ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಊರುಗಳಲ್ಲಿಯೂ ಹೀಗೆ ಮಾಡಲು ಏನು ಕಷ್ಟ?

Last Updated 28 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಇದು ಒಂದು ರೀತಿಯಲ್ಲಿ ಪುಟ್ಟ ಕೆಲಸ. ಇನ್ನೊಂದು ರೀತಿಯಲ್ಲಿ ಬಹಳ ದೊಡ್ಡ ಕೆಲಸ. ಪುಟ್ಟ ಕೆಲಸ ಏಕೆ ಎಂದರೆ ಇದನ್ನು ಯಾರಾದರೂ ಮಾಡಬಹುದು. ದೊಡ್ಡ ಕೆಲಸ ಏಕೆ ಎಂದರೆ ಇದನ್ನು ಬಹಳ ಮಂದಿ ಮಾಡಲು ಆಗುವುದಿಲ್ಲ. ಮಾಡಿದರೂ ಇದನ್ನು ಬಹು ಕಾಲ ನಡೆಸಿಕೊಂಡು ಹೋಗಲು ಆಗುವುದಿಲ್ಲ. ಅದನ್ನು ಮಾಡಲು ಆರಂಭಿಸಿದಾಗಲೇ ಅದು ಎಷ್ಟು ಕಷ್ಟದ ಕೆಲಸ ಎಂದು ತಿಳಿಯುತ್ತ ಹೋಗುತ್ತದೆ. ಅದಕ್ಕೆ ನಿತ್ಯ ಬರುವ ವಿದ್ಯಾರ್ಥಿಗಳು ಬೇಕು.

ಅವರಿಗೆ ಅಚ್ಚುಕಟ್ಟಾಗಿ ಕುಳಿತುಕೊಳ್ಳಲು ಸಭಾಂಗಣ ಬೇಕು. ಅಲ್ಲಿ ಮೇಜು ಬೇಕು ಕುರ್ಚಿ ಬೇಕು. ಪಾಠೋಪಕರಣ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಶಿಕ್ಷಕರು ಬೇಕು. ಮತ್ತು ಅವರು ಬದ್ಧತೆಯುಳ್ಳವರು  ಆಗಿರಬೇಕು. ಕಳೆದ ಭಾನುವಾರ ಬೆಂಗಳೂರಿನ ಆರ್‌.ವಿ.ದಂತವೈದ್ಯ ಕಾಲೇಜಿನ ಸಭಾಂಗಣದಲ್ಲಿ ಐನೂರು ಮಕ್ಕಳು ಸೇರಿದ್ದರು. ಅವರ ಜತೆಗೆ ಪಾಲಕರೂ ಇದ್ದರು. ಮಕ್ಕಳು, ನೂರು ದಿನಗಳ ಎಸ್ಸೆಸ್ಸೆಲ್ಸಿ ಉಚಿತ ಪಾಠಗಳನ್ನು ಪೂರೈಸಿದ್ದರು.

ಅವರಿಗೆಲ್ಲ ಉಚಿತವಾಗಿ ಪಾಠ ಮಾಡಿದ 66 ಮಂದಿ ಶಿಕ್ಷಕರಿಗೆ ಒಂದು ಪುಟ್ಟ ಪ್ರೀತಿಯ ಸನ್ಮಾನ ಇತ್ತು. ಅವರಿಗೇನು ಅಲ್ಲಿ ಯಾರೂ ಶಾಲು ಹೊದಿಸಲಿಲ್ಲ. ಕೊರಳು ಜಗ್ಗುವ ಹಾಗೆ ಮಾಲೆ ಹಾಕಲಿಲ್ಲ; ಕೈಗೆ ಹಣ ತುಂಬಿದ ಲಕೋಟೆ ಕೊಡಲಿಲ್ಲ : ಒಂದು ಹೂಗುಚ್ಛ ಕೊಟ್ಟರು; ವಿವೇಕಾನಂದರ ಒಂದು ಫೋಟೊ ಕೊಟ್ಟರು. ಆದರೆ, ಆ  ಎಲ್ಲ ಶಿಕ್ಷಕರಲ್ಲಿ ಎಂಥ ಎನರ್ಜಿ ಇತ್ತು! ವೃತ್ತಿಗೆ ಬದ್ಧತೆ ಇತ್ತು! ನಾವೆಲ್ಲ ಅಂದುಕೊಂಡುದು ಶಿಕ್ಷಕರಿಗೆ ಸಂಬಳ ಬಹಳ ಹೆಚ್ಚಾಗಿದೆ. ಅವರು ಸರಿಯಾಗಿ ಪಾಠ ಮಾಡುವುದಿಲ್ಲ; ಅಥವಾ ಅದೇ ಹಳೆಯ ನೋಟ್ಸುಗಳನ್ನೇ ಇಟ್ಟುಕೊಂಡು ಹೇಳಿದ್ದನ್ನೇ ಹೇಳುತ್ತಾರೆ. ಸಂಬಳದ ಹಣವನ್ನು ಬಡ್ಡಿ ಆಡುತ್ತಾರೆ. ಇತ್ಯಾದಿ... ಇತ್ಯಾದಿ. ಆದರೆ, ಸತ್ಯ ಹೀಗೆ ಸಾರಾ ಸಗಟಾಗಿ ಇರುವುದಿಲ್ಲ.

ಕಳೆದ ನೂರು ದಿನಗಳಲ್ಲಿ ಅವರೆಲ್ಲ ಮಕ್ಕಳಿಗೆ ಹೇಗೆ ಪಾಠ ಮಾಡಿದರು ಎಂಬುದರ ಒಂದು ಮಾದರಿಯನ್ನು ಪಾಲಕರಿಗೆ, ಬಂದಂಥ ನಮ್ಮಂಥ ಸಾರ್ವಜನಿಕರಿಗೆ ತಿಳಿಸಿಕೊಡಬೇಕು ಎನ್ನುವಂತೆ ಅವರು ಬೇರೆ ಬೇರೆ  ವಿಷಯಗಳ ಕುರಿತು ಒಂದು ಗಂಟೆ ಪಾಠ ಮಾಡಿದರು. ಅಲ್ಲಿ ಭೌತವಿಜ್ಞಾನದ ಪಾಠ ಇತ್ತು, ಗಣಿತದ ಪಾಠ ಇತ್ತು. ಹಳೆಗನ್ನಡದ ಪಾಠವೂ ಇತ್ತು. ಈಗ ಹಳೆಗನ್ನಡ ಹೇಳಿಕೊಡುವವರು ಯಾರು? ಯಾರಿಗೆ ಹಳೆಗನ್ನಡದ ಪದ್ಯಗಳ ಸಾಲು ಒಡೆಯಲು ಬರುತ್ತದೆ? ಅರ್ಥ ಹೇಳಲು ಬರುತ್ತದೆ ಎಂದು ಗೊಣಗುವವರ ನಡುವೆ ಒಬ್ಬ ಯುವ ಶಿಕ್ಷಕ ಪಂಪನ ವಿಕ್ರಮಾರ್ಜುನ ವಿಜಯದ ಕೊನೆಯ ಆಶ್ವಾಸದ, ‘ಎನಗುಂ ಪಾಂಡುಗಂ ಭೇದಮಿಲ್ಲ...’ ಎಂಬ ಪದ್ಯವನ್ನು ಎಷ್ಟು ಚೆನ್ನಾಗಿ ಪಾಠ ಮಾಡಿದರು!

ಈ ಪದ್ಯ ಮಕ್ಕಳಿಗೆ, ತಂದೆ ತಾಯಿಯರಿಗೆ ಏಕೆ ಮುಖ್ಯ ಎಂದು ವಿವರಿಸಿದರು. ಹಳೆಗನ್ನಡ ಪದ್ಯಗಳನ್ನು ಹೇಗೆ ಓದಬೇಕು, ಎಲ್ಲಿ ನಿಲ್ಲಬೇಕು, ಎಲ್ಲಿ ಪದಗಳನ್ನು ಒಡೆಯಬೇಕು, ಎಲ್ಲಿ ಕೂಡಿಸಬೇಕು ಎಂಬುದನ್ನೆಲ್ಲ ಚಕ ಚಕ ಹೇಳಿಕೊಟ್ಟರು. ವಿದ್ವತ್ತು ಎಂಬುದು ಯಾರಿಗೂ ಮೀಸಲು ಅಲ್ಲ. ಕಷ್ಟ ಪಟ್ಟರೆ ಯಾರಾದರೂ ಹೀಗೆ ಪಾಠ ಮಾಡಬಹುದು ಎಂದುಕೊಂಡೆ. ಬೆಂಗಳೂರಿನ ಯಾವಯಾವುದೋ ಮೂಲೆಯಿಂದ ಮಕ್ಕಳು ಬಂದಿದ್ದರು. ಬಹುತೇಕ ಮಕ್ಕಳಿಗೆ ಖಾಸಗಿ ಪಾಠ ಪಡೆಯುವ ಆರ್ಥಿಕ ಅನುಕೂಲ ಇರಲಿಲ್ಲ.

ಅವರ ತಂದೆ ತಾಯಿಯರು ನಿತ್ಯದ ಉಪಜೀವನಕ್ಕಾಗಿ ಹೋರಾಟ ಮಾಡುವವರು. ಅವರು ಆಟೊ ಚಾಲಕರು, ಕೂಲಿನಾಲಿ ಮಾಡುವವರು, ಗಾರೆ ಕೆಲಸದವರು, ಮೆಕ್ಯಾನಿಕ್‌ಗಳು... ಅವರ ಮಕ್ಕಳಿಗೆ ಪಾಲಿಕೆಯ ಶಾಲೆಗಳೇ ಗತಿ. ಇಂಥ ಮಕ್ಕಳಿಗೆಲ್ಲ ಕಳೆದ ಏಳು ವರ್ಷಗಳಿಂದ ಜಯನಗರ ಶೈಕ್ಷಣಿಕ ಸಮಿತಿ ಆಶ್ರಯದಲ್ಲಿ ಪಾಠ ಪ್ರವಚನ ನಡೆಯುತ್ತಿದೆ. ಮುಂಚೂಣಿಯಲ್ಲಿ ಜಯನಗರದ ಶಾಸಕ ಬಿ.ಎನ್‌.ವಿಜಯಕುಮಾರ್‌ ಇದ್ದಾರೆ.

ಅವರ ಜತೆಗೆ ಆರ್‌.ವಿ.ಆಡಳಿತ ಸಂಸ್ಥೆಯ ನಿರ್ದೇಶಕ ಡಾ.ಟಿ.ವಿ.ರಾಜು, ಕ್ರೈಸ್ಟ್ ವಿಶ್ವವಿದ್ಯಾಲಯದ ಸಂಶೋಧನ ಕೇಂದ್ರದ ಹೆಚ್ಚುವರಿ ನಿರ್ದೇಶಕ ಡಾ.ಎಸ್‌.ಶ್ರೀಕಂಠಸ್ವಾಮಿ, ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಎಸ್. ಸಮೀರಸಿಂಹ, ವಿಜಯಾ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಶೇಷಮೂರ್ತಿ, ತೆರೆಯ ಮರೆಯಲ್ಲಿ ಕೆಲಸ ಮಾಡುವ ಸ್ವಯಂ ಸೇವಕರು, ಸೇವಕಿಯರು, ಒಬ್ಬರೇ, ಇಬ್ಬರೇ... ದೊಡ್ಡ ದಂಡೇ ಇದೆ.

ಎಲ್ಲ ಒಳ್ಳೆಯ ಕೆಲಸಗಳಿಗೆ ಒಂದು ಇತಿಹಾಸ ಇರುತ್ತದೆ. ಈ ಕೆಲಸಕ್ಕೂ ಇದೆ. ಏಳು ವರ್ಷಗಳ ಹಿಂದೆ ಜಯನಗರ ಶಾಸಕರಾಗಿ ವಿಜಯಕುಮಾರ್ ಆಯ್ಕೆಯಾದಾಗ  ಅವರನ್ನು ಪಾಲಿಕೆಯ ಶಾಲೆಗಳಿಗೆ ಅತಿಥಿಯಾಗಿ ಮತ್ತೆ ಮತ್ತೆ ಕರೆಯುತ್ತಿದ್ದರು. ಮಕ್ಕಳ ಜತೆಗಿನ ಸಂವಾದ ಅವರಿಗೆ ಯಾವಾಗಲೂ ನಿರಾಶಾದಾಯಕವಾಗಿಯೇ ಇರುತ್ತಿತ್ತು. ಹತ್ತನೇ ತರಗತಿ ವರೆಗೆ ಹೇಗೋ ತೆವಳಿಕೊಂಡು ಪಾಸಾಗಿ ಬರುವ ಮಕ್ಕಳಿಗೆ ಎಸ್ಸೆಸ್ಸೆಲ್ಸಿಗೆ ಬಂದಾಗ ಓದಲೂ ಕಷ್ಟವಾಗುತ್ತಿತ್ತು. ಬರೆಯಲೂ ಕಷ್ಟವಾಗುತ್ತಿತ್ತು.

ಒಟ್ಟು ಅವರಿಗೆ ವಿಷಯದ ಗ್ರಹಿಕೆಯೇ ದೊಡ್ಡ ಸಮಸ್ಯೆಯಾಗಿತ್ತು. ಅವರ ಗ್ರಹಿಕೆಯ ಮಟ್ಟವನ್ನು ಅಂದಾಜು ಮಾಡಲು  ಒಂದು ಪುಟ್ಟ ಪರೀಕ್ಷೆ ಇಟ್ಟರು. ಅದರಲ್ಲಿ 4,500 ಮಕ್ಕಳು ಭಾಗವಹಿಸಿದ್ದರು. ಮೊದಲ ಪ್ರಶ್ನೆಯನ್ನು ಕೇವಲ ಶೇಕಡಾ 17ರಷ್ಟು ಮಕ್ಕಳು ಮಾತ್ರ  ಬಿಡಿಸಿದರು. ಶೇಕಡಾ 24ರಷ್ಟು ವಿದ್ಯಾರ್ಥಿಗಳು ಅತಿ ಹೆಚ್ಚು ಪ್ರಶ್ನೆಗಳಿಗೆ ಉತ್ತರ ಬರೆದಿದ್ದರು. ಯಾರೂ ಎಲ್ಲ ಪ್ರಶ್ನೆಗಳಿಗೆ ಉತ್ತರ ಬರೆದಿರಲಿಲ್ಲ. ನಾವು ಮಕ್ಕಳಿಗೆ ಈಗ ಕೊಡುತ್ತಿರುವ ಶಿಕ್ಷಣದ ಮಟ್ಟಕ್ಕೆ ಈ ಪರೀಕ್ಷೆ ಕನ್ನಡಿಯಂತೆ ಇತ್ತು.  ಬಹುತೇಕ ಮಕ್ಕಳಿಗೆ ಇಂಗ್ಲಿಷ್‌, ಗಣಿತ ಮತ್ತು ವಿಜ್ಞಾನ ವಿಷಯಗಳು ತಲೆಗೆ ಹೋಗಲು ನಿರಾಕರಿಸುತ್ತಿದ್ದುವು!

ಸಮಸ್ಯೆ ಏನು ಎಂದು ಗೊತ್ತಾಯಿತು. ಅದನ್ನು ಬಗೆಹರಿಸುವುದು ಅಷ್ಟು ಸುಲಭ ಇರಲಿಲ್ಲ. ಅವರಿಗೆ ಪಾಠ ಮಾಡಲು ಶಿಕ್ಷಕರ ತಂಡವನ್ನು ಕಟ್ಟಬೇಕಿತ್ತು. ಈ ಮಕ್ಕಳಿಗೆ ಉಚಿತವಾಗಿ ಪಾಠ ಮಾಡುವುದು ‘ನಿಮ್ಮ ಧರ್ಮ’ ಎಂದು ಉತ್ತೇಜಿಸಬೇಕಿತ್ತು.  ಪಾಠ ಮಾಡಲು ಒಂದು ಜಾಗ ಬೇಕಿತ್ತು. ಬರುವ ಮಕ್ಕಳಿಗೆ ಪಾಠದ ಜತೆಗೆ ಒಂದಿಷ್ಟು ಆಕರ್ಷಣೆಯೂ ಇರಬೇಕಿತ್ತು. ಈಗಲೇನೋ ಜಯನಗರದ ಐದನೇ ಬಡಾವಣೆಯಲ್ಲಿ ಶೈಕ್ಷಣಿಕ ಸಮಿತಿಗೆ ಒಂದು ಭವ್ಯ ಕಟ್ಟಡ ತಲೆ ಎತ್ತಿ ನಿಂತಿದೆ. 

ಅಲ್ಲಿ ಆರು ಸಾವಿರ ಚದುರ ಅಡಿ ಜಾಗದಲ್ಲಿ ಗ್ರಂಥಾಲಯವೇ ಇದೆ.  25  ಕಂಪ್ಯೂಟರ್ ಗಳು ಇವೆ. ಪಾಠೋಪಕರಣ ಇವೆ, ಪೀಠೋಪಕರಣ ಎಲ್ಲ ಇವೆ. ಅವೆಲ್ಲ ವಿಶೇಷ ಎನ್ನುವಂತೆಯೂ ಇವೆ.  ಆದರೆ, 2008ರಲ್ಲಿ ಪಾಠ ಆರಂಭ ಮಾಡಿದಾಗ ಇದೆಲ್ಲ ಇರಲಿಲ್ಲ. ಯಾರೋ ಜಾಗ ಕೊಟ್ಟಿದ್ದರು. ಹೇಗೋ ಪಾಠ ಮಾಡಬೇಕಿತ್ತು. ಆದರೆ, ಆಗಲೂ 66 ಮಂದಿ ಶಿಕ್ಷಕರು ಹಾಗೂ ಶಿಕ್ಷಕಿಯರು ಬೆಂಗಳೂರಿನ ಮೂಲೆ ಮೂಲೆಯಿಂದ ಯಾವ ಫಲಾಪೇಕ್ಷೆಯೂ ಇಲ್ಲದೆ ಬಂದು ಪಾಠ ಮಾಡುತ್ತಿದ್ದರು, ಈಗಲೂ ಮಾಡುತ್ತಿದ್ದಾರೆ.

ಮೊದಲ ತರಗತಿಗಳನ್ನು ಆರಂಭಿಸುವುದಕ್ಕಿಂತ ಮುಂಚೆ ಒಂದೇ ವಿಷಯದ ಮೂರು ಮೂರು ಮಂದಿ ಶಿಕ್ಷಕರನ್ನು ಆರಿಸಿ  ಅವರಿಗೆ ಪಾಠ ಮಾಡಲು ಹೇಳಿದರು. ಅವರೆಲ್ಲರಲ್ಲಿ ಇರುವ ಉತ್ತಮ ಅಂಶಗಳನ್ನು ಆರಿಸಿ ಒಂದು ಪಾಠಕ್ರಮವನ್ನು ರೂಪಿಸಿದರು. ಇಲ್ಲಿ ಪಾಠ ಮಾಡಲು ಬರುವವರೆಲ್ಲ ಬಹುತೇಕ ಡಾ.ಸಮೀರ ಸಿಂಹ ಅವರ ವಿದ್ಯಾರ್ಥಿಗಳು. ನೋಡಲು ಸಿಂಹದಂತೆಯೇ ಇರುವ ಸಮೀರ ಸಿಂಹ ಅವರು ದೊಡ್ಡ ಶಿಷ್ಯವತ್ಸಲ. ಅವರು ಎದುರು ಕಂಡರೆ ಅವರಿಗೆ ಪೊಡಮಟ್ಟೇ ಶಿಕ್ಷಕರು ಮುಂದೆ ಹೋಗುತ್ತಾರೆ.

ಈಗ ಜಯನಗರ ಸುತ್ತಮುತ್ತಲಿನ ಮಕ್ಕಳು ಯಾವಾಗ ಅಕ್ಟೋಬರ್‌ ಬರುತ್ತದೆ ಎಂದು ಕಾಯುತ್ತ ಇರುತ್ತಾರೆ. ಎಲ್ಲ ಶಾಲೆಗಳಿಗೆ ಶೈಕ್ಷಣಿಕ ಸಮಿತಿಯ ಅರ್ಜಿ ನಮೂನೆಗಳು ಹೋಗುವುದೇ ತಡ. ಅವು ಭರ್ತಿಯಾಗಿ ವಾಪಸು ಬರುತ್ತವೆ. 66 ಮಂದಿ ಶಿಕ್ಷಕರಿಗೆ ಒಬ್ಬೊಬ್ಬರಿಗೂ ಹೆಚ್ಚೆಂದರೆ ಆರೇಳು ತರಗತಿಗಳು ಬರುತ್ತವೆ. ಎಲ್ಲರೂ ಘಟಾನುಘಟಿ ಎನ್ನುವಂಥ ಶಿಕ್ಷಕರು. ಕನ್ನಡ ಮತ್ತು ಇಂಗ್ಲಿಷ್‌್ ಮಾಧ್ಯಮಗಳೆರಡಲ್ಲೂ ಪಾಠ ಮಾಡುತ್ತಾರೆ.

ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ಐಐಎಂನ ವಿದ್ಯಾರ್ಥಿನಿಯೊಬ್ಬರು ಇಲ್ಲಿನ ಉಚಿತ ಶಿಕ್ಷಣ ವ್ಯವಸ್ಥೆ ಮತ್ತು ಅದರಿಂದ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಕೂಡಿಯೇ ಹೇಗೆ ಅನುಕೂಲ ಆಯಿತು ಎಂದು ಅಧ್ಯಯನ ಮಾಡಿದರು. ಇಲ್ಲಿ ತುಂಬ ವೈಜ್ಞಾನಿಕವಾಗಿ ಪಾಠ ನಡೆಯುತ್ತಿವೆ. ಮಕ್ಕಳಿಗೆ ಪಾಠ ಚೆನ್ನಾಗಿ ತಲೆಗೆ ಹತ್ತಲು ಕೊಠಡಿ ಹೇಗಿರಬೇಕು, ಮೇಜು ಕುರ್ಚಿ ಹೇಗಿರಬೇಕು ಫಲಕ ಹೇಗಿರಬೇಕು, ಚಾಕ್ ಎಂಥದನ್ನು ಬಳಸಬೇಕು... ಶೈಕ್ಷಣಿಕ ಸಮಿತಿ ಇಂಥ ವಿವರಗಳನ್ನು ಕಲೆ ಹಾಕಿದ್ದಕ್ಕೂ ಲೆಕ್ಕವಿಲ್ಲ; ಅವುಗಳನ್ನು ಅನುಷ್ಠಾನ ತಂದುದಕ್ಕೂ ಲೆಕ್ಕವಿಲ್ಲ. ಶ್ರೀಕಂಠಸ್ವಾಮಿ ಅದನ್ನೆಲ್ಲ ನಿರ್ಧರಿಸಿದರು.

ಈಗ ಉಚಿತ ಶಿಕ್ಷಣ ತರಗತಿಗಳಿಗೆ ಹಾಜರಾಗುವ ಐನೂರು ಮಕ್ಕಳಲ್ಲಿ ಐನೂರು ಮಕ್ಕಳೂ ಉತ್ತೀರ್ಣರಾಗುತ್ತಿದ್ದಾರೆ. ಶೇಕಡಾ 60 ಅಂಕ ತೆಗೆಯುವವರು 70ರ ಆಸುಪಾಸು ಬಂದಿದ್ದಾರೆ. ಹಾಗೆಯೇ ಶೇಕಡಾ ಐದರಿಂದ ಹತ್ತರಷ್ಟು ಫಲಿತಾಂಶ ಹೆಚ್ಚಾಗುತ್ತ ನಡೆದಿದೆ. ಇದು ಅಂದಾಜು. ಇಂಥ ಉಚಿತ ಪಾಠಗಳಿಂದ ಒಟ್ಟು ಫಲಿತಾಂಶದ ಮೇಲೆ ಏನು ಪರಿಣಾಮ ಆಗುತ್ತದೆ ಎಂದು ಸಮಿತಿ ಇನ್ನೂ ಅಧ್ಯಯನ ಮಾಡಬೇಕಿದೆ.

ಶಾಸಕ ವಿಜಯಕುಮಾರ್‌ ಅವರ ಪ್ರಯೋಗವನ್ನು ಅನುಸರಿಸಲು ತುಮಕೂರು ಮತ್ತು ಬೆಳಗಾವಿ ಜಿಲ್ಲೆಯಲ್ಲಿಯೂ ಕೆಲವು ವರ್ಷಗಳ ಹಿಂದೆ ಪ್ರಯತ್ನ ನಡೆಯಿತು. ಇದೇ ಸಮೀರಸಿಂಹ ತಂಡದ ಶಿಕ್ಷಕರು ಅಲ್ಲಿಗೆ ಹೋಗಿ ಕೆಲವು ದಿನ ಪಾಠ ಮಾಡಿದರು. ಆದರೆ, ಅವರನ್ನು ಕರೆಸಲು, ವಾಪಸು ಕಳಿಸಲು ಖರ್ಚು ಬಂತು. ಅದರ ಬದಲು ಅಲ್ಲಿನ ಶಿಕ್ಷಕರನ್ನೇ ತರಬೇತು ಮಾಡಿಸುವ ಚಿಂತನೆಯೂ ನಡೆಯಿತು. ಅದು ಒಂದು ರೀತಿಯಲ್ಲಿ ಬೆಂಗಳೂರು  ಪ್ರಯೋಗದ ಮುಂದುವರಿಕೆ.

ರಾಜ್ಯದ ಬೇರೆ ಯಾವ ಕಡೆಗಾದರೂ ಈ ರೀತಿ ಉಚಿತವಾಗಿ ಪಾಠ ಮಾಡುವ ಪದ್ಧತಿ ಇದೆಯೇ ಇಲ್ಲವೇ ತಿಳಿಯದು. ಆದರೆ, ಬೆಂಗಳೂರಿನಲ್ಲಿ ಅರವತ್ತನೇ ದಶಕದಿಂದಲೂ ಇಂಥ ಉಚಿತ ತರಗತಿಗಳು ನಡೆಯುತ್ತಿವೆ. ಅಣ್ಣಯ್ಯ ಎಂಬ ಪಾಲಿಕೆಯ ಸದಸ್ಯರೊಬ್ಬರು ಬಸವನಗುಡಿಯಲ್ಲಿ ಇಂಥ ತರಗತಿ ನಡೆಸುತ್ತಿದ್ದರು. ಈಗಲೂ ಅವರು ಆರಂಭ ಮಾಡಿದ ತರಗತಿಗಳು ನಡೆಯುತ್ತಿವೆ. ಅವರಿಂದ ಪ್ರಭಾವಿತರಾಗಿ ಕಳೆದ 29 ವರ್ಷಗಳಿಂದ ಟಿ.ಪ್ರಭಾಕರ್‌ ಮುನಿರೆಡ್ಡಿಪಾಳ್ಯದಲ್ಲಿ ಮಕ್ಕಳಿಗೆ ಪಾಠ ಮಾಡಿಸುತ್ತಿದ್ದಾರೆ.

ಅವು ಮಕ್ಕಳಿಗೆ ಉಚಿತವಾದರೂ ಪ್ರಭಾಕರ್‌ ಅವರು ಅಲ್ಲಿಗೆ ಬರುವ ಶಿಕ್ಷಕರಿಗೆ ‘ಸಂಭಾವನೆ’ ಕೊಡುತ್ತಿದ್ದಾರೆ. ಪಾಲಿಕೆ ಸದಸ್ಯರಾದ ಕೆ.ಚಂದ್ರಶೇಖರ್‌, ಬಿ.ವಿ.ಗಣೇಶ್‌ ಮುಂತಾದವರೂ ಇಂಥದೇ ತರಗತಿಗಳನ್ನು ನಡೆಸುತ್ತಿದ್ದಾರೆ. ಅವರದೆಲ್ಲ ಪಟ್ಟಿ ಮಾಡುವುದು ನನ್ನ ಉದ್ದೇಶವಲ್ಲ. ಆದರೆ, ಎಲ್ಲರೂ ತಮಗೆ ಸಾಧ್ಯವಾದ ರೀತಿಯಲ್ಲಿ ಬಡ ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ ಎಂಬುದನ್ನು ಉಲ್ಲೇಖಿಸಲು
ಮಾತ್ರ ಇದನ್ನು ಇಲ್ಲಿ ಬರೆದೆ.

ಇದೆಲ್ಲ ಬಹಳ ಮುಖ್ಯ. ಏಕೆಂದರೆ, ರಾಜಧಾನಿ ಬೆಂಗಳೂರಿನಲ್ಲಿ ಸರ್ಕಾರಿ ಶಿಕ್ಷಣದ ಮಟ್ಟ ತೀವ್ರವಾಗಿ ಕುಸಿದು ಹೋಗಿದೆ. ಇಲ್ಲಿ ಸರಿಯಾಗಿ ಶಿಕ್ಷಕರು ಇಲ್ಲ. ಕೊಠಡಿಗಳು ಇಲ್ಲ. ಸೂಕ್ತ ಪಾಠೋಪಕರಣಗಳು ಇಲ್ಲ, ಪೀಠೋಪಕರಣಗಳು ಇಲ್ಲ. ಇಲ್ಲಿ ಬರುವ ಮಕ್ಕಳಿಗೆ ಖಾಸಗಿಯಾಗಿ ಪಾಠ ಹೇಳಿಸಿಕೊಳ್ಳಲು ಆರ್ಥಿಕ ಅನುಕೂಲವೂ ಇಲ್ಲ. ನಾವು ಹುಟ್ಟು ಹಾಕಿರುವ ಈ ಅಸಮಾನ ಶಿಕ್ಷಣಕ್ಕೆ ಕನಿಷ್ಠ ಮಟ್ಟದ ಪರಿಹಾರ ಎಂದರೆ ಇಂಥ ಉಚಿತ ಪಾಠದ ವ್ಯವಸ್ಥೆ ಎಂದು ಮೊದಲ ಬಾರಿಗೆ ನನಗೆ ಅನಿಸಿತು.

ಕಳೆದ ಭಾನುವಾರ ಜಯನಗರದ ಮಕ್ಕಳ ಜತೆಗೆ ಕಳೆಯುವಾಗ ನಾನು ಏಳನೇ ತರಗತಿ ವಿದ್ಯಾರ್ಥಿಯಾಗಿದ್ದಾಗ ರಾತ್ರಿ ಶಾಲೆಗೆ ಹೋಗಿದ್ದು, ಅಲ್ಲಿ ಕಂದೀಲಿನ ಮುಂದೆ ಕುಳಿತು ನಮ್ಮ ಶಿಕ್ಷಕರಿಂದ ಪಾಠ ಹೇಳಿಸಿಕೊಂಡುದು, ಒಂದು ಪುಸ್ತಕವನ್ನೂ ಕೊಂಡು ತರಲು ಶಕ್ತಿ ಇರದ ನನಗೆ, ಕಾರಣವನ್ನೂ ಕೇಳದೆ, ಶಿಕ್ಷಕರು ಛಟೀರೆಂದು ಕೆನ್ನೆಗೆ ಹೊಡೆದುದು, ಕಣ್ಣಲ್ಲಿ ಝಲ್‌ ಎಂದು ನೀರು ಚಿಮ್ಮಿದ್ದು... ಎಲ್ಲ ನೆನಪಾಯಿತು. ಮತ್ತೆ ಕಣ್ಣು ಒದ್ದೆಯಾಯಿತು.

ನಮ್ಮ ಹಳ್ಳಿಗಳ ಮಕ್ಕಳಿಗೆ ಈಗಲೂ ಇಂಥ ಸೌಕರ್ಯ ಇಲ್ಲದೇ ಇರುವುದು ನೆನೆದು ಕಳವಳವಾಯಿತು. ಜಯನಗರದ ಕೆಲವು ಮಕ್ಕಳ ಭಾಗ್ಯವನ್ನು ನೆನೆದು ಸಂತೋಷವಾಯಿತು. ರಾಜಕಾರಣಿಗಳು ಎಷ್ಟೇ ಕೆಟ್ಟು ಹೋಗಿದ್ದಾರೆ ಎಂದರೂ ಒಂದೊಂದು ಸಾರಿ ಅವರು ಎಷ್ಟು ಒಳ್ಳೆಯ ಕೆಲಸ ಮಾಡುತ್ತಾರಲ್ಲ ಎಂದು ಅಚ್ಚರಿಯಾಯಿತು. ಶಿಕ್ಷಕರು ಎಷ್ಟೇ ಕೆಟ್ಟು ಹೋಗಿದ್ದಾರೆ ಎಂದರೂ ಈಗಲೂ ನಮ್ಮಂಥ ಹಿರಿಯರೂ ತರಗತಿಗೆ ಹೋಗಿ ಪಾಠ ಕೇಳಬೇಕು ಎನಿಸುವಂಥ ಶಿಕ್ಷಕರು ಇದ್ದಾರಲ್ಲ ಎಂದು ಸಮಾಧಾನವಾಯಿತು. ಕಾಲ ಎಷ್ಟೇ ಕೆಟ್ಟು ಹೋಗಿದೆ  ಎಂದರೂ ನಂಬಿಕೆ ಕಳೆದುಕೊಳ್ಳುವಷ್ಟು ಕೆಟ್ಟಿರುವುದಿಲ್ಲವೇನೋ?! ಅದಕ್ಕೇ ಅಲ್ಲಲ್ಲಿ ಒಳ್ಳೆಯ ಕೆಲಸಗಳು ನಡೆಯುತ್ತಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT