿಯಾಗಿದ್ದರು.  ಮಾಜಿ ರಾಜತಾಂತ್ರಿಕರಾಗಿದ್ದ ಹಕ್ಸರ್‌ ಅಲಹಾ­ಬಾದ್‌ ಮತ್ತು ಬ್ರಿಟನ್‌ನಲ್ಲಿ ಇಂದಿರಾ ಅವರ ಸಂಪರ್ಕಕ್ಕೆ ಬಂದಿದ್ದರು. ನಿಷ್ಕಳಂಕ ಮತ್ತು  ಪ್ರಾಮಾಣಿಕ ವ್ಯಕ್ತಿತ್ವದ ಅವರು ಕೆಲವೊಮ್ಮೆ ಅಪ್ರಸ್ತುತ ಎನ್ನಿಸಿದರೂ ರಾಜಕಾರಣ ಮತ್ತು ಆರ್ಥಿಕತೆಗೆ ಸಂಬಂಧಿಸಿದಂತೆ ಶಕ್ತಿಶಾಲಿ ನಿಲುವುಗಳನ್ನು ತಳೆಯುತ್ತಿದ್ದರು.

1967ರಿಂದ 1974ರ ಅವಧಿಯಲ್ಲಿ ಸಂಪುಟದ ಇತರೆಲ್ಲ  ಸಹೋದ್ಯೋಗಿಗಳಿ­ಗಿಂತಲೂ ಅತ್ಯಂತ ಹೆಚ್ಚಾಗಿ ಹಕ್ಸರ್‌ ಅವರನ್ನು ಇಂದಿರಾ ನೆಚ್ಚಿಕೊಂಡಿದ್ದರು. ಇಂದಿರಾ ಅವರ ಇತರ ಸಲಹೆಗಾರರು ಕೂಡ ಪಕ್ಷದ ಒಳಗಿನವ­ರಾಗಿರಲಿಲ್ಲ. ಬಹುತೇಕ ಸಂದರ್ಭಗಳಲ್ಲಿ ಅವ­ರೆಲ್ಲ ಹಕ್ಸರ್‌ ಅವರಂತೆ ಕಾಶ್ಮೀರಿ ಪಂಡಿತರೇ ಆಗಿ­ದ್ದರೆಂಬುದು ಕಾಕತಾಳೀಯವೇನೂ ಆಗಿರಲಿಕ್ಕಿಲ್ಲ. ಅವರಲ್ಲಿ ಆರ್ಥಿಕ ತಜ್ಞ ಪಿ.ಎನ್‌.ಧರ್‌, ರಾಜ­ತಾಂತ್ರಿಕ­ರಾದ ಡಿ.ಪಿ.ಧರ್‌, ಟಿ.ಎನ್‌.ಕೌಲ್‌, ಬಿ.ಕೆ. ನೆಹರೂ ಮತ್ತು ಬೇಹುಗಾರಿಕೆ ಪರಿಣತ ಆರ್‌.ಎನ್‌.ಕಾವ್‌ ಸೇರಿದ್ದರು.
1967ರಿಂದ 1974ರ ಅವಧಿಯಲ್ಲಿ ಹಕ್ಸರ್‌ ನೇತೃತ್ವದಲ್ಲಿ ಈ ಸಲಹೆಗಾರರೇ ಪ್ರಧಾನಿ ಜಾರಿಗೆ ತರಲಿದ್ದ ನೀತಿಗಳನ್ನು ರೂಪಿಸಿದವರು.

ಆರ್ಥಿ­ಕತೆಗೆ ಸಂಬಂಧಿಸಿದಂತೆ ಕೈಗಾರಿಕೆಗಳು ಮತ್ತು ಬ್ಯಾಂಕು­ಗಳನ್ನು ಇನ್ನಷ್ಟು ರಾಷ್ಟ್ರೀಕೃತಗೊಳಿಸು­ವುದು, ಖಾಸಗಿ ವಲಯದ ಮೇಲಿನ ನಿಯಂತ್ರಣ ಬಿಗಿಗೊಳಿಸುವುದು; ರಾಜಕೀಯವಾಗಿ, ಪ್ರಧಾ­ನಿಯೇ ಖುದ್ದು ಮತದಾರರ ಬಳಿ ತೆರಳುವ ಮೂಲಕ ರಾಜ್ಯ ಮತ್ತು ಕೇಂದ್ರ ಮಟ್ಟಗಳೆರ­ಡ­ರಲ್ಲೂ ಇತರ ಕಾಂಗ್ರೆಸ್‌ ನಾಯಕರನ್ನು ಗೌಣ­ವಾಗಿ­ಸುವುದು; ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪೂರ್ವ ಪಾಕಿಸ್ತಾನದ ಸ್ವಾತಂತ್ರ್ಯ ಹೋರಾಟಕ್ಕೆ ನೈತಿಕವಾಗಿ, ಆರ್ಥಿಕ­ವಾಗಿ  ಮಾತ್ರವಲ್ಲದೆ ಅಂತಿಮವಾಗಿ ಸೇನೆಯ ನೆರವನ್ನೂ ಒದಗಿಸುವುದು, ಜಾಗತಿಕ ಮಟ್ಟ­ದಲ್ಲಿ ಸೋವಿಯತ್‌ ಒಕ್ಕೂಟದ ಪರ ನಿಲುವು ತಳೆ­ಯುವುದು; ಆಡಳಿತ ಮತ್ತು ನ್ಯಾಯಾಂಗ­ದಲ್ಲಿ ಪ್ರಧಾನಿ ಕಚೇರಿ ನೇರವಾಗಿ ಮಾಡುವ ಉನ್ನತ ಮಟ್ಟದ ಬಡ್ತಿ ಹಾಗೂ ಮೌಲ್ಯಮಾಪ­ನಕ್ಕೆ ಸಂಬಂಧಿಸಿದ ಆಂತರಿಕ ಪ್ರಚೋದನೆಗಳನ್ನು ತಣ್ಣಗಾಗಿಸುವ ಉದ್ದೇಶ ಈ ನೀತಿಗಳ ಹಿಂದೆ ಇತ್ತು.

ಆದರೆ ಹಕ್ಸರ್‌ 1974ರಲ್ಲಿ ಇಂದಿರಾ ಅವರ ಆಪ್ತ ವಲಯದಿಂದ ಹೊರಬರಬೇಕಾಯಿತು. ಸಂಜಯ್‌ ಗಾಂಧಿ ಅವರ ವ್ಯಾವಹಾರಿಕ ಸಂಬಂಧ­ಗಳು ಸರ್ಕಾರಕ್ಕೆ ಅಪಕೀರ್ತಿ ತರುತ್ತಿ­ದ್ದು-­ದನ್ನು  ತಮ್ಮ ನಾಯಕಿಗೆ ಮನದಟ್ಟು ಮಾಡಿ­ಕೊಡಲು ಮುಂದಾಗಿದ್ದೇ ಅವರಿಗೆ ಮುಳುವಾ­ಯಿತು. ಇಂದಿರಾ ತಾಯ್ತನದ ಕುರುಡು ವ್ಯಾಮೋಹ­ದಿಂದ ಹಕ್ಸರ್‌ ಅವರನ್ನು ಉಪೇಕ್ಷಿಸಿ­ದರು. 1975ರಲ್ಲಿ ತುರ್ತುಪರಿಸ್ಥಿತಿ ಘೋಷಣೆ­ಯಾದ ಬಳಿಕ ಸಂಜಯ್‌ ದೇಶದ ಎರಡನೇ ಪ್ರಭಾವಿ ವ್ಯಕ್ತಿಯಾಗಿ ಹಕ್ಸರ್‌ ಅವರ ಸ್ಥಾನವನ್ನು ಆಕ್ರಮಿಸಿಕೊಂಡರು.  ಕಾಂಗ್ರೆಸ್‌ ಮುಖ್ಯಮಂತ್ರಿ­ಗಳು ದಯನೀಯವಾಗಿ ಸರದಿಯಲ್ಲಿ ನಿಂತು ಅವರಿಗೆ ಸಲಾಂ ಹೊಡೆಯುತ್ತಿದ್ದರು. (ಒಂದು ಪ್ರಕರಣವಂತೂ ಅವರ ಚಪ್ಪಲಿಯನ್ನೂ ಹೊತ್ತು­ಕೊಳ್ಳುವ ಹಂತ ಮುಟ್ಟಿತ್ತು)

ಸಂಜಯ್‌ 1975ರಿಂದ 1980ರ ನಡುವೆ ಇಂದಿರಾ ಅವರ ಪ್ರಧಾನ (ಕೆಲವೊಮ್ಮೆ ಏಕ­ಮಾತ್ರ) ರಾಜಕೀಯ ಸಲಹೆಗಾರರಾಗಿದ್ದರು. ಸಂಜಯ್‌ ಒಬ್ಬ ಒರಟ ಹಾಗೂ ದಬಾವಣೆ­ಗಾರ ಎಂಬುದು ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಅವರು ವಹಿಸಿದ ಮಧ್ಯಸ್ಥಿಕೆಯಿಂದ ಸ್ಪಷ್ಟವಾ­ಗಿತ್ತು. ಆದರೆ ಅವರೊಬ್ಬ ರಾಜಕೀಯ ಚಾಣಾಕ್ಷ ಸಹ ಆಗಿದ್ದರು. 1977ರಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಾಗ ಎದೆಗುಂದಿದ್ದ ತಾಯಿಗೆ ಸ್ಥೈರ್ಯ ತುಂಬಿದ ಸಂಜಯ್‌, ತಮಗೆ ನಿಷ್ಠ­ರಾ­ಗಿದ್ದ ಯುವ ನಾಯಕರ ಮೂಲಕ ಪಕ್ಷವನ್ನು ಪುನರ್‌ ಸಂಘಟಿಸಿದ್ದರು. 1980ರಲ್ಲಿ ಕಾಂಗ್ರೆಸ್‌ ಮರಳಿ ಅಧಿಕಾರಕ್ಕೆ ಬರುವಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು.

ವಿಮಾನ ಅಪಘಾತದಲ್ಲಿ ಸಂಜಯ್‌ ಮರಣ ಹೊಂದಿದ ಬಳಿಕ, ರಾಜಕೀಯದಿಂದ ಹೊರಗಿದ್ದ ಮತ್ತೊಬ್ಬ ಪುತ್ರ ರಾಜೀವ್‌ ಅವರನ್ನು ಇಂದಿರಾ ರಾಜಕೀಯಕ್ಕೆ ಕರೆತಂದರು. 1977ರ ಚುನಾ­ವಣಾ ಹಿನ್ನಡೆ ಮತ್ತು ತಮ್ಮ ಪ್ರೀತಿಯ ಕಿರಿಯ ಪುತ್ರನ ದುರ್ಮರಣ ಇಂದಿರಾ ಅವರ ಸಂಶಯ­ಗ್ರಸ್ತ ಮನೋಭಾವ ಮತ್ತು ಅಭದ್ರತೆಯನ್ನು ಇನ್ನಷ್ಟು ತೀವ್ರಗೊಳಿಸಿದವು. ಹಿಂದೆ ಸಂಬಂಧಿ­ಗಳ­ಲ್ಲ­ದಿದ್ದರೂ ಹಕ್ಸರ್‌ ಮತ್ತು ಅವರ ಸಹೋ­ದ್ಯೋಗಿ­ಗಳು ಪ್ರಧಾನಿಗೆ ನಿಕಟರಾಗಿದ್ದರು. ಆದರೆ ಈಗ ತಮ್ಮ ಅತಿ ಹತ್ತಿರದ ರಕ್ತಸಂಬಂಧಿಗಳನ್ನು ಹೊರತುಪಡಿಸಿ ಇನ್ಯಾರನ್ನೂ ನಂಬದ ಸ್ಥಿತಿ­ಯನ್ನು ಇಂದಿರಾ ತಲುಪಿದ್ದರು.

ವ್ಯಕ್ತಿತ್ವ ಮತ್ತು ರಾಜಕೀಯ ಶೈಲಿಯ ವಿಚಾರ­ದಲ್ಲಿ ನಮ್ಮ ಈಗಿನ ಪ್ರಧಾನಿಗೂ ಇಂದಿರಾ ಅವರಿಗೂ ಗಮನಾರ್ಹವಾದ ಹೋಲಿಕೆ ಇದೆ. ಅವರಂತೆ ಇವರಿಗೂ ಸಮಾನರಿಲ್ಲ, ಆದರೆ ತಮ್ಮ ಅಧೀನಕ್ಕೆ ಒಳಪಟ್ಟ ವ್ಯಕ್ತಿಗಳು ಮತ್ತು ಶತ್ರುಗಳು ಇದ್ದಾರೆ. ಬಹುಶಃ ನರೇಂದ್ರ ಮೋದಿ ಅವರ ಪಕ್ಷದ ಅಧ್ಯಕ್ಷರು ಹಿಂದೆ ಸಂಜಯ್‌ ನಿರ್ವಹಿಸಿದ್ದ ಪಾತ್ರ­ವನ್ನು ನಿರ್ವಹಿಸುತ್ತಿಲ್ಲ ಎಂಬುದಷ್ಟೇ ಸಾಮ್ಯತೆ ಇಲ್ಲದ ಏಕೈಕ ಸಂಗತಿ ಎನಿಸುತ್ತದೆ. ಇಂದಿರಾ ಅವ­ರಂತೆಯೇ ಮೋದಿ ಸಹ, ಹಿಂದೆ ಪ್ರಭಾವ­ಶಾಲಿ­ಯಾಗಿದ್ದ ಪಕ್ಷದ ಕಾರ್ಯ­ವಿಧಾನ­ವನ್ನು ವೈಯ­ಕ್ತಿಕ ಆಕಾಂಕ್ಷೆಗೆ ತಕ್ಕಂತೆ ತಮ್ಮ ಅಧೀನಕ್ಕೆ ಒಳ­ಪಡಿಸಿಕೊಂಡಿದ್ದಾರೆ.

ಅವ­ರಂತೆಯೇ ವಿಧಾನಸಭೆ ಮತ್ತು ಸಾರ್ವತ್ರಿಕ ಚುನಾ­ವಣೆಯ ಚರ್ಚೆ ತಮ್ಮ ಸುತ್ತಲೇ ಕೇಂದ್ರೀಕೃತ ಆಗುವಂತೆ ನೋಡಿ­ಕೊಂಡಿ­ದ್ದಾರೆ. ತಮ್ಮ ವ್ಯಕ್ತಿತ್ವದ ಆರಾಧನೆಗೆ ಪೂರಕ­ವಾಗಿ ಮಾಧ್ಯಮವನ್ನು ಬಳಸಿಕೊಂಡಿದ್ದಾರೆ. ಅದೇ ರೀತಿ ಸಂಪುಟ ಸಹೋದ್ಯೋಗಿಗಳನ್ನು ಅವರು ಸಹ ದೂರವೇ ಇಟ್ಟಿದ್ದಾರೆ (ಅರುಣ್‌ ಜೇಟ್ಲಿ ಅವರನ್ನು ಹೊರತುಪಡಿಸಿ), ಪ್ರಮುಖ ನೇಮ­ಕಾತಿ­ಗಳು ಮತ್ತು ನೀತಿ ನಿರ್ಧಾರಗಳು ಪ್ರಧಾನಿ ಕಚೇರಿ ಮೂಲಕವೇ ನಡೆಯುವಂತೆ ನೋಡಿ­ಕೊಂಡಿದ್ದಾರೆ. ಆದರೆ ಇಂದಿರಾ ಪ್ರತಿಷ್ಠಿತ ರಾಜಕೀಯ ಕುಟುಂಬದಲ್ಲಿ ಜನಿಸಿದ್ದರೆ, ಮೋದಿ ಸಂಪೂರ್ಣ­ವಾಗಿ ಸ್ವಪ್ರಯತ್ನದಿಂದ ಮೇಲೇರಿ­ದ­ವರು.

ಇಂದಿರಾ  ವಿಷಯದಲ್ಲಿ ಏಕಾಂಗಿತನದ ಬಾಲ್ಯ ಮತ್ತು ವೈವಾಹಿಕ ಸಮಸ್ಯೆ ಅಭದ್ರತೆಗೆ ಕಾರಣ­ವಾಗಿತ್ತು. ಮೋದಿ ಅವರ ವಿಷಯದಲ್ಲಿ ಪಕ್ಷದ ಉನ್ನತ ಶ್ರೇಣಿಯಲ್ಲಿ ತೀವ್ರವಾಗಿ ಹೋರಾಡ­ಬೇಕಾದ ಅನಿವಾರ್ಯ ಎದುರಾ­ಗಿದ್ದು, ಜೊತೆಗೆ 2002ರ ಗಲಭೆಗಳನ್ನು ನಿರ್ವಹಿಸಿದ ರೀತಿ ತೀವ್ರ ಟೀಕೆಗೆ ಒಳಗಾಗಿದ್ದು ಅವರಲ್ಲಿ ಅಭದ್ರತೆ ಸೃಷ್ಟಿಸಿರಬಹುದು. ಆರ್ಥಿಕ ಚಿಂತನೆಗಳ ವಿಷಯದಲ್ಲಿ ಮಾತ್ರ ಇಬ್ಬರ ನಡುವೆ ಸ್ಪಷ್ಟ ವ್ಯತ್ಯಾಸ ಕಾಣುತ್ತದೆ.

1970ರ ದಶಕದಲ್ಲಿ ಕೈಗಾರಿಕಾ ಬುನಾದಿ ಹಾಗೂ ಆಹಾರ ಉತ್ಪಾದನೆಯಲ್ಲಿ ಸ್ವಾವ­ಲಂಬನೆ ಖಾತ್ರಿಯಾಗಿದ್ದಾಗ ಮುಕ್ತ ಆರ್ಥಿಕ ನೀತಿ ಜಾರಿಗೊಳಿಸಲು ಸೂಕ್ತ ಸಂದರ್ಭ ಒದಗಿ­ಬಂದಿತ್ತು. ಆಗ ಇಂದಿರಾ ದುರದೃಷ್ಟವಶಾತ್‌ ವ್ಯಾಪಾರವಹಿವಾಟುಗಳನ್ನು ಸರ್ಕಾರದ ಇನ್ನಷ್ಟು ಬಿಗಿಯಾದ ಕಟ್ಟುಪಾಡುಗಳಿಗೆ ಒಳಪ­ಡಿ­ಸುವ ನಿರ್ಧಾರ ತೆಗೆದುಕೊಂಡುಬಿಟ್ಟರು. ಆದರೆ ಮೋದಿ ಉದ್ಯಮಶೀಲತೆ ಹಾಗೂ ವಾಣಿಜ್ಯೋ­ದ್ಯಮದ ಪ್ರಬಲ ಉತ್ತೇಜಕರಾಗಿದ್ದಾರೆ. ನಿರ್ದಿಷ್ಟ ವಾಣಿಜ್ಯೋದ್ಯಮಿಗಳೊಂದಿಗೆ ಅವರು ಹೊಂದಿ­ದ್ದಾರೆ ಎನ್ನಲಾದ ನಿಕಟ ಸಂಪರ್ಕದ ಬಗ್ಗೆ ಪ್ರಶ್ನೆ-­ಗಳನ್ನು ಎತ್ತಬಹುದಾದರೂ ಆರ್ಥಿಕತೆಯ ಮೇಲೆ ಸರ್ಕಾರದ ಬಿಗಿ ಕುಣಿಕೆಯನ್ನು ಸಡಿಲ­ಗೊಳಿಸುವ ಬಗೆಗಿನ ಅವರ ನಿಲುವು ಸ್ವಾಗ­ತಾರ್ಹ­ವಾಗಿದೆ.

ತುಲನಾತ್ಮಕವಾಗಿ ನೋಡಿ­ದಾಗ ಆರ್ಥಿಕ ನೀತಿಗಳ ವಿಚಾರದಲ್ಲಿ ಮೋದಿ ಪರ ನಿಲುವು ವ್ಯಕ್ತವಾದರೆ, ಇತರ ವಿಷಯ­ಗಳಲ್ಲಿ ಇಂದಿರಾ ಉತ್ತಮ ಎನಿಸಿಕೊಳ್ಳುತ್ತಾರೆ. ಧಾರ್ಮಿಕತೆ, ಭಾಷೆ, ಮತ್ತು ಬಹು ಸಾಂಸ್ಕೃತಿ­ಕತೆಗೆ ಸಂಬಂಧಿಸಿದಂತೆ ಇಂದಿರಾ ಆಳವಾದ ಬದ್ಧತೆ ಹೊಂದಿದ್ದರು. ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯ ‘ಹಿಂದೂ ಮೊದಲು’ ಪರಿಕಲ್ಪನೆ­ಯನ್ನು ಸೂಚ್ಯವಾಗಿ ಆಗಲಿ ಅಥವಾ ಸ್ಪಷ್ಟವಾಗಿ  ಆಗಲಿ ಎಂದಿಗೂ ಅವರು ಅನುಮೋದಿಸಿರಲಿಲ್ಲ. ಈ ಬಹುತ್ವ ಸಿದ್ಧಾಂತವು ಸಾವಿನತ್ತ ಅವರನ್ನು ಕೊಂಡೊಯ್ದಿತು. ಸ್ವರ್ಣ ಮಂದಿರದ ಮೇಲಿನ ದಾಳಿಯ ಬಳಿಕ ಸಿಖ್ಖರನ್ನು ಭದ್ರತೆಗೆ ನಿಯೋಜಿ­ಸಿಕೊಳ್ಳದಂತೆ ಅವರಿಗೆ ಸಲಹೆ ನೀಡಲಾಗಿತ್ತು.

ಇಂದಿರಾ ಅವರಿಗೆ ಆಧುನಿಕ ವಿಜ್ಞಾನ ಮತ್ತು ವಿಜ್ಞಾನಿಗಳ ಬಗ್ಗೆ ಅಚಲವಾದ ಗೌರವ ಇತ್ತು. ಜೊತೆಗೆ ಪಾರಂಪರಿಕ ಜ್ಞಾನದ ಬಗೆಗಿನ ಅವರ ಉತ್ಪ್ರೇಕ್ಷಿತ ಮೆಚ್ಚುಗೆಯ ಬಗ್ಗೆ ಅನುಮಾನವೂ ಇತ್ತು. ಮೋದಿ ನಮ್ಮ ಮಂಗಳಯಾನ ಯಶಸ್ವಿ­ಯಾದಾಗ ಆರ್ಯಭಟನನ್ನು ನೆನೆದು ಶ್ಲಾಘಿಸಿ­ದರು. ಆದರೆ ಅವರ ಜಾಗದಲ್ಲಿ ಇಂದಿರಾ ಇದ್ದಿ­ದ್ದರೆ ಅವರು, ಇಸ್ರೊವನ್ನು ಕಟ್ಟಿ ಬೆಳೆಸಲು ಶ್ರಮಿ­ಸಿದ ಆಧುನಿಕ ವಿಜ್ಞಾನಿಗಳಾದ ವಿಕ್ರಮ್‌ ಸಾರಾ­ಭಾಯಿ ಮತ್ತು ಸತೀಶ್‌ ಧವನ್‌ ಅವರನ್ನು ನೆನೆಯುತ್ತಿದ್ದರು ಎಂದು ನಾನು ನಿಶ್ಚಿತವಾಗಿ ಹೇಳಬಲ್ಲೆ.
ಪರಿಸರ ವಿಜ್ಞಾನ ಮತ್ತು ಸಂರಕ್ಷಣೆಯ ವಿಷ­ಯ­ದಲ್ಲಿ ಇಂದಿರಾ ಅವರಿಗೆ ಸೂಕ್ಷ್ಮ ಸಂವೇದನೆ ಇತ್ತು. ಅವರ ಅವಧಿಯಲ್ಲೇ ಪರಿಸರ ಇಲಾಖೆ ಅಸ್ತಿ­ತ್ವಕ್ಕೆ ಬಂದದ್ದು.

ಈಗಿನ ಸರ್ಕಾರ ಸಹ ಅದಕ್ಕೆ ಹೆಚ್ಚಿನ ಪ್ರಾಮುಖ್ಯ ಕೊಡುತ್ತಿರುವಂತೆ ಕಾಣು­ತ್ತದೆ. ಇಬ್ಬರ ರಾಜಕೀಯ ಚಿಂತನೆಗಳು ಭಿನ್ನವಾ­ಗಿ­­ದ್ದರೂ ಏಕರೂಪದ ರಾಜಕೀಯ ಶೈಲಿಯನ್ನು ನಾವು ಕಾಣಬಹುದು. ಇಬ್ಬರೂ ನಾಯಕರ  ಬಗ್ಗೆ ಯೋಚಿಸಿದಾಗ, ರಾಜಕೀಯದಲ್ಲಿ ಭಕ್ತಿ ಅಥವಾ ನಾಯಕರ ಆರಾಧನೆ ಬಗ್ಗೆ ಅಂಬೇ­ಡ್ಕರ್‌ ಅವರು ಸಂವಿಧಾನ ಸಭೆಯಲ್ಲಿ ಮಾಡಿದ ಕೊನೆಯ ಭಾಷಣದಲ್ಲಿ ಎಚ್ಚರಿಕೆ ನೀಡಿದ್ದುದು ನೆನಪಾಗುತ್ತದೆ. ಈ ವಿಷಯವನ್ನು ಈ ಅಂಕಣ­ದಲ್ಲಿ ನಾನು ಹಿಂದೆಯೂ ಉಲ್ಲೇಖಿ­ಸಿದ್ದೇನೆ.

ಈ ವಾರಕ್ಕೆ 30 ವರ್ಷಗಳ ಹಿಂದೆ ಮೃತಪಟ್ಟ ಕಾಂಗ್ರೆಸ್‌ ಮಹಿಳೆ ಮತ್ತು ಪ್ರಸ್ತುತ ನಮ್ಮ ಪ್ರಧಾನಿಯಾಗಿರುವ ಬಿಜೆಪಿ ವ್ಯಕ್ತಿ ಇಬ್ಬರಲ್ಲೂ ತಮ್ಮ ನಿರಂಕುಶ ಸ್ವಭಾವ ಹಾಗೂ ಆರಾಧನಾ ಭಾವದ ಆಕಾಂಕ್ಷೆಯಲ್ಲಿ ಸಾಮ್ಯತೆ ಎದ್ದು ಕಾಣುತ್ತದೆ. ಪ್ರಜಾತಾಂತ್ರಿಕ ಆಡಳಿತ ವ್ಯವಸ್ಥೆಯ ಉತ್ತುಂಗದಲ್ಲಿ ನಿರಂಕುಶ ವ್ಯಕ್ತಿತ್ವ ಕಾಣಿಸಿ­ಕೊಳ್ಳು­ವಂತಹ ವಿರೋಧಾಭಾಸಕ್ಕೆ ಹಿಂದೆ ಇಂದಿರಾ ಗಾಂಧಿ ನಿದರ್ಶನವಾಗಿದ್ದರು. ಇದೀಗ ಮೋದಿ ಅವರ ವಿರೋಧಾಭಾಸವೂ ಇದೇ ಆಗಿದೆ.
ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT