ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಕ್ಸ್ ಡ್ರೀಮ್ ಎಕ್ಸ್-ಟೆರಿಯೊ: ಬ್ಲೂಟೂತ್ ಸ್ಪೀಕರ್ ಜೋಡಿ

Last Updated 10 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಈ ಅಂಕಣದಲ್ಲಿ ಹಲವು ನಮೂನೆಯ ಸ್ಪೀಕರ್‌ಗಳ ಬಗ್ಗೆ ಬರೆಯಲಾಗಿದೆ. ಮೋನೊ ಮತ್ತು ಸ್ಟಿರಿಯೊ ಬ್ಲೂಟೂತ್ ಸ್ಪೀಕರ್‌ಗಳು, ಕೇಬಲ್ ಮೂಲಕ ಜೋಡಿಸಬಹುದಾದವುಗಳು, ಬ್ಲೂಟೂತ್ ಮತ್ತು ಕೇಬಲ್ ಮೂಲಕ ಎರಡು ವಿಧಾನದಲ್ಲೂ ಜೋಡಿಸಬಹುದಾದವು, ಅತಿ ದುಬಾರಿಯ ಬೋಸ್ ಸ್ಪೀಕರ್, ಇತ್ಯಾದಿ. ಈ ಸಲ ಒಂದು ವಿಶಿಷ್ಟ ಸ್ಪೀಕರ್ ಜೋಡಿಯ ಕಡೆ ಗಮನ ಹರಿಸೋಣ. ಇದು ಎಕ್ಸ್ ಡ್ರೀಮ್ ಎಕ್ಸ್-ಟೆರಿಯೊ ಸ್ಪೀಕರ್ ಜೋಡಿ (Xdream X-Tereo Bluetooth speaker set).      

ಗುಣವೈಶಿಷ್ಟ್ಯಗಳು
ಬ್ಲೂಟೂತ್ ಸ್ಪೀಕರ್ ಜೋಡಿ. ಪ್ರತಿ ಸ್ಪೀಕರ್‌ ಪೆಟ್ಟಿಗೆಯಲ್ಲೂ ಎರಡು ಸ್ಪೀಕರ್‌ಗಳು, ಪ್ರತಿ ಸ್ಪೀಕರ್‌ನ ಶಕ್ತಿ 2 x 3 ವ್ಯಾಟ್, ಇಂಪೆಡೆನ್ಸ್ 4 ಓಮ್, ಕಂಪನಾಂಕದ ವ್ಯಾಪ್ತಿ 20 – 20,000 ಹರ್ಟ್ಸ್, ಸೂಕ್ಷ್ಮತೆ 83 ± 3 dB, ಧ್ವನಿ-ಮತ್ತು-ಶಬ್ದದ ಅನುಪಾತ (signal-to-noise ratio) 68 ± 3 dB, ಧ್ವನಿಯ ವ್ಯತ್ಯಯ (THD – total harmonic distortion) 0.15%, ಸ್ಪೀಕರ್ ಪೆಟ್ಟಿಗೆಯ ಗಾತ್ರ 170 x 60 x 60 ಮಿ.ಮೀ., ತೂಕ 435 ಗ್ರಾಂ, ಬ್ಲೂಟೂತ್ ವ್ಯಾಪ್ತಿ 10 ಮೀ., ಚಾರ್ಜಿಂಗ್ ಸಮಯ ಸುಮಾರು 5 ಗಂಟೆ, ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಸುಮಾರು 15 ಗಂಟೆ ಬಳಸಬಹುದು, ಚಾರ್ಜ್ ಮಾಡಲು ಯುಎಸ್‌ಬಿ ಕಿಂಡಿ, 3.5 ಮಿ.ಮೀ. ಇಯರ್‌ ಫೋನ್‌ ಕಿಂಡಿ, ಮೈಕ್ರೋಫೋನ್, ವಾಲ್ಯೂಮ್ ಬಟನ್, ಇತ್ಯಾದಿ.

ಮೂರು ಬಣ್ಣಗಳಲ್ಲಿ ಲಭ್ಯ. ಸ್ಪೀಕರ್‌ಗಳನ್ನು ಇಟ್ಟುಕೊಂಡು ಬೇಕೆಂದಲ್ಲಿಗೆ ತೆಗೆದುಕೊಂಡು ಹೋಗಲು ಸುಂದರವಾದ ಚಿಕ್ಕ ಪೆಟ್ಟಿಗೆ ನೀಡಿದ್ದಾರೆ. ನಿಗದಿತ ಬೆಲೆ ಸುಮಾರು ₹14,000.    

ರಚನೆ ಮತ್ತು ವಿನ್ಯಾಸ ತುಂಬ ಚೆನ್ನಾಗಿದೆ. ಮೊದಲ ನೋಟಕ್ಕೆ ತುಂಬ ಆಕರ್ಷಕವಾಗಿದೆ. ನೋಡಿದ ತಕ್ಷಣ ಕೊಳ್ಳಲು ಪ್ರೇರೇಪಿಸುವಂತಿವೆ. ಈ ಸ್ಪೀಕರ್‌ಗಳ ವೈಶಿಷ್ಟ್ಯ ಇರುವುದು ಇವನ್ನು ಮೋನೊ ಸ್ಪೀಕರ್ ಆಗಿ ಅಥವಾ ಸ್ಟಿರಿಯೊ ಜೋಡಿ ಆಗಿಯೂ ಬಳಸಬಹುದು ಎಂಬುದು. ಒಂದು ಸ್ಪೀಕರ್ ಆಗಿಯೂ ಕೊಳ್ಳಲು ಲಭ್ಯ. ಒಂದನ್ನು ಮಾತ್ರ ಆನ್ ಮಾಡಿದರೆ ಅದು ಆಗ ಮೋನೊ ಆಗಿ ಕೆಲಸ ಮಾಡುತ್ತದೆ. ಎರಡನ್ನೂ ಆನ್ ಮಾಡಿ ಒಂದಕ್ಕೊಂದು ಸಂಪರ್ಕ ಮಾಡಿಕೊಂಡು ನಂತರ ಬ್ಲೂಟೂತ್ ಮೂಲಕ ಮೊಬೈಲ್ ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್ ಇತ್ಯಾದಿಗಳಿಗೆ ಜೋಡಿಸಿದರೆ ಆಗ ಅದು ಸ್ಟಿರಿಯೊ ಸ್ಪೀಕರ್ ಜೋಡಿಯಾಗಿ ಕೆಲಸ ಮಾಡುತ್ತದೆ. ಎರಡನ್ನೂ ನಿಮಗೆ ಬೇಕಾದಷ್ಟು ದೂರ ಇಟ್ಟು ಕೊಳ್ಳಬಹುದು. ನಾನು ಸಾಮಾನ್ಯವಾಗಿ ಎಡಕ್ಕೊಂಡು ಬಲಕ್ಕೊಂದು ಇಟ್ಟುಕೊಂಡು ಎರಡನ್ನೂ ಸ್ವಲ್ಪ ನನ್ನ ಕಡೆಗೆ ತಿರುಗಿಸಿಕೊಂಡು ಸಂಪೂರ್ಣ ಸ್ಟಿರಿಯೊ ಸಂಗೀತದ ಆನಂದ  ಅನುಭವಿಸುತ್ತೇನೆ. 

ಪ್ರತಿ ಸ್ಪೀಕರ್ ಪೆಟ್ಟಿಗೆಯ ಒಳಗೂ ಎರಡು ಚಿಕ್ಕ ಸ್ಪೀಕರ್‌ಗಳಿವೆ. ವಿನ್ಯಾಸವು ಸಬ್‌ವೂಫರ್ ಕೆಲಸವನ್ನೂ ಮಾಡುವಂತಿದೆ. ಎರಡು ಬಣ್ಣಗಳಲ್ಲಿ ಲಭ್ಯವಿದೆ. ಕಂದು-ಕೆಂಪು ಮತ್ತು ಕಂದು-ನೀಲಿ. ಒಂದಕ್ಕೊಂದು ಸಂಪರ್ಕ ಮಾಡಿದಾಗ ಕಂದು ಬಣ್ಣದ್ದು ಎಡ ಸ್ಪೀಕರ್ ಆಗಿ ಕೆಲಸ ಮಾಡುತ್ತದೆ. ನಯವಾದ ಮೇಜಿನ ಮೇಲೆ ಇಟ್ಟುಕೊಂಡು ಸ್ಪೀಕರ್‌ಗಳನ್ನು ಅತಿ ಹೆಚ್ಚು ವಾಲ್ಯೂಮ್‌ನಲ್ಲಿ ಬಳಸಿದಾಗ ಸ್ಪೀಕರ್‌ಗಳು ಅದುರಿ ಅವು ಅತ್ತಿತ್ತ ಚಲಿಸದಂತೆ ಅವುಗಳ ಕೆಳಗೆ ಇಟ್ಟುಕೊಳ್ಳಲು ಸುಂದರವಾದ ಚಾಪೆ ನೀಡಿದ್ದಾರೆ.

ಪ್ರತಿ ಸ್ಪೀಕರ್‌ನಲ್ಲೂ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಇದೆ. ಇದರ ಮೂಲಕ ನಿಮ್ಮ ಮೊಬೈಲ್ ಫೋನ್, ಟ್ಯಾಬ್ಲೆಟ್, ಎಂಪಿ3 ಪ್ಲೇಯರ್, ಲ್ಯಾಪ್‌ಟಾಪ್ ಇತ್ಯಾದಿಗಳಿಗೆ ಜೋಡಿಸಬಹುದು. ಆದರೆ ಹಾಗೆ ಜೋಡಿಸಿದಾಗ ಒಂದು ಸ್ಪೀಕರ್ ಮಾತ್ರ ಬಳಸಬಹುದು. ಪ್ರತಿ ಪೆಟ್ಟಿಗೆಯ ಒಳಗೂ ಎರಡು ಸ್ಪೀಕರ್‌ಗಳಿರುವುದರಿಂದ ಆಗಲೂ ಅದು ಸ್ಟಿರಿಯೊ ವಿಧಾನದಲ್ಲಿ ಕೆಲಸ ಮಾಡುತ್ತದೆ. ಆದರೆ ನಿಜವಾದ ಸ್ಟಿರಿಯೊದ ಉತ್ತಮ ಅನುಭವ ಆಗುವುದಿಲ್ಲ. ಯಾಕೆಂದರೆ ಪೆಟ್ಟಿಗೆಯ ಗಾತ್ರ ಚಿಕ್ಕದಾಗಿದ್ದು, ಸ್ಪೀಕರ್‌ಗಳ ನಡುವಿನ ದೂರ ತುಂಬ ಕಡಿಮೆ ಇದೆ.

ಇವುಗಳನ್ನು ಮೊಬೈಲ್ ಫೋನ್ ಜೊತೆ ಬ್ಲೂಟೂತ್ ವಿಧಾನದಲ್ಲಿ ಜೋಡಿಸಿ ಬಳಸಬಹುದು. ಇವುಗಳಲ್ಲಿ ಮೈಕ್ರೋಫೋನ್ ಕೂಡ ಇದೆ. ಕರೆ ಬಂದರೆ ಅದನ್ನು ಸ್ವೀಕರಿಸಲು ಒಂದು ಬಟನ್ ನೀಡಿದ್ದಾರೆ. ಅಂದರೆ ಕಾನ್ಫರೆನ್ಸ್ ಕರೆ ಕೂಡ ಮಾಡಬಹುದು. ಹತ್ತಕ್ಕಿಂತ ಕಡಿಮೆ ಜನರು ಇರುವುದಾದರೆ ಕಚೇರಿಯಲ್ಲಿ ದೂರದಲ್ಲಿರುವವರೊಡನೆ ಕರೆ ಮೂಲಕ ಸಭೆ ಮಾಡಲು ಕೂಡ ಇದನ್ನು ಬಳಸಬಹುದು. ಮೈಕ್ರೋಫೋನ್‌ಗೆ ಶಬ್ದವನ್ನು ನಿವಾರಿಸುವ ತಂತ್ರಜ್ಞಾನ ಅಳವಡಿಸಿದ್ದಾರೆ. ಇದರಿಂದಾಗಿ ಮಾತನಾಡುವಾಗ ಏನೂ ಕಿರಿಕಿರಿಯಿಲ್ಲದೆ ಮಾತನಾಡಬಹುದು.

ಧ್ವನಿಯ ಗುಣಮಟ್ಟ ಚೆನ್ನಾಗಿದೆ. ಉತ್ತಮ ಸಂಗೀತ ಆಲಿಸುವ ಅನುಭವ ಚೆನ್ನಾಗಿದೆ. ಆದರೂ ನೀಡುವ ಹಣಕ್ಕೆ ಹೋಲಿಸಿದಾಗ ಇನ್ನೂ ಸ್ವಲ್ಪ ಉತ್ತಮವಾಗಿದ್ದರೆ ಒಳ್ಳೆಯದು ಅನ್ನಿಸುತ್ತದೆ. ಅತಿ ಕಡಿಮೆ ಕಂಪನಾಂಕದ ಧ್ವನಿಯ (bass) ಪುನರುತ್ಪತ್ತಿಯಲ್ಲಿ ಮತ್ತು ಧ್ವನಿಯ ಶ್ರೀಮಂತಿಕೆಯಲ್ಲಿ ಇದು ಇನ್ನೂ ಸ್ವಲ್ಪ ಉತ್ತಮವಾಗಿದ್ದರೆ ಒಳ್ಳೆಯದಿತ್ತು.

ಇವನ್ನು ಜೊತೆಯಾಗಿ ಬಳಸುವಾಗ ಇದರ ಜೊತೆ ನೀಡಿದ ಕೈಪಿಡಿಯಲ್ಲಿ ವಿವರಿಸಿದ ರೀತಿಯಲ್ಲೇ ಹಂತಹಂತವಾಗಿ ಬಟನ್‌ಗಳನ್ನು ಒತ್ತಿ  ಸಂಪರ್ಕ ಸಾಧಿಸಬೇಕು. ಮೊದಲು ಎಡದ ಸ್ಪೀಕರ್ ಆನ್ ಮಾಡಿ, ನಂತರ ಬಲದ ಸ್ಪೀಕರ್ ಆನ್ ಮಾಡಿ, ಒಂದಕ್ಕೊಂದು ಸಂಪರ್ಕ ಸಾಧಿಸಿ, ನಂತರ ಫೋನ್‌ನಲ್ಲಿ ಬ್ಲೂಟೂತ್ (ಅಥವಾ ಲ್ಯಾಪ್‌ಟಾಪ್) ಆನ್ ಮಾಡಿ, ಸ್ಪೀಕರ್‌ಗಳನ್ನು ಜೋಡಿಸಿಕೊಳ್ಳಬೇಕು. ಈ ಹಂತಗಳನ್ನು ಹಿಂದೆ ಮುಂದೆ ಮಾಡಿದರೆ ಜೋಡಣೆ ಸರಿಯಾಗಿ ಆಗುವುದಿಲ್ಲ. ಕೆಲವೊಮ್ಮೆ ಒಂದು ಸ್ಪೀಕರ್ ಮಾತ್ರ ಸಂಪರ್ಕಗೊಳ್ಳುತ್ತದೆ. ಬಳಸುವಾಗ ಕೆಲವೊಮ್ಮೆ ಇದ್ದಕ್ಕಿದ್ದಂತೆ ಧ್ವನಿಯಲ್ಲಿ ಸ್ವಲ್ಪ ಏರಿಳಿತ ಆಗುವುದನ್ನು ಗಮನಿಸಿದ್ದೇನೆ. ಇದು ಯಾವಾಗ ಮತ್ತು ಯಾಕೆ ಆಗುತ್ತದೆ ಎಂದು ಪತ್ತೆಯಾಗಲಿಲ್ಲ.

ವಾರದ ಆಪ್

ಮುದ್ರಾ ವಿಜ್ಞಾನ
ಯೋಗಶಾಸ್ತ್ರದಲ್ಲೂ ಯೋಗ ಚಿಕಿತ್ಸೆಯಲ್ಲೂ ಮುದ್ರೆಗಳಿಗೆ ವಿಶೇಷ ಮಹತ್ವವಿದೆ. ಧ್ಯಾನ ಮಾಡುವಾಗ ಹೆಬ್ಬೆರಳು ಮತ್ತು ತೋರುಬೆರಳುಗಳನ್ನು ಜೋಡಿಸಿ ಮಾಡುವ ಜ್ಞಾನಮುದ್ರೆ ಬಹುಮಂದಿಗೆ ಗೊತ್ತು. ಬೇರೆ ಬೇರೆ ಮುದ್ರೆಗಳಿಗೆ ಬೇರೆ ಬೇರೆ ಅರ್ಥ ಉದ್ದೇಶಗಳಿವೆ. ಮುದ್ರೆಗಳು ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ ಔನ್ನತ್ಯಕ್ಕೆ ಯಶಸ್ವಿ ಸಾಧನವಾಗಬಲ್ಲವು ಎಂದು ಈ ಬಗ್ಗೆ ಬರೆದ ಹಲವು ಪುಸ್ತಕಗಳು ಹೇಳುತ್ತವೆ. ಮುದ್ರೆಗಳನ್ನು ಮಾಡಲು ಆಶಿಸುವವರಿಗೆ ಅವುಗಳ ಬಗ್ಗೆ ತಿಳಿಸುವ ಹಲವು ಪುಸ್ತಕಗಳಿವೆ. ಈಗ ಮುದ್ರೆಗಳ ಬಗ್ಗೆ ವಿವರಿಸುವ ಕಿರುತಂತ್ರಾಂಶಗಳೂ (ಆಪ್) ಬಂದಿವೆ. ಅಂತಹ ಒಂದು ಕಿರುತಂತ್ರಾಂಶ ಮುದ್ರಾವಿಜ್ಞಾನ (Mudra Vigyan) ಆಂಡ್ರೋಯಿಎಡ್‌ಗೆ ಲಭ್ಯವಿದೆ. ಇದರಲ್ಲಿ ಹಲವು ನಮೂನೆಯ ಮುದ್ರೆಗಳ ವಿವರ, ಅವುಗಳಿಂದಾಗುವ ಲಾಭ ಎಲ್ಲವನ್ನೂ ವಿವರಿಸಲಾಗಿದೆ.


ಗ್ಯಾಜೆಟ್ ಸುದ್ದಿ
ಆಪತ್ಕಾಲೀನ ಸಂದರ್ಭಗಳಲ್ಲಿ ಆತ್ಮರಕ್ಷಣೆಗೆ ಬಳಸುವ ಪೆಪ್ಪರ್ ಸ್ಪ್ರೇ ತಿಳಿದಿರಬಹುದು. ಅದನ್ನು ಶಾಸಕರೊಬ್ಬರು ದುರ್ಬಳಕೆ ಮಾಡಿದ್ದೂ ನೆನಪಿರಬಹುದು. ಈಗ ಅತ್ಯಾಧುನಿಕ ಪೆಪ್ಪರ್ ಸ್ಪ್ರೇ ತಯಾರಾಗುತ್ತಿರುವ ಬಗ್ಗೆ ವರದಿಯಾಗಿದೆ. ಈ ಪೆಪ್ಪರ್ ಸ್ಪ್ರೇ ಬಾಟಲಿಗೆ ಕ್ಯಾಮೆರಾ, ಜಿಪಿಎಸ್, ಸೈರನ್ ಅಳವಡಿಸಲಾಗಿದೆ. ಹೆಂಗಸೊಬ್ಬಳು ಆತ್ಮ ರಕ್ಷಣೆಗೆ ಅದನ್ನು ಬಳಸಿದೊಡನೆ ಅದು ದಾಳಿ ಮಾಡಿದವನ ಫೋಟೊ ತೆಗೆದು ಅಂತರಜಾಲದ ಮೂಲಕ ರವಾನಿಸುತ್ತದೆ. ಜಿಪಿಎಸ್ ಮೂಲಕ ತಾನು ಇರುವ ಸ್ಥಳದ ಅಕ್ಷಾಂಶ ರೇಖಾಂಶಗಳನ್ನೂ ರವಾನಿಸುತ್ತದೆ. ಇದರಿಂದ ಮಾಹಿತಿ ಪಡೆದ ಪೊಲೀಸರು ಕೂಡಲೇ ಆ ಸ್ಥಳಕ್ಕೆ ಬರುತ್ತಾರೆ. ಇದು ಸೈರನ್ ಧ್ವನಿಯನ್ನು ಉತ್ಪಾದಿಸುತ್ತದೆ. ಈ ಧ್ವನಿ ಕೇಳಿ ಸಾರ್ವಜನಿಕರು ಸಹಾಯಕ್ಕೂ ಬರಬಹುದು. ಈ ಪೆಪ್ಪರ್ ಸ್ಪ್ರೇ 2014ರ ಕೊನೆಯದಲ್ಲಿ ಮಾರುಕಟ್ಟೆಗೆ ತಲುಪುವ ನಿರೀಕ್ಷೆಯಿದೆ.

ಗ್ಯಾಜೆಟ್ ತರ್ಲೆ
ಪ್ರ: ಅಲಿಯಾ ಭಟ್ ದಂತವೈದ್ಯರನ್ನು ಕಾಣಲು ಹೋದದ್ದು ಯಾಕೆ ಗೊತ್ತಾ?
ಉ: ಆಕೆಯ ಬ್ಲೂಟೂತ್ ಕೆಲಸ ಮಾಡುತ್ತಿರಲಿಲ್ಲ, ಅದಕ್ಕೆ.

ಗ್ಯಾಜೆಟ್ ಸಲಹೆ
ಪ್ರ:ನಾನು ನೋಕಿಯಾ ಲುಮಿಯಾ 520 ಉಪಯೋಗಿಸುತ್ತಿರುವೆ. ನನ್ನ ಮೊಬೈಲಿನ ತೊಂದರೆ ಏನೆಂದರೆ app list+settings ನ backup  ಆಗುತಿಲ್ಲ. ಶೇಕಡಾ 80 ರಷ್ಟು ಆಗಿ we hit an error: 0x80191f4 ಎಂದು ತೋರಿಸುತ್ತಿದೆ. ನೋಕಿಯಾ ಕೇರ್‌ಗೆ ಹೋಗಿ ಕೇಳಿದರೆ ಅದು ಸರಿ ಆಗುವುದಿಲ್ಲ hard reset ಮಾಡಿ ಎಂದು ಹೇಳುತ್ತಾರೆ. soft reset ಮಾಡಿದರೂ ಉಪಯೋಗವಾಗಲಿಲ್ಲ. ದಯವಿಟ್ಟು ಏನು ಮಾಡಬೇಕೆಂದು ತಿಳಿಸಿ.

ಉ: ಈ ದೋಷಸಂದೇಶ ಬರುವುದು ಸಾಮಾನ್ಯವಾಗಿ ಮಾಹಿತಿಯನ್ನು ಕಳುಹಿಸುವಾಗ ಮತ್ತು ಸ್ವೀಕರಿಸುವಾಗ ಸಂಪರ್ಕದಲ್ಲಿ ತೊಂದರೆಯಾದಾಗ. ಮಾಹಿತಿಯ ಕಳುಹಿಸುವಿಕೆ ಮತ್ತು ಸ್ವೀಕರಿಸುವಿಕೆಯಲ್ಲಿ ಸರಿಯಾಗಿ ಕೈಕುಲುಕುವಿಕೆ ಆಗದಿದ್ದರೂ ಇದೇ ತೊಂದರೆ ಇದೆ. ಇದರ ಪರಿಹಾರಕ್ಕೆ ಹಲವು ರೀತಿಯಲ್ಲಿ ಪ್ರಯತ್ನಿಸಿ. ನಿಮ್ಮ ಅಂತರಜಾಲ ಸಂಪರ್ಕ ಉತ್ತಮವಾಗಿಸಿ. ನಿಧಾನ ಸಂಪರ್ಕ ಇದ್ದರೂ ಈ ತೊಂದರೆ ಬರುವ ಸಾಧ್ಯತೆಯಿದೆ. ಮೆಮೊರಿಯಲ್ಲಿ ಕುಳಿತಿರುವ ಅಗತ್ಯವಿಲ್ಲದ ಎಲ್ಲ ಆಪ್‌ಗಳನ್ನು ತೆಗೆದುಹಾಕಿ. ಕೊನೆಯ ಪ್ರಯತ್ನವಾಗಿ ಹಾರ್ಡ್ ರಿಸೆಟ್ ಮಾಡಿ ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT