ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕುಮಾರರು

Last Updated 16 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಪರೀಕ್ಷೆಗಳನ್ನು ಮಕ್ಕಳು ಹೇಗೆ ಬರೆಯುತ್ತಾರೆ ಎಂಬುದೇ ಒಂದು ಸೋಜಿಗ. ಚೆನ್ನಾಗಿ ಓದಿ, ಒಳ್ಳೆ ತಯಾರಿ ಮಾಡಿಕೊಂಡು ಉತ್ತರಗಳನ್ನು ಬರೆಯುವ ಕೆಲ ವಿದ್ಯಾರ್ಥಿಗಳ ಉತ್ತರಗಳು ನಿಜಕ್ಕೂ  ಹೆಮ್ಮೆ ಹುಟ್ಟಿಸುತ್ತವೆ. ಕೆಲ ಮಕ್ಕಳಂತೂ, ತಮ್ಮ ವಯಸ್ಸನ್ನು ಮೀರಿದ ಪ್ರಬುದ್ಧತೆ ತೋರಿಸಬಲ್ಲರು. ಇಷ್ಟೊಂದು ಚೆನ್ನಾಗಿ ಉತ್ತರ ಬರೆಯುವುದು ನಮ್ಮಿಂದಲೇ ಸಾಧ್ಯವಿಲ್ಲ ಕಣ್ರೀ ಎಂದು ಮೌಲ್ಯಮಾಪಕರೆ ಆಶ್ಚರ್ಯ ಸೂಚಿಸುವಷ್ಟು ಅವು ಚೆನ್ನಾಗಿರುತ್ತವೆ. ಇನ್ನು ನೂರಕ್ಕೆ ನೂರು ಅಂಕ ಪಡೆಯುವ ಮಕ್ಕಳ ಉತ್ತರ ಪತ್ರಿಕೆಗಳನ್ನು ಮೌಲ್ಯ ಮಾಪನ ಕೇಂದ್ರದಲ್ಲಿರುವ ಎಲ್ಲರೂ ನೋಡಿ ಸಂತಸ ಪಡುತ್ತಾರೆ. ಅದು ತಮ್ಮ  ಸ್ವಂತ ಮಗನೋ, ಮಗಳೋ, ಅಂಕ ಪಡೆದಷ್ಟು ಸಂಭ್ರಮದ ಸಮಯ. ಅದೇ ಸಮಯದಲ್ಲಿ  ಲಟಾರಂತ ಫೇಲಾಗುವ ಮಕ್ಕಳ ಬಗ್ಗೆ ಕನಿಕರವೂ, ಬೇಸರವೂ ಉಕ್ಕಿ ಬರುತ್ತದೆ. ಇಂಥ ಸಂತಸ ಮತ್ತು ದುಃಖಗಳೆರಡೂ ಏಕಕಾಲದಲ್ಲಿ  ಮೇಷ್ಟ್ರುಗಳಿಗೆ ವರ್ಷಕ್ಕೊಮ್ಮೆ  ಉಂಟಾಗುವ ಕಾಲವೇ ಮೌಲ್ಯಮಾಪನ ಕಾಲ.

ಕೂತು ಓದದೆ, ಪರೀಕ್ಷೆಗೆ ತಯಾರಾಗದೆ, ಹಾಗೇ ಕೈಬೀಸಿಕೊಂಡು ಬಂದು ಪರೀಕ್ಷೆ ಬರೆಯುವ ಕೆಲ ಉತ್ತರ ಕುಮಾರರೂ ಇರುತ್ತಾರೆ. ಇವರ ಉತ್ತರಗಳು ತೋರುವ ಸಾಹಸ, ಭಂಡತನ ಮತ್ತು ಭಾಷಾ ಶೈಲಿಗಳು ಮಾತ್ರ  ಸದಾ ಅಮೋಘವಾಗಿರುತ್ತವೆ. ಮೂರು ಗಂಟೆಯ ಕಾಲ ಪರೀಕ್ಷಾ ಹಾಲಿನಲ್ಲಿ ಟೈಮು ಕಳೆಯಲಿಕ್ಕೆ ಸಂಕಟ ಪಡುವ ಇವರು ಏನು ಬೇಕಾದರೂ ಬರೆಯಬಲ್ಲರು. ಅವರ ಬಗೆಬಗೆಯ ಹೊಸ ಉತ್ತರಗಳನ್ನು ಕಂಡು ನಾವು ದಂಗಾಗಿ ಹೋಗುತ್ತೇವೆ. ಕೆಲ ಉತ್ತರಗಳಂತೂ ಹೌಹಾರಿ ಬೀಳುವಂತಿರುತ್ತವೆ. ನಮ್ಮನ್ನು ತಮ್ಮ ಬರವಣಿಗೆಯ ಮೂಲಕ ಕೆರಳಿಸಿ, ಕಿಚಾಯಿಸಿ, ಗೋಳಾಡಿಸಿ ಕೊನೆಗೆ ನಗಿಸುವ ಇವರ ಬಗ್ಗೆ ನನಗೆ ಕುತೂಹಲ ಮತ್ತು ಗೌರವವಿದೆ. ಇತ್ತೀಚಿಗಷ್ಟೇ ದ್ವಿತೀಯ ಪಿಯುಸಿ ಕನ್ನಡ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೆಲಸದಲ್ಲಿ ನಾವೆಲ್ಲಾ ಗೆಳೆಯರು ಕಂಡ  ಇಂಥ ಒಂದಿಷ್ಟು ಉದಾಹರಣೆಗಳೇ ಅವಕ್ಕೆ ಸಾಕ್ಷಿ.

ಭೀಮನಿಗೆ ಹೆದರಿದ ದುರ್ಯೋಧನ ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತಿದ್ದಾನೆ. ಭೀಮ ಅವನನ್ನು ಸರೋವರದಿಂದ ಹೊರಗೆ ಬರುವಂತೆ ಮಾಡಲು ಸಾಕಷ್ಟು ನಿಂದಿಸುತ್ತಾನೆ. ವ್ಯಂಗ್ಯದ ಮಾತುಗಳನ್ನು ಆಡುತ್ತಾನೆ. ಹಿಂದೆ ನಡೆದು ಹೋದ ಎಲ್ಲಾ ಕಹಿ ಪ್ರಸಂಗಗಳನ್ನು ಅವನಿಗೆ ನೆನಪು ಮಾಡುತ್ತಾನೆ. ವೀರನಾದ ನೀನು ಹೀಗೆ ಹೇಡಿಯಂತೆ ಬಚ್ಚಿಟ್ಟುಕೊಳ್ಳುವುದು ಸರಿಯಲ್ಲ, ಹೊರಗೆ ಬಂದು ಯುದ್ಧವನ್ನು ಮಾಡು. ಕಪ್ಪೆ, ಮೀನುಗಳು ಇರುವ ಜಾಗದಲ್ಲಿ ವೀರನಾದ ನೀನು ಕೂತಿರುವುದು ಸರಿಯೇ? ಶೂರನಾದವನು ಯುದ್ಧಕ್ಕೆ,  ಸಾವಿಗೆ ಎಂದೂ ಹೆದರುವುದಿಲ್ಲ. ನಿನ್ನ ಹೆಸರಲ್ಲೇ ದುರ್ ಯೋಧ ಅಂದರೆ ಅಸಾಧ್ಯ ವೀರನೆಂಬ ಅರ್ಥವಿದೆ. ಹೀಗಿದ್ದು ಸಾವಿಗೆ ಹೆದರುವೆಯಲ್ಲ ಹೇಡಿ. ವೀರನಾಗಿ ಸಾಯುವವರು ಮತ್ತೆ ಹುಟ್ಟುವುದಿಲ್ಲವೇ? ‘ಭೀಮ ಚಿಃ ಸತ್ತರೇಂ ಪುಟ್ಟರೆ ಎಂದೆಲ್ಲಾ ಬೈಯ್ಯುತ್ತಾ ಭೀಮ ಸಿಂಹದಂತೆ ನಾದವನ್ನು ಮಾಡಿದನು. ಇದರಿಂದ ಬ್ರಹ್ಮಾಂಡವೇ ಒಡೆದು ಚೂರಾಗಿ ಹೋಯಿತು. ಇದು ಕಥಾ ಪ್ರಸಂಗ. ಇದರ ಮೇಲೆ ಪ್ರಶ್ನೆಗಳನ್ನು ಕೇಳಲಾಗಿತ್ತು.

ಮೊದಲ ಪ್ರಶ್ನೆ: ಭೀಮನ ಸಿಂಹನಾದದಿಂದ ಬ್ರಹ್ಮಾಂಡ ಏನಾಯಿತು?
ಉತ್ತರ:
ಬ್ರಹ್ಮಾಂಡ ಏನಾಯಿತು ನನಗೇನು ಗೊತ್ತು? ಆವತ್ತು ಅಲ್ಲಿ ನಾನಿರಲಿಲ್ಲ. ಗೊತ್ತಿದ್ದರೆ ನೀವೇ ಹೇಳಿ. ಗೊತ್ತಿಲ್ಲ... ಗೊತ್ತಿಲ್ಲ...
ಆ ಗೊತ್ತಿಲ್ಲ.. ಅಲ್ಲಿಗೆ ನಿಲ್ಲಲಿಲ್ಲ. ಮುಂದೆ ಎಲ್ಲಾ ಪ್ರಶ್ನೆಗಳಿಗೂ ಒಂದೇ ಸಮಾನ ಉತ್ತರ ಗೊತ್ತಿಲ್ಲ... ಗೊತ್ತಿಲ್ಲ... ಇಡೀ ಹದಿನಾರು ಪುಟಗಳೂ ಗೊತ್ತಿಲ್ಲ. ಕೊನೆಗೆ ಮುಕ್ತಾಯ ಮಾತು: ಏನು ಮಾಡ್ತೀರಾ ಮಾಡ್ಕೊಳ್ಳಿ ನಿಮ್ಮಿಷ್ಟ.

ಮತ್ತೊಂದು ಪ್ರಶ್ನೆ: ಸರೋವರದ ನೀರಿನಲ್ಲಿ ಅಡಗಿಕೊಂಡಿದ್ದವನು ಯಾರು?
ಉತ್ತರ:
ಬಿಸಿಲು ಜಾಸ್ತಿಯಾದಾಗ ಹುಡುಗರು ನೀರಿನಲ್ಲಿ ಕೂತುಕೊಳ್ಳುತ್ತಾರೆ. ಅವರ ಜೊತೆಗೆ ಭೀಮನು ಅಡಗಿಕೊಂಡನು.
ಇನ್ನು ಮುಂದಿನ ಸಂದರ್ಭ ಸೂಚಿಸಿ ಪ್ರಶ್ನೆ ಅದೇ ಪಾಠದಿಂದ: ‘ಭೀಮ ಚಿಃ ಸತ್ತರೇಂ ಪುಟ್ಟರೆ’ ಎಂದು ಹೇಳುವ ಪ್ರಸಂಗದ ವಿವರಣೆ ಬರೆಯಿರಿ.

ಇದಕ್ಕೆ ನಮ್ಮ ಉತ್ತರಕುಮಾರರ ಉತ್ತರ: ಭೀಮ ದುರ್ಯೋಧನನಿಗೆ ಏನು ಹೇಳಿದ ಗೊತ್ತೇ? ನೀನು ನೀರಿನೊಳಗಿದ್ದೀಯ, ನಿನಗೆ ನೆಗಡಿಯಾಗುವುದಿಲ್ಲವೇ? ಹಾಗೇನಾದರೂ ಆಗಿಬಿಟ್ಟರೆ ಜ್ವರ ಬರಬಹುದು. ಆಮೇಲೆ ಯಾರು ನಿನ್ನ ಜವಾಬ್ದಾರಿ ಹೊರುವವರು. ಆಗ ಈ ಕಾಡಿನಲ್ಲಿ ನಾನು ಡಾಕ್ಟರನ್ನು ಎಲ್ಲಿಂದ ಕರ್ಕೊಂಡು ಬರೋದು? ಕೊನೆಗೆ ನಿನ್ನಂಥ ನೆಗಡಿಯಾದವನು ಇದ್ದರೇನು? ಸತ್ತರೇನು? ನಾನು ಯಾರಿಗೂ ಕೇರ್ ಮಾಡುವುದಿಲ್ಲ. ನೀನು ಬೇಗ ಎದ್ದು ಬರ್ತೀಯೋ? ಇಲ್ಲ ನಾನೇ ಅಲ್ಲಿಗೆ ಬಂದು ನಾಲ್ಕು ಬಾರಿಸಬೇಕೋ?  ನನಗೆ ಸ್ಕೂಲಿಗೆ ತುಂಬಾ ಲೇಟಾಗುತ್ತಿದೆ ಎಂದು ಹೇಳಿದನು.

ಇದಕ್ಕೆ ಮತ್ತೊಬ್ಬ ವಿದ್ಯಾರ್ಥಿಯ ಉತ್ತರ: ಸಾರ್ ಈ ಪ್ರಶ್ನೆಗೆ ನನಗೆ ಉತ್ತರ ಗೊತ್ತಿಲ್ಲ. ಇದಕ್ಕೇನು, ನೀವಿಲ್ಲಿ ಕೇಳಿದ ಯಾವ ಪ್ರಶ್ನೆಗೂ ನನಗೆ ಉತ್ತರ ಗೊತ್ತಿಲ್ಲ. ಸಾರಿ. ಪ್ಲೀಸ್  ನೀವು ಬೇಜಾರಾಗಬೇಡಿ. ನಮ್ಮ ಮನೇಲಿ ತಾತ ಸತ್ತು ಹೋದರು. ಅದಕ್ಕೆ ನಾನು ಸರಿಯಾಗಿ ಪರೀಕ್ಷೆ ಬರೆಯಲಿಲ್ಲ. ನಾನು ಓದಿ ಪಾಸ್ ಆಗಿ ಕೆಲಸಕ್ಕೆ ಸೇರಬೇಕು. ನಿಮ್ಮ ಕಾಲಿಗೆ ಬೀಳುತ್ತೇನೆ. ನೀವೇ ನಮ್ಮ ಮನೆ ದೇವರು ಇದ್ದಂಗೆ. ನನ್ನನ್ನು ನಿಮ್ಮ ಸ್ವಂತ ಮಗ ಎಂದು ತಿಳಿದು ದಯಮಾಡಿ ನನಗೆ ಪಾಸ್ ಮಾಡಿ.  ಮರೆಯಬೇಡಿ. ಇಂಪಾರ್ಟೆಂಟ್, ನಿಮ್ಮ ಮಗ ಎಂದು ತಿಳಿಯಿರಿ. ಪ್ಲೀಸ್ ಪಾಸ್ ಮಾಡಿ. ಪಾಸ್ ಮಾಡಿದ ನಂತರ ನನಗೆ ಫೋನ್ ಮಾಡಿ. ಫೋನ್ ಮಾಡಲು ಲೇಟ್ ಮಾಡಬೇಡಿ. ನನಗೆ ತುಂಬಾ ಅರ್ಜೆಂಟಿದೆ. ನನ್ನ ನಂಬರ್.........

ಹೀಗೆ ಮನವಿಗಳು, ಜೊತೆಗೆ ಒಂದಕ್ಕೊಂದು ಸಂಬಂಧವಿಲ್ಲದ ಉತ್ತರಗಳು. ಪಾಸ್ ಮಾಡಿ ಎಂಬ ನಿವೇದನೆಗಳಂತೂ ಕಾಮನ್. ಒಂದು ಸಲ ಮಾತ್ರ ನನ್ನ ಅದೃಷ್ಟಕ್ಕೆ ಲಾಟರಿ ಹೊಡೆದಿತ್ತು. ಪಾಸ್ ಮಾಡಿ ಎಂದು ಹೇಳಿ ಹುಡುಗನೊಬ್ಬ ಉತ್ತರ ಪತ್ರಿಕೆ ಕೊನೆಯಲ್ಲಿ ನೂರು ರೂಪಾಯಿಯ ನೋಟೊಂದನ್ನು ಅಂಟಿಸಿದ್ದ. ಎಲ್ಲಾ ಉಪನ್ಯಾಸಕರು ಸೇರಿ ಶಿಷ್ಯನ ಈ ಗುರು ಕಾಣಿಕೆಯನ್ನು ಭಕ್ತಿಯಿಂದ ಸ್ವೀಕರಿಸಿ ಆ ದುಡ್ಡಿನಲ್ಲಿ ತಂಪಾದ ಮಜ್ಜಿಗೆ ಕುಡಿದೆವು.

ಓದದ ಮಕ್ಕಳು ಏನೇನೋ ಬರೆಯುತ್ತಾರೆ. ಇಡೀ ಪತ್ರಿಕೆಯ ತುಂಬಾ ಸಿನಿಮಾ ಹಾಡುಗಳು. ದೇವರ ನಾಮಗಳು. ಹೀಗೆ ಏನೇನೋ ಬರೆದು ಟೈಂ ಪಾಸ್ ಮಾಡಿರುತ್ತಾರೆ.  ಆಕಳಿಸಿ, ತೂಕಡಿಸಿ, ಮೈಮುರಿದು, ನೀರು ಕುಡಿದು, ಅತ್ತಿತ್ತ ನೋಡಿ ಏನು ಮಾಡಿದರೂ ಹಾಳಾದ ಟೈಮು ಪರೀಕ್ಷೆಯ ರೂಮಿನಲ್ಲಿ ಪಾಸ್ ಆಗದಿದ್ದರೆ ಅವರು ತಾನೇ ಏನು ಮಾಡಿಯಾರು? ಪರೀಕ್ಷೆಯ ದೆಸೆಯಿಂದ ತುಂಬಾ ಬೇಜಾರಾಗುವ ಕೆಲ ಹುಡುಗರು ಒಳ್ಳೊಳ್ಳೆ ಚಿತ್ರಗಳನ್ನೂ ಬಿಡಿಸುತ್ತಾರೆ. ಪದ್ಯ ಬರೆಯುತ್ತಾರೆ. ಸಿನಿಮಾ ಹಾಡು, ಇಲ್ಲವೇ ಕೊನೆಗೆ ಭಗ್ನ ಹೃದಯದ ಚಿತ್ರಗಳನ್ನಾದರೂ, ಬರೆದು ನಮ್ಮನ್ನು ರಂಜಿಸಿ ಅವರು ಫೇಲಾಗುತ್ತಾರೆ.

ಈ ಸಲ ಒಬ್ಬ  ವಿದ್ಯಾರ್ಥಿಯಂತೂ  ಇಡೀ ನಮ್ಮ  ಪ್ರಶ್ನೆ ಪತ್ರಿಕೆಯನ್ನೇ ಸಾರಾಸಗಟಾಗಿ ತಿರಸ್ಕರಿಸಿ ಅವನದ್ದೇ ಒಂದು ಹೊಸ ಪ್ರಶ್ನೆ ಪತ್ರಿಕೆಯನ್ನು ತಾನೇ ರೂಪಿಸಿಕೊಂಡು ಉತ್ತರ ಬರೆದಿದ್ದ. ಇಲ್ಲಿ ಎಲ್ಲವೂ ಸಿನಿಮಾ ಸಂಬಂಧಿ ಪ್ರಶ್ನೋತ್ತರಗಳು. ಒಂದು: ರಾಜ್ ಕುಮಾರ್ ಅಭಿನಯಿಸಿದ ಕೊನೆ ಚಿತ್ರ ಯಾವುದು? ಕಿಚ್ಚ ಸುದೀಪರ ಮುಂದಿನ ಸಿನಿಮಾ ಯಾವುದು? ಉಪ್ಪಿಗಿಂತ ರುಚಿ ಬೇರೆಯಿಲ್ಲ ಹಾಡಿಗೆ ಅಭಿನಯಿಸಿದ ನಟ ಯಾರು? ಎದ್ದೇಳು ಮಂಜುನಾಥ ಸಿನಿಮಾ ನಿರ್ದೇಶಕ ಯಾರು? ಹೀಗೆ ಅವನದೇ ಪ್ರಶ್ನೆಗಳು, ಅವನದೇ ಉತ್ತರಗಳು. ಕೊನೆಗೆ ಪುಣ್ಯಾತ್ಮ ಅವನೇ ಮೌಲ್ಯಮಾಪನ ಕೂಡ ಮಾಡಿಕೊಂಡು ನೂರಕ್ಕೆ ನೂರು ಅಂಕ ಕೊಟ್ಟುಕೊಂಡಿದ್ದ. ಅದರ ಕೆಳಗೆ ಬರೆದ ಕೊನೆಯ ಮಾತು: ಅಣ್ಣಾ ದಿ ಬಾಂಡ್. ಯಾರೂ ಕೆಣಕಂಗೆ ಇಲ್ಲ. ಕೆಣಕಿದ್ರೆ ಯಾರೂ ಉಳಿಯಂಗಿಲ್ಲ. ಓ.ಕೆ. ಜೈ ಕನ್ನಡ! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT