ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಹಕ್ಕುಚ್ಯುತಿಯೇ ಅಥವಾ ಹಿತಾಸಕ್ತಿಯೇ...

Last Updated 1 ಜುಲೈ 2017, 20:32 IST
ಅಕ್ಷರ ಗಾತ್ರ

ಇದು ಅನಿರೀಕ್ಷಿತವೇನೂ ಅಲ್ಲ. ಹೀಗೆಲ್ಲ ಆಗಬಹುದು ಎಂದು ಹಿಂದಿನ ಅಧಿವೇಶನದಲ್ಲಿಯೇ ಮಾಧ್ಯಮದವರಿಗೆ ಒಂದು ಇಂಗಿತ ಸಿಕ್ಕಿತ್ತು. ವಿಧಾನಸಭಾಧ್ಯಕ್ಷರಿಗೆ ನಮ್ಮ ಮೇಲೆ ಸಿಟ್ಟು ಬಂದಿದೆ, ಎಷ್ಟು ಸಿಟ್ಟು ಬಂದಿದೆ ಎಂದರೆ ಒಂದು, ನಮಗೆ ಮೂಗುದಾರ  ಹಾಕಬೇಕು ಎಂದು ಅವರು ನಿರ್ಧರಿಸಿದ್ದಾರೆ. ಎರಡು, ಮೂಗುದಾರ ಹಾಕುವುದು ಸಾಧ್ಯವಾಗದೇ ಇದ್ದರೆ ಜೈಲಿಗೇ ಕಳಿಸಿಬಿಡಬೇಕು ಎಂದು ತೀರ್ಮಾನಿಸಿದ್ದಾರೆ. ಹಿಂದಿನ ಅಧಿವೇಶನದಲ್ಲಿಯೇ ಮೂಗುದಾರ ಹಾಕುವ ಮಾತು ಕೇಳಿ ಬಂದಿತ್ತು. ಹೇಗೆಲ್ಲ ಮೂಗುದಾರ ಹಾಕಬೇಕು, ಅದನ್ನು ಹಿಡಿದು ಯಾವಾಗಲೆಲ್ಲ ಎಳೆಯಬೇಕು ಎಂದು ತೀರ್ಮಾನಿಸಲು ಸಭಾಧ್ಯಕ್ಷರು ಒಂದು ಸಮಿತಿಯನ್ನೂ ರಚಿಸಿದ್ದರು. ಮೊದಲು ಸಮಿತಿ ಅಧ್ಯಕ್ಷತೆ, ‘ಒಲ್ಲೆ’ ಎಂದಿದ್ದ ಹಿರಿಯ ಸದಸ್ಯ ಮತ್ತು ಸಚಿವ ರಮೇಶ್‌ ಕುಮಾರ್‌ ಈಗ ಅದನ್ನು ವಹಿಸಿಕೊಂಡಿದ್ದಾರೆ. ಒಂದೋ ಎರಡೋ ಸಭೆಗಳನ್ನೂ ಮಾಡಿದಂತೆ ಇದೆ. ಆ ಅಧಿವೇಶನದಲ್ಲಿ  ಅನೇಕ ಶಾಸಕರು ತಮ್ಮ ಶಬ್ದಕೋಶದಲ್ಲಿ ಇದ್ದ ಆಯ್ದ ಪದಗಳನ್ನು ಬಳಸಿ ಮಾಧ್ಯಮದವರನ್ನು ನಿಂದಿಸಿದ್ದರು. ಅವರು ಬಳಸಿದ ಪದಗಳನ್ನು ನೆನಪಿಸಿಕೊಂಡರೆ ‘ನಿಂದಿಸಿದ್ದರು’ ಎಂಬ ಕ್ರಿಯಾಪದ ಬಹಳ ಸೌಮ್ಯವಾಗಿ ಕಾಣುತ್ತದೆ. ಆದರೆ, ಅದು ಶಾಸಕರ ವಿಶೇಷ ಹಕ್ಕುಗಳಡಿ ಅವರಿಗೆ ಸಿಕ್ಕ ಸ್ವಾತಂತ್ರ್ಯ. ಅವರು ಅಲ್ಲಿ ಏನು ಮಾತನಾಡಿದರೂ ನಾವು ಅವರಿಗೆ ಏನೂ ಮಾಡಲಾರೆವು! ಅದೆಲ್ಲ  ಕಳೆದ ಮಾರ್ಚ್‌ನಲ್ಲಿ ನಡೆದ ತೀರಾ ಈಚಿನ ಬೆಳವಣಿಗೆ. ಆಗ ಇದೇ ಅಂಕಣದಲ್ಲಿ, ‘ಸನ್ಮಾನ್ಯ ಸಭಾಧ್ಯಕ್ಷರೇ ನಮ್ಮನ್ನು ಜೈಲಿಗೆ ಕಳಿಸಿಬಿಡಿ... (ಮಾರ್ಚ್ 27)’ ಎಂದು ಬರೆದಿದ್ದೆ. ಅದಾಗಿ ಇನ್ನೂ ಮೂರು ತಿಂಗಳು ಕಳೆಯುವ ಮುಂಚೆಯೇ ಇಬ್ಬರು ಪತ್ರಕರ್ತರು ಜೈಲು ಪಾಲಾಗುವ ಸನ್ನಿವೇಶ ಎದುರಾಗಿದೆ. ಮಾಧ್ಯಮದ ವಿರುದ್ಧದ ಆಗಿನ ಮತ್ತು ಈಗಿನ ಎರಡೂ ದಾಳಿಗಳ ಮುಂಚೂಣಿಯಲ್ಲಿ ಸಭಾಧ್ಯಕ್ಷರೇ ನಿಂತಂತೆ ಕಾಣುತ್ತದೆ. ಕಾಣುತ್ತದೆ ಏನು  ಎದ್ದು ಕಾಣುವ ಹಾಗೆ ಅವರು ಮುಂದೆಯೇ ನಿಂತುಕೊಂಡಿದ್ದಾರೆ.

ನಿಜ, ಶಾಸಕಾಂಗಕ್ಕೆ ಅಸೀಮವಾದ ಅಧಿಕಾರವಿದೆ. ಹಕ್ಕುಚ್ಯುತಿಯ ಅಧಿಕಾರ ಎನ್ನುವುದು ಒಂದು ರೀತಿ ಪ್ರಶ್ನೆಯೇ ಇಲ್ಲ ಎನ್ನುವ ಅಧಿಕಾರ. ಶಾಸಕರು ಯಾವ ಅಡೆತಡೆಯೂ ಇಲ್ಲದೇ ಕೆಲಸ ಮಾಡಲು ಕೊಟ್ಟ ರಕ್ಷಣೆ ಇದು. ಸಂವಿಧಾನದ ವಿಧಿಗಳಲ್ಲಿ ಸಿಕ್ಕ ಈ ಅಧಿಕಾರವನ್ನು ಸಂಸದರು ಮತ್ತು ಶಾಸಕರು ಇದುವರೆಗೆ ವ್ಯಾಖ್ಯಾನ (codify) ಮಾಡಿಲ್ಲ. ವ್ಯಾಖ್ಯಾನಿಸಿದರೆ ಅದು ಕಾನೂನಿನ ಪರಾಮರ್ಶೆಗೆ ಒಳಪಡಬಹುದು ಎಂಬ ಅಳುಕು ಅವರಿಗೆ ಇದೆಯೋ ಏನೋ ತಿಳಿಯದು. ಕಾನೂನಿನ ಪರಾಮರ್ಶೆಗೆ ಒಳಪಡದ ಇಂಥ ಅಧಿಕಾರವನ್ನು ಬಳಸುವಾಗ ತುಂಬ ಸಂಯಮ ಬೇಕು. ಅಧಿಕಾರ ಎನ್ನುವುದು ಒಂದು ಅಸ್ತ್ರ. ಅದನ್ನು ಬಳಸಿದರೆ ಅದರ ಪರಿಣಾಮ ಏನೆಲ್ಲ ಆಗಬೇಕೋ ಅದೆಲ್ಲ ಆಗಿಯೇ ಆಗುತ್ತದೆ. ಏಕೆಂದರೆ ಬಿಟ್ಟ ಅಸ್ತ್ರವನ್ನು ಮರಳಿ ಬತ್ತಳಿಕೆಗೆ ಸೇರಿಸಲು ಆಗುವುದಿಲ್ಲ. ಅದೇ ಕಾರಣಕ್ಕಾಗಿಯೇ ಬ್ರಹ್ಮಾಸ್ತ್ರದಂಥ ಪರಮಶಕ್ತಿಯ ಅಸ್ತ್ರಗಳನ್ನು ಯುದ್ಧದ ಕೊನೆಯ ಹಂತದಲ್ಲಿ ಬಳಸುತ್ತಿದ್ದರು. ಬ್ರಹ್ಮಾಸ್ತ್ರ ಎಂದರೆ ಈಗಿನ ಅಣ್ವಸ್ತ್ರ ಎಂದು ನಾವು ಅರ್ಥ ಮಾಡಿಕೊಳ್ಳಬೇಕು. ಹಕ್ಕುಚ್ಯುತಿ ಎನ್ನುವುದು ಅಂಥ ಒಂದು ಅಸ್ತ್ರ. ಅದರಲ್ಲಿ ಶಾಸಕರಿಗೆ  ಪರಮಾಧಿಕಾರ ಇದೆ. ಈ ಅಧಿಕಾರವನ್ನು ಅವರು ಹೇಗೆ ಬೇಕಾದರೂ ಚಲಾಯಿಸಬಹುದು. ಅದನ್ನು ಪರಿಮಿತವಾಗಿಯಾದರೂ ಬಳಸಬಹುದು ಅಥವಾ ಗರಿಷ್ಠತಮವಾಗಿಯಾದರೂ ಬಳಸಬಹುದು. ಈ ಸಾರಿಯ ಅಧಿವೇಶನದ ಕೊನೆಯ ದಿನ ಇಬ್ಬರು ಪತ್ರಕರ್ತರಿಗೆ ಗರಿಷ್ಠತಮ ಎನ್ನುವಂಥ ಶಿಕ್ಷೆ ವಿಧಿಸಲಾಗಿದೆ. ಇದುವರೆಗೆ ಕರ್ನಾಟಕದ ವಿಧಾನ ಮಂಡಲದ ಇತಿಹಾಸದಲ್ಲಿ ಯಾರಿಗೂ ಜೈಲು ಶಿಕ್ಷೆ ವಿಧಿಸಿದ ಪೂರ್ವ ನಿದರ್ಶನ ಇಲ್ಲ.

ಈಚಿನ ಇತಿಹಾಸ ಕೆದಕುವುದಾದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಮಾಧ್ಯಮದವರ ವಿರುದ್ಧ ಎರಡು ಹಕ್ಕುಚ್ಯುತಿ ಪ್ರಕರಣಗಳಲ್ಲಿ ಕ್ರಮ ತೆಗೆದುಕೊಳ್ಳಲಾಗಿತ್ತು. ಮೊದಲ ಪ್ರಕರಣದಲ್ಲಿ ಬೆಳಗಾವಿಯ ‘ತರುಣ್ ಭಾರತ್’ ಪತ್ರಿಕೆಯ ಸಂಪಾದಕರನ್ನು ಸದನಕ್ಕೆ ಕರೆಸಿ ಛೀಮಾರಿ ಹಾಕಲಾಗಿತ್ತು.   ಅವರ ವಿರುದ್ಧ ಬೆಳಗಾವಿಯ ಸ್ಥಳೀಯ ಶಾಸಕರೊಬ್ಬರನ್ನು ಕುರಿತು ನಿರಾಧಾರವಾದ, ದುರುದ್ದೇಶಪೂರ್ವಕವಾದ ವರದಿಗಳನ್ನು ಪ್ರಕಟಿಸಿದ ಆರೋಪ ಇತ್ತು. ಆ ಶಾಸಕರು ಪತ್ರಿಕೆಯ ವಿರುದ್ಧ ಹಕ್ಕುಚ್ಯುತಿಯ ಆರೋಪವನ್ನೇ ಮಾಡಿದ್ದರು. ವಿಚಾರಣೆಯಲ್ಲಿ ಆ ಪತ್ರಿಕೆ ಅಂಥ ವರದಿಗಳನ್ನು ಪ್ರಕಟಿಸಿದ್ದು ನಿಜ ಎಂದು ‘ಸಾಬೀತು’ ಕೂಡ ಆಯಿತು. ಆದರೆ, ಪತ್ರಿಕೆಯ ಸಂಪಾದಕರನ್ನು ಜೈಲಿಗೆ ಕಳಿಸಲು ಹಕ್ಕುಚ್ಯುತಿ ಸಮಿತಿ ಶಿಫಾರಸು ಮಾಡಲಿಲ್ಲ. ಅವರನ್ನು ಸದನಕ್ಕೆ ಕರೆಸಿ ಛೀಮಾರಿ ಹಾಕಬೇಕು ಎಂದು ನಿರ್ಣಯಿಸಿತು. ಆ ಪತ್ರಿಕೆಯ ಸಂಪಾದಕರು ಮರಾಠಿ ಭಾಷಿಕರು ಎಂದೋ, ಅವರು ‘ಕರ್ನಾಟಕದ ವಿರುದ್ಧ ಇದ್ದಾರೆ’ ಎಂದೋ ಅಥವಾ ‘ಶಿಕ್ಷೆ ಅಷ್ಟು ದೊಡ್ಡದು ಅಲ್ಲ ಎಂದು ಮಾಧ್ಯಮದಲ್ಲಿ ಇದ್ದವರು ಅಂದುಕೊಂಡರು’ ಎಂದೋ ಒಟ್ಟಿನಲ್ಲಿ ಅದು ಈಗಿನಂಥ ವಿವಾದಕ್ಕೆ ಕಾರಣವಾಗಲಿಲ್ಲ.

ಎರಡನೆಯ ಹಕ್ಕುಚ್ಯುತಿ ಪ್ರಕರಣ ‘ಪ್ರಜಾವಾಣಿ’ಯೂ ಸೇರಿದಂತೆ ಅನೇಕ ಪತ್ರಿಕೆಗಳ ವಿರುದ್ಧ ಈಗಿನ ಸರ್ಕಾರದಲ್ಲಿ ಪ್ರಬಲ ಸಚಿವರಾಗಿರುವ ಒಬ್ಬರು ಮತ್ತು ಇನ್ನೊಬ್ಬ ಶಾಸಕರು ಸಲ್ಲಿಸಿದ ದೂರು. ಈ ಪ್ರಕರಣದಲ್ಲಿ ನನ್ನ ಸಂಪಾದಕರು ಒಂದು ಸಾರಿ ಮತ್ತು ಅವರ ಪರವಾಗಿ ನಾನು ಒಂದು ಸಾರಿ ಹಕ್ಕುಚ್ಯುತಿ ಸಮಿತಿ ಎದುರು ಹಾಜರಾಗಿದ್ದೆವು. ನಾವು ಈ ಇಬ್ಬರು ಶಾಸಕರ ಕುರಿತು ಮಹಾಲೇಖಪಾಲರ ವರದಿಯನ್ನು ಆಧರಿಸಿ ವರದಿ ಮಾಡಿದ್ದೆವು. ಅದು ಹೇಗೆ ಹಕ್ಕುಚ್ಯುತಿ ಆಗುತ್ತದೆ ಎಂದು ಶಾಸಕರು ಭಾವಿಸಿದರು ಮತ್ತು ಅದನ್ನು ಸದನ ಹೇಗೆ ಹಕ್ಕುಚ್ಯುತಿ ಸಮಿತಿಗೆ ಒಪ್ಪಿಸಲು ನಿರ್ಣಯಿಸಿತು ಎಂಬುದು ತಿಳಿಯದು. ಅಂತೂ ನಮ್ಮ ಕಚೇರಿಗೆ ಸಮಿತಿಯಿಂದ ನೋಟಿಸ್‌ಗಳು ಬರಲು ಆರಂಭಿಸಿದುವು. ಅದೂ ಹೇಗೆ ನೋಟಿಸುಗಳು ಬರುತ್ತಿದ್ದುವು ಎಂದರೆ ನಮ್ಮ ಕಚೇರಿಯ ಸ್ವಾಗತ ಮೇಜಿನಲ್ಲಿ ಇಟ್ಟಿದ ಟ್ರೇಗಳಲ್ಲಿ ಅವುಗಳನ್ನು ಹಾಕಿ, ‘ನಾಳೆ ಬೆಳಿಗ್ಗೆ ಇಷ್ಟು ಸಮಯಕ್ಕೆ ಬಂದು ಹಾಜರಾಗಬೇಕು’ ಎಂದು ಸೂಚನೆ ಕೊಡಲಾಗುತ್ತಿತ್ತು. ಮತ್ತು ಅದರಲ್ಲಿನ ಬರವಣಿಗೆ ಹೇಗಿರುತ್ತಿತ್ತು ಎಂದರೆ ನಾವೇನು ಸುದ್ದಿಗಾರರೋ ಅಥವಾ ಕೊಲೆಗಡುಕರೋ ಎಂದು ನಮಗೇ ಅನುಮಾನ ಆಗುತ್ತಿತ್ತು! ‘ಹಕ್ಕುಚ್ಯುತಿ ಸಮಿತಿ ಮುಂದೆ  ಹಾಜರಾಗದೇ ಇದ್ದರೆ ಏಕಪಕ್ಷೀಯವಾಗಿ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂಬ ಎಚ್ಚರಿಕೆಯೂ ಇರುತ್ತಿತ್ತು ಅನ್ನಿ.

ಸಮಿತಿ ಮುಂದೆ  ಹಾಜರಾಗಿ, ‘ನಾವೇನೂತಪ್ಪು ಮಾಡಿಲ್ಲ, ಮಹಾಲೇಖಪಾಲರ ವರದಿ ಪ್ರಕಟಿಸುವುದು ಯಾವ ದೃಷ್ಟಿಯಿಂದಲೂ ಶಾಸಕರ ಹಕ್ಕುಚ್ಯುತಿ ಆಗುವುದಿಲ್ಲ’ ಎಂಬ ವಾದವನ್ನು ನಮ್ಮ ಪತ್ರಿಕೆಯ ವತಿಯಿಂದ ಮಂಡಿಸಿದೆವು. ಆದರೆ, ಸಮಿತಿಯ ಎಲ್ಲ ಸಭೆಗಳಲ್ಲಿ ಇರುತ್ತಿದ್ದ ದೂರುದಾರರು ಆ ವರದಿಯಿಂದ ತಮಗೆ ಎಷ್ಟೆಲ್ಲ ತೊಂದರೆಯಾಯಿತು ಎಂದು ಆಕ್ಷೇಪಿಸುತ್ತಿದ್ದರು. ಶಾಸಕರಿಗೆ ಅನುಕೂಲವಾಗುವ ಹಾಗೆ ಹೇಗೆ ವರದಿ ಬರೆಯಬೇಕು ಎಂದು ನಮಗೆ ತರಗತಿಯಲ್ಲಿ ಹೇಳಿಕೊಡಲಿಲ್ಲ ಎಂದು ಅವರಿಗೆ  ಹೇಳಲು ಸಾಧ್ಯವಿರಲಿಲ್ಲ. ಸಮಿತಿಯ ಮುಂದೆ  ನಾವು ಹೆದರಿ ತಪ್ಪು ಒಪ್ಪಿಕೊಳ್ಳುತ್ತೇವೆ ಎಂದು ಅವರು ಅಂದುಕೊಂಡಿದ್ದರು. ನಾವು ತಪ್ಪು ಒಪ್ಪದೇ ಇದ್ದಾಗ ನಮಗೆ ‘ಶಿಕ್ಷೆ’ ವಿಧಿಸುವ ನಿರ್ಣಯವನ್ನು ಸಭೆ ತೆಗೆದುಕೊಂಡಿತು. ಅದು, ‘ಒಂದು ವರ್ಷದ ಮಟ್ಟಿಗೆ ಸರ್ಕಾರದ ಜಾಹೀರಾತುಗಳನ್ನು ನಮ್ಮ ಪತ್ರಿಕೆಗಳಿಗೆ ಕೊಡಬಾರದು’ ಎನ್ನುವುದು. ನಾವು ಅದರ ವಿರುದ್ಧ ಮೇಲ್ಮನವಿ  ಸಲ್ಲಿಸಲಿಲ್ಲ. ‘ಈ ನಿರ್ಣಯವನ್ನು ನಮ್ಮ ವಿರುದ್ಧ ಬಳಸಬಹುದು’ ಎಂದು ಯಾರು ಯಾರೋ ಉಚಿತ ಸಲಹೆಗಳನ್ನು ಕೊಟ್ಟಾಗಲೂ ನಮ್ಮ ಪತ್ರಿಕೆಗಳಿಗೆ ಸರ್ಕಾರದ ಜಾಹೀರಾತುಗಳು ನಿಲ್ಲಲಿಲ್ಲ!

ದೂರು ಕೊಟ್ಟವರು ವಿಚಾರಣೆಯಲ್ಲಿಯೂ ಇರಬಹುದೇ ಎಂಬ ಪ್ರಶ್ನೆ ಆಗ ಎದ್ದ ಹಾಗೆಯೇ ಈಗ ಇಬ್ಬರು ಪತ್ರಕರ್ತರಿಗೆ ಜೈಲು ಶಿಕ್ಷೆ ವಿಧಿಸಿರುವ ಪ್ರಕರಣದಲ್ಲಿಯೂ ಉದ್ಭವಿಸಿದೆ. ವಿಧಾನ ಸಭಾಧ್ಯಕ್ಷ ಕೆ.ಬಿ.ಕೋಳಿವಾಡರು ಈ ಪ್ರಕರಣದಲ್ಲಿ ದೂರು ಕೊಟ್ಟವರು. ದೂರು ಕೊಡುವಾಗ ಅವರು ಶಾಸಕರಾಗಿದ್ದರು. ಸಮಿತಿ ವರದಿ ಸಲ್ಲಿಸುವಾಗ ಅವರು ಅದರ ಅಧ್ಯಕ್ಷರೇ ಆಗಿದ್ದರು. ನಿಯಮದ ಪ್ರಕಾರ ಇದು ಸರಿಯೇ ಅಲ್ಲವೇ ಎಂಬುದನ್ನು  ಸದನದ ಅನೇಕ ಹಿರಿಯ ಸದಸ್ಯರು ಪರಾಂಬರಿಸಬೇಕು. ಆದರೆ, ನೈತಿಕವಾಗಿ ಸರಿಯಲ್ಲ ಎಂದು ಯಾರಾದರೂ ಹೇಳಬಹುದು. ದೂರು ಕೊಟ್ಟವರೇ ನಿರ್ಣಯವನ್ನೂ ಕೊಡುವುದಾದರೆ ಅದು ಎಂಥ ತೀರ್ಪು ಆಗಿರಬಹುದು ಎಂದು ಅದು ಹೊರಬರುವುದಕ್ಕಿಂತ  ಮುಂಚೆಯೇ ಊಹಿಸಿಬಿಡಬಹುದು. ರಾಜ್ಯ ವಿಧಾನಮಂಡಲದ ಇತಿಹಾಸದಲ್ಲಿಯೇ ಅತ್ಯಂತ ಕಠಿಣವಾದ ನಿರ್ಣಯವನ್ನು ಹಕ್ಕುಬಾಧ್ಯತಾ ಸಮಿತಿ ಕೊಟ್ಟಿರುವುದಕ್ಕೂ ಅದರ ಅಧ್ಯಕ್ಷರಾಗಿ ದೂರು ಕೊಟ್ಟವರೇ ಇರುವುದಕ್ಕೂ ಸಂಬಂಧ ಇರಬಹುದೇ? ಇರಲಾರದು, ಅದು ಕೇವಲ ಕಾಕತಾಳೀಯ ಎಂದು ಹೇಗೆ ಹೇಳುವುದು? ಕೋಳಿವಾಡರ ಬದಲು ಬೇರೆಯವರು ಸಮಿತಿಯ ಅಧ್ಯಕ್ಷರಾಗಿದ್ದರೆ ಅವರು ಸ್ವಲ್ಪ ದೂರ ನಿಂತು ತರತಮ ತೂಗಿ ನೋಡಿ ತಮ್ಮ ನಿರ್ಣಯವನ್ನು ಪ್ರಕಟಿಸಬಹುದಿತ್ತು ಎಂದು ಅಂದುಕೊಳ್ಳಲು ಈಗ ಅವಕಾಶ ಇದೆ.

ಎರಡೂ ಟ್ಯಾಬ್ಲಾಯಿಡ್‌ ಪತ್ರಿಕೆಗಳಲ್ಲಿ ಶಾಸಕರ ವಿರುದ್ಧ ಪ್ರಕಟವಾಗಿರುವ ವರದಿಗಳನ್ನು ನಾನು ನೋಡಿರುವೆ. ಅದರ ಗುಣಮಟ್ಟದ ಬಗೆಗೆ ನಾನು ಏನೂ ಹೇಳಲಾರೆ. ಏಕೆಂದರೆ ಇದೆಲ್ಲ ಸಾಪೇಕ್ಷವಾದ ಸಂಗತಿ. ಆದರೆ, ಅದರಿಂದ ಶಾಸಕರ ಹಕ್ಕುಚ್ಯುತಿ ಆಯಿತೇ ಅಥವಾ ಮಾನಹಾನಿ ಆಯಿತೇ ಎಂಬುದರ ಬಗೆಗೆ ಜಿಜ್ಞಾಸೆ ಮಾಡಲು ಖಂಡಿತ ಅವಕಾಶ ಇದೆ. ಶಾಸಕರು ತಮ್ಮ ವಿರುದ್ಧ ಪ್ರಕಟವಾದ ‘ಮಾನಹಾನಿಕಾರಕ’ ವರದಿಗಳನ್ನು ಹಕ್ಕುಚ್ಯುತಿ ಸಮಿತಿಗೆ ತೆಗೆದುಕೊಂಡು ಹೋಗಲು ಇರುವ ಕಾರಣಗಳಾದರೂ ಏನು? ಅವರಿಗೆ ನ್ಯಾಯಾಂಗದ ಪ್ರಕ್ರಿಯೆಯಲ್ಲಿ ನಂಬಿಕೆ ಇಲ್ಲವೇ? ನ್ಯಾಯಾಂಗದಲ್ಲಿ ಅದಕ್ಕೆ ಪರಿಹಾರ ಇಲ್ಲ ಎನ್ನುವುದಾದರೆ ಮಾತ್ರ ಅವರು ಹಕ್ಕುಚ್ಯುತಿಯಲ್ಲಿ ಇರುವ ಶಿಕ್ಷೆಯ ಅವಕಾಶಗಳನ್ನು ಬಳಸಿಕೊಳ್ಳಬಹುದಿತ್ತು. ‘ಮಾನಹಾನಿಕಾರಕ’ ವರದಿಗಳು ಶಾಸಕರ ಹಕ್ಕಿಗೆ ನಿಜವಾಗಿಯೂ  ಚ್ಯುತಿ ತರುತ್ತವೆಯೇ ಎಂಬ ಬಗೆಗೆ ಸಂವಿಧಾನದಲ್ಲಿ ಯಾವ ಉಲ್ಲೇಖವೂ ಇಲ್ಲ. ಆದರೆ, ಶಾಸನಸಭೆಯ ನಿಯಮಗಳ ತಜ್ಞರಾದ ಎಂ.ಎನ್‌.ಕೌಲ್‌ ಅವರು ಹಕ್ಕುಚ್ಯುತಿಯನ್ನು ಅರ್ಥೈಸುವಾಗ ಮಾನಹಾನಿಕಾರಕ ವರದಿಗಳನ್ನೂ ಹಕ್ಕುಚ್ಯುತಿಯ ಕಕ್ಷೆಗೆ ತಂದಿದ್ದಾರೆ. ಅದನ್ನೇ ರಕ್ಷೆಯಾಗಿ ಈ ಎರಡೂ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ, ಮತ್ತು ಬಳಸಿಕೊಳ್ಳಲಾಗಿದೆ.

‘ಹಾಯ್‌ ಬೆಂಗಳೂರು’ ಪತ್ರಿಕೆ ಕುರಿತ ಹಕ್ಕುಚ್ಯುತಿ ನಿರ್ಣಯದ ಪುಟ 9 ರಲ್ಲಿ ಒಂದು ವಾಕ್ಯ ಇದೆ : ‘ಮಾನ್ಯ ಸದಸ್ಯರ ಕುರಿತು ಸತ್ಯವಾದ ಸಂಗತಿಗಳನ್ನು ಪ್ರಕಟಿಸುವಾಗ ಅವರ ಮಾನಹಾನಿಯಾದರೂ ಅದು ಹಕ್ಕುಚ್ಯುತಿ ಅನಿಸುವುದಿಲ್ಲ...’. ಆದರೆ, ‘ಮಾನ್ಯ ಸದಸ್ಯರ ಕುರಿತು ಸತ್ಯವಾದ ಸಂಗತಿಗಳನ್ನು ಪ್ರಕಟಿಸಿದರೆ’ ಅದು ಹೇಗೆ ಮಾನಹಾನಿಯಾಗುತ್ತದೆ ಎಂದು ಅರ್ಥವಾಗುವುದಿಲ್ಲ! ಸುಳ್ಳು ಸುದ್ದಿಗಳನ್ನು ಪ್ರಕಟಿಸಿದರೆ ಖಂಡಿತ ಮಾನಹಾನಿಯಾಗುತ್ತದೆ. ಆದರೆ, ಅವರು ಶಾಸಕರಾಗಿ ಕೆಲಸ ಮಾಡಲು ಅದರಿಂದ ಹೇಗೆ ಅಡ್ಡಿಯಾಗುತ್ತದೆ? ಅವರು ನ್ಯಾಯಾಲಯದ ಮೊರೆ ಹೋಗಿ ಅಲ್ಲಿ ಇದೇ ಸಂಪಾದಕರಿಗೆ ಜೈಲಲ್ಲ ನೇಣು ಶಿಕ್ಷೆಯನ್ನು ದೊರಕಿಸಿಕೊಂಡಿದ್ದರೂ ಅದು ಈಗಿನ ವಿವಾದಕ್ಕೆ ಎಡೆ ಮಾಡುತ್ತಿರಲಿಲ್ಲ. ಏಕೆಂದರೆ ಅದು ಸಹಜ ನ್ಯಾಯದ ಪರಿಕಲ್ಪನೆಗೆ ಹೊಂದಿಕೊಳ್ಳುತ್ತಿತ್ತು. ಇಲ್ಲಿ ಏನಾಗಿದೆ ಎಂದರೆ ನ್ಯಾಯಾಲಯಕ್ಕೆ ಹೋಗಿ, ಅಲ್ಲಿ ಮಾನಹಾನಿ ದೂರನ್ನು ಸಾಬೀತು ಮಾಡುವುದು ಕಷ್ಟ ಎಂದೋ, ತೀರ್ಪು ಬರುವುದು ಯಾವ ಕಾಲಕ್ಕೋ ಎಂದೋ ಸ್ವತಃ ವಕೀಲರಾಗಿರುವ ಸಭಾಧ್ಯಕ್ಷರು ಹತ್ತಿರದ ದಾರಿಯನ್ನು ಹುಡುಕಿದಂತೆ  ಕಾಣುತ್ತದೆ. ಹಾಗಾಗಿ ಇಲ್ಲಿ ಹಿತಾಸಕ್ತಿಯ ಸಂಘರ್ಷದ ಪ್ರಶ್ನೆ ಉದ್ಭವಿಸುತ್ತದೆ.

ಈ ಪ್ರಕರಣದಲ್ಲಿ ಇನ್ನೂ ಒಂದು ಸಂಘರ್ಷ ಇದೆ : ಅದು, ಶಾಸಕರ ಹಕ್ಕು ಮುಖ್ಯವೋ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯ ಮುಖ್ಯವೋ ಎನ್ನುವುದು. ‘ಸಂವಿಧಾನದ 19 (1) ವಿಧಿಯಡಿ ಸಿಕ್ಕಿರುವ ಅಭಿವ್ಯಕ್ತಿ ಸ್ವಾತಂತ್ರ್ಯವು ಶಾಸಕರಿಗೆ ಸಂವಿಧಾನದ ವಿಧಿ 194 (3) ಅಡಿ ಸಿಕ್ಕ ವಿಶೇಷ ಹಕ್ಕುಗಳನ್ನು ತಳ್ಳಿ ಹಾಕುವುದಿಲ್ಲ. ಬದಲಿಗೆ, ಸಂವಿಧಾನದ ವಿಧಿ 21ರ ಅಡಿ ಪ್ರಾಪ್ತವಾಗಿರುವ ಜೀವಿಸುವ ಹಕ್ಕು ಶಾಸಕರ ವಿಶೇಷ ಹಕ್ಕುಗಳಿಗಿಂತ ದೊಡ್ಡದು’ ಎಂದು ಸುಪ್ರೀಂ ಕೋರ್ಟು ಅಭಿಪ್ರಾಯಪಟ್ಟಿದೆ.  ಆದರೆ, ಶಾಸಕರ ವಿಶೇಷ ಹಕ್ಕುಗಳನ್ನು ವ್ಯಾಖ್ಯಾನ (codify) ಮಾಡಲು ಅದು ಹಿಂದೇಟು ಹಾಕಿದೆ. ಅಥವಾ ಸಂಸತ್ತಿಗೇ (ವಿಧಾನಮಂಡಲಕ್ಕೆ) ಆ ಅಧಿಕಾರವನ್ನು ಬಿಟ್ಟಿದೆ. ಅಂದರೆ ಸುಪ್ರೀಂ ಕೋರ್ಟು ಒಂದು ರೀತಿಯಲ್ಲಿ ಅತ್ಯಂತ ಸಂಯಮದಿಂದ ನಡೆದುಕೊಂಡಿದೆ. ಕಾನೂನು ಮಾಡುವವರು ತಮ್ಮ ವಿಶೇಷ ಹಕ್ಕುಬಾಧ್ಯತೆಗಳನ್ನು ತಾವೇ ವ್ಯಾಖ್ಯಾನಿಸಲಿ ಎಂದು ಅದು ಬಯಸಿರಬಹುದು. ಇದರಲ್ಲಿ ಇನ್ನೂ ಒಂದು ಸೂಕ್ಷ್ಮ ಇದೆ, ಶಾಸಕರು ಮತ್ತು ಸಂಸದರು ತಮ್ಮ ವಿಶೇಷ ಹಕ್ಕುಗಳನ್ನು, ಅವುಗಳನ್ನು ಇನ್ನೂ ಸ್ಪಷ್ಟವಾಗಿ ವ್ಯಾಖ್ಯಾನಿಸಿಲ್ಲ ಎಂಬ ಕಾರಣಕ್ಕಾಗಿಯೇ, ಹೆಚ್ಚಿನ ಎಚ್ಚರ ಹಾಗೂ ಸಂಯಮದಿಂದ ಉಪಯೋಗಿಸಲಿ ಎಂದೂ ಸುಪ್ರೀಂ ಕೋರ್ಟು ಆಶಿಸುತ್ತಿರಬಹುದು. 

ಪ್ರಜಾಪ್ರಭುತ್ವದ ತವರು ಎನಿಸಿದ ಬ್ರಿಟನ್‌ ದೇಶದ ಸಂಸದರು ಒಬ್ಬ ವ್ಯಕ್ತಿಯನ್ನು ಜೈಲಿಗೆ ಕಳಿಸುವ, ಹಕ್ಕುಬಾಧ್ಯತೆಯ ಪರಮಾಧಿಕಾರವನ್ನು  1880ರಷ್ಟು ಹಿಂದಿನಿಂದ ಒಮ್ಮೆಯೂ ಬಳಸಿಲ್ಲ. ಅದೇ ರೀತಿ ಸದನ, ಸದಸ್ಯ ಅಥವಾ ಸದನ ಸಮಿತಿ ವಿರುದ್ಧ ಯಾರಾದರೂ ಮಾನಹಾನಿಕಾರಿಯಾಗಿ ಮಾತನಾಡಿದರು ಎಂಬ ಕಾರಣಕ್ಕಾಗಿ ಅವರ ವಿರುದ್ಧ ಹಕ್ಕುಚ್ಯುತಿ ಅಸ್ತ್ರವನ್ನು ಬಳಸಲಾಗದು ಎಂದು 1987ರಷ್ಟು ಹಿಂದೆ ಹಕ್ಕುಬಾಧ್ಯತೆಗಳನ್ನು ರೂಪಿಸುವಾಗ ಆಸ್ಟ್ರೇಲಿಯಾದ ಸಂಸತ್ತು  ನಿರ್ಣಯಿಸಿದೆ.
ನಮ್ಮಲ್ಲಿ ಇಂಥ ಪೂರ್ವ ನಿದರ್ಶನಗಳು ಅಥವಾ ಸ್ವನಿಯಂತ್ರಣಗಳು ಇಲ್ಲದೇ ಇರಬಹುದು. ಆದರೆ, ಸದನದ ಸದಸ್ಯರಾಗಿ ಅನೇಕ ವರ್ಷ ಕೆಲಸ ಮಾಡಿದ ಸಿದ್ದರಾಮಯ್ಯ , ಕಾಗೋಡು ತಿಮ್ಮಪ್ಪ, ಆರ್‌.ವಿ.ದೇಶಪಾಂಡೆ, ರಮೇಶ್‌ ಕುಮಾರ್‌, ಜಗದೀಶ್‌ ಶೆಟ್ಟರ್‌, ಸುರೇಶ್‌ ಕುಮಾರ್‌ ಅವರಂಥವರು ಈ ಸದನದ ಸದಸ್ಯರೂ ಆಗಿದ್ದಾರೆ. ರಮೇಶ್‌ ಕುಮಾರ್‌, ಕಾಗೋಡು ಹಾಗೂ ಶೆಟ್ಟರ್‌ ಅವರು ಸಭಾಧ್ಯಕ್ಷರಾಗಿಯೂ ಕೆಲಸ ಮಾಡಿದವರು.

ಈ ನಿರ್ಣಯ ಅಂಗೀಕಾರವಾಗುವಾಗ ಬಹಳ ಸುದೀರ್ಘವಾದ ಚರ್ಚೆ ಆಗಬೇಕಿತ್ತು. ಏಕೆಂದರೆ ಹಕ್ಕುಚ್ಯುತಿ ತೆಗೆದುಕೊಂಡ ಈ ಕಠಿಣ ನಿರ್ಧಾರ ಸರಿಯಾದುದೇ ಅಲ್ಲವೇ ಎಂದು ಈ ಹಿರಿಯರೆಲ್ಲ ತಮ್ಮ ಅಭಿಪ್ರಾಯ ಹೇಳಬೇಕಿತ್ತು. ಆದರೆ, ಕೆಲವೇ ಕೆಲವು ಸದಸ್ಯರು ಸದನದಲ್ಲಿ ಇರುವಾಗ ಈ ನಿರ್ಣಯ ಅಂಗೀಕಾರವಾಗಿದೆ. ಅದು ಸರ್ವಾನುಮತದ ನಿರ್ಣಯ ಎಂದೋ ಅಥವಾ ಇದು ಬೆಂಬಲಿಸಲಾಗದ ‘ಕೆಟ್ಟ ಕೇಸು’ ಎಂದೋ ಅನೇಕರು ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ ಮೌನವಾಗಿ ಇದ್ದಾರೆ. ಆದರೆ, ವಿರೋಧ ಪಕ್ಷದ ನಾಯಕ ಶೆಟ್ಟರ್‌ ಅವರು ನಿರ್ಣಯದ ವಿರುದ್ಧ ಮಾತನಾಡುತ್ತಿದ್ದಾರೆ.  ಅದು ‘ಹಕ್ಕುಚ್ಯುತಿ’ ಎಂದು ಅಭಿಪ್ರಾಯಪಡಲಾಗುತ್ತಿದೆ.

ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಸದನದ ದೃಷ್ಟಿಯಲ್ಲಿ ಅಪರಾಧಿಗಳು ಎನಿಸಿರುವ’ ಸಂಪಾದಕರ ಪೈಕಿ ಆರೋಗ್ಯದ ಸಮಸ್ಯೆ ಇರುವ ಒಬ್ಬರನ್ನು ಬಂಧಿಸಬಾರದು ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಹಾಗೆಂದು ಅವರೇ ಅಧಿಕೃತವಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ ಕೂಡ. ಅವರು ಹಾಗೆ ಸೂಚನೆ ಕೊಡುವಾಗಲೇ ಇತ್ತ ವಿಧಾನಸಭೆಯ ಕಾರ್ಯದರ್ಶಿಯವರು ಸರ್ಕಾರದ ಗೃಹ ಕಾರ್ಯದರ್ಶಿ ಮತ್ತು ಪೊಲೀಸ್‌ ಕಮಿಷನರ್‌ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು, ‘ಸದನದ ನಿರ್ಣಯವನ್ನು ಪಾಲಿಸುವ ದೃಷ್ಟಿಯಿಂದ ಏನು ಕ್ರಮ ತೆಗೆದುಕೊಂಡಿದ್ದೀರಿ’ ಎಂದು ವಿಚಾರಿಸಿದ್ದಾರೆ.

‘ಸಂಪಾದಕರನ್ನು ಬಂಧಿಸಬಾರದು’ ಎಂದು ಗೃಹ ಇಲಾಖೆಯ ಅಧಿಕಾರಿಗಳಿಗೆ  ಮುಖ್ಯಮಂತ್ರಿ  ನೀಡಿದ ಸೂಚನೆ ಸದನದ ನಿರ್ಣಯದ ಉಲ್ಲಂಘನೆ ಅಲ್ಲವೇ? ಮತ್ತು ಅದು ಕೂಡ ಇನ್ನೊಂದು ರೀತಿ ಹಕ್ಕುಚ್ಯುತಿ ಆಗುತ್ತದೆಯೇ? ಇದೆಲ್ಲ ಕೂದಲು ಸೀಳುವ ಮಾತು. ಅದರ ಬದಲಿಗೆ, ಸದನದಲ್ಲಿ ಈ ನಿರ್ಣಯ ಪಾಸು ಆಗುವಾಗಲೇ ಮುಖ್ಯಮಂತ್ರಿ ಅಥವಾ ಅವರ ಸರ್ಕಾರದ ಹಿರಿಯ ಸಚಿವರು ಇದ್ದು ಇದನ್ನು ತಡೆದಿದ್ದರೆ ಇನ್ನೂ ಹೆಚ್ಚಿನ ಗೌರವ ಬರುತ್ತಿತ್ತು ಮತ್ತು ಈಗ ಅಂಟಿರುವ ಪರೋಕ್ಷ ಕಳಂಕದಿಂದ ತಪ್ಪಿಸಿಕೊಳ್ಳಬಹುದಿತ್ತು. ಏಕೆಂದರೆ ವಿಧಾನಸಭೆಯಲ್ಲಿ ಪತ್ರಕರ್ತರಿಗೆ ಯಾವಾಗ ಜೈಲು ಶಿಕ್ಷೆ ವಿಧಿಸಲಾಯಿತು ಮತ್ತು ಆಗ ಯಾವ ಪಕ್ಷದ ಸರ್ಕಾರ ಇತ್ತು ಎಂಬುದು ಈಗ ಇತಿಹಾಸದಲ್ಲಿ ದಾಖಲಾಗಿ ಹೋಯಿತು. ಅದೇ ಕಾರಣಕ್ಕಾಗಿ ಸಭಾಧ್ಯಕ್ಷರು ತೆಗೆದುಕೊಂಡ ಹಕ್ಕುಚ್ಯುತಿ ನಿರ್ಣಯ ಸರ್ಕಾರಕ್ಕೆ ಇಷ್ಟು ‘ಅನಿರೀಕ್ಷಿತ’ ಆಗಿರಬಾರದಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT