ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಕೃಷ್ಟತೆಯ ವ್ಯಾಖ್ಯಾನ

Last Updated 28 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಉತ್ಕೃಷ್ಟತೆ ಎಂದರೇನು? ಇದನ್ನು ಸಾಧಿಸುವುದು ಹೇಗೆ? ಉತ್ಕೃಷ್ಟತೆಗೂ ಸ್ಪಷ್ಟತೆಗೂ; ಉತ್ಕೃಷ್ಟತೆಗೂ ಶುಚಿತ್ವಕ್ಕೂ ಏನು ಸಂಬಂಧ? ಉತ್ಕೃಷ್ಟತೆಗೂ ಸತ್ಯಕ್ಕೂ ಸಂಬಂಧ ಉಂಟೋ? ನಾವು ಒಪ್ಪಿಕೊಂಡ ಕೆಲಸವನ್ನು ಚೆನ್ನಾಗಿ ಮಾಡಿ ಮುಗಿಸುವುದನ್ನು ಉತ್ಕೃಷ್ಟತೆ ಎನ್ನುತ್ತೇವೆ. ಚೆನ್ನಾಗಿ ಎಂದರೆ ಏನು? ಎಷ್ಟು ಚೆನ್ನಾಗಿ? ಯಾರಿಗೆ ಚೆನ್ನಾಗಿ? Perfection ಎಂಬುದು ಪಾರವಿಲ್ಲದ್ದು. ಯಾವ ಕೆಲಸವನ್ನು ಎಷ್ಟೇ ಅದ್ಭುತವಾಗಿ ಮಾಡಿ ಮುಗಿಸಿದ ಮೇಲೂ ಇನ್ನೂ ಚೆನ್ನಾಗಿ ಮಾಡಬಹುದಿತ್ತು ಎನಿಸುತ್ತದೆ.

ಉತ್ಕೃಷ್ಟತೆಯು ತಲಪುವ ಗುರಿ ಸ್ಪಷ್ಟತೆ ಆಗಿರುತ್ತದೆ.ಶುಚಿಯೂ ಆಗಿರುತ್ತದೆ. ಖಚಿತವಲ್ಲದ್ದು ಮತ್ತು ಕೊಳಕಾದದ್ದು ಗುಣಮಟ್ಟದಿಂದ ಕೂಡಿರಲಾರದು. ನಾನು ಕೊಂಚ ಉತ್ಕೃಷ್ಟತೆಯ ಅಪೇಕ್ಷಿ. ಎಲ್ಲವೂ ಆದಷ್ಟು ಉತ್ತಮ ರೀತಿಯಲ್ಲಿ, ಉತ್ತಮ ಸ್ಥಿತಿಯಲ್ಲಿರಬೇಕೆಂದು ಆಶಿಸುವವ. ಅದಕ್ಕಾಗಿ ದಣಿಯುವವ. ನಿಷ್ಠುರ ಕಟ್ಟಿಕೊಂಡವ ಕೂಡ. ಎಲ್ಲ ಕ್ಷೇತ್ರಗಳಲ್ಲಿಯೂ ಯೋಗ್ಯತೆ ಇಲ್ಲದೆ ಮನ್ನಣೆ, ಪದವಿ, ಪುರಸ್ಕಾರಗಳು ದಕ್ಕಬಹುದಾದ ಈ ದಿನಗಳಲ್ಲಿ ಉತ್ಕೃಷ್ಟತೆಯ ಹಂಬಲ ಮತ್ತು ಸಾಧನೆ ಅಪಹಾಸ್ಯಕ್ಕೀಡಾಗುತ್ತಿವೆ. ಉತ್ಕೃಷ್ಟತೆಯ ವ್ಯಾಖ್ಯಾನಕಾರ ಡೆಮಿಂಗ್ ಇಂದು ನೆನಪಾಗುತ್ತಿದ್ದಾನೆ.

ಆತ ಇಪ್ಪತ್ತನೇ ಶತಮಾನದ ಅರುಣೋದಯದಂತಿದ್ದ. ಬಹುತೇಕ ಆ ಶತಮಾನ ಪೂರ್ತಿ ಜೀವಿಸಿದ್ದಾತ. ನೆಲ, ಶೌಚಾಲಯ ಒರೆಸುವ ಕೆಲಸ ಮಾಡಿಕೊಂಡು ವಿದ್ಯಾಭ್ಯಾಸ ಮುಂದುವರಿಸಿದ. ಭೌತಶಾಸ್ತ್ರ ಮತ್ತು ಗಣಿತಗಳನ್ನು ಆಯ್ಕೆ ಮಾಡಿಕೊಂಡು ಕೊಲರೆಡೋ ವಿಶ್ವವಿದ್ಯಾನಿಲಯದಲ್ಲಿ ಮಾಸ್ಟರ್‍ಸ್ ಓದಿದ. ಅವನ ಆಸಕ್ತಿ, ಆದ್ಯತೆಗಳು ಸಂಖ್ಯಾಶಾಸ್ತ್ರದತ್ತ ಕರೆತಂದವು. ಅಮೆರಿಕದ ಸೆನ್ಸಸ್ ಬ್ಯೂರೋದಲ್ಲಿ ಕೆಲವು ವರ್ಷ ಕೆಲಸ ಮಾಡಿದ.

ನಂತರ ಸ್ವತಂತ್ರ ವೃತ್ತಿ ಕೈಗೊಂಡ. ಟೆಲಿಫೋನ್, ಟ್ರಕ್ ಕಂಪೆನಿಗಳು, ರೈಲ್ವೆ, ಆಸ್ಪತ್ರೆ ಇತ್ಯಾದಿಗಳ ಆಡಳಿತವರ್ಗ ಇವನಿಗೆ ಗ್ರಾಹಕರಾದರು. ಅವನು ಉತ್ಕೃಷ್ಟತೆಯ ಪ್ರತೀಕವಾಗಿದ್ದ. ಕೈಗಾರಿಕೆ, ಉತ್ಪಾದನೆ ಮತ್ತು ಆರ್ಥಿಕ ವಲಯದಲ್ಲಿ ಉತ್ಕೃಷ್ಟತೆಯ ಪರಿಕಲ್ಪನೆಗೆ ಹೊಸ ಭಾಷ್ಯ ಬರೆದ. ಗುಣಮಟ್ಟ ಎಂದರೆ ಎಲ್ಲ ದೃಷ್ಟಿಯಿಂದಲೂ ಗುಣಕ್ಕೇ ಸಂಬಂಧಿಸಿರುವಂಥದ್ದು; ಅದು ಕೇವಲ ವಸ್ತುವಿನ ಕೆಳಗೆ ನೇತಾಡುವ ಪ್ರಶಸ್ತಿ, ದುಬಾರಿ ಬೆಲೆ ಪಟ್ಟಿಯಲ್ಲ ಎಂದು ಹೇಳಿದ.



ವಿಲಿಯಂ ಎಡ್ವರ್ಡ್ಸ್ ಡೆಮಿಂಗ್ (೧೯೦೦-–೧೯೯೩) ಒಬ್ಬ ಎಂಜಿನಿಯರ್, ಸಂಖ್ಯಾಶಾಸ್ತ್ರಜ್ಞ, ಪ್ರಾಧ್ಯಾಪಕ, ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಮಾತ್ರವಲ್ಲ ಉತ್ತಮ ಲೇಖಕನೂ ಆಗಿದ್ದ. ತನ್ನ ನೂರಾರು ಪ್ರೌಢ ಹಾಗೂ ಸಂಶೋಧನಾ ಪ್ರಬಂಧಗಳಿಂದ ಜಗತ್ತನ್ನು ಚಕಿತಗೊಳಿಸಲು ಮತ್ತು ತಿದ್ದಲು ಪ್ರಯತ್ನಿಸಿದ. ಡೆಮಿಂಗ್‌ನ ಎರಡು ಪ್ರಮುಖ ಕೃತಿಗಳು Out of The Crisis ಮತ್ತು The New Economics. ಡೆಮಿಂಗ್‌ನ Quality revolution ಸಿದ್ಧಾಂತವು ಈ ಕೃತಿಗಳಲ್ಲಿ ಅಡಕಗೊಂಡಿದೆ.

ದೈತ್ಯ ಉತ್ಪಾದನೆಯೇ ಗುಣಮಟ್ಟದ ಪ್ರತೀಕ ಎಂಬ ಭ್ರಮೆಯಲ್ಲಿದ್ದ ಅಮೆರಿಕದ ಕೆನ್ನೆಗೆ ಏಟು ಕೊಟ್ಟಂತಿತ್ತು ಡೆಮಿಂಗ್‌ನ ತಾತ್ವಿಕತೆ. ಆದರೆ ಎರಡನೇ ವಿಶ್ವಯುದ್ಧದಲ್ಲಿ ಬೂದಿಯಾಗಿದ್ದ ಜಪಾನು ಅವನ ಪಿಸುಮಾತನ್ನು ಆಲಿಸಿತು. ೧೯೫೦ರಲ್ಲಿ ಟೋಕಿಯೋ ಕನ್‌ವೆನ್ಶನ್ ಸೆಂಟರ್‌ನಲ್ಲಿ ಡೆಮಿಂಗ್ ಮಾಡಿದ ಐತಿಹಾಸಿಕ ಭಾಷಣ ಇಡೀ ಜಪಾನಿಗೆ ಸ್ಫೂರ್ತಿದಾಯಕವಾಗಿತ್ತು. ಇದನ್ನು ಜಪಾನಿನ ತಂತ್ರಜ್ಞಾನ, ವಿಜ್ಞಾನ ಸಂಘಟನೆಗಳು (JUSE–ಯೂನಿಯನ್ ಆಫ್ ಜಾಪನೀಸ್ ಸೈಂಟಿಸ್ಟ್ಸ್ ಆ್ಯಂಡ್ ಎಂಜಿನಿಯರ್‍ಸ್) ಸೂಕ್ತವಾಗಿ ಬಳಸಿಕೊಂಡವು.

ವಿಶೇಷವಾಗಿ ಹಡಗು ನಿರ್ಮಾಣ, ಆಟೋಮೊಬೈಲ್, ಎಲೆಕ್ಟ್ರಾನಿಕ್ಸ್ ಶಾಖೆಗಳು ಡೆಮಿಂಗ್‌ನ ವಿಚಾರಧಾರೆಗಳನ್ನು ಅಳವಡಿಸಿಕೊಂಡವು. ಡೆಮಿಂಗ್‌ನ ಫಿಲಾಸಫಿಯನ್ನು ಅಳವಡಿಸುವುದರ ಮುಖಾಂತರ, ಜಾಗತಿಕವಾಗಿ ಬಹು ಬೇಡಿಕೆಯುಳ್ಳ ಉತ್ಪಾದನೆಗಳನ್ನು, ಕಡಿಮೆ ವೆಚ್ಚದಲ್ಲಿ ತಯಾರಿಸಲು ಸಾಧ್ಯ ಎಂಬ ಸತ್ಯವನ್ನು ಅನೇಕ ಜಪಾನಿ ಉದ್ದಿಮೆಗಳು ಕಂಡುಕೊಂಡವು. ಇದರ ಫಲವಾಗಿ ಹತ್ತೇ ವರ್ಷದಲ್ಲಿ ಜಪಾನ್  ದಿಟ್ಟವಾಗಿ ಎದ್ದು ನಿಂತಿತು. ಇಡೀ ಜಪಾನ್ ತನ್ನ ಎಂಪರರ್ ಜತೆಯಲ್ಲಿ ಕೃತಜ್ಞತೆಯಿಂದ ಡೆಮಿಂಗ್‌ಗೆ ನಮಸ್ಕರಿಸಿತು. ಅದು ಗುರುವಿಗೆ ಶಿಷ್ಯಸಂಕುಲ ನಮಸ್ಕರಿಸಿದಂತಿತ್ತು.

ಅಮೆರಿಕದ ಎನ್‌ಬಿಸಿ ಟಿವಿಯು ‘If Japan can... Why can’t we?’ ಎಂಬ ಸಾಕ್ಷ್ಯಚಿತ್ರ ತಯಾರಿಸಿ ತನ್ನದೇ ದೇಶದ ಡೆಮಿಂಗ್‌ನ ಪ್ರತಿಭೆಯನ್ನು ತನ್ನವರಿಗೆ ಪರಿಚಯ ಮಾಡಿಕೊಟ್ಟಿತು. ಅನಂತರ ಅಮೆರಿಕದ ಅಧ್ಯಕ್ಷ ರೇಗನ್ ರಾಷ್ಟ್ರೀಯ ಪದಕ ನೀಡಿ ಗೌರವಿಸಿದ. ತನ್ನ ಉಪನ್ಯಾಸ ಮತ್ತು ಪುಸ್ತಕಗಳ ಮೂಲಕ ಡೆಮಿಂಗ್ ತನ್ನ ಕೊನೆಯ ದಿನಗಳವರೆಗೆ ಇಡೀ ಜಗತ್ತಿಗೆ ಗುಣಮಟ್ಟದ ಹೊಸ ವ್ಯಾಖ್ಯಾನವನ್ನು ವಿವರಿಸುತ್ತಾ 1993ರಲ್ಲಿ ವಾಷಿಂಗ್‌ಟನ್ ಡಿ.ಸಿ.ಯಲ್ಲಿ ತೀರಿಕೊಂಡ. ಡೆಮಿಂಗ್‌ನ ಹೆಸರು ಹಾಲ್ ಆಫ್ ಫೇಮ್‌ಗೆ ದಾಖಲಾಗುವುದರೊಂದಿಗೆ ಸ್ಥಾಯಿ ಆಯಿತು.

ಜಪಾನ್ ಮತ್ತು ಅಮೆರಿಕಗಳಿಗೆ ಸಿದ್ಧಾಂತಗಳಲ್ಲಿ ಬಹಳ ವ್ಯತ್ಯಾಸವಿದೆ. ಅಮೆರಿಕ ದೈತ್ಯ ಉತ್ಪಾದನೆ, ಮಾರುಕಟ್ಟೆ ಮತ್ತು ಕೊಳ್ಳುಬಾಕತನವನ್ನು ಸಂಸ್ಕೃತಿ ಎಂದುಕೊಂಡರೆ ಜಪಾನ್ ತನ್ನ ದೇಶೀಯ ಭಾಷೆ, ನೆಲಮೂಲ ಸಂಸ್ಕೃತಿಯನ್ನು ಉಳಿಸಿಕೊಂಡೇ ಬೆಳೆಯಿತು. ಈಗಲೂ ಅಮೆರಿಕನ್ನರು ಜಪಾನ್ ಉತ್ಪಾದಿತ ಇಂಪೋರ್ಟೆಡ್ ವಸ್ತುಗಳಿಗಾಗಿ ಹಪಹಪಿಸುತ್ತಾರೆ. ತಮ್ಮಲ್ಲೇ ಸಾವಿರಾರು ತಳಿಗಳಿದ್ದರೂ ‘ನನ್ನದು ಜಪಾನಿ ಮಾಡೆಲ್ ಕಾರು’ ಎಂದು ಹೆಮ್ಮೆಯಿಂದ ತೋರಿಸಿಕೊಳ್ಳುವ ಅಮೆರಿಕನ್ನರನ್ನು ಕಂಡಿದ್ದೇನೆ. ಇದರ ಹಿಂದೆ ಅಮೆರಿಕದವನೇ ಆದ ಡೆಮಿಂಗ್‌ನ ತಾತ್ವಿಕತೆ ಇರುವುದು ವಿಪರ್ಯಾಸ.

ಗುಣಮಟ್ಟವನ್ನು ಕುರಿತಂತೆ ಡೆಮಿಂಗ್ ಹದಿನಾಲ್ಕು ಅಂಶಗಳನ್ನು ಹೇಳುತ್ತಾನೆ. ಮೂಲತಃ ಸಂಖ್ಯಾಶಾಸ್ತ್ರಜ್ಞನಾದರೂ ಸಂಖ್ಯೆಯನ್ನು ಆಧರಿಸಿದ ಧ್ಯೇಯಗಳು ಮತ್ತು ವ್ಯಾಖ್ಯೆಗಳನ್ನು ಅವನು ನಿರಾಕರಿಸುತ್ತಾನೆ. ವಾಸ್ತವವಾಗಿ ಸರ್ಕಾರಗಳು ಹುಸಿ ಅಥವಾ ಉತ್ಪ್ರೇಕ್ಷಿತ ಅಂಕಿ ಸಂಖ್ಯೆಗಳಿಂದ ಪ್ರಜೆಗಳನ್ನು ನಂಬಿಸಲು ಮತ್ತು ವಂಚಿಸಲು ಯತ್ನಿಸುತ್ತವೆ. ಡೆಮಿಂಗ್‌ಗೆ ಇದರಲ್ಲಿ ನಂಬಿಕೆ ಇಲ್ಲ. ಅವನಿಗೆ ನಂಬಿಕೆ ಇರುವುದು ಉತ್ಪಾದನೆ ಮತ್ತು ಗುಣಮಟ್ಟಗಳೆರಡೂ ನಿರಂತರವಾಗಿ ಮತ್ತು ಸಮಾನಾಂತರವಾಗಿ ಬೆಳೆಯುವಂತೆ ನೋಡಿಕೊಳ್ಳುವುದರಲ್ಲಿ.

ಏಕವ್ಯಕ್ತಿ ನಾಯಕತ್ವಕ್ಕಿಂತ ಸಾಂಸ್ಥಿಕ ನಾಯಕತ್ವ ಉತ್ತಮ. ಆಗ Quality ಎನ್ನುವುದು ಎಲ್ಲ ಹಂತಗಳಲ್ಲಿ ನಿರ್ಮಾಣವಾಗುತ್ತದೆ. ಕೈಗಾರಿಕೆ, ಉದ್ಯಮ ಮತ್ತು ಆರ್ಥಿಕತೆಗಳು ನಿತ್ಯ ಬದಲಾಗುತ್ತಿರುವುದರಿಂದ ಅವುಗಳ ತಾತ್ವಿಕತೆ ಕೂಡ ಅನುದಿನವೂ ಪರಿಶೀಲನಾಯೋಗ್ಯವಾಗಿರಬೇಕು. ಕುಶಲ ಕರ್ಮಿಗೆ, ನೌಕರನಿಗೆ ಮೂಗುಬ್ಬಸವಿರಬಾರದು. ನಿರಾಳತೆ ಮತ್ತು ನೈತಿಕತೆ ಇದ್ದಾಗ ಮಾತ್ರ ಉತ್ಕೃಷ್ಟವಾದುದನ್ನು ಸಾಧಿಸಲು ಸಾಧ್ಯ. ಉತ್ಪಾದಕ ಘಟಕಗಳಲ್ಲಿ ಬೇರೆ ಬೇರೆ ವಿಭಾಗಗಳಿರುವುದರಿಂದ ಬೇಗನೆ ಅಹಂ ತಲೆದೋರುತ್ತದೆ.

ಹೊಂದಾಣಿಕೆಯ ಲಯ ತಪ್ಪುತ್ತದೆ. ನಮ್ಮ ಕೆಲಸ ನಾವು ಮಾಡಿ ಬಿಸಾಕುತ್ತೇವೆ. ಆದರೆ ಇತರರ ತಪ್ಪುಗಳಿಗೆ ನಾವು ಹೊಣೆಗಾರರಲ್ಲ ಎಂದು ಪೂರ್ವಭಾವಿ ಅಫಿಡವಿಟ್ ಹಾಕಿಕೊಂಡಂತೆ ವಿಭಾಗವೊಂದು ಕೆಲಸ ಮಾಡಿದರೆ, ಅದು ಎಷ್ಟೇ ದೈತ್ಯ, ಅದ್ಭುತ ಉತ್ಪಾದನೆ ಮಾಡಿದರೂ ವ್ಯರ್ಥ. ದೇಹದ ವಿವಿಧ ಅಂಗಗಳ ನಡುವಿನ ಸಮನ್ವಯದಂತೆ ಉತ್ಪಾದನೆಯ ವಿವಿಧ ಘಟಕಗಳು ಸಹ. ಮೊದಲಿಗೆ ಈ ಸಂಘರ್ಷಗಳನ್ನು ತಪ್ಪಿಸಬೇಕು.

ಪರಿಣಾಮಕಾರಿಯಾದ ಕೆಲಸ ಆಗುವುದು ಉತ್ತಮ ವಾತಾವರಣ ಕಲ್ಪಿಸಿದಾಗ ಮಾತ್ರ. ನಾವು ವ್ಯಕ್ತಿಯ ಕೌಶಲ್ಯದಲ್ಲಿ ನಂಬಿಕೆ ಇರಿಸುವಷ್ಟು, ಅವನಿಗೆ ಬೇಕಾದ ವಾತಾವರಣ ಕಲ್ಪಿಸುವುದರಲ್ಲಿ ನಂಬಿಕೆ ಇರಿಸುವುದಿಲ್ಲ. ಪ್ರತಿಯೊಬ್ಬನಿಗೂ ಅಮಿತ ಶಕ್ತಿ, ಚೈತನ್ಯಗಳಿರುತ್ತವೆ. ಅಂಥವನಿಗೆ ಅರ್ಹ ಪರಿಸರ ಕೊಟ್ಟು ನೋಡಿ. ಚಿಂದಿ ಉಡಾಯಿಸುತ್ತಾನೆ. ಬೋಧನೆಯ ಮೂಲಕ ಸಂಸ್ಥೆಯ ಗುರಿ ಮತ್ತು ಉದ್ದೇಶಗಳು ಎಲ್ಲರಿಗೂ ಸಂವಹನಗೊಳ್ಳಬೇಕು. ಈ ಸಮಭಾಗಿತ್ವ ಮತ್ತು ಸಹಭಾಗಿತ್ವ ಎಲ್ಲರಿಗೂ ಘನತೆ ತಂದುಕೊಡುವುದು ಮಾತ್ರವಲ್ಲ ಇರುವ ಅಡ್ಡಗೋಡೆಗಳನ್ನು ಒಡೆದು ಹಾಕುತ್ತವೆ.

ಆಗ ಪ್ರತಿ ಉತ್ಪನ್ನವೂ ಗುಣಮಟ್ಟದಿಂದ ಕೂಡಿರಲು ಸಾಧ್ಯ. ಕಷ್ಟಪಟ್ಟು ದುಡಿಯಿರಿ ಎಂಬುದು ಹಳಸಲು ವಾಕ್ಯ. ಯಾವ ಕೆಲಸ ಮಾಡಬೇಕು, ಹೇಗೆ ಕೆಲಸ ಮಾಡಬೇಕು, ಎಂಥ ಕೆಲಸ ಮಾಡಬೇಕು ಮತ್ತು ಇತರ ಕೆಲಸಗಾರನ ಜೊತೆ ಹೇಗೆ ಸಂಯೋಜಿತವಾಗಿ ಕೆಲಸ ಮಾಡಬೇಕು ಎಂಬ ಅರಿವು ಮುಖ್ಯ. It is not enough to just do your best or work hard you must know what to work on ಎನ್ನುತ್ತಾನೆ ಡೆಮಿಂಗ್. ಒಂದು ವ್ಯವಸ್ಥೆಯ ಅಣಕವೆಂದರೆ ಅದು ವ್ಯಕ್ತಿಸಾಮರ್ಥ್ಯವನ್ನು ಪೋಲು ಮಾಡುವುದು. ಅವನ ಹತಾಶೆಯನ್ನು ಗಮನಿಸದಿರುವುದು. ಜಗತ್ತಿಗೆ ತನ್ನದೊಂದು ಕಾಣಿಕೆ ನೀಡಬೇಕೆನ್ನುವ ವ್ಯಕ್ತಿಯ ತವಕ ತಲ್ಲಣಗಳನ್ನು ತಿಳಿಯದಿರುವುದು. ಡೆಮಿಂಗ್ The greatest waste is failure to use the abilities of people; to learn about their frustrations and about the contributions that they are eager to make ಎನ್ನುತ್ತಾನೆ.

ಡೆಮಿಂಗ್‌ನ ವಿಚಾರಸರಣಿ ಅತಿ ಆದರ್ಶ, ಅನನುಕರಣೀಯ ಎಂಬ ಟೀಕೆಗಳೂ ಇವೆ. ಕೆಲವರು Qualityಯನ್ನು ಇನ್ನೊಂದು ಅತಿರೇಕದಲ್ಲಿ ಗ್ರಹಿಸುತ್ತಾರೆ. ಅದ್ದೂರಿತನ, ಕಣ್ಣುಕೋರೈಸುವ ಶ್ರೀಮಂತಿಕೆ, ಆಡಂಬರಗಳನ್ನು ಉತ್ಕೃಷ್ಟತೆ ಎಂದು ತಪ್ಪಾಗಿ ವ್ಯಾಖ್ಯಾನಿಸುತ್ತಾರೆ. ಅಡಿಗಡಿಗೆ ಶ್ಲೋಕಗಳನ್ನು, ದೊಡ್ಡವರ ಮಾತುಗಳನ್ನು ಪುಂಖಾನುಪುಂಖವಾಗಿ ಉದುರಿಸಿದರೆ ಅವನನ್ನು ಉತ್ತಮ ವ್ಯಕ್ತಿ ಎನ್ನುತ್ತೇವೆ. ಇದು ವ್ಯಕ್ತಿಯ ಸ್ಮರಣಶಕ್ತಿಯೇ ಹೊರತು ಅವನ ವ್ಯಕ್ತಿತ್ವದ ಶಕ್ತಿಯಲ್ಲ.

ಈ ಉತ್ಕೃಷ್ಟತೆಯ ವ್ಯಸನ ಕಲಾಭಿವ್ಯಕ್ತಿಯಲ್ಲೂ ಇದೆ. ಪ್ರಶಸ್ತಿಯನ್ನೇ ಗುರಿಯಾಗಿಸಿಕೊಂಡು, ಅದನ್ನೊಂದು ವ್ಯಸನವನ್ನಾಗಿಸಿಕೊಂಡು ಅದರತ್ತಲೇ ಓಡುವ ‘ವೃತ್ತಿಪರಪ್ರಶಸ್ತಿವಿಜೇತ’ರನ್ನು ಉತ್ತಮ ಕಲಾಕಾರ ಎನ್ನಲಾಗದು. ಏಕೆಂದರೆ ಸಹಜಾಭಿವ್ಯಕ್ತಿಯೇ ಉತ್ತಮವಾದುದು. ಅತಿಯಾದ ವ್ಯಸನ ಮತ್ತು ಅತಿರೇಕಗಳಿಂದ ಗುಣಮಟ್ಟವನ್ನು ಸಾಧಿಸಲಾಗುವುದಿಲ್ಲ. ಅದು ಗುಣಮಟ್ಟದ ತೋರಿಕೆ ಮಾತ್ರವಾಗಿರುತ್ತದೆ.

ತಮಾಷೆಯ ಒಂದು ಖಾಸಗಿ ನಿದರ್ಶನ ಹೇಳುತ್ತೇನೆ. ಮೈಸೂರಿನಲ್ಲಿ ನನಗೊಬ್ಬ ಗೆಳೆಯನಿದ್ದಾನೆ. ಅವನಿಗೆ ಶುಚಿತ್ವದ ವ್ಯಸನ. ಅವನ ದೃಷ್ಟಿಯಲ್ಲಿ ಶುಚಿತ್ವವೇ ಗುಣಮಟ್ಟ. ತಪ್ಪಿಲ್ಲ. ಅವನ ಮನೆಗೆ ಹೋದಾಗೆಲ್ಲಾ ಕೈಯಲ್ಲೊಂದು ಶುಭ್ರವಾದ ಬಿಳಿ ಬಟ್ಟೆ ತುಂಡು ಇಟ್ಟುಕೊಂಡು ಸದಾ ಟೇಬಲ್, ಸೋಫಾ, ಶೋಕೇಸ್ ಮೇಲೆ ಇಲ್ಲದ ದೂಳು ಒರೆಸುತ್ತಲೇ ಇರುತ್ತಾನೆ. ಕಣ್ಣುಗಳು ಕಸದ ಚೂರಿಗಾಗಿ ಹುಡುಕುತ್ತಲೇ ಇರುತ್ತವೆ. ತಾನು ಮತ್ತು ತನ್ನ ಪರಿಸರ ಅಚ್ಚುಕಟ್ಟಾಗಿರಬೇಕೆಂಬುದು ಸರಿಯೆ. ಆದರೆ ಅದೊಂದು ವ್ಯಸನವಾದರೆ? ಅದೇ ವ್ಯಕ್ತಿ ಬೀದಿಗಿಳಿದರೆ ಎಲ್ಲೆಂದರಲ್ಲಿ ಪುಕು ಪುಕು ಸಿಗರೇಟು ಸೇದಿ ತುಂಡನ್ನು ಎಸೆದು ಹೋಗುತ್ತಾನೆ.

ಅಚ್ಚುಕಟ್ಟುತನ ನನ್ನೊಬ್ಬನಿಗೆ ಮಾತ್ರ ಎಂದು ನಂಬಿದವರು ತಮ್ಮ ಮನೆಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳುತ್ತಾರೆ. ಆದರೆ ಮನೆ ಎದುರಿನ ರಸ್ತೆಯಲ್ಲಿ ಒಂದು ಗಿಡ ನೆಟ್ಟು ತಂಬಿಗೆ ನೀರು ಹಾಕುವುದಿಲ್ಲ. ಉತ್ಕೃಷ್ಟತೆ ಎಂಬುದು ವ್ಯಕ್ತಿಯ ಖಾಸಗಿ ವ್ಯಸನವಾಗಿ, ಸಾರ್ವಜನಿಕವಾಗಿ ನಿರುಪಯುಕ್ತವಾದರೆ ಅದು ಅರ್ಥಹೀನ. ಉತ್ಕೃಷ್ಟತೆಯ ನಿಜವಾದ ಅರ್ಥ ನಮ್ಮ ಭಾರತದಲ್ಲಿನ್ನೂ ಮೈತಾಳಿಲ್ಲ. ನಾವು ಡೆಮಿಂಗ್‌ನಿಂದ ಮತ್ತು ಜಪಾನಿನಿಂದ ಎಲ್ಲ ದೃಷ್ಟಿಯಿಂದಲೂ ಬಹಳ ದೂರ ಇದ್ದೇವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT