ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ ಮಹಾಚುನಾವಣೆಗೆ ಮುನ್ನುಡಿಯೇ?...

Last Updated 8 ಏಪ್ರಿಲ್ 2017, 19:48 IST
ಅಕ್ಷರ ಗಾತ್ರ

ಇಂದು ನಡೆಯುವ ಉಪಚುನಾವಣೆ ಅನೇಕ ದೃಷ್ಟಿಯಿಂದ ಮಹತ್ವದ್ದು. ಅದು ಮಹತ್ವದ್ದು ಆಗಿರದೇ ಇದ್ದರೆ ಆಡಳಿತ ಪಕ್ಷ ಮತ್ತು ಪ್ರಮುಖ ವಿರೋಧ ಪಕ್ಷ ಇಷ್ಟು ಬೆವರು ಸುರಿಸಬೇಕಿರಲಿಲ್ಲ. ಇಬ್ಬರಿಗೂ ಇದು ಎಲ್ಲವನ್ನೂ ಪಣಕ್ಕೆ ಇಟ್ಟು ನಡೆಸಬೇಕಾದ ಹೋರಾಟದಂತೆ ಕಾಣುತ್ತಿದೆ. ಎರಡೂ ಕಡೆ ಗೆಲ್ಲಬೇಕು ಎಂದು ಇಬ್ಬರೂ ಹಾತೊರೆಯುತ್ತಿದ್ದಾರೆ. ಅದೇ ನಿಜವಾದ ಗೆಲುವು ಎಂದೂ ಅವರಿಗೆ ಗೊತ್ತಿದೆ.

ನಿಜವೋ ಸುಳ್ಳೋ ಗೊತ್ತಿಲ್ಲ: ಇದು ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ದಿಕ್ಸೂಚಿ ಎಂದು ಎರಡೂ ಪಕ್ಷಗಳು ಭಾವಿಸಿದಂತೆಯೂ ಕಾಣುತ್ತದೆ. ಯಾವ ಪಕ್ಷ ಗೆದ್ದರೂ ಮುಂಬರುವ ಸಾಮಾನ್ಯ ಚುನಾವಣೆ ಎದುರಿಸಲು ಅದರ ನೈತಿಕ ಸ್ಥೈರ್ಯ ಹಲವು ಮಡಿ ಎತ್ತರಕ್ಕೆ ಏರುತ್ತದೆ ಎಂಬುದು ನಿಜ. ಒಂದು ಟೆಸ್ಟಿನಲ್ಲಿ ಗೆದ್ದು ಮುಂದಿನ ಆಟಕ್ಕೆ ತೆರಳುವ ಕ್ರಿಕೆಟ್‌ ತಂಡದ ಮನಃಸ್ಥಿತಿಯೇ ಇಲ್ಲಿಯೂ ಬಿಂಬಿತವಾಗುತ್ತಿದೆ.

ಎರಡು ಕ್ಷೇತ್ರಗಳ ಉಪಚುನಾವಣೆ ಪೈಕಿ ಒಂದು ಕಡೆ, ಚುನಾವಣೆ ನಡೆಯುವ ಅಗತ್ಯವೇ ಇರಲಿಲ್ಲ. ನಂಜನಗೂಡು ಮೀಸಲು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ವಿ.ಶ್ರೀನಿವಾಸ ಪ್ರಸಾದ್‌ ಅವರು ತಮ್ಮನ್ನು ಸಂಪುಟದಿಂದ ಕೈ ಬಿಟ್ಟುದಕ್ಕೆ ಪ್ರತಿಭಟನೆಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿ ಕಣಕ್ಕೆ ಇಳಿದಿದ್ದಾರೆ.

ಕೇವಲ ಒಂದು ವರ್ಷದ ಅವಧಿಯಾದರೂ ಪರವಾಗಿಲ್ಲ, ಗೆದ್ದು ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸೇಡು ತೀರಿಸಿಕೊಳ್ಳುವ ಹುಕಿ ಅವರಿಗೆ. ಇದೇ ಕಾರಣಕ್ಕಾಗಿ ಅವರನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂಬ ಹಟ ಮುಖ್ಯಮಂತ್ರಿಗಳಿಗೆ.

ಅಂಥ ಹಟವಾದಿಗೆ ತಮ್ಮ ಪಕ್ಷದಲ್ಲಿಯೇ ಒಬ್ಬ ಸಮರ್ಥ ಅಭ್ಯರ್ಥಿ ಸಿಗದೇ ಇದ್ದುದು ಸೋಜಿಗ. ‘ಕಡ’ ತಂದ ಅಭ್ಯರ್ಥಿಯನ್ನು ಕಣಕ್ಕೆ ಹೂಡಿದ್ದಾರೆ. ಶ್ರೀನಿವಾಸಪ್ರಸಾದ್‌ ಯಾವ ಪಕ್ಷದಲ್ಲಿ ಇದ್ದರೂ ಅವರು ಒಬ್ಬ ದೊಡ್ಡ ದಲಿತ ನಾಯಕ. ಅವರಿಗೆ  ಜೊತೆಯಾಗಿ ಲಿಂಗಾಯತರ ಬಲಿಷ್ಠ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರೂ ಸೇರಿಕೊಂಡಿದ್ದಾರೆ.

ಹೋರಾಟದ ಮನೋಭಾವಕ್ಕೆ ಹೆಸರಾಗಿರುವ ಯಡಿಯೂರಪ್ಪ ಅವರಿಗೆ ಈ ಚುನಾವಣೆ ಎಲ್ಲಿಲ್ಲದ ಹುರುಪು ತಂದಂತೆ  ಕಾಣುತ್ತದೆ. ಏಕೆಂದರೆ ಮುಂದಿನ ಚುನಾವಣೆಗೆ ತಮ್ಮ ಪಕ್ಷವನ್ನು ಈಗಲೇ ಸಜ್ಜು ಮಾಡುವುದು ಅವರ ಗುರಿ. ನಂಜನಗೂಡು ಕ್ಷೇತ್ರದಲ್ಲಿ ದಲಿತ ಮತ್ತು ಲಿಂಗಾಯತ ಮತಗಳೇ ಅಧಿಕವಾಗಿವೆ. ಅವು ಒಂದಾಗಿ ಬಿದ್ದ ಅಭ್ಯರ್ಥಿ ಗೆಲ್ಲುತ್ತಾರೆ.

ನಂಜನಗೂಡಿನಲ್ಲಿ ಗೆದ್ದರೆ ಒಂದೇ ಏಟಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಂತೆ ಎಂದು ಸಿದ್ದರಾಮಯ್ಯ ಭಾವಿಸಿದ್ದಾರೆ.  ಒಂದು ಸ್ಥಳೀಯ ಹಕ್ಕಿ; ಅದು, ತಮ್ಮನ್ನು ನಿತ್ಯ ಹಂಗಿಸುತ್ತಿರುವ ಶ್ರೀನಿವಾಸಪ್ರಸಾದ್‌. ಎರಡು, ರಾಜ್ಯ ಮಟ್ಟದ  ಹಕ್ಕಿ; ಅದು ತಮ್ಮ ಅಧಿಕಾರದ ಮೇಲೆ ಕಣ್ಣು ಹಾಕಿರುವ ಯಡಿಯೂರಪ್ಪ.   ಗುಂಡ್ಲುಪೇಟೆ ಚುನಾವಣೆಯೂ ಮುಖ್ಯಮಂತ್ರಿಗಳಿಗೆ ಅಷ್ಟೇ ಪ್ರತಿಷ್ಠೆಯದಾಗಿದೆ.

ಅಲ್ಲಿ ಅವರ ಪರಮಾಪ್ತ ಗೆಳೆಯ ದಿ.ಮಹದೇವಪ್ರಸಾದ್‌ ಅವರ ಪತ್ನಿ ಗೀತಾ ಕಣಕ್ಕೆ ಇಳಿದಿದ್ದಾರೆ. ವಿಧಾನಸಭೆಯ ಈ ಎರಡೂ ಕ್ಷೇತ್ರಗಳನ್ನು ಕಾಂಗ್ರೆಸ್‌ ಅಭ್ಯರ್ಥಿಗಳು ಪ್ರತಿನಿಧಿಸುತ್ತಿದ್ದರು. ಅವುಗಳನ್ನು ಉಳಿಸಿಕೊಳ್ಳಲು ಆಡಳಿತ ಪಕ್ಷ  ಬಯಸುವುದು ಸಹಜ. ಆದರೆ, ಇಲ್ಲಿ ಗೆದ್ದರೆ ಅದು ತನ್ನ ಅತುಳ ಬಲ ಎಂದು ಬಿಜೆಪಿ ತೋಳು ಏರಿಸಿದೆ. ಉಳಿಸಿಕೊಂಡರೆ ಕಾಂಗ್ರೆಸ್‌ ಪಕ್ಷಕ್ಕೆ ತನ್ನ ಅಧಿಕಾರ ಭದ್ರವಾಗಿದೆ ಎಂಬ ಭಾವನೆ. ಎರಡನ್ನೂ ಕಸಿದುಕೊಂಡರೆ ಇದು ತನ್ನ ಮುಂದಿನ ಗೆಲುವಿನ ಮುನ್ನುಡಿ ಎಂದು ಬೀಗಲು ಬಿಜೆಪಿಗೆ ಈಗಲೇ ಒಂದು ಅವಕಾಶ.

ಈ ಎರಡೂ ಕ್ಷೇತ್ರಗಳಲ್ಲಿ ಆಡಳಿತ ಪಕ್ಷ ತನ್ನ ಪ್ರತಿಷ್ಠೆಯನ್ನು ಎಷ್ಟು ಪಣಕ್ಕೆ ಇಟ್ಟಿದೆ ಎಂದರೆ ಸಂಪುಟದ ಎಲ್ಲ ಸಚಿವರೂ ಹೆಚ್ಚೂ ಕಡಿಮೆ ಒಂದೋ ನಂಜನಗೂಡಿನಲ್ಲಿ ಇದ್ದಾರೆ, ಇಲ್ಲವೇ ಗುಂಡ್ಲುಪೇಟೆಯಲ್ಲಿ ಇದ್ದಾರೆ. ಅಥವಾ ಸರದಿಯಲ್ಲಿ ಅಲ್ಲಿ ಒಮ್ಮೆ, ಇಲ್ಲಿ ಒಮ್ಮೆ ಇದ್ದಾರೆ. ಎರಡೂ ಕ್ಷೇತ್ರಗಳ ಪ್ರತಿ ಮತದಾರನನ್ನೂ ಹೇಗೆ ತಮ್ಮ ಕಡೆ ಸೆಳೆದುಕೊಳ್ಳಬೇಕು ಎಂದು ಅವರು ಪ್ರಯತ್ನ ಮಾಡುತ್ತಿದ್ದಾರೆ. ಸೆಳೆಯಲು ಎರಡು ಮುಖ್ಯ ಅಸ್ತ್ರಗಳನ್ನು ಬಳಸುತ್ತಿದ್ದಾರೆ: ಒಂದು, ಜಾತಿ. ಇನ್ನೊಂದು ಹಣ.

ರಾಜ್ಯದ ಈಚಿನ ಇತಿಹಾಸದಲ್ಲಿ ಇಷ್ಟು ಹಣ ಹರಿದಾಡಿದ್ದು ಇದೇ ಮೊದಲು ಇರಬಹುದು ಎಂದು ಎಲ್ಲರೂ ಮಾತನಾಡುತ್ತಿದ್ದಾರೆ. ಪ್ರತಿ ಮತದಾರರಿಗೆ ಕನಿಷ್ಠವೆಂದರೂ ನಾಲ್ಕು ಸಾವಿರ ರೂಪಾಯಿಗಳ ಹಾಗೆ ಹಣ ವಿತರಣೆಯಾಗುತ್ತಿದೆ ಎಂದು ಸ್ಥಳೀಯರೊಬ್ಬರು ಆತಂಕಗೊಂಡು ಕರೆ ಮಾಡಿ ನನಗೆ ಹೇಳಿದರು. ‘ನಮ್ಮ ಚುನಾವಣೆ ವ್ಯವಸ್ಥೆ ಹೀಗೆಯೇ ಮುಂದುವರಿದರೆ ಇನ್ನೂ ಎಷ್ಟು ಅಧಃಪಾತಾಳಕ್ಕೆ ಇಳಿಯಬಹುದು’ ಎಂದು ಅವರಿಗೆ ಆತಂಕವಾಗಿತ್ತು.

ಸಿದ್ದರಾಮಯ್ಯನವರು ಈ ಚುನಾವಣೆಯನ್ನು ಬೇರೆ ಪಾತಳಿಯಲ್ಲಿ ಎದುರಿಸಬೇಕಿತ್ತು ಎಂದು ನನಗೆ ಅನಿಸುತ್ತದೆ. ಅವರು ಈಚೆಗಷ್ಟೇ ಜನಪ್ರಿಯ ಬಜೆಟ್‌ ಮಂಡಿಸಿದ್ದರು. ‘ನಮ್ಮದು ಸರ್ವರನ್ನೂ ಒಳಗೊಂಡ ಮಾನವೀಯ ಮುಖವುಳ್ಳ ಸರ್ವೋದಯದ ಅಭಿವೃದ್ಧಿ ಮಾದರಿ. ಇದಕ್ಕೆ ಪೂರಕವಾಗಿ ಸಂವಿಧಾನದ ಆಶಯಗಳಲ್ಲೊಂದಾದ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ವಿಸ್ತೃತ ಆರ್ಥಿಕ ವಿನ್ಯಾಸವನ್ನು ಕಳೆದ ನಾಲ್ಕು ಆಯವ್ಯಯಗಳಲ್ಲಿ ನಾನು ಜನತೆಯ ಮುಂದಿಟ್ಟಿದ್ದೆನೆ. ಅದನ್ನು ಮತ್ತಷ್ಟು ವಿಸ್ತರಿಸುವ, ಎತ್ತರಿಸುವ ಪ್ರಾಮಾಣಿಕ ಪ್ರಯತ್ನವನ್ನು ಈ ಆಯವ್ಯಯದಲ್ಲಿ ಮಾಡಿದ್ದೇನೆ’ ಎಂದು  ಹೇಳಿದ್ದರು.

ಜೊತೆಗೆ, ಸಾಮಾಜಿಕವಾಗಿ ಕಡೆಗಣಿತವಾಗಿದ್ದ ಸಮುದಾಯಗಳಿಗೆ ಸಾಕಷ್ಟು ಹಣವನ್ನು ಮೀಸಲು ಇಟ್ಟಿರುವುದಾಗಿ ಪ್ರಕಟಿಸಿದ್ದರು. ಕಾಕತಾಳೀಯ ಎನ್ನುವಂತೆ, ಬಜೆಟ್‌ ಮಂಡನೆಯ ನಂತರ ಕೆಲವೇ ದಿನಗಳಲ್ಲಿ ಈ ಚುನಾವಣೆ ಬಂದಿದೆ.

ಕಳೆದ  ನಾಲ್ಕು ವರ್ಷಗಳಲ್ಲಿ ತಾವು ಮಾಡಿದ ‘ಸರ್ವಜನ ಕಲ್ಯಾಣ’ದ ರಾಜಕೀಯಕ್ಕೆ ನಂಜನಗೂಡು ಮತ್ತು ಗುಂಡ್ಲುಪೇಟೆ ಮತದಾರರಿಂದ ‘ಜನಾದೇಶ ಬಯಸುತ್ತೇನೆ’ ಎಂದು ಅವರು ಚುನಾವಣೆಯಲ್ಲಿ ಹೇಳಿದ್ದರೆ ಅವರು ಮಾಡಬಯಸುತ್ತಿರುವ ಅಹಿಂದ ವರ್ಗ ಆಧಾರಿತ ರಾಜಕೀಯವನ್ನು ಜನರು ಹೇಗೆ ಪರಿಭಾವಿಸುತ್ತಿದ್ದಾರೆ ಎಂದು ಗೊತ್ತಾಗುತ್ತಿತ್ತು. ಆದರೆ, ಅಂಥ ಸವಾಲನ್ನು ಸ್ವೀಕರಿಸಲು ಅಥವಾ ಹಾಕಲು ಅವರು ಸಿದ್ಧರಿದ್ದಂತೆ ಕಾಣುವುದಿಲ್ಲ.

ಏನಾದರೂ ಮಾಡಿ ಈ ಚುನಾವಣೆ ಗೆಲ್ಲಬೇಕು ಎಂದು ನಿರ್ಧರಿಸಿದಂತೆ ಮಾತ್ರ  ಕಾಣುತ್ತದೆ. ಅದಕ್ಕೆ ಪೂರಕವಾಗಿ ಎನ್ನುವಂತೆ ‘ಕಾಂಗ್ರೆಸ್ಸಿನವರು ರಾಜಾರೋಷವಾಗಿ ಹಣ ಹಂಚುತ್ತಿದ್ದಾರೆ’ ಎಂಬ ಆರೋಪದ ಮಾತು ಕ್ಷೇತ್ರದಲ್ಲಿ ಜನಜನಿತವಾಗಿದೆ. ಆಕಸ್ಮಿಕವೋ  ಎನ್ನುವಂತೆ ಹಲವರು ಕಾಂಗ್ರೆಸ್ಸಿಗರು ಹಣ ಹಂಚುವಾಗ ಸಿಕ್ಕಿಯೂ ಬಿದ್ದಿದ್ದಾರೆ.

ಅದಕ್ಕಿಂತ ಹೆಚ್ಚಿಗೆ ಬೆಚ್ಚಿ ಬೀಳುವ ಸಂಗತಿ ಎಂದರೆ ಅಲ್ಲಿನ ಮತದಾರರೇ ನೇರವಾಗಿ ಮುಖ್ಯಮಂತ್ರಿಗಳ ಮೈಸೂರು ಮನೆಗೇ ಬಂದು, ‘ಅಣ್ಣ ನೋಡು ನಮಗೆ ಇನ್ನೂ ಹಣ ಬಂದೇ ಇಲ್ಲ’ ಎಂದು ಮೂರೂ ಬಿಟ್ಟವರಂತೆ ಕೇಳಿದ್ದಾರೆ. ಬಿಟ್ಟಿ ಸಿಗುತ್ತದೆ ಎಂದರೆ ಎಲ್ಲರೂ ಹೀಗೆಯೇ ನಡೆದುಕೊಳ್ಳುತ್ತಾರೋ ಏನೋ?

ಈ ಚುನಾವಣೆಯಲ್ಲಿ ಹಣದ ಹಾವಳಿ ಎಷ್ಟು ವಿಪರೀತವಾಗಿದೆ ಎಂದರೆ ಒಂದೊಂದು ಕ್ಷೇತ್ರದಲ್ಲಿಯೂ ಕನಿಷ್ಠ ಮೂವತ್ತರಿಂದ ನಲವತ್ತು ಕೋಟಿ ರೂಪಾಯಿಗಳು ಖರ್ಚಾಗಿರಬಹುದು ಎಂದು ನಮ್ಮ ವರದಿಗಾರರು ಅಭಿಪ್ರಾಯಪಟ್ಟರು. ಅವರ ಪ್ರಕಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಂದೊಂದು ಜಿಲ್ಲಾ ಪಂಚಾಯ್ತಿ ಕ್ಷೇತ್ರಕ್ಕೂ ಒಂದು ರಾಜಕೀಯ ಪಕ್ಷದವರು ಐದು ಕೋಟಿ ರೂಪಾಯಿಗಳನ್ನು ಕೊಟ್ಟಿದ್ದಾರೆ.

ಆ ರಾಜಕೀಯ ಪಕ್ಷದ ಹೆಸರನ್ನು ಅವರು ನನಗೆ ಹೇಳಿದರು. ಆದರೆ, ನಾನು ಇಲ್ಲಿ  ಬರೆಯಲಾರೆ. ಆದರೆ, ನಂಜನಗೂಡು ಕ್ಷೇತ್ರದಲ್ಲಿ ‘ಪ್ರಚಾರ’ಕ್ಕೆ ಹೋಗಿದ್ದ ಹಿರಿಯ ಸಚಿವರೊಬ್ಬರು ಅಲ್ಲಿ ಹಣದ ಚಲಾವಣೆಯ ‘ವೈಖರಿ’ಯನ್ನು ನೋಡಿ ಗಾಬರಿಗೊಂಡು ನೇರವಾಗಿ ಶ್ರೀಕಂಠೇಶ್ವರನ ದರ್ಶನಕ್ಕೆ ತೆರಳಿದರಂತೆ.

‘ಶಿವನೇ ನಮ್ನನ್ನು ಕ್ಷಮಿಸು’ ಎಂದು ಪ್ರಾರ್ಥಿಸಿ ತಮ್ಮಿಂದ ಇದನ್ನು ನೋಡುವುದು (ಅಥವಾ ಹಣ ಹಂಚುವುದು ಸಾಧ್ಯವಿಲ್ಲ) ಎಂದು ಮತ್ತೆ ಬೆಂಗಳೂರು ದಾರಿ ಹಿಡಿದರಂತೆ! ಹಾಗೆಂದು ಬಿಜೆಪಿಯವರು ಕಡಲೆಪುರಿ ತಿನ್ನುತ್ತ ಕುಳಿತಿದ್ದಾರೆ ಎಂದೇನೂ ಯಾರೂ ಭಾವಿಸಬೇಕಿಲ್ಲ. ಕಾಂಗ್ರೆಸ್ಸಿನವರಷ್ಟು ಅಲ್ಲದೇ ಇದ್ದರೂ ಅವರೂ ಶಕ್ತ್ಯಾನುಸಾರ ಹಣ ಹಂಚಿರಬಹುದು.

ನಮ್ಮ ಚುನಾವಣೆಗಳು ಏಕೆ ಹೀಗೆ ನಡೆಯುತ್ತಿವೆ? ರಾಜಕಾರಣಿಗಳು ಜನರನ್ನು ಏಕೆ ಹೀಗೆ ಭ್ರಷ್ಟಗೊಳಿಸುತ್ತಿದ್ದಾರೆ? ಮೊದಲು ಐದು ನೂರು ರೂಪಾಯಿ ನೋಟಿಗೆ ಸಿಗುತ್ತಿದ್ದ ಒಂದು ವೋಟು ಈಗ ನಾಲ್ಕು ಸಾವಿರ ರೂಪಾಯಿಗೆ ಸಿಗುತ್ತದೆ ಎನ್ನುವಂತಾದರೆ ಹೇಗೆ? ಈ ಅಭ್ಯರ್ಥಿಗಳು ಮುಂದಿನ ಚುನಾವಣೆಯಲ್ಲಿ ಎಲ್ಲಿಂದ ಹಣ ತರುತ್ತಾರೆ? ಜನರು ಹಣ ತೆಗೆದುಕೊಂಡು ಅದೇ ಪಕ್ಷಕ್ಕೆ ಮತ ಹಾಕುತ್ತಾರೆ ಎಂಬ ಖಾತ್ರಿ ಏನಾದರೂ ಇದೆಯೇ? ಜನರು ಒಂದು ಕಡೆ ಮತದಾರರು ಆಗಿರಬಹುದು.

ಇನ್ನೊಂದು ಕಡೆ ಅವರು ನಾಗರಿಕರೂ ಆಗಿರುತ್ತಾರೆ. ಅಂದರೆ ಅವರಿಗೆ ಆಸೆಗಳು, ಆಕಾಂಕ್ಷೆಗಳು, ವೈಯಕ್ತಿಕ ಬೇಡಿಕೆಗಳು, ಕುಂದು ಕೊರತೆಗಳು ಇದ್ದೇ ಇರುತ್ತವೆ. ಅವರಿಗೆ ರಸ್ತೆ ಬೇಕು, ಶಾಲೆ ಬೇಕು, ಆಸ್ಪತ್ರೆ ಬೇಕು,  ಕುಡಿಯಲು ನೀರು ಬೇಕು. ಆ ಎಲ್ಲ ಅಗತ್ಯಗಳನ್ನು ಪೂರೈಸಲು ವಿಫಲವಾದ ಪಕ್ಷಗಳಿಗೆ ಅವರು ಮತ ಹಾಕುತ್ತಾರೆಯೇ?

ಮುಖ್ಯಮಂತ್ರಿಗಳು ನಂಜನಗೂಡಿನ ಒಂದು ಪ್ರದೇಶದಲ್ಲಿ ಮತ ಹಾಕಲು ಹೋಗಿದ್ದಾಗ ಅಲ್ಲಿನ ಜನರು ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟಿಸಿದರು. ಅವರೂ ಹಣ ತೆಗೆದುಕೊಂಡಿರಬಹುದು. ಆದರೆ, ತಾವು ಕೇವಲ ಮತದಾರರು ಮಾತ್ರ ಅಲ್ಲ, ನಾಗರಿಕರೂ ಹೌದು ಎಂದೇ ಅಲ್ಲವೇ ಅವರು ಈ ಪ್ರತಿಭಟನೆ ಮೂಲಕ ಹೇಳಲು ಹೊರಟಿದ್ದು?

ಮತದಾರರು ನಾಗರಿಕರೂ ಹೌದು ಎಂದೆ. ಅದೇ ಕಾರಣಕ್ಕಾಗಿ ಅವರಿಗೆ ತಮ್ಮ ಶಕ್ತಿ ಏನು ಎಂದು ಗೊತ್ತಿರುತ್ತದೆ. ಚುನಾವಣೆ ಬಂದಾಗ ಅದು ಇನ್ನೂ ಹೆಚ್ಚು ಗಮನಕ್ಕೆ ಬರುತ್ತದೆ. ಹಣ ಕೊಡುವವರು ಕೊಡಲಿ, ಹೆಚ್ಚು ಹಣ ಕೊಡುವವರೂ ಕೊಡಲಿ ಎಂದು ಅವರು ಅದನ್ನು ಇಸಿದುಕೊಳ್ಳುತ್ತಾರೆ. ಕೊಡುವವರೇನೂ ತಮ್ಮ ಮನೆಯಿಂದ  ತಂದು ಕೊಡುವುದಿಲ್ಲ ಎಂದೂ ಅವರಿಗೆ ಗೊತ್ತಿರುತ್ತದೆ. ಆದರೆ, ಮತ ಹಾಕುವಾಗ ಯಾರಿಗೆ ಹಾಕಬೇಕೋ ಅವರಿಗೇ ಹಾಕುತ್ತಾರೆ ಎಂದೂ ಅನಿಸುತ್ತದೆ.

ರಾಜಕಾರಣಿಗಳು ಏನು ಅಂದುಕೊಂಡಿರುತ್ತಾರೆ ಎಂದರೆ ಜನರನ್ನು ಒಂದೋ ಹಣದಿಂದ  ಕೊಳ್ಳಬಹುದು ಇಲ್ಲವೇ ಜಾತಿಯಿಂದ ಕೊಳ್ಳಬಹುದು ಎಂದು. ಈ ಉಪಚುನಾವಣೆಯಲ್ಲಿ ಹಣದಷ್ಟೇ ಜಾತಿಯೂ ಪ್ರಧಾನವಾಗಿ ಬಳಕೆಯಾಗುತ್ತಿದೆ. ಕ್ಷೇತ್ರದಲ್ಲಿ ಪ್ರಭಾವ ಇರುವ ಒಬ್ಬ ಸ್ವಾಮೀಜಿಯವರನ್ನು ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಹೋಗಿ ಭೇಟಿ ಮಾಡುತ್ತಿರುವುದಕ್ಕೆ ಆ ಜಾತಿಯ ಮತಗಳು ಎರಡೂ ಕ್ಷೇತ್ರಗಳಲ್ಲಿ ಅಧಿಕವಾಗಿರುವುದೇ ಕಾರಣವಾಗಿರಬಹುದು.

ಅಂದರೆ ನಮ್ಮ ಚುನಾವಣೆಗಳ ಪರಿಭಾಷೆ ಬದಲಾಗುವುದಿಲ್ಲ ಎಂದು ಅನಿಸುತ್ತದೆ. ಅಥವಾ ಅದು ಬದಲಾಗಲು ರಾಜಕಾರಣಿಗಳು ಬಿಡುವುದಿಲ್ಲ ಎಂದೂ ಅನಿಸುತ್ತದೆ. ಒಂದೋ ಹಣ ಹಂಚಿ ಚುನಾವಣೆ ಗೆಲ್ಲಬೇಕು. ಇಲ್ಲವೇ ಜಾತಿಯ ಕಾರ್ಡು ಬಳಸಿ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಅವರು ತೀರ್ಮಾನಿಸಿ ಬಿಡುತ್ತಾರೆ. ಅಥವಾ ಎರಡನ್ನೂ ಬಳಸುತ್ತಾರೆ.

ಸಂಪುಟದ ವಿವಿಧ ಜಾತಿಗಳ ಸಚಿವರು ಎರಡೂ ಕ್ಷೇತ್ರಗಳಿಗೆ ಧಾವಿಸಿದ ಕಾರಣ ಏನಿರಬಹುದು ಎಂದರೆ ಆಯಾ ಜಾತಿಯ ಸಚಿವರು ತಮ್ಮ ತಮ್ಮ ಜಾತಿಯ ಮತಗಳನ್ನು ಪಕ್ಷದ ಅಭ್ಯರ್ಥಿಗೆ ದೊರಕಿಸಿಕೊಡುವ ಹೊಣೆ ಹೊತ್ತುಕೊಂಡಿರುತ್ತಾರೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು. ಸಚಿವರಾಗಿರುವ ಕಾರಣ ಅವರಿಗೆ ಪ್ರಚಾರ ಮಾಡಲು ಬೇಕಾದ ಆರ್ಥಿಕ ಶಕ್ತಿಯೂ ಇರುತ್ತದೆ ಎಂದೂ ನಾವು ತಿಳಿದುಕೊಳ್ಳಬಹುದು.

ಆಡಳಿತ ಪಕ್ಷವು ಸಚಿವರನ್ನು ಇದಕ್ಕೆ ಬಳಸಿಕೊಂಡರೆ ವಿರೋಧ ಪಕ್ಷವೂ ತನ್ನ ಪಕ್ಷದ ವಿವಿಧ ಜಾತಿಗಳ ಮುಖಂಡರನ್ನು ಇದೇ ಕಾರಣಕ್ಕಾಗಿ ಬಳಸಿಕೊಳ್ಳುತ್ತದೆ. ಹಾಗಾದರೆ, ಇಷ್ಟರಿಂದಲೇ ಜನರು ಮತ ಹಾಕುತ್ತಾರೆ ಎಂದು ಸರ್ಕಾರ ನಂಬಬಹುದಾಗಿದ್ದರೆ ಆ ಭಾಗ್ಯ, ಈ ಭಾಗ್ಯ ಎಂಬ ಯೋಜನೆಗಳೆಲ್ಲ ಏನಾಗುತ್ತವೆ? ಅವು ಜನರ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಅರ್ಥವೇ? ಅಥವಾ ಬೀರುವುದಿಲ್ಲ ಎಂಬ ನಂಬಿಕೆಯೇ? ಇದು ವಿರೋಧ ಪಕ್ಷಕ್ಕಿಂತ ಆಡಳಿತ ಪಕ್ಷಕ್ಕೆ ಹೆಚ್ಚು ಕಾಡಬೇಕಾದ ಪ್ರಶ್ನೆ. ಈಗ ಆಡಳಿತದಲ್ಲಿ ಕಾಂಗ್ರೆಸ್‌  ಪಕ್ಷ ಇರಬಹುದು, ಮುಂದೊಂದು ದಿನ ಬಿಜೆಪಿಗೂ ಇದೇ ಪ್ರಶ್ನೆ ಎದುರಾಗಬಹುದು.

ಈಗ ನಡೆದಿರುವ ಚುನಾವಣೆಯ ರೀತಿ ನೋಡಿದರೆ ಕುಮಾರಸ್ವಾಮಿಗಳು ಬುದ್ಧಿವಂತರಂತೆ ನಡೆದುಕೊಂಡಿದ್ದಾರೆ. ಎರಡು ಗೂಳಿಗಳ ನಡುವಣ ಸಮರದಲ್ಲಿ ಸಿಕ್ಕು ನುಗ್ಗಾಗುವುದಕ್ಕಿಂತ ದೂರ ನಿಂತು ಮೋಜು ನೋಡುವುದು ಒಳಿತು ಎಂದು ಅವರು ಅಂದುಕೊಂಡಂತಿದೆ. ಕೇವಲ ಒಂದು ವರ್ಷದ ಅವಧಿಗಾಗಿ ಸಂಪನ್ಮೂಲ ಕಳೆದುಕೊಳ್ಳುವುದು ಬೇಡ ಎಂದು ಅವರು ಅಂದುಕೊಂಡಿದ್ದರೆ ಅದು ಕೂಡ ಸರಿಯಾಗಿಯೇ ಇದೆ. ಆದರೆ, ಆ ಪಕ್ಷ ಆಡಳಿತ ಪಕ್ಷಕ್ಕೆ ರಹಸ್ಯ ಬೆಂಬಲ  ಕೊಟ್ಟಿರುವಂತೆ ಕಾಣುತ್ತದೆ.

ನಂಜನಗೂಡಿನಲ್ಲಿಯಂತೂ ತೀರಾ ಈಚಿನವರೆಗೆ ಜನತಾದಳ (ಎಸ್‌)ದಲ್ಲಿಯೇ ಇದ್ದ ಕಳಲೆ ಕೇಶವಮೂರ್ತಿ ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ಸಿಗೆ  ಹೋಗಿ ಕಣಕ್ಕೆ ಇಳಿದಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಮತ್ತು ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿಯವರು ಈಗ ಆಡುತ್ತಿರುವ ಮಾತುಗಳನ್ನು ನೋಡಿದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅವರು, ‘ಏಕಾಂಗಿಯಾಗಿಯೇ ಕಣಕ್ಕೆ ಇಳಿಯಲಿದ್ದಾರೆ’ ಮತ್ತು ‘ಅಧಿಕಾರ ಹಿಡಿಯಲಿದ್ದಾರೆ.’

ಈ ಉಪ ಚುನಾವಣೆಯಲ್ಲಿ ಜನತಾದಳ (ಎಸ್‌) ಕಣದಲ್ಲಿ ಇದ್ದರೆ ಮತಗಳ ವಿಭಜನೆ ಆಗುತ್ತಿತ್ತು. ಈಗ ಅದು ಆಗುವುದಿಲ್ಲ. ಅದರಿಂದ ಯಾರಿಗೆ ಲಾಭವಾಗುತ್ತದೆ? ಕಾಂಗ್ರೆಸ್ಸಿಗೆ ಆಗುತ್ತದೆಯೇ ಅಥವಾ ಬಿಜೆಪಿ ಆಗುತ್ತದೆಯೇ? ಫಲಿತಾಂಶದಿಂದ ಅದು ತಿಳಿಯಬಹುದು. ಇಂದು ಈಗಷ್ಟೇ ಮತದಾನ ಆರಂಭವಾಗಿದೆ. ಆದರೆ, ಎರಡೂ ಕಡೆಯವರ ಪ್ರಕಾರ ಫಲಿತಾಂಶ ಬಂದಾಗಿದೆಯಂತೆ! ಹೌದೇ? ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT