ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನ್ಯಾಸಕರಿಲ್ಲದ ಕಾಲೇಜಿನಲ್ಲಿ ತಂತ್ರಜ್ಞಾನದ ತಮಾಷೆ!

Last Updated 18 ಜನವರಿ 2015, 19:30 IST
ಅಕ್ಷರ ಗಾತ್ರ

ಸಾವಿರಾರು ಉಪನ್ಯಾಸಕ ಹುದ್ದೆಗಳು ಖಾಲಿ ಇರುವ, ಅತಿಥಿ ಉಪನ್ಯಾಸಕರಿಗೆ ಊಟಕ್ಕೂ ಸಾಕಾ­ಗದಷ್ಟು ಸಂಬಳವಷ್ಟೇ ಇರುವ, ಸ್ವಂತ ಕಟ್ಟಡ­ವಿಲ್ಲದ ಅಸಂಖ್ಯ ಕಾಲೇಜುಗಳಿರುವ, ಕಟ್ಟಡ­ವಿದ್ದರೂ ಶೌಚಾಲಯಗಳಿಲ್ಲದ, ಮಳೆ ಬಂದಾಗ ಸೋರುವಂಥ ಕಟ್ಟಡಗಳಿರುವ ನೂರೆಂಟು ಕಾಲೇಜುಗಳಿರುವ ಕರ್ನಾಟಕ ರಾಜ್ಯ­ದಲ್ಲಿ ಮಕರ ಸಂಕ್ರಾಂತಿಯ ಉಡುಗೊರೆ­ಯಾಗಿ ವರ್ಚುವಲ್ ಕ್ಲಾಸ್, ಸ್ಮಾರ್ಟ್ ಕ್ಲಾಸ್ ಸವಲತ್ತು ಉದ್ಘಾಟನೆಯಾಯಿತು.

ಕರ್ನಾ­ಟಕದ ಉನ್ನತ ಶಿಕ್ಷಣ ಇಲಾಖೆಯ ಮಂತ್ರಿಗಳು ಇದು ಭಾರತದಲ್ಲೇ ಪ್ರಥಮ ಎಂದರು. ಕಾಲೇಜು­ಗಳಿಗೆ ಅಗತ್ಯ ಸಂಖ್ಯೆಯ ಉಪನ್ಯಾಸ­ಕರನ್ನೇ ನೇಮಿಸದೆ ಸ್ಮಾರ್ಟ್ ಕ್ಲಾಸ್ ಮತ್ತು ವರ್ಚುವಲ್ ಕ್ಲಾಸ್ ವ್ಯವಸ್ಥೆಯನ್ನು ಉದ್ಘಾಟಿ­ಸುವ ಮತ್ತು ಅದನ್ನು ಹೆಮ್ಮೆಯಿಂದ ಹೇಳಿಕೊ­ಳ್ಳುವುದು ರಾಷ್ಟ್ರದಲ್ಲೇನು ಬಹುಶಃ ಬ್ರಹ್ಮಾಂಡ­ದಲ್ಲೇ ಇದೇ ಮೊದಲೇನೋ.

ಕಾಲೇಜುಗಳಿಗೆ ಉಪನ್ಯಾಸಕರಿಲ್ಲ ಎಂದರೆ ‘ವರ್ಚುವಲ್ ಕ್ಲಾಸ್‌ಗಳಲ್ಲಿ ಲೋಕ­ಪ್ರಸಿದ್ಧರಾ­ದ­ವರು ಮಾಡುವ ಪಾಠ ಕೇಳಿ’ ಎಂದು ಮಂತ್ರಿ­ಗಳು ಹೇಳಬಹುದು. ಕಾಲೇಜು ಕಟ್ಟಡ ಸೋರು­ತ್ತಿದೆ ಎಂದರೆ ‘ಮಕ್ಕಳು ಕಾಲೇಜಿನ ತನಕ ಬರಬೇಕಾಗಿಲ್ಲ. ವರ್ಚುವಲ್ ಕ್ಲಾಸ್ ಮನೆ­ಯಲ್ಲೂ ಲಭ್ಯ’ ಎನ್ನಬಹುದು. ಹೀಗೆ ಉನ್ನತ ಶಿಕ್ಷಣ ಕ್ಷೇತ್ರದ ಕಟ್ಟಡ ಸಮಸ್ಯೆಯಿಂದ ಆರಂಭಿಸಿ ಶಿಕ್ಷಕರ ಸಮಸ್ಯೆಯ ತನಕದ ಎಲ್ಲದಕ್ಕೂ ಮಾಹಿತಿ ತಂತ್ರಜ್ಞಾನದಲ್ಲಿ ಉತ್ತರವಿದೆ.

ಅದನ್ನು ಕಂಡುಕೊಳ್ಳಲು ವಿದ್ಯಾರ್ಥಿಗಳಿಗಿಂತ ಹೆಚ್ಚಾಗಿ ಸರ್ಕಾರಕ್ಕೆ ಉತ್ಸಾಹವಿದೆ. ಅದಕ್ಕಿಂ­ತಲೂ ಹೆಚ್ಚಾಗಿ ಐಸಿಟಿ ಆಧಾರಿತ ಶಿಕ್ಷಣಕ್ಕೆ ಬೇಕಿರುವ ಮೂಲ ಸೌಕರ್ಯ ಸೃಷ್ಟಿಸುವ ಕಂಪೆನಿಗಳಿಗಿದೆ. ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳುವ ಕ್ರಿಯೆ 21ನೇ ಶತಮಾನದ ವಿಶೇಷವೇನೂ ಅಲ್ಲ. ಇದಕ್ಕೆ ಬಹುದೊಡ್ಡ ಇತಿಹಾಸವಿದೆ. ಲ್ಯಾರಿ ಕ್ಯೂಬನ್ 1920ರಿಂದ 1980ರ ತನಕದ ಅವಧಿ­­ಯಲ್ಲಿ ಬಳಕೆಯಾದ ತಂತ್ರಜ್ಞಾನದ ಸಮೀಕ್ಷೆಯೊಂದನ್ನು ಪ್ರಕಟಿಸಿದ್ದಾರೆ.

1980­ರಲ್ಲಿ ಪ್ರಕಟವಾದ x ‘Teachers and Machines: The Classroom Use of Technology Since 1920’ಎಂಬ ಪುಸ್ತಕ ಶಿಕ್ಷಕನ ಅಗತ್ಯವನ್ನು ತಂತ್ರಜ್ಞಾನ ಇಲ್ಲವಾಗಿ­ಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಎಲ್ಲದ-­ಕ್ಕಿಂತ ಹೆಚ್ಚಾಗಿ ತಂತ್ರಜ್ಞಾನದ ಬಳಕೆಯ ಯಶಸ್ಸು ಕೆಲವು ನಿರ್ದಿಷ್ಟ ಸಂದರ್ಭಗಳಿಗೆ ಸೀಮಿತ­­ವಾಗಿರುತ್ತದೆ. ತಂತ್ರಜ್ಞಾನದ ಸೋಲಿಗೆ ಹೋಲಿಸಿದರೆ ಯಶಸ್ಸಿನ ಪ್ರಮಾಣ ಕಡಿಮೆ ಎಂಬುದು ಕ್ಯೂಬನ್ ಅಭಿಪ್ರಾಯ.

ಹತ್ತು ವರ್ಷದ ಹಿಂದಷ್ಟೇ ಪ್ರಕಟವಾದ ಟಾಡ್ ಓಪನ್‌ಹೀಮರ್ ಅವರ ‘The Flickering Mind: Saving Education from the False Promise of Technology’ ಎಂಬ ಪುಸ್ತಕ ಅಮೆರಿಕದ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ­ಯಲ್ಲಿ ತಂತ್ರಜ್ಞಾನದ ಬಳಕೆಯನ್ನು ವಿಶ್ಲೇಷಿ­ಸಿದೆ. ಇದೂ ತಂತ್ರಜ್ಞಾನ ಬಳಕೆಯ ಮಿತಿಗಳನ್ನು ವಿವರಿಸುತ್ತದೆ. ಶಿಕ್ಷಕನಿಗೆ ತಂತ್ರ­ಜ್ಞಾನ ಪರ್ಯಾ­ಯವಲ್ಲ ಎಂಬುದು ಓಪನ್‌­ಹೀಮರ್ ಅವರ ಅಭಿಪ್ರಾಯ ಕೂಡಾ.

ಈ ಅಭಿಪ್ರಾಯಗಳಿಗೆ ಆಧಾರವಾದುದು ಭಾರತ­­ದಂಥ ಅತ್ಯಂತ ಕಡಿಮೆ ಮೂಲ ಸೌಕರ್ಯ­ಗಳಿರುವ ಶಿಕ್ಷಣ ವ್ಯವಸ್ಥೆಯಲ್ಲ ಎಂಬುದು ಇಲ್ಲಿ ಗಮನಾರ್ಹ. ಭಾರತಕ್ಕೆ ಹೋಲಿ­ಸಿ­ದರೆ ‘ಆದರ್ಶ ಸ್ಥಿತಿ’ಯಲ್ಲಿರುವ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ನಡೆದಿರುವ ಅಧ್ಯಯನಗಳೇ ಬೋಧನಾ ಪ್ರಕ್ರಿಯೆಗೆ ತಂತ್ರ­ಜ್ಞಾನ ಪರ್ಯಾಯವಾಗದು ಎಂದು ಸ್ಪಷ್ಟಪಡಿ­ಸಿವೆ. ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆ ಸೃಷ್ಟಿಸಿರುವ ಸ್ಮಾರ್ಟ್ ಕ್ಲಾಸ್ ಮತ್ತು ವರ್ಚುವಲ್ ಕ್ಲಾಸ್‌ಗಳನ್ನು ಈ ದೃಷ್ಟಿಯಲ್ಲಿ ನೋಡುವ ಅಗತ್ಯವಿದೆ.

ಜೊತೆಗೆ ರಾಜ್ಯದಲ್ಲಿ 11,680 ಮಂದಿ ಅತಿಥಿ ಉಪನ್ಯಾಸಕರಿದ್ದಾರೆ. ಅವರಿಗೆ ತಿಂಗಳಿಗೆ ಕೊಡುವ ಹತ್ತು ಸಾವಿರ ರೂಪಾಯಿಗಳನ್ನೇ ಕರ್ನಾಟಕ ಸರ್ಕಾರ ಮೂರು ತಿಂಗಳಿಗೋ ಆರು ತಿಂಗಳಿಗೋ ಕೊಡು­ತ್ತದೆ. ಇದರಿಂದ ಕೆಲವರು ಬಾರ್‌ಗಳಲ್ಲಿ ಸರ್ವರ್ ಕೆಲಸವೂ ಸೇರಿದಂತೆ ಹಲ ಬಗೆಯ ಕೆಲಸಗಳನ್ನು ಮಾಡುವ ಅಗತ್ಯ ಉದ್ಭವಿಸಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡೇ ಈ ‘ಸ್ಮಾರ್ಟ್’ ಪ್ರಯೋಗವನ್ನು ಅರ್ಥ ಮಾಡಿ­ಕೊಳ್ಳಲು ಪ್ರಯತ್ನಿಸಬೇಕು.

ಹನ್ನೊಂದು ಸಾವಿರಕ್ಕೂ ಹೆಚ್ಚು ಅತಿಥಿ ಉಪ­ನ್ಯಾಸ­ಕರಿದ್ದಾರೆ ಎಂದರೆ ಅದರ ಅರ್ಥ ಅಷ್ಟೊಂದು ಉಪನ್ಯಾಸಕರ ಹುದ್ದೆಗಳು ಖಾಲಿ ಎಂದರ್ಥ. ಈ ಅತಿಥಿ ಉಪನ್ಯಾಸಕರ 2013ರ ಸಾಲಿನ ಸಂಬಳವನ್ನು 2014ರ ಆಗಸ್ಟ್‌ನಲ್ಲಿ ನೀಡುವ ಕಾಲೇಜು ಶಿಕ್ಷಣ ಇಲಾಖೆ ಸ್ಮಾರ್ಟ್ ಕ್ಲಾಸ್ ಮತ್ತು ವರ್ಚುವಲ್ ಕ್ಲಾಸ್‌ಗಳ ಯೋಜನೆ­ಯನ್ನು ಕಾರ್ಯರೂಪಕ್ಕೆ ತಂದಿರುವು­ದನ್ನು ಏನೆಂದು ವಿವರಿಸಬೇಕು?
ಐವತ್ತು ಕಾಲೇಜುಗಳಲ್ಲಿ ತಕ್ಷಣ ನಾಲ್ಕುನೂರು ಕಾಲೇಜುಗಳಲ್ಲಿ ಮುಂದೆ ಜಾರಿಯಾಗಲಿರುವ ಈ ಯೋಜನೆಗಾಗಿ ಕಾಲೇಜು ಆವರಣದಲ್ಲಿ ವೈರ್‌ಲೆಸ್ ಲ್ಯಾನ್ ಇರಬೇಕಾಗು­ತ್ತದೆ.

ವಿದ್ಯಾರ್ಥಿ­ಗಳು ತಮ್ಮ ಸ್ಮಾರ್ಟ್‌ಪೋನ್ ಬಳಸಿ ಬಾರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಿ ಉಪ­ನ್ಯಾಸ­ಗಳನ್ನು ಡೌನ್‌­ಲೋಡ್ ಮಾಡಿಕೊಳ್ಳಬ­ಹುದು. ಉಪನ್ಯಾಸ ನೀಡುವ ಪ್ರಖ್ಯಾತರಿಂದ ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದು. ಈ ಉಪನ್ಯಾಸಗಳು ಕನ್ನಡದಲ್ಲಿಯೂ ಲಭ್ಯವಿ­ವೆಯಂತೆ. ಇನ್ನು ಸ್ಮಾರ್ಟ್ ಕ್ಲಾಸುಗಳ ಸಮಾ­ಚಾರ. ಬಹು­ಮಾಧ್ಯಮ, ಪ್ರೊಜೆಕ್ಟರ್ ಹಾಗೂ ವೈರ್‌­ಲೆಸ್ ಲ್ಯಾನ್ ಬಳಸಿ ಅಧ್ಯಾಪಕರು ಬೋಧಿ­ಸು­ತ್ತಾರೆ. ಮತ್ತೆ ಇ–ಪಠ್ಯಾಂಶದ ಸಂವಹನ ಈ ಬಗೆಯ ತರಗತಿಗಳಲ್ಲಿ ನಡೆಯುತ್ತವೆಯಂತೆ.

ಈ ಎಲ್ಲಾ ಸವಲತ್ತುಗಳೂ ಒಳ್ಳೆಯವೇ. ಆದರೆ ಇವು ಪರಿಣಾಮಕಾರಿಯಾಗುವುದು ಒಳ್ಳೆಯ ಶಿಕ್ಷಕರಿದ್ದಾಗ ಮಾತ್ರ. ಮೈಕ್ರೋಸಾಫ್ಟ್ ರೀಸರ್ಚ್ ಇಂಡಿಯಾದ ಮುಖ್ಯಸ್ಥರಾಗಿ ಕಾರ್ಯ­­ನಿರ್ವಹಿಸಿದ ಕೆಂತಾರೋ ತೊಯಾಮ ಪರಿಣಾಮಕಾರಿ ಶಿಕ್ಷಣಕ್ಕೆ ತಂತ್ರಜ್ಞಾನದಲ್ಲಿ ಯಾವುದೇ ಶಾರ್ಟ್‌ಕಟ್ ಇಲ್ಲ ಎಂದು ಪ್ರಬಲವಾಗಿ ಪ್ರತಿಪಾದಿಸಿದವರಲ್ಲಿ ಒಬ್ಬರು. ಅವರ ದೃಷ್ಟಿಯಲ್ಲಿ ಉತ್ತಮ ಶಿಕ್ಷಕರ ನೇಮಕ ಮತ್ತು ಅತ್ಯುತ್ತಮ ಆಡಳಿತ ವ್ಯವಸ್ಥೆಯನ್ನು ಖಾತರಿ ಪಡಿಸಿಕೊಳ್ಳುವುದಷ್ಟೇ ಶಿಕ್ಷಣ ಕ್ಷೇತ್ರದ ಕಾಯಕಲ್ಪಕ್ಕೆ ಇರುವ ಏಕೈಕ ಪರಿಣಾಮಕಾರಿ ಮಾರ್ಗ.

ತಂತ್ರಜ್ಞಾನದ ಬಳಕೆ ಎಂಬುದು ನಿರ್ದಿಷ್ಟ ಕ್ಷೇತ್ರ ಅಥವಾ ಅಗತ್ಯಕ್ಕೆ ಸೀಮಿತವಾಗಿ­ರಬೇಕೆಂದು ಪ್ರತಿಪಾದಿಸುವ ಅವರು ಅಗತ್ಯ­ವಿಲ್ಲದಲ್ಲಿ ತಂತ್ರಜ್ಞಾನದ ಬಳಕೆ ಮಾಡಲು ಹೊರಟರೆ ಅದು ಸೃಷ್ಟಿಸುವ ಆರ್ಥಿಕ ಹೊರೆ ಬಹಳ ದೊಡ್ಡದು ಎನ್ನುತ್ತಾರೆ. ಕರ್ನಾಟಕದ ಕಾಲೇಜು ಶಿಕ್ಷಣ ಇಲಾಖೆಯ ನೇತೃತ್ವ ವಹಿಸಿರುವ ಅಧಿಕಾರಿಗಳಿಗೆ ಅಥವಾ ಮಂತ್ರಿ ಮಹೋದಯರಿಗೆ ಈ ವಿಷಯಗಳೆಲ್ಲಾ ಗೊತ್ತಿಲ್ಲ ಎಂದು ನಾವು ಭಾವಿಸಬೇಕಾಗಿಲ್ಲ. ಅವರು ಜನರ ಭ್ರಮೆಗಳನ್ನು ಬಹಳ ಚೆನ್ನಾ­ಗಿಯೇ ಅರಿತಿದ್ದಾರೆ.

ಇದಕ್ಕೆ ಅತ್ಯುತ್ತಮ ಸಾಕ್ಷಿ ಸ್ಮಾರ್ಟ್ ಕ್ಲಾಸ್ ಮತ್ತು ವರ್ಚುವಲ್ ಕ್ಲಾಸ್‌­ಗಳ ಉದ್ಘಾಟನೆಗೆ ಸಂಬಂಧಿಸಿದ ಜಾಹೀರಾತು. ಇದು ಜ.16ರಂದು ಬಹುತೇಕ ಎಲ್ಲಾ ಪತ್ರಿಕೆಗಳಲ್ಲೂ ಪ್ರಕಟವಾಗಿತ್ತು. ಅದರಲ್ಲಿ ವಿಜ್ಞಾನಿ ಮತ್ತು ಜವಹರಲಾಲ್ ನೆಹರು ವಿಶ್ವ­ವಿದ್ಯಾಲಯದ ಕುಲಪತಿ ಕೆ.ಕಸ್ತೂರಿರಂಗನ್ ಅವರ ಹೆಸರು ‘ಪದ್ಮವಿಭೂಷಣ’ ಸಮೇತ­ವಾಗಿಯೇ ಇತ್ತು. ಭಾರತ ಸರ್ಕಾರ ನೀಡುವ ‘ಪದ್ಮ’ ಪ್ರಶಸ್ತಿಗಳು ಹೆಸರಿನ ಜೊತೆಗೆ ಜೋಡಿಸಿ­ಕೊಳ್ಳಬಹುದಾದ ಬಿರುದುಗಳಲ್ಲ  ಎಂಬುದು ಜಾಹೀರಾತಿನ ಕೊನೆಯಲ್ಲಿ ಹೆಸರಿರುವ ಇಬ್ಬರೂ ಐಎಎಸ್ ಅಧಿಕಾರಿಗಳಿಗೆ ಗೊತ್ತಿಲ್ಲದೇ ಇರುವುದೇನಲ್ಲ.

ಈ ಜಾಹೀರಾತನ್ನು ಪತ್ರಿಕೆ­ಗಳಿಗೆ ಬಿಡುಗಡೆ ಮಾಡುವ ವಾರ್ತಾ ಇಲಾಖೆಯ ಅಧಿಕಾರಿಗಳಿಗೂ ಇದು ಚೆನ್ನಾ­ಗಿಯೇ ಗೊತ್ತಿದೆ. ಇನ್ನು ಮಂತ್ರಿಗಳಿಗೆ ಬೇರೆಲ್ಲರಿ­ಗಿಂತ ಹೆಚ್ಚೇ ಇದರ ಅರಿವಿರುತ್ತದೆ. ಆದರೂ ಸರ್ಕಾರಿ ಜಾಹೀರಾತಿನಲ್ಲೇ ಹೆಸರುಗಳು ‘ಪದ್ಮ’ ಸಮೇತವಾಗಿರುತ್ತವೆ ಎಂದರೇನರ್ಥ? 

ಕಾಲೇಜು ಶಿಕ್ಷಣ ಇಲಾಖೆ ‘ಸ್ಮಾರ್ಟ್’ ಆಗಿ ಜನರ ಗಮನಸೆಳೆಯಲು ಪ್ರಯತ್ನಿಸುತ್ತಿದೆ. ಅಥವಾ ಕಾಲೇಜುಗಳ ಗುಣಮಟ್ಟವವನ್ನು ಉಳಿಸಿಕೊಳ್ಳಲಾಗದ ಇಲಾಖೆ ತಂತ್ರಜ್ಞಾನದ ಪಾರಿಭಾಷಿಕಗಳ ಮೂಲಕ ಅದನ್ನು ಮುಚ್ಚಿ­ಡಲು ಪ್ರಯತ್ನಿಸುತ್ತಿದೆಯಷ್ಟೇ. ಅದ­ಕ್ಕಾಗಿ ಜಾಹೀರಾತಿನ ತುಂಬಾ ರಾಷ್ಟ್ರದಲ್ಲಿ ಪ್ರಥಮ, ದೇಶದಲ್ಲಿ ಮೊದಲುಗಳ ಜೊತೆಗೆ ಮುಖ್ಯ ಅತಿಥಿಯ ಹೆಸರಿಗೂ ‘ಪದ್ಮ’ ಸೇರಿಕೊಂಡಿದೆ ಅನ್ನಿಸುತ್ತದೆ.

ಇಷ್ಟಕ್ಕೂ ಶಿಕ್ಷಣದಲ್ಲಿ ತಂತ್ರಜ್ಞಾನ ಎಂಬುದು ಬರೇ ಬೊಗಳೆಯೇ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಹುಟ್ಟಿರಬಹುದು. ಖಂಡಿತವಾ­ಗಿಯೂ ತಂತ್ರಜ್ಞಾನ ಅದರಷ್ಟಕ್ಕೇ ಒಂದು ನೇತ್ಯಾತ್ಮಕ ಮೌಲ್ಯವಲ್ಲ. ಕಂಪ್ಯೂಟರ್ ಸೈನ್ಸ್ ಕಲಿಸುವ ಕಾಲೇಜುಗಳಿಗೆ ಕಂಪ್ಯೂಟರ್ ಬೇಕು. ಹಾಗೆಂದು ಕೇವಲ ಕಂಪ್ಯೂಟರ್ ಇದ್ದರೆ ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ ಕಲಿಯಲು ಸಾಧ್ಯವೇ? ಸರ್ಕಾರ ಕೇವಲ ಕಂಪ್ಯೂಟರ್ ಕೊಟ್ಟು ಕಂಪ್ಯೂಟರ್ ಸೈನ್ಸ್ ಕಲಿಯಲು ಹೇಳು­ತ್ತಿದೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಕ್ಷೇತ್ರ­ದಲ್ಲಿ ಇಂಥ ತಪ್ಪುಗಳು ಅನೇಕ ಬಾರಿ ಪುನ­ರಾವರ್ತನೆಯಾಗಿವೆ. ರೇಡಿಯೋದಲ್ಲಿ ಪಾಠ ಮಾಡುವುದು, ಪಾಠಗಳನ್ನು ಸಿ.ಡಿ.ಗಳಲ್ಲಿ ತಲು­ಪಿಸುವುದು, ಟಿ.ವಿ.ಬಳಸಿ ಪಾಠ ಕೇಳಿಸುವುದು ಎಲ್ಲ ಪ್ರಯೋಗಗಳೂ ನಡೆದು ಕೊನೆಗೆ ವಿಶ್ವದಾದ್ಯಂತ ಎಲ್ಲಾ ಶಿಕ್ಷಣ ತಜ್ಞರೂ ಅರಿತ ಒಂದು ಸಂಗತಿ ಇದೆ.

ಈ ಎಲ್ಲಾ ಪರಿಕರ­ಗಳಿದ್ದರೂ ತರಗತಿಯಲ್ಲೊಬ್ಬ ಶಿಕ್ಷಕ ಬೇಕು. ಭಾರತವೂ ಸೇರಿದಂತೆ ಅನೇಕ ತೃತೀಯ ಜಗ­ತ್ತಿನ ರಾಷ್ಟ್ರಗಳಲ್ಲಿ ರೇಡಿಯೋ ಪಾಠಗಳ ಪ್ರಯೋಗ ಮಾಡಿದ ಎಜುಕೇಶನ್ ಡೆವಲ­ಪ್‌ಮೆಂಟ್ ಸೆಂಟರ್ ಎಂಬ ಸರ್ಕಾರೇತರ ಸಂಸ್ಥೆ ಈ ಪಾಠಗಳನ್ನು ಮಕ್ಕಳು ಆಲಿಸುವಾಗ ಶಿಕ್ಷಕರ ಉಪಸ್ಥಿತಿಯನ್ನು ಕಡ್ಡಾಯಗೊಳಿಸಿತ್ತು. ಈ ಪಾಠಗಳಲ್ಲಿ ಶಿಕ್ಷಕರು ತರಗತಿಯಲ್ಲಿ ನಡೆಸ­ಬೇಕಾದ ಚಟುವಟಿಕೆಗಳ ಕುರಿತ ನಿರ್ದೇಶನ­ಗಳನ್ನೂ ಪ್ರಸಾರ ಮಾಡಲಾಗುತ್ತಿತ್ತು.

ಅಂದರೆ ಇಲ್ಲಿ ರೇಡಿಯೋ ಬಳಕೆಯಾದುದು ಶಿಕ್ಷಕನ ಬದಲಾಗಿ ಅಲ್ಲ. ಶಿಕ್ಷಕನ ಕೆಲಸಕ್ಕೆ ಪೂರಕವಾಗಿ. ನಮ್ಮ ಉನ್ನತ ಶಿಕ್ಷಣ ವ್ಯವಸ್ಥೆಯ ಬಹು­ಮುಖ್ಯ ಸಮಸ್ಯೆ ಇರುವುದೇ ಮೂಲಭೂತ ಸಂಗತಿ­ಗಳಲ್ಲಿ. ಉನ್ನತ ಶಿಕ್ಷಣಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲದ ಬಗ್ಗೆ ಸರ್ಕಾರ ಯೋಚಿ­ಸುವುದನ್ನೇ ಮರೆತು ಬಹುಕಾಲ­ವಾ­ಗಿದೆ. ಪರಿಣಾಮವಾಗಿ ವಿದ್ಯಾರ್ಥಿಗಳು ಸ್ವಯಂ ಕಲಿಕೆಗೆ ಬೇಕಿರುವ ಪ್ರಬುದ್ಧತೆಗೆ ತಲುಪುವುದೇ ಇಲ್ಲ.

ಸರ್ಕಾರಿ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಿ, ಕಟ್ಟಡ, ಪ್ರಯೋಗಾಲಯ ಇತ್ಯಾದಿ ಮೂಲ ಸೌಕರ್ಯಗಳನ್ನು ಸರಿಪಡಿಸಿ ಸ್ಮಾರ್ಟ್ ಕ್ಲಾಸ್ ಅಥವಾ ವರ್ಚುವಲ್ ಕ್ಲಾಸ್ ಪ್ರಯೋಗಕ್ಕೆ ಮುಂದಾದರೆ ಅದಕ್ಕೊಂದು ಅರ್ಥವಿದೆ. ಆಗ ವಿದ್ಯಾರ್ಥಿಗಳು ತರಗತಿಯ ಆಚೆಗೂ ಕಲಿ­ಯಲು ಸಾಧ್ಯವಿರುವ ಅವಕಾಶವೊಂದನ್ನು ಸೃಷ್ಟಿಯಾಗುತ್ತದೆ.

ನಿರ್ದಿಷ್ಟ ವಿಷಯದ ಕುರಿತು ಆಳವಾದ ಜ್ಞಾನವನ್ನು ಪಡೆಯಲು ಸಹಕಾರಿ­ಯಾಗುತ್ತವೆ. ಆದರೆ ಈಗಿನ ಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವುದು ತರಗತಿಯೊ­ಳಗೆ ಸಿಗಬೇಕಾದ ಮೂಲಭೂತ ಜ್ಞಾನ. ಅದನ್ನು ನೀಡಲು ಸರ್ಕಾರ ಮನಬಂದಾಗ ಕೊಡುವ ಸಂಬಳಕ್ಕೆ ಕೆಲಸ ಮಾಡುವವರು ಸಾಕು. ಉಳಿದದ್ದೆಲ್ಲಾ ವರ್ಚುವಲ್ ಆಗಿ ಇದೆ ಎಂದರೆ ಅದರ ಅರ್ಥವೇನು? 
ಉತ್ತರ ಸರಳ. ಪ್ರಭುತ್ವ ಜನರನ್ನು ವಂಚಿ­ಸಲು ಬಳಸುವ ಬಣ್ಣದ ಮಾತುಗಳ ಪಟ್ಟಿಗೆ ಈಗ ‘ತಂತ್ರಜ್ಞಾನ’ವೂ ಸೇರ್ಪಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT